ಹೇ ನಿತಂಬಿನಿ..

CNR

ಸಿ. ಎನ್.ರಾಮಚಂದ್ರನ್

ಹೇ ನಿತಂಬಿನಿ
ಕಲ್ಲಾಗಿಯೇ ಇರು ನೀ ಹೇ ನಿತಂಬಿನಿ,
ಜೀವ ತಳೆದರೆ ನೀ ನಡೆದಾಡುವುದಾದರೂ ಹೇಗೆ?

click-kavite-shilabalikeಕುಂಭಸ್ತನಿಯಾಗಿ, ನಿತಂಬಿನಿಯಾಗಿ,
ಬಡ ಒಡಲಿನ, ಪುಸಿ ನಡುವಿನ,
ಓ ಸಾಲಂಕೃತ ಕಾಳಾಹಿವೇಣಿ,
ಜೀವ ತಳೆದರೆ ನೀ ಬಸಿರುಬೇನೆಯನು ತಾಳುವುದಾದರೂ ಹೇಗೆ?
ಬಿಸಿಲು ಮಳೆ ಗಾಳಿಯಲಿ, ಹಗಲು ರಾತ್ರಿಯಲಿ
ನಿನ್ನ ರೂಪಿಸಿದ ಶಿಲ್ಪಿ ಕೆತ್ತಿದನೆ ತನ್ನಿಚ್ಛೆಯಂತೆ?
ಉಸಿರಾಡುವ ನಡೆದಾಡುವ ಸತಿಯಿದ್ದರೂ ಬಳಿ
ಅವನ ಕಣ್ಮನಗಳು ನಿನ್ನ ಕೊರೆದುದಾದರೂ ಹೇಗೆ?
ಹುಟ್ಟುವಾಗಲೆ ‘ಚಾಪವರ್ಮೋತ್ತರ ಸಹಿತ’ ಧೃಷ್ಟದ್ಯುಮ್ನ,
ಹುಟ್ಟುವಾಗಲೇ ‘ಕಾಮನ ಕೈದು’ ಈ ಕೃಷ್ಣೆ.
ಈ ಪ್ರತಿಮೆಗಳ ಪರಿವೇಶದಲಿ ನೀ
ಬದುಕುವುದು ಹೇಗೆ? ಬಾಯ್ಬಿಡುವುದಾದರೂ ಹೇಗೆ?

ಕುಣಿಯಬೇಕಿಲ್ಲ ನೀ ಕೈಸನ್ನೆಯನ್ನನುಸರಿಸಿ;
ನಟಿಸಬೇಕಿಲ್ಲ ನೀ ಸಮರಾತ್ರಿಯಲಿ ಸಮಭೋಗವನು;
ಉರಿಯಬೇಕಿಲ್ಲ ನೀ ಕೊಳೆತ ದೇಹವನು ಅಪ್ಪಿ,
ಕಲ್ಲಾಗಿಯೇ ನೀ ಇರುವ ತನಕ, ಮುಖಮುಚ್ಚಿ.
ಬೆದರಬೇಕಿಲ್ಲ, ಬೆವರಿದರೂ ಬೆವರದಂತಿರಲು,
ನಡುಗಬೇಕಿಲ್ಲ ನೀ ನಡುಮುರಿದರೂ ನಗಲು ನೇರ.
ಮತ್ಸ್ಯಗಂಧಿ ನೀ ಆಗಬೇಕಿಲ್ಲ ಯೋಜನಗಂದಿ,
ಅಳಬೇಕಿಲ್ಲ ಅಳಿಸುವುದಿಲ್ಲ ನೋವಿಲ್ಲ ಸಾವಿಲ್ಲ ನಿನಗೆ.

ಕಾಮದಗ್ಧ ಭಂಗಿಯಲಿ, ಅಂಗಾಂಗ ಸಮೃದ್ಧಿಯಲಿ,
ಕಲ್ಲಾಗಿಯೇ ಇರು ನೀ ಕಲಭಮದಯಾನೆ,
ಪ್ರಾಚೀನ ಸಂಸ್ಕೃತಿಯ ಹೆಣ ಭಾರ ಹೊತ್ತು.

‍ಲೇಖಕರು Admin

September 8, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅಯ್ಯೋ..

7 ಪ್ರತಿಕ್ರಿಯೆಗಳು

  1. ಎಚ್.ಎಸ್.ವೆಂಕಟೇಶಮೂರ್ತಿ

    ಮನಸ್ಸು ಕಲಕುವ ಕವನ. ಕವಿತೆಯ ವ್ಯಂಗ್ಯದ ಹಿಂದೆ ಹೆಪ್ಪುಗಟ್ಟಿದ ನೋವಿದೆ.

    ಪ್ರತಿಕ್ರಿಯೆ
  2. Anonymous

    ನಿನ್ನ ರೂಪಿಸಿದ ಶಿಲ್ಪಿ ರೂಪಿಸಿದನೆ ತನ್ನಿಚ್ಛೆಯಂತೆ…ನಿಜ ..ಹೆಣ್ಣಿನ ಸೌಂದರ್ಯದ ಮಾದರಿಯಾದ ಶಿಲಾಬಾಲಿಕೆಯರಿಗೂ ಮತ್ತು ನಮ್ಮ ದೇಹಕ್ಕೂ ಎನೇನೂ ಸಂಬಂಧವಿಲ್ಲ.

    ಪ್ರತಿಕ್ರಿಯೆ
  3. Narayan Hegde

    Wit, irony, wordplay, exploration of the often intriguing relationship between art and reality – the poem belongs to the rank of fine Kannada poetry. Compliments to CNR.

    ಪ್ರತಿಕ್ರಿಯೆ
  4. C. N. Ramachandran

    ಪ್ರಿಯ ಡಾ. ನಾರಾಯಣ ಹೆಗ್ಡೆ, ಡಾ. ಎಚ್. ಎಸ್. ವಿ., ಡಾ. ಸಂಗೀತಾ ಕಲ್ಮನೆ, ಮತ್ತು ಅಜ್ಞಾತ ವ್ಯಕ್ತಿ, ಇವರುಗಳಿಗೆ:
    ನಿಮ್ಮ ಸ್ನೇಹಪೂರಿತ ಸಹೃದಯ ಪ್ರತಿಕ್ರಿಯೆಗೆ ಕೃತಜ್ಞನಾಗಿದ್ದೇನೆ. ವಂದನೆಗಳು. ಸಿ. ಎನ್. ರಾಮಚಂದ್ರನ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: