ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಸ ಕೃತಿಯೊಂದಿಗೆ ವಿದ್ಯಾರಶ್ಮಿ ಪೆಲತ್ತಡ್ಕ..

ವಿದ್ಯಾರಶ್ಮಿ ಪೆಲತ್ತಡ್ಕ

ಅದು ೨೦೦೪ನೆಯ ಇಸವಿ. ಸ್ನಾತಕೋತ್ತರ ಪದವಿ ಓದುತ್ತಿದ್ದ ನಾನು, ರಜೆಯಲ್ಲಿ ಮಂಗಳೂರಿನ ‘ಕನ್ನಡಪ್ರಭ’ ಪತ್ರಿಕಾ ಕಚೇರಿಯಲ್ಲಿ ಇಂಟರ್ನ್ ಶಿಪ್‌ಗೆಂದು ಸೇರಿಕೊಂಡಿದ್ದೆ. ನನ್ನ ತಂದೆ ಪೆಲತ್ತಡ್ಕ ನಾರಾಯಣ ಭಟ್‌ರಿಗೆ ಪತ್ರಿಕೋದ್ಯಮ ಕಲಿಯುವುದೇ ಇಷ್ಟವಿರಲಿಲ್ಲ. ಆದರೂ ಹಠ ಮಾಡಿ ಒಂದು ವರ್ಷ ಪೂರೈಸಿದ್ದೂ ಆಗಿತ್ತು. ಈಗ ಇಂಟರ್ನ್ ಶಿಪ್‌ಗೆಂದು ಪತ್ರಿಕೆಯ ಕಚೇರಿಗೆ ಬೇರೆ ಹೋಗುತ್ತಿದ್ದೆ.

ಪತ್ರಿಕಾ ಕಚೇರಿಯಲ್ಲಿ ಎಂತೆಂಥವರೋ ಇರುತ್ತಾರೆ, ರಾತ್ರಿ ಕೆಲಸ ಮಾಡಬೇಕು’ ಎಂದೆಲ್ಲ ಕೇಳಿದ, ಕಲ್ಪಿಸಿಕೊಂಡ ನಮ್ಮಪ್ಪನಿಗೆ ಅದೇ ದೊಡ್ಡ ಚಿಂತೆ. ಅದು ಒಬ್ಬ ಗ್ರಾಮೀಣ ಪರಿಸರದ, ಸಾಂಪ್ರದಾಯಿಕ ಮನೆತನದ ತಂದೆಗಿರುವ ಸಹಜ ಕಾಳಜಿಯೂ ಹೌದು. ಅವರಿಗೆ ತಾನೇ ಬಂದು ಮಗಳಿರುವ ಪರಿಸರವನ್ನು ಪರಿಶೀಲಿಸುವ ಯೋಚನೆ ಇತ್ತೇನೋ, ಆದರೆ ಅವಳಿಗೆ ಇರುಸು ಮುರುಸಾಗಬಹುದು ಎಂಬ ಸೂಕ್ಷ್ಮತೆ. ಅದಕ್ಕಾಗಿಯೇ ಪದವಿಯಲ್ಲಿ ನನಗೆ ಉಪನ್ಯಾಸಕರಾಗಿದ್ದ, ಕುಟುಂಬಕ್ಕೂ ಆತ್ಮೀಯರಾಗಿದ್ದ ಪ್ರೊ.ಮಾಧವ ಭಟ್ ಅವರನ್ನು ಕರೆದು, ‘ಒಮ್ಮೆ ಅವಳ ಕಚೇರಿಗೆ ಹೋಗಿ ನೋಡಿ ಬರುತ್ತೀರಾ?’ ಎಂದಿದ್ದರಂತೆ. ನನ್ನ ಅಪ್ಪನ ಮಾತಿಗನುಗುಣವಾಗಿ ಅವರು ಕಚೇರಿಗೂ ಬಂದಿದ್ದರು. ಆದರೆ ಒಳಬರದೇ, ‘ನಾನು ಒಳಗೆ ಬಂದು ನಿನಗೆ ಮುಜುಗರ ಮಾಡುವುದಿಲ್ಲ. ನಿನ್ನ ಬಳಿಯಷ್ಟೇ ಮಾತಾಡಿ ಹೋಗುವೆ’ ಎಂದು ಹೊರಗಿನಿಂದಲೇ ಮಾತಾಡಿ ಹೊರಟುಹೋಗಿದ್ದರು.

ಇದಾಗಿ ಇನ್ನೊಂದು ವರ್ಷವಾದಾಗ ನಾನು ಸ್ನಾತಕೋತ್ತರ ಪದವಿಯ ಎರಡನೆಯ ವರ್ಷವನ್ನೂ ಪೂರೈಸಿ ಉದ್ಯೋಗದ ತಲಾಶ್‌ಗೆ ಹೊರಟಿದ್ದೆ. ಬೆಂಗಳೂರಿನ `ಕನ್ನಡ ಪ್ರಭ’ ಕಚೇರಿಯಲ್ಲಿ ಪ್ರವೇಶ ಪರೀಕ್ಷೆ, ಸಂದರ್ಶನ ಎಲ್ಲವೂ ಇದ್ದವು. ಆಗ ಸಂದರ್ಶನದಲ್ಲಿ ನನಗೆ ಕೇಳಿದ್ದ ಮೊದಲ ಪ್ರಶ್ನೆಯೇ, ‘ರಾತ್ರಿ ಕೆಲಸ ಮಾಡುತ್ತೀರಾ?’ ಎಂಬುದೇ. ಹಿಂದೆಮುಂದೆ ನೋಡದೆ ‘ಮಾಡುತ್ತೇನೆ’ ಎಂದದ್ದಕ್ಕೇ ನನಗಾಗ ಕೆಲಸ ಸಿಕ್ಕಿದ್ದು.

ಹೀಗೆ ಕೆಲಸಕ್ಕೂ ಸೇರಿದ್ದೆ, ಯಾವುದೋ ಪಿಜಿಯಲ್ಲಿ ವಾಸ್ತವ್ಯವೂ ಸಿಕ್ಕಿತ್ತು. ಆಗ ನನ್ನ ರೂಮ್‌ಮೇಟ್ ಆಗಿದ್ದಾಕೆ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುವ ರಾತ್ರಿ ಕೆಲಸದವಳು. ನಾನಾದರೋ ರಾತ್ರಿ ಹನ್ನೆರಡು-ಒಂದು ಗಂಟೆಗೆ ಪಿಜಿಗೆ ಬರುವವಳಾದರೆ ಅವಳು ಸಂಜೆ ಆರಕ್ಕೆ ಕೆಲಸಕ್ಕೆ ಹೊರಟು ಮರುದಿನ ಬೆಳಗ್ಗೆ ಐದು ಗಂಟೆಗೆ ಮರಳುವವಳು. ಕಾಲ್‌ಸೆಂಟರ್ ಬದುಕು ಬೆಂಗಳೂರಿನಲ್ಲಿ ಪ್ರಚಲಿತವಾಗುತ್ತಿದ್ದ ವರ್ಷಗಳವು.

ಭಾರತದಲ್ಲಿ ಮೊದಲ ಕಾಲ್‌ಸೆಂಟರ್ ಪ್ರಾರಂಭವಾದದ್ದು ೧೯೯೮ರಲ್ಲಾದರೆ ಬಳಿಕ ಬೆಂಗಳೂರಿ ನಂತಹ ನಗರಗಳಲ್ಲಿ ಅವು ಹಬ್ಬಲು ಶುರುವಾಗಿದ್ದು ೨೦೦೦ರ ಬಳಿಕವೇ. ‘ಹೆಣ್ಮಕ್ಕಳೂ ರಾತ್ರಿಯೆಲ್ಲ ಮನೆಯಿಂದ ಹೊರಗಿದ್ದು ಕೆಲಸ ಮಾಡುತ್ತಾರಂತೆ, ಕ್ಯಾಬ್‌ನಲ್ಲಿ ಹೋಗುತ್ತಾರಂತೆ, ಬರುತ್ತಾರಂತೆ’ ಎಂಬೆಲ್ಲ ಮಾತುಕತೆಗಳು ಕೇಳಿಬರುತ್ತಿದ್ದ, ಅದನ್ನು ಜನರು ಹೊಸ ವಿಷಯವೆಂಬಂತೆ ಕೇಳಿಸಿಕೊಳ್ಳುತ್ತಿದ್ದ ಸಮಯವದು.

ಆದರೆ, ಈ ಕಾಲಘಟ್ಟಕ್ಕೂ ಎರಡು ದಶಕಗಳ ಮೊದಲು ಲೀಲಾವತಿ ಬೈಪಾಡಿತ್ತಾಯ ಎಂಬ ಈ ಮಹಾತಾಯಿ ಹಳ್ಳಿಮೂಲೆಯಲ್ಲಿ ನೈಟ್‌ಶಿಫ್ಟ್ ಮಾಡಿದ್ದರು. ಅವರು ಬೆಂಗಳೂರಿನ ಕಾಲ್‌ಸೆಂಟರ್‌ನ ಹುಡುಗಿಯರಂತೆ ಒಂದು ಕಚೇರಿಯಲ್ಲಿ ಕುಳಿತಿದ್ದು ಕೆಲಸ ಮಾಡಿದ್ದೂ ಅಲ್ಲ. ಊರಿಂದೂರಿಗೆ ಹೋದವರು, ಎಲ್ಲೋ ಯಾರದೋ ಮನೆಯಲ್ಲಿ ಹಗಲು ಜಾಗ, ಸಮಯ ಸಿಕ್ಕಾಗ ನಿದ್ದೆ ಮಾಡಿದವರು. ನಾನು ಮತ್ತು ನನ್ನಂಥ ಪತ್ರಕರ್ತೆಯರು ೨೪*೭ ಡೇಕೇರ್‌ಗಳು ಬೆಂಗಳೂರಿನಲ್ಲೂ ಇವೆ ಎಂದು ೨೦೧೦ರ ವೇಳೆಗೆ ಲೇಖನ ಬರೆದರೆ, ಇವರು ತಮ್ಮ ಎಳೆಯ ಮಕ್ಕಳನ್ನು ದಿನಗಟ್ಟಲೆ ನೋಡದೇ ರಾತ್ರಿಯ ಪಾಳಿಯಲ್ಲಿ ತಮ್ಮ ಕೆಲಸದಲ್ಲಿ ತೊಡಗಿದ್ದರು.

ಅದೂ ಅವರ ಕೆಲಸ ಸಾಮಾನ್ಯದ್ದೇನಲ್ಲ. ‘ಗಂಡು ಮೆಟ್ಟಿನ ಕಲೆ’ ಎಂದೇ ಅಡಿಗಡಿಗೆ ಪುರುಷರು ಎದೆತಟ್ಟಿ ಹೇಳಿಕೊಳ್ಳುವ ಕಲೆಯಲ್ಲಿ ಇವರು ಭಾಗಿ. ಸುತ್ತೆಲ್ಲ ಪುರುಷರು. ಅವರ ಮಧ್ಯದಲ್ಲಿ ಇವರೊಬ್ಬ ಮಹಿಳೆ. ಮಹಿಳೆಯೊಬ್ಬಳು ಯಕ್ಷಗಾನ ಪ್ರಸಂಗ ನೋಡಿದರೆ ಪ್ರಾಯಶ್ಚಿತ್ತಾರ್ಥವಾಗಿ ಏಳು ರಂಗಪೂಜೆ ನೋಡಬೇಕು ಎಂಬ ಕಾಲದಲ್ಲಿ ಯಕ್ಷಗಾನ ಕ್ಷೇತ್ರ ಪ್ರವೇಶ ಮಾಡಿ ಮೇಳದ ಪ್ರಧಾನ ಭಾಗವತರಾಗಿ ಇಡೀ ರಾತ್ರಿಯ ಪ್ರಸಂಗವನ್ನೂ ನಡೆಸುವ ಜವಾಬ್ದಾರಿ ಹೊರುವಮಟ್ಟಿಗೆ ಬೆಳೆದವರು.

೨೬ ವರ್ಷಗಳ ಕಾಲ ಈ ರೀತಿ ಸತತವಾಗಿ ಯಕ್ಷರಂಗದಲ್ಲಿ ತೊಡಗಿಸಿಕೊಂಡ ಲೀಲಾವತಿ ಅಮ್ಮನವರ ಕೆಲಸಕ್ಕೆ ‘ಕ್ರಾಂತಿ’ ಎನ್ನದೆ ಬೇರೇನೂ ವಿಶೇಷಣ ಹೊಳೆಯುತ್ತಿಲ್ಲ. ಆ ಕಾಲಕ್ಕೆ ಒಬ್ಬ ಮಹಿಳೆಯಾಗಿ ಅವರದು ಮಹಾ ಕ್ರಾಂತಿಯೇ. ಮೇಳದ ತಿರುಗಾಟಕ್ಕೆ ಅವರಂತೆ ಊರಿಂದೂರಿಗೆ ಹೋದವರು ಅದುವರೆಗೂ ಇನ್ನೊಬ್ಬ ಮಹಿಳೆ ಇರಲಿಲ್ಲ. ಆ ಬಳಿಕ ಇದುವರೆಗೂ ಬಂದೂ ಇಲ್ಲ. ಯಕ್ಷಗಾನ ಮೇಳಗಳ ಸೀಮಿತ ಅವಧಿಯ ಪ್ರದರ್ಶನ ಹೆಚ್ಚುತ್ತಿದ್ದಂತೆ ಈ ಬಗೆಯ ಇಡೀ ರಾತ್ರಿಯ ಪ್ರದರ್ಶನಗಳೂ ಬಹುತೇಕ ಮರೆಯಾಗುತ್ತಿವೆ, ಹೀಗಾಗಿ ಇದನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದ ಇನ್ನೊಬ್ಬ ಮಹಿಳೆ ಸಿಗಲಾರಳೇನೋ.

ಪತಿ ಜೊತೆಯೇ ಇದ್ದರೂ ಅವರು ತಮ್ಮ ವೃತ್ತಿಯಲ್ಲಿ ಯಶ ಕಾಣುವಲ್ಲಿ ಪ್ರತಿಭೆಯ ಪಾತ್ರವೇ ದೊಡ್ಡದು. ಕರ್ನಾಟಕ ಸಂಗೀತವನ್ನು ಕಲಿತಿದ್ದ ಲೀಲಮ್ಮ ಸಂಗೀತದ ಸೆಳೆತದ ಹೊರತಾಗಿಯೂ, ಸ್ವಯಂ ನಿಯಂತ್ರಣದಿಂದ ಅದನ್ನು ರಾಗಗಳಿಗಷ್ಟೇ ಸೀಮಿತವಾಗಿಸಿ, ಯಕ್ಷಗಾನದ ಅಂದವೂ ಪಾವಿತ್ರ‍್ಯವೂ ಕೆಡದಂತೆ, ಯಕ್ಷಗಾನೀಯ ಹಾಡುಗಾರಿಕೆಗೆ ಒಗ್ಗಿಕೊಂಡದ್ದು ಅವರ ಸಂಯಮಕ್ಕೆ, ಪ್ರತಿಭೆಗೆ ದ್ಯೋತಕ.

ತುಳು ಪ್ರಸಂಗಗಳ, ಡೇರೆ ಮೇಳಗಳ ಆಧಿಕ್ಯದ ಸಮಯದಲ್ಲೇ ತಮ್ಮ ಕಲಾರಂಗದಲ್ಲಿ ಅರಳಿದ ಲೀಲಮ್ಮ; ಆ ಕಾಲದಲ್ಲಿ ಕರಾವಳಿಯ ಮನೆಮನೆಯಲ್ಲೂ ‘ಹೆಣ್ಣುಮಗಳು ಭಾಗವತಿಕೆ ಮಾಡ್ತಾರಂತೆ’ ಎಂಬ ಸೆನ್ಸೇಷನ್ ಹುಟ್ಟುಹಾಕಿದ್ದರು. ವಿಶೇಷ ಆಕರ್ಷಣೆಯಾಗಿ ಅವರು ಯಕ್ಷಗಾನಾಭಿಮಾನಿಗಳನ್ನು ಎಷ್ಟರಮಟ್ಟಿಗೆ ಸೆಳೆಯಲು ಶಕ್ತರಾಗಿದ್ದರೆಂದರೆ ಹಲವಾರು ಬಾರಿ ಸೇರಿದ್ದ ಜನಸ್ತೋಮಕ್ಕೆ ಕೂರಲು ಜಾಗವಿಲ್ಲದೆ ಟೆಂಟ್ ಬಿಚ್ಚಿಸಿ ಜಾಗ ಮಾಡಿಕೊಡಬೇಕಾಗಿ ಬಂದುದೂ ಇತ್ತು! ಇಂದಿನ ಸೋಷಿಯಲ್ ಮೀಡಿಯಾ ಮೆರೆದಾಟದ ಈ ಕಾಲದಲ್ಲಿ ಇವರು ರಂಗವೇರುತ್ತಿದ್ದರೆ ಇನ್ನು ಅದೆಂತಹ ಜನಪ್ರಿಯತೆ ಪಡೆಯುತ್ತಿದ್ದರೋ, ಇವರ ಮಧುರ ಧ್ವನಿ ಅದೆಷ್ಟು ವೈರಲ್ ಆಗುತ್ತಿತ್ತೋ ಎಂದು ಕಲ್ಪಿಸಿಯೇ ಬೆರಗಾಗುತ್ತೇನೆ.

ಪ್ರತಿಬಾರಿಯೂ ‘ನನ್ನಿಂದಾಗುತ್ತದಾ?’ ಎಂಬ ಹಿಂಜರಿಕೆಯಿಂದಲೇ ಈ ರಂಗಕ್ಕಡಿಯಿಟ್ಟ ಲೀಲಮ್ಮ ಕ್ರಮೇಣ ಯಕ್ಷಗಾನದ ದೊಡ್ಡ ಹೆಸರುಗಳಾದ ಬಲಿಪರು, ಮಂಡೆಚ್ಚರು, ಅಗರಿ ಶ್ರೀನಿವಾಸ ಭಾಗವತರು, ಕಡತೋಕ ಮಂಜುನಾಥ ಭಾಗವತರು, ದಿವಾಣರು, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್, ನೆಡ್ಲೆ ನರಸಿಂಹ ಭಟ್ಟರಂತಹ ಹಲವು ಘಟಾನುಘಟಿ ಹಿಮ್ಮೇಳದವರ ಜೊತೆ ಒಡನಾಡಿದರು. ದೃಢವಾಗಿ ಬೆಳೆದು ತಮ್ಮ ಪ್ರತಿಭೆಯನ್ನು ಸಾರಿದರು. ಶೇಣಿ ಗೋಪಾಲಕೃಷ್ಣ ಭಟ್, ಕೋಳ್ಯೂರು ರಾಮಚಂದ್ರ ರಾವ್, ಶಂಕರನಾರಾಯಣ ಸಾಮಗ, ವಾಸುದೇವ ಸಾಮಗ, ಕುಂಬಳೆ ಸುಂದರ ರಾವ್, ಕೆ. ಗೋವಿಂದ ಭಟ್ ಮೊದಲಾದ ಮೇರು ಪ್ರತಿಭೆಗಳನ್ನೇ ಕುಣಿಸಿ ಅವರಿಂದಲೇ ಸೈ ಎನ್ನಿಸಿಕೊಂಡವರು. ಕುಟುಂಬ, ವೃತ್ತಿಗಳನ್ನು ನಿಭಾಯಿಸುತ್ತ ಅಲ್ಲಿಯೂ ಯಶಗಳಿಸಿದವರು. ಯಕ್ಷಗಾನ ಗುರುವಾಗಿ ನೂರಾರು ವಿದ್ಯಾರ್ಥಿಗಳನ್ನು ಯಕ್ಷರಂಗಕ್ಕೆ ಕೊಡುಗೆಯಾಗಿತ್ತವರು ಕೂಡ.

ಇಂತಹ ಸಾಧಕಿಯ ಜೀವನದ ಕಥೆಯನ್ನು ನಿರೂಪಣೆ ಮಾಡುವ ಅವಕಾಶ ನನಗೆ ಸಿಕ್ಕಿದ್ದು ನನ್ನ ಭಾಗ್ಯವೇ ಸರಿ. ೨೦೧೭ರಲ್ಲಿ ಲೀಲಾವತಿ ಅಮ್ಮನವರಿಗೆ ಪ್ರಶಸ್ತಿ ಬಂದಾಗ ಅವರ ಕುರಿತಾಗಿ `ವಿಜಯ ಕರ್ನಾಟಕ’ ಪತ್ರಿಕೆಯಲ್ಲಿ ನಾನೊಂದು ಲೇಖನ ಬರೆದಿದ್ದೆ. ಅದುವೇ ನೆಪವಾಗಿ ಅವರ ಜೀವನದ ಕಥೆಯ ಬೆಂಬತ್ತುವಂತಾಯ್ತು.

ಲೀಲಮ್ಮ ಭಾಗವತರಾಗಿ ಪೌರಾಣಿಕ ಕಥೆಗಳನ್ನೋ, ಸಾಮಾಜಿಕ ಕಥಾನಕಗಳನ್ನೋ ರಂಗದಲ್ಲಿ ಅವೆಷ್ಟೋ ಬಾರಿ ನಿರೂಪಿಸಿರಬಹುದು. ಆದರೆ, ತಮ್ಮದೇ ಕಥೆಯನ್ನು ಹೇಳುವಲ್ಲಿ ಮಾತ್ರ ಬಹಳ ಹಿಂಜರಿದವರು. ವೃತ್ತಿ ಬದುಕಿನುದ್ದಕ್ಕೂ ತಾನಾಯ್ತು, ತನ್ನ ಜವಾಬ್ದಾರಿಯ ನಿಭಾವಣೆಯಾಯ್ತು ಎಂಬಂತಿದ್ದ ಲೀಲಮ್ಮ ತಮ್ಮ ಕಷ್ಟ, ಸುಖಗಳನ್ನು ಎಲ್ಲಿಯೂ ಅಷ್ಟಾಗಿ ಬಿಚ್ಚಿಟ್ಟವರೇ ಅಲ್ಲ. ಹೀಗಾಗಿ ಈ ಆತ್ಮಕಥನ ನಿರೂಪಣೆ ನನಗೂ ಅಷ್ಟು ಸುಲಭವಾದದ್ದೇನಾಗಲಿಲ್ಲ. ಮೊದಲು ಲೀಲಮ್ಮನ ಮಗ ಅವಿನಾಶರ ಬೆಂಗಳೂರಿನ ಮನೆಯಲ್ಲಿ ಒಂದೆರಡು ಬಾರಿ ಭೇಟಿಯಾಗಿ ಮಾತನಾಡಿಸಿದೆ.

ಎರಡು-ಮೂರು ಗಂಟೆಗಳ ಕಾಲ ಒಂದಷ್ಟು ಹೇಳಿ ಇನ್ನೇನೂ ಇಲ್ಲ ಎಂಬಂತೆ ಸುಮ್ಮನಾಗಿಬಿಡುತ್ತಿದ್ದರು. ಬಳಿಕ ಅವರ ತಲಕಳದ ಮನೆಗೂ ಹೋಗಿ ಅವರಲ್ಲಿಯೇ ವಾಸ್ತವ್ಯವಿದ್ದು ಲೀಲಮ್ಮನ ಮನದೊಳಗೆ ಹೊಗುವ ಪ್ರಯತ್ನವನ್ನೂ ಮಾಡಿದ್ದಾಯಿತು. ಆಗ ಮತ್ತೆ ಒಂದಷ್ಟು ವಿಷಯಗಳು ಹೊರಬಂದವು. ಮಧ್ಯೆ ಹಲವು ಬಾರಿ ಪ್ರತಿನಿತ್ಯ ಎಂಬಂತೆ ಅವರಿಗೆ ಕರೆ ಮಾಡಿ ಹಲವು ವಿಷಯಗಳನ್ನು ಕೇಳುವುದು, ಅವರು ಹೇಳಿದ್ದನ್ನು ಬರೆದುಕೊಳ್ಳುವುದೂ ನಡೆಯಿತು. ಈ ಸಂದರ್ಭದಲ್ಲಿ ಲೀಲಮ್ಮರ ಹಿರಿಯ ಸಹೋದರರಾದ ವಿಷ್ಣು ಹೆಬ್ಬಾರ್ ಅವರೂ ತಮ್ಮ ಪ್ರೀತಿಯ ತಂಗಿ ನಡೆದು ಬಂದ ಹಾದಿಯ ಕಥೆಯನ್ನು ಹೇಳಿದರು. ಕೆಲವೊಮ್ಮೆ ಇವರಿಬ್ಬರೂ ಅದು ಹಾಗಲ್ಲವೆಂದು ಪರಸ್ಪರರು ಹೇಳಿದ ಕೆಲವೊಂದು ವಿಷಯಗಳನ್ನು ಸಂಪೂರ್ಣ ಅಲ್ಲಗಳೆದಾಗ ಯಾವುದು ನಿಜ, ಏನನ್ನು ಬರೆಯಲಿ ಎಂದು ತಿಳಿಯದೆ ನಾನು ಪೂರ್ತಿ ತಬ್ಬಿಬ್ಬಾಗಿದ್ದೂ ಉಂಟು.

ಇಂತಹ ಸಂದರ್ಭಗಳಲ್ಲೆಲ್ಲ ಅವಿನಾಶ್ ಬೈಪಾಡಿತ್ತಾಯರು ಖಚಿತ ಮಾಹಿತಿ ತಿಳಿದೋ ಅಥವಾ ಕೌಟುಂಬಿಕವಾಗಿ ನಿಷ್ಕರ್ಷೆ ಮಾಡಿಯೋ ಹೇಳುತ್ತಿದ್ದರು. ಕೃತಿಗೆ ಪೂರಕವಾದ ಯಕ್ಷಗಾನ ಪದ್ಯಗಳ ಅಗತ್ಯ ಬಂದಾಗ ಅವನ್ನು ಅಧಿಕೃತವಾಗಿ ಒದಗಿಸುತ್ತಿದ್ದರು. ಯಾರನ್ನು ಮಾತಾಡಿದರೆ ಹೆಚ್ಚಿನ ಮಾಹಿತಿ ಸಿಗುತ್ತದೆ ಎಂದು ಸೂಚಿಸುತ್ತಿದ್ದರು. ಅವರ ನೆರವಿಲ್ಲದೆ ಇಷ್ಟು ವಿವರಗಳನ್ನು ಸಂಗ್ರಹಿಸುವುದೇ ಅಸಾಧ್ಯವಾಗುತ್ತಿತ್ತೇನೋ.

ಲೀಲಮ್ಮನವರ ಜೊತೆ ಮಾತನಾಡುವಾಗಲೆಲ್ಲ ಅವರ ಪತಿ ಹರಿನಾರಾಯಣರು ಇಂಥ ಸಮಯದಲ್ಲಿ ಹೀಗಾಯ್ತೆಂದು ಘಟನೆಗಳನ್ನು ಎತ್ತಿ ಕೊಡುತ್ತಿದ್ದರು. ಲೀಲಮ್ಮನವರು ತಮ್ಮ ವೃತ್ತಿಯ ಆರಂಭ, ಮೇಳಗಳ ಬದಲಾವಣೆ ಇತ್ಯಾದಿಗಳ ಬಗೆಗೆ ಅಷ್ಟಾಗಿ ನೆನಪಿಟ್ಟುಕೊಂಡವರಲ್ಲ. ಒಂದು ನೋಟ್‌ಬುಕ್‌ನಲ್ಲಿ ಕೆಲವು ಇಸವಿಗಳನ್ನು ಬರೆದುಕೊಂಡಿದ್ದುದು ಬಿಟ್ಟರೆ ಬೇರಾವ ಆಧಾರಗಳೂ ಇರಲಿಲ್ಲ. ಹಲವು ಬಾರಿ ಅವರ ಬದುಕಿನ ಹಂತಗಳನ್ನು ಹೆಸರಿಸುವಾಗ ಕಾಲನಿರ್ಣಯ ಮಾಡುವುದರಲ್ಲಿ ದ್ವಂದ್ವ ಮೂಡಿದ್ದೂ ಇದೆ. ಇದಕ್ಕಾಗಿಯೇ ಯಕ್ಷಗಾನದ ಕುರಿತ ಹಲವು ಕೃತಿಗಳನ್ನೂ ಗಮನಿಸಬೇಕಾಯಿತು. ಜೊತೆಗೆ ಈಗ ಮಧೂರಿನಲ್ಲಿರುವ ಲೀಲಮ್ಮನವರ ಸೋದರಮಾವನ ಪುತ್ರರನ್ನೂ ಮಾತನಾಡಿಸಿದೆ. ಮೇಳದಲ್ಲಿ ಲೀಲಮ್ಮನವರ ಜೊತೆಗೆ ಕೆಲಸ ಮಾಡಿದ ದೇವದಾಸ ಈಶ್ವರಮಂಗಲ ಅವರು ತಮಗೆ ತಿಳಿದ ಅಮೂಲ್ಯ ಮಾಹಿತಿಗಳನ್ನೂ ಒದಗಿಸಿಕೊಟ್ಟರು.

ಅಂತೂ ಲೀಲಮ್ಮನವರ ಆತ್ಮಕಥನದ ನಿರೂಪಣೆಗೆ ೨೦೧೭ರಲ್ಲಿಯೇ ತೊಡಗಿದರೂ ಆ ಪ್ರಕ್ರಿಯೆ ಮಾತ್ರ ಬಹು ನಿಧಾನವಾಗಿಯೇ ಸಾಗಿ ಇಷ್ಟು ವರ್ಷಗಳನ್ನು ತೆಗೆದುಕೊಂಡಿತು. ಇದಕ್ಕೆ ನನ್ನ ಮಿತಿಯೂ ಕಾರಣ. ನಿತ್ಯದ ಕಚೇರಿ ಕೆಲಸ, ಮನೆಗೆ ಬಂದರೆ ಮನೆಗೆಲಸ ಮತ್ತು ಮಗಳು -ಇಷ್ಟರ ಮಧ್ಯೆ ಈ ಕೃತಿಯ ಕೆಲಸ ಕುಂಠಿತವಾಗಿ ನಡೆದಿತ್ತು. ಮಗಳೂ ಚಿಕ್ಕವಳಾದ್ದರಿಂದ ಅವಳು ಬೇಸಿಗೆಯ ರಜೆಯಲ್ಲಿ ಊರಿಗೆ ಹೋಗಿದ್ದ ಒಂದು ತಿಂಗಳಲ್ಲಿ ಇದನ್ನು ಬರೆದೆ. ಮರುವರ್ಷ ಅದರ ತಿದ್ದುಪಡಿ. ಹೀಗೆ ವರ್ಷಗಳು ದಾಟಿದಾಗ ಕೊರೊನಾ ಬಂದು ಒಂದು ವರ್ಷದ ತಡೆಯೂ ಬಿತ್ತು. ಅಂತೂ ಇದಕ್ಕೆ ಇನ್ನಷ್ಟು ವಿಷಯಗಳು ಸೇರಿಕೊಂಡು ಇದೀಗ ಕೃತಿ ರೂಪು ತಳೆದಿದೆ.

ಲೀಲಮ್ಮ ಬಹಳ ನಿಗರ್ವಿ. ಗಗನದೆತ್ತರಕ್ಕೆ ಸಾಧನೆ ಮಾಡಿದ ಬಳಿಕವೂ ತನ್ನದು ತೃಣಸಮಾನ ಎಂಬಂತಹ ವಿನೀತತೆ ಅವರದು. ಅದಕ್ಕೇ ತನ್ನ ಗೆಲುವಿನ ಬಗೆಗೆ ಹೆಚ್ಚು ಹೇಳಿದವರಲ್ಲ, ನೋವುಗಳನ್ನು ಬಿಚ್ಚಿಟ್ಟವರೂ ಅಲ್ಲ. ‘ಶೇಣಿಯವರು ಹೊಗಳಿದಾಗ ತುಂಬಾ ಖುಷಿಯಾಯಿತು’ ಎಂದರಷ್ಟೇ ವಿನಃ ತನ್ನ ಮನಸಿನೊಳಗೇನು ಭಾವನೆ ಮೂಡಿತು ಎಂದು ಹೆಚ್ಚು ವಿವರಿಸಿದವರು ಅವರಲ್ಲ. ಪತಿ ಸದಾ ಜತೆಗೇ ಇದ್ದರೂ ಯಾರ ನೋಟ ಇರಿಯಿತೋ, ಯಾರ ಮಾತು ಎದೆಗಿಳಿಯತೋ ಯಾವುದನ್ನೂ ಅವರು ವಿವರವಾಗಿ ಹೇಳಿದವರೇ ಅಲ್ಲ. ಹೀಗಾಗಿಯೇ ಎಲ್ಲ ಹೇಳಿದರೂ ಇನ್ನಷ್ಟು ಅವರಲ್ಲಿ ಉಳಿದಿದೆಯೇನೋ ಎಂಬ ಭಾವ ನನ್ನನ್ನೂ ಕಾಡಿದ್ದುಂಟು.

ಸದಾ ಚಿಪ್ಪಿನೊಳಗೆ ಅಡಗಿದಂತೆ ಮುದುರಿಕೊಳ್ಳುವ ಲೀಲಮ್ಮ ಈ ಕೃತಿ ರಚನೆಗೆ ಅನುಮತಿ ಕೊಟ್ಟು ತಮ್ಮ ವಿಷಯಗಳನ್ನು ಹಂಚಿಕೊಂಡುದು ಸಂತೋಷವನ್ನೇ ನೀಡಿದೆ. ಅವರಿಗೆ ನಾನು ಮೊದಲು ಕೃತಜ್ಞತೆ ಸಲ್ಲಿಸುತ್ತೇನೆ. ಈ ಸಾಹಸಕ್ಕಿಳಿಯಲು ಕಾರಣಕರ್ತರಾದ ಅವಿನಾಶ್ ಬೈಪಾಡಿತ್ತಾಯರಿಗೂ ಧನ್ಯವಾದ. ಮಹತ್ವದ ವಿಷಯಗಳನ್ನು ನೆನಪಿಸಿಕೊಟ್ಟು ಕಥನ ಸಾಧ್ಯವಾದಷ್ಟು ಹೆಚ್ಚು ವಿವರದಿಂದ ಕೂಡಲು ನೆರವಾದ ಹಿರಿಯ ಮದ್ದಳೆಗಾರರಾದ, ಲೀಲಮ್ಮನವರ ಪತಿ ಹರಿನಾರಾಯಣ ಬೈಪಾಡಿತ್ತಾಯರಿಗೆ ಋಣಿ. ಸ್ತ್ರೀಯೊಬ್ಬಳು ಅಂತಹ ಪರಿಸರದಲ್ಲಿ ಈ ಬಗೆಯ ಸಾಧನೆಯ ಮಾಡುವಲ್ಲಿ ಕಾರಣಕರ್ತರಾಗಿ ಬೆನ್ನೆಲುಬಾಗಿ ನಿಂತ ಅವರಿಗೆ ಒಬ್ಬ ಮಹಿಳೆಯಾಗಿಯೂ ನನ್ನ ನಮನ. ಇಂತಹ ಪುರುಷರ ಸಂಖ್ಯೆ ಸಾಸಿರವಾಗಲಿ.

ಇದಲ್ಲದೆ ಈ ಕುರಿತ ಮಾಹಿತಿಗಳ ಸಂಗ್ರಹಣೆಯಲ್ಲಿ ಪೂರಕ ಮಾಹಿತಿಗಳನ್ನಿತ್ತ ಲೀಲಮ್ಮನವರ ಕುಟುಂಬ ವರ್ಗಕ್ಕೆ, ಅವರ ತವರಿನ ಬಂಧುವಾದ ಬಲರಾಮ್ ಭಟ್ ಅವರಿಗೆ ನನ್ನ ನಮನಗಳು. ಲೀಲಮ್ಮನ ನೆನಪುಗಳನ್ನು ಇನ್ನಷ್ಟು ಖಚಿತವಾಗಿಸುವ ನಿಟ್ಟಿನಲ್ಲಿ ತಮ್ಮ ನೆನಪುಗಳನ್ನು ಹಂಚಿಕೊಂಡ ತಾರಾನಾಥ ಬಲ್ಯಾಯ ವರ್ಕಾಡಿ, ದೇವದಾಸ್ ಈಶ್ವರಮಂಗಲ, ಲಕ್ಷ್ಮೀಶ ಅಮ್ಮಣ್ಣಾಯ, ರಮೇಶ್ ಬೇಗಾರ್, ಭುವನೇಶ್ವರಿ ಹೆಗಡೆ, ಚೇತನ ಸೋಮೇಶ್ವರ, ತಮ್ಮ ಪತ್ರಿಕೆ ‘ಕಣಿಪುರ’ದ ಮೂಲಕ ಲೀಲಾಹರಿನಾರಾಯಣ ಬೈಪಾಡಿತ್ತಾಯರ ಬಗೆಗೆ ಮತ್ತಷ್ಟು ವಿವರ ನೀಡಿದ ಎಂ.ನಾರಾಯಣ ಚಂಬಲ್ತಿಮಾರ್ ಅವರಿಗೆ ನಾನು ಕೃತಜ್ಞೆ. ಸೂಕ್ತ ಸಮಯದಲ್ಲಿ ತಮ್ಮ ಸಂಶೋಧನೆಯ ಬಗ್ಗೆ ಮಾಹಿತಿ ನೀಡಿದ ನಾಗವೇಣಿ ಮಂಚಿ ಹಾಗೂ ಕೃತಿಯನ್ನೊದಗಿಸಲು ಸಹಕರಿಸಿದ ಮಂಗಳೂರು ವಿವಿಯ ಯಕ್ಷಪೀಠದ ಡಾ.ಧನಂಜಯ ಕುಂಬ್ಳೆಯವರಿಗೆ, ಕೃತಿ ರಚನೆ ಸಂದರ್ಭದಲ್ಲಿ ಪೂರಕ ಸಲಹೆ ಇತ್ತ ಕೃಷ್ಣ ಭಟ್ ಅಳದಂಗಡಿ ಅವರಿಗೆ ಧನ್ಯವಾದ.

ತಾಳಮದ್ದಳೆ ಕ್ಷೇತ್ರದಲ್ಲಿ ಕೃಷಿ ಮಾಡಿದ, ಲೀಲಮ್ಮನವರ ಮೊದಲ ತಾಳಮದ್ದಳೆಯನ್ನು ಆಯೋಜಿಸಿದ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅವರು ತಮ್ಮ ಮುನ್ನುಡಿಯ ಮೂಲಕ ಕೃತಿಗೆ ಇನ್ನಷ್ಟು ಘನತೆ ತಂದಿದ್ದಾರೆ. ಬೆನ್ನುಡಿಯ ಮೂಲಕ ವಿದ್ವಾನ್ ಉಮಾಕಾಂತ ಭಟ್ಟ, ಕೆರೇಕೈ ಕೃತಿಗೆ ಮೆರುಗನ್ನಿತ್ತಿದ್ದಾರೆ. ಈ ಇಬ್ಬರೂ ಹಿರಿಯರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ.

ಈ ಕೃತಿ ರಚನೆಯ ದಾರಿಯಲ್ಲಿದ್ದಾಗಲೇ ಆಸಕ್ತಿ ವಹಿಸಿ ‘ಬೇಗ ಮುಗಿಸಿ’ ಎಂದು ಆಗಾಗ ಒತ್ತಡ ಹಾಕುತ್ತ ತಾವೇ ಪ್ರಕಟಣೆಗೆ ಮುಂದಾದ ಅಭಿನವ ರವಿಕುಮಾರ್ ಮತ್ತು ಕವಿಯತ್ರಿ ಪಿ. ಚಂದ್ರಿಕಾ, ಅಭಿನವ ಬೆಳ್ಳಿ ಬೆಡಗು ಮಾಲಿಕೆಯಲ್ಲಿ ಈ ಪುಸ್ತಕವನ್ನು ಪ್ರಕಟಿಸಲು ಸೂಚಿಸಿದ ಬಹುಮುಖಿ ಚಿಂತಕರಾದ ನರಹಳ್ಳಿ ಬಾಲಸುಬ್ರಹ್ಮಣ್ಯ, ವಿಮರ್ಶಕ ವಿಕ್ರಮ ವಿಸಾಜಿ ಅವರಿಗೆ ವಂದೇ. ಚೆಂದದ ಮುಖಪುಟ ರೂಪಿಸಿದ ಕಲಾವಿದ ಸಂತೋಷ್ ಸಸಿಹಿತ್ಲು ಅವರಿಗೆ ಧನ್ಯವಾದ. ಮುಖಪುಟಕ್ಕೆ ಲೀಲಮ್ಮನ ಚೆಂದದ ಚಿತ್ರ ಕೊಟ್ಟ ಸುಧಾಕರ ಜೈನ್ ಹೊಸಬೆಟ್ಟುಗುತ್ತು ಅವರಿಗೆ ನಮನ.

ಬಾಲ್ಯದಲ್ಲಿ ಯಕ್ಷಗಾನ, ತಾಳಮದ್ದಳೆಗಳಿಗೆ ಕರೆದುಕೊಂಡು ಹೋಗಿ, ಚೌಕಿಯೊಳಗೂ ಕರೆದೊಯ್ದು ಶೇಣಿ ಗೋಪಾಲಕೃಷ್ಣ ಭಟ್ಟರಂತಹ ದಿಗ್ಗಜರನ್ನು ತೋರಿಸಿ ಯಕ್ಷಜಗತ್ತನ್ನು ನನ್ನ ಮುಂದೆ ತೆರೆದಿಟ್ಟ ಅಪ್ಪನನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ. ಇದಲ್ಲದೆ, ನನಗೆ ಸದಾ ಬೆಂಬಲವಾಗಿರುವ `ವಿಜಯ ಕರ್ನಾಟಕ’ ಪತ್ರಿಕೆಯ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆಯವರು, ನನ್ನ ಸಹೋದ್ಯೋಗಿಗಳು, ಬಾಲ್ಯದಲ್ಲೇ ಯಕ್ಷಗಾನ ವೇಷ ಹಾಕಿ ಆ ಜಗತ್ತಿನತ್ತ ನನ್ನ ಸೆಳೆದ ಅಣ್ಣಂದಿರು, ಪತಿ ಪರಮೇಶ್ವರ, ನನಗೆ ಸದಾ ಒಳಿತನ್ನು ಹಾರೈಸುತ್ತಾ ಪೊರೆಯುತ್ತಿರುವ ಅಮ್ಮ, ಕೃತಿ ರಚನೆಯ ಸಂದರ್ಭದಲ್ಲಿ ನಾನು ಹೋದಲ್ಲೆಲ್ಲ ಜೊತೆಗಿದ್ದ ಮಗಳು ಬೆಳಕು.

ಹಾಗೂ

ಓದಲಿರುವ ನೀವು…

ಎಲ್ಲರಿಗೂ ನನ್ನ ನೆನಕೆಗಳು.

‍ಲೇಖಕರು Admin

6 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading