ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೇಳದೇ ಹೋದ ಗೆಳೆಯ ಭೂಪತಿಗೆ

ನಾಳೆ ‘ಅಂತಃಕರಣದ ಗಣಿ  ಯು ಭೂಪತಿ’ ಕೃತಿ ಬಿಡುಗಡೆ..

 

 

 

ಡಾ ಸಿದ್ಧನಗೌಡ ಪಾಟೀಲ

 

 

 

ಗೆಳೆಯಾ ಭೂಪತಿ,
ಹೀಗೆ ಹೇಳದೇ ಹೋಗೋದು ಸರಿಯೇ? ಮಿತ್ರಾ, ಕುಳಿತವನು ಎದ್ದು ಹೋದಹಾಗೆ, ಇಲ್ಲಿಯೇ ಹೋಗಿ ಬರುತ್ತೇನೆಂದವನು ಮರಳಿಬಾರದ ಲೋಕಕ್ಕೆ ಹೋದೆ. ಮಡದಿ ಮಕ್ಕಳ ಬಿಟ್ಟು, ಅಪಾರ ಸ್ನೇಹಿತರ ತೊರೆದು. ಕಂಡ ಕನಸುಗಳನ್ನು ಅಲ್ಲಲ್ಲಿಯೇ ಬಿಟ್ಟು ಅದ್ಹೇಗೆ ಹೋದೆ ನೀನು? ಹೌದು ಹೃದಯ ಕೆಲವೊಮ್ಮೆ ನಮ್ಮ ಮಾತನ್ನು ಕೇಳುವುದಿಲ್ಲ. ನಿಂತು ಬಿಡುತ್ತದೆ. ನಿನ್ನ ಹೃದಯವೂ ನಿನ್ನ ಮಾತನ್ನು ಕೇಳಲಿಲ್ಲ.

ನೆನಪಿದೆಯಾ, ನೀನು ರಾಜ್ಯದ ಶಾಸನ ಸಭೆಗೆ ಆಯ್ಕೆಯಾದಾಗ ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಕುಳಿತು ಹಾಡು ಹಾಡಿದ್ದೆ, ‘ಮರೆತೀನೆಂದರೆ ಮರೆಯಲಿ ಹ್ಯಾಂಗ’ ಅಂತ. ಅದೇ ಕಂಬಾರರ ಹಾಡು. ಅದೇ ಹಾಡನ್ನು ಈಗ ನಾವು ನಿನ್ನ ನೆನಸಿಕೊಂಡು ಮನದಲ್ಲೇ ಹಾಡುತ್ತೇವೆ. ಮೂರು ದಶಕದ ಹಿಂದೆ ನಾನು ಎ.ಐ.ಎಸ್.ಎಫ್ ಸಂಘಟನೆ ಕೆಲಸಕ್ಕಾಗಿ ಬಳ್ಳಾರಿಗೆ ಬಂದಾಗ ನಿನ್ನನ್ನು ನೋಡಿದ್ದೆ. ಸಂಡೂರಿನ ತೋರಣದಲ್ಲಿನಿಂದ ಗಣಿಯ ಗರ್ಭದಿಂದ ಎಂದು ಬಂದವನಂತಿದ್ದೆ ನೀನು. ಕಪ್ಪು ಮುಖ, ಗುಂಗುರು ಕೂದಲು, ಕೆಂಪುಕಣ್ಣು, ಚಪ್ಪಲಿ ಇಲ್ಲದ ಕಾಲು, ಮಾಸಿದ ಬಟ್ಟೆ, ಬಳ್ಳಾರಿಯ ಧೂಳು. ಕಮ್ಯುನಿಸ್ಟ್ ಗೆಳೆಯರು, ‘ಇವನು ಭೂಪತಿ, ಯೂತ್ ಆಗರ್Àನೈಸೇಶನ್ ಮಾಡ್ತಾನೆ’ ಅಂತ ಪರಿಚಯಿಸಿದಾಗ ಖುಷಿಯಾಗಿತ್ತು. ಅಂದು ನೀನು ಮೊಟ್ಟಮೊದಲ ಬಾರಿಗೆ ನನ್ನ ಜೊತೆ ಮಾತನಾಡಿದಾಗ ಬೆಚ್ಚಿ ಬಿದ್ದಿದ್ದೆ ನಾನು, ಹಾಗಿತ್ತು ನಿನ್ನ ಧ್ವನಿ.

‘ವಿಜಯನಗರ ಉಕ್ಕು ನಮ್ಮೆಲ್ಲರ ಹಕ್ಕು’ ಎಂಬ ಘೋಷಣೆಯೊಂದಿಗೆ ಎ.ಐ.ಎಸ್.ಎಫ್ ಮತ್ತು ಎ.ಐ.ವೈ.ಎಫ್ ನ ಸೈಕಲ್ ಜಾಥಾ ಸಂಡೂರಿನಿಂದ ಬೆಂಗಳೂರಿಗೆ ಹೊರಟಿತು. ಅರವಿಂದ ಮಲೆಬೆನ್ನೂರ ಜೊತೆ ಅದರ ನಾಯಕತ್ವ ವಹಿಸಿದವನು ನೀನು. ನಾನು ಹುಬ್ಬಳ್ಳಿಯಿಂದ ಯುವಕರ ಸೈಕಲ್ ಜಾಥಾ ಹೊರಡಿಸಿದ್ದೆ. ಹರಿಹರದಲ್ಲಿ ಎರಡೂ ಜಾಥಾಗಳ ಸಂಗಮವಾಯಿತು. ಅಂದು ನೀನು ತಲೆಗೆ ಟವಲ್ ಕಟ್ಟಿಕೊಂಡು ಸೈಕಲ್ ಮೇಲೆ ಕುಳಿತು ನಿನ್ನ ಕಂಚಿನ ಕಂಠದಿಂದ ಹೇಳುತ್ತಿದ್ದ ಘೋಷಣೆ, ವ್ಯವಸ್ಥೆಯನ್ನೇ ತಿರಸ್ಕಾರದಿಂದ ನೋಡುತ್ತಿದ್ದ ನಿನ್ನ ನೋಟ, ಉರಿಬಿಸಿಲಿನಲ್ಲಿ ಸೈಕಲ್ ಹೊಡೆದು ಇನ್ನಷ್ಟು ಕಪ್ಪಗಾಗಿದ್ದ ನಿನ್ನ ಮುಖ ಯಾವುದಾದರೂ ಚಿತ್ರ ಕಲಾವಿದ ನೋಡಿದ್ದರೆ ಹೋರಾಟಕ್ಕೆ ಸಂಕೇತವಾದ ಒಂದು ಅದ್ಭುತ ಕಲಾಕೃತಿ ಸಿದ್ಧವಾಗುತ್ತಿತ್ತು.

ಅಂದು ನಾನು ನಿನ್ನಲ್ಲಿ ಒಬ್ಬ ಭವಿಷ್ಯದ ಭರವಸೆಯ ನಾಯಕನನ್ನು ಕಂಡೆ ಮಿತ್ರಾ. ನನ್ನ ನಂಬಿಕೆ ಹುಸಿಯಾಗಲಿಲ್ಲ.
ನೀನು ಬಳ್ಳಾರಿಯ ಬಿಸಿಲು ನಾಡಿನ ಕೆಂಗುಲಾಬಿಯಾಗಿ ಬೆಳೆದೆ. ಭೂ ಮಾಲಿಕರ, ಜಾತಿವ್ಯವಸ್ಥೆಯಲ್ಲಿ ಕೊಳೆಯುತಿದ್ದ ಸಂಡೂರು ಮತ ಕ್ಷೇತ್ರದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಯಾಗಿದ್ದೆ. ಚುನಾವಣೆಯ ಪ್ರಚಾರಕ್ಕೆ ಬಂದಾಗ ನೋಡಿದೆ ನೀನು ದುಡಿವ ಜನರ ನಾಯಕನಾಗಿದ್ದೆ. ಗಣಿಯ ಧೂಳಿನಲ್ಲಿ ಮುಳುಗಿ ಹೋಗಿದ್ದ ಶತಮಾನಗಳಿಂದ ಒಡೆಯರ ದಾಸ್ಯದಲ್ಲಿ ಬಸವಳಿದಿದ್ದ ಜನತೆಯ ಆಶಾಕಿರಣನಾಗಿದ್ದೆ ನೀನು. ಸಾಮಾನ್ಯ ವಿಷಯವಲ್ಲ.

ಆ ಕಾಲದಲ್ಲಿ ಮನೆ ಮನಗಳ ಮೇಲೆ ನಿಯಂತ್ರಣ ಹೊಂದಿದ್ದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ವಿರುದ್ಧ ಚಿಕ್ಕ ಹುಡುಗನಾಗಿ ಕುಡುಗೋಲು ಗೋಧಿ ತೆನೆಯ ಗುರುತಿನ ಕೆಂಬಾವುಟ ಹಿಡಿದು ಗುಡುಗುತ್ತಿದ್ದೆ. ನಿನ್ನ ಮಾತು ಕೇಳಲು ಜನ ಕಾತರರಾಗಿದ್ದರು. ನಿನಗಾಗಿ ದಾರಿ ಕಾಯುತ್ತಿದ್ದರು.

ಕೊನೆಯ ನಿನ್ನ ಧ್ವನಿಗೆ ಪ್ರತಿಧ್ವನಿ ಸಿಕ್ಕಿತ್ತು. ಸೊಂಡೂರು ಕ್ಷೇತ್ರದಲ್ಲಿ ದುಡಿವ ಜನ ಮೊಟ್ಟ ಮೊದಲ ಬಾರಿಗೆ ದುಡಿವ ವರ್ಗದ ಮನೆಯ, ಹಿಂದುಳಿದ ಜಾತಿಯ ನಿನ್ನಂಥ ಯುವಕನನ್ನು ಆಯ್ಕೆ ಮಾಡಿ ರಾಜ್ಯದ ವಿಧಾನ ಸಭೆಗೆ ಕಳಿಸಿದರು. ಅಂದಿನ ಶಾಸನ ಸಭೆಯ ಸದಸ್ಯರಲ್ಲಿ ಅತ್ಯಂತ ಕಿರಿಯ ಶಾಸಕ ನೀನು. ಎಷ್ಟು ಹೆಮ್ಮೆಯಾಗಿತ್ತು ನಮಗೆ. ಎಂ.ಎಸ್.ಕೃಷ್ಣನ್ ಪಂಪಾಪತಿಯವರಂಥ ಹಿರಿಯ ಕಮ್ಯುನಿಸ್ಟ್ಟ್ ಶಾಸಕರ ಜೊತೆ ಮೊನ್ನೆ ಬೀದಿಯಲ್ಲಿ ನಮ್ಮ ಜೊತೆಗಿದ್ದ ಭೂಪತಿ ನಮ್ಮ ಯುವ ಜನಾಂಗದ ಪ್ರತಿನಿಧಿಯಾಗಿ ರಾಜ್ಯದ ಶಾಸನ ಸಭೆಯಲ್ಲಿ ಶಾಸಕನಾಗಿದ್ದ. ಈ ಸಮಾಜ ಬದಲಾವಣೆಯ ಬಗ್ಗೆ ನಮ್ಮ ಭರವಸೆ ಇಮ್ಮಡಿಸಿತ್ತು. ಶಾಸನ ಸಭೆಯಲ್ಲಿ ನಿನ್ನ ಮಾತು ಕೇಳಲು ಪ್ರೇಕ್ಷಕರ ಗ್ಯಾಲರಿಗೆ ಬಂದು ಕುಳಿತು ಹೆಮ್ಮೆ ಪಟ್ಟಿದ್ದೆವು.
ನೀನು ಶಾಸಕನಾಗುವ ಮೊದಲು ಹುಬ್ಬಳ್ಳಿಯಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳ ಅಧ್ಯಯನ ಶಿಬಿರಕ್ಕೆ ಬಂದದ್ದೆ. ಆಗ ವಸುಂಧರಾ ಸಹಿತ ಬಳ್ಳಾರಿಯ ತಂಡ ಬಂದಿತ್ತು.

ಬಹುಶಃ ಒಂದು ವಾರದ ಶಿಬಿರ ಅದು. ಆಗ ಸಂಘಟಕನಾಗಿದ್ದ ನಾನು ನಿನ್ನ ವಸುಂಧರಾ ಅವರ ನಡುವೆ ಪ್ರೀತಿ ಸೆಲೆಯೊಡೆಯುತ್ತಿರುವುದನ್ನು ಕಂಡಿದ್ದೆ. ಅದು ಮತ್ತೊಂದು ಹೋರಾಟವಾಗಿತ್ತು ಮಿತ್ರಾ. ಅದು ಕೇವಲ ಒಂದು ಹುಡುಗ ಹುಡುಗಿಯ ಭಾವನೆಗಳ ವಿನಿಮಯವಾಗಿರಲಿಲ್ಲ. ಕೇವಲ ವಯಸ್ಸಿನ ತುಡಿತ ತುಮಲವೂ ಆಗಿರಲಿಲ್ಲ. ಜಾತಿ ವ್ಯವಸ್ಥೆಯನ್ನು ಧಿಕ್ಕರಿಸಲು ಮುರಿದು ಹಾಕಲು ನಡೆಸಿದ ಮೌನ ಹೋರಾಟದಂತಿತ್ತು.

ಸ್ಥಿತಿವಂತ ಮನೆಯ ಮೇಲು ಜಾತಿಯಿಂದ ಬಂದ ವಸುಂಧರಾ ಹಿಂದುಳಿದ ವರ್ಗದಿಂದ ದುಡಿವ ವರ್ಗದ ಮನೆತನದ ನೀನು, ನಿಮ್ಮ ಪ್ರೀತಿಗೆ ಒಂದು ಸಾಮಾಜಿಕ ಮೌಲ್ಯವಿತ್ತು. ಅದನ್ನು ಹದಿಹರೆಯದ ಹುಚ್ಚು ಭಾವನೆಗಳು ಎಂದಾಗಿಸಲು ಬಿಡಲಿಲ್ಲ ನೀವು. ಹಲವಾರು ಅಪಸ್ವರಗಳನ್ನು ಎದುರಿಸಿ ಕಾಪಿಟ್ಟುಕೊಂಡು ಕೊನೆಗೂ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮ್ಮೇಳನದಲ್ಲಿ ಮದುವೆ ಆದಿರಿ. ನಿಮ್ಮ ಮದುವೆ ವಿಭಿನ್ನ ವಾಗಿತ್ತು. ಮಾದರಿಯಾಗಿತ್ತು. ಅಂಥ ಮದುವೆ ನಡೆದಾಗ ನಾನು ದೂರದ ಜರ್ಮನ್ ದೇಶದಲ್ಲಿದ್ದೆ. ಸಂಗಾತಿಗಳು ಪತ್ರ ಬರೆದು ತಿಳಿಸಿದರು. ಅಲ್ಲಿಯೇ ಸಂಭ್ರಮಪಟ್ಟಿದ್ದೆ. ನಿಮ್ಮ ಪ್ರೀತಿಯನ್ನು ಬೆಂಬಲಿಸಿದ್ದ ನಾನು ನಿಮ್ಮ ಮದುವೆಯಾದಾಗ ಆ ಸಂಭ್ರಮದಲ್ಲಿರಲಿಲ್ಲ. ಆದರೂ ಕಲ್ಪಿಸಿಕೊಂಡಿದ್ದೆ. ಇತ್ತೀಚೆಗೆ ಒಂದು ಹಾಡು ಬಂತು ನೋಡು. ‘ಕರಿಯಾ ಐ ಲವ್ ಯು, ಬೆಳ್ಳಿ ಐ ಲವ್ ಯು’ ಎಂಥ ಸಮಾಗಮ ಇದು. ಕೇವಲ ಕಪ್ಪು-ಬಿಳಿಯ ಸಮಾಗಮ ಮಾತ್ರ ಆಗಿರಲಿಲ್ಲ. ಈ ಸಮಾಜ ನಿರ್ಮಿಸಿದ ಜಾತಿ ವ್ಯವಸ್ಥೆಯನ್ನು ಧಿಕ್ಕರಿಸುವ ಸಾಹಸವಾಗಿತ್ತು.

ವಸುಂಧರಾ ಮತ್ತು ನೀನು ಒಂದು ಮಾದರಿ ಜೀವನ ನಡೆಸಿ ನಿಮ್ಮಂತೆ ಜಾತಿ ವ್ಯವಸ್ಥೆಯನ್ನು ಧಿಕ್ಕರಿಸಿದವರಿಗೆ ಮಾರ್ಗದರ್ಶಿಗಳಾದಿರಿ. ಅಂತರ್ ಜಾತಿಯ ವಿವಾಹಗಳನ್ನು ನಡೆಸುವ ವೇದಿಕೆ ನಿರ್ಮಿಸಿದಿರಿ. ಇದು ನಿಮ್ಮ ಸಾಮಾಜಿಕ ಬದ್ಧತೆಯನ್ನು ತೋರಿಸಿತ್ತು ಮತ್ತು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟವಾಗಿತ್ತು. ನೀನು ಕಮ್ಯುನಿಸ್ಟ್ ಪಕ್ಷ ಬಿಟ್ಟು ಹೋದಾಗ ಬೇಸರವಾಗಿತ್ತು ಗೆಳೆಯಾ. ನಿನ್ನ ಮೇಲೆ ಸಿಟ್ಟೂ ಬಂದಿತ್ತು. ನೀನು ಪಕ್ಷ ಬಿಡಲು ಕಾರಣಗಳೇನೇ ಇರಬಹುದು. ಆದರೆ ನೀನು ನಮ್ಮ ಜೊತೆಗೇ ಇರಬೇಕಾಗಿತ್ತು. ಆದರೆ ಮನೆ ಬಿಟ್ಟು ಹೋದ ಮೇಲೂ ನಿನಗೆ ತವರುಮನೆಯ ಬಗ್ಗೆ ಪ್ರೀತಿ ಮತ್ತು ಅಭಿಮಾನ ಇದೆ ಎನ್ನುವುದನ್ನು ನೀನು ಕಾಂಗ್ರೆಸ್ ಪಕ್ಷ ಸೇರಿದ ಮೇಲೂ ನಿನ್ನ ನಡೆಯ ಮೂಲಕ ಸಾಬೀತು ಪಡಿಸಿದೆ.

ಅದು ನಮ್ಮ ಪ್ರೀತಿಯನ್ನು ರಿನಿವಲ್ ಮಾಡಿಕೊಳ್ಳಲು ಕಾರಣವಾಗಿತ್ತು. ಕಮ್ಯುನಿಸ್ಟ್ ಪಕ್ಷ ತೊರೆದರೂ ಪಕ್ಷದ ಬಗ್ಗೆ ನೀನೆÉಲ್ಲೂ ಅಪಶಬ್ಧ ಮಾತನಾಡಲಿಲ್ಲ. ಪಕ್ಷದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದೆ. ನೀನು ವಸುಂಧರಾ ‘ಹೊಸತು’ ಪತ್ರಿಕೆಯ ಭಾಗವಾಗಿದ್ದಿರಿ. ಸಾಮೂಹಿಕ ಸಂಘಟನೆಯ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಿರಿ. ಹೀಗಾಗಿ ನೀನು ನೆರೆಮನೆಯವನಾಗಿದ್ದರೂ ಹಾಗನಿಸಲಿಲ್ಲ ನಮಗೆ. ಕಾಂಗ್ರೆಸ್‍ನಲ್ಲೂ ಒಬ್ಬ ಕಮ್ಯುನಿಸ್ಟ್‍ನಾಗಿ ಗುರುತಿಸಿಕೊಂಡಿದ್ದಿ. ಇತ್ತೀಚೆಗೆ ನಿನ್ನ ಚಟುವಟಿಕೆಗಳು ಇನ್ನೂ ವಿಸ್ತಾರಗೊಂಡಿದ್ದವು. ನೀನು ಕಾಂಗ್ರೆಸ್‍ನಲ್ಲಿದ್ದರೂ ಒಂದು ಪ್ರಜಾಸತಾತ್ಮಕ, ಜಾತ್ಯಾತೀತ ರಾಜಕೀಯ ಪರ್ಯಾಯಕ್ಕೆ ನಿನ್ನ ಮನಸು ಹಾತೊರೆಯುತ್ತಿತ್ತು.

ಕೋಮುವಾದ ಅಪಾಯಕಾರಿಯಾಗಿ ವ್ಯಾಪಿಸುತ್ತಿರುವ ಈ ಸಂದರ್ಭದಲ್ಲಿ ರಾಜ್ಯದ ಎಲ್ಲ ಪ್ರಗತಿಪರ ಮನಸುಗಳೊಂದಿಗೆ ಸಂಬಂಧವಿಟ್ಟುಕೊಂಡ ನಿನ್ನ ಅವಶ್ಯಕತೆ ಇತ್ತು. ಆದರೆ ಹೃದಯ ನಿನ್ನ ಮಾತು ಕೇಳಲಿಲ್ಲ. ನಿನಗೆ ಹೃದಯಾಘಾತವಾಗಿ ಆಸ್ಪತ್ರೆ ಸೇರಿದಾಗ ನಿನ್ನನ್ನು ನೋಡಲು ಬಂದಾಗ ಮಲಗಿದಲ್ಲಿಯೇ ನೀನೊಂದು ಮಾತು ಹೇಳಿದೆ, ‘ನಾನು ಹೋಗುವುದಿಲ್ಲ, ನಾನು ಹೋಗಲು ವಸುಂಧರಾ ಬಿಡುವುದಿಲ್ಲ, ಅವಳು ಸತಿ-ಸಾವಿತ್ರಿ ಇದ್ದಹಾಗೆ’ ಅಂತ. ಆ ಮಾತು ನನಗೆ ಹಳೆಯ ನೆನಪು ತಂದಿತು.

ಹುಬ್ಬಳ್ಳಿಯಲ್ಲಿ ನೀವಿಬ್ಬರೂ ಅಧ್ಯಯನ ಶಿಬಿರಕ್ಕೆ ಬಂದಾಗ ಕುಡಿಯೊಡೆಯುತ್ತಿದ್ದ ಪ್ರೀತಿ ಹೆಮ್ಮರವಾಗಿ ಬೆಳೆದು ನಿಂತಿತ್ತು. ಆದರೆ ತೋರಣಗಲ್ಲಿನಲ್ಲಿ ನಿನ್ನ ಅಂತ್ಯಕ್ರಿಯೆ ಮುಗಿಸಿದಾಗ ವಸುಂಧರಾಗೆ ಧೈರ್ಯ ಹೇಳಲು ನನ್ನ ಧೈರ್ಯ ಸಾಲಲಿಲ್ಲ. ಆಗ ಆ ದುಃಖದಲ್ಲಿಯೂ ವಸುಂಧರಾ ಹೇಳಿದರು, ನಿನ್ನ ಸಮಾಧಿಯ ಸ್ಥಳದಲ್ಲಿ ಒಂದು ಸ್ಮಾರಕ ಮಾಡಬೇಕು, ಭೂಪತಿಯವರ ಆಶಯಗಳನ್ನು ಮುಂದುವರೆಸಬೇಕು ಅಂತ. ವಸುಂಧರಾ ಆ ಕೆಲಸವನ್ನು ಮುಂದುವರೆಸಿದ್ದಾರೆ.

ನಾವೆಲ್ಲ ಅವರ ಜೊತೆಗಿದ್ದೇವೆ. ನಿನ್ನ ಮಗ ಅಭಿಮನ್ಯು ಹಾಡು ಕೇಳುವಾಗಲೆಲ್ಲಾ ನಿನ್ನ ಧ್ವನಿ ಜೀವಂತವಾಗಿದೆ ಎನಿಸುತ್ತದೆ. ಆದರೂ ನೀನು ಹೇಳದೆ ಹೋಗಬಾರದಾಗಿತ್ತು. ನೀನು ನಮ್ಮ ಪಕ್ಷವನ್ನು ಬಿಟ್ಟು ಹೋದ ರೀತಿಯಲ್ಲಿಯೇ ಈ ಬದುಕನ್ನೂ ಬಿಟ್ಟು ಹೋದೆ. ನೀನು ಎಲ್ಲಿಯೇ ಹೋಗಿದ್ದರೂ ದುಡಿವ ವರ್ಗದ ಬಗೆಗಿನ ನಿನ್ನ ಕಾಳಜಿ ಶೋಷಿತವರ್ಗದ ಬಗೆಗಿದ್ದ ನಿನ್ನ ತುಡಿತ ನೀನು ಹೋದ ಮೇಲೆಯೂ ನಿನ್ನನ್ನು ಪ್ರೀತಿಸುವಂತೆ ಮಾಡಿವೆ.

ಸಂಡೂರಿನ ಮಣ್ಣಿನಿಂದ ಬೆಂಗಳೂರಿನ ಶಾಸನ ಸಭೆಯವರೆಗಿನ ನಿನ್ನ ಸಾಹಸದ ಪಯಣದಲ್ಲಿ ಜೊತೆಗಾರನಾಗಿದ್ದ ನನಗೆ ನೂರಾರು ನೆನಪುಗಳನ್ನು ಬಿಟ್ಟು ಹೋಗಿದ್ದೀಯ. ಆ ನೆನಪುಗಳನ್ನು ಸ್ಮರಿಸುತ್ತಲೇ ಮುನ್ನಡೆದಿದ್ದೇವೆ.

‍ಲೇಖಕರು Avadhi GK

27 January, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading