ಜಿ ಎನ್ ಮೋಹನ್
ಬಹುಷಃ ನಾವು ಭೇಟಿಯಾಗಲು ಅದಕ್ಕಿಂತ ಸರಿಯಾದ ಜಾಗ ಇನ್ನೊಂದು ಇರಲು ಸಾಧ್ಯವಿಲ್ಲವೇನೋ? ‘ಈಟಿವಿ ಚಾನಲ್’ ಗೆ ನ್ಯೂಸ್ ರೀಡರ್ ಗಳನ್ನು ಆಯ್ಕೆ ಮಾಡಲು ನಾನು ಇಡೀ ಕರ್ನಾಟಕವನ್ನು ಗರಗರನೆ ಸುತ್ತುತ್ತಿದ್ದೆ. ಹಾಗೆ ಸುತ್ತುವುದು ನನಗೆ ಒಂದು ರೀತಿಯಲ್ಲಿ ನನ್ನ ನೆಲದ ಘಮವನ್ನು ನನ್ನೊಳಗೆ ಕೂರಿಸಿಕೊಳ್ಳುವ ದಾರಿಯೂ ಆಗಿತ್ತು. ಹೈದ್ರಾಬಾದ್, ಹೈದ್ರಾಬಾದ್ ಗೂ ಆಚೆ ಇರುವ ರಾಮೋಜಿ ಫಿಲಂ ಸಿಟಿ, ಆ ಎರಡು ಸಾವಿರ ಎಕರೆಯ ಸಿಟಿಯೊಳಗೆ ಬಿಂದುವಾಗಿ ಹೋಗುತ್ತಿದ್ದ ನಾನು ಈ ರೀತಿ ಹೊರಗೆ ಹಾರುವುದಕ್ಕೆ ಸದಾ ತಯಾರು. ‘ಆರಂಕುಶವಿಟ್ಟರೂ..’ ನೆನೆಯುವ ಊರೂರುಗಳಲ್ಲಿ ನಾನು ಸುತ್ತುತ್ತಿದ್ದೆ.
ಆ ಘಮವನ್ನು ನನ್ನೊಳಗಿಳಿಸಿಕೊಳ್ಳುವುದು ಎಂದರೆ ಬಂದ ಕೆಲಸದ ಜೊತೆಗೆ ಗೆಳೆಯರ, ಅವರ ಕುಟುಂಬಗಳ ಜೊತೆ ಒಡನಾಡುವುದು ಸಹಾ. ಅದು ಒಂದು ಅರ್ಥದಲ್ಲಿ ನನಗೆ ಸ್ನೇಹದ ಕಾಣದ ಎಳೆಗಳನ್ನ ಕೂಡಿಸುವ ಕೆಲಸವೂ, ಚಾನಲ್ ಗಾಗಿ ಬಂಧುತ್ವ ಸೃಷ್ಟಿಸಿಕೊಳ್ಳುವುದು ಎರಡೂ ಆಗಿ ಹೋಗುತ್ತಿತ್ತು.

ಹಾಗೆ ನಾನು ಮೈಸೂರಿಗೆ ಕಾಲಿಟ್ಟಾಗ ಯುವರಾಜ ಕಾಲೇಜಿಗೆ ಹೋಗಿ ಕವಿತೆಯನ್ನೂ ಓದುತ್ತಿದ್ದೆ. ಚಿ ಶ್ರೀನಿವಾಸರಾಜು ಅವರ ಗೌರವಾರ್ಥ ವಿಶೇಷ ಸಂಚಿಕೆ ರೂಪಿಸಿದಾಗ ಅಲ್ಲಿ ಹೋಗಿ ಶ್ರೀನಿವಾಸರಾಜು ಅವರ ಬೆಚ್ಚನೆಯ ಪ್ರೀತಿಯನ್ನೂ ಪಡೆದಿದ್ದೆ. ಹೀಗೆ ಕೆ. ರಾಮದಾಸರ ಮನೆಯಲ್ಲಿ ಒಂದು ಸಂಜೆ ಕುಳಿತು ಚಳುವಳಿಯ ಕಾವು ತಾಕಿಸಿಕೊಳ್ಳುತ್ತಿರುವಾಗಲೇ ಬಾಗಿಲು ಬಡಿದ ಸದ್ದಾಯ್ತು. ಸಮತಾ, ನಿರ್ಮಲಾ ಮೇಡಂ ಅಡುಗೆ ಮನೆಯಲ್ಲಿದ್ದರು. ಬಂದ ನಮಗೆ ಕಾಫಿ ಮಾಡುವ ಸಂಭ್ರಮ ಅವರಿಗೆ. ರಾಮದಾಸ್ ಸ್ವಲ್ಪ ಸುಸ್ತಾಗಿದ್ದರು. ಹಾಗಾಗಿ ನಾನೇ ಬಾಗಿಲ ಕಡೆ ಹಾರಿದೆ. ಬಾಗಿಲು ತೆಗೆದಾಗ ಅದೇ ಪಂಚೆ, ಅದೇ ಜುಬ್ಬಾ, ಅದೇ ಮೇಲು ಹೊದಿಕೆ ಹೊದ್ದ ಅರೆ ನೆರೆತ ಗಡ್ಡದ ಅವರೇ… ಸಿದ್ಧರಾಮಯ್ಯ ನಿಂತಿದ್ದರು.

ರಾಮದಾಸರನ್ನು ನಿರೀಕ್ಷಿಸಿದ್ದ ಅವರ ಎದುರು ನಾನು ನಿಂತಿದ್ದೆ. ಒಂದಿಷ್ಟು ಗಲಿಬಿಲಿಗೊಂಡೇ ಒಳಗೆ ಪ್ರವೇಶಿಸಿದ ಅವರನ್ನು ನೋಡಿದ ತಕ್ಷಣವೇ ರಾಮದಾಸ್ ಅವರಿಗೆ ಆನೆ ಬಲ ಬಂದಂತಾಗಿತ್ತು. ಅದುವರೆಗೂ ಸುಸ್ತು ಎನ್ನುತ್ತಿದ್ದವರು ಎದ್ದವರೇ ಸಿದ್ಧರಾಮಯ್ಯನವರನ್ನು ಆಲಂಗಿಸಿಕೊಂಡರು. ‘ಚಾಮುಂಡೇಶ್ವರಿ ಚುನಾವಣೆಯಲ್ಲಿ ಉಬ್ಬಸಪಡ್ತಾ ಗೆದ್ದೆಯಲ್ಲಪ್ಪಾ, ನೀನು ಗೆದ್ದಿದ್ದಕ್ಕೆ ಇವರೂ ಕಾರಣ’ ಅಂತ ರಾಮದಾಸ್ ನನ್ನ ಕಡೆ ಕೈ ತೋರಿಸಿದರು. ತಕ್ಷಣ ಸಿದ್ಧರಾಮಯ್ಯ, ‘ನೀವು ಈಟಿವಿಯ ಮೋಹನ್ ಅವರಾ’ ಎಂದು ಕೈ ಕುಲುಕಿದರು.
ಚಾಮುಂಡೇಶ್ವರಿ ಚುನಾವಣೆ ಎನ್ನುವುದು ರಾಜ್ಯದ ಗಮನ ಬಿಡಿ, ದೇಶದ ಗಮನವನ್ನು ಬಾಚಿ ಕುಳಿತಿತ್ತು. ಇದು ಪ್ರಧಾನಿ ಆಯ್ಕೆಯ ಚುನಾವಣೆಯೇನೋ ಎಂಬಂತೆ ಎಲ್ಲರೂ ಜಿದ್ದಾಜಿದ್ದಿಗೆ ಬಿದ್ದಿದ್ದರು. ಎಲ್ಲರ ಮುಖದಲ್ಲೂ ಆತಂಕದ ಗೆರೆಗಳೇ. ಯಾರಿಗೂ ನಾವೇ ಗೆಲ್ಲುತ್ತೇವೆ ಎನ್ನುವ ಖಾತರಿಯೇ ಇಲ್ಲ. ಈ ಚುನಾವಣೆಯ ಮಹತ್ವ ಗೊತ್ತಿದ್ದರಿಂದಲೇ ನಾನು ಚಾಮುಂಡೇಶ್ವರಿಯನ್ನು ಎಲ್ಲಾ ದಿಕ್ಕಿನಿಂದಲೂ ಒರೆಗೆ ಹಚ್ಚುವ ‘ಹಣಾಹಣಿ’ ಕಾರ್ಯಕ್ರಮ ಶುರುಮಾಡಿದೆ. ಪ್ರತೀ ದಿನ ಕಾವು, ಆರೋಪ, ಗಲಾಟೆ ಏರುತ್ತಲೇ ಹೋಯ್ತು. ಚುನಾವಣೆಗೆ ಕೆಲವೇ ದಿನ ಬಾಕಿ ಇದ್ದಾಗ ಕೆ. ರಾಮದಾಸ್, ಕೆ ಎಸ್ ವಿಮಲಾ, ಸಿ ಎಸ್ ದ್ವಾರಕಾನಾಥ್ ಅವರು ನಮ್ಮ ಸ್ಟುಡಿಯೋಗೆ ಬಂದರು. ಚಾಮುಂಡೇಶ್ವರಿ ಚುನಾವಣೆಯ ಮಂಥನ ಆರಂಭವಾಯಿತು.
ಸಿದ್ಧರಾಮಯ್ಯ ಏಕೆ ಗೆಲ್ಲಬೇಕು ಎನ್ನುವುದನ್ನು ರಾಮದಾಸ್ ಎಳೆಎಳೆಯಾಗಿ ಬಿಚ್ಚಿಡುತ್ತಾ ಹೋದರು. ಕೆ. ಎಸ್. ವಿಮಲಾ ಇವತ್ತಿನ ಹಣ ಮತ್ತು ತೋಳ್ಬಲದ ರಾಜಕಾರಣದಲ್ಲಿ ಸಿದ್ಧರಾಮಯ್ಯ ಗೆದ್ದು ಬರುವುದು ಹೇಗೆ ಪ್ರಜಾಪ್ರಭುತ್ವ ಹಾಗೂ ಜಾತ್ಯಾತೀತ ಶಕ್ತಿ ಉಳಿಯುವಿಕೆಗೆ ಅಗತ್ಯ ಎಂದು ಬಿಡಿಸಿಟ್ಟರು. ಚಾಮುಂಡೇಶ್ವರಿ ಮತದಾರ ತೀರಾ ತೀರಾ ಗೊಂದಲದಲ್ಲಿದ್ದ. ಮತದಾರನ ಮುಂದೆ ಕಾರಣಗಳು ಬಿಡಿಸಿಕೊಳ್ಳುತ್ತಾ ಹೋದವು. ಹಾಗಾಗಿ ಒಂದಿಷ್ಟು ಮತಗಳು ಹೊರಳಿಕೊಂಡವೇನೋ.
ಚುನಾವಣೆ ಫಲಿತಾಂಶ ಘೋಷಿಸುವ ದಿನವೂ ಅಷ್ಟೆ. ಚಾಮುಂಡೇಶ್ವರಿಯ ಮತದಾರ ನೇರಾ ನೇರಾ ನಾಯಕರೊಂದಿಗೆ ಚೆಲ್ಲಾಟಕ್ಕಿಳಿದುಬಿಟ್ಟಿದ್ದ. ಆ ಕಡೆ ಒಮ್ಮೆ ಈ ಕಡೆ ಒಮ್ಮೆ ಓಡಾಡುತ್ತಿದ್ದ. ಫಲಿತಾಂಶವನ್ನು ಹಿಡಿದು ಚಾನಲ್ ಒಳಕ್ಕೆ ಎಳೆದು ಮೊದಲು ಕೂರಿಸಿದ್ದು ನಾವೇ. ಈಟಿವಿಯ ಬ್ರೇಕಿಂಗ್ ನ್ಯೂಸ್ ಸಿದ್ಧರಾಮಯ್ಯನವರ ವಿಜಯ ಘೋಷಿಸಿತ್ತು. ಸಿದ್ಧರಾಮಯ್ಯ ಗೆದ್ದಿದ್ದರು. ಜೊತೆಗೆ ಪ್ರಜಾಪ್ರಭುತ್ವವನ್ನು ಗೆಲ್ಲಿಸಿದ್ದರು.

ಆ ಮೊದಲು ಕ್ಯೂಬಾದಲ್ಲಿ ಜರುಗುವ ಯುವ ಪತ್ರಕರ್ತರ ಸಮಾವೇಶದಲ್ಲಿ ನಾನು ದೇಶವನ್ನು ಪ್ರತಿನಿಧಿಸಬೇಕಾಗಿ ಬಂದಾಗ ಕೇಂದ್ರ ಸರ್ಕಾರ ಖರ್ಚು ವೆಚ್ಚ ಭರಿಸಲು ಒಂದು ಕೈ ನೆರವು ನೀಡಿದಾಗ ಇನ್ನೊಂದು ಕೈ ನೆರವನ್ನು ನೀಡಲು ರಾಜ್ಯ ಸರ್ಕಾರದ ಪರವಾಗಿ ಮುಂದೆ ಬಂದದ್ದು ಇದೇ ಸಿದ್ಧರಾಮಯ್ಯ. ಅವರು ಆಗ ಹಣಕಾಸು ಸಚಿವ. ಕ್ಯೂಬಾ, ಅದರ ಮಹತ್ವ, ಅದರ ಕಾವು, ಬೆಳಕು ಗೊತ್ತಿರುವ ಬೆರಳೆಣಿಕೆಯ ರಾಜಕಾರಣಿಗಳಲ್ಲಿ ಸಿದ್ಧರಾಮಯ್ಯ ಒಬ್ಬರು. ಕ್ಯೂಬಾಗೆ ನಾನು ಹೋಗುತ್ತಿದ್ದೇನೆ ಎಂದು ಗೊತ್ತಾಗಿ, ಗುಲ್ಬರ್ಗದಲ್ಲಿದ್ದ ನನಗೆ ಅವರು ಫೋನಾಯಿಸಿದರು. ಹಣಕಾಸು ಸಚಿವರೇ ಫೋನ್ ಮಾಡಿ ಕ್ಯೂಬಾ ಸಂಭ್ರಮ ಹಂಚಿಕೊಳ್ಳುವುದು ಆ ಸರ್ಕಾರಕ್ಕೆ ಇನ್ನೂ ತುಡಿತವಿದೆ ಎಂಬುದರ ಸೂಚನೆ.

(ಈ ಚಿತ್ರದಲ್ಲಿ ಮಗಳು ಸಮತಾ ಹಾಗೂ ರಾಮದಾಸರ ಪತ್ನಿ ಲೇಖಕಿ ನಿರ್ಮಲಾ)
ಸಿದ್ಧರಾಮಯ್ಯ ಕ್ಯೂಬಾ ಬಗ್ಗೆ ಹಾಗೆ ಸಂಭ್ರಮ ವ್ಯಕ್ತಪಡಿಸಿದಾಗ ಇವರು ಮಠ, ಜಾತಿ, ಗಡಿ ಮೀರಿದ ಒಂದು ನೋಟ ಇಟ್ಟುಕೊಂಡಿದ್ದಾರೆ ಎನ್ನುವುದು ಸ್ಪಷ್ಟವಾಗಿತ್ತು. ಅವರು ಮಂಡಿಸಿದ ಬಜೆಟ್ ಗಳೂ ಸರ್ಕಾರದ ಬಗ್ಗೆಯೂ, ಹಾಗೆಯೇ ಇವರ ಬಗ್ಗೆಯೂ ತಿಳಿಸುವ ದಿಕ್ಸೂಚಿಯಾಗಿತ್ತು. ಸಿದ್ಧರಾಮಯ್ಯನವರ ಬಜೆಟ್ ಎನ್ನುವುದು ಅರ್ಥಶಾಸ್ತ್ರಜ್ಞನ ಲ್ಯಾಬೋರೇಟರಿಯಲ್ಲಿ ತಯಾರಾಗುತ್ತಿದ್ದ ಉತ್ಪನ್ನವಲ್ಲ., ಅದು ಒಬ್ಬ ರೈತನ, ಒಬ್ಬ ಹತಾಶ ಮಧ್ಯಮವರ್ಗದ, ವಿದ್ಯಾಭ್ಯಾಸದ ಬಗ್ಗೆ ಕನಸುವ ಸಾಮಾನ್ಯನ ಕನಸುಗಳಾಗಿರುತ್ತಿದ್ದವು.
ಸಿದ್ಧರಾಮಯ್ಯನವರೆಂಬ ಸಿದ್ಧರಾಮಯ್ಯನವರಿಗೆ ಈ ಕ್ಯೂಬಾ, ಈ ಬಜೆಟ್, ಈ ಹೋರಾಟ, ಈ ಅಹಿಂದ ಈ ಎಲ್ಲವೂ ಎಲ್ಲಿಂದ ಬಂದವು ಎಂದು ಸೋಜಿಗಗೊಳ್ಳುವ ಪ್ರಮೇಯವೇ ನನಗೆ ಬರಲಿಲ್ಲ. ಏಕೆಂದರೆ ಅವರು ರಾಮದಾಸರಂಥ ಬೆಂಕಿಯುಂಡೆಗಳ ಸಂಪರ್ಕದಲ್ಲಿದ್ದರು.
ಹೇಳಿ ಹಾಗಾದರೆ, ನಾನು ಸಿದ್ಧರಾಮಯ್ಯನವರನ್ನು ಭೇಟಿಯಾಗಲು ಇನ್ಯಾವ ತಾಣವಿತ್ತು? ವಿಧಾನಸೌಧದಲ್ಲಿ ಕೈ ಕುಲುಕುವ ಜನರಿಗೆ ಸಿಗುವ ಸಂಭ್ರಮಕ್ಕಿಂತ ರಾಮದಾಸರ ಮನೆಯಲ್ಲಿ ಅವರ ಕೈಕುಲುಕಿದ್ದಕ್ಕೆ ಪೂರ್ಣಾರ್ಥವಿದೆ.
ಆ ಹೋರಾಟಗಾರರ ಗೆಳೆಯ, ಸದಾ ಕುದಿಯುವ ಸಿಟ್ಟನ್ನು ಜೀವಂತವಾಗಿರಿಸಿಕೊಂಡಿರುವ ಸಿದ್ಧರಾಮಯ್ಯ ಹೊಸ ಕನಸುಗಳಿಗೆ ನಾಂದಿ ಪದವಾಗಲಿ.







DEAR MOHAN SIDDARAMAIH ORATARU ,ORATARADU ASHRAYA SAMSKRUTI.SIDDARAMAIH EE RAJYA KANDA ANTYANTA SHRESTA HANAKASU MANTRI. NERA NUDIYA SIDDU BAGEGINA LEKHANA PRASTUTAVAGIDE.HALLI GAMARANADA NANAGANTU SIDDU C M ADADDU KUSHI NEEDIDE . THAN Q .
ಸರ್ ಸಿಧ್ಧರಾಮಯ್ಯನವರು ಕರ್ನಾಟಕ ರಾಜಕಾರಣಿಗಳಲ್ಲಿ ಉಳಿದಿರುವ ಏಕೈಕ ಧೀಮಂತ ಮೇರು ವೈಕ್ತಿತ್ವದ ಜಾತ್ಯತೀತ ರಾಜಕಾರಣಿ. ಅವರಿಗೆ ಕರ್ನಾಟಕ ಜನತೆ ೫ ವರ್ಷ ಯಶಸ್ವಿ ಆಡಳಿತಕ್ಕೆ ಸಹಕರಿಸಬೇಕಾಗಿದೆ ಅವರಿಂದ ರಾಜ್ಯದ ಸರ್ವಾಂಗೀಣ ಅಬಿವೃದ್ದೀಯ ಅಗತ್ಯತೆ ಇದೆ. ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಕೇಂದ್ರ ಸರ್ಕಾರ ಕೂಡ ಅದನ್ನರಿತು ಸರಿಯಾದ ನಿರ್ಧಾರ ತೇಗಿದುಕೊಂಡಿರುವ ಕುರಿತು ಹೆಮ್ಮೆಯಾಗುತ್ತಿದೆ..ಶ್ರೀ ಸಿಧ್ಧರಾಮಯ್ಯನವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು..ನೀವು ಅವರನ್ನ ಒಬ್ಬ ಸ್ನೇಹಿತರ ಮನೆಯಲ್ಲಿ ಭೇಟಿಯಾಗಿರುವುದೇ ಅವರ ಸರಳ ಜೀವನಶೈಲಿಗೆ ಜೀವಂತ ಸಾಕ್ಷಿ. ನಿಮ್ಮ`ಅವರು ಅಲ್ಲಿ ಸಿಕ್ಕರು` ಸನ್ನಿವೇಶ ತುಂಬಾ ಚೆನ್ನಾಗಿದೆ ಧನ್ಯವಾದಗಳು..
liked it..:))
ಕಾಂಗ್ರೆಸ್ ಹೈಕಮ್ಯಾಂಡ್ ನ ಬದಲಾದ ನಿಲುವು ಮತ್ತು ರಾಹುಲ್ ಗಾಂಧಿಯವರ ದೂರದೃಷ್ಟಿಯಿಂದ, ಇದೇ ಮೊದಲ ಬಾರಿಗೆ ಕಾಂಗ್ರೆಸ್ಸಿನಲ್ಲಿ ಶಾಸಕರು ಗೌಪ್ಯ ಮತದಾನ ಮಾಡುವ ಮೂಲಕ ತಮ್ಮ ನಾಯಕನನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಲಕೋಟೆ ಸಂಸ್ಕೃತಿಯನ್ನು ಕೈಬಿಟ್ಟಿದ್ದಕ್ಕಾಗಿ ಹೈಕಮ್ಯಾಂಡಿಗೆ ಮೊದಲು ಅಭಿನಂದನೆಗಳನ್ನು ಸಲ್ಲಿಸಬೇಕಾಗಿದೆ. ಪ್ರಜಾಪ್ರಭುತ್ವದ ನೆಲೆಗಳು ಗಟ್ಟಿಗೊಳ್ಳಲು ಇಂತಹ ಪ್ರಕ್ರಿಯೆಗಳು ಅತಿ ಮುಖ್ಯ. ಆ ಮೂಲಕ ಬಹಳ ವರ್ಷಗಳ ನಂತರ ಕರ್ನಾಟಕಕ್ಕೆ ಒಬ್ಬ ಖಡಕ್ ಮುಖ್ಯಮಂತ್ರಿ ದೊರೆತಿದ್ದಾರೆ. ಸಿದ್ಧರಾಮಯ್ಯನವರು ವೈಚಾರಿಕತೆಯನ್ನು ಮೈಗೂಡಿಸಿಕೊಂಡಿರುವವರು. ಮೂಢನಂಬಿಕೆಗಳಿಗೆ ಸೊಪ್ಪು ಹಾಕದವರು. ಕರ್ನಾಟಕದ ಜನತೆ ಇವರಿಂದ ಸ್ವಚ್ಛ ಹಾಗೂ ಸುಭದ್ರ ಆಡಳಿತವನ್ನು ನಿರೀಕ್ಷಿಸುತ್ತಿದೆ. ‘ನಾನು ಮುಖ್ಯಮಂತ್ರಿಯಾದರೆ ಒಂದೇ ತಿಂಗಳಿನಲ್ಲಿ ಚಾಮರಾಜನಗರಕ್ಕೆ ಭೇಟಿ ನೀಡುತ್ತೇನೆ’ ಎಂದು ಒಮ್ಮೆ, ಇನ್ನೊಮ್ಮೆ, ‘ನಾನು ಮುಖ್ಯಮಂತ್ರಿಯಾದರೆ ನನ್ನ ಮೊದಲ ಭೇಟಿ ಚಾಮರಾಜನಗರಕ್ಕೆ’ ಎಂದು ಹೇಳಿದ್ದರು. ಈಗ ಅದಕ್ಕೆ ಸಕಾಲ ಒದಗಿ ಬಂದಿದೆ. ಸರ್ಕಾರ ಸುಭದ್ರವಾಗಿದೆ. ಹೈಕಮ್ಯಾಂಡ್ ಅವರ ಬೆನ್ನಿಗಿದೆ. ಬಂಡಾಯದ ಮಾತೇ ಇಲ್ಲ. ಆದ್ದರಿಂದ ಅವರು ತಾವು ಕೊಟ್ಟ ಮಾತಿನಂತೆ ಚಾಮರಾಜನಗರಕ್ಕೆ ಭೇಟಿ ನೀಡಿ, ಜಿಲ್ಲೆಗೆ ಅಂಟಿರುವ ಕಳಂಕವನ್ನು ತೊಳೆದು ಹಾಕಬೇಕು. ಮೂಢನಂಬಿಕೆಯನ್ನು ಸುಳ್ಳಾಗಿಸಬೇಕು. ಆ ಮೂಲಕ ಹೊಸ ಮನ್ವಂತರಕ್ಕೆ ನಾಂದಿ ಹಾಡಬೇಕು ಎಂಬುದು ನಮ್ಮೆಲ್ಲರ ಆಶಯ.
ಪ್ರಿಯ ಮೋಹನ್ ಕನಿಷ್ಟ ನಾವು ಪ್ರೀತಿಯಿಂದ ಜಗಳವಾಡಬಹುದಾದ ಒಬ್ಬಅಪ್ಪಟ ಮನುಷ್ಯ ಈ ರಾಜ್ಯದ ಮುಖ್ಯಮಂತ್ರಿಯಾಗುತ್ತಿರುವುದು ನೆಮ್ಮದಿಯ ವಿಷಯ.
ಧನ್ಯವಾದಗಳು ಸಾರ್, ತುಂಬಾ ಪ್ರಸ್ತುತವಾದ ಲೇಖನ ಸಾರ್,
ಅಂದು ಈ ಟಿ.ವಿ.ಯಲ್ಲಿ ನಡೆದ ಹಣಾಹಣಿಯನ್ನು ಇಂದಿನ ನ್ಯೂಸ್ ಚಾನೆಲ್ ಗಳಲ್ಲಿ ಕಾಣೋಕೆ ಸಾಧ್ಬನೇ ಇಲ್ಲಾ ಕಾರಣ ಗೊತ್ತೆ ಇದೆ ನಮ್ಮ ಚಾರ್ವಾಕ ರಾಮ್ ದಾಸ್ ರಂತ ಚಿಂತಕರು ಇಂದು ಯಾವುದೇ ಚಾನಲ್ಲಿನ ಚರ್ಚೆಗಳಲ್ಲಿ ಭಾಗವಹಿಸದೇ ಇರೋದು!!!!!!!!
Good article. Prof. Ramdas campaigned in Chamundeswari Constituency in 2006 for Siddaramaiah. He and Andolana Dinapathrike played a huge role in his win. Siddaramaiah really deserve it and hope he will change the political culture we had witnessed in the last 7 years in Karnataka.
ಪ್ರಿಯ ಮೋಹನ್,
ಸಿದ್ದರಾಮಯ್ಯನವರೊಂದಿಗಿನ ನಿಮ್ಮ ಭೇಟಿಯ ಪ್ರಸಂಗ ಸಮಯೋಚಿತವಾದುದು. ನಮ್ಮ ನಡುವಿರುವ ಕೆಲವು ರಾಜಕಾರಣಿಗಳ ಪೈಕಿ ಭಿನ್ನವಾದ ಸಿದ್ದರಾಮಯ್ಯನವರಿಗೆ ಕೆಲವು ಉಪಯುಕ್ತವಾದ ಮೌಲ್ಯಗಳು ಇವೆಯಲ್ಲಾ ಎಂಬುದೇ ಸಮಾಧಾನದ ವಿಚಾರ.
ಒಂದು ಭಿನ್ನ ಧ್ವನಿಯನ್ನು ಇಲ್ಲಿ ದಾಖಲಿಸುವ ಅಗತ್ಯವಿದೆ. ಇದು ಸಿದ್ದರಾಮಯ್ಯನವರ ಹಿತದ್ರುಷ್ಟಿಯಿಂದಲೂ ಅಗತ್ಯವಾದುದು. ಇವರು ಕಾಂಗ್ರೆಸ್ ಪಕ್ಷದ ಸರ್ಕಾರದ ಮುಖ್ಯಮಂತ್ರಿ ಎಂಬುದನ್ನು ಗಮನದಲ್ಲಿಡಬೇಕು. ಇಂದು ಕಾಂಗ್ರೆಸ್ ಅನುಸರಿಸುತ್ತಿರುವ ಉದಾರೀಕರಣ, ಖಾಸಗೀಕರಣ, ಜಾಗತೀಕರಣ ನೀತಿಗಳು ಯಾರ ಹಿತವನ್ನು ಕಾಯುತ್ತಿದೆ ಎಂಬುದು ಗುಟ್ಟಾಗಿರುವ ಸಂಗತಿಯಲ್ಲ. ಇದೇ ನೀತಿಗಳ ಮುಂದುವರಿಕೆಯಾಗಿ ಸಿದ್ದರಾಮಯ್ಯ ಇರುತ್ತಾರೋ ಅಥವಾ ಭಿನ್ನ ನೀತಿಗಳನ್ನು ಅನುಸರಿಸುವವರಾಗುತ್ತಾರೋ ಎಂಬುದಕ್ಕೆ ತುಂಬಾ ಯೋಚಿಸುವ ಅಗತ್ಯವಂತೂ ನನಗೆ ಕಾಣುತ್ತಿಲ್ಲ. ಆದರೂ ರಾಜ್ಯದ ಪ್ರಜ್ಙಾವಂತರ ಸಾಕ್ಷಿಪ್ರಜ್ಙೆ ಉತ್ತಮವಾದುದನ್ನು ನಿರೀಕ್ಷಿಸುತ್ತಿರುವಾಗ ಹಾಗೇ ಆಗಲಿ ಎಂದು ನಾನೂ ಆಶಿಸುತ್ತೇನೆ. ಆದರೆ ನನ್ನ ಆಶಾಭಾವನೆ ಗಟ್ಟಿಯಾದುದಲ್ಲ. ಸಮಾಜವಾದಿ ಚಿಂತನೆಗಳ ಬೆಳಕಿನಲ್ಲಿ (ಹಿಂದಿನ?)ಸಿದ್ದರಾಮಯ್ಯ – ಈಗಿನ ಕಾಂಗ್ರೆಸನ ಎಲ್.ಪಿ.ಜಿ. ನೀತಿಗಳ ಜಾರಿ ಮಾಡುವ ಸಿದ್ದರಾಮಯ್ಯ – ಇವೆರೆಡರ ಹೊಯ್ದಾಟಗಳ ನಡುವೆ ನಾವು-ನೀವು ಯಾವುದಕ್ಕೆ ಸಾಕ್ಷಿಗಳಾಗುತ್ತೇವೋ ಗೊತ್ತಿಲ್ಲ. ಆದರೂ ಹಿಂದಿನ ಕೋಮುವಾದಿ ಸರ್ಕಾರಕ್ಕಿಂತ ಭಿನ್ನವಾದುದನ್ನೇ ನಿರೀಕ್ಷಿಸೋಣ.
ಈಗೊಂದಿಷ್ಟು ವರ್ಷಗಳ ಕೆಳಗೆ ಅವರು ಇರುವ ಪಕ್ಷದಿಂದ ಆಚೆ ಹಾಕಲ್ಪಟ್ಟು ಒಬ್ಬಂಟಿಯಾಗಿದ್ದಾಗ ನಾವು ಹೈ ವೇಯ ಯಾವುದೋ ಹೋಟೆಲಿಗೆ ಹೋಗಿದ್ದಾಗ ಸಿದ್ಧರಾಮಯ್ಯನವರು ಸಿಕ್ಕಿದ್ದರು. ಅವತ್ತು ಅವರು ಅಕ್ಷರಶಃ ಏಕಾಂಗಿ. ಹೋಟೆಲ್ಲಿನ ಆವರಣದಲ್ಲಿ ಒಂಟಿಯಾಗಿ ತಮ್ಮ ಪಾಡಿಗೆ ತಾವು ಓಡಾಡುತ್ತಿದ್ದ ಅವರು ಇವತ್ತು ನಮ್ಮ ಮುಖ್ಯಮಂತ್ರಿ. ಅದೇ ಸರಳತೆ ಉಳಿಯಲಿ. ಇನ್ನೈದು ವರ್ಷ ನಾವು ಖುಷಿಯಿಂದ ಬದುಕುವಂತಾಗಲಿ … ಆಮೆನ್ !
ಹಿಂದುಳಿದ ನಾಯಕರಾಗಿ ಮಾತ್ರ ಉಳಿಯದೆ ಇಡೀ ಸಮಾಜ ನಾಯಕರಾಗಿ ಬಿಂಬಿತವಾಗಿರುವ ಸಿದ್ದರಾಮಯ್ಯ ಮೊದಲಿನಿಂದಲೂ ರೈತಪರ ಚಳವಳಿ, ಸಾಮಾಸಿಕ ಚಳವಳಿಗಳಲ್ಲಿ ತೊಡಗಿಸಿಕೊಂಡವರು. ಪ್ರೊ.ನಂಜುಂಡಸ್ವಾಮಿ ಅವರ ಸಂಪರ್ಕ ಸಿಗದೆ ಹೋಗಿದ್ದರೇ ತಾವು ರಾಜಕೀಯಕ್ಕೆ ಬರುತ್ತಿರಲಿಲ್ಲವೇನೋ ಎನ್ನುವ ಸಿದ್ದು ಅವರ ಮಾತಿನ ಹಾಗೆಯೇ ಸರಳ ಸಜ್ಜನ ರಾಜಕಾರಣಿಯೊಬ್ಬರು ರಾಜ್ಯದಲ್ಲಿ ಬಹಳಷ್ಟು ವರ್ಷಗಳ ನಂತರ ಮುಖ್ಯಮಂತ್ರಿ ಹಾಟ್ ಸೀಟಿನಲ್ಲಿ ಕೂತಿದ್ದಾರೆ. ಅವರ ಬಗೆಗಿನ ಸಿಂಹಾವಲೋಕನದ ಬರವಣಿಗೆ ತುಂಬಾ ಚೆನ್ನಾಗಿದೆ. ಅದೂ ಗುರುಗಳಾದ ರಾಮದಾಸ್ ಹಾಗೂ ಸಿದ್ದರಾಮಯ್ಯನವರ ಒಡನಾಟದ ಬಗ್ಗೆ ವಿವರ ನೀಡಿದ ಮೋಹನ್ ಸರ್ ಗೆ ಧನ್ಯವಾದಗಳು…
-ರಮೇಶ್ ಹಿರೇಜಂಬೂರು
ಜಿ.ಎನ್.ಮೋಹನ್ ಸರ್! ಸಿದ್ಧರಾಮಯ್ಯನವರ ವ್ಯಕ್ತಿಚಿತ್ರಣಕ್ಕೆ ಆತ್ಮೀಯತೆಯ ಸ್ಪರ್ಶವಿದೆ. ಈಗ ನಮಗೆ ಅವರಂತಹ ರಾಜಕಾರಣಿಗಳೇ ನಾಯಕರಾಗಿ ಬೇಕಾಗಿದ್ದಾರೆ. ನಿಮ್ಮ ಶೈಲಿ ಎಂದಿನಂತೆಯೇ ಕಾವ್ಯಗಂಧಿಯಾಗಿದೆ. ನಮ್ಮೆಲ್ಲರಿಗೆ ನೂತನ ಮುಖ್ಯಮಂತ್ರಿಗಳಿಂದ ತುಂಬಾ ನಿರೀಕ್ಷಣೆಗಳಿವೆ. ತುಂಬಾ ಉಪಯುಕ್ತವಾದ ಲೇಖನ. ಧನ್ಯವಾದಗಳು ಸರ್!ಉದಯಕುಮಾರ ಹಬ್ಬು, ಕಿನ್ನಿಗೋಳಿ
ಈ ಎಲ್ಲ ಹೊಗಳಿಕೆಗಳ ಮಧ್ಯೆ, ದೇವರನ್ನು ನಂಬದ ಸಿದ್ದರಾಮಯ್ಯ, ಸೊಶಿಯಲಿಸ್ಟ್ ಸಿದ್ದರಾಮಯ್ಯ ಕೈಯಲ್ಲಿ ನಿಂಬೆ ಹಣ್ಣು ಹಿಡಿದು ಪತ್ರಕರ್ತರ ಮುಂದೆ ಬಂದಿದ್ದು, ಅಮಾವಾಸ್ಯೆ ಎಂದು ದೆಹಲಿ ಪ್ರವಾಸ ರದ್ದು ಮಾಡಿದ್ದನ್ನೂ ನೆನಪಿಟ್ಟುಕೊಳ್ಳೋಣ.