ಕನ್ನಡದ ಸಾಕ್ಷಿ ಪ್ರಜ್ಞೆ ಕೋ. ಚೆನ್ನಬಸಪ್ಪನವರು ಇಂದು ಕೊನೆಯುಸಿರೆಳೆದಿದ್ದಾರೆ. ಕೋ ಚೆ ನೂರರ ಹೊಸ್ತಿಲಲ್ಲಿ ನಮ್ಮನ್ನು ಅಗಲಿದ್ದಾರೆ, ಈ ಮಹಾಚೇತನಕ್ಕೆ ಹಾರ್ದಿಕ ನಮನಗಳು, ಅವರು ನೀಡಿದ ಬೆಳಕು ನಮ್ಮನ್ನು ಸದಾ ಮುನ್ನಡೆಸಲಿ..
ಸನತ್ ಕುಮಾರ್ ಬೆಳಗಲಿ
ಪುಸ್ತಕದ ಚಿತ್ರಗಳು: ಆಕೃತಿ ಬುಕ್ ಹೌಸ್
ಕನ್ನಡದ ಸಾಕ್ಷಿ ಪ್ರಜ್ಞೆ ಕೋ. ಚೆನ್ನಬಸಪ್ಪನವರು ಇಂದು ಕೊನೆಯುಸಿರೆಳೆದಿದ್ದಾರೆ.
ರಾಷ್ಟ್ರಕವಿ ಕುವೆಂಪು ಅವರ ಪ್ರೀತಿಯ ಶಿಷ್ಯರಾಗಿದ್ದ ಕೋ ಚೆ ಅವರು ನನಗೂ ಗುರು ಸಮಾನರು, ಆಗಾಗ ಫೋನ್ ಮಾಡಿ ಮಾತಾಡುತ್ತಿದ್ದರು. ಹೆಚ್ಚು ಮಾತಾಡಬೇಕೆನಿಸಿದಾಗ ಮನೆಗೆ ಕರೆಯುತ್ತಿದ್ದರು. ನನ್ನ ಲೇಖನಗಳನ್ನು ಓದಿ ಅಭಿಪ್ರಾಯ ಹೇಳುತ್ತಿದ್ದರು, ಟಿಪ್ಪು ಸುಲ್ತಾನ ಬಗ್ಗೆ ಸಂಪಾದಿಸಿದ ಪುಸ್ತಕಕ್ಕೆ ನನ್ನ ಲೇಖನವನ್ನು ಆಯ್ಕೆ ಮಾಡಿಕೊಂಡಿದ್ದರು.
ಪಾಟೀಲ ಪುಟ್ಟಪ್ಪ, ದೊರೆಸ್ವಾಮಿ ಮತ್ತು ಕೋ ಚೆ ಅವರು ಸಮಕಾಲೀನರು. ಐವತ್ತರ ದಶಕದಲ್ಲಿ ಪ್ರಗತಿಶೀಲ ಸಾಹಿತ್ಯ ಚಳವಳಿ ಆರಂಭವಾದಾಗ ಅನಕೃ, ಬಸವರಾಜ ಕಟ್ಟೀಮನಿ, ನಿರಂಜನ, ಬೀಚಿ, ತರಾಸು ಜೊತೆಗೆ ಕೋಚೆ ಅವರು ಹೆಗಲಿಗೆ ಹೆಗಲು ಕೊಟ್ಟವರು.
ಕತೆ, ಕಾದಂಬರಿ, ಅನುವಾದ ಹೀಗೆ ಅಭಿವ್ಯಕ್ತಿ ಯ ಎಲ್ಲ ಪ್ರಾಕಾರಗಳಲ್ಲಿ ಸಾಧನೆ ಮಾಡಿದ ಕೋಚೆ ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಹಳ್ಳಿಯೊಂದರಲ್ಲಿ ಜನಿಸಿದರು, ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಏಕೀಕರಣ ಚಳವಳಿ, ನಂತರದ ರೈತ ಆಂದೋಲನ ಹೀಗೆ ಮುಂತಾದ ಕಡೆ ತಮ್ಮನ್ನು ತೊಡಗಿಸಿಕೊಂಡರು.
ಅನಂತಪುರದಲ್ಲಿ ವ್ಯಾಸಂಗ ಮಾಡುವಾಗ ಹಿರಿಯ ಕಮ್ಯುನಿಸ್ಟ್ ನಾಯಕ ನೀಲಮ್ ರಾಜಶೇಖರ ರೆಡ್ಡಿ ಇವರ ಸಹಪಾಠಿಯಾಗಿದ್ದರು, ನಂತರ ಕಾನೂನು ವ್ಯಾಸಂಗ ಮಾಡಿ ನ್ಯಾಯಾಧೀಶರರಾಗಿ ಸೇವೆ ಸಲ್ಲಿಸಿದರು, ನಿವೃತ್ತಿ ನಂತರ ತೊಂಬತ್ತೆಂಟರ ಇಳಿ ವಯಸ್ಸಿನಲ್ಲೂ ಹೈಕೋರ್ಟ್ ಗೆ ಬರುತ್ತಿದ್ದರು, ಅರವಿಂದರ ಮಹಾಕಾವ್ಯವನ್ನು ಕನ್ನಡಕ್ಕೆ ಅನುವಾದಿಸಿರುವ ಕೋಚೆ ಅವರು ಮುಹಮ್ಮದ ಇಕ್ಬಾಲ್ ಸಾಹಿತ್ಯವನ್ನು ಕನ್ನಡಕ್ಕೆ ತಂದಿದ್ದಾರೆ.
ನವಕರ್ನಾಟಕ ಪ್ರಕಾಶನ ಪ್ರಕಟಿಸಿರುವ ಅವರ “ಬೇಡಿ ಕಳಚಿತು ದೇಶ ಒಡೆಯಿತು” ಸ್ವಾತಂತ್ರ್ಯ ಹೋರಾಟದ ಸಮಗ್ರ ಇತಿಹಾಸವನ್ನು ಕಟ್ಟಿಕೊಡುತ್ತದೆ ಅವರ “ಗಾಂಧಿ ಕಗ್ಗೊಲೆ ಮತ್ತು ಪರಿಣಾಮ” ಪುಸ್ತಕ ಬಾಪು ಹತ್ಯೆಯಲ್ಲಿ ಕೋಮುವಾದಿ ಸಂಘ ಪರಿವಾರದ ಕೈವಾಡದ ಮೇಲೆ ಹೊಸ ಬೆಳಕು ಚೆಲ್ಲುತ್ತದೆ.
ಲಿಂಗಾಯತರು ಹಿಂದುಗಳಲ್ಲ ಎಂಬ ಅವರ ಕೊನೆಯ ಪುಸ್ತಕ ಓದುಗರ ಮೆಚ್ಚುಗೆ ಗಳಿಸಿದೆ ಇಂಥ ಕೋ ಚೆ ನೂರರ ಹೊಸ್ತಿಲಲ್ಲಿ ನಮ್ಮನ್ನು ಅಗಲಿದ್ದಾರೆ, ಈ ಮಹಾಚೇತನಕ್ಕೆ ಹಾರ್ದಿಕ ನಮನಗಳು, ಅವರು ನೀಡಿದ ಬೆಳಕು ನಮ್ಮನ್ನು ಸದಾ ಮುನ್ನಡೆಸಲಿ,







0 Comments