ತಂದೆ ತಾಯಿ ದೇವರಲ್ಲ..
ಖಂಡಿತಾ ಅಲ್ಲ
ಅವರು ದೇವರಿಗಿಂತಲೂ ಮಿಗಿಲು
ಹಾಗಂದುಕೊಂಡಿರುವವರು ಎಸ್ ಎಚ್ ಜಮೀಲ್
ಸಾವಣ್ಣ ಪ್ರಕಾಶನದ ಮೂಲಕ, ಅದನ್ನು ಪುಸ್ತಕ ರಂಗದಲ್ಲಿ ಹೆಗ್ಗುರುತಾಗಿಸುವ ಮೂಲಕ
ಕನ್ನಡ ಪುಸ್ತಕೊದ್ಯಮಕ್ಕೂ ಕಾರ್ಪೊರೇಟ್ ಶೈಲಿಯ ಪ್ರಚಾರದ ಟಚ್ ನೀಡಿದ ಎಸ್ ಎಚ್ ಜಮೀಲ್ ಹೇಳಿದ್ದು ಸರಿ
ಏಕೆಂದರೆ ಜಮೀಲ್ ಅವರ ಯಾವುದೇ ಪುಸ್ತಕ ಬಿಡುಗಡೆಯಾಗುವುದು- ಈ ಗುಟ್ಟು ನಿಮಗೆ ಗೊತ್ತಿರಲಿ, ಯಾವುದೇ ಸಭಾಂಗಣ, ಹೋಟೆಲ್ ನಲ್ಲಿ ತುಂಬಿದ ಗೃಹದ ಮುಂದೆ ಅಲ್ಲ ಅವರ ತಂದೆ ತಾಯಿಯ ಕೈನಲ್ಲಿ
ಹಾಗೆ ಮೊದಲ ಪ್ರತಿ ಅವರು ಬಿಡುಗಡೆ ಮಾಡಿದ ಮೇಲೆ ನಡೆಯುವುದು ಔಪಚಾರಿಕ ಸಾರ್ವಜನಿಕ ಬಿಡುಗಡೆ ಕಾರ್ಯಕ್ರಮ
ತಂದೆ ತಾಯಿ ಇಬ್ಬರೂ ಪ್ರತೀ ಪುಸ್ತಕಕ್ಕೂ ಆಶೀರ್ವಾದ ಮಾಡುತ್ತಾರೆ. ಆರೋಗ್ಯ ಅನುಮತಿ ಕೊಟ್ಟರೆ ಕಾರ್ಯಕ್ರಮಕ್ಕೂ ಬಂದು ಕೂರುತ್ತಾರೆ
ಇಲ್ಲಿನ ಚಿತ್ರ ನೋಡಿದ ಮೇಲೆ ನಮಗೂ ಹಾಗೆ ಅನಿಸುತ್ತದೆ ಅಲ್ಲವೇ
ತಂದೆ ತಾಯಿ ದೇವರಲ್ಲ.. 







ಮುತ್ತಿನಂತಹ ಮಾತು. ದೇವರು ಎಲ್ಲ ಕಡೆಗೂ ತಾನು ಇರಲು ಸಾಧ್ಯವಿಲ್ಲವೆಂದೇ ತಾಯಿಯನ್ನು ಸೃಷ್ಟಿಸಿದನಂತೆ. ಅಂದರೆ ತಾಯಿ ಸಾಕ್ಷಾತ್ ದೇವರು ಎಂಬುದರಲ್ಲಿ ಎರಡು ಮಾತಿಲ್ಲ. ಬಹು ವರ್ಷಗಳ ಹಿಂದೆ ನಾನೊಂದು ಚಿತ್ರ ಸ್ಪರ್ಧೆ ವೀಕ್ಷಿಸಿದೆ. ಒಬ್ಬ ಚಿತ್ರಕಾರ ತಾಯಿ-ಮಗುವನ್ನು ಅತ್ಯಂತ ಸಹಜ ಸುಂದರವಾಗಿ ಚಿತ್ರಿಸಿದ್ದ. ಎಡ ಭಾಗದಲ್ಲಿ ಮಗುವಿನ ಚಿತ್ರ ಬಲಭಾಗದಲ್ಲಿ ತಾಯಿಯ ಚಿತ್ರ. ಮಗುವಿನ ಕೆಳಗೆ “ತಾ..” ಎಂದೂ, ತಾಯಿ ಚಿತ್ರದ ಕೆಳಗೆ “ಈ….” ಎಂದು ಅಕ್ಷರಿಸಿದ್ದ. ತಾಯಿ ಚಿತ್ರವನ್ನು ಎಡಗಡೆಗೆ, ಮಗುವಿನ ಚಿತ್ರವನ್ನು ಬಲಗಡೆಗೆ ಚಿತ್ರಿಸಿದ್ದರೆ “ತಾಯಿ..” ಶೀರ್ಷಿಕೆಗೆ ಸರಿ ಹೊಂದುತ್ತಿತ್ತು-ಎಂದು ಕೆಲವರು ಅಭಿಪ್ರಾಯಪಡುತ್ತಿದ್ದರು. ಈ ಚಿತ್ರ ಒಳಾರ್ಥ ಗ್ರಹಿಸಲು ನನ್ನ ಚಿಂತನೆಗೆ ಗ್ರಾಸ ಒದಗಿಸಿತು. ಆ ಚಿತ್ರಕಾರ ಕುತೂಹಲದಿಂದ ಮಂದಹಾಸ ಸೂಸುತ್ತಾ ಪ್ರಶ್ನಾರ್ಥಕವಾಗಿ ನನ್ನನ್ನೇ ನೋಡುತ್ತಿದ್ದ. ಮಗು ಚಿತ್ರದ ಕೆಳಗೆ “ತಾ..”, ತಾಯಿ ಚಿತ್ರದ ಕೆಳಗೆ “ಯಿ..”ಎಂದು ಬರೆದುದರ ಅರ್ಥ ನನಗೆ ಹೊಳೆದು ಮುಗುಳ್ನಕ್ಕೆ. ಮಗು “ತಾ….”(ಕೊಡು) ಎನ್ನುತ್ತಿದೆ, ತಾಯಿ “ಈ…(ಯಿ=ತೆಗೆದುಕೋ..)ಎಂದು ಹೇಳುತ್ತಿದ್ದಾಳೆ. ಅಂದರೆ “ತಾಯಿ..”ಎಂಬ ಎರಡಕ್ಷರದಲ್ಲಿ “ಕೇಳುವ ಕಂದ”- “ಕೊಡುವ ಅವ್ವ” ಎರಡೂ ಅರ್ಥ ಅಡಕವಾಗಿವೆ-ಎಂದು ವಿವರಿಸಿದೆ. ಚಿತ್ರ ಕಲಾವಿದ ಅತಿಶಯ ಸಂತೋಷದಿಂದ ನನ್ನ ಕೈಕುಲುಕಿದ. ಹಾಗೇ ಮಾತಾಡುತ್ತಾ ಆ ಕಲಾವಿದ ಸಂಸ್ಕೃತ ಲೋಕೋಕ್ತಿ “ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೆ..”ಎಂಬುದನ್ನು ಸಾಂದರ್ಭಿಕವಾಗಿ ಉದ್ಧರಿಸಿದ. ಆಗ ನನಗೆ ಈ ಸಂಸ್ಕೃತೋಕ್ತಿಯನ್ನು 1970ರಲ್ಲಿ ಪಿ.ಯು.ಸಿ., ವಿದ್ಯಾರ್ಥಿಯಾಗಿದ್ದಾಗ ಕನ್ನಡಿಸಿದ್ದು ನೆನಪಾಯ್ತು. “ಹೆತ್ತ ಜನನಿ ಹೊತ್ತ ಅವನಿ ಮಿಗಿಲು ಸ್ವರ್ಗಕಿಂತಲೂ..”. ಏನಿದ್ದೀತು ಆ ಸ್ವರ್ಗದಲ್ಲಿ?, ಎಲ್ಲಾ ಇದೆ ಈ ಕನ್ನಡ ನಂದನವನದಲ್ಲಿ. ಈ ಭೂಲೋಕದ ಕರುನಾಡಿನ ಹಳ್ಳಿ-ಹಳ್ಳಿಗಳ ಗುಡಿ-ಗುಡಿಗಳಲ್ಲಿ ಶಿಲ್ಪ ಕಲಾಸಂಪತ್ತು ವಿಜೃಂಭಿಸುತ್ತಿದೆ. ಕಲ್ಲು-ಕಲ್ಲುಗಳಲ್ಲಿ ಕಾವ್ಯ ಕಲಾ ಕುಸುಮ ಪರಿಮಳಿಸುತ್ತಿದೆ. ಕನ್ನಡದ ಕುಲನಾರಿ ಹೆಜ್ಜೆಯಿಡುವಲ್ಲಿ ಗೆಜ್ಜೆಯ ಸೊಲ್ಲು ಘಲ್-ಘಲ್ ಎಂದು ಮಯೂರ ನರ್ತಿಸುತ್ತಿದೆ, ಸೂಸುವ ಸುಳಿಗಾಳಿಯಲ್ಲಿ ದಿವ್ಯ ಸಂಗೀತದ ನಾದ ಮಾಧುರ್ಯ ನಿನದಿಸುತ್ತಿದೆ, ದಾಹವೆಂದು ಬಾಯ್ದೆರೆದರೆ ಸಂಸ್ಕೃತಿಯ ಹೆಜ್ಜೇನು!, ಕಾವೇರಿ-ತುಂಗಭದ್ರೆಯರ ಸಂಜೀವಿನಿ ಸಲಿಲ ಪಾನ!, ಕೈಯಿ ಚಾಚಿದರೆ ಸಾಕು ಅಂಗೈಯಲ್ಲಿ ಅಮೃತಫಲ, ಇದು ಯಾವ ದೇವಲೋಕ-ನಾಕಗಳಲ್ಲೂ ಸಿಗುವುದಕ್ಕೆ ಸಾಧ್ಯವೇ ಇಲ್ಲ. ಇಂತಹ ಸ್ವರ್ಗೀಯ ಆನಂದೋಲ್ಲಾಸ, ಹರ್ಷೋತ್ಕರ್ಷಗಳನ್ನು ಅನುಭವಿಸುವ ಈ ಮಾನವ ಜನ್ಮದ ಸೌಭಾಗ್ಯವನ್ನು ಕರುಣಿಸಿದ ತಾಯಿ-ತಂದೆ ಸಾಕ್ಷಾತ್ ದೇವರಲ್ಲದೇ ಬೇರಿನ್ನಾವ ದೇವರಿರಲು ಸಾಧ್ಯ?.