ಹೌದೇನೇ ‘ಉಮಾ’ ಹೌದೇನೇ. ಜನವೆನ್ನುವುದಿದು ನಿಜವೇನೇ?

ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ಅವಧಿಯ ನಂಬಿಕೆ.

ಹಾಗಾಗಿ ಆರಂಭವಾಗಿದ್ದು ‘ಕವಿತೆ ಬಂಚ್’ ಎನ್ನುವ ಪ್ರಯೋಗ

ಆ ಕವಿ ‘ಪೊಯೆಟ್ ಆ ದಿ ವೀಕ್’ ಕೂಡಾ

ಅವರು ಬರೆದ ಕವಿತೆಗಳಿಗೆ ಒಂದು ಕನ್ನಡಿ ಹಿಡಿಯಬೇಕೆಂಬ ಕಾರಣಕ್ಕೆ ಪ್ರತೀ ವಾರ ಒಬ್ಬೊಬ್ಬರು ಕಾವ್ಯಪ್ರೇಮಿಯ ಮೊರೆ ಹೋಗಿದ್ದೇವೆ.

ಅವರು ಕವಿತೆಯನ್ನು ಓದಿ ಅದರ ಸ್ಪರ್ಶಕ್ಕೆ ಮನಸೋತ ಬಗೆಯನ್ನು ಬಿಚ್ಚಿಡುತ್ತಾರೆ.

ಕಳೆದ ವಾರ ಹಾಗೆ  ‘ಪೊಯೆಟ್ ಆ ದಿ ವೀಕ್’ ಆದವರು ಉಮಾ ಮುಕುಂದ್

ಅವರ ಕವಿತೆಗಳು ಇಲ್ಲಿವೆ.

ಈಗ ಅದಕ್ಕೆ ಶಿವಕುಮಾರ್ ಮಾವಲಿ ಅವರು ಪ್ರತಿಕ್ರಿಯಿಸಿದ ರೀತಿಯನ್ನು ನೋಡಿ-

——————————————————————————————————————————————————————

‘ದೇವರು ಅರೆಸ್ಟ್ ಆದ’ ಎನ್ನುವ ಕಥಾ ಸಂಕಲದ ಮೂಲಕ ಓದುಗರ ಗಮನ ಸೆಳೆದ ಶಿವಕುಮಾರ ಮಾವಲಿ ಇಂಗ್ಲಿಷ್ ಉಪನ್ಯಾಸಕರು. ಅವರಿಗೊಂದು ತುಂಟ ಕಣ್ಣಿದೆ. ಅದರೊಂದಿಗೆ ಸಮಾಜದ ನೋವಿನ ಅರಿವೂ ಇದೆ. ಹಾಗಾಗಿಯೇ ಅವರು ಘನ ನೋವಿಗೆ ಹಾಸ್ಯದ ಲೇಪ ನೀಡಿ ನಿಮ್ಮ ಮುಂದೆ ಇಡಬಲ್ಲರು.

ರಂಗಭೂಮಿಯನ್ನು ಇನ್ನಿಲ್ಲದಂತೆ ಪ್ರೀತಿಸಿದ ಶಿವಕುಮಾರ್ ಅದರ ಮುಂದುವರಿಕೆಯಾಗಿ ಕಿರುಚಿತ್ರ ಕ್ಷೇತ್ರಕ್ಕೂ ಹೆಜ್ಜೆ ಹಾಕಿದ್ದಾರೆ. ಇವರ ‘ಅವ್ಯಕ್ತ’ ಕಥೆ ಸಾಸ್ವೆಹಳ್ಳಿ ಸತೀಶ್ ನಿರ್ದೇಶನದಲ್ಲಿ ಸಂಚಾರಿ ವಿಜಯ್ ಹಾಗೂ ಡಾ ಜಾಹ್ನವಿ ಅವರ ಅಭಿನಯದಲ್ಲಿ ಪರಿಣಾಮಕಾರಿ ಚಿತ್ರವಾಗಿದೆ.

‘ಫ್ಲಿಪ್ ಕಾರ್ಟ್ ನಲ್ಲಿ ತರಿಸಿದ ಪ್ರೀತಿ’ ಇವರ ಮುಂದೆ ಬರಲಿರುವ ಕಥಾ ಸಂಕಲನ. ಇಂಗ್ಲಿಷ್ ನ್ನು ಹೀಗೂ ತಲೆಯೊಳಗೆ ತುಂಬಬಹುದೇ ಎಂದು ಬೆರಗಾಗುವಂತೆ ಕಚಗುಳಿ ಇಟ್ಟು ನಗಿಸುತ್ತಲೇ ಇಂಗ್ಲಿಷ್ ಲೋಕಕ್ಕೆ ಪ್ರವೇಶಿಕೆ ನೀಡುವ ಅಂಕಣ ವಿಜಯ ಕರ್ನಾಟಕದಲ್ಲಿ ಪ್ರತೀ ವಾರ ಪ್ರಕಟವಾಗುತ್ತಿದೆ.

ಅವಧಿಗಾಗಿ ಸಾಕಷ್ಟು ಕವಿತೆಗಳನ್ನು ಅನುವಾದಿಸಿರುವ ಇವರು ಈಗ ಪುತ್ರೋತ್ಸವದ ಸಂಭ್ರಮದಲ್ಲಿದ್ದಾರೆ ಅನುಗಾಲದ ಗೆಳತಿ ಪ್ರೇಮಾ ಅವರೊಂದಿಗೆ

——————————————————————————————————————————————————ಓಡಿಸಿಕೊಂಡು ಹೋಗುವ ಕವಿತೆಗಳು 

ಶಿವಕುಮಾರ್ ಮಾವಲಿ 

” Out of the quarrel with others we make rhetoric , but quarrel with ourselves we create Poetry ” ಎನ್ನುತ್ತಾನೆ ಯೇಟ್ಸ್ ಕವಿ .

ಉಮಾ ಮುಕುಂದ್ ಅವರ ಇಲ್ಲಿನ ಕವಿತೆಗಳನ್ನು ಓದಿದಾಗ ನನಗೆ ಯೇಟ್ಸ್ ನ ಈ ಮಾತುಗಳು ಎಷ್ಟು ಸತ್ಯವಲ್ಲವೆ? ಎನಿಸಿತು. ಈ ಕವಿತೆಗಳು ಆಂತರ್ಯದಿಂದ ಹರಿದುಬಂದ ಕಥನಕವನಗಳೇ ಆಗಿವೆ. ಹಾಗೆ ಅವು ಬರಬೇಕಾದರೆ  ಕವಿಯೊಳಗೆ (ನಮ್ಮೊಳಗೆ) ಒಂದು ಜಗಳ ಆಗಿರಲೇಬೇಕು ಮತ್ತು ಆಗುತ್ತಿರಲೇಬೇಕು.

ಈ ಕವಿತೆಗಳಿಗೆ ಒಂದು ವಿಶಿಷ್ಠವಾದ Pace ಇದೆ. ಅದನ್ನು ವೇಗ ಎಂತಲೂ ಆವೇಗ ಎಂತಲೂ ನೀವು ಕರೆದುಕೊಳ್ಳುವುದಾದರೆ ಅದು ಕವಿಯ ನಿತ್ಯ ಜೀವನದ ಪರಿಣಾಮವೇ ಆಗಿದೆ. “ಓದಿಸಿಕೊಂಡು” ಹೋಗುವುದರ ಜೊತೆಯಲ್ಲಿ ಈ ಕವಿತೆಗಳು ನಿಮ್ಮನ್ನು “ಓಡಿಸಿಕೊಂಡು” ಕೂಡಾ ಹೋಗುತ್ತವೆ . ಬದಲಾದ ಪರಿಸ್ಥಿತಿಯಲ್ಲಿ ಕವಿತೆಯ Pace ಕೂಡ ಬದಲಾಗುವುದರಲ್ಲಿ ಕವಿಯದೇನು ತಪ್ಪಿದೆ ಅಲ್ಲವ?

‘ಕಡೇ ನಾಲ್ಕು ಸಾಲು’ಎಂಬ ಕವನ ನೀಡುವ ಅನುಭೂತಿ ತೀರ ಅನನ್ಯವಾದುದು. ಉಮಾ ಅವರು ಕವಿತೆಯನ್ನಷ್ಟೇ (Poem) ಬರೆದಿದ್ದೇನೆ ಅಂದುಕೊಂಡಿರಬಹುದು ಆದರೆ ಅದು ನಮ್ಮನ್ನು ತಲುಪುವ ಹೊತ್ತಿಗೆ ಸಮರ್ಥವಾದ ” ಕಾವ್ಯ” (Poetry)ವಾಗಿರುತ್ತದೆ. ಯಾವ ಕವಿ ತನ್ನ ಕವಿತೆಯನ್ಮು ಓದುಗನಿಗೆ ಕಾವ್ಯವಾಗಿ ದಾಟಿಸುತ್ತಾನೆಯೋ ಆಗ ನಿಜದ ಕಾವ್ಯ ಸೃಷ್ಟಿಯಾಗಿದೆ ಎಂದು ಅರ್ಥ.

ಉಮಾ ಅವರಿಗೆ ಯಾವುದರ ಬಗ್ಗೆ ಕವಿತೆ ಬರೆಯಬೇಕೆಂಬ ಆಯ್ಕೆಗಳು ಗೊಂದಲ ಮೂಡಿಸಿಯೇ ಇಲ್ಲ ಅನ್ನುವುದು ನನ್ನ ಅಭಿಪ್ರಾಯ. ಅವರು ತಮ್ಮ ಅನುಭವಕ್ಕೆ ಬಂದ ಯಾವುದೇ ಕಥನವನ್ನು ಕಾವ್ಯವಾಗಿಸಬಲ್ಲರೇನೋ ಎಂಬ ನಂಬಿಕೆ ನನಗಂತೂ ಇದೆ. ನನಗೆ ತುಂಬಾ ಇಷ್ಟವಾದ ಕವಿತೆ ‘ಕಡೇ ನಾಲ್ಕು ಸಾಲು’. ಹೀಗೆ ಸಾಧಾರಣ  ವಸ್ತುವೊಂದನ್ನು ಅದರ ರೂಪಕದಿಂದಲೇ ಮೇರು ಕವಿತೆಯಾಗಿಸಲು ಸಾಧ್ಯವಾಗುವುದಾದರೆ ಅರ್ಥವನ್ನೇ ಬಿಟ್ಟುಕೊಡದ ಅನೇಕ ಕ್ಲಿಷ್ಟ ಕವಿತೆಗಳ ಅನಿವಾರ್ಯತೆ ಏನಿದೆ ಎಂದೆನ್ನಿಸುತ್ತದೆ ?

‘ಕಾಫೀ ಗೀಫಿ’ ‘ಆ ನಂತರ ..’ ಮತ್ತು ‘  ‘ಬದಲಾಗುವುದೆಂದರೆ’ ಅಂತ ಕವಿತೆಗಳಲ್ಲಿ ವಿಶಿಷ್ಠವಾದ ಅನುಭವವನ್ನು ನೀಡಬಲ್ಲ ಉಮಾ ಮುಕುಂದ್ ಅವರು ಮುಂದಿನ ಕವಿತೆಗಳಲ್ಲಿ ಹಲ್ಲು ನೋವಿನ ಬಗ್ಗೆಯೋ, ಕಸದ ಬುಟ್ಟಿಯಲ್ಲಿ ಸಿಕ್ಕ ಬಾಳೇ ಹಣ್ಣಿನ ಸಿಪ್ಪೆ ಬಗ್ಗೆಯೋ, ಮೆಟ್ರೋನಲ್ಲಿ ಸೀಟು ಸಿಗದೆ ಪರದಾಡಿದ ವೃದ್ಧನ ಬಗ್ಗೆಯೋ, ಮೆಜೆಸ್ಟಿಕ್ ನಿಂದ ಹೊರಡುವ ಕೊನೇ ಬಸ್ಸಿನ ಬಗ್ಗೆಯೋ, ಕಪಲ್ ಗಳ ಕ್ಯಾಂಡಲ್ ಲೈಟ್ ಡಿನ್ನರ್ ಬಗ್ಗೆಯೋ, ಬ್ರಿಗೇಡ್ ರೋಡಿನ ಬೆಡಗಿಯರಲ್ಲಿ ಕಂಡ ಮಿಂಚೊಂದರ ಬಗ್ಗೆಯೋ ಬರೆಯಬಲ್ಲರು ಎಂದು ನಾನು ಅಂದಾಜಿಸುತ್ತೇನೆ ಮತ್ತು ಅವೆಲ್ಲವೂ ಕಾವ್ಯವಾಗಲೇಬೇಕಾದ ವಸ್ತುಗಳು ಕೂಡ ಎಂಬುದು ನಿಸ್ಸಂಶಯ.

ಏಕೆಂದರೆ ನಮ್ಮ ಸುತ್ತಲಿನ ಜನ ಜೀವನಕ್ಕಿಂತ ದೊಡ್ಡ ಕಾವ್ಯ ಮತ್ತೊಂದಿರದು ಅಲ್ಲವೇ ?

ಈಗಷ್ಟೇ ನಾಲ್ಕಾರು ಕವಿತೆಗಳನ್ನು ಬರೆದಿರುವ ನನ್ನಂಥವನಿಗೆ ಅವಧಿಯ ಈ ಹೊಸ ಪ್ರಯತ್ನದಲ್ಲಿ ಮೊದಲಿಗನಾಗಿ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ಕೊಟ್ಟಿದ್ದಕ್ಕೆ (ಒಂದು ರೀತಿಯ ಒತ್ತಡ ಎಂದರೂ ನಡೆಯುತ್ತದೆ) ಜಿ. ಎನ್ .ಮೋಹನ್ ಅವರಿಗೆ ಆಭಾರಿಯಾಗಿರುತ್ತೇನೆ. ಹಾಗೂ ಈ ಮೂಲಕ ಹೊಸದೊಂದು ಪ್ರಯತ್ನಕ್ಕೆ ಕಾರಣೀಬೂತರಾಗಿರುವ ಉಮಾ ಮುಕುಂದ್ ಅವರಿಗೂ ಅಭಿನಂದಿಸುತ್ತೇನೆ. ಅಲ್ಲದೆ ಅವರು ಯೇಟ್ಸ್ ಹೇಳುವ ಜಗಳವನ್ನು ಆಗಾಗ ಮಾಡಿಕೊಳ್ಳುತ್ತಲೇ ಇರಲಿ.

‍ಲೇಖಕರು avadhi

December 14, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Anantha Krishna

    ಸೊಗಸಾದ ಅಭಿಪ್ರಾಯ. ಎಲ್ಲ ಉದಯೋನ್ಮುಖ ಕಲಾವಿದರಿಗೆ ನಿಮ್ಮಂಥ ಮೊದಲ ಅಭಿಪ್ರಾಯಿಸ್ಟ್ ಸಿಕ್ಕರೆ ಅವರೆಲ್ಲ ಬಲವಾಗಿ ಮುಂದೆ ಬರುವುದರಲ್ಲಿ ಸಂದೇಹವಿಲ್ಲ. ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತ ಇದೆ. ಆಂತರಿಕ ವಾದವೇ ಕಾವ್ಯದ ಮೂಲ?

    ಪ್ರತಿಕ್ರಿಯೆ
  2. Suresh Narasimha

    Nice summary to interesting work by Uma. Have been following Uma’s poems. Uma presents us with real kavana & not kathana disguised as Kavana. In each of her poems you can feel ” Jeevanapreeti”, Anubhava & agaadha anubhava. Her poems are best of example what you can write when you get rid of all “isms”

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: