ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಟ್ಟೆ ತುಂಬಾ ಊಟವಾದ ಮೇಲೆ ಕೇಳಬೇಕೆ. ಗಡದ್ದಾಗಿ ನಿದ್ರೆಗೆ ಜಾರಿದೆ..

ಕಾಣದ ಕಡಲಿಗೆ ಹಂಬಲಿಸಿದೆ ಮನ..

ಹೆಜ್ಜೆ 27

ರುದ್ರಪ್ಪನವರ ವಾತ್ಸಲ್ಯ

avadhi-column-rahul bw-edited2

ಬೆಳಗ್ಗೆ ಬೇಗನೇ ಎದ್ದ ನನಗೆ ಆ ದಿನದ ಉಪನ್ಯಾಸದ ಚಿಂತೆಯಾದರೆ, ಮಕ್ಕಳಿಗೆ ನನ್ನನ್ನು ಅಲ್ಲೇ ಉಳಿಸಿಕೊಳ್ಳುವ ಚಿಂತೆ. ಐದು ನಿಮಿಷಕ್ಕೊಮ್ಮೆ ಒಬ್ಬರಂತೆ ಬಂದು ಅದರ ಬಗ್ಗೆ ಚರ್ಚೆಮಾಡಿ ಹೋಗುತ್ತಿದ್ದರು. ನನಗು ಯಾಕೋ ಮಕ್ಕಳನ್ನು ಬಿಟ್ಟು ಹೊರಡಲು ಮನಸ್ಸು ಭಾರವಾಗಿತ್ತು. ಮಕ್ಕಳಿಗೆ ನನ್ನ ದೂರವಾಣಿ ಸಂಖ್ಯೆ ಮತ್ತು ವಿಳಾಸ ಕೊಟ್ಟು ಮುಂದಿನ ಶಾಲೆಗೆ ಹೊರಟೆ.

ಶಾಲೆಯಲ್ಲಿ ನಾನೂರರಿಂದ ಐನೂರು ವಿದ್ಯಾರ್ಥಿಗಳಿದ್ದರು. ಅವರನ್ನೆಲ್ಲಾ ಶಾಲೆಯ ಆವರಣದಲ್ಲಿ ಸೇರಿಸಿ, ಪ್ರಾರ್ಥನೆಯ ನಂತರ ನನ್ನ ಉಪನ್ಯಾಸ ಮುಗಿಸಿದೆ. ಇಲ್ಲೂ ಇದೇ ಕಥೆ. ಅದೇ ಆವರಣದಲ್ಲಿ ಕಾಲೇಜಿದೆ. ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಬೈಕುಗಳಲ್ಲಿ ಸದ್ದು ಮಾಡುತ್ತಾ ಅತ್ತಿಂದಿತ್ತ ಓಡಾಡುತ್ತಿದ್ದರು. ಕಾಲೇಜಿನ ವಿದ್ಯಾರ್ಥಿನಿಯರು ಬಣ್ಣ ಬಣ್ಣದ ಬಟ್ಟೆಗಳಲ್ಲಿ ಮಿಂಚುತ್ತಿದ್ದರು. ಇವೆಲ್ಲವನ್ನು ನೋಡಿ ಪ್ರೌಢಶಾಲಾ ವಿದ್ಯಾರ್ಥಿಗಳು ಶಿಸ್ತು ಹೇಗೆ ಕಲಿತಾರು? ಅವರನ್ನು avadhi- column- rahul- low res- editedಹಿಡಿದಿಟ್ಟುಕೊಂಡು ಉಪನ್ಯಾಸ ಮುಗಿಸುವಷ್ಟರಲ್ಲಿ ಸಾಕಾಗಿ ಹೋಯಿತು. ಪ್ರಶ್ನೆ ಕೇಳಿದರೆ ಎದ್ದು ನಿಂತು ಉತ್ತರವೇಳುವ ಧೈರ್ಯವಿಲ್ಲ. ನಾಟಕ ಮಾಡಲು ಕರೆದರೆ ಯಾರದೂ ಉಸಿರಿಲ್ಲ. ಇದು ಬಹುತೇಕ ಶಾಲೆಗಳ ಅವ್ಯವಸ್ಥೆ. ಇವುಗಳು ನಾವು ಕೊಡುತ್ತಿರುವ ಶಿಕ್ಷಣ ರೀತಿ-ನೀತಿಯನ್ನು ಎದ್ದು ತೋರಿಸುತ್ತದೆ.

ಅಲ್ಲಿಂದ ಹೊರಟು ಊರು ದಾಟುವ ಮುಂಚೆಯೇ ಯಾರೋ ಕರೆದಂತೆಯಾಯಿತು. ತಿರುಗಿ ನೋಡಿದರೆ ತನ್ನ ಅಂಗಡಿಯಲ್ಲಿ ಸೈಕಲ್ ರಿಪೇರಿ ಮಾಡುತ್ತಾ ಕುಳಿತಿದ್ದ ಸುಮಾರು ಅರವತ್ತರ ಮುಸಲ್ಮಾನ ವಯೋವೃದ್ಧನೊಬ್ಬ ನನ್ನನ್ನು ಕೈಬೀಸಿ ಕರೆಯುತ್ತಿದ್ದರು. ಹೋಗಿ ಮಾತನಾಡಿಸಿದರೆ ಅವರ ಹೆಸರು ಶಬ್ದುಲ್ಲಾ ಎಂದೂ ಅವರ ಮಕ್ಕಳೆಲ್ಲಾ ಒಳ್ಳೆಯ ಹುದ್ದೆಯಲ್ಲಿದ್ದು, ಅವರ ಮಗ ವಿದೇಶದಲ್ಲೂ ಕೆಲವು ವರ್ಷ ಕೆಲಸಮಾಡಿ ಈಗ ಬೆಂಗಳೂರಿನಲ್ಲಿ ವಾಸವಿರುವುದಾಗಿ ಹೇಳಿದರು.

ಆದರೂ ಅವರು ತಮ್ಮ ಮಕ್ಕಳ ಜೊತೆ ಇರದೆ, ತಾವೊಬ್ಬರೇ ತಾವು ಹುಟ್ಟಿ ಬೆಳೆದಿದ್ದ ಹಳ್ಳಿಗೆ ಬಂದು ಒಂದು ಪುಟ್ಟ ಕೋಣೆಯಲ್ಲಿ ಸೈಕಲ್ ರಿಪೇರಿ ಮಾಡಿಕೊಂಡು ಸ್ವಚ್ಛಂದ ಜೀವನ ನಡೆಸುತ್ತಿದ್ದಾರೆ. ಖುಷಿಯಾಗಿ ಸ್ವಲ್ಪ ಸಮಯ ಹಾಗೇ ಮಾತಾಡಿ ನಾನು ಮುಂದುವರಿದೆ. ನಾನು ಹೋದ ಕಡೆಯಲ್ಲೆಲ್ಲಾ ರೈಲ್ವೆ ಹಳಿಯು ನನ್ನನ್ನು ಹಿಂಬಾಲಿಸುತ್ತಿತ್ತು. ಐದು ಮೈಲು ನಡೆದು ಹುಚ್ಚಪ್ಪನಹಳ್ಳಿಯ ರೈಲ್ವೆ ಹಳಿಯನ್ನು ದಾಟುತ್ತಿದ್ದಂತೆ ಎಡಕ್ಕೆ “ಶ್ರೀಮತಿ ನಾಗಮ್ಮ ಕೇಶವಮೂರ್ತಿ ಗ್ರಾಮಾಂತರ ಪ್ರೌಢಶಾಲೆ”ಯನ್ನು ನೋಡಿದೆ.

ದಾರಿಯಲ್ಲೇ ಸಿಕ್ಕ ಈ ಶಾಲೆಗೂ ನುಗ್ಗಿ ಉಪನ್ಯಾಸ ಕೊಡುವ ಮನಸ್ಸಾಯಿತು. ಒಳಗೆ ಹೋದರೆ ಮುಖ್ಯೋಪಾಧ್ಯಾಯರು ಇರಲಿಲ್ಲ. ಸಹ ಶಿಕ್ಷಕರನ್ನು ಭೇಟಿ ಮಾಡಿ ಉಪನ್ಯಾಸಕ್ಕೆ ಒಪ್ಪಿಗೆ ಗಿಟ್ಟಿಸಿಕೊಂಡೆ. ತಕ್ಷಣವೇ ಮಕ್ಕಳನ್ನೆಲ್ಲಾ ಒಂದು ಕೊಠಡಿಗೆ ಸೇರಿಸಿ ಅನುವು ಮಾಡಿಕೊಟ್ಟರು. ಉಪನ್ಯಾಸ ಚೆನ್ನಾಗಿ ಆಯಿತು. ಕೊನೆಯಲ್ಲಿ ನನಗೆ ಶಾಲು ಹೊದಿಸಿ ಗೌರವಿಸಿದರು. ಉಪನ್ಯಾಸದಲ್ಲಿ ನನ್ನ ಪ್ರಶ್ನೆಗಳಿಗೆ ಉತ್ತರ ಹೇಳಿ, ನಾನು ತಂದಿದ್ದ ದಿನಪತ್ರಿಕೆಗಳನ್ನು ಚೆನ್ನಾಗಿ ಓದಿ ಸಹಕರಿಸಿದ ಹುಡುಗಿಯನ್ನು ಕರೆದು, ಶಾಲೆಯ ಶಿಕ್ಷಕರಿಂದ ಶಾಲು ಹೊದಿಸಿ ಗೌರವಿಸಿ ಮುಂದೆ ಒಳ್ಳೆಯ ವಿದ್ಯಾವಂತೆಯಾಗಿ, ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಂತೆ ಹೇಳಿದೆ. ಒಂದು ಪುಸ್ತಕ ತಂದು ನನ್ನ ಹಸ್ತಾಕ್ಷರ ಪಡೆದಳು. ಶಾಲೆಯಲ್ಲಿ ಊಟ ಮುಗಿಸಿ ಹೊರಟೆ.

ಶಾಲೆಯನ್ನು ಬಿಟ್ಟು ಒಂದೆರಡು ಮೈಲು ನಡೆದು ಬಸವಾಪುರದ ಸರ್ಕಾರಿ ಪ್ರೌಢಶಾಲೆಗೆ ಲಗ್ಗೆ ಇಟ್ಟೆ. ವಿಶಾಲ ಆವರಣ. ಮುಖ್ಯೋಪಾಧ್ಯಾಯರನ್ನು ಭೇಟಿಯಾದಾಗ ತರಗತಿಗಳು ಶುರುವಾಗಿವೆ ಎಂದು ಕಸಿವಿಸಿಗೊಂಡರು. ಆದರೂ ತರಗತಿಗಳಿಂದ ವಿದ್ಯಾರ್ಥಿಗಳನ್ನು ಹೊರಗೆ ಕರೆದು ಎರಡು ಮರಗಳ ಕೆಳಗೆ ಸೇರಿಸಿ ನನಗೆ ಅನುವು ಮಾಡಿಕೊಟ್ಟರು. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದ್ದರೂ ಏಕಾಗ್ರತೆಗೇನು ಕೊರತೆಯಿರಲ್ಲಿಲ್ಲ. ನಾನು ಹೇಳಿದ್ದನ್ನು ಚೆನ್ನಾಗಿ ಗ್ರಹಿಸಿಕೊಂಡರು. ಉಪನ್ಯಾಸದ ನಂತರ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ಚಹಾ ಕುಡಿಯುತ್ತಿದ್ದಾಗ, ಶಾಲೆಯ ಸಹ ಶಿಕ್ಷಕ ರವಿ ಮಾಸ್ಟರ್ ಬಂದು ಪರಿಚಯ ಮಾಡಿಕೊಂಡರು. ವಿಷಯವನ್ನು ತಿಳಿದು ಮುಂದಿನ ಊರಿನ ಒಂದು ಧ್ಯಾನ ಮಂದಿರದಲ್ಲಿ ನನಗೆ ವಾಸ್ತವ್ಯ ಕಲ್ಪಿಸಿದರು. ಅವರಿಗೆ ನಮಿಸಿ ಶಾಲೆಯಿಂದ ಹೊರಟೆ.

ಮೂರ್ನಾಲ್ಕು ಮೈಲು ನಡೆದರೆ ಎಡಕ್ಕೆ ಒಂದು ಅರ್ಧ ನೀರಿದ್ದ ದೊಡ್ಡ ಕೆರೆ ಕಾಣಿಸಿತು. ವಾತಾವರಣ ಚೆನ್ನಾಗಿದ್ದರಿಂದ ಕೆಳಗೆ ಇಳಿದು ಮುಖ ತೊಳೆದು, ರಸ್ತೆಗೆ ಕಾಣುವಂತೆ ಕೆರೆಯ ದಿಕ್ಕಿಗೆ ತಿರುಗಿ ಒಂದು ಕಟ್ಟೆಯ ಮೇಲೆ ಕುಳಿತು ವಾತಾವರಣವನ್ನು ಸವೆಯುತ್ತಾ, ಬ್ಯಾಗಿನಲ್ಲಿದ್ದ ಬಿಸ್ಕತ್ತು, ಬಾಳೆಹಣ್ಣು ತಿಂದು ಮುಗಿಸುವಷ್ಟರಲ್ಲಿ ಶಾಲೆಯಿಂದ ಚಿಕ್ಕಜಾಜೂರಿನ ಕಡೆಗೆ ಹೋಗುತ್ತಿದ್ದ ರವಿ ಮಾಸ್ಟರ್ ನನ್ನನ್ನು ಗುರುತಿಸಿ, ಓಶೋ ಧ್ಯಾನ ಮಂದಿರಕ್ಕೆ ಕರೆದುಕೊಂಡು ಹೋಗಿ ಬಿಟ್ಟರು.

ಅಲ್ಲಿ ನನಗೆ ಗುಲಾಬಿ ಹೂವನ್ನು ನೀಡಿ ಬಹಳ ಆತ್ಮೀಯವಾಗಿ ಬರಮಾಡಿಕೊಂಡವರ ಹೆಸರು ರುದ್ರಪ್ಪ ಎಂದು. ಹದಿನೈದು ವರ್ಷಗಳ ಹಿಂದೆಯೇ ಒಂದು ಅಪಘಾತದಲ್ಲಿ ತಮ್ಮ ಒಂದು ಕಾಲನ್ನು ಕಳೆದುಕೊಂಡು ಈಗ ಮರದ ಕಾಲಿನ ಸಹಾಯದಿಂದ ಲವಲವಿಕೆಯಿಂದ ಓಡಾಡುತ್ತಿದ್ದರು. 70ರ ಆಸುಪಾಸಿನಲ್ಲಿರುವ ಅವರು ನನ್ನನ್ನು ಅಪ್ಪಾಜಿ ಅಪ್ಪಾಜಿ ಎಂದು ಸಂಭೋದಿಸಿ ಬಹಳ ಅಕ್ಕರೆಯಿಂದ ಕಂಡರು. ಇನ್ನು ಆ ಧ್ಯಾನಮಂದಿರವನ್ನು ಸ್ಥಾಪಿಸಿದವರು ಶಿವರಾಜ್ ಎಂದು. ನನ್ನಷ್ಟೇ ವಯಸ್ಸಿರಬಹುದು. ನಾಳಿನ ರಾತ್ರಿ ಚಿಕ್ಕಜಾಜೂರಿನಲ್ಲಿ ತಮ್ಮ ಮನೆಗೇ ಬರುವಂತೆ ಆಮಂತ್ರಣವಿಟ್ಟ ರವಿ ಮಾಸ್ಟರ್ ಸ್ವಲ್ಪ ಹೊತ್ತು ಇದ್ದು ಹೊರಟರು.

ಸಂಜೆಯ ಸತ್ಸಂಗ ಶುರುವಾಯಿತು. ಮೊದಲು ಆಡಿಯೋ ಪ್ಲೇಯರ್‍ನಲ್ಲಿ ಒಂದೆರಡು ಸಂಗೀತ ತುಣುಕುಗಳನ್ನು ನುಡಿಸಿ, ಅದರ ತಾಳಕ್ಕೆ ತಕ್ಕಂತೆ ನಾವುಗಳು ಕಣ್ಣುಗಳನ್ನು ಮುಚ್ಚಿ, ಸುತ್ತಣ ಪರಿಸರವನ್ನು ಮರೆತು ಮನಸೋ ಇಚ್ಛೆ ಕುಣಿಯುವುದು. ಮೊದಮೊದಲು ನನಗೆ ಮುಜಗರವಾದರೂ, ಕೆಲವು ನಿಮಿಷಗಳ ನಂತರ ಸರಿಹೋಯಿತು. ಹತ್ತು ನಿಮಿಷಗಳು ಹಾಗೇ ಕುಣಿದ ನಂತರ, ಕಣ್ಣು ತೆರೆದೆರೆ ಮೈ ದಣಿದು ಏನೋ ಒಂದು ತರಹ ಉಲ್ಲಾಸ ಮೂಡುತ್ತದೆ. ನಂತರ ಧ್ಯಾನ.

ಇವರೆಲ್ಲಾ ಗುರು ಓಶೋರ ಅನುಯಾಯಿಗಳು. ಆರು ಎಕರೆ ಭೂಮಿಯಲ್ಲಿ ತೆಂಗು, ಅಡಿಕೆ, ತೇಗು, ಸಿಲ್ವರ್ ಓಕ್, ಇತರೆ ಬೆಳೆಗಳ ಹಚ್ಚ ಹಸಿರಿನ ಮಧ್ಯೆ ಇದ್ದ ಧ್ಯಾನ ಮಂದಿರವನ್ನು ಅತ್ಯಂತ ಸರಳತೆಯಿಂದ ಕಟ್ಟಿಸಿದ್ದರು. ರಾತ್ರಿಯ ಊಟಕ್ಕೆ ಸಜ್ಜಿಗೆ, ಅನ್ನ, ಸಾಂಬಾರು. ಒಂದು ವಾರದ ಹಿಂದೆ ಅಲ್ಲೇ ಬಂದು ನೆಲೆಸಿದ್ದ ಕೋಲಾರದ ನಲವತ್ತರ ಪ್ರಾಯದವನೊಬ್ಬನ ಪರಿಚಯವಾಯಿತು. ಹೆಸರು ಮಹೇಶ್. ಊಟದ ಸಮಯದಲ್ಲಿ ಅವನ ಕಥೆ ಕೇಳಿದ್ದಾಯಿತು.

ಯಾವ ಕೆಲಸದಲ್ಲೂ ನೈಪುಣ್ಯತೆ ಪಡೆಯದೆ, ಅಲ್ಲಿ ಇಲ್ಲಿ ಆಧ್ಯಾತ್ಮ ಎಂದು ಅಲೆದಾಡಿ, ಮದುವೆಯಾಗದೆ, ಐದಾರು ವರ್ಷಗಳಿಂದ ಮನೋರೋಗಕ್ಕೆ ಔಷಧಿ ಗುಳಿಗೆ ಸೇವಿಸುತ್ತಿರುವ ಮನೋ ರೋಗಿ. ರಾತ್ರಿ ಹತ್ತರ ತನಕ, ರುದ್ರಪ್ಪನವರು ನಮಗೆ ಸಾಥ್‍ಕೊಟ್ಟರು. ನಂತರ ಮಹೇಶನ ಜೀವನದ ಬಗ್ಗೆ ನನ್ನ ಕುತೂಹಲ ಶುರುವಾಯಿತು. ಮಹೇಶನಿಗೆ ಏನು ಬೇಕೆಂಬುದು ಅವನಿಗೇ ತಿಳಿಯದು. ಊರಿನಲ್ಲಿ ಇರಲಾಗದೆ ಇಲ್ಲಿ ಬಂದು ನೆಲೆಸಿದ್ದಾನೆ. ಇನ್ನೂ ಸ್ವಲ್ಪ ಸಯಯ ಅವನ ಜೊತೆ ಮಾತನಾಡಿದ್ದರೆ, ಅವನ ಜೊತೆ ನನ್ನನ್ನೂ ಹುಚ್ಚಾಸ್ಪತ್ರೆಗೆ ಸೇರಿಸಬೇಕಾಗಿತ್ತು. ಕೋಣೆಗೆ ಹೋಗಿ ಮಲಗಿದರೆ, ಕೊರೆಯುವ ಚಳಿಯಿಂದ ಹಾಗೂ ಪ್ರಾಣಿ ಪಕ್ಷಿಗಳ ಸದ್ದಿನಿಂದ ನನಗೆ ಸರಿಯಾಗಿ ನಿದ್ರೆ ಹತ್ತಲಿಲ್ಲ.

ಬೆಳಿಗ್ಗೆ ಬೇಗ ಎದ್ದು, ವ್ಯಾಯಾಮ ಮುಗಿಸಿ, ಚಹಾ ಕುಡಿದು, ನನಗಾಗಿ ಬಿಸಿನೀರು ಕಾಯಿಸುತ್ತಿದ್ದುದ್ದನ್ನು ನಿಲ್ಲಿಸಿ ತಣ್ಣೀರಿನಲ್ಲೆ ಸ್ನಾನ ಮುಗಿಸಿದೆ. ನಂತರ ತಿಂಡಿಗೆ ಉಪ್ಪಿಟ್ಟಿನ ಸತ್ಕಾರವಾಯಿತು. ನಾನು ಹೊರಡಲು ಸಿದ್ಧನಾದೆ. ಗುಲಾಬಿ ಹೂ, ಓಶೋರ ಆಧ್ಯಾತ್ಮ ಪುಸ್ತಕಗಳನ್ನು ಕೊಟ್ಟು ಬೀಳ್ಕೊಟ್ಟರು. ಬ್ಯಾಗಿನಲ್ಲಿ ವಿವೇಕಾನಂದರ ಪುಸ್ತಕಗಳೂ ಇದ್ದ ಕಾರಣ ಅದರ ತೂಕವೇ ಜಾಸ್ತಿಯಾಗಿತ್ತು. ಇನ್ನು ಈ ಪುಸ್ತಕಗಳನ್ನು ಹೇಗೆ ಒಯ್ಯುವುದು ಎಂದು ಯೋಚಿಸುತ್ತಿದ್ದಾಗಲೇ ಒಂದು ಉಪಾಯ ಹೊಳೆಯಿತು. ಹೇಗಿದ್ದರೂ ಶಿವರಾಜ್ ಮೈಸೂರಿಗೆ ಧ್ಯಾನ ಶಿಬಿರದಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದರು. ಅವರ ಒಪ್ಪಿಗೆ ಪಡೆದು ಈ ಪುಸ್ತಕಗಳನ್ನು ಮೈಸೂರಿನಲ್ಲಿ ನಮ್ಮ ಮನೆಯವರಿಗೆ ತಲುಪಿಸುವಂತೆ ಕೋರಿಕೆಯಿಟ್ಟು ನಿರಾಳನಾದೆ.

microphoneರುದ್ರಪ್ಪನವರಿಗೆ ನನ್ನ ಉಪನ್ಯಾಸವನ್ನು ಕೇಳುವ ಹಂಬಲವಿತ್ತು. ಹಾಗಾಗಿ ನನ್ನ ಬ್ಯಾಗನ್ನು ಒಯ್ದು ಶಾಲೆಯ ಹತ್ತಿರ ನನಗಾಗಿ ಕಾಯುತ್ತಿದ್ದರು. ನಾನು ಮತ್ತು ಶಿವರಾಜ್ ಲೋಕಾರೂಢಿ ಮಾತಾಡಿಕೊಂಡು, ಒಂದು ಮೈಲು ನಡೆದು ಮುತ್ತಗದೂರಿನ ಶ್ರೀ ಎಲ್.ಸಿದ್ಧಪ್ಪ ಸ್ಮಾರಕ ಪ್ರೌಢಶಾಲೆ ಸೇರಿದೆವು. ಶಾಲೆಯ ಮುಖ್ಯೋಪಾಧ್ಯಾಯರ ಕೊಠಡಿ ತಲುಪಿದ ತಕ್ಷಣ, ನನ್ನನ್ನು ನೋಡಿ ಉತ್ತರ ಭಾರತದಿಂದ ಇಲ್ಲಿಗೆ ಬಂದು ಪುಸ್ತಕ, ಪೆನ್ನು ಮಾರುವವನೆಂದು ತಿಳಿದು, ತಮ್ಮ ಸಹ ಶಿಕ್ಷಕರೊಂದಿಗೆ ಮಾರಾಟಗಾರರ ಬಗ್ಗೆ ಕೇವಲವಾಗಿ ನನಗೆ ಕೇಳುವಂತೆ ಮಾತಾಡಿಕೊಂಡರು. ನಾನು ಅವರ ಮಾತನ್ನು ಕೇಳಿ ಹಾಗೆ ಹಿಂದಕ್ಕೆ ಹೊರಟುಹೋಗುವೆನೆಂದು ಗ್ರಹಿಸಿದ್ದರೋ ಏನೋ? ಆದರೆ ಅವರ ಮಾತಿನಿಂದ ಬೇಜಾರಾಗದೆ ಅವರನ್ನೇ ನೇರವಾಗಿ ಕೇಳಿದೆ.

“ಸರ್, ನನ್ನ ಬಗ್ಗೆನೇ ಏನೋ ಮಾತಾಡುತ್ತಿರುವ ಹಾಗಿದೆ?” ಎಂದು ಕೇಳಿದೆ.

ಸಹ ಶಿಕ್ಷಕ ಮಾತಾಡಿ “ಇಲ್ಲ ಇಲ್ಲ. ನಾವೇನೋ ಹೀಗೆ ಗೊಣಗುತ್ತಿದ್ದೆವು. ನೀವು ಬಂದ ವಿಷಯ ಹೇಳಿ” ಎಂದರು.

ನಾನು ಬಂದ ವಿಷಯ ತಿಳಿಸಿದೆ. ಆದರೂ ಅವರು ಇದೇ ತರಹ ಹಲವಾರು ತರಗತಿಗಳ ಸಮಯ ಹಾಳಾಗಿದ್ದು, ಈ ವರ್ಷದ ಪಠ್ಯವನ್ನು ಮುಗಿಸುವುದೇ ಒಂದು ದೊಡ್ಡ ಸವಾಲಾಗಿದೆ ಎಂದು ತಮ್ಮ ಒತ್ತಡವನ್ನು ನಿವೇದಿಸಿಕೊಂಡರು. ತಮ್ಮ ಸಹ ಶಿಕ್ಷಕರನ್ನು ವಿಚಾರಿಸಿ, ಹಲವಾರು ಬಾರಿ ಚಿಂತಿಸಿ ನನಗೆ ಬೆಳಗಿನ ಪ್ರಾರ್ಥನೆಯ ನಂತರವೇ ಅವಕಾಶ ಮಾಡಿಕೊಟ್ಟರು. ಶಿಕ್ಷಕರ ಜೊತೆ ರುದ್ರಪ್ಪನವರೂ ಕೂಡ ಚೇರುಗಳ ಮೇಲೆ ಆಸೀನರಾದರು. ಮಕ್ಕಳೆಲ್ಲರೂ ನೆಲದ ಮೇಲೆ ಕುಳಿತರು. ಸ್ವಾಗತ ಭಾಷಣದ ನಂತರ ನನ್ನ ಉಪನ್ಯಾಸ ಸಾಂಘಿಕವಾಗಿ ನೆರವೇರಿತು.

ಮಕ್ಕಳಿಗಿಂತ ಹೆಚ್ಚಾಗಿ ರುದ್ರಪ್ಪನವರೇ ಖುಷಿಪಟ್ಟು, ಅತ್ಯಂತ ಶಿಸ್ತಿನಿಂದ ಪ್ರತಿಜ್ಞೆ ಪಡೆದರು. ಪ್ರತೀ ಶಾಲೆಯಲ್ಲೂ ಶಿಕ್ಷಕರು, ಈ ಪ್ರತಿಜ್ಞೆಗೂ ನಮಗೂ ಸಂಬಂಧವೇ ಇಲ್ಲದಂತೆ ಕುಳಿತಿದ್ದುದು ನನಗೆ ತುಂಬಾ ನೋವು ತರುತ್ತಿತ್ತು. ನಾನೂ ಕೂಡ ಯಾರಿಗೂ ಒತ್ತಾಯ ಮಾಡುತ್ತಿರಲಿಲ್ಲ. ಶಾಲೆಯಲ್ಲಿ ಚಹಾ ಕುಡಿದು ಮುಂದಿನ ಶಾಲೆಗೆ ಹೊರಟೆ. ರುದ್ರಪ್ಪನವರು ತಮ್ಮ ಸ್ನೇಹಿತರೊಂದಿಗೆ ಮತ್ತೆ ಬಿ.ದುರ್ಗಾ ಊರಿನ ತನಕ ನನ್ನ ಬ್ಯಾಗನ್ನು ಬೈಕಿನಲ್ಲಿ ತಂದು ಕೊಟ್ಟರು. ಬ್ಯಾಗಿನ ತೂಕವಿಲ್ಲದಿದ್ದರಿಂದ ಬಹುವೇಗವಾಗಿ ನಡೆದು ಬಿ.ದುರ್ಗಾದ ಶ್ರೀ ಕಾಶಿಮಹಾಲಿಂಗಸ್ವಾಮಿ ಪ್ರೌಢಶಾಲೆ ತಲುಪಿದೆ. ಅಲ್ಲಿ ಮುಖ್ಯೋಪಾಧ್ಯಾಯರು ಯಾವುದೋ ಕೆಲಸದ ಚರ್ಚೆಯಲ್ಲಿ ತೊಡಗಿದ್ದರಿಂದ, ಸಹ ಶಿಕ್ಷಕರಿಗೆ ನನ್ನ ವಿಷಯ ತಿಳಿಸಿದೆ. ಅವರುಗಳು ಅಚ್ಚರಿಗೊಂಡು ನನ್ನಿಂದ ಕೆಲವು ವಿಷಯಗಳನ್ನು ಕೇಳಿ ತಿಳಿದುಕೊಂಡರು. ಅಲ್ಲಿದ್ದ ಶಿಕ್ಷಕಿ ನನ್ನನ್ನು ಮಾತನಾಡಿಸಲು ಶುರುಮಾಡಿದರು.

“ಸರ್, ಈಗ ನಮಗೆ ಗಿಡಗಳು ಕೊಡುತ್ತಿದ್ದೀರಾ?” ಎಂದು ಕೇಳಿದರು.

“ಇಲ್ಲ ಮೇಡಮ್, ನನ್ನದು ಪಾದಯಾತ್ರೆ. ಹಾಗಾಗಿ ಗಿಡಗಳನ್ನು ಜೊತೆಯಲ್ಲಿಟ್ಟುಕೊಂಡು ಓಡಾಡುತ್ತಿಲ್ಲ” ಎಂದುತ್ತರಿಸಿದೆ.

“ಅಲ್ಲಾ, ನಿಮಗೆ ಇಲ್ಲಿನ ಪರಿಚಯದಿಂದ ನಮಗೆ ಗಿಡಗಳನ್ನು ಕೊಡಿಸುತ್ತೀರೇನೋ ಎಂದು ತಿಳಿದೆ” ಎಂದರು.

“ನನ್ನ ಊರು ಮೈಸೂರು, ಇದು ದಾವಣಗೆರೆ. ನಿಮ್ಮ ಪರಿಚಯ ಮಿತಿಗಿಂತ ನನ್ನ ಪರಿಚಯ ದೊಡ್ಡದೇ. ಪುಕ್ಸಟ್ಟೆ ಸಿಗುವ ಸಸಿಗಳಿಗೆ ಬೆಲೆಯಿರುವುದಿಲ್ಲ ಎಂಬುದು ನನ್ನ ಅನಿಸಿಕೆ. ಹಾಗಾಗಿ ನಿಮ್ಮ ಶಾಲೆಯ ವಿದ್ಯಾರ್ಥಿಗಳಿಂದ ಒಂದು ರೂಪಾಯಿ ಮತ್ತು ಶಿಕ್ಷಕರಿಂದ ಸ್ವಲ್ಪವೇ ಹಣ ಪಡೆದು ಇಪ್ಪತ್ತು ಸಸಿಗಳು ನಿರಾಯಾಸವಾಗಿ ನೀವೇ ತರಿಸಬಹುದು. ಎಲ್ಲವನ್ನೂ ಬೇರೆಯವರಿಂದ ಅಪೇಕ್ಷಿಸದೆ, ತಮ್ಮ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡುವುದು ಒಳಿತಲ್ಲವೇ?” ಎಂಬ ಪ್ರಶ್ನೆ ಇಟ್ಟೆ.

ಅವರು ಮುಜುಗರಗೊಂಡು “ಅಲ್ಲ, ತಪ್ಪು ತಿಳಿಯಬೇಡಿ. ಹಾಗೇ ಸುಮ್ಮನೆ ಕೇಳಿದೆ ಅಷ್ಟೆ” ಎಂದು ಹೇಳಿ ನನ್ನ ಉಪನ್ಯಾಸಕ್ಕೆ ಅನುವುಮಾಡಿಕೊಡಲು ಹೊರಟು ಹೋದರು. ಎಂದಿನಂತೆ ಉಪನ್ಯಾಸವೂ ಸಾಂಗವಾಗಿ ಆಯಿತು. ಶಾಲೆಯಲ್ಲೇ ಊಟಮಾಡಿ ಮುಂದುವರಿದೆ. ಬಿ.ದುರ್ಗಾದಲ್ಲಿನ ಗುಡ್ಡ ನನ್ನನ್ನು ಕೈಬೀಸಿ ಕರೆಯುತ್ತಿತ್ತು. ಆದರೆ ನನಗೆ ಅದನ್ನು ಏರಿ ಬರುವಷ್ಟು ಸಮಯವಿರಲಿಲ್ಲ. ಈ ದಾರಿಯಲ್ಲಿ ಮುಂದೆ ಮತ್ತೆ ಪ್ರಯಾಣ ಮಾಡುವ ಅವಕಾಶ ಬಂದರೆ ಬರುವುದಾಗಿ ಅದಕ್ಕೆ ಭರವಸೆಯಿಟ್ಟು ಮುಂದುವರಿದೆ.

ಕೆಲವು ಮೈಲುಗಳ ನಡಿಗೆಯನ್ನು ಬೇಗನೇ ಕ್ರಮಿಸಿ, ಸುರಿಯುತ್ತಿದ್ದ ಜಡಿ ಮಳೆಯಲ್ಲಿ ನೆನೆದು ಚಿಕ್ಕಜಾಜೂರು ತಲುಪಿದೆ. ಸಿದ್ಧರಾಮೇಶ್ವರ ಶಾಲೆಯಲ್ಲಿ ವಿಚಾರಿಸಿದರೆ ಈ ದಿನವಾಗುವುದಿಲ್ಲ, ನಾಳೆ ಶನಿವಾರ ಬೆಳಗ್ಗೆ ಹತ್ತು ಗಂಟೆಗೆ ಬರುವಂತೆ ಹೇಳಿದರು. ಹತ್ತಿರವೇ ಇದ್ದ ಇನ್ನೊಂದು ಖಾಸಗಿ ಶಾಲೆಗೆ ಹೋಗಿ ನನಗಿಂತ ಕಿರಿಯವನಂತಿದ್ದ ಮುಖ್ಯೋಪಾಧ್ಯಾಯರ ಹತ್ತಿರ ವಿನಂತಿಸಿ ಉಪನ್ಯಾಸಕ್ಕೆ ಒಪ್ಪಿಗೆ ಪಡೆದುಕೊಂಡೆ.

ಖಾಸಗೀ ಶಾಲೆಯೆಂದರೆ ಕೇಳಬೇಕೆ. ಎಲ್ಲರ ಗಮನ ಕಟ್ಟಡ, ಆವರಣ ಮತ್ತು ವ್ಯವಹಾರದ ಮೇಲೇ ಚಿತ್ತ. ವಿದ್ಯಾರ್ಥಿಗಳ ಪಾಡು ಹೇಳತೀರದು. ನಾನು ಹೇಳಿದ ಉಪನ್ಯಾಸ ಅಲ್ಲಿರುವ ಒಬ್ಬ ವಿದ್ಯಾರ್ಥಿಗೆ ಅರ್ಥವಾಗಿದ್ದರೆ ಅದೇ ನನ್ನ ಪುಣ್ಯ. ಸಂಜೆಯ ಕತ್ತಲೆ ಕವಿಯುತ್ತಿದ್ದರಿಂದ ಶಾಲೆಯ ಪಕ್ಕದ ರಸ್ತೆಯಲ್ಲಿ ರವಿ ಮಾಸ್ಟರ ಮನೆಯನ್ನು ಹುಡುಕಿಕೊಂಡು ತಲುಪಿದೆ. ಮಾಸ್ಟರ್ ಇರಲಿಲ್ಲ. ಅವರ ಹೆಂಡತಿ ನನ್ನನ್ನು ಒಳಗೆ ಕರೆದು ಕುಳಿಸಿ ಕುಡಿಯಲು ನೀರು ಕೊಟ್ಟರು. ರವಿ ಮಾಸ್ಟರ್‍ಗೆ ನಾ ಬಂದ ವಿಷಯ ತಿಳಿಸಿದ್ದರಿಂದ ಬರುವಾಗ ತಿನ್ನಲು ಸಮೋಸ, ಜಹಂಗೀರ್ ತಂದು ಜೊತೆಗೆ ಚಹಾ ಕೊಟ್ಟು ಸತ್ಕರಿಸಿದರು.

footನಾವಿಬ್ಬರೂ ಸೇರಿ ಅವರ ಸ್ವಂತ ಊರಾದ ಕಡೂರಿನ ಗುಡ್ಡವನ್ನು ತಲುಪಿದೆವು. ಗುಡ್ಡವನ್ನು ಏರಿ ವೀರಭದ್ರೇಶ್ವರ ದೇವಾಲಯ, ದಾಸೋಹ ಭವನ, ಕಲ್ಯಾಣಿಯನ್ನು ಸುತ್ತಿದೆವು. ಅದರ ಸುತ್ತಲೇ ನಾಲ್ಕು ಕಲ್ಯಾಣಿಗಳಿವೆ. ಹದಿನಾರು ಕಂಬದ ಪ್ರಾಚೀನ ಮಂಟಪವಿದೆ. ಅಚ್ಯುತರಾಯನ ಕಾಲದಲ್ಲಿ ಬಿ.ದುರ್ಗಾದ ಹಸುಗಳು ಕಡೂರಿನ ಈ ಗುಡ್ಡಕ್ಕೆ ಮೇವಿಗೆ ಬರುತಿದ್ದವಂತೆ. ಒಂದು ಹಸು ಬೆಟ್ಟದ ಮೇಲೆ ಹೋಗಿ ಒಂದು ಬಂಡೆಯ ಮೇಲೆ ನಿಂತು ಹಾಲು ಕರೆಯುತ್ತಿತ್ತಂತೆ. ಆ ವಿಷಯ ಒಡೆಯನಿಗೆ ಗೊತ್ತಾಗಿ, ಹಸುವನ್ನ ಹಿಂಬಾಲಿಸಿ ಅದು ಹಾಲು ಅಭಿಷೇಕ ಮಾಡುತ್ತಿದ್ದ ಬಂಡೆಗಳ ಮಧ್ಯೆ ಪರೀಕ್ಷಿಸಿದಾಗ ಒಂದು ಲಿಂಗವಿತ್ತಂತೆ.

ಅಚ್ಯುತರಾಯ ಈ ಗುಡ್ಡದ ಸುತ್ತಾ ಗುಡಿ ಗೋಪುರಗಳನ್ನು ಕಟ್ಟಿಸಿದ್ದಾನೆ. ಶ್ರಾವಣಮಾಸದ ಮೊದಲ ಪೂಜೆ ಈಗಲೂ ಬಿ.ದುರ್ಗಾದ ಊರಿನವರದೇ. ಶ್ರಾವಣಮಾಸದಲ್ಲಿ ಭರ್ಜರಿ ಪೂಜೆ ಪುನಸ್ಕಾರಗಳು ನಡೆಯುತ್ತವೆಂದು ತಿಳಿಯಿತು. ವೈದ್ಯಕೀಯವಾಗಿ ಆರೋಗ್ಯ ಸುಧಾರಿಸಲು ಆಗುವುದಿಲ್ಲ ಎಂದು ಗೊತ್ತಾದ ರೋಗಿಗಳು, ಈ ಗುಡ್ಡದ ಮೇಲಿನ ದೇವಸ್ಥಾನ ಆವರಣದಲ್ಲಿ ಸೇವೆ ಮಾಡಿಕೊಂಡು ಹಲವು ತಿಂಗಳು, ವರ್ಷಗಳು ಅಲ್ಲಿಯೇ ಉಳಿದು ಆರೋಗ್ಯ ಸುಧಾರಿಸಿಕೊಂಡು ಹೋಗಿದ್ದ ಹಲವಾರು ಉದಾರಣೆಗಳನ್ನು ತಿಳಿಸಿದರು.

ನಾನೇ ಖುದ್ದು ಒಂದಿಬ್ಬರು ರೋಗಿಗಳನ್ನು ವಿಚಾರಿಸಿದಾಗ ಅವರೂ ಕೂಡ ಹೌದೆಂದರು. ಅದಕ್ಕೆ ಕಾರಣ ಆ ಗುಡ್ಡದಲ್ಲಿರುವ ಸಾವಿರಾರು ಜಾತಿಯ ಔಷಧೀಯ ಗುಣವುಳ್ಳ ಸಸ್ಯರಾಶಿಗಳ ಸೇವನೆ, ಸ್ವಚ್ಛ ಗಾಳಿ ಮತ್ತು ಗುಡ್ಡದಿಂದ ಹರಿದು ಬರುವ ತೀರ್ಥ ಕುಡಿದು ವಾಸಿಯಾಗಿರಬಹುದು ಎಂದರು. ಇರಬಹುದು ಎಂದು ತಲೆಯಳ್ಳಾಡಿಸಿದೆ.

ಪಾಪ ರವಿ ಮಾಸ್ಟರ್‍ರ ಗ್ಯಾಸ್ ಸಿಲಿಂಡರ್‍ನ್ನು ಅವರ ತಾಯಿ ಯಾರಿಗೋ ಕೊಟ್ಟು ತಿಂಗಳುಗಳಾಗಿ ಮರೆತು ಹೋಗಿದ್ದರು. ಅದೇ ತಲೆಬಿಸಿಯಲ್ಲಿ ಮನೆ ಸೇರಿದೆವು. ಮನೆಯ ಮೊದಲ ಅಂತಸ್ತಿನ ಕೋಣೆಯಲ್ಲಿ ನನಗೆ ವಾಸ್ತವ್ಯ ಕಲ್ಪಿಸಿದರು. ಊಟದ ತನಕ ಅವರು ಆಧ್ಯಾತ್ಮದ ಕಡೆಗೆ ಕೆಲವು ಸಲಹೆಗಳನ್ನು ಕೊಟ್ಟರು. ಮಡಿವಂತರಂತಿದ್ದ ಅವರ ಮನೆಯೊಳಗೆ ಹೋಗಿ ಊಟಮಾಡಲು ಮನಸ್ಸು ಹಿಂಜರಿಯುತ್ತಿತ್ತು. ರಾತ್ರಿಯ ಊಟ ಬಾಳೆ ಎಲೆಯ ಮೇಲೆ, ಚಪಾತಿ, ಅನ್ನ, ಸಾಂಬಾರ್. ಹೊಟ್ಟೆ ತುಂಬಾ ಊಟವಾದ ಮೇಲೆ ಕೇಳಬೇಕೆ. ಗಡದ್ದಾಗಿ ನಿದ್ರೆಗೆ ಜಾರಿದೆ.

[ಇಲ್ಲಿಯತನಕ ನಡಿಗೆಯಲ್ಲಿ ಕ್ರಮಿಸಿದ ಅಂದಾಜು ದೂರ = 232 ಮೈಲುಗಳು]

 

‍ಲೇಖಕರು admin

10 July, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading