ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊರಗೂ ಮಳೆ. . .ಒಳಗೂ ಮಳೆ

ಅವರು ಆಗಾಗ ಕಣ್ಣೋರೆಸಿಕೊಳ್ಳುತ್ತಿದ್ದರು. ತುಂಬು ಬದುಕನ್ನು ಬದುಕಿದ ಕಿನ್ನರಿಯಂತೆ ಕಾಣುತ್ತಿದ್ದ ಅವರ ಕಣ್ಣುಗಳನ್ನು ಅದೇ ಮೊದಲು ನೋಡುತ್ತಿದ್ದರೂ ಅವರ ಕಣ್ಣುಗಳಲ್ಲಿ ಹೊಳಪಿನ ಕೊರತೆಯಾಗಿರಬಹುದಾ ಎನ್ನುವ ಅನುಮಾನಗಳು ಮಿನುಗುತ್ತಿದ್ದವು. ಮೈ ಮುದುಡಿ ಕೂತಿದ್ದ ಆ ಹೆಂಗಸಿನ ಮುಂಗೈ ಸ್ಪರ್ಶಿಸುತ್ತಲೇ ಒದ್ದೆಯಾಗದ ಎರಡೂ ಕಣ್ಣುಗಳನ್ನು ಒರೆಸುತ್ತಿತ್ತು. ಕುದಿ ಸಾಲದೆ ಅರ್ಧ ಬೆಂದ ಒಲೆಯ ಮೇಲಿನ ತರಾಕರಿಯಂತೆ,  ಎದುರು ಕಣ್ಣೊರಿಸಿಕೊಳ್ಳುತ್ತಿದ್ದ ಹೆಂಗಸನ್ನು ಅರ್ಧಂಬರ್ಧ ಅರ್ಥೈಸಿಕೊಂಡು ನಿರ್ಣಯಕ್ಕೆ ಬರಲಾಗದೇ ನಿಂತಿದ್ದ ನಾನು ಒಳಗೇ ಒದ್ದಾಡುತ್ತಿದ್ದೆ. ಒಳಗಿನ ಸಂಕಟಕ್ಕೆ ಅನುಗುಣವಾಗಿ ಮಳೆ ಧೋ ಎನ್ನುತ್ತಿತ್ತು.

ಜೋರುಮಳೆಗೆ ಚಾರ್ಮಾಡಿ ಘಾಟು ನಿಧಾನವಾಗಿ ಕುಸಿಯುತ್ತಿದ್ದ ಸುದ್ದಿಗಳು ಬರುತ್ತಲೇ ಇದ್ದವು. ಸೂರ್ಯನನ್ನು ಬೆದರಿಸಿ ಅಟ್ಟಿದ ಠೀವಿಯಲ್ಲಿ ಚಂದ್ರ ಆಕಾಶವನ್ನು ಆವರಿಸಿಕೊಳ್ಳುತ್ತಿದ್ದ. ಕತ್ತಲು ಬೆಳಕನ್ನು ನುಂಗಿಕೊಂಡಿತ್ತೋ ಅಥವಾ ಬೆಳಕೇ ಕತ್ತಲಿಗೆ ಅರ್ಪಿಸಿಕೊಂಡಿತ್ತೋ ಅಂತೂ ಕತ್ತಲಾಗುತ್ತಿತ್ತು. ಹೊರಗೆ ಮಳೆ ಸುರಿಯುತ್ತಲೇ ಇತ್ತು. ಇವರು ಅಳುತ್ತಲೇ ಇದ್ದರು. ಸಣ್ಣ ಪೆಟ್ಟಿಗೆ ಅಂಗಡಿಯಲ್ಲಿ ಟೀ, ಬಾಳೆಹಣ್ಣು, ಚಿಲ್ಲರೆ ಇಲ್ಲದೆಹೋದಾಗ ಎಂಟಾಣೆ ಚಾಕ್ಲೆಟ್ ನೀಡುತ್ತಾ ಬದುಕಿದ್ದ ತುಂಬಿದ ಹೆಂಗಸು ಸದ್ದಾಗದಂತೆ ಅಳುವಾಗ, ಅವರ ಪುಟಾಣಿ ಮಗಳು ಗರಿಯ ಮರೆಯಲ್ಲಿ ನೆನೆಯದೇ ನಿಂತುಕೊಂಡಿದ್ದಳು.

ಚಾರ್ಮಾಡಿ ಘಾಟಿಯನ್ನು ಇಳಿದುಹೋಗುವ ಮೊದಲು ಒಂದು ಸಣ್ಣ ಟೀ ಕುಡಿಯುವ ಮನಸಾಗಿ ಇಳಿದುಕೊಂಡಿದ್ದು. ಮಳೆ ಜಪ್ಪಿ ಬರುವಾಗ, ದೂರದಲ್ಲಿ ಬರುತ್ತಿದ್ದವರು ಕಾರಿನ ಕಿಟಕಿಯನ್ನು ಕೆಳಗಿಳಿಸಿ ಕೂಗಿ ಹೇಳುತ್ತಲೇ ಇದ್ದರು. “ಸಾರ್ ಅಲ್ಲಿ ಹೋಗ್‍ಬೇಡಿ, ಮರಬಿದ್ದಿದೆ, ಗುಡ್ಡ ಕುಸಿದಿದೆ” ಎನ್ನುತ್ತಿದ್ದರು. ಬೆಂಗಳೂರಿಗೆ ಬಂದು ದೇಶದ ಎಲ್ಲಾ ವಿವವರಗಳಿಗೂ ಸಮಸ್ಯೆ ರೂಪಗಳನ್ನು ಆರೋಪಿಸಿ ನ್ಯೂಸ್ ಸ್ಕ್ರಿಪ್ಟ್ ಬರೆಯುವುದು ಬೋರು ಬೋರು ಎನಿಸಿತ್ತು. ಕಣ್ಣಿಗಿಳಿದಿದ್ದ ಹಸಿರು ಮಲೆಗಳ ಚಂದ ಅಪೂರ್ಣವೆನಿಸಿತ್ತು.

ಒಂದೆರಡು ದಿನಗಳ ರಜಾವನ್ನು ವಿಸ್ತರಿಸಿದ್ದೆ. ಎಲ್ಲಿಂದ ಪ್ರಯಾಣ ಆರಂಭಿಸಿದ್ದೆ ಎನ್ನುವುದಷ್ಟೇ ಗೊತ್ತಿತ್ತು, ಹೊರಡುತ್ತಿರುವುದು, ಹೊರಬೇಕಾಗಿರುವುದು ಯಾವುದು ಸ್ಥಿಮಿತದಲ್ಲಿರಲಿಲ್ಲ. ಹೀಗೆ ಹೊರಡುತ್ತಿದ್ದಾಗಲೇ ಮದವೇರಿದ್ದು ಇಳಿಯಬೇಕು ಎನ್ನುವಂತೆ, ಸಂಪಾಂಜೆಯನ್ನು ತಪ್ಪಿಸಿಕೊಳ್ಳಲು ಸಕಲೇಶಪುರದಿಂದ ಚಾರ್ಮಾಡಿ ಘಾಟಿ ಏರಿದ ನಾನು ಸಿಕ್ಕಿಬಿದ್ದಿದ್ದೆ. ಅಡ್ಡಲಾಗಿ ಸುರಿಯುತ್ತಿದ್ದ ಮಳೆಗೆ ತೊಟ್ಟಿದ್ದ ಟೀ ಶರ್ಟು ಒಂದು ದಿಕ್ಕಿಗಷ್ಟೇ ಒದ್ದೆಯಾಗಿತ್ತು. ಉಳಿದದ್ದೂ ಒದ್ದೆಯಾಗುವ ಮೊದಲು ನಾಲ್ಕು ಒಣಗಿದ ಗರಿಗಳನ್ನು ನಾಲ್ಕೇ ಕಂಬಗಳ ಎದೆಯ ಮೇಲೇರಿಸಿಕೊಂಡು ಛಾವಣಿಯಂತೆ ಸಣ್ಣ ಪೆಟ್ಟಿಗೆ ಅಂಗಡಿಯ ಎದುರು ನಿಂತಿದ್ದೆ.

ಟೀ ಕುಡಿದು ಹೊರಡಬೇಕು ಎಂದುಕೊಂಡರು, ಮಳೆ ಅನುವು ಮಾಡಿಕೊಡಲು ಮನಸ್ಸು ಮಾಡುವ ಉದಾರ ಸ್ಥಿತಿಯಲ್ಲಿರಲಿಲ್ಲ. ಗುಡ್ಡ ಜಾರುತ್ತಲೇ ಇತ್ತು. ಪೆಟ್ಟಿಗೆ ಅಂಗಡಿಯ ಹೆಂಗಸು, ಸಣ್ಣ ಪ್ರಯಾದ ಹುಡುಗ ಮಳೆ ನಿಂತರೆ ಪಕ್ಕದ ರೋಡಿನಿಂದ ಹೊಗಬಹುದು ಎಂದು ಮಾತು ಆರಂಭಿಸಿದರು. ಆಕೆ ಮಗಳು ಮಾತ್ರ ರೆಕ್ಕೆಗಳನ್ನು ಒದ್ದೆಯಾಗಿಸಿಕೊಂಡರೆ ಹೂವಿಂದ ಹೂವಿಗೆ ಹಾರುವಾಗ ಅಯಾಸಗೊಳ್ಳುವ ಚಿಟ್ಟೆಯಂತೆ ಗರಿಯ ಕೆಳಗೇ ನಿಂತಿದ್ದಳು.

ಹೆಸರು, ಊರು, ಕೆಲಸ, ಸಂಬಳ, ಹವ್ಯಾಸ ಹಾಗೂ ಉಳಿದ ಹುಚ್ಚಿನ ಮಾತುಗಳು, ಟೀ ಕುಡಿಯುವುದರೊಳಗೆ ಮುಗಿದುಹೋಗಿದ್ದವು. ಮನುಷ್ಯ ಮಾತುಗಳು ಮುಗಿದುಹೋದಾಗ ತನ್ನ ಗತಕಾಲದ ಕಷ್ಟಗಳ ಬಗ್ಗೆ ಮಾತನಾಡುತ್ತಾನಂತೆ. ಆರಿಸ್ಟಾಟಲ್ ಹೇಳಿದ ಮಾತು ಪುನಾರರ್ವತನೆಯಾಗಿತ್ತು. ಪೆಟ್ಟಿಗೆ ಅಂಗಡಿಯೊಳಗೆ ಸಣ್ಣ ಸೀಮೆ ಎಣ್ಣೆಯ ಸ್ಟೌವ್ ಎದುರು ನಿಂತು ಮೈಕಾಯಿಸಿಕೊಳ್ಳುತ್ತಿದ್ದ ಹೆಂಗಸು ಮಾತಿನ ಹೆಂಗಸು ಎನಿಸಿತ್ತು. ಕೇಳಿದ ಒಂದು ಪ್ರಶ್ನೆಗೆ ಸಾಕೆನ್ನುವಷ್ಟು ಉತ್ತರ ನೀಡುತ್ತಿದ್ದರು.

ಗರಿಯ ಮರೆಯಲ್ಲಿದ್ದ ಎಳೆಯ ಮಗಳನ್ನು ಎಳೆದು ತೊಡೆಯ ಮೇಲೆ ಕೂರಿಸಿಕೊಳ್ಳಲು ಹೆಣಗಾಡುತ್ತಲೇ, ಇವಳೊಬ್ಬಳು ಇರಲಿಲ್ಲ ಎಂದರೆ ನಾನೂ ಇರುತ್ತಿರಲಿಲ್ಲ, ಈ ಅಂಗಡಿಯೂ ಇರುತ್ತಿರಲಿಲ್ಲ ಎಂದರು. ಟೀ ಮಗಿಸಿದ ಗಾಜಿನ ಲೋಟವನ್ನು ಎದುರಿಟ್ಟು ಅವರನ್ನೇ ಅದು ಏನು? ಎನ್ನುವಂತೆ ನೋಡಿ ಮತ್ತೊಂದು ಪ್ರಶ್ನೆಗೆ ಅಣಿಯಾಗುವಷ್ಟರಲ್ಲಿ, ನಮ್ಮ ಯಜಮಾನ್ರು ಈ ಅಂಗಡಿ ಹಾಕಿದ್ದೆ ಮಗಳು ಹುಟ್ಟಿದ ಮೇಲೆ ಎಂದರು.
ಟಪ್ ಟಪ್ ಟಪ್ ಎಂದು ಬೀಳುತ್ತಲೇ ಇದ್ದ ಮಳೆಯಂತೆ ಇದ್ದ ಅಷ್ಟೇ ಸಣ್ಣ ಅಂಗಡಿಯ ಅಂಗಳದಲ್ಲಿ ಬಯಲಿನಂತೆ

ಓಡಾಡುತ್ತಿದ್ದ ಪುಟ್ಟ ಪಾದದ ದೇವರಿನಂತ ಮಗಳು, ಹೆತ್ತವರಿಗೂ ದೇವರಾಗಿದ್ದಳು.
ಇಪ್ಪತ್ತು ವರ್ಷಗಳ ಹಿಂದೆ ಮದುವೆಯಾಗಿ ಉಡುಪಿಯ ಪೆರಡೂರಿನಿಂದ ಓಡಿಬಂದವರು, ಸಕಲೇಶಪುರದಲ್ಲಿ ಹೊಟೇಲ್ ನಡೆಸಿ ಕೈ ಸುಟ್ಟುಕೊಂಡರಂತೆ. ಯಾವುದೋ ಬ್ರಾಹ್ಮಣರ ಹೊಟೇಲ್‍ನಲ್ಲಿ ಮಾಣಿಯಾಗಿದ್ದ ಈ ಹೆಂಗಸಿನ ಗಂಡ ಕೂಡಿಟ್ಟಿದ್ದ ದುಡ್ಡನ್ನೂ ಕಳೆದುಕೊಂಡ ಮೇಲೆ ಸಕಲೇಶಪುರದ ಹಳೆಯ ಅಂಗಡಿಯಲ್ಲಿ ದಿನಸಿ ಕಟ್ಟುತ್ತಾ ಒಂದಿಷ್ಟು ವರ್ಷ ಕಳೆದಿದ್ದರಂತೆ. ದಿನಸಿ ಕಟ್ಟುವುದೇ ರೂಡಿಯಾಗಿ, ಕಲಿತಿದ್ದ ಅಡಿಗೆ ವಿದ್ಯೆಯನ್ನು ವಂಚಿಸಿಕೊಳ್ಳಲು ಇಷ್ಟವಾಗದೇ ಇದ್ದಾಗಲೇ ಚಾರ್ಮಾಡಿ ಘಾಟಿನ ಗುಡ್ಡದ ರಸ್ತೆಯಲ್ಲಿ ಟೀ ಅಂಗಡಿ ಹಾಕುವುದಕ್ಕೆ ಹೇಳಿದ್ದರಂತೆ.

ಅಂಗಡಿ ಹಾಕುವುದಕ್ಕೆ ಹಣವಿಲ್ಲದೆ ಕಳೆದ ವರ್ಷಗಳು ಸಾಕಷ್ಟಿವೆ. ಆದರೆ ಅಷ್ಟು ವರ್ಷಗಳು ಹೆಣಗಾಡಿದರೂ ಕೈಸಾಗದ ಅವರ ಕನಸು ಮಗಳು ಹುಟ್ಟಿದ ಎರಡೇ ತಿಂಗಳಿಗೆ ಸಾಧ್ಯವಾಗಿಹೋಗಿತ್ತು. ಅದೇ ಕಾರಣಕ್ಕೆ ಆಕೆಯ ಗಂಡ ಮಗಳನ್ನು ದೇವರು ಎನ್ನುತ್ತಾರಂತೆ. ಮಗಳು ಮನೆಯೊಳಗೆ ಪುಟ್ಟದಾದ ನುಣುಪು ಕಾಲುಗಳನ್ನು ಊರುತ್ತ ಪುಟಾಣಿ ದೇವರಂತೆ ಓಡಾಡುವಾಗ ಎಳೆದು ಅಪ್ಪಿ ಮುದ್ದಿಸುತ್ತಾನಂತೆ. ಇದನ್ನು ಹೇಳುತ್ತಲೇ ಸುರಿಯುವ ಮಳೆಗೆ ಒದ್ದೆಯಾಗದೆ ಅಂಡಿಯೊಳಗೆ ನಿಂತಿದ್ದ ಮಗಳನ್ನು ಎಳೆದು ತೊಡೆಯ ಮೇಲೆ ಎಳೆದುಕೊಳ್ಳಲು ಇವಳು ಹೆಣಗಾಡುತ್ತಿದ್ದಳು.

ಮದುವೆಯಾದ ನಂತರದ ಸಾಲು ಸಾಲು ವಿರೋಧಗಳಿಗೆ ಬೆನ್ನು ಮಾಡದೆ ಬದುಕಿಸಿಕೊಳ್ಳುತ್ತಿರುವ ಗಂಡನ ಕುರಿತು ಹೆಮ್ಮೆ ಎನ್ನುವಂತೆ ಮಾತನಾಡಿದರು. ಸಣ್ಣ ಪೆಟ್ಟಿಗೆ ಅಂಗಿಯೊಳಗೆ ಹರಿಸುತ್ತಿದ್ದ ಜೀವನಪ್ರೀತಿ ಈ ಜನ್ಮಕ್ಕೆ ಸಾಕು ಎನ್ನುವಷ್ಟಿತ್ತು.

ಇದೊಂದು ಪೆಟ್ಟಿಗೆ ಬದುಕಿಗೆ ಸಾಕು ಎನಿಸಿದೆಯಾ?
ಸಾಕು ಸಾರ್. ಗಂಡ ಇದಾರೆ ಅಲ್ವಾ. ನಾನು ಬಯಸಿದ್ದು ಅವರನ್ನ ಮಾತ್ರ. ಒಂದು ಬಾಳೆಹಣ್ಣು ಸಿಕ್ಕರು ಮನೆಗೆ ತಂದು ತಿನ್ನುತ್ತಾರೆ. ಮಾತಿನಲ್ಲಿ ಗತ್ತು ಎನ್ನುವುದು ಹೊರಗೆ ಕಾಣುತ್ತಿತ್ತು.
ಅಷ್ಟೇ ಅಲ್ವಾ ನಿಮಗೂ ಬೇಕಿರೋದು. ಎಂದೆ

ಅಷ್ಟೇ ಸಾರ್. ಮಗಳಿದ್ದಾಳೆ. ಒಂದೇ ವಾರ ಇಬ್ಬರು ಇಷ್ಟಪಟ್ಟಿದ್ದು. ಮದುವೆ ಆಗೋಯ್ತು. ಮನೆಯವರು ಒಪ್ಪಲಿಲ್ಲ. ನಾವು ಮದುವೆಯಾದ ಮೇಲೆ, ನಮ್ಮ ಮನೆಯಲ್ಲಿ ನನ್ನ ಫೋಟೋ ತಿದ್ದಿಸಿ ನಮ್ಮ ಸತ್ತ ಹಿರಿಕರ ಫೋಟೋಗಳ ಜತೆ ಗೋಡೆಗೆ ಹಾಕಿದಾರಂತೆ ಎಂದು ಕಣ್ಣೊರೆಸಿಕೊಂಡರು. ಪೆರಡೂರು ನೋಡಿ ಹೆಚ್ಚುಕಮ್ಮಿ ಇಪ್ಪತ್ತು ವರ್ಷವೇ ಆಯ್ತು ಏನ್ಮಾಡೋದು! ಎಂದರು.

ಮಗಳಿದಾಳೆ. ಇಷ್ಟದ ಗಂಡ ಇದಾರೆ, ಅಷ್ಟು ಸಾಕು ಬಿಡಿ ಎಂದೆ. ಪುಟ್ಟ ದೇವರಿನಂತ ಅವರ ಮಗಳು ನನ್ನನ್ನೇ ನೋಡುತ್ತಿದ್ದಳು, ಅವರು ಸಾಕು ಎನ್ನುವಂತೆ ನಕ್ಕು ಸುಮ್ಮನಾದರು.
ನೀವು ಆವತ್ತಿಗೆ ಹೀಗೆ ಓಡಿ ಬಂದು ಮದುವೆಯಾಗಿದ್ದು ನಿಮಗೆ ಸರಿ ಎನಿಸಿದೆಯಾ? ನನ್ನ ಒಳಗಿನ ಅನಿವಾರ್ಯ ಪ್ರಶ್ನೆಗೆ ಅವರಲ್ಲಿ ಉತ್ತರ ಕಂಡುಕೊಳ್ಳುವ ಹುಂಬತನದಲ್ಲಿ ಕೇಳಿದೆ.

ನಾನು ಆವತ್ತು ನನ್ನ ಗಂಡನೇ ಬೇಕು ಅಂತ ಬಂದಿದ್ದು ಒಳ್ಳೆಯದಾಯ್ತು. ನಾವು ಮದುವೆಯಾಗಿ ನಾಲ್ಕೈದು ವರ್ಷಕ್ಕೆ ನನ್ನ ಅಪ್ಪ ನಮ್ಮ ಸಕಲೇಶಪುರದ ಮನೆಗೆ ಬಂದಿದ್ದರು. ಗಂಡನನ್ನ ಅಳಿಯ ಅಂತಲೇ ಮಾತಾಡಿಸಿದ್ದರು. ಆಗ ಇವಳು ಒಂದು ವರ್ಷದವಳು. ಎಲ್ಲವೂ ಸರಿಯಾಗೇ ಇತ್ತು. ಈಗ ಇಪ್ಪತ್ತು ವರ್ಷಗಳಾಗಿವೆ, ನಮ್ಮ ಮನೆಯವರು ಬಹುತೇಕ ಒಪ್ಪಿಕೊಂಡಿದ್ದಾರೆ, ಮಗಳು ರಜಾ ಬಂದಾಗ ಊರಿಗೆ ಹೋಗುತ್ತಾಳೆ. ಆವತ್ತು ನನ್ನ ಆ ನಿರ್ಧಾರದಿಂದ ಗಂಡ, ಮನೆಯವರು ಇಬ್ಬರೂ ಸಿಕ್ಕಿದ್ದಾರೆ. ಆದರೆ ನಾನು ಆವತ್ತು ನನ್ನ ಮನೆಯವರನ್ನು ಆಯ್ಕೆ ಮಾಡಿಕೊಂಡಿದ್ದರೆ ನನ್ನ ಇಪ್ಪತ್ತಲ್ಲಾ ನೂರು ವರ್ಷವಾದರೂ ಸಿಗುತ್ತಿರಲಿಲ್ಲ ಎಂದರು.
ನಾನು ಸುಮ್ಮನೇ ನಿಂತುಬಿಟ್ಟೆ.

ಅವರ ಉತ್ತರದಲ್ಲಿನ ಸರಿ ತಪ್ಪುಗಳನ್ನು ಹುಡುಕಲಿಲ್ಲ. ಅದರ ಅಗತ್ಯವೂ ನನಗೆ ಕಾಣಲಿಲ್ಲ. ಅಂದುಕೊಂಡ ಬದುಕನ್ನು ಧಕ್ಕಿಸಿಕೊಂಡು ಸಣ್ಣ ಪೆಟ್ಟಿಗೆ ಅಂಗಡಿಯ ಸಹಾಯದಿಂದ ಪುಟ್ಟದೇವರಿನಂತ ಮಗಳ ಜತೆ ಆಸ್ಥೆಯಿಂದ ಬದುಕುತ್ತಿದ್ದದ್ದು ದೊಡ್ಡದು ಎನಿಸಿತು.
ಅಮ್ಮನ ತೊಡೆಯ ಮೇಲೆ ಹೊರಳಾಡುತ್ತಿದ್ದ ಹುಡುಗಿಗೆ, “ನಿಮ್ಮ ಅಪ್ಪ ಎಲ್ಲಿ?”  ಎಂದು ಕೇಳಿದೆ.
ನಾಚಿಕೆಯಿಂದ ಆ ಕಡೆಗೆ ಅವಳ ಅಮ್ಮನ ಹೊಟ್ಟೆಗೆ ಜೋರಾಗಿ ಗುದ್ದಿದಳು. ಕಡೆಗೆ ಅವಳ ಅಮ್ಮನೇ, “ಇವತ್ತು ಸೋಮವಾರ ಅಲ್ವಾ, ಚೀಟಿ ಕಟ್ಟೋದಕ್ಕೆ ಸಕಲೇಶಪುರ ಹೋಗಿದಾರೆ” ಎಂದರು.

ಅವರು ಇದ್ದಿದ್ದರೆ ಅವರನ್ನು ಮಾತನಾಡಿಸಿ ಹೊರಡಬಹುದಿತ್ತು ಎಂದೆ. ಅವರು ನಗುತ್ತಲೇ ಹಳೆಯದನ್ನು ನೆನೆದು ಕಣ್ಣೊರೆಸಿಕೊಂಡರು.

ಹೊರಗೆ ಜೋರು ಮಳೆಯಾಗುತ್ತಿತ್ತು. . .ಕಿನ್ನರಿಯಂತ ಅವರ ಮಾತುಗಳು ಮುಗಿದ ಮೇಲೆ ಒಳಗೂ ಮಳೆಯಾಗಲು ಶುರುವಿಟ್ಟುಕೊಂಡಿತು.

‍ಲೇಖಕರು avadhi

22 October, 2018

ನಿಮಗೆ ಇವೂ ಇಷ್ಟವಾಗಬಹುದು…

4 Comments

  1. Sangeeta Kalmane

    “ಮನುಷ್ಯ ಮಾತುಗಳು ಮುಗಿದುಹೋದಾಗ ಗತಕಾಲದ ಕಷ್ಟಗಳ ಬಗ್ಗೆ ಮಾತನಾಡುತ್ತಾನಂತೆ”
    ಹಾಗೆ “ಮನುಷ್ಯ ವಯಸ್ಸಾದಂತೆ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾನಂತೆ” ಅಷ್ಟೇ ಸತ್ಯ ಅಲ್ಲವೇ?

    ಬರಹ ತುಂಬಾ ಇಷ್ಟವಾಯಿತು

    • sandeep eshanyan

      ಇರಬಹುದು. ಆದರೆ ನನಗೆ ಈಗ ಇಪ್ಪತ್ತೈದು ವಯಸ್ಸು ಅಷ್ಟೇ. . .ಇದೆಲ್ಲವೂ ಇತ್ತೀಚಿನ ನೆನಪುಗಳು. . ಊರೂರು ತಿರುಗುವಾಗ ಎದುರಾದ ದಿವ್ಯತ್ರಯರು ಅವರೆಲ್ಲ. . .

  2. Mangala

    ಎಂದಿನಂತೆ ನೀ ಬರೆಯುವುದು ಚೆಂದ

  3. Zubair Ahmed parappu

    ಉತ್ತಮವಾದ ಬರಹ…ಯಾಕೋ ತುಂಬಾ ಆಪ್ತವಾಯಿತೆ…ಒಳ್ಳೆದಾಗ್ಲಿ ತಮಿಗೆ….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading