ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹ್ಯಾಪ್ಪಿ ಬರ್ತ್ ಡೇ ಗುರು ಕಿರಣ್ – ಹೃದಯ ಶಿವ

ಹೃದಯ ಶಿವ

ಇವತ್ತು ಗುರುಕಿರಣ್ ಅವರ ಬರ್ತ ಡೇ… ಆ ನೆಪದಲ್ಲಿ ಹಿಂದೊಮ್ಮೆ ಬರೆದಿದ್ದ ಒಂದು ಬರಹ ಮತ್ತೆ ನಿಮ್ಮೆದುರು…

ಪ್ರತಿಭೆ, ರೂಪದ ಒಂದು ಅಚ್ಚರಿಯ ಎರಕ ಗುರುಕಿರಣ್

ಗುರುಕಿರಣ್ ಯಾವ ಯಾವ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ ಎಂದು ನೆನಪಿಸಿಕೊಂಡರೆ ಎ, ಉಪೇಂದ್ರ, ಅಪ್ಪು, ಕರಿಯ, ಆಪ್ತಮಿತ್ರ, ಕುಟುಂಬ, ಜೋಗಿ, ರಾಮ ಶಾಮ ಭಾಮ, ಅರಮನೆ – ಮುಂತಾದವುಗಳು ನೆನಪಾಗುತ್ತವೆ. ಈ ಬಗೆಯ ಚಿತ್ರಗಳಲ್ಲಿನ ಹಾಡುಗಳನ್ನು ಜ್ಞಾಪಿಸಿಕೊಂಡು ಗುರುಕಿರಣ್ ಅವರ ಬಗ್ಗೆ ಯೋಚಿಸತೊಡಗಿದಾಗ ಇವರ ಸುತ್ತ ಜರುಗಿದ ಘಟನೆಗಳನ್ನು, ರೋಚಕ ಸಂಗತಿಗಳನ್ನು ಚರ್ಚಿಸಬೇಕು ಅನ್ನಿಸುತ್ತದೆ.
ಇವರು ಕೆಲವೇ ವರ್ಷಗಳಲ್ಲಿ ಇಷ್ಟು ಎತ್ತರಕ್ಕೆ ಬೆಳೆದಿದ್ದು ಅಚ್ಚರಿಯ, ಪ್ರಶಂಸೆಯ ವಿಷಯ; ಗುರುಕಿರಣ್ ಅವರು ಎಲ್ಲರಂತೆ ಆಗಿದ್ದರೆ… ಎಲ್ಲರು ಕೊಡುವಂಥ ಹಾಡುಗಳನ್ನು ಕೊಡಬಲ್ಲ, ಎಲ್ಲರ ರೀತಿಯ ಸೂತ್ರಗಳಿಗೆ ಜೋತು ಬಿದ್ದ ಸಂಗೀತ ನಿರ್ದೆಶಕರಾಗಿದ್ದರೆ ಇನ್ನೂ ಒಂದಷ್ಟು ಹಿಟ್ ಗೀತೆಗಳನ್ನು ಕೊಡಬಹುದಿತ್ತು. ಆದರೆ ಗುರುಕಿರಣ್, ರೆಹಮಾನ್ ಮುಂತಾದ ಸಂಗೀತಗಾರರು ಒಂದು ಬಗೆಯಲ್ಲಿ ಮೈಕೆಲ್ ಜಾಕ್ಸನ್, ಮಧುರ್ ಭಂಡಾರ್ಕರ್ ಗಳು; ಅವರೇ ರೂಪಿಸಿಕೊಂಡ ಕಲಾಜಗತ್ತಿನ ಪರಿಧಿಯಲ್ಲಿ ತಲ್ಲೀನರಾಗುತ್ತ ಬದುಕನ್ನೇ ಕಲೆಗೆ ಮೀಸಲಾಗಿಸಿಕೊಂಡು ಬದುಕುವ ರಾಜ್ ಕಪೂರ್, ರವಿಚಂದ್ರನ್ ಗಳು. ನಮಗೆ ರೆಹಮಾನ್, ಮೈಕೆಲ್ ಜಾಕ್ಸನ್ ಗಳ ಯೋಚನಾಕ್ರಮ ಅರಿವಿಗೆ ದಕ್ಕಿದರೆ, ಅವರು ಬಂದ ಅವಕಾಶಗಳನ್ನೆಲ್ಲಾ ಒಪ್ಪಿಕೊಂಡು, ಕೇವಲ ಸಂಖ್ಯೆಗಷ್ಟೇ ಒತ್ತು ಕೊಟ್ಟು, ಕಡೆಗೆ ಲಡ್ಡಾಗಿ ನಿವೃತ್ತಿ ಹೊಂದುವುದನ್ನು ಊಹಿಸಿಕೊಳ್ಳಲೂ ಕಷ್ಟವಾಗುತ್ತದೆ. ನಿತ್ಯದ ಬದುಕು, ಕ್ರಿಯಾಶೀಲತೆಗಳನ್ನೆಲ್ಲಾ ಒಟ್ಟಿಗೇ ಸವಿಯುತ್ತ ಅಚ್ಚರಿಯಾಗಿ ಕಾಣುವ ಈ ರಮ್ಯ ಜೀವಿಗಳ ಲೋಕ ವರ್ಣಮಯವಾದದ್ದು, ಸೋಲುಗೆಲುವುಗಳನ್ನೂ ಕೂಡ ಒಂದು ಸವಾಲಾಗಿ ಸ್ವೀಕರಿಸಿದ್ದು ಇನ್ನೂ ರೋಚಕ ಸಂಗತಿ.

ನೀವು ಈ ಗುರುಕಿರಣ್ ರನ್ನು ಬಲ್ಲಿರಿ. ಇವರ ಹಾಡುಗಳಲ್ಲಿ ಇವರದೇ ಫೀಲ್ ಮತ್ತು ಸ್ಟೈಲ್. ಗುರುಕಿರಣ್ ಫೀಲ್ ಮಾಡುವ ಟ್ಯೂನನ್ನು ಚಿತ್ರಕತೆಯ, ಹಾಡಿನ ಸನ್ನಿವೇಶದ ಆಶಯಕ್ಕೆ ಮೋಸವಾಗದಂತೆ ವಾದ್ಯ ಸಂಯೋಜನೆ, ಪೂರಕ ಸಾಹಿತ್ಯ, ಗಾಯನದ ಮೂಲಕ ಜನಕ್ಕೆ ತಲುಪಿಸುವುದು ಅವರ ಹೊಣೆ; ಹಾಡು ರೂಪಿಸುವ ತಂತ್ರದಲ್ಲಿ ಚೆನ್ನಾಗಿ ಪಳಗಿದ್ದ ಗುರುಕಿರಣ್ ಪ್ರಯೋಗಿಸಿದ ಹೊಸತನವೆಂದರೆ, ಆದಷ್ಟೂ ಸೌಂಡಿಂಗ್ ಮೂಲಕ ರಂಜನಾತ್ಮಕವಾಗಿ ಹಾಡುಗಳನ್ನು ರೂಪಿಸುತ್ತಾ ಆಡಿಯೋ ಹಿಟ್ ಆಗುವಂತೆ ನೋಡಿಕೊಳ್ಳುವುದು, ಕೇಳುಗ ಚಕಿತಗೊಳ್ಳುವಂತೆ ಮಾಡುವುದು. ಇವರು ‘ಜೋಗಿ’ ಚಿತ್ರಕ್ಕೆ ಹಾಡುಗಳನ್ನು ಮಾಡುವ ಮುಂಚೆ ಇವರು ಜಾನಪದೀಯ ಹಿನ್ನೆಲೆಯುಳ್ಳ ಸಂಗೀತ ನೀಡಿರಲಿಲ್ಲ; ‘ಜೋಗಿ’ಯಲ್ಲಿನ ಕತೆ, ಚಿತ್ರಕತೆಯಲ್ಲಿನ ಮೂಡ್ ಗುರುಕಿರಣ್ ಅವರಿಂದ ಸೌಂಡಿಂಗ್ ಜೊತೆಗೆ ಜಾನಪದೀಯ ಸ್ಪರ್ಶದ ಅವಶ್ಯಕತೆಯನ್ನೂ ಮನವರಿಕೆ ಮಾಡಿದ್ದವು. ಆದರೆ ಪ್ರೇಮ್ ಅವರಿಗಿದ್ದ ಹಳ್ಳಿಗಾಡಿನ ಪರಿಚಯ, ಗ್ರಾಮ್ಯ ಭಾಷೆಯ ಅರಿವು ಅರಿತುಕೊಂಡು ಆ ಮೂಡ್ ಗೆ ಹೊಂದುವ ರೀತಿಯಲ್ಲಿ ಗುರುಕಿರಣ್ ಹಾಡುಗಳನ್ನು ರೂಪಿಸಿದರು. ಅಲ್ಲಿಯ ತನಕ ಕೇಳಿರದಿದ್ದ ಹೊಸಬಗೆಯ ಗುರುಕಿರಣ್ ಹಾಡುಗಳು ಜನಕ್ಕೆ ಸಿಕ್ಕವು. ಹಾಡುಗಳನ್ನು ಇದ್ದಕ್ಕಿದ್ದಂತೆ ಪರವಶತೆಯ ಘಟ್ಟಕ್ಕೆ ತಲುಪಿಸಬಲ್ಲ ಗುರುಕಿರಣ್ ಅಬ್ಬರದ ಸೌಂಡ್, ಕ್ಯಾಚಿ ಲಿರಿಕ್ಸ್, ಸ್ಟೈಲಿಶ್ ಹಾಡುಗಾರಿಕೆಯಿಂದ ಕೇಳುಗರನ್ನು ರಂಜಿಸಲು ಪ್ರಯತ್ನಿಸುವವರು. ‘ಎ’ ಚಿತ್ರದ ಹಾಡುಗಳು ಆವರೆಗಿನ ಕನ್ನಡ ಕೇಳುಗರನ್ನು ಬೆಚ್ಚಿ ಬೀಳಿಸಿದ್ದು, ‘ಆಪ್ತಮಿತ್ರದ’ದ ಹಾಡುಗಳು ಬೇರೆಯದೇ ಗುರುಕಿರಣ್ ರನ್ನು ತೋರಿಸಿದ್ದು, ‘ಶುಭಂ’ನ ನವಿರಾದ ಕತೆಗೆ ಮಾಧುರ್ಯದ ಟಚ್ ಕೊಟ್ಟು ಇಡೀ ಚಿತ್ರವನ್ನು ಸಂಗೀತಮಯಗೊಳಿಸಿದ್ದು – ಇವು ಒಂದಿಷ್ಟು ಉದಾಹರಣೆಗಳು ಮಾತ್ರ.
ಇಲ್ಲಿ ಇದಕ್ಕೆ ಪೂರಕವಾಗಿ ಕೆಲವೊಂದು ವಿಷಯ ಹೇಳಬೇಕು. ಷೋ ಮ್ಯಾನ್ ಗುರುಕಿರಣ್, ಲವಲವಿಕೆಯನ್ನೇ ಜೀವನದ ಬಹುಮುಖ್ಯ ಶಕ್ತಿವಾಗಿ ಅರಿತ ಗುರುಕಿರಣ್ ಕರ್ನಾಟಕದ ಮಟ್ಟಿಗೆ ಮೊದಲ ಸ್ಟೈಲಿಶ್ ಸಂಗೀತ ನಿರ್ದೇಶಕ; ಭಾರತೀಯ ಚಲನಚಿತ್ರರಂಗ ನಿಜಕ್ಕೂ ಹಾಡುಗಳ ಚಿತ್ರರಂಗ. ಗುರುಕಿರಣ್ ಅವರ ಸೌಂಡಿಂಗ್ ಸೆನ್ಸ್, ಸಂಗೀತದಲ್ಲಿನ ಹೊಸತನವೇ ಚಿತ್ರವೊಂದಕ್ಕೆ ಹುರುಪು ಮತ್ತು ಚೈತನ್ಯ ತರಬಲ್ಲವೆಂಬ ಪರಮಗುಟ್ಟನ್ನು ತಮ್ಮ ಸಂಗೀತದ ಮೂಲಕ, ಹಾಡುಗಾರಿಕೆಯ ಮೂಲಕ ತೋರಿ ಯಾವನೇ ಸಿನಿಮಾ ನಾಯಕನಷ್ಟೇ ಖ್ಯಾತಿವಂತರಾದ ವ್ಯಕ್ತಿ ಇವರು. ಚಿತ್ರಕ್ಕೆ ಹಾಡುಗಳೇ ಜೀವಾಳ ಎಂಬುದಕ್ಕೆ ಉದಾಹರಣೆ: ಗಾಯಕನಿಗೆ ಈ ನೋಟ್ ನಲ್ಲಿ ಪ್ರೇಮದ ಭಾವನೆ ತೋರು ಎಂದು ಹೇಳಿ ಹಾಡಿಸಿಕೊಂಡಿದ್ದನ್ನು ನಿರ್ದೇಶಕರು ನಾಯಕನ ಸ್ವಗತದಲ್ಲೋ, ನಾಯಕಿಯ ಕಲ್ಪನೆಯಲ್ಲೋ ಹಾಕಬಹುದು- ಇದನ್ನು ಮನಗಂಡಿದ್ದ ಗುರುಕಿರಣ್ ತಮ್ಮ ಪ್ರತಿಭೆಯನ್ನು ಮಾತ್ರವಲ್ಲ, ತಮ್ಮ ಅಂದಾಜು, ಭಾವುಕತೆ, ಹೊಸತನ ಮುಂತಾದವುಗಳನ್ನು ಬಸಿದುಕೊಂಡರು, ಸಂಗೀತವನ್ನೇ ಹೀರೋ ಮಾಡಿದರು. ಅವರೊಂದಿಗೆ ತಾವೂ ಅರಳಿಕೊಂಡರು. ಹಾಗೆಯೇ ಸದಾ ಹಾಡುಗಳ ಗುಂಗಿನಲ್ಲಿಯೇ ಮುಳುಗಿರುತ್ತಿದ್ದ ಗುರುಕಿರಣ್ ಅವರು ಮೇಲುನೋಟಕ್ಕೆ ಸ್ಟಾರ್ ರೀತಿಯಲ್ಲಿ ಕಂಡರೂ ಆಳದಲ್ಲಿ ಸರಳ ಭಾವುಕರಾಗಿದ್ದರು; ಸಂಗೀತವನ್ನೇ ಅಚ್ಚಿಕೊಂಡಿರುವ ಇವರು ಅನೇಕ ಹೊಸ ಹೊಸ ಗೀತರಚನೆಕಾರರನ್ನು, ಗಾಯಕ/ಗಾಯಕಿಯರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದೂ ಉಂಟು. ಸಿನಿಮಾಗಳ ಜೊತೆಜೊತೆಗೆ ‘ಕಾನ್ಫಿಡೆಂಟ್ ಸ್ಟಾರ್ ಸಿಂಗರ್’ ತರಹದ ಕಿರುತೆರೆಯ ರಿಯಾಲಿಟಿ ಷೋ ಗಳನ್ನು ನಡೆಸಿಕೊಡುವ ಮೂಲಕ, ಅಲ್ಲಿ ಹಾಡುವ ಒಂದಿಷ್ಟು ಪ್ರತಿಭೆಗಳನ್ನು ಗುರ್ತಿಸಿ ತಮ್ಮ ಚಿತ್ರಗಳಲ್ಲಿ ಹಾಡುವ ಅವಕಾಶ ಕಲ್ಪಿಸಿಕೊಟ್ಟರು. ನಿಜಕ್ಕೂ ಹೊಸ ಗಾಯಕರಿಗೆ ಇವರು ಕೊಡುವ ಗೌರವ, ತುಂಬುವ ಆತ್ಮವಿಶ್ವಾಸ ಮೆಚ್ಚಿಗೆ ಉಂಟುಮಾಡುವಂಥದ್ದೇ. ಈ ಕುರಿತು ಗುರುಕಿರಣ್, “ನಾನು ಮೊದಲಿಗೆ ಗಾಯಕನಾಗಬೇಕು ಅಂತ ಚಿತ್ರರಂಗಕ್ಕೆ ಬಂದೆ. ಅಲ್ಲಿ ಇಲ್ಲಿ ಅವಕಾಶಗಳಿಗಾಗಿ ಪ್ರಯತ್ನಿಸಿದೆ. ಒಂದು ಸಲ ಒಬ್ಬರು ಹಿರಿಯ ಹೆಸರಾಂತ ಸಂಗೀತ ನಿರ್ದೇಶಕರ ಬಳಿ ಅವಕಾಶ ಕೇಳಲು ಹೋಗಿದ್ದೆ. ಹಾಡು ಅಂದರು. ಅವರ ಸಮ್ಮುಖದಲ್ಲಿಯೇ ನನ್ನದೇ ಶೈಲಿಯಲ್ಲಿ ಹಾಡಿದೆ. ನಾನು ನನ್ನದೇ ಶೈಲಿಯಲ್ಲಿ ಹಾಡಿದ್ದನ್ನು ಕೇಳಿಸಿಕೊಂಡ ಆ ಸಂಗೀತ ನಿರ್ದೇಶಕರು, ಹೀಗೆಲ್ಲಾ ಹಾಡಬಾರದು, ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡಿದಂತೆ ಬೇಸ್ ವಾಯ್ಸ್ ನಲ್ಲಿ, ಮೆದುವಾದ, ನಿಧಾನಗತಿಯ ಧಾಟಿಯಲ್ಲಿ ಹಾಡಬೇಕೆಂದೂ, ನಾನು ಹಾಡುವ ಬಗೆ ಸರಿಯಿಲ್ಲವೆಂದೂ ನನ್ನ ಮನಸನ್ನು ನೋಯಿಸಿದ್ದರು. ಗಾಯಕನಾಗಿ ಬದುಕು ಕಂಡುಕೊಳ್ಳಬೇಕು, ಉನ್ನತವಾದುದನ್ನು ಸಾಧಿಸಬೇಕು ಎಂಬ ನನ್ನ ಕನಸನ್ನು ಸುಳ್ಳಾಗಿಸಿದ್ದರು. ಅದನ್ನೇ ಚಾಲೆಂಜಾಗಿ ತೆಗೆದುಕೊಂಡು, ನನ್ನ ಹಾಡುವ ಶೈಲಿಯನ್ನು ಯಾವುದೇ ಕಾರಣಕ್ಕೂ ಬದಲಾಯಿಸಿಕೊಳ್ಳದೆ ಅದನ್ನೇ ಆಧಾರವಾಗಿಟ್ಟುಕೊಂಡು ಮುಂದೆ ಸಾಧಿಸಬೇಕು ಅಂತ ತೀರ್ಮಾನಿಸಿದೆ. ಆ ಪ್ರಯತ್ನ ‘ಉಪೇಂದ್ರ’ ಚಿತ್ರದ ‘ಟು ಥೌಸಂಡ್ ಎ.ಡಿ. ಲೇಡಿಯೇ’ ಹಾಡಿನ ಮೂಲಕ ಫಲ ನೀಡಿತು. ನನ್ನ ಸ್ಟೈಲ್ ಆಫ್ ಸಿಂಗಿಂಗ್ ಕ್ಲಿಕ್ ಆಗುವ ಮೂಲಕ ನನ್ನ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿತು. ಆದ್ದರಿಂದ ಯಾರಾದರು ಹೊಸದಾಗಿ ಹಾಡಲು ಬರುವ ಗಾಯಕ/ಗಾಯಕಿಯನ್ನು ಅವಮಾನಿಸುವುದಾಗಲೀ, ಅವರ ಆತ್ಮವಿಶ್ವಾಸವನ್ನು ಕುಗ್ಗಿಸುವುದಾಗಲೀ ನಾನು ಮಾಡುವುದಿಲ್ಲ. ಬದಲಿಗೆ ಅವರದೇ ಶೈಲಿಯಲ್ಲಿ ಹಾಡಲು ಹೇಳುತ್ತೇನೆ. ಅವರ ದ್ವನಿ, ಸ್ಟೈಲ್ ಆಫ್ ಸಿಂಗಿಂಗ್ ಯಾವ ಬಗೆಯದ್ದು ಎಂದು ಗ್ರಹಿಸಿ ನಾನು ಕಂಪೋಸ್ ಮಾಡಿರುವ ಯಾವ ಹಾಡಿಗೆ ಅವರ ದ್ವನಿ ಹೊಂದುತ್ತದೆ ಎಂದು ಅಂದಾಜು ಮಾಡುತ್ತೇನೆ. ಅವರ ಧ್ವನಿ ನಾನು ಹಾಕಿದ ರಾಗಕ್ಕೆ, ಅದರ ಆಶಯಕ್ಕೆ ಹೊಂದುವುದಾದರೆ ಖಂಡಿತ ಅವರಿಂದ ಹಾಡಿಸುತ್ತೇನೆ. ನನಗೆ ಬಾಲಿವುಡ್ ಗಾಯಕರಿಂದಲೇ ಹಾಡಿಸಬೇಕೆಂದು ಹಠವೇನೂ ಇಲ್ಲ. ಆಯಾಯಾ ಹಾಡಿಗೆ ಹೊಂದುವ ಆಯಾಯಾ ವಾಯ್ಸ್ ಸೂಟ್ ಆದರೆ ಸಾಕು. ನನ್ನ ಅದೆಷ್ಟೋ ಹಾಡುಗಳು ಹೊಸಗಾಯಕ ಗಾಯಕಿಯರು ಹಾಡಿದ್ದುಂಟು, ಆ ಹಾಡುಗಳು ಸೂಪರ್ ಹಿಟ್ ಆಗಿದ್ದೂ ಉಂಟು.”
ತಮ್ಮ ವೃತ್ತಿ ಬದುಕಿನ ಅಪಾರ ಸ್ಪರ್ಧೆಯ ನಡುವೆಯೂ ತಮ್ಮ ಕ್ರಿಯಾಶೀಲತೆಯನ್ನು ಕಾಪಾಡಿಕೊಳ್ಳಲು ಯತ್ನಿಸುವ ಗುರುಕಿರಣ್ ಅವರು ಚಿತ್ರರಂಗದಲ್ಲಿ ಏನನ್ನೂ ಸಾಧಿಸದೆ, ಗಾಯಕನಾಗಬೇಕೆಂದು ಅಲ್ಲಿ ಇಲ್ಲಿ ಅವಕಾಶಗಳ ಬೆನ್ನತ್ತುತ್ತಿದ್ದ, ನಾಳೆಯ ಬದುಕಿನ ಸ್ಪಷ್ಟತೆಯೇ ಇರದಿದ್ದ ದಿನಗಳಲ್ಲಿಯೇ ತಮ್ಮ ಬದುಕಿನ ಹಾಡಿಗೆ ಪಲ್ಲವಿ ಎಂಬ ಬಾಳಸಂಗಾತಿಯಾಗಿ ಆಯ್ಕೆ ಮಾಡಿಕೊಂಡರು. ಹೃದಯ್, ಶ್ರಾವ್ಯ ಎಂಬೆರಡು ಮಕ್ಕಳ ಅಪ್ಪನಾಗಿ ಮುಂದೊಮ್ಮೆ ಹೆಂಡತಿ ಮಕ್ಕಳಿಗೂ ಸಮಯ ಕೊಡಲಾರದಷ್ಟು ಬ್ಯುಸಿಯೆಸ್ಟ್ ಸಂಗೀತ ನಿರ್ದೇಶಕ ಅನ್ನಿಸಿಕೊಂಡರು. ಯಶಸ್ಸು, ಕೀರ್ತಿ, ಹಣ, ಸ್ಟಾರ್ ಗಿರಿ ಎಲ್ಲವೂ ಇದ್ದ ಕಾಲದಲ್ಲಿಯೂ ಆ ಗೆಲುವಿನ ಪಿತ್ತವನ್ನು ನೆತ್ತಿಗೇರಿಸಿಕೊಳ್ಳದ ಹಾಗೆ ಇರುಳೆಲ್ಲಾ ವಾದ್ಯಗಳೊಂದಿಗೆ, ನಾದದೊಂದಿಗೆ ಮುಳುಗಿಹೋದರು. ಸಾಮಾನ್ಯ ಕೇಳುಗನಿಗಾಗಿ ಸರಳ ಗೀತೆಗಳನ್ನು ರೂಪಿಸುತ್ತಾ ಚೊಚ್ಚಲ ಬಾರಿಗೆ ಸಿನಿಮಾ ಮಾಡಿದ ಅದೆಷ್ಟೋ ನಿರ್ದೇಶಕರಿಗೆ ತಮ್ಮ ಹಾಡುಗಳ ಮೂಲಕ ಗೆಲುವು ತಂದುಕೊಟ್ಟವರು; ‘ಧ್ರುವ’ದ ಎಂ.ಎಸ್.ರಮೇಶ್, ‘ತುಂಟಾಟ’ದ ಇಂದ್ರಜಿತ್ ಲಂಕೇಶ್, ‘ಕರಿಯ’ನ ಪ್ರೇಮ್, ‘ಖುಷಿ’ಯ ಪ್ರಕಾಶ್, ‘ಕಂಠಿ’ಯ ಭರತ್, ‘ರಾಮ ಶಾಮ ಭಾಮ’ದ ರಮೇಶ್ ಅರವಿಂದ್, ‘ಸತ್ಯ ಇನ್ ಲವ್’ನ ರಾಘವ್ ಲೋಕಿ, ‘ಅರಮನೆ’ಯ ನಾಗಶೇಖರ್ ಆ ಪೈಕಿ ಪ್ರಮುಖ ನಿರ್ದೇಶಕರು. ತಮ್ಮ ಪ್ರತಿಭೆ, ಸಾಮರ್ಥ್ಯದ ಬಗ್ಗೆ ಅಪಾರ ವಿಶ್ವಾಸ ಹೊಂದಿರುವ ಗುರುಕಿರಣ್ ತಮ್ಮ ಸಂಗೀತದ ಹಾಡುಗಳು ತೆರೆಯ ಮೇಲೆ ಚೆನ್ನಾಗಿ ಮೂಡಿ ಬಂದಾಗ ಹೇಗೆ ಖುಷಿ ಪಡುತ್ತಾರೋ ಅದೇ ಆ ಹಾಡುಗಳು ಕೆಟ್ಟದಾಗಿ, ಅಭಿರುಚಿಶೂನ್ಯತೆಯಿಂದ ಚಿತ್ರಿತವಾಗಿದ್ದರೆ ಬೇಜಾರು ಮಾಡಿಕೊಳ್ಳುವುದೂ ಉಂಟು. ಹಾಡು ಕುರಿತ ತಮ್ಮ ಜಡ್ಜ್ ಮೆಂಟ್ ಬಗ್ಗೆ ಗ್ಯಾರಂಟಿ ಹೊಂದಿರುವ ಗುರುಕಿರಣ್ ತಮಗೆ ಮೊದಲಿಗಿದ್ದ ಬೇಡಿಕೆ ತುಸು ಕುಗ್ಗಿದಾಗಲೂ, ತಮ್ಮಿಂದ ಹಿಟ್ ಗೀತೆಗಳನ್ನು ಪಡೆದು ಚಿತ್ರರಂಗದಲ್ಲಿ ಎತ್ತರಕ್ಕೇರಿದ ಕೆಲವು ನಿರ್ದೇಶಕರು, ನಿರ್ಮಾಪಕರು ಬೇರೊಬ್ಬ ಸಂಗೀತ ನಿರ್ದೇಶಕರ ಹತ್ತಿರ ಹೋದಾಗಲೂ ಆಘಾತಕ್ಕೊಳಗಾಗದೆ, ಯಾರನ್ನೂ ದೂರದೆ, ಯಾರ ಮೇಲೂ ಕೋಪಿಸಿಕೊಳ್ಳದೆ ತಾವಾಯಿತು, ತಮ್ಮ ಕೆಲಸವಾಯಿತು ಎಂಬ ತೀರ್ಮಾನಕ್ಕೆ ಬಂದರು. ಕೆಲವು ಸಮಯಸಾಧಕರು ತಮ್ಮಿಂದ ಉಪಕಾರ ಪಡೆದೂ, ಬೆನ್ನಿನ ಹಿಂದೆ ತಮ್ಮ ಬಗ್ಗೆಯೇ ಇಲ್ಲದ್ದನ್ನು ಮಾತಾಡುವಾಗಲೂ, ತಮ್ಮನ್ನು ಹಗುರವಾಗಿ ಚಿತ್ರಿಸುವಾಗಲೂ ಅಂಥವರ ಮೇಲೆ ಮೊದಲಿನಂತೆಯೇ ಪ್ರೀತಿಯಿಂದ, ತುಂಬು ವಿಶ್ವಾಸದಿಂದ ವರ್ತಿಸಿದರು. “ಒಬ್ಬರಿಗೆ ಸಹಾಯ ಮಾಡಿದರೆ ಅದರಿಂದ ಪ್ರತಿಯಾಗಿ ಏನನ್ನೋ ಬಯಸುವುದರಲ್ಲಿ ಅರ್ಥವಿಲ್ಲ, ಅದು ಸ್ವಾರ್ಥವಾಗುತ್ತದೆ. ನನ್ನಿಂದ ಸಹಾಯ, ಉಪಕಾರ ಪಡೆದ ಕೆಲವರು ನನ್ನ ಬಗ್ಗೆ ಅಲ್ಲಿ ಇಲ್ಲಿ ನೆಗೆಟಿವಾಗಿ ಮಾತಾಡುವುದನ್ನು ಕೇಳಿದ್ದೇನೆ. ಇದರಿಂದ ಮನಿಸಿಗೆ ತುಸು ನೋವಾದರೂ ಮರೆತು ಸುಮ್ಮನಾಗಲು ಯತ್ನಿಸುತ್ತೇನೆ. ಏಕೆಂದರೆ ಬದುಕು ಕ್ಷಣಿಕ, ಇವತ್ತಿದ್ದವರು ನಾಳೆ ಇರಲ್ಲ. ಇದ್ದಷ್ಟು ಕಾಲ ಖುಷಿಯಿಂದ, ಪ್ರಾಮಾಣಿಕವಾಗಿ ಬದುಕಬೇಕಷ್ಟೇ” ಎಂದು ಹೇಳಿ ಭಾವುಕರಾಗುವ ಗುರುಕಿರಣ್ ವ್ಯಂಗ್ಯಚಿತ್ರಗಳನ್ನೂ ಬರೆಯಬಲ್ಲ ಗಂಭೀರ ಸ್ವಭಾವದ ಮನುಷ್ಯ ಎಂಬುದು ಎಷ್ಟೋ ಜನಕ್ಕೆ ಗೊತ್ತಿಲ್ಲ. ತಾವು ಈ ಮಟ್ಟಕ್ಕೆ ಬರಲು ಕಾರಣರಾದ ಉಪೇಂದ್ರ, ವಿ.ಮನೋಹರ್ ರನ್ನು ಯಾವಾಗಲೂ ನೆನಪಿಸಿಕೊಳ್ಳುವ ಇವರು ಆಳದಲ್ಲಿ ಸೂಕ್ಷ್ಮ ಸ್ವಭಾವದ, ಅಷ್ಟೇ ಕ್ಲಿಷ್ಟಕರ ಹಾಗೂ ಅಷ್ಟೇ ಸರಳ ವ್ಯಕ್ತಿತ್ವದ ವ್ಯಕ್ತಿ.
ಗುರುಕಿರಣ್ ಅವರಲ್ಲಿನ ಮತ್ತೊಂದು ವಿಶೇಷ ಪ್ರತಿಭೆಯೆಂದರೆ ಅವರ ‘ಗುರುಕಿರಣ್ ಮ್ಯೂಸಿಕಲ್ ನೈಟ್’ ಮೂಲಕ ನಾಡಿನ ಮೂಲೆಮೂಲೆಯ ಜನರನ್ನು ರಂಜಿಸಿದ್ದು. ಗುರುಕಿರಣ್ ತಮ್ಮ ತಂಡ ಕಟ್ಟಿಕೊಂಡು ಹೋಗಿ ಹಾಡಿ ರಂಜಿಸುವವರೆಗೆ ‘ಹಂಪಿ ಉತ್ಸವ’ಕ್ಕೆ ತನ್ನದೇ ಆದ ಕಳೆ, ಮೆರುಗು, ಗ್ಲಾಮರ್ ಬಂದಿರಲಿಲ್ಲವೆಂದರೆ ನಿಮಗೆ ಅಚ್ಚರಿಯಾಗಬಹುದು. ಯಾವಾಗ ಹಂಪಿಯಲ್ಲಿ ‘ಗುರುಕಿರಣ್ ನೈಟ್’ ಹಂಪಿಯಲ್ಲಿ ಹಿಟ್ ಕಾರ್ಯಕ್ರಮ ಆನ್ನಿಸಿಕೊಂಡಿತೋ ಅಲ್ಲಿಂದಾಚೆಗೆ ‘ಗುರುಕಿರಣ್ ನೈಟ್’ಗಳು ಸಾಕಷ್ಟು ಜನಪ್ರಿಯತೆ ಗಳಿಸಲಾರಂಭಿಸಿದವು. ಸರ್ಕಾರ ಏರ್ಪಡಿಸುವ ಜಿಲ್ಲಾ ಉತ್ಸವರಿಗೆ ಗುರುಕಿರಣ್ ಹಾಡುಗಳ ರಂಗು ತುಂಬಿಕೊಂಡು ಹಬ್ಬದ ವಾತಾವರಣ ನಿರ್ಮಾಣವಾಗತೊಡಗಿತು. ಗುರುಕಿರಣ್ ಹಾಡುತ್ತಾ, ಕುಣಿಯುತ್ತಾ ಹೋದರು. ಜನ ಅಭಿಮಾನದಿಂದ ಚಪ್ಪಾಳೆ ಹೊಡೆದು, ತಾವೂ ಕುಣಿದು ಸಂಭ್ರಮಿಸಿದರು. ಅದೊಂದೇ ವರ್ಷ ತುಮಕೂರು, ಬೀದರ್, ಬಾಗಲಕೋಟೆ, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಸುಮಾರು ಹತ್ತನ್ನೆರಡು ಜಿಲ್ಲೆಗಳಲ್ಲಿ ‘ಗುರುಕಿರಣ್ ನೈಟ್’ಗಳ ಅಭಿಯಾನ ಆರಂಭವಾಯಿತು. ಗುರುಕಿರಣ್ ಹಾಡುಗಳು ಜನರಲ್ಲಿ ಮತ್ತಷ್ಟು ತೀವ್ರವಾಗಿ ಬೇರೂರಲಾರಂಭಿಸಿದವು. ‘ಗುರುಕಿರಣ್ ನೈಟ್’ಗಳ ಮಹತ್ವ, ಪ್ರಭಾವ, ಕ್ರೇಜ್ ಎಷ್ಟಿತ್ತು ಎಂಬುದಕ್ಕೆ ಮೊಟ್ಟಮೊದಲ ‘ಮೈಸೂರು ಯುವದಸರ’ಕ್ಕೆ ಗುರುಕಿರಣ್ ಹಾಡುವ, ಕುಣಿಯುವ ಮೂಲಕ ವಿಶೇಷ ಮೆರುಗು ತಂದಿದ್ದರು. ಅದೇ ರೀತಿ ಬರೀ ಕರ್ನಾಟಕ ಮಾತ್ರವಲ್ಲದೆ ಅಮೇರಿಕಾ, ಇಂಗ್ಲೆಂಡ್, ದುಬೈ, ಮಸ್ಕಟ್, ಅಬುದಾಬಿ, ಸಿಂಗಪೋರ್ ಇನ್ನೂ ಮುಂತಾದ ಕಡೆ ಇವರು ಕಾರ್ಯಕ್ರಮಗಳನ್ನು ಕೊಟ್ಟರು. ಅಲ್ಲಿಯ ಕನ್ನಡಿಗರನ್ನು ರಂಜಿಸಿದರು. ಅಂದಹಾಗೆ ತಮ್ಮ ಷೋ ಗಳಲ್ಲಿ ತಮ್ಮ ಹಾಡುಗಳು ಮಾತ್ರವಲ್ಲದೆ ಇತರ ಸಂಗೀತ ನಿರ್ದೇಶಕರ ಹಾಡುಗಳನ್ನು ಹಾಡುತ್ತಿದ್ದದ್ದು, ಪರ್ಫಾರ್ಮ್ ಮಾಡುತ್ತಿದ್ದದ್ದು ಇವರಿಗಿದ್ದ ಮತ್ತೊಂದು ವಿಶೇಷ ಗುಣ. ಇನ್ನೊಬ್ಬರ ಪ್ರತಿಭೆ, ಕಲೆಯನ್ನು ಗೌರವಿಸುವ ಆದರ್ಶಗುಣ ಅನ್ನಬಹುದು.
ಇಷ್ಟೆಲ್ಲವನ್ನೂ ಚರ್ಚಿಸಿದ ಮೇಲೂ ಗುಂಗುರು ಕೂದಲ, ಆಕರ್ಷಕ ಲುಕ್ಕಿನ, ಒಂದೆರಡು ಸಿನಿಮಾಗಳಲ್ಲಿ ಹೀರೋ ಕೂಡ ಆದ, ಧಾರಾವಾಹಿಗಳಲ್ಲಿ ನಟಿಸಿದ, ತಮ್ಮ ಸಂಗೀತಕ್ಕಾಗಿ ಒಮ್ಮೆ ರಾಜ್ಯ ಪ್ರಶಸ್ತಿ, ಮೂರು ಬಾರಿ ಫಿಲಂ ಫೇರ್ ಅವಾರ್ಡ್ ಪಡೆದ, ಕನ್ನಡದ ಜೊತೆಗೆ ತೆಲುಗು, ತಮಿಳು, ತುಳು ಸೇರಿದಂತೆ ಹತ್ತಿರಹತ್ತಿರ ನೂರು ಚಿತ್ರಗಳಿಗೆ ಸಂಗೀತ ನೀಡಿದ ಗುರುಕಿರಣ್ ಅವರ ಪ್ರತಿಭೆ ಅಪಾರ ಪ್ರಯೋಗ, ಹೊಸತಿನೆಡೆಗಿನ ತುಡಿತಗಳಿಂದ ರೂಪಿತವಾಗಿರುವುವಂಥದ್ದು. ಅವರ ಜೀವನೋಲ್ಲಾಸದ ಹಿಂದೆ ಕಂಡ ಸೋಲು, ಕಹಿ ಅನುಭವ, ಆದ ಅವಮಾನ, ಏಕಾಂತದ ನೋವಿನ ಸ್ವಗತಗಳಿವೆ. ಮಗುವಿನ ಮುಗ್ಧತೆ ಮತ್ತು ಏಳುಬೀಳುಗಳ ಬದುಕು ನೀಡಿದಂತ ದಟ್ಟ ಅನುಭವ ಅವರಲ್ಲಿದೆ. ಇವನ್ನೆಲ್ಲ ಮೀರಿದ ಮಾಂತ್ರಿಕತೆ – ಜೀವನ ಪ್ರೀತಿ, ಬದುಕಿನ ಒಂದೊಂದು ಕ್ಷಣವನ್ನೂ ಆನಂದಿಸುವ, ಆರಾಧಿಸುವ ಗುಣ ಅವರಲ್ಲಿನ ವಿಶೇಷತೆ. ಗುರುಕಿರಣ್ ಅವರ ಜಾಗದಲ್ಲಿ ಗುರುಕಿರಣ್ ಅಲ್ಲದೆ ಬೇರಾರನ್ನೂ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ.
 

‍ಲೇಖಕರು G

29 October, 2014

2 Comments

  1. Kiran

    Happy Birthday Gurooooo!!

  2. nalina

    good ya

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading