ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೋಗಿ ಬರುತ್ತೀಯಾ 'ಗಾಂಧಿ ಬಜಾರ್'

 
g p basavaraju

ಜಿ.ಪಿ.ಬಸವರಾಜು

ಕನ್ನಡದಲ್ಲಿ ಹಾಸ್ಯ, ವಿಡಂಬನೆ, ವ್ಯಂಗ್ಯ ಮೊದಲಾದ ಪ್ರಕಾರಗಳಿಗೆ ಘನತೆಯನ್ನು ತಂದುಕೊಟ್ಟ ‘ಕೊರವಂಜಿ’ಯ ಕೊನೆಯ ಸಂಚಿಕೆಯಲ್ಲಿ, ಕೊರವಂಜಿ ಹೊರಟು ನಿಂತಿದ್ದಾಳೆ. ‘ಹೋಗಿಬರುತ್ತೇನೆ’ ಎನ್ನುತ್ತಾಳೆ ಕನ್ನಡಿತಿಗೆ. ‘ಹೋಗುತ್ತೀಯಾ, ನೀನು ಇದ್ದದ್ದೇ ತಿಳಿಯಲಿಲ್ಲವಲ್ಲಮ್ಮಾ’ ಎನ್ನುತ್ತಾಳೆ ಕನ್ನಡಿತಿ. ಕಳೆದ 25 ವರ್ಷಗಳಿಂದ ಕನ್ನಡಿಗರ ಜೊತೆ ಒಡನಾಡಿದ ‘ಗಾಂಧೀಬಜಾರ್’ ಪತ್ರಿಕೆ ಇದೀಗ ‘ಹೋಗಿ ಬರುತ್ತೇನೆ’ ಎನ್ನುತ್ತಿದೆ. ಕೊರವಂಜಿಗೆ ಹೇಳಿದ ಮಾತೇ ಈಗಲೂ ಧ್ವನಿಸುತ್ತಿದೆ. ಹಲವರಿಗೆ ನೋವು; ಕೆಲವರಿಗೆ ಸೋಜಿಗ! ಮತ್ತೆ ಹಲವರಿಗೆ, ‘ಏನಿದು ಗಾಂಧೀ ಬಜಾರ್?’ ಎನ್ನುವ ಪ್ರಶ್ನೆ. ಬೆಂಗಳೂರಿನ ಬಸವನಗುಡಿಯನ್ನು ಕಂಡವರು ಹೇಳುತ್ತಾರೆ: ಇದೆಯಲ್ಲಾ ಗಾಂಧೀ ಬಜಾರ್, ಅದು ಹೋಗುವುದಾದರೂ ಎಲ್ಲಿಗೆ?
gandhi bazar mag ba ki na‘ಗಾಂಧೀಬಜಾರ್’ ಹೆಸರು ಕೊಟ್ಟವರು ಖ್ಯಾತ ಪತ್ರಕರ್ತ ವೈಎನ್ಕೆ ಎಂದು ಕೇಳಿದ್ದೇನೆ. ಒಂದೊಂದು ಗಲ್ಲಿ, ಒಂದೊಂದು ಬಜಾರದಿಂದ ಪತ್ರಿಕೆ ಹೊರಡಬೇಕು. ಆ ಸೀಮಿತ ಕ್ಷೇತ್ರದಲ್ಲಿಯೇ ಅದು ಕೆಲಸಮಾಡಬೇಕು, ಹೆಸರು ಮಾಡಬೇಕು ಎಂಬುದು ವೈಎನ್ಕೆ ಅವರ ಆಶಯವಾಗಿತ್ತು. ಅದಕ್ಕೇ ಗಾಂಧೀಬಜಾರ್ ಎನ್ನುವ ಹೆಸರನ್ನು ಅವರು ಕೊಟ್ಟರು. ವೈಎನ್ಕೆ ಅವರ ಪ್ರಿಯ ಮಿತ್ರರಾಗಿದ್ದ ಬಾಕಿನ (ಬಾಲಕೃಷ್ಣ ಕಿ.ನ.) ನಗುನಗುತ್ತಲೇ ಆ ಹೆಸರನ್ನು ಒಪ್ಪಿಕೊಂಡು ಪತ್ರಿಕೆಯನ್ನು ಆರಂಭಿಸಿದರು. ಬಾಕಿನ ಅವರ ಪ್ರಸಿದ್ಧ ‘ಲಿಪಿ ಮುದ್ರಣ’ ಇದ್ದದ್ದು ಗಾಂಧೀ ಬಜಾರ್ನಲ್ಲಿಯೇ. ಗಾಂಧೀಬಜಾರ್ ಸಂಜೆ ಪತ್ರಿಕೆಯಾಗಬೇಕು, ಸಂಜೆಯಾಗುತ್ತಿದ್ದಂತೆಯೇ ಅಲ್ಲಿಗೆ ಬರುವ ಎಲ್ಲರ ಕೈಗೆ ಅದು ಸಿಕ್ಕಬೇಕು ಎಂಬುದು ವೈಎನ್ಕೆ ಅವರ ಕನಸಾಗಿತ್ತು ಎಂಬುದನ್ನೂ ಬಾಕಿನ ಹೇಳಿದಂತೆ ನೆನಪು. ಗಾಂಧೀ ಬಜಾರ್ ಸಂಜೆ ಪತ್ರಿಕೆಯಾಗಲಿಲ್ಲ. ತಿಂಗಳ ಪತ್ರಿಕೆಯಾಯಿತು. ಸುದ್ದಿ ಪತ್ರಿಕೆಯಾಗಲಿಲ್ಲ. ಸಂಸ್ಕೃತಿಯ ಪ್ರಸಾರಕ್ಕೆ ಮೀಸಲಾಯಿತು. ಈ ಪತ್ರಿಕೆಗೆ ಚಂದಾ ಎಂಬುದಿತ್ತು. ಅದು ದೊಡ್ಡ ಮೊತ್ತವಲ್ಲ. ಆದರೆ ಚಂದಾ ಕೊಟ್ಟವರೆಷ್ಟೊ, ಕೊಡದವರೆಷ್ಟೊ. ಪತ್ರಿಕೆಯಂತೂ ಕಾಲಕಾಲಕ್ಕೆ ಪ್ರಕಟವಾಗುತ್ತಲೇ ಹೋಯಿತು. ಆಸಕ್ತರ ಬಾಗಿಲನ್ನು ಬಡಿಯಿತು.
‘ಬಾಕಿನ’ ಎನ್ನುವುದನ್ನು ವೈಎನ್ಕೆ ಅಂಥವರು ಪನ್ ಮಾಡುತ್ತಿದ್ದರು. ‘ಬಾಕಿ ಇಲ್ಲ’ ಎಂದು ನಗುತ್ತಿದ್ದರು. ಬಾಲಕೃಷ್ಣ ಮಾತ್ರವಲ್ಲ, ಗಾಂಧೀ ಬಜಾರ್ ಕೂಡಾ ಯಾರ ಬಾಕಿಯನ್ನೂ ಉಳಿಸಿಕೊಂಡಿಲ್ಲ. ಚಂದಾಕೊಡದೆ ಬಾಕಿ ಉಳಿಸಿಕೊಂಡವರು ಸಾಕಷ್ಟು ಜನ ಇರಬಹುದು. ಬಾಕಿನ ಚಂದಾ ಹಣಕ್ಕಾಗಿ ಯಾರನ್ನೂ ಕಾಡಿದಂತೆ ಕಾಣುವುದಿಲ್ಲ. ಎಲ್ಲರಿಗೂ ಪ್ರೀತಿಯಿಂದಲೇ ಈ ಪತ್ರಿಕೆಯನ್ನು ಪೋಸ್ಟ್ ಮಾಡುತ್ತಿದ್ದರು. ‘ಸಾಧ್ಯವಾದರೆ ಚಂದಾ ಕಳುಹಿಸಿ’ ಎಂಬ ಮನವಿಯನ್ನು ಬಿಟ್ಟರೆ, ಅವರೆಂದು ಚಂದಾಕೊಡಿ ಎಂದು ಕೇಳಿದವರಲ್ಲ. ಅದೊಂದು ವಿವರಿಸಲಾಗದ ಬಂಧ; ಸಂಬಂಧ.
ಬಾಕಿನ ಕಾಸರಗೋಡು ಕಡೆಯಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದವರು. ಗಾಂಧೀ ಬಜಾರ್ನ ಒಂದು ಮೂಲೆಯಲ್ಲಿ ಸಣ್ಣ ಮುದ್ರಣಾಲಯವನ್ನು ತೆರೆದರು, ನಾಲ್ಕೈದು ದಶಕಗಳ ಹಿಂದೆ. ಆಗ ನವ್ಯ ಏರುಸ್ಥಿತಿಯಲ್ಲಿದ್ದ ಕಾಲ. ನವ್ಯದ ಮುಂಚೂಣಿ ಬರಹಗಾರರ ಬೆಚ್ಚನೆಯ ಗೆಳೆತನದಲ್ಲೇ ಬಾಕಿನ ಅರಳಿದರು. ತೀವ್ರ ಆಸಕ್ತಿ, ಶಿಸ್ತು, ನಿರಂತರ ದುಡಿಮೆ; ಜೊತೆಗೆ ಸಾಹಿತ್ಯ ಮತ್ತು ಸಾಹಿತಿಗಳ ಬಗ್ಗೆ ತೀವ್ರ ಕುತೂಹಲ ಮತ್ತು ಪ್ರೀತಿ. ಬಾಕಿನ ಅವರ ಸಂವೇದನೆಯೂ ಹರಿತವಾಗಿತ್ತು. ಕಲಾತ್ಮಕ ಮುದ್ರಣದಲ್ಲಿ ಹಲವಾರು ಪ್ರಯೋಗಗಳನ್ನು ಮಾಡುತ್ತಿದ್ದ ಬಾಕಿನ ಸಹಜವಾಗಿಯೇ ಬರಹಗಾರರ ಅಂದದ ಮುದ್ರಣದ ಕನಸನ್ನು ಉದ್ದೀಪನಗೊಳಿಸಿದರು.
ಮಾಹಿತಿ ತಂತ್ರಜ್ಞಾನದಲ್ಲಿ ಈಗಿನಷ್ಟು ಬೆಳವಣಿಗೆ ಆಗಿರದಿದ್ದ ಕಾಲ ಅದು. ಇರುವ ತಾಂತ್ರಿಕ ಅರಿವನ್ನೇ ಬಳಸಿಕೊಂಡು ಪುಸ್ತಕಗಳನ್ನು ಚಲುವಾಗಿ ತುರುವುದು ಸುಲಭದ ಕೆಲಸವಾಗಿರಲಿಲ್ಲ. ಒಳ್ಳೆಯ ಕಾಗದ, ಅಚ್ಚುಕಟ್ಟಾದ ಮುದ್ರಣ, ಆಕರ್ಷಕ ಮುಖಪುಟ, ಹೊಸ ಬಗೆಯ ವಿನ್ಯಾಸ, ತಾಳಿಕೆಯ ಬೈಂಡಿಂಗ್ ಹೀಗೆ ಪುಸ್ತಕದ ಸುತ್ತ ಇರುವ ಹಲವಾರು ಅಂಶಗಳಿಗೆ ಗಮನಕೊಡುವುದು ಎಂದರೆ ಮುದ್ರಣಾಲಯದ ಮಾಲಿಕ ಹಿಂದುಮುಂದು ನೋಡುವ, ಲಾಭವನ್ನು ಕಳೆದುಕೊಳ್ಳುವ ವ್ಯವಹಾರವಾಗಿ ಕಾಣುತ್ತಿದ್ದ ದಿನಗಳಲ್ಲಿ ಬಾಕಿನ ಈ ಅಂಶಗಳನ್ನು ಕಡೆಗಣಿಸಿದೆ ಮುದ್ರಣ ಕಾರ್ಯದಲ್ಲಿ ತೊಡಗಿದರು. ಹಗಲು ರಾತ್ರಿಗಳೆನ್ನದೆ ದುಡಿದರು. ಇದರ ಪರಿಣಾಮವಾಗಿ ‘ಲಿಪಿ ಮುದ್ರಣ’ ಹೆಸರು ಮಾಡಿತು. ಇಲ್ಲಿ ಪುಸ್ತಕ ಮುದ್ರಣಗೊಳ್ಳುವುದು ಒಂದು ಪ್ರತಿಷ್ಠೆಯ ಸಂಗತಿಯೂ ಆಯಿತು.
ಅಲ್ಪ ಅವಧಿಯಲ್ಲಿಯೇ ಬಾಕಿನ ಹೆಸರಾದರು. ಹಲವು ಬರಹಗಾರರ ಆಪ್ತ ಮಿತ್ರರೂ ಆದರು. ಅಡಿಗರು, ನಾಡಿಗರು, ಲಂಕೇಶರು, ವೈಎನ್ಕೆ, ನಿಸಾರರು, ಕಿರಂ ಹೀಗೆ ಬೆಂಗಳೂರಿನ ನವ್ಯ ಲೇಖಕರ ಗುಂಪುಗಳು ಗಾಂಧೀ ಬಜಾರಿಗೆ ಎಡತಾಕತೊಡಗಿದವು. ‘ಲಿಪಿ ಮುದ್ರಣ’ದ ಸಣ್ಣ ಬಾಡಿಗೆಯ ಕಟ್ಟಡ ಹಲವು ಸಾಹಿತಿಗಳ ಸಂಜೆ ಕೂಟಕ್ಕೂ ಅವಕಾಶ ಒದಗಿಸಿಕೊಟ್ಟಿತು. ಹರಟೆ, ಮಾತು, ಸಿಗರೇಟು, ಬೈಟೂ ಕಾಫಿ, ಕರಡು ತಿದ್ದುವುದು, ಮುದ್ರಿಸುವುದು, ಮೊಳೆ ಜೋಡಿಸುವುದು ಎಲ್ಲವೂ ಈ ಸಣ್ಣ ಜಾಗದಲ್ಲಿಯೇ ಸಾಗಿದವು. ಗಾಂಧೀ ಬಜಾರ್ ಎಂದಕೂಡಲೇ ಬಾಕಿನ ಎನ್ನುವ ಹಂತಕ್ಕೂ ಸಾಹಿತಿಗಳಲ್ಲಿ ಬಾಕಿನ ಪ್ರಸಿದ್ಧರಾದರು. ನವ್ಯ ಸಾಹಿತಿಗಳ ಜೊತೆಯಲ್ಲಿ ಮಾತ್ರವಲ್ಲ, ಬಾಕಿನ ನವ್ಯ ಚಳವಳಿಯ ಜೊತೆಯಲ್ಲಿಯೂ ಹೆಜ್ಜೆ ಹಾಕಿದರು. ಅದು ಅವರ ಅನುಭವದ ಚಾಚುಗಳಿಗೆ ಇಂಬಾಯಿತು.
ಆರಂಭದ ಹಿಂದಿನ ಕಾರಣಗಳು ಏನೇ ಇರಲಿ, ಒಂದು ಪತ್ರಿಕೆ ಬೆಳೆದು ಆಸಕ್ತರ ನಡುವೆ ಜಾಗ ಪಡೆಯುವುದು ಬಹಳ ಮುಖ್ಯ. ಗಾಂಧೀ ಬಜಾರ್ ನಿಧಾನಕ್ಕೆ ಕರ್ನಾಟಕದ ಅನೇಕ ಊರುಗಳನ್ನು ತಲುಪಿತು. ಒಬ್ಬರೊ, ಇಬ್ಬರೊ, ಅಂತೂ ಆಸಕ್ತಿಯಿಂದ ಗಾಂಧೀ ಬಜಾರ್ ಪತ್ರಿಕೆಯನ್ನು ಓದುವವರು ಅಲ್ಲಲ್ಲಿ ಕಾಣಿಸಿದರು. ಗಾಂಧೀ ಬಜಾರಿಗೆ ಬರೆಯುವವರ ಸಂಖ್ಯೆಯೂ ಹೆಚ್ಚಿತು.
gandhi bazar mag issuesಸಾಂಸ್ಕೃತಿಕ ಪತ್ರಿಕೆಗಳು ಹುಟ್ಟುವಾಗ ಒಂದು ಖಚಿತವಾದ ಉದ್ದೇಶವನ್ನಿಟ್ಟುಕೊಂಡೇ ಹುಟ್ಟುತ್ತವೆ. ಆ ಉದ್ದೇಶ ಈಡೇರಿದ ನಂತರ ಪತ್ರಿಕೆಗಳು ಸಹಜವಾಗಿಯೇ ನಿಂತು ಹೋಗುತ್ತವೆ. ಬೇರೆಯ ಕಾರಣಗಳಿಗೂ ಪತ್ರಿಕೆಗಳು ನಿಂತು ಹೋಗಬಹುದು. ನವ್ಯ ಸಾಹಿತ್ಯ ಚಳವಳಿಯ ಭಾಗವಾಗಿ ಹುಟ್ಟಿಕೊಂಡ ‘ಸಾಕ್ಷಿ’, ಆ ಚಳವಳಿ ಒಂದು ನಿಲುಗಡೆಗೆ ಬಂದನಂತರ ತಾನೂ ನಿಂತುಹೋಯಿತು. ಅದೇ ಕಾಲದಲ್ಲಿ ಹುಟ್ಟಿಕೊಂಡ ‘ಸಂಕ್ರಮಣ’, ಮುಂದೆ ತನ್ನ ಚೌಕಟ್ಟನ್ನು ಬದಲಿಸಿಕೊಂಡು ಬಂಡಾಯ ಚಳವಳಿಯ ಭಾಗವಾಗಿಯೂ ಹೋಯಿತು. ಒಂದು ರೀತಿಯ ಮರುಹುಟ್ಟು ಇದು. ಇಂಥ ಉದಾಹರಣೆಗಳನ್ನು ಇನ್ನೂ ನೋಡುತ್ತಲೇ ಹೋಗಬಹುದು. ಅದೆಲ್ಲ ಸಹಜವಾದದ್ದೇ.
ಗಾಂಧೀ ಬಜಾರ್ ಪತ್ರಿಕೆಗೆ ಎಂಥ ಉದ್ದೇಶವಿತ್ತು? ಅದು ಯಾವ ಚಳವಳಿಯ ಭಾಗವಾಗಿತ್ತು? ಇಂಥ ಪ್ರಶ್ನೆಗಳಿಗೆ ಉತ್ತರ ಸುಲಭವಲ್ಲ. ಬಾಕಿನ ಎಲ್ಲ ಅಭಿರುಚಿಗಳಿಗೂ ಮನಸ್ಸನ್ನು ತೆರೆದವರಾಗಿದ್ದರು. ಎಲ್ಲ ಬಗೆಯ ಲೇಖಕರಿಗೂ ಬಾಗಿಲು ತೆರೆದಿದ್ದರು. ಹಿರಿಯರಿರಲಿ, ಕಿರಿಯರಿರಲಿ, ಹೆಸರು ಮಾಡಿದವರಿರಲಿ, ಮಾಡದವರಿರಲಿ ಎಲ್ಲರಿಗೂ ಮುಕ್ತ ವೇದಿಕೆಯಂತೆ ಗಾಂಧೀ ಬಜಾರ್ ಕೆಲಸ ಮಾಡಿತು. ಇಲ್ಲಿ ಯಾವ ಗುಂಪಿಗೂ ತನ್ನನ್ನು ಒಪ್ಪಿಸಿಕೊಳ್ಳದೆ ಎಲ್ಲ ಸಾಹಿತ್ಯ ಮತ್ತು ಸಂಸ್ಕೃತಿ ಆಸಕ್ತರನ್ನು ಸಮಾನ ಗೌರವದಿಂದ ಕಾಣುವ ಉದಾರತೆಯನ್ನು ಈ ಪತ್ರಿಕೆ ತೋರಿತು. ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯ ಪತ್ರಿಕೆಗಳು ತೀವ್ರವಾಗಿ ಬದಲಾದ ಹೊತ್ತಿನಲ್ಲಿ, ಪುರವಣಿಗಳಲ್ಲಿ ಉದ್ದ ಬರಹಗಳಿಗೆ ಅವಕಾಶವೇ ಇಲ್ಲದ ದಿನಗಳಲ್ಲಿ ಗಾಂಧೀ ಬಜಾರ್ ಹೆಚ್ಚಿನ ಲೇಖಕರಿಗೆ ಮೆಚ್ಚಿನ ಪತ್ರಿಕೆಯಾಗಿ ಕಾಣಿಸಿತು.
ಬಾಕಿನ ಬರೆಯುತ್ತಿದ್ದ ಅನುಭವ ಕಥನ ಗಾಂಧೀ ಬಜಾರ್ ಪತ್ರಿಕೆಯ ವಿದಾಯದೊಂದಿಗೆ ನಿಂತುಬಿಡಬಾರದು. ಅದು ಮುಂದುವರಿಯಬೇಕು.
ಕಾಸರಗೋಡಿನ ಕಡೆಯಿಂದ ಬೆಂಗಳೂರಿಗೆ ಬಂದ ಬಾಕಿನ, ಬೆಂಗಳೂರಿನಲ್ಲಿ ಸಾರ್ಥಕ ಬದುಕನ್ನು ರೂಪಿಸಿಕೊಂಡದ್ದರ ಕುರುಹಾಗಿ ‘ಲಿಪಿ ಮುದ್ರಣ’ ಮತ್ತು ‘ಗಾಂಧೀ ಬಜಾರ್’ ಬಹುಕಾಲ ಉಳಿಯುತ್ತವೆ. ಇವೆರಡೂ ಕನ್ನಡ ಸಾಹಿತ್ಯ ಚರಿತ್ರೆಯ ಭಾಗವೇ. ಕನ್ನಡವನ್ನು ಉಳಿಸುವುದು ಮತ್ತು ಬೆಳೆಸುವುದರ ಬಗ್ಗೆ ಹಲವರು ಮಾತನಾಡುವುದನ್ನು ನಾವು ಕೇಳುತ್ತಿದ್ದೇವೆ. ಬಾಕಿನ ಸದ್ದಿಲ್ಲದೆ ಆ ಕೆಲಸವನ್ನು ಮಾಡಿ ಈಗ ಬೆವರೊರೆಸಿಕೊಳ್ಳುತ್ತಿದ್ದಾರೆ. ಒಂದು ಲೋಟ ತಣ್ಣನೆಯ ನೀರನ್ನು ಮಾತ್ರ ಅವರು ಕನ್ನಡಿಗರಿಂದ ಬಯಸುತ್ತಿರಬಹುದು. ಅಷ್ಟನ್ನು ಕೊಡುವ ಉದಾರತೆಯನ್ನು ನಾವೀಗ ತೋರಿಸಬೇಕಾಗಿದೆ.

‍ಲೇಖಕರು Avadhi

13 January, 2016

2 Comments

  1. ನರೇಂದ್ರ ಪೈ

    ತಂಗಾಳಿ ಬೀಸಿದಂತೆ ಎರಡು ಮಾತು…ಚೆನ್ನಾಗಿತ್ತು ಸರ್.

  2. Anonymous

    BASAVARAJ PURANIK
    GPBasavaraju expressed my mind in his choicest words.
    thanks .

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading