ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

10×8 ಕೋಣೆ

ಮೂಲ: ಕುನ್ವರ್ ಸಿಂಗ್ ದುಗ್ಗಾಲ್

ಕನ್ನಡಕ್ಕೆ: ಉದಯ್ ಇಟಗಿ

“ಇಲ್ಲಿ 10×8 ಕೋಣೆಬರಲಿ” ಹಾಗಂತ ಮಿಸೆಸ್ ಮಲೀಕ್ ತನ್ನ ಮುಂದಿರುವ ಟೇಬಲ್ ಮೇಲೆ ಈಗಾಗಲೇ ಮನೆ ಕಟ್ಟಿಸಲು ತಯಾರಿಸಿಟ್ಟಿದ್ದ ನಕಾಸೆಪಟದಲ್ಲಿನ ಚೌಕವೊಂದನ್ನು ತೋರಿಸುತ್ತಾ ಹೇಳಿದಳು. ಆಕೆ ಈ ಸಲಹೆಯನ್ನು ಕೊಟ್ಟಿದ್ದು ಮೂರನೇ ಬಾರಿಯಾಗಿತ್ತೇನೋ! ಆದರೆ ಆಕೆಯ ಮಾತನ್ನು ಅವಳ ಗಂಡನಾಗಲಿ, ವಾಸ್ತುಶಿಲ್ಪಿಯಾಗಲಿ ತಮ್ಮ ಕಿವಿಯ ಮೇಲೆ ಹಾಕಿಕೊಂಡಂತೆ ಕಾಣಲಿಲ್ಲ.
ಈ ಹಿಂದೆ ಮಲೀಕ್ರುಲ ದೆಹಲಿಯ ಅತ್ಯಾಕರ್ಷಕ ಬಡಾವಣೆಯೊಂದರಲ್ಲಿ ಪ್ಲಾಟೊಂದನ್ನು ತೆಗೆದುಬಿಟ್ಟಿದ್ದರು. ಆದರೆ ಅವರಿಗೆ ಮೇಲಿಂದ ಮೇಲೆ ಒಂದು ಊರಿನಿಂದ ಇನ್ನೊಂದು ಊರಿಗೆ ವರ್ಗವಾಗುತ್ತಿದ್ದರಿಂದ ಅಲ್ಲಿ ಮನೆ ಕಟ್ಟಿಸಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಮತ್ತೆ ಅದೇ ಊರಿಗೆ ವರ್ಗವಾಗಿ ಬಂದಿದ್ದರಿಂದ ಅಲ್ಲಿ ತಮ್ಮದೇ ಆದ ಒಂದು ಸ್ವಂತ ಮನೆಯನ್ನು ಕಟ್ಟಿಸಲು ಮುಂದಾಗಿದ್ದರು.

ಒಂದು ಸಾರಿ ಮನೆ ಕಟ್ಟಿಯಾದ ಮೇಲೆ ತನ್ನ ಗಂಡನಿಗೆ ದೆಹಲಿಯಿಂದ ಬೇರೆ ಕಡೆ ವರ್ಗವಾದರೂ ಸರಿ ತಾನು ಮಾತ್ರ ಅದೇ ಊರಿನಲ್ಲಿದ್ದುಕೊಂಡು ಹೊಸಮನೆಯಲ್ಲೇ ವಾಸಿಸಬೇಕೆಂದು ಅದಾಗಲೇ ಮಿಸೆಸ್ಮಲೀಕ್ ತನ್ನ ಹೃದಯದ ಹೃದಯದಲ್ಲಿ ಗಟ್ಟಿ ನಿರ್ಧಾರ ಮಾಡಿಬಿಟ್ಟಿದ್ದಳು. ಆಕೆಗೆ ತಾವು ಮೇಲಿಂದ ಮೇಲೆ ಒಂದು ಊರಿನಿಂದ ಇನ್ನೊಂದು ಊರಿಗೆ ವರ್ಗವಾಗುವದರ ಬಗ್ಗೆ ರೋಸಿಹೋಗಿತ್ತು. ಅಲ್ಲದೇ ಪ್ರತಿ ಎರಡು ವರ್ಷಕ್ಕೊಂದು ಸಾರಿ ಹೊಸ ಜಾಗಕ್ಕೆ ಹೋಗಿ, ಅಲ್ಲಿ ಮನೆ ಮಾಡಿ, ಎಲ್ಲವನ್ನೂ ಸರಿ ಹೊಂದಿಸುವದು ಆಕೆಗೆ ದೊಡ್ಡ ತಲೆನೋವಿನ ಕೆಲಸವಾಗಿತ್ತು. ಮೇಲಾಗಿ ಈಗ ಮಕ್ಕಳು ಬೆಳೆದು ದೊಡ್ಡವರಾಗಿದ್ದರಿಂದ ಅವರ ಸ್ಕೂಲನ್ನು ಹೀಗೆ ಮೇಲಿಂದ ಮೇಲೆ ಬದಲಾಯಿಸುವದು ಆಕೆಗೆ ಒಂಚೂರು ಸರಿ ಕಾಣಲಿಲ್ಲ. ಹೀಗಾಗಿ ಗಂಡನಿಗೆ ಖಡಾಖಂಡಿತವಾಗಿ ಹೇಳಿಬಿಟ್ಟಳು, “ಮುಂದಿನ ಸಾರಿ ವರ್ಗವಾದರೆ ನೀವು ಮಾತ್ರ ಹೋಗಿ. ನಾನು ಖಾಯಂ ಆಗಿ ದೆಹಲಿಯಲ್ಲಿದ್ದುಕೊಂಡು ಮನೆ ಮಕ್ಕಳನ್ನು ನೋಡಿಕೊಳ್ಳುತ್ತೇನೆ. ನನ್ನ ಜೊತೆಗಿರಲು ಹೇಗೂ ಅತ್ತೆ ಇದ್ದಾರಲ್ಲ?” ಮಿಸ್ಟರ್ ಮಲೀಕ್ನಿ್ಗೆ ಈ ಏರ್ಪಾಡು ಸರಿ ಕಂಡಿದ್ದರಿಂದ ಅವನು ಯಾವುದೇ ತಕರಾರು ತೆಗೆಯಲಿಲ್ಲ.
“ಇಲ್ಲಿ 10×8 ಕೋಣೆ ಬರಲಿ.” ಮಿಸೆಸ್ ಮಲೀಕ್ ಪುನಃ ಹೇಳಿದಳು. ಆಕೆಯ ಗಂಡ ಪಕ್ಕದ ಕೋಣೆಯಲ್ಲಿ ಯಾರದೋ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದ.
“ಆದರೆ ಇದು ಸ್ಟೋರ್-ರೂಮು.” ವಾಸ್ತುಶಿಲ್ಪಿ ಮಿಸೆಸ್ ಮಲೀಕ್ಗೆತ ಸ್ಪಷ್ಟವಾಗಿ ಹೇಳಿದ.
“ಗೊತ್ತು, ನಾನು ಏನು ಹೇಳ್ತಾ ಇದ್ದೀನಿ ಅಂದರೆ……..ಸಧ್ಯಕ್ಕೆ ಅದು ನಮ್ಮತ್ತೆ ಕೋಣೆಯಾಗಿರುತ್ತೆ………ಆಕೆ ಹೋದನಂತರ ನಾವದನ್ನು ಸ್ಟೋರ್-ರೂಮಾಗಿ ಉಪಯೋಗಿಸ್ಕೋತಿವಿ……..”
ವಾಸ್ತುಶಿಲ್ಪಿಗೆ ಆಕೆ ಏನು ಹೇಳುತ್ತಿದ್ದಾಳೆಂದು ಅರ್ಥವಾಗಲಿಲ್ಲ. ಒಂದು ಕ್ಷಣ ತಬ್ಬಿಬ್ಬಾದ.
“ನಾನು ಹೇಳೋದು ನಿಮಗೆ ಅರ್ಥವಾಗ್ತಿದೆ ಅನ್ಕೊಳ್ತಿನಿ…….. ಸಧ್ಯಕ್ಕೆ ನಮ್ಮತ್ತೆ ಆ ಕೋಣೆಯಲ್ಲಿ ಇರ್ತಾರೆ………ನಿಮಗೆ ಗೊತ್ತೇ ಇದೆ………. ಆಕೆಗೆ ಹೇಗೂ ವಯಸ್ಸಾಗಿದೆ…….. ಬಹುಶಃ ಬಹಳ ದಿವಸ ಬದುಕೋ ತರ ಕಾಣ್ತಾ ಇಲ್ಲ………….ಆಕೆ ಹೋದ ನಂತರ ನಾವದನ್ನು ಸ್ಟೋರ್-ರೂಮಾಗಿ ಉಪಯೋಗಿಸ್ಕೋತಿವಿ………..” ಮಿಸೆಸ್ ಮಲೀಕ್ ತಡೆತಡೆದು ಹೇಳಿದಳು.
ಫೋನಿನಲ್ಲಿ ಮಾತನಾಡುತ್ತಿದ್ದ ಮಿಸ್ಟರ್ ಮಲೀಕ್ ಇದೀಗ ಅವರನ್ನು ಬಂದು ಸೇರಿಕೊಂಡನು. ಅವನು ಫೋನಿನಲ್ಲಿ ಮಾತನಾಡುವಾಗ ತನ್ನ ಹೆಂಡತಿ ವಾಸ್ತುಶಿಲ್ಪಿಗೆ ಕೊಟ್ಟ ಸಲಹೆಯ ಬಗ್ಗೆ ಚನ್ನಾಗಿ ಯೋಚಿಸಿದಂತಿತ್ತು. ಅವನೂ ಕೂಡಾ ಸ್ಟೋರ್-ರೂಮು ಸ್ವಲ್ಪ ದೊಡ್ಡದಾಗಿದ್ದರೆ ಒಳಿತು ಎಂದು ಭಾವಿಸಿದ್ದ. ಸ್ಟೋರ್-ರೂಮು ದೊಡ್ಡದಾಗಿದ್ದಷ್ಟು ಸಾಮಾನುಗಳನ್ನು ಸರಾಗವಾಗಿ ಆಚೀಚೆ ಸರಿಸಬಹುದು ಹಾಗೂ ಸುಲಭವಾಗಿ ಸ್ವಚ್ಛಗೊಳಿಸಬಹುದು ಎನ್ನುವದು ಅವನ ಅಭಿಪ್ರಾಯವಾಗಿತ್ತು.
ಅಂತೂ ಎಲ್ಲರೂ ಸೇರಿ ಅಡಿಗೆ ಮನೆ ಪಕ್ಕಕ್ಕೆ ಬರುವ ಕೋಣೆಯನ್ನು 10×8 ಕೋಣೆಯನ್ನಾಗಿ ಮಾಡಲು ನಿರ್ಧರಿಸಿದರು. ಈ ಕಾರಣಕ್ಕಾಗಿ ಒಳಾಂಗಣದ ವಿಸ್ತೀರ್ಣವನ್ನು ಅವರು ಯೋಜಿಸಿದ್ದಕ್ಕಿಂತ ಸ್ವಲ್ಪ ಕುಗ್ಗಿಸಬೇಕಾಗಿ ಬಂದರೂ ಅದರ ಬಗ್ಗೆ ಅವರು ಬೇಜಾರುಪಟ್ಟುಕೊಂಡಂತೆ ಕಾಣಲಿಲ್ಲ. ಇನ್ನುಳಿದಂತೆ ಎಲ್ಲವನ್ನೂ ಚನ್ನಾಗಿ ಯೋಜಿಸಿ ತಮ್ಮ ಪ್ಲ್ಯಾನ್ನ್ನುರ ಅನುಮತಿಗಾಗಿ ಕಾರ್ಪೊರೇಷನ್‍ ಆಫೀಸಿಗೆ ಒಪ್ಪಿಸಿದರು.
ಮಿಸೆಸ್ ಮಲೀಕ್ ಮನೆ ಕಟ್ಟುವ ಕೆಲಸದಲ್ಲಿ ತುಂಬಾ ಆಸಕ್ತಿಯನ್ನು ತೋರಿಸಿದಳಲ್ಲದೆ ಅದರ ಪ್ರತಿಯೊಂದು ಆಗುಹೋಗುಗಳನ್ನು ವಿಶೇಷ ಕಾಳಜಿಯಿಟ್ಟು ಗಮನಿಸಿದಳು. ಇಡಿ ದಿನ ಬಿಸಿಲು, ಮಳೆ ಎನ್ನದೆ ಛತ್ರಿಯೊಂದನ್ನು ಹಿಡಿದುಕೊಂಡು ಕೆಲಸದ ಮೇಲ್ವಿಚಾರಣೆಯನ್ನು ನಡೆಸುತ್ತಿದ್ದಳು. ಒಂದೊಂದು ಸಾರಿ ಆಳುಗಳು ಬರದೆ ಹೋದಾಗ ತಾನೇ ಸ್ವತಃ ಮೇಸ್ತ್ರಿಗಳಿಗೆ ಹಾಗೂ ಇನ್ನಿತರ ಕೆಲಸಗಾರರಿಗೆ ಸಹಾಯ ಮಾಡಲು ಮುಂದಾಗುತ್ತಿದ್ದಳು. ಆ ಸ್ಥಳಕ್ಕೆ ಎಲ್ಲರಿಗಿಂತ ಮುಂಚೆ ಬಂದು ಕೊನೆಯಲ್ಲಿ ಎಲ್ಲರೂ ಹೋದ ಮೇಲೆ ಹೋಗುತ್ತಿದ್ದಳು. ಆ ಮೂಲಕ ಕಟ್ಟಡದ ಯಾವುದೇ ಸಾಮಗ್ರಿಗಳು ಹಾಳಾಗದಂತೆಯೂ ಹಾಗೂ ಆಳುಗಳು ವೃಥಾ ಕಾಲಹರಣ ಮಾಡದಂತೆಯೂ ಎಚ್ಚರ ವಹಿಸಿದಳು.
ಸ್ವಲ್ಪ ದಿನಗಳಲ್ಲಿಯೇ ಮನೆ ಕಟ್ಟುವ ಕೆಲಸ ಪೂರ್ಣವಾಯಿತು. ಮಿಸೆಸ್ ಮಲೀಕ್ ಹೊಸ ಮನೆಗೆ ತಕ್ಕ ಹಾಗೆ ಹೊಸ ಪೀಠೋಪಕರಣಗಳೇ ಆಗಬೇಕೆಂದಳು. ತನ್ನ ಹಳೆ ಪೀಠೋಪಕರಣಗಳ ಒಂದು ತುಂಡನ್ನು ಸಹ ಹೊಸ ಮನೆಯೊಳಗೆ ಸೇರಿಸಲಾರಳೆಂದು ಖಡಾಖಂಡಿತವಾಗಿ ಹೇಳಿಬಿಟ್ಟಳು.
ಹೀಗೆ ಅವರಿನ್ನೂ ಹೊಸ ಮನೆಗೆ ಹೋಗುವ ಯೋಚನೆಯಲ್ಲಿರುವಾಗಲೇ ಸರಕಾರ ಅವರ ಮನೆಯನ್ನು ತಾತ್ಕಾಲಿಕವಾಗಿ ವಶಪಡಿಸಿಕೊಂಡ ಸುದ್ದಿಯೊಂದು ಬಂತು. ಇದು ಹೊಸಮನೆಯಲ್ಲಿ ಹೋಗಿರಲು ಎಷ್ಟೆಲ್ಲಾ ತಯಾರಿ ಮಾಡಿಕೊಂಡಿದ್ದ ಮಿಸೆಸ್ ಮಲೀಕ್ಳಿನ್ನು ರೊಚ್ಚಿಗೆಬ್ಬಿಸಿತು. ಆದರೆ ಅವಳು ಅಸಹಾಯಕಳಾಗಿದ್ದಳು. ಸರಕಾರಕ್ಕೆ ಮನಸಾರೆ ಶಾಪ ಹಾಕಿ ತನ್ನ ಹೊಟ್ಟೆಯುರಿಯನ್ನು ಕಡಿಮೆಮಾಡಿಕೊಂಡಳು. ತಾನೇ ನಿಂತು ಕಟ್ಟಿಸಿದ ಮನೆಯಲ್ಲಿ ತಕ್ಷಣಕ್ಕೆ ಬಾಳಿ ಬದುಕಲಾರದಂಗೆ ಆಯ್ತಲ್ಲ ಎಂದು ಕಣ್ಣೀರಿಟ್ಟಳು. ಆದರೆ ಮಿಸ್ಟರ್ ಮಲೀಕ್ ಸರಕಾರದಿಂದ ತಮಗೆ ಎಂಥ ಒಳ್ಳೆ ಬಾಡಿಗೆ ಸಿಗುತ್ತದೆ ಎನ್ನುವದನ್ನು ಹೇಳಿದಾಗ ಅವಳು ಸುಮ್ಮನಾದಳು.
ಮನೆ ಕಟ್ಟಿಸುವಾಗ ಮಿಸೆಸ್ ಮಲೀಕ್ ಆ ಕಾಲೊನಿಯಲ್ಲಿನ ನೆರೆಹೊರೆಯವರೊಂದಿಗೆ ಸ್ನೇಹವನ್ನು ಬೆಳೆಸಿದ್ದಳಲ್ಲದೆ ಅವರ ಸಲಹೆ ಸಹಕಾರಗಳನ್ನೂ ಪಡೆದಿದ್ದಳು. ಅವರೆಲ್ಲರ ಮುಂದೆ ಆ ಮನೆಯಲ್ಲಿ ಜಂಭದಿಂದ ಬಾಳಿ ಬದುಕಿ ತೋರಿಸಬೇಕೆಂದು ತುದಿಗಾಲಲ್ಲಿ ಕಾಯುತ್ತಿದ್ದಳು. ಆದರೆ ಇದೀಗ ಅವಳ ಉತ್ಸಾಹಕ್ಕೆ ತಣ್ಣೀರೆರೆಚಿದಂತಾಗಿತ್ತು.
ಈ ನಡುವೆ ಅವರಿಗೆ ದೆಹಲಿಯಿಂದ ಮತ್ತೆ ಬೇರೆ ಕಡೆಗೆ ವರ್ಗವಾಯಿತು. ಮಿಸೆಸ್ ಮಲೀಕ್ ಅದೇ ಊರಿನಲ್ಲಿದ್ದುಕೊಂಡು ತನ್ನ ಹೊಸ ಮನೆಯಲ್ಲಿ ವಾಸ ಮಾಡದಿರುವದಕ್ಕೆ ಪಶ್ಚಾತಪ ಪಡುವದಕ್ಕಿಂತ ಬೇರೆ ಊರಿನಲ್ಲಿದ್ದುಕೊಂಡು ತೃಪ್ತಿಪಟ್ಟುಕೊಳ್ಳುವದೇ ಮೇಲು ಎಂದುಕೊಂಡು ಗಂಡನೊಟ್ಟಿಗೆ ಹೊರಟಳು.ಜೊತೆಗೆ ಅದರಿಂದ ಬರುತ್ತಿದ್ದ ಒಳ್ಳೆ ಮೊತ್ತದ ಬಾಡಿಗೆ ಅವಳನ್ನು ಅದ್ಹೇಗೋ ಸಮಾಧಾನಪಡಿಸಿತ್ತು.
ಅಲ್ಲಿಂದಾಚೆ ಮಲೀಕ್ರಿುಗೆ ಒಂದು ಊರಿನಿಂದ ಇನ್ನೊಂದು ಊರಿಗೆ ವರ್ಗವಾಗುತ್ತಲೇ ಹೋಯಿತು. ಮತ್ತೆ ದೆಹಲಿಗೆ ವಾಪಾಸಾಗಲು ಸುಮಾರು ವರ್ಷಗಳೇ ಹಿಡಿದವು. ಈ ಮಧ್ಯ ಅವರ ಮಗಳಿಗೆ ಮದುವೆ ಆಯಿತು ಹಾಗೂಮಿಸೆಸ್ ಮಲೀಕ್ಳಾ ಅತ್ತೆ ತೀರಿಕೊಂಡಳು. ಅವರ ಅದೃಷ್ಟಕ್ಕೆ ಒಂದು ರೀತಿಯಲ್ಲಿ ಸರಕಾರ ಅವರ ಮನೆಯನ್ನು ವಶಪಡಿಸಿಕೊಂಡಿದ್ದು ಒಳ್ಳೆಯದೇ ಆಗಿತ್ತು. ಏಕೆಂದರೆ ಸರಕಾರ ತಿಂಗಳು ತಿಂಗಳು ಸರಿಯಾಗಿ ಬಾಡಿಗೆಯನ್ನು ಕೊಡುತ್ತಿತ್ತು ಮತ್ತು ಅವರಿಂದ ಯಾವುದೇ ತಂಟೆ ತಕರಾರಿರಲಿಲ್ಲ. ಈ ಬಾಡಿಗೆದಾರರೋ ಒಂದು ದೊಡ್ಡ ತಲೆನೋವು! ಅವರದು ಸದಾ ಏನಾದರೊಂದು ದೂರು ಇಲ್ಲವೇ ಬೇಡಿಕೆ ಇದ್ದೇ ಇರುತ್ತದೆ. ಜೊತೆಗೆ ಸಮಯಕ್ಕೆ ಸರಿಯಾಗಿ ಬಾಡಿಗೆಯನ್ನು ಕೊಡದೆ ಸತಾಯಿಸುತ್ತಾರೆ. ಈಗ ಬಾಡಿಗೆಯು ಸರಕಾರದಿಂದ ನೇರವಾಗಿ ಅವರ ಬ್ಯಾಂಕ್ ಖಾತೆಗೆ ತಿಂಗಳು ತಿಂಗಳು ಸಮಯಕ್ಕೆ ಸರಿಯಾಗಿ ತಪ್ಪದೇ ಜಮೆಯಾಗುತ್ತಿತ್ತು.
ಈಗ ಮಲೀಕ್ರತ ಮಗನು ಮದುವೆಯಾಗುವದೊಂದು ಬಾಕಿ ಉಳಿದಿತ್ತು. ಅವನ ಮದುವೆಯೊಂದನ್ನು ಮಾಡಿಮುಗಿಸಿಬಿಟ್ಟರೆ ತಮ್ಮೆಲ್ಲಾ ಜವಾಬ್ದಾರಿಗಳು ಮುಗಿದಂತಾಗುತ್ತವೆ ಎಂದು ಮಲೀಕ್ರು ತಮ್ಮ ಮಗನಿಗೆ ತಕ್ಕ ಹುಡುಗಿಯನ್ನು ಹುಡುಕತೊಡಗಿದರು. ಮಿಸ್ಟರ್ ಮಲೀಕ್ ಈ ಕೆಲಸವನ್ನು ತಾನು ನಿವೃತ್ತಿ ಹೊಂದುವದಕ್ಕಿಂತ ಮೊದಲೇ ಮಾಡಿಮುಗಿಸಬೇಕೆಂದುಕೊಂಡನು.
ಅಂತೂ ತಾನಂದುಕೊಂಡಂತೆ ಮಿಸ್ಟರ್ ಮಲೀಕ್ ತನ್ನ ನಿವೃತ್ತಿಗಿಂತ ಮೊದಲೇ ತನ್ನ ಮಗನ ಮದುವೆಯನ್ನು ಮಾಡಿ ಮುಗಿಸಿದನು. ಆದರೆ ಅವನ ಮನೆಯಿನ್ನೂ ಸರಕಾರದ ಸುಪರ್ದಿಯಿಂದ ಬಿಡುಗಡೆ ಪಡೆದಿರಲಿಲ್ಲ. ಹೀಗಾಗಿ ಮಲೀಕ್ರುಂ ವಿಧಿಯಿಲ್ಲದೆ ತಮ್ಮ ಮಗ ಮತ್ತು ಸೊಸೆಯೊಟ್ಟಿಗೆ ಬಾಡಿಗೆ ಮನೆಯಲ್ಲೇ ವಾಸಿಸಬೇಕಾಯಿತು.
ಮಿಸ್ಟರ್ ಮಲೀಕ್ ಸರಕಾರದಿಂದ ತನ್ನ ಮನೆಯನ್ನು ಬಿಡಿಸಿಕೊಳ್ಳಲು ಇನ್ನೂ ಹೋರಾಟ ನಡೆಸುತ್ತಲೇ ಇದ್ದ. ಅಷ್ಟರಲ್ಲಿ ಅವನ ಸಾವು ಅವನನ್ನು ಕೊಂಡೊಯ್ಯಿತು. ಕೊನೆಗೂ ಮಿಸ್ಟರ್ ಮಲೀಕ್ ತಾನು ಕಟ್ಟಿಸಿದ ಮನೆಯಲ್ಲಿ ಒಂದು ದಿನವೂ ಸಹ ಬಾಳಿ ಬದುಕದೆ ಹಾಗೆ ಹೊರಟುಹೋಗಿಬಿಟ್ಟ.
ಅವನು ಹೋಗಿ ಸರಿಯಾಗಿ ಮೂರು ತಿಂಗಳ ನಂತರ ಸರಕಾರ ಅವರ ಮನೆಯನ್ನು ಅವರಿಗೆ ಹಿಂದಿರುಗಿಸಿತು.
ಸ್ವಂತಮನೆಗೆ ಹೊಗಲು ಮಿಸೆಸ್ ಮಲೀಕ್ಳಿತಗಿಂತ ಅವಳ ಸೊಸೆ ಹೆಚ್ಚು ಕಾತರಳಾಗಿದ್ದಳು. ಮನೆಯು ಅವರ ಕೈಗೆ ಬಂದ ದಿನದಿಂದಲೇ ಆಕೆಯೇ ಖುದ್ದಾಗಿ ನಿಂತು ಮನೆಯ ಗೋಡೆಗಳಿಗೆ ಬಣ್ಣ ಕೊಡಿಸುವದು ಹಾಗೂ ಬಾಗಿಲುಗಳಿಗೆ ಪಾಲಿಷ್ ಹಾಕಿಸುವದನ್ನು ಮಾಡಿದಳು. ಪೀಠೋಪಕರಣಗಳ ವಿತರಕನಿಗೆ ಇಂತಿಂಥದೇ ಪೀಠೋಪಕರಣಗಳು ಆಗಬೇಕೆಂದು ಹೇಳಿ ಅಂತಿಂಥವನ್ನೇ ಮಾಡಿಸಿ ತರಿಸಿಕೊಂಡಳು.
ಬರುವ ಸೋಮವಾರ ಸ್ವಂತಮನೆಗೆ ಶಿಫ್ಟ್ ಆಗುವದೆಂದು ನಿರ್ಧರಿಸಿದರು. ಆದರೆ ಆವತ್ತು ಬೆಳಿಗ್ಗೆ ಎದ್ದಾಗ ಮಳೆ ಒಂದೇ ಸಮನೆ ಹುಯ್ಯುತ್ತಿತ್ತು. ಮಳೆ ನಿಲ್ಲಬಹುದೆಂದು ಅವರೆಲ್ಲಾ ಕಾಯ್ದೇ ಕಾಯ್ದರು. ಊಹೂಂ, ನಿಲ್ಲುವ ಲಕ್ಷಣಗಳೇ ಕಾಣಲಿಲ್ಲ. ಇತ್ತ ಮಿಸೆಸ್ ಮಲೀಕ್ಳತ ಮಗನಿಗೆ ಕೆಲಸಕ್ಕೆ ಹೋಗಲು ಸಮಯವಾಗಿದ್ದರಿಂದ ಅವನು ಸಾಯಂಕಾಲ ತಾನು ಕೆಲಸದಿಂದ ಬಂದ ಮೇಲೆ ಶಿಫ್ಟ್ ಮಾಡಿದರಾಯಿತೆಂದು ಹೇಳಿಹೋದ.
ಮಳೆ ಇಡಿ ದಿನ ಬಿಡದೆ ಧಾರಾಕಾರವಾಗಿ ಸುರಿಯುತ್ತಲೇ ಇತ್ತು. ಸಾಯಂಕಾಲವಾದರೂ ನಿಲ್ಲಲಿಲ್ಲ. ಆದಾಗ್ಯೂ ಮಿಸೆಸ್ ಮಲೀಕ್ ಸೋಮವಾರ ಪ್ರಶಸ್ತ ದಿನವಾಗಿದ್ದರಿಂದ ಆವತ್ತೇ ಶಿಫ್ಟ್ ಆಗಬೇಕೆಂದಳು. ಮಾರನೆಯ ದಿನ ಮಂಗಳವಾರವಾಗಿದ್ದರಿಂದ ಆವತ್ತು ಮನೆ ಬದಲಾಯಿಸುವದು ಆಕೆಗೆ ಅಷ್ಟು ಸೂಕ್ತವೆನಿಸಲಿಲ್ಲ.
ಮಿಸೆಸ್ ಮಲೀಕ್ಳಪ ಮಗ ತನ್ನ ತಾಯಿಯ ಮಾತಿಗೆ ಬೆಲೆ ಕೊಟ್ಟು ಅಂದೇ ಸುರಿವ ಮಳೆಯಲ್ಲಿಯೇ ಶಿಫ್ಟ್ ಮಾಡಲು ನಿರ್ಧರಿಸಿದನು. ಒಂದು ಟ್ಯಾಕ್ಷಿ ತರಿಸಿ ಸಧ್ಯಕ್ಕೆ ಅಗತ್ಯಕ್ಕೆ ಬೇಕಾಗುವ ಸಾಮಾನುಗಳನ್ನು ಮಾತ್ರ ಅದಕ್ಕೆ ತುಂಬಿದರು. ಮಿಕ್ಕ ಸಾಮಾನಗಳನ್ನು ಬೇರೆ ದಿವಸ ತಂದುಕೊಂಡರಾಯಿತೆಂದುಕೊಂಡು ಮೂರೂ ಜನ ತಮ್ಮ ಸ್ವಂತ ಕಾರಿನಲ್ಲಿ ಹೊಸಮನೆಯತ್ತ ಹೊರಟರು.
ಮಳೆ ಇನ್ನೂ ಸುರಿಯುತ್ತಲೇ ಇತ್ತು. ಹೊಸಮನೆಯ ಕಡೆ ಹೊರಟಂತೆ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಮಿಸೆಸ್ ಮಲೀಕ್‍ ಹಳೆಯ ನೆನಪುಗಳಲ್ಲಿ ಕಳೆದುಹೋದಳು. ಮನೆ ಕಟ್ಟಿಸಲು ಎಷ್ಟೊಂದು ಕಷ್ಟಪಟ್ಟಿದ್ದಳು ಆಕೆ! ಅದೆಷ್ಟು ಸಾರಿ ಕೆಲಸದ ಭರದಲ್ಲಿ ಊಟವನ್ನು ಬಿಟ್ಟಿರಲಿಲ್ಲ? ಅದೆಷ್ಟು ಸಾರಿ ಉರಿವ ಬಿಸಿಲಲ್ಲಿ ನಿಂತು ಕೆಲಸವನ್ನು ನೋಡಿಕೊಂಡಿರಲಿಲ್ಲ? ಅದೆಷ್ಟು ಸಾರಿ ಮಳೆಯಲ್ಲಿ ನೆನೆದಿರಲಿಲ್ಲ? ಮನೆಗಾಗಿ ಅದೆಷ್ಟು ಜೀವವನ್ನು ತೇಯ್ದಿರಲಿಲ್ಲ?
ವಾಸ್ತುಶಿಲ್ಪಿಯು ಮನೆಯನ್ನು ಕಟ್ಟಿಯಾದ ಮೇಲೆ ಅದ್ಹೇಗೆ ಕಾಣುತ್ತದೆ ಎಂದು ತೋರಿಸಲು ಅದರ ವಿನ್ಯಾಸವನ್ನು ಬಣ್ಣದ ನಕಾಸೆಯಲ್ಲಿ ಬಿಡಿಸಿದ್ದ. ಅದರಲ್ಲಿ ವೆರಾಂಡದಲ್ಲಿ ಮನೆಯೊಡತಿಯ ಶಿಲ್ಪಾಕೃತಿಯೊಂದು ಅಮೃತ ಶಿಲೆಯ ಕಂಬವೊಂದಕ್ಕೆ ಒರಗಿಕೊಂಡು ನಿಂತಿತ್ತು. ಆ ಶಿಲ್ಪಾಕೃತಿಯು ಮರೂನ್ ಬಣ್ಣದ ಸೀರೆಯನ್ನುಟ್ಟುಕೊಂಡು, ಮುಖದ ಮೇಲೆ ಸಂತೃಪ್ತಿಯ ನಗೆಯೊಂದನ್ನು ಅಂಟಿಸಿಕೊಂಡು ಅತ್ಯಂತ ಆಕರ್ಷಕವಾಗಿ ಮನೆಗೆ ಬಂದವರನ್ನು ಸ್ವಾಗತಿಸುವಂತಿತ್ತು. ಮಿಸೆಸ್ ಮಲೀಕ್‍ ಎಂದೂ ಮರೂನ್ ಬಣ್ಣದ ಸಿರೆಯನ್ನು ಉಟ್ಟಿರಲಿಲ್ಲ. ಆದರೂ ವಾಸ್ತುಶಿಲ್ಪಿಯು ತನ್ನ ಚಹರೆಯನ್ನೇ ಹೋಲುವ ಶಿಲ್ಪಾಕೃತಿಯನ್ನು ಬಿಡಿಸಿರುವನೆಂದವಳಿಗೆ ಭಾಸವಾಯಿತು. ಅದು ಥೇಟ್ ಮಿಸೆಸ್ ಮಲೀಕ್ಳುನ್ನೇ ಹೋಲುತ್ತಿತ್ತು. ಮಿಸೆಸ್ ಮಲೀಕ್ಳುಷ್ಟೇ ಎತ್ತರವಾಗಿದ್ದು ಅವಳು ನಿಲ್ಲುವ ಭಂಗಿಯಲ್ಲಿಯೇ ನಿಂತಿತ್ತು. ಮಿಸೆಸ್ ಮಲೀಕ್ ಮತ್ತೆ ಮತ್ತೆ ಆ ಆಕೃತಿಯನ್ನು ನೋಡಿ ತನ್ನ ಬಗ್ಗೆ ತಾನೇ ಹೆಮ್ಮೆಪಟ್ಟಳು. ಅಷ್ಟಕ್ಕೆ ಸುಮ್ಮನಿರದೆ ತನ್ನ ಕೋಣೆಯಲ್ಲಿರುವ ಡ್ರೆಸ್ಸಿಂಗ್ ಟೇಬಲ್ಗೆೆ ಹೋಗಿ, ಕನ್ನಡಿಯಲ್ಲಿ ಆ ಶಿಲ್ಪಾಕೃತಿಯು ನಿಂತುಕೊಂಡ ಭಂಗಿಯಲ್ಲೇ ನಿಂತುಕೊಳ್ಳುತ್ತಾ, ಮತ್ತೆ ಮತ್ತೆ ಅದನ್ನೇ ಅನುಕರಿಸುತ್ತಾ ತನ್ನ ಪ್ರತಿಬಿಂಬವನ್ನು ತಾನೇ ನೋಡಿಕೊಂಡು ಹೆಮ್ಮೆಯಿಂದ ಬೀಗಿದಳು. ಮಿಸೆಸ್ ಮಲೀಕ್ ಮನೆಗೆ ಹೋದ ತಕ್ಷಣ ಆ ಪ್ರತಿಮೆಯನ್ನು ತನ್ನ ಸೊಸೆಗೆ ತೋರಿಸಬೇಕೆಂದುಕೊಂಡಳು.
ಅವಳ ಸೊಸೆ ಮುಂದಿನ ಸೀಟಿನಲ್ಲಿ ತನ್ನ ಗಂಡನ ಪಕ್ಕದಲ್ಲಿ ಕುಳಿತಿದ್ದಳು. ಅಲ್ಲಿ ಕಾರಿನ ಹಿಂಭಾಗದ ವಾಹನಗಳನ್ನು ವೀಕ್ಷಿಸಿಸಲಿಟ್ಟಿದ್ದ ಕನ್ನಡಿಯನ್ನು ತನ್ನೆಡೆಗೆ ತಿರುಗಿಸಿಕೊಳ್ಳುತ್ತಾ ಮತ್ತೊಂದು ಕೋಟು ಲಿಪ್ಸ್ಟಿನಕ್ನ್ನುನ ಹಾಕಿಕೊಂಡಳು. “ಇಷ್ಟೊತ್ತಲ್ಲಿ, ಅದೂ ಸ್ವಂತ ಮನೆಗೆ ಹೋಗುವಾಗ ಲಿಪ್ಸ್ಟಿ ಕ್ನ್ನುನ ಹಾಕಿಕೊಳ್ಳುವ ಅಗತ್ಯವಾದರೂ ಏನಿದೆ? ಮನೆಗೆ ಹೋದ ಮೇಲೆ ಹೆಚ್ಚೆಂದರೆ ಊಟಮಾಡುವದು, ಮಲಗುವದಷ್ಟೇ! ಅಷ್ಟಕ್ಕೆ ಲಿಪ್ಸ್ಟಿ ಕ್‍ ಯಾಕೆ ಬೇಕು? ಏನು ವಿಚಿತ್ರಾನೋ ಈಗಿನ ಕಾಲದ ಹುಡುಗಿಯರ ನಡವಳಿಕೆಗಳು! ಮತ್ತವಳು ಅದ್ಹೇಗೆ ಒಂದೇ ಸಮನೇ ಅದೇನೇನೇನೋ ಇಂಗ್ಲೀಷಿನಲ್ಲಿ ವಟಗುಟ್ಟುತ್ತಲೇ ಇದ್ದಳು! ಸ್ವಂತ ಗಂಡನ ಜೊತೆ ಇಂಗ್ಲೀಷಿನಲ್ಲಿ ಮಾತನಾಡುವ ಅವಶ್ಯಕತೆಯಾದರೂ ಏನಿದೆ?” ಮಿಸೆಸ್ ಮಲೀಕ್ ತನಗೆ ತಾನೇ ಹೇಳಿಕೊಳ್ಳುತ್ತಾ ಅಸಹನೆಯಿಂದ ಕುದಿದಳು.
ಮಿಸೆಸ್ ಮಲೀಕ್ಗೆು ಇಂಗ್ಲೀಷ್ ಬರುತ್ತಿರಲಿಲ್ಲ. ಇದೊಂದರಲ್ಲಿ ಮಾತ್ರ ಆಕೆ ಸೋತಿದ್ದಳು. ಆದರೆ ಮಿಕ್ಕೆಲ್ಲ ವಿಷಯಗಳಲ್ಲಿ ಒಂದು ಕೈ ಹೆಚ್ಚೇ ಮುಂದಿದ್ದಳು. ಆಧುನಿಕ ಬದುಕಿನ ರೀತಿ-ನೀತಿಗಳಿಗೆ ತನ್ನನ್ನು ಚನ್ನಾಗಿ ಒಗ್ಗಿಸಿಕೊಂಡಿದ್ದಳು. ಗಂಡನ ಜೊತೆ ಕ್ಲಬ್ಬಿಗೆ ಹೋಗುತ್ತಿದ್ದಳು. ಅಲ್ಲಿ ವಯ್ಯಾರವಾಗಿ ಬಳುಕುತ್ತಾ ಸ್ನೇಹಿತರೊಟ್ಟಿಗೆ ಕುಡಿಯುವದನ್ನು ಕಲಿತಿದ್ದಳು. ಜೊತೆಗೆ ಕುಣಿಯುವದನ್ನು ಸಹ ಕಲಿತುಕೊಂಡಿದ್ದಳು. ಅವಕಾಶ ಸಿಕ್ಕಾಗಲೆಲ್ಲಾ ತನ್ನ ಗಂಡನ ಜೊತೆಗೋ ಇಲ್ಲವೇ ಬೇರೆ ಗಂಡಸರೊಟ್ಟಿಗೋ ಯಾವುದೇ ಹಿಂಜರಿಕೆಯಿಲ್ಲದೆ ವಯ್ಯಾರದಿಂದ ಕುಣಿಯುತ್ತಿದ್ದಳು.
ಇದ್ದಕ್ಕಿದ್ದಂತೆ ಮಿಸೆಸ್ ಮಲೀಕ್ಳಿಲಗೆ ವಾಸ್ತುಶಿಲ್ಪಿಯು ನಿರ್ಮಿಸಿದ ಪ್ರತಿಮೆಯ ಚಿತ್ರ ಅವಳ ಕಣ್ಮುಂದೆ ಹಾದು ಹೋಯಿತು. ಒಂದು ಕ್ಷಣ ‘ಅದೇನಾದರೂ ತನ್ನ ಸೊಸೆಯದಾಗಿರಬಹುದೆ?’ ಎಂಬ ಅನುಮಾನ ಅವಳನ್ನು ಕಾಡಿತು. ಅದ್ಹೇಗೆ ಸಾಧ್ಯ? ಮನೆ ಕಟ್ಟಿಸುವಾಗ ಅವಳ ಸೊಸೆ ಇಲ್ಲಿಗಿನ್ನೂ ಬಂದಿರಲೇ ಇಲ್ಲ! ಆದರೆ ಚಿತ್ರದಲ್ಲಿನ ಪ್ರತಿಮೆಯು ಮರೂನ್ ಸೀರೆಯನ್ನು ಉಟ್ಟಂತೆಯೇ ಅವಳ ಸೊಸೆ ಕೂಡಾ ಮರೂನ್ ಸೀರೆಯನ್ನೇ ಉಟ್ಟಿದ್ದಳು. ಹೌದು, ಖಂಡಿತ ಅದು ಮರೂನ್ ಸೀರೆಯೇ! ಆದರೆ ಮಿಸೆಸ್ ಮಲೀಕ್ಳಿಕಗೆ ಅದೇಕೋ ಮರೂನ್ ಬಣ್ಣವನ್ನು ಕಂಡರೆ ಆಗುತ್ತಿರಲಿಲ್ಲ. ಅದು ಕಣ್ಣಿಗೆ ಹೊಡೆಯುತ್ತದೆನ್ನುವದು ಅವಳ ವಾದವಾಗಿತ್ತು. ಅದೇನಿದ್ದರೂ ತನ್ನ ಸೊಸೆಯಂತವರಿಗೆ ಮಾತ್ರ ಸರಿ ಎನ್ನುವದು ಅವಳ ಅಭಿಪ್ರಾಯವಾಗಿತ್ತು!
“ಅವಳು ತನಗೆ ಬೇಕಾದರೆ ಮರೂನ್ ಸೀರೆಗಳನ್ನೇ ಉಡಲಿ. ಲಿಪ್ಸ್ಟಿ ಕ್‍ ಹಾಕಿಕೊಳ್ಳಲಿ. ನಂಗೇನೂ ಬೇಜಾರಿಲ್ಲ” ತನ್ನಷ್ಟಕ್ಕೆ ತಾನೆ ಹೇಳಿಕೊಂಡಳು ಮಿಸೆಸ್ ಮಲೀಕ್. “ಆದರೆ ನನ್ನಷ್ಟೇ ಅವಳೂ ಕಷ್ಟಪಟ್ಟು ದುಡಿಯಬೇಕು. ಮನೆಯ ಪ್ರತಿಯೊಂದು ಇಟ್ಟಿಗೆಯನ್ನು ನಾನೇ ಸ್ವತಃ ನಿಂತು ಇಡಿಸಿದ್ದೇನೆ. ಬಿಸಿಲು, ಮಳೆ ಎನ್ನದೇ ಬೆಳಗಿನ ಜಾವದಿಂದ ಸಂಜೆಗತ್ತಲವರೆಗೂ ನಿಂತು ಕಟ್ಟಡದ ಮೇಲ್ವಿಚಾರಣೆಯನ್ನು ನಡೆಸಿದ್ದೇನೆ. ಪ್ಲಾಸ್ಟರ್ ಗೋಡೆಗಳಿಗೆ ನೀರು ಹಾಕಿದ್ದೇನೆ. ಅಗತ್ಯ ಬಿದ್ದಾಗ ನಾನೇ ಸ್ವತಃ ಗಾರೆ ಹಾಕಿದ್ದೇನೆ. ಮೇಸ್ತ್ರಿಗಳಿಗೆ ಸಹಾಯ ಮಾಡಿದ್ದೇನೆ. ನನ್ನಷ್ಟಲ್ಲವಾದರೂ ನನ್ನ ಅರ್ಧದಷ್ಟಾದರೂ ಮನೆಯ ಏಳ್ಗೆಗಾಗಿ ಆಕೆ ಶ್ರಮಿಸಲೇಬೇಕು.”
ಅವರು ಮನೆ ತಲುಪಿದರು. ಮಿಸೆಸ್ ಮಲೀಕ್ಳಯ ಮಗ ಕಾರನ್ನು ನೇರವಾಗಿ ಪೋರ್ಟಿಕೋದಲ್ಲಿ ತಂದು ನಿಲ್ಲಿಸಿದ. ತಕ್ಷಣ ಅವಳ ಸೊಸೆ ಕಾರಿನಿಂದ ಜಿಗಿದು ನೇರವಾಗಿ ವೆರಾಂಡಕ್ಕೆ ಓಡಿಹೋದಳು. ಅಲ್ಲಿದ್ದ ಶಿಲ್ಪಾಕೃತಿಯನ್ನು ಆಸಕ್ತಿಯಿಂದ ಗಮನಿಸಿಸುತ್ತಾ ಆ ಶಿಲ್ಪಾಕೃತಿಯು ಯಾವ ಭಂಗಿಯಲ್ಲಿ ನಿಂತಿತ್ತೋ ಅದೇ ಭಂಗಿಯಲ್ಲಿ ಮತ್ತೆ ಮತ್ತೆ ನಿಲ್ಲುವ ಪ್ರಯತ್ನ ಮಾಡಿದಳು. ಮಿಸೆಸ್ ಮಲೀಕ್ಳಕ ಎದೆಗೆ ಚೂರಿ ಹಾಕಿದಂತಾಯಿತು. ಜೊತೆಗೆ ವಾಸ್ತುಶಿಲ್ಪಿಯೂ ಅವಳನ್ನು ನೋಡಿ ಗಹಗಹಿಸಿ ನಕ್ಕಂತೆ ಭಾಸವಾಯಿತು.
ವೆರಾಂಡದಲ್ಲಿದ್ದ ಪ್ರತಿಮೆಗೆ ಎದುರಾಗಿ ನಿಂತು ಅದರಂತೆಯೇ ತನ್ನ ನವಿರಾದ ಕೂದಲನ್ನು ತನ್ನ ಮರೂನ್ ಸೀರೆಯ ಸೆರಗಿನಲ್ಲಿ ಅಡಗಿಡಿಸುತ್ತಾ, ಮತ್ತೆ ಮತ್ತೆ ಅದನ್ನೇ ಅನುಕರಿಸುತ್ತಾ ಮಿಸೆಸ್ ಮಲೀಕ್ಳತ ಸೊಸೆ ಆಳುಗಳಿಗೆ ತಮ್ಮ ಜೊತೆ ಬಾಡಿಗೆ ಕಾರಿನಲ್ಲಿ ತಂದಿದ್ದ ಲಗೇಜ್ನ್ನು ತೆಗೆದಿರಿಸಲು ಹೇಳಿದಳು.
ಕಾರಿನಿಂದ ಲಗೇಜ್ನ್ನುತ ತೆಗಿದಿರಿಸಲಾಯಿತು. ಟ್ಯಾಕ್ಷಿ ಡ್ರೈವರ್ನಿಗೆ ಬಾಡಿಗೆಯನ್ನು ಕೊಟ್ಟು ಕಳಿಸಿದರು. ಮಿಸೆಸ್ ಮಲೀಕ್ ಹಿಂದಿನ ಸೀಟಿನಲ್ಲಿ ಕುಳಿತೇ ಇದ್ದಳು. ಒಂದು ಕ್ಷಣ ಆಕೆಗೆ ತಾನು ಮುಳುಗಿಹೋಗುತ್ತಿರುವೆನೇನೋ ಎನ್ನುವಂತೆ ಭಾಸವಾಯಿತು.
ಅವಳ ಮಗ ಮನೆಯೊಳಗೆ ಹೋದನು. ಅವಳ ಸೊಸೆ ಅವನನ್ನು ಹಿಂಬಾಲಿಸಿದಳು. ಅವರು ಒಂದಾದ ಮೇಲೊಂದು ಲೈಟ್ಗಗಳನ್ನು ಹಾಕುತ್ತಾ ಬಂದರು. ಎಲ್ಲ ಕೋಣೆಗಳು ವಿದ್ಯುದೀಪಗಳಿಂದ ಬೆಳಗಿ ಇಡಿ ಮನೆ ಝಗಮಗಿಸತೊಡಗಿತು. ಮಿಸೆಸ್ ಮಲೀಕ್ ಮನೆಯ ಸೌಂದರ್ಯವನ್ನು ನೋಡಿ ಆಶ್ಚರ್ಯಪಟ್ಟಳು. ಅವಳಿನ್ನೂ ಕಾರಿನ ಹಿಂದಿನ ಸೀಟಿನಲ್ಲಿಯೇ ಕುಳಿತಿದ್ದಳು. ಉದ್ವೇಗದಲ್ಲಿದ್ದ ಅವಳ ಮಗನಿಗಾಗಲಿ, ಸೊಸೆಗಾಗಲಿ ಕಾರಿನ ಹಿಂದಿನ ಬಾಗಿಲನ್ನು ತೆಗೆಯುವದು ನೆನಪಾಗಿರಲಿಲ್ಲ. ಮಿಸೆಸ್ ಮಲೀಕ್ಳಿಲಗೆ ತಾನು ಮರೆತು ಹೋದ ಲಗೇಜ್ನಂಟತಾಗಿರುವನೇನೋ ಎಂಬಂತೆ ಭಾಸವಾಯಿತು.
ಒಂದು ಘಂಟೆ ಸರಿಯಿತು. ಮತ್ತೊಂದು ಘಂಟೆ ಕಳೆಯಿತು. ಇದ್ದಕ್ಕಿದ್ದಂತೆ ಮಿಸೆಸ್ ಮಲೀಕ್ಳ ಮಗನಿಗೆ ತನ್ನ ತಾಯಿಯ ನೆನಪಾಯಿತು. ತಕ್ಷಣ ಪೋರ್ಟಿಕೋಕ್ಕೆ ಓಡಿಹೋಗಿ ಕಾರಿನ ಬಾಗಿಲನ್ನು ತೆಗೆದನು.
“ಸಂಜೆಯ ಪ್ರಯಾಣ ಸಾಮಾನ್ಯವಾಗಿ ನನಗೆ ನಿದ್ರೆ ತರಿಸುತ್ತದೆ.” ಅವನ ತಾಯಿ ನಿದ್ರೆಯಲ್ಲಿರುವಂತೆ ನಟಿಸಿದಳು. ಅಷ್ಟೊತ್ತಿಗಾಗಲೇ ಅವಳ ಸೊಸೆಯೂ ಪೋರ್ಟಿಕೋಕ್ಕೆ ಬಂದಿದ್ದಳು. ಎಲ್ಲರೂ ಖುಷಿಯಿಂದ ನಗುತ್ತಿದ್ದರು. ಮಿಸೆಸ್ ಮಲೀಕ್ಳಿ ಸೊಸೆ ಮತ್ತೊಮ್ಮೆ ವೆರಾಂಡದಲ್ಲಿದ್ದ ಪ್ರತಿಮೆಯ ಎದುರು ನಿಂತು ಅದರಂತೆಯೇ ತನ್ನ ಕೂದಲನ್ನು ತನ್ನ ಮರೂನ್ ಸೀರೆಯ ಸೆರಗಿನಲ್ಲಿ ಅಡಗಿಸಿಡುತ್ತಾ ಅದನ್ನು ಅನುಕರಣೆ ಮಾಡಿದಳು.
ಒಳಬರುತ್ತಿದ್ದಂತೆ ಆಳುಗಳು ಟೇಬಲ್ ಮೇಲೆ ಊಟವನ್ನು ಸಿದ್ಧಪಡಿಸಿಟ್ಟಿದ್ದರು. “ನಾನು ಊಟ ಮಾಡೊಲ್ಲ. ನಂಗೆ ಹಸಿವಿಲ್ಲ.” ಮಿಸೆಸ್ ಮಲೀಕ್ ಹೇಳಿದಳು. “ನಾನು ಮಲಗಬೇಕು.”
“ಹಾಗಾದರೆ ನಿಮ್ಮ ಕೋಣೆಗೆ ಹೋಗಿ ಮಲಗಿ” ಮಿಸೆಸ್ ಮಲೀಕ್ಳ ಸೊಸೆ 10×8 ಕೋಣೆಯನ್ನು ತೋರಿಸುತ್ತಾ ಹೇಳಿದಳು. ಮಿಸೆಸ್ ಮಲೀಕ್ಳಿ ಮಗ ಆಕೆಯ ಕೈಯನ್ನು ಹಿಡಿದುಕೊಂಡು ಹೋಗಿ ಅವಳ ಕೋಣೆಗೆ ಬಿಟ್ಟುಬಂದ.
“………ಸಧ್ಯಕ್ಕೆ ಅದು ನಮ್ಮತ್ತೆ ಕೋಣೆಯಾಗಿರಲಿ……ಆಕೆ ಹೋದನಂತರ ನಾವದನ್ನು ಸ್ಟೋರ್-ರೂಮಾಗಿ ಉಪಯೋಗಿಸ್ಕೋತಿವಿ……….” ಮಿಸೆಸ್ ಮಲೀಕ್ಳಿಿಗೆ ಈ ಹಿಂದೆ ತಾನು ವಾಸ್ತುಶಿಲ್ಪಿಯೊಂದಿಗೆ ಆಡಿದ ಮಾತುಗಳು ಹಾಸಿಗೆಯ ಮೇಲೆ ಉರುಳಿದಂತೆ ಅವಳ ಕಿವಿಯಲ್ಲಿ ಪ್ರತಿಧ್ವನಿಸಿದವು.
ಅಷ್ಟರಲ್ಲಿ ಅವಳ ಸೊಸೆಯ ದನಿ ಕೇಳಿಸಿತು, “ಮನೆಯನ್ನೇನೋ ತುಂಬಾ ಚನ್ನಾಗಿ ಪ್ಲ್ಯಾನ್ ಮಾಡಿ ಕಟ್ಟಲಾಗಿದೆ. ಆದರೆ ಇದಕ್ಕೆ ಸ್ಟೋರ್-ರೂಮೊಂದರ ಕೊರತೆಯಿದೆ. ನಂಗೆ ಸ್ವಲ್ಪ ದೊಡ್ಡದಾಗಿರುವ ಸ್ಟೋರ್-ರೂಮೇ ಬೇಕು. ಈಗ ಪರ್ವಾಗಿಲ್ಲ. ಅದಿಲ್ಲದೆ ಹೇಗೋ ಮ್ಯಾನೇಜ್ ಮಾಡ್ತೀನಿ. ಆದರೆ ಮುಂದಕ್ಕೆ ಹೇಗೂ ಅತ್ತೆಯವರ ಕೋಣೆ ಇದ್ದೇ ಇದೆಯೆಲ್ಲ? ಅದನ್ನೇ ನಾವು ಸ್ಟೋರ್-ರೂಮಾಗಿ ಉಪಯೋಗಿಸ್ಕೊಂಡರಾಯಿತು.”
ಮಿಸೆಸ್ ಮಲೀಕ್ಳಿಜಗೆ ಈ ಮಾತುಗಳನ್ನು ಕೇಳಿ ತಳವಿಲ್ಲದ ಬಾವಿಯಲ್ಲಿ ಆಳಕ್ಕೆ ಇನ್ನೂ ಆಳಕ್ಕೆ ಮುಳುಗಿ ಹೋಗುತ್ತಿರುವಂತೆ ಭಾಸವಾಯಿತು.

‍ಲೇಖಕರು G

14 October, 2013

2 Comments

  1. Rohith

    ನಾನು ಪಿ.ಯೂ.ಸಿ ಓದುವಾಗ, ಈ ಕಥೆ ಇಂಗ್ಲೀಷಿನಲ್ಲಿ ಪಠ್ಯವಾಗಿತ್ತು. ಈಗ ಮತ್ತೆ ಅದನ್ನು ನೆನಪಿಸಿದ್ದಕ್ಕೆ, ಉತ್ತಮವಾದ ಅನುವಾದಕ್ಕೆ ಧನ್ಯವಾದಗಳು ಸರ್…. 🙂

  2. ಜೆ.ವಿ.ಕಾರ್ಲೊ, ಹಾಸನ

    ಪ್ರತಿಯೊಬ್ಬರೂ ಒಂದಿಲ್ಲೊಂದು ದಿನ ‘ಮರೆತು ಹೋದ ಲಗ್ಗೇಜ್’ ಆಗುವುದೊಂದು ನಿಶ್ಚಿತವಾದರೂ ಆ ಬಗ್ಗೆ ಯೋಚಿಸದಿರುವುದು ಒಂದು ದೊಡ್ಡ ದುರಂತ!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading