ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಂಗೇನಹಳ್ಳಿಯಾಗೆ..

ಜಿ ಎನ್ ನಾಗರಾಜ್ 

ನಿನ್ನೆ ಮಾಸ್ತಿಯವರು ಹುಟ್ಟಿದ ದಿನ – ಅವರ ಕೊಡುಗೆಯ ಬಗ್ಗೆ ಅವಲೋಕನ

ಮಾಸ್ತಿ ಹುಟ್ಟಿದ ಊರು ಮಾಲೂರು ತಾಲ್ಲೂಕಿನ ಹೊಂಗೇನಹಳ್ಳಿಯಲ್ಲಿ ನಾನು ಕೆಲ ವರ್ಷ ಇದ್ದವನು. ಅಲ್ಲಿಂದ ಶಿವಾರಪಟ್ಟಣಕ್ಕೆ ನಾಲ್ಕು ಕಿಮಿ ನಡೆದುಕೊಂಡು ಹೋಗಿ ಅವರು ಓದಿದ ಪ್ರಾಥಮಿಕ ಶಾಲೆಯಲ್ಲಿ ಓದಿದವನು.

ನಾನು ಅವರ ಬಹುತೇಕ ಬರಹಗಳನ್ನು ಓದಿದ್ದೇನೆ. ಅವರ ಕಾದಂಬರಿ ‘ಚೆನ್ನಬಸವನಾಯಕ’ದ ಬಗ್ಗೆ ಮತ್ತು ಇನ್ನೊಂದು ಕಾದಂಬರಿ ‘ಚಿಕವೀರ ರಾಜೇಂದ್ರ’ ಕ್ಕೆ ಜ್ಞಾನಪೀಠ ಬಂದಾಗ ವಿವಾದಗಳನ್ನು ಎಬ್ಬಿಸಲಾಯಿತು. ಆಗ ಆ ಕೃತಿಯ ಮತ್ತು ಅವರ ಸಾಹಿತ್ಯದ ಬಗ್ಗೆ ಲೇಖನ ಬರೆದಿದ್ದೆ. ‘ಕರ್ನಾಟಕದ ನವೋದಯದ ನೆತ್ತಿಯ ಮೇಲಿನ ಬೆಳಗು’ ಎಂದು ವರ್ಣಿಸಿದ್ದೆ.

ಅವರ ಎಲ್ಲ ಕೃತಿಗಳಿಗಿಂತ ನಾಟಕ ‘ಕಾಕನಕೋಟೆ’ ಬಹಳ ಇಷ್ಟದ ಕೃತಿ. ಆ ಪುಟ್ಟ ಕೃತಿಯ ಬಗ್ಗೆ ಅದರ ಐದು ಪಟ್ಟು ದೊಡ್ಡ ಪುಸ್ತಕ ಬರೆಯಬಹುದು. ಅಷ್ಟು ಮಹತ್ವದ ವಿಷಯಗಳನ್ನು ಒಳಗೊಂಡಿದೆ. ಮಾನವನ ಸಾಮಾಜಿಕ ಬೆಳವಣಿಗೆಯ ಆರಂಭದ ಹಂತದ ಬಗ್ಗೆ, ದೈವಾರಾಧನೆಯ ಉಗಮ, ಅಂದಿನ ಕೇವಲ ಪ್ರೇಮಾಧಾರಿತ ಆದರೆ ವಿವಾಹವಿಲ್ಲದ ಜೋಡಿ ಜೀವನ ಪದ್ಧತಿ ಅಂದಿನ ಬದುಕು, ಪ್ರಕೃತಿಯ ಒಡನಾಟ ಇವೆಲ್ಲವನ್ನೂ ಆ ಕೃತಿ ಅತ್ಯಂತ ವಸ್ತುನಿಷ್ಠವಾಗಿ ಮುಂದಿಡುತ್ತದೆ .

ರಾಜಪ್ರಭುತ್ವದ ಬೆಳವಣಿಗೆಯ ಮೊದಲ ಹಂತಗಳ ಬಗ್ಗೆ , ಆ ಸಂದರ್ಭದ ದಮನ, ಹಿಂಸೆ ಮತ್ತು ಪ್ರತಿಭಟನೆಗಳ ಬಗ್ಗೆ ಬೆಳಕು ಚೆಲ್ಲುವ ಕೃತಿ ಕೂಡಾ.

ಅದರ ಬಗ್ಗೆ ಹಲವು ಉಪನ್ಯಾಸ, ಅಧ್ಯಯನ ಶಿಬಿರಗಳಲ್ಲಿ ವಿಶ್ಲೇಷಿಸಿದ್ದೇನೆ. ಅವರ ಕಾದಂಬರಿಗಳೂ ಕೂಡಾ ರಾಜಪ್ರಭುತ್ವದ ಆಳ ವಿಶ್ಲೇಷಣೆಯನ್ನು ಒಳಗೊಂಡಿವೆ. ರಾಜಪ್ರಭುತ್ವದ ಜೊತೆ ಜೊತೆಗೆ ಅಂಟಿಕೊಂಡಿರುವ ಒಳಸಂಚುಗಳು, ತಂದೆ, ಅಣ್ಣತಮ್ಮಂದಿರ ಕೊಲೆಗಳು, ಹಿಂಸಾಕೃತ್ಯಗಳು ಇವುಗಳ ಮತ್ತು ಜನ ಸಾಮಾನ್ಯರ ಜೀವನದ ಚಿತ್ರಗಳನ್ನು ಒಳಗೊಂಡಿವೆ.

ಮಾಸ್ತಿಯವರು ಪ್ರಸಿದ್ಧರಾಗಿರುವುದು ಸಣ್ಣ ಕತೆಗಳ ಕನ್ನಡದ ಮೊದಲ ಪ್ರಮುಖ ಬರಹಗಾರರೆಂದು. ಆದರೆ ನಾನು ಇತರ ಕೃತಿಗಳನ್ನಷ್ಟೇ ಹೆಚ್ಚಾಗಿ ವಿವರಿಸಿದ್ದೇನೆ. ಅವರ ಸಣ್ಣ ಕತೆಗಳು ಆಗ ತಾನೇ ಕನ್ನಡಕ್ಕೆ ಪರಿಚಯವಾಗುತ್ತಿದ್ದ ಉದಾರವಾದಿ ದೃಷ್ಟಿಯಿಂದ ನಮ್ಮ ಹಳ್ಳಿಗಳ ಬದುಕನ್ನು ಕಟ್ಟಿಕೊಡುತ್ತವೆ. ಆದರೆ ಅದೇ ಸಮಯದಲ್ಲಿ ನಮ್ಮ ಸಾಮಾಜಿಕ ವಿಷಮತೆಯ ಬಗೆಗೆ ಕಡೆಗಣ್ಣಾಗಿವೆ.

ಇದು ಅವರ ಕೃತಿಗಳಲ್ಲಿ ಕಾಣುವ ನಮ್ಮ‌ ದೇಶದ ಪುರಾತನ ಸಂಸ್ಕೃತಿಯ ಬಗ್ಗೆ ಪ್ರಶ್ನೆಗಳು ಮೂಡದ ಮನಸ್ಥಿತಿಯ ಫಲಶ್ರುತಿ. ಇದು ಅವರ ಆದಿ ಕವಿ ವಾಲ್ಮೀಕಿ ಎಂಬ ವಿಮರ್ಶನ ಕೃತಿ ಮತ್ತು ಕುವೆಂಪುರವರ ಶೂದ್ರ ತಪಸ್ವಿಯ ಬಗ್ಗೆ ನಡೆಸಿದ ವಾಗ್ವಾದಗಳಲ್ಲಿ ಕಾಣುತ್ತದೆ.

ಅದೇ ಸಮಯದಲ್ಲಿ ಕುವೆಂಪುರವರ ಮೊದಲ ಕವನ ಸಂಕಲನ, ಬೇಂದ್ರೆಯವರ ಮೊದಲ ಸಂಕಲನ ಪ್ರಕಟಿಸಿ ಪ್ರೋತ್ಸಾಹಿಸಿದವರು ಮಾಸ್ತಿ. ಬೇಂದ್ರೆಯವರ ಕಡುಕಷ್ಟ ಕಾಲದಲ್ಲಿ ಅವರನ್ನು ಸಮಾರು ಒಂದು ದಶಕ‌ ಕಾಲ ಪೊರೆದವರು ಎಂಬುದನ್ನೂ ಮರೆಯುವಂತಿಲ್ಲ.

‍ಲೇಖಕರು avadhi

7 June, 2018

4 Comments

  1. H S Eswara

    Masti is at the top of my list of favourites. I had the good fortune of meeting him and getting his blessings when I was a young boy studying in Tirthahalli. I had occasions later also to meet him and hear to his wit and wisdom. I have loved his stories. There is lot in those stories for a social science student like me. Great soul. HS Eswara

  2. viji56

    ನಾನೂ ಹುಂಗೇನಹಳ್ಳಿಯಲ್ಲಿ ಮಾಸ್ತಿ ಇದ್ದಿದ್ದರೆಂಬ ಮನೆಯಿದ್ದ ಜಾಗದ ಎದುರು ಇದ್ದ ಮನೆಯಲ್ಲಿ ವಾಸವಾಗಿದ್ದೆವು ೮೩ರಿಂದ ೮೭ರ ವರೆಗೆ. ಆಗೊಮ್ಮೆ ಮಾಸ್ತಿ ದೇವಸ್ಥಾನಕ್ಕೆ ಕುಟುಂಬದವರೊಂದಿಗೆ ಬಂದಿದ್ದರು. ನಾನು ಕವಿತೆ/ಕತೆ ಬರೆಯುವ ಬಗ್ಗೆ ನಿವೇದಿಸಿಕೊಂಡೆ. ಅವರು ನನ್ನ ಬೆನ್ನು ಸವರಿ ಆಶೀರ್ವದಿಸಿದರು. ನಿನ್ನೆ ಮಾಸ್ತಿಗೆ ಹೋಗಿದ್ದೆ. ಮಾವಿನಕೆರೆ, ಎಸ್‌ಆರ್‌ ವಿಜಯಶಂಕರ, ಎಚ್‌ ಎಸ್‌ ಸತ್ಯನಾರಾಯಣ ಬಂದಿದ್ದರು ಮಾಸ್ತಿ ಕತೆಗಳ ಕುರಿತು ಭಾಷಣ ಆಯಿತು. ಕವಿಗೋಷ್ಠಿ ಇತ್ತು. ಹೋದ ವರ್ಷ ನಾನೇ ಅಧ್ಯಕ್ಷನಾಗಿದ್ದೆ. ಈ ವರ್ಷ ಸ ರಘುನಾಥ.

    ನಾವಿದ್ದ ಮನೆ ಅಂದೆನಲ್ಲ ಅದನ್ನು ಮಾಸ್ತಿಯ ತಾಯ ತವರು ಮನೆಯವರು ಮಾರಿಬಿಟ್ಟಿದ್ದರು. ಅದನ್ನು ಖರೀದಿಸಿ ಮಾಸ್ತಿ ಗ್ರಂಥಾಲಯ ಸ್ಥಾಪಿಸಲು ಉದ್ದೇಶಿಸಿದ್ದರು. ಮೊದಲಿಗೆ ಜಾಗ ಮಾರಲು ಒಪ್ಪಿದ್ದ ಮನುಷ್ಯ ಬಳಿಕ ಬೆಂಗಳೂರಿನ ಜಯನಗರದಲ್ಲಿ ಅಷ್ಟೇ ಅಳತೆಯ ಸೈಟು ಕೊಟ್ಟರೆ ಕೊಡುವುದಾಗಿ ಹೇಳಿದರಂತೆ. ಮಾಸ್ತಿ ಆ ವಿಚಾರ ಅಲ್ಲಿಗೇ ಬಿಟ್ಟರು.

    ಮಾಸ್ತಿ ಈಗ ದೊಡ್ಡ ಊರಾಗಿದೆ. ಅದನ್ನು ಸಾಂಸ್ಕೃತಿಕ ಗ್ರಾಮವಾಗಿಸುವ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು. ಕುಪ್ಪಳಿ ಮಾದರಿಯಲ್ಲಿ ಅಧ್ಯಯನ ಕೇಂದ್ರ ಸ್ಥಾಪನೆಯಾಗಬೇಕು. ಈಗ ಇರುವ ಲೈಬ್ರರಿಯ ಪೂರ್ಣ ಪ್ರಯೋಜನ ಪಡೆಯಬೇಕು.

  3. Gangadhar Kolgi

    ಮಾಸ್ತಿಯವರ ಬರವಣಿಗೆ ದಾರಿದೀಪದಂತೆ. ನಾವು ಎಷ್ಟೋ ಬರಹಗಾರರನ್ನು ಓದದೇ ನಮ್ಮದೇ ಆದ ಪೂರ್ವಾಗ್ರಹ ತಂದುಕೊಟ್ಟಿರುತ್ತೇವೆನೋ? – ನಾನು ಅವರ ಎಲ್ಲ ಕೃತಿ, ಕಥೆಗಳನ್ನು ಓದಿಲ್ಲ. ಬಹುಪಾಲು ಓದಿದ್ದೇನೆ. ನಿಮ್ಮ ಬರಹ ಮಾಸ್ತಿಯವರನ್ನ ಿನ್ನಷ್ಟು ಪರಿಚಯಿಸಿದೆ. ಧನ್ಯವಾದ

  4. ಜಿ.ಎನ್.ನಾಗರಾಜ್

    ಪ್ರತಿಕ್ರಿಯಿಸಿದ ಎಲ್ಲರಿಗೆ ವಂದನೆಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading