ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೈಕು ಜೊತೆ ಹೀಗೊಂದು ಸಂಜೆ

ತುಂಬಿದ ಕೊಡ ತುಳುಕುತ್ತಿದೆ…

ವಿದ್ಯಾಶಂಕರ ಹರಪನಹಳ್ಳಿ


ಭಾರತದಲ್ಲಿನ ಕಂದಾಚಾರ, ಡಂಭಾಚಾರದ ಪ್ರತಿಯಾಗಿ, ಪ್ರತಿಭಟನೆಯಾಗಿ ಹುಟ್ಟಿದ್ದು ಬೌದ್ಧ ಧರ್ಮ. ಮುಂದೆ ಧಮ್ಮ ಬೆಳೆದು ಚೀನ, ಜಪಾನ್, ಶ್ರೀಲಂಕಾ ಮೊದಲಾದ ದೇಶಗಳಿಗೆ ಹಬ್ಬಿತು. ಜಪಾನಿನಲ್ಲಿ ಸಂಸಂಸ್ಕೃತದ ಧ್ಯಾನ, ಚಾನ್ ಆಗಿ, ನಂತರ ಝೆನ್ ಆಗಿ, ಬೌದ್ಧ ಧಮ್ಮದ ಒಂದು ಶಾಖೆಯಾಗಿ ಬೆಳೆಯಿತು.
ಝೆನ್-ನ ಮುಖ್ಯ ಲಕ್ಷಣವೆಂದರೆ ಸರಳತೆ, ಹೊಸ ಅರಿವಿನೊಂದಿಗೆ ಮೂಡುವ ಅಚ್ಚರಿ. ಆ ಸರಳತೆಯನ್ನು ಅರ್ಥೈಸಲು, ಅರಿವಿನ ಅಚ್ಚರಿ ದಾಟಿಸಲು ಕಾವ್ಯಾತ್ಮಕ ಸಾಧನವಾಗಿ ಹುಟ್ಟಿದ್ದು ಹೈಕು ಕಾವ್ಯ ಪ್ರಕಾರ. ೫-೭-೫ ಅಕ್ಷರದ ಬಂಧದಲ್ಲಿ ಒಂದು ಹೊಸ ಅರಿವನ್ನು, ಅಚ್ಚರಿಯನ್ನು ಸಾವಿರಾರು ವಿಧದಲ್ಲಿ ಅರ್ಥೈಸುವ ಸಾಧ್ಯತೆಯನ್ನು ಹುಟ್ಟುಹಾಕಿದ್ದು ಹೈಕು ಕಾವ್ಯ ಪ್ರಕಾರ. ಈಗ ಇದು ಜಗತ್ತಿನಾಧ್ಯಂತ ಜನಪ್ರಿಯವಾಗಿದೆ. ಕನ್ನಡಕ್ಕೂ ನಾಲ್ಕೈದು ದಶಕದಿಂದ ಪರಿಚಿತವಾಗಿದೆ.
ಈ ಫೇಸ್ಬುಕ್, ಟ್ವಿಟ್ಟರ್ ಕಾಲದಲ್ಲಿ ಇದು ಇನ್ನೂ ಜನಪ್ರಿಯ. ಸರಳತೆ, ಸಂಕ್ಷಿಪ್ತತೆಯೇ ಎಲ್ಲರನ್ನೂ ಬರೆಯಲು ಸೆಳೆಯುತ್ತದೆ. ಆದರೆ ಹೈಕು ಬರೆಯುವುದು ಅಷ್ಟೊಂದು ಸುಲಭವಲ್ಲ. ಕವಿ ಧ್ಯಾನಸ್ಥ ಸ್ಥಿತಿಯನ್ನು ತಲುಪದೆ, ಪೂರ್ವಾಗ್ರಹಗಳ ಕಳಚಿಕೊಳ್ಳದೆ ಹೈಕು ಬರೆಯಲಾರ. ‘ಆಸೆಯೇ ದುಃಖಕ್ಕೆ ಮೂಲ’ ಎಂದ ಬುದ್ಧನ ಮಾತನ್ನು ಕೇಳಿ, ಆಡಿ ನಾವು ಬುದ್ಧರಾಗಲು ಸಾಧ್ಯವಿಲ್ಲವಲ್ಲ, ಹೈಕು ಕೂಡ ಹಾಗೆ.
ಭಾರತದಿಂದ ಹೊರಟ ಒಂದು ಸರಳ ಧಮ್ಮ, ಮತ್ತೆ ಹೈಕು ರೂಪದಲ್ಲಿ ಕಾಲಿಟ್ಟಿದ್ದು, ಜನಪ್ರಿಯವಾಗುತ್ತಿರುವುದು ಒಂದು ಆಸಕ್ತಿಕರ ಅಧ್ಯಾಯನವಾಗಬಹುದು.


ಮೊದಲ ಸಾಲಿನ ವಿಷಯವನ್ನ ಎರಡನೇ ಸಾಲಿನಲ್ಲಿ ವಿಸ್ತರಿಸಿ ಕೊನೆಯ ಸಾಲಿನಲ್ಲಿ ಒಂದು ಅಚ್ಚರಿಯ ಒಳನೋಟವನ್ನು, ಬೆರಗನ್ನು ಹುಟ್ಟುಹಾಕುವುದು ಹೈಕುವಿನ ಮೂಲಭೂತ ಗುಣ. ಅಕ್ಷರಗಳ ಲೆಕ್ಕಾಚಾರ, ಮಾತ್ರೆ, ಬಂಧ ಮೊದಲಾದ ನಿಯಮಗಳನ್ನ ಮೀರಿದರೂ ಪರವಾಗಿಲ್ಲ ಆದರೆ ಹೈಕುವಿನ ಮೂಲಭೂತ ಗುಣಕ್ಕೆ ಅಪಚಾರವಾಗಬಾರದು. ಹಾಗಾದಾಗ ಬರೆದದ್ದು ಏನಾದರೂ ಆದೀತು ಆದರೆ ಹೈಕುವಾಗಲಾರದು.

ಹಾಗೆಯೇ ಹೈಕು ಬಗ್ಗೆ ಮಾತಾಡಬಾರದು, ಅದು ಓದುಗನಲ್ಲಿ ಧ್ಯಾನಸ್ಥ ಸ್ಥಿತಿ ಉಂಟು ಮಾಡಬೇಕು. ಓದುಗರು ಕೂಡ ಓದಿದ ಹೈಕು ಬಗ್ಗೆ ಸುಮ್ಮನೆ ಧ್ಯಾನಿಸಬೇಕು, ಚರ್ಚಿಸಬಾರದು. ಹೈಕು ದಕ್ಕಿದರೆ ಅದೃಷ್ಟ. ಒಂದೇ ಒಂದು ಹೈಕುವಿನಿಂದ ಜ್ಞಾನೋದಯವಾದವರೂ ಇದ್ದಾರೆ.

ಶನಿವಾರ ೧೭ನೇ ಆಗಸ್ಟ್ ೨೦೧೩ರ ಸಂಜೆ ಡಾ. ಸಿ. ರವೀಂದ್ರನಾಥರ ಹೈಕು ಸಂಕಲನ ‘ಕೊಡೆಯಡಿ ಒಂದು ಚಿತ್ರ’ ಬಿಡುಗಡೆಯಾಯಿತು. ಸುಂದರ ಚಿತ್ರಗಳನ್ನು, ಚೆಂದದ ಹೈಕುಗಳನ್ನು ಒಳಗೊಂಡ ಪುಸ್ತಕ. ಮುನ್ನುಡಿಯಲ್ಲಿ ಚೇತನ ತೀರ್ಥಹಳ್ಳಿಯವರು ಗುರುತಿಸಿದಂತೆ ಹೈಕು ಗುಣವಿಲ್ಲದ ಕೆಲವು ಹನಿಗವಿತೆಗಳು ಸೇರಿಕೊಂಡಿರುವ ದೋಷವಿದೆ ಈ ಸಂಕಲನದಲ್ಲಿ. ಆ ದೋಷವನ್ನು ಮೀರಿ ಅನೇಕ ಒಳ್ಳೆ ಹೈಕುಗಳಿವೆ.
ಒನ್ ವೀಲರ್ ಪಬ್ಲಿಕೇಷನ್ ಮಾಡಿರುವ ಈ ಪುಸ್ತಕ ತುಂಬಾ ಕಲಾತ್ಮಕವಾಗಿ ಮುದ್ರಿಸಲಾಗಿದೆ. ಈ ಕಾರಣಕ್ಕಾಗಿ ಶ್ರೀ ಎಮ್. ವಿ. ಮಂಜುನಾಥ್, ಇಳಾ ಮುದ್ರಣಾಲಯದವರು ಅಭಿನಂಧನಾರ್ಹರು. ಡಾ. ಹೆಚ್. ಎಸ್. ರಾಘವೇಂದ್ರರಾವ್-ರವರ ವಿದ್ವತ್ ಪೂರ್ಣ ಭಾಷಣ ತುಂಬಾ ಅರ್ಥಪೂರ್ಣವಾಗಿತ್ತು.
ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ನಿರೂಪಿಸುವವರು, ಭಾಷಣಕಾರರು ಹೈಕುವಿನ ಸರಳತೆ ಅಳವಡಿಸಿಕೊಂಡಿದ್ದರೆ ಚೆನ್ನಾಗಿತ್ತೇನೋ? ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಎಲ್ಲರೂ ಹೈಕುವಿನ ಬಗ್ಗೆ ಹೆಚ್ಚು ಹೆಚ್ಚು ಹೇಳಲು ಹೋಗಿ ಕಗ್ಗಂಟಾಗಿಸಿದರು. ಭಾಷಣದ ಮಧ್ಯೆ ಒಳ್ಳೆ ಒಳ್ಳೆ ಹೈಕು ಹೇಳಿದ್ದು ಮಾತ್ರ ಅಪ್ಯಾಯಮಾನವಾಗಿತ್ತು.

ಈ ಕಾರ್ಯಕ್ರಮ ಮುಗಿದಾಗ ಅನಿಸಿದ್ದು :
ಹೈಕು ಬಗ್ಗೆ ಮಾತಾಡಿಬಿಟ್ಟ ಕವಿ
ಸೂರ್ಯನ ಮರೆಮಾಡಿ ದೀಪವ ಹ(ನೆ)ಚ್ಚಿ!
ದಿಲಾವರ್ ರಾಮದುರ್ಗ ಹೇಳಿದ ಮಿರ್ಜಾ ಗಾಲೀಬ್-ನ ಒಂದು ಕವಿತೆ ಕಾರ್ಯಕ್ರಮದ ಹೈಲೈಟ್ ಆಗಿತ್ತು.
ಸಾಕಿ,
ಮಸೀದಿಯಲ್ಲಿ ಕೂತು ಶರಾಬು ಕುಡಿಯಲು ಬಿಡು…
ಇಲ್ಲಾ ದೇವರಿಲ್ಲದ ಜಾಗ ತೋರಿಸು!
Zahid sharab peene de masjid mein beth kar,
Yaa woh jagha bata jahan Khuda nahin..
(Mirza Ghalib)
ಮಿರ್ಜಾ ಗಾಲಿಬ್-ನ ಗುಂಗಿನಲ್ಲೇ ಮನೆಗೆ ಬಂದೆ. ಗಾಲಿಬ್ ಶರಾಬು ಕುಡಿಯಲು, ಕನಕದಾಸರು ಬಾಳೆಹಣ್ಣು ತಿನ್ನಲು ದೇವರಿಲ್ಲದ ಜಾಗ ಬೇಡಿದಂತೆ, ನಾನು ಹೈಕು ಹೇಳದ ವಿಷಯ ಹುಡುಕುತ್ತಿದ್ದೇನೆ…, ರವೀಂದ್ರನಾಥರ ಪುಸ್ತಕ ಹಿಡಿದು ಕುಳಿತಿದ್ದೇನೆ…
ತುಂಬಿದ ಕೊಡ
ತುಳುಕುತ್ತಿದೆ
ಬೆಳಕು
(ರವೀಂದ್ರನಾಥರ ಪುಸ್ತಕದಿಂದ ಅಯ್ದ ಹೈಕು)
 

‍ಲೇಖಕರು avadhi

21 August, 2013

6 Comments

  1. mohan habbu

    ಕನ್ನಡದಲ್ಲಿ ಹಾಯ್ಕುಗಳನ್ನು ಕೃಷಿ ಮಾಡಿದವರ ಸಂಖ್ಯೆ ಕಡಿಮೆ. ನನಗೆ ಗೊತ್ತಿದ್ದಂತೆ ಚಂದ್ರಕಾಂತ ಕುಸನೂರ, ಸರ್ಜೂ ಕಾಟ್ಕರ್, ರವೀಂದ್ರನಾಥ ಇವರು ಹಾಯ್ಕು ರಚಿಸಿದವರು. ತಿಳಿದವವರು ದಯವಿಟ್ಟು ಇತರ ಕವಿಗಳ ಹೆಸರನ್ನು ತಿಳಿಸುವಿರಾ? -ಮೋಹನ ಹಬ್ಬು

    • vividyashankar harapanahalli

      Chethana Thirthahalli, Raghavendra Joshi and allegedly me as well…:-)

    • ಕಮತರ ಗುರು

      ಕನ್ನಡದಲ್ಲಿ ಮೊಟ್ಟ ಮೊದಲು ಹೈಕು ಜನಿಸಿದ್ದು ಹೈಕ ಭಾಗದಲ್ಲಿ. ಕನ್ನಡದಲ್ಲಿ ಮೊಟ್ಟ ಮೊದಲು ಹೈಕು ಬರೆದವರು ಗುಲ್ಬರ್ಗ ಮೂಲದ ಚಂದ್ರಕಾಂತ ಕುಸನೂರ. ಹೀಗಾಗಿ ಅವರನ್ನು ಕನ್ನಡದ ಹೈಕು ಜನಕ ಚಂಕು ಎಂದೇ ಹೈಕ ಭಾಗದಲ್ಲಿ ಗುರುತಿಸಲಾಗುತ್ತದೆ. ಆದರೆ ಅವರು ಬರೆದ ಹೈಕು ಕಾವ್ಯಗಳು ಇನ್ನೂ ಕೃತಿಗಳ ರೂಪದಲ್ಲಿ ಬೆಳಕಿಗೆ ಬಂದಿಲ್ಲ. 60 ರ ದಶಕದಲ್ಲಿ ಹೈಕ ಭಾಗದ ರಾಯಚೂರುನಲ್ಲಿ ಚಂದ್ರಕಾಂತ ಕುಸನೂರ, ಶಾಂತರಸ ಹೆಂಬೆರಾಳ, ಜಯತೀರ್ಥ ರಾಜಪುರೋಹಿತ ಅವರೊಂದಿಗೆ ಸೇರಿ ಆರಂಭಿಸಿದ ಪ್ರತೀಕ ಸಾಹಿತ್ಯಿಕ ಮಾಸ ಪತ್ರಿಕೆಯಲ್ಲಿ ಮೊಟ್ಟ ಮೊದಲು ಕನ್ನಡದ ಹೈಕು ಪ್ರಕಟವಾದವು. ಆ ಬಳಿಕ ಲಂಕೇಶ ಅವರ ಲಂಕೇಶ ಪತ್ರಿಕೆ, ಚಂಪಾ ಅವರ ಸಂಕ್ರಮಣ ಹೀಗೆ ಹಲವು ಪತ್ರಿಕೆಗಳಲ್ಲಿ ಹೈಕು ಪ್ರಕಟಗೊಂಡವು. ಇದಲ್ಲದೇ ಹೈಕ ಭಾಗದವರೇ ಆದ ಕೊಪ್ಪಳ ಜಿಲ್ಲೆಯ ಕುಕನೂರಿನ ಡಾ.ಕೆ.ಬಿ.ಬ್ಯಾಳಿ ಅವರು ಕನ್ನಡ ಮಾತ್ರವೇ ಅಲ್ಲದೇ ಹಿಂದಿ, ಇಂಗ್ಲೀಷ ಮೂರು ಭಾಷೆಗಳಲ್ಲಿ ಜಪಾನಿ ಭಾಷೆಯಲ್ಲಿರುವ ಮುತ್ಸವೋ ಬಾಷೋ, ಷಿಕಿ, ಇತರೆ ಜಪಾನಿ ಕವಿಗಳ ಹೈಕುಗಳನ್ನು ಮೂರು ಭಾಷೆಗಳಲ್ಲಿ ಅನುವಾದಿಸಿ ಪುಸ್ತಕ ಹೊರ ತಂದಿದ್ಧಾರೆ. ರಾಯಚೂರಿನ ಗಜಲ ಕವಿ ಎಂದೇ ಖ್ಯಾತರಾದ ಜಂಬಣ್ಣ ಅಮರಚಿಂತ, ಶಾಂತರಸ ಅವರ ಹತ್ತಿರದ ಸಂಬಂಧಿ ಸಿದ್ಧರಾಮ ಹಿರೇಮಠ, ವೀರಹನುಮಾನ, ವೀರಣ್ಣ ಬೆಂಗಾಲಿ ಇವರ ಹೈಕು ಕೃತಿಗಳು ಪ್ರಕಟವಾಗಿವೆ. ಇದೇ ಜಿಲ್ಲೆಯ ಮಾನವಿ ನಿವಾಸಿ ಜಿ.ಎಸ್.ಕಮತರ, ಕೊಪ್ಪಳದ ಅರುಣಾ ಪಾಟೀಲ ಕೂಡ ಹೈಕು ಬರೆಯುತ್ತಿದ್ಧಾರೆ. ಧಾರವಾಡದ ಡಾ.ಶಾಮಸುಂದರ ಬಿದರಕುಂದಿ ಅವರ ಹೈಕುಗಳು ಕಮಲಾ ಹೆಮ್ಮಿಗೆ ಅವರು ಸಂಪಾದಿಸಿರುವ ಕವನ ಸಂಕಲನದಲ್ಲಿ ಪ್ರಕಟವಾಗಿವೆ…

      • ಕಮತರ ಗುರು

        ಗೆಳೆಯರೆ… ತಮಗೆ ಹಾಗೂ ತಮ್ಮ ಸ್ನೇಹಿತರಿಗೆ ಕನ್ನಡದಲ್ಲಿ ಹೈಕು ಬರೆಯುತ್ತಿರುವ ಹೈಕು ಕವಿಗಳ ಪರಿಚಯ ಇದ್ದಲ್ಲಿ, ಅವರ ಹೈಕು ಕೃತಿಗಳ ಕುರಿತು ಮಾಹಿತಿ ಇದ್ದಲ್ಲಿ ದಯವಿಟ್ಟು ಅವರ ಹೆಸರು ಹಾಗೂ ಮೊಬೈಲ್ ಸಂಖ್ಯೆಯನ್ನು ನನ್ನ ಮೊಬೈಲ್ ನಂ.ಗೆ ಸಂದೇಶ ಕಳಿಸಿ…ಜಿ.ಎಸ್.ಕಮತರ, ಮಾನವಿ ಮೊ.9945095606

  2. ಶ್ರೀನಾಥ್ ಶೇಜವಾಡ್ಕರ್

    ಹೈಕು ಗಳಬಗ್ಗೆ ನಾನಿನ್ನೂ ತಿಳಿಯಬೇಕಿದೆ. ಸಂಪೂರ್ಣ ಅರ್ಥವಾದಲ್ಲಿ ನಾನು ಬರೆಯಲು ಪ್ರಯತ್ನಿಸುತ್ತೇನೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading