ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೋಗಿ ಬನ್ನಿ ಮಾಸ್ತರ್…

ಅಲ್ಲೋ ಭಾಳ ದೊಡ್ಡ ಮನುಷ್ಯಾ ಅದೀ ನೋಡಪಾ, ನಾಂವ್ ಫೋನ್ ಮಾಡ್ಬೇಕೇನ್ ನಿಂಗ್…

ಹಂಗೇನಿಲ್ರಿ ಮಾಸ್ತರ..

ಹಂಗ್ ಅಂದ್ರ ಹೆಂಗೋ ಬಂಡು ಲೆಕ್ಕ ಆತ್ ನೋಡ್ ಇದು. ನಿನ್ಹತ್ರ ನನ್ನ ನಂಬರ್ ಅದನೋ ಇಲ್ಲೊ, ಮತ್ ಕಾಲ್ ಮಾಡ್ಬೇಕಲಾ.. ಇರ‍್ಲಿ ಹೆಂಗಿದ್ದೀ ನಾ ಭಾಳ ಛಲೊ ಅದೀನಿ…

ಹ ಹ ಹ..

ಯಾರನ್ನೂ ಯಾವುದೇ ಕಾರಣಕ್ಕೂ ಮರೆಯದ ಮತ್ತು ನೆನಪಾದರೆ ಪ್ರೀತಿ, ಸ್ನೇಹವನ್ನು ಮುಚ್ಚಿಡದ, ಖುಲ್ಲಂ ಖುಲಾ ಮನಬಿಚ್ಚಿ ಹೇಳುವ ತಾನಾಗಿಯೇ ಆದರೂ ಸರಿ ಸಂಬಂಧಗಳನ್ನು ಉಳಿಸಿಕೊಳ್ಳುವ ಗುಣ ಮನುಷ್ಯ ಜೀವಕ್ಕೆ ಬಹುಮುಖ್ಯವಾದುದು. ವಯಸ್ಸಿನಲ್ಲಿ ನನಗಿಂತ ತುಂಬಾ ದೊಡ್ಡವರು. ಇತ್ತೀಚೆಗಿನ ಅವರ ಬಲಪಂಥೀಯ ಒಲವುಗಳನ್ನು ನಾನು ಇಷ್ಟ ಪಡದೇ ಹೋದರೂ ನಾನೆಂದೂ ಆ ಕಾರಣಕ್ಕೆ ಅವರನ್ನು ದ್ವೇಷಿಸಿದವನಲ್ಲ. ಇದೆಲ್ಲದಕ್ಕೂ ಮೀರಿ ಅವರೊಬ್ಬ ಅಪ್ಪಟ ಕಲಾವಿದ. ಅದಕ್ಕೂ ಮಿಗಿಲಾಗಿ ಉತ್ಸಾಹದ ಬುಗ್ಗೆ. ಅಂದುಕೊಂಡದ್ದನ್ನು ಸಾಧಿಸಿಯೇ ತೀರುವ ಛಲವಾದಿ. ರವ್ಯಾ, ಧನ್ಯಾ, ಗರ‍್ಯಾ, ದಿಲ್ ಅವನೌನ್ ನಾನೂ ಒಮ್ಮೆ ಅಮೆರಿಕಕ್ಕ ಸುಂಯ್ ಅಂತ ಹೋಗೇ ಹೋಗ್ತಿನಿ ಅಂತ ಅವತ್ತು ಧಾರವಾಡದ ಓಪನ್ ಏರ್ ಥಿಯೇಟರ್‌ನಲ್ಲಿ ಟಿವಿ ಪ್ರೋಗ್ರಾಂ ಟೆಲಿಪ್ಲೇ ರಿಹರ್ಸಲ್ ಮುಗಿಸಿ ಹರಟುತ್ತ ಕೂತಾಗ ನಮ್ಮ ತಲೆ ಮೇಲಿಂದ ಹಾರಿ ಹೋದ ವಿಮಾನ ತೋರಿಸಿ ಹೇಳಿದ್ದನ್ನು ಕೆಲವೇ ತಿಂಗಳುಗಳಲ್ಲಿ ಸಾಧಿಸಿದರು. ಆನಂತರದಲ್ಲಿ ಅದೆಷ್ಟು ಬಾರಿ ಅಮೆರಿಕ ಕಂಡರೊ ಅಮೆರಿಕ್ಕೇ ಬೇಸರವಾಗಿರಬೇಕು!

ರವಿ ಕುಲಕರ್ಣಿ ಯಾವತ್ತೂ ಅವರ ಗಳಸ್ಯ ಕಂಠಸ್ಯ. ನಾವು ಧಾರವಾಡದಲ್ಲಿ ಗಿರೀಶ್ ಜೋಶಿ, ಧನಂಜಯ್ ಕುಲಕರ್ಣಿ, ಜಗದೀಶ್ ರೆಡ್ಡಿ, ಗಿರಡ್ಡಿ, ಬಂಡು, ಜಗುಚಂದ್ರ ಕೂಡಲ, ನಾಗಮ್ಮನವರ್ ಇತ್ಯಾದಿ ರಂಗಗೆಳೆಯರು ಆಗಾಗ ಸೇರುತ್ತಿದ್ದೆವು. ಈ ಮಹಾಶಯ ಬಂದರೆಂದರೆ ಏನಾದರೊಂದು ಟಿವಿ ಪ್ರೋಗ್ರಾಂ ಹೊತ್ತು ಬರುತ್ತಿದ್ದರು. ಟೆಲಿ ಪ್ಲೇ ‘ಹಳ್ಳಿ ಹೈದ’ ಮತ್ತು ‘ಒಂದಾದರೆ ಚಂದ’ ಎನ್ನುವ ಕಾರ್ಯಕ್ರಮ ಕೂಡ ಒಂದು. ಈ ಎರಡೂ ಪ್ಲೇ ಗಳಲ್ಲಿ ನನಗೆ ಮುಖ್ಯ ಪಾತ್ರ! ಒಮ್ಮೆ ಓಪನ್ ಏರ್ ಥಿಯೇಟರ್‌ನಲ್ಲಿ ಒಮ್ಮೆ ಉಜ್ವಲಾ ಕುಲಕರ್ಣಿ ಅವರ ಮನೆಯಲ್ಲಿ ರಿಹರ್ಸಲ್. ಈ ಪ್ಲೇನಲ್ಲಿ ನಾನು, ಗಿರಿಧರ್ ಏಮ್ಲಾ, ಕಾಮತ್, ಉಜ್ವಲಾ ಕುಲಕರ್ಣಿ ಅಭಿನಯಿಸಿದ್ದೆವು. ನಾರಾಯಣ ಪಾಂಡುರಂಗಿ ಇದರ ನಿರ್ದೇಶಕರು. ಆಗ ಬೆಂಗಳೂರು ದೂರದರ್ಶನದಲ್ಲಿ ‘ಹಳ್ಳಿ ಹೈದ’ ಪ್ರಸಾರಗೊಂಡು ನಾನೂ ಫೇಮಸ್ ಆಗಿದ್ದಿದೆ! ಆ ವಿಡಿಯೊ ಬಹುಶಃ ಮಾಸ್ತರ್ ಮನೆಯಲ್ಲಿ ಇರಬೇಕು. ನನ್ನಲ್ಲಿ ಅದರ ವಿಡಿಯೊ ಇಲ್ಲ. ಇಂಥ ಕೆಲವು ಸಂಭ್ರಮಗಳಿಗೆ ಕಾರಣವಾಗಿದ್ದು ಈ ಮಾಸ್ತರ್.

ಯಾವತ್ತೂ ತಮಾಷೆ ಮಾಡುತ್ತ, ಗೇಲಿ ಮಾಡುತ್ತ ಅಷ್ಟೇ ಸ್ನೇಹಜೀವಿಯಾಗಿದ್ದ ಮಾಸ್ತರ್ ಯಾರ ಜೊತೆಗೂ ವೈರತ್ವ ಇಟ್ಟುಕೊಂವರಲ್ಲ. ಆ ನಂತರದಲ್ಲಿ ನಾನೂ, ಧನಂಜಯ್ ಬೆಂಗಳೂರು ಸೇರಿದೆವು. ಮಾಸ್ತರ್ ನಾಗಪುರದ ಎಸ್‌ಸಿಝಡ್‌ಸಿಸಿ ಯಲ್ಲಿ ಪ್ರೋಗ್ರಾಂ ಕೋ-ಆರ್ಡಿನೇಟರ್ ಆಗಿ ಮಹತ್ವದ ಜವಾಬ್ದಾರಿ ವಹಿಸಿಕೊಂಡು ರಾಷ್ಟ್ರೀಯ ಮಟ್ಟದ ಉತ್ಸವಗಳನ್ನು ಆಯೋಜಿಸುವ ಮಟ್ಟಕ್ಕೆ ಬೆಳೆದರು. ಆಗಲೂ ನಮ್ಮನ್ನು ಮರೆಯುತ್ತಿರಲಿಲ್ಲ. ಬೆಂಗಳೂರಿಗೆ ಬಂದಾಗ ಕಾರ್ಪೊರೇಷನ್ ಸಮೀಪದ ‘ಪೈ ವಿಹಾರ್’ನಲ್ಲಿ ಅವರು ಖಾಯಂ ರೂಂ ಮಾಡಿಕೊಂಡಿರುತ್ತಿದ್ದರು. ಆಗೆಲ್ಲ ರವಿ ಕುಲಕರ್ಣಿ, ಧನಂಜಯ್ ಮತ್ತು ನಾನು ಅಲ್ಲಿಗೆ ಹಾಜರ್. ಅಕಸ್ಮಾತ್ ಬರದೇ ಹೋದರೆ ‘ಏ ರವ್ಯಾ ಆ ಸಾಬ್‌ಗ ಫೋನ್ ಮಾಡ್ಲೆ, ಭಾಳ ದೊಡ್ಡ ಮನಷ್ಯಾ ಆಗ್ಯಾನ್ ಬೆಂಗಳೂರಿಗೆ ಬಂದಮ್ಯಾಲೆ..’ ಅಂತ ರವಿ ಕುಲಕರ್ಣಿ ಅವರಿಗೆ ಆದೇಶ. ಆವರು ನಾನು ಕೆಲಸ ಮಾಡಿಕೊಂಡಿದ್ದ ಆಫೀಸಿಗೆ ಫೋನ್ ಮಾಡಿ ‘ಏಯ್ ಡಾಕ್ಟರ್ ಮಗನಾ ಏನ್ ಲಗೂನ್ ಬರ‍್ತಿಯೊ ಏನ್ ಆಫೀಸಿಗೆ ಬಂದ ಗದಲಾ ಮಾಡೂಣೋ..’ ಎಂದು ಅವಾಜ್ ಹಾಕಿ ಮುಗಿಸೋವಷ್ಟೊತ್ತಿಗೆ ನಾನು ಆಟೋದಲ್ಲಿ ಪೈ ವಿಹಾರ್‌ಗೆ ಹಾಜರ್. ಅಲ್ಲೇ ಊಟ, ಅಲ್ಲೇ ತಿಂಡಿ ಅಲ್ಲೇ ವಾಸ. ಎರಡು ದಿನ ಮೂರು ದಿನ ಆದರೂ ಸೈ. ಅಂದರೆ ತಾನು ಗಳಿಸಿದ ಯಶಸ್ಸು, ಕೀರ್ತಿ, ಹಣ, ಅವಕಾಶದ ಕ್ಷಣಗಳನ್ನು ಹಂಚಿಕೊಳ್ಳುವ, ಇದರಲ್ಲಿ ಗೆಳೆಯರಿಗೂ ಒಂದಷ್ಟು ಖುಷಿಯ ಪಾಲು ದಕ್ಕಬೇಕು ಎನ್ನುವ ಔದಾರ್ಯ ಮನೋಭಾವನೆ ಅದು. ನಾನು ಧನಂಜಯ್ ಭೇಟಿ ಆದಾಗ, ಫೋನ್‌ನಲ್ಲಿ ಮಾತಿಗೆ ಸಿಕ್ಕಾಗೆಲ್ಲ ನಾವು ಕಳೆದ ಇಂಥ ಕಲ್ಚರಲ್ ಆದ ಮತ್ತು ಮಾನವೀಯವಾದ ಕ್ಷಣಗಳನ್ನು ಚಪ್ಪರಿಸುತ್ತಲೇ ಇರುತ್ತೇವೆ. ಒಂದೇ ತಟ್ಟೆಯಲ್ಲಿ ಐದಾರು ಜನ ಲಿಟರಲ್ ಆಗಿ ಊಟ ಮಾಡಿದ ಒಂದು ಬುತ್ತಿಯಲ್ಲಿ ಹರಿದು ಕಿತ್ತುಕೊಂಡು ತಿಂದು ಹಂಚಿ ಉಣ್ಣುವ ಸುಖವನ್ನು ನಾವು ಅಕ್ಷರಶಃ ಬದುಕಿದೆವು. ಧಾರವಾಡ ನಮಗೆ ಇದನ್ನೇ ಕಲಿಸಿತು. ಮಾನವೀಯ ಆಗುವುದರ ಮಹತ್ವ ಹೇಳಿಕೊಟ್ಟಿತು.

ಮಾಸ್ತರ್ ಕೆಲವು ಕಾಲ ತುಂಬ ಕಷ್ಟದ ದಿನಗಳನ್ನು ಎದುರಿಸುವಂತಾಯಿತು. ಆಗಲೂ ಅದೇ ತಮಾಷೆ, ಗೇಲಿ, ಸ್ನೇಹ ಮರೆತಿರಲಿಲ್ಲ. ಒಮ್ಮೆ ಅವರಿದ್ದ ಬಾಡಿಗೆ ಮನೆಗೆ ರಾತ್ರಿ ನಮ್ಮನ್ನೆಲ್ಲ ಕರೆದುಕೊಂಡು ಹೋದರು. ಸಿಂಗಲ್ ಬೆಡ್ ರೂಂ, ಹಾಲ್, ಕಿಚನ್ ಇರುವ ಮನೆ. ಬೆಡ್‌ರೂಂನಲ್ಲಿ ಅವರ ಶ್ರೀಮತಿ ಅವರ ತಂದೆ, ತಾಯಿ ಬಹುಶಃ ಹುಷಾರಿರಲಿಲ್ಲ ಅನಿಸುತ್ತೆ, ಅವರಿದ್ರೆ ನಾವೆಲ್ಲ ಮಲಗಿದ್ದು ಆ ಒಂದೇ ಹಾಲ್‌ನಲ್ಲಿ. ನಾನೊಂದು ಸೋಫಾ, ಧನಂಜಯ್ ಇನ್ನೊಂದರಲ್ಲಿ, ರವಿ ಪುಟ್ಟದಾದ ಟೇಬಲ್ ಮೇಲೆ, ಮಾಸ್ತರ್ ಮತ್ತು ಎಲ್ಲರೂ ನೆಲದ ಮೇಲೆ.. ಬೆಳಿಗ್ಗೆ ತಿಂಡಿ ಸವಿದು ಮತ್ತೆ ನಮ್ಮ ಕೆಲಸಕ್ಕೆ. ಹೀಗಿತ್ತು ಮಾಸ್ತರ್ ಜೊತೆಗಿನ ನಮ್ಮದೊಂದು ಸಾಂಸ್ಕೃತಿಕ ಬದುಕು. ಕಷ್ಟದ ನಡುವೆಯೂ ಹೀಗೆ ಕೂಡಿ ಬದುಕುವ ಮಾಸ್ತರ್ ಹುಮ್ಮಸ್ಸು.

ಆನಂತರದ ದಿನಗಳಲ್ಲಿ ಮಾಸ್ತರ್ ನಸೀಬು ರೊಂಯ್‌ನೆ ಟಾಪ್ ಗೇರ್‌ನಲ್ಲಿ ಶುರುವಾಯಿತು. ನಾಟಕಗಳ ಭರ್ಜರಿ ಯಶಸ್ಸು. ಹಣ, ಕೀರ್ತಿ, ಆಸ್ತಿ ಎಲ್ಲ ಬಂತು. ಸಿನಿಮಾ, ಸೀರಿಯಲ್ … ಮುಟ್ಟಿದ್ದೆಲ್ಲ ಬಂಗಾರ. ಆಗಲೂ ಅದೇ ಸ್ನೇಹದ, ತಮಾಷೆಯ ವ್ಯಕ್ತಿತ್ವ. ಆ ಯಶಸ್ಸು ಅವರನ್ನು ಸರ್ಕಾರಿ ಜವಾಬ್ದಾರಿಗಳವರೆಗೂ ಕೊಂಡೊಯ್ಯಿತು. ಬಲಪಂಥೀಯ ವಿಚಾರಧಾರೆಗಳತ್ತ ಹೆಚ್ಚು ವಾಲಿದಂತೆನಿಸಿದರು. ಗೆಳೆಯರು ಎಲ್ಲವನ್ನು ಒಪ್ಪಲಿಲ್ಲವಾದರೂ ಅದನ್ನು ಅವರ ವೈಯಕ್ತಿಕ ಸಾಧನೆಯಾಗಿ ಕಂಡರು. ಅದೇ ಅಭಿಮಾನ, ಅದೇ ಸ್ನೇಹ ಇದ್ದೇ ಇತ್ತು. ಆದರೆ ಇತ್ತೀಚೆಗೆ ಭೇಟಿ ಅಪರೂಪವಾಗಿತ್ತು. ಅದೇ ನಾನು ಮೇಲೆ ಹೇಳಿದ ಫೋನ್ ಕುಶಲೋಪರಿ ಕೆಲವೇ ತಿಂಗಳುಗಳ ಹಿಂದಿನದ್ದು.

ಇವತ್ತು ಬೆಳಿಗ್ಗೆ ಧನಂಜಯ್ ಅವರ ಕಾಲ್ ಬಂತು. ಕೆಟ್ಟ ಸುದ್ದಿ ಸಾಬಾ ಅಂತ ಅವರ ದನಿ ಕೇಳಿದ ಮೇಲೆ ಎದೆ ಧಸಕ್ಕೆಂದಿತು. ಮಾಸ್ತರ್ ಹ್ವಾದ ಅಂದ್ರು. ತೀವ್ರ ಹೃದಯಾಘಾತದಿಂದ ಆಯ್ತು ಅಂದ್ರು. ಮನಸು ಒಪ್ಪಲಿಲ್ಲ. ಖರೇನ ಈ ಸುದ್ದಿ ಅಂದೆ. ಬೇಕಾದ್ರ ರವಿಗೆ ಫೋನ್ ಮಾಡಿ ಕೇಳು ಅಂದ್ರು. ರವೀ ಕುಲಕರ್ಣಿಗೆ ಫೋನ್ ಮಾಡಿದೆ, ಹೌದು ಆಘಾತಕಾರಿ ಸುದ್ದಿ ಖರೇನ ಅಂದ್ರು. ಮನಸು ತುಂಬ ಭಾರವಾಯಿತು. ನಾನೂ ಒಂದು ವಾರದಿಂದ ಕೆಮ್ಮು, ನೆಗಡಿ ಅಂತ ಮನೆಯಲ್ಲೇ ಇದ್ದೆ. ಈ ಸುದ್ದಿ ಎದೆ ನಡುಗಿಸಿತು. ಈ ಬದುಕು ಅನ್ ಪ್ರೆಡಿಕ್ಟೇಬಲ್ ಎಂದು ಧನಂಜಯ್ ಫೋನ್‌ನಲ್ಲಿ ಹೇಳಿದ್ದು ಖರೆ ಅನಿಸಿತು. ಹೋಗಿ ಬನ್ನಿ ಮಾಸ್ತರ್.

‍ಲೇಖಕರು Admin

30 September, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading