ಹೇಮಲತಾ
Allen solly, vanheusen,levis,lee brand ಗಳ ಬಟ್ಟೆ ಮತ್ತು ದರಗಳ ಭರಾಟೆ ತಲೆಯಲ್ಲಿ ಗಿರಗಿರಗಿರಕಿ ಹತ್ತಿದ್ದವು. ಕಾರ್ಡ್ಗಳಲ್ಲಿ ಇನ್ನೂ ಜೀವವಿತ್ತು, ಎಲ್ಲದಕ್ಕಿಂತ ಬಟ್ಟೆಗಳ ಮಿದು,ಬಣ್ಣ,ವಿನ್ಯಾಸ ಮನಸೂರೆಗೊಂಡಿದ್ದವು.ಎರಡುದಿನದ ಕ್ಷಣಿಕ ಬದುಕು,ಸ್ವಾಭಿಮಾನದ ದುಡ್ಡು, ಇಲ್ಲಿ ಮನುಷ್ಯನನ್ನ ಅಳೆಯೋದು ತೊಟ್ಟುಕೊಂಡ ವಸ್ತುಗಳಿಂದಲೇ, ಇನ್ನಾದರೂ ಬದಲಾಗು, ನಾಲ್ಕು ಹೆಜ್ಜೆ ಜಗದ ಜೊತೆ ಹಾಕು ನೂರೆಂಟು ದನಿ ನೂರೆಂಟು ಕಾಳಗ ಒಳಗೆ. ಅಭಾವವಿದ್ದಾಗ ವೈರಾಗ್ಯವನ್ನೂ ಮೌಲ್ಯ ಮಾಡಿ ಮನಸಿಗೆ ಬಿತ್ತಿಬಿಟ್ಟಿದ್ದರು ನಗು ಬಂತು ರೇವತಿಗೆ .ಅಂತೆಯೇ ಬದುಕಿನುದ್ದಕ್ಕು ನಂಬಿಕೊಂಡದ್ದು.ವ್ಯಕ್ತಿಗೆ ವ್ಯಕ್ತಿತ್ವ ಮುಖ್ಯ ,ಸ್ವಭಾವ ಚಾರಿತ್ರ್ಯ ಮುಖ್ಯ…… ಅದನೆಲ್ಲಾ ಅರಿತು ಮಾತಾಡಿದ ಮಂದಿ ಎಷ್ಟು. ಬಣ್ಣತೊಡಬೇಕು ಇಲ್ಲಾ ಬಣ್ಣದಮಾತು ಕಲಿಯಬೇಕು. ಜಗಕ್ಕೆ ಸೋಸಿನೋಡೋ ಸಮಯವಿಲ್ಲ.
ತಪ್ಪು ನನ್ನದಲ್ಲ , ಹಣೆಬರಹ ಮಾತ್ರ ನನ್ನದು .. ಹಲ್ಲು ಕಚ್ಚಿದಳು …
ಸಹಿಸಿಕೊಂಡ ತಾಳ್ಮೆ ಮುಗಿದಿತ್ತು.ಇನ್ನೆಷ್ಟೆ ಭಾರಿ ಅವಲೋಕಿಸಿದರು ಮತ್ತೇನಾದರೂ ಮಾಡಬಹುದಿತ್ತು ಅಂದನಿಸೋದೇ ಇಲ್ಲಾ .
ಬಟ್ಟೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅವನು ಕದ್ದುತಂದಿಟ್ಟ ಬಟ್ಟೆಗಳು ಅಂಗಡಿ ಇಟ್ಟು ಮಿಕ್ಕುವಷ್ಟಿತ್ತು. ಬದುಕುಪೂರ ತೊಟ್ಟರು ಮುಗಿಯದಷ್ಟು … ಹುಡುಗಿಯರಿಗೆ ಬಟ್ಟೆ, ಒಡವೆ ಮುಖ್ಯವಾಗಬೇಕಲ್ಲವೇ ? ಮಧ್ಯರಾತ್ರಿ ಬರಿಗೈನಲ್ಲಿ ಮನೆಬಿಟ್ಟು ಬಂದಿದ್ದಳು .. ತನ್ನದನ್ನೇ ಬಿಟ್ಟುಬರುವ ಧೈರ್ಯ ತನಗಾದರೆ , ಅವರದ್ದಲ್ಲದನ್ನೂ ಹಿಂದಿರುಗಿಸುವ ಔದಾರ್ಯ ಆಚಾರ ಎರಡೂ ಅ ಮನೆಯವರಲ್ಲಿರಲಿಲ್ಲ, ಎಂತಾ ನಾಚಿಕೆಗೇಡಿನ ಜನ … . ತಪ್ಪು ನಿನ್ನದೇ ಎಂತಾ ಪೆದ್ದುತನ ಮನೆಯವರು ನುಡಿದರು .
ಬಿಸಿಯಲ್ಲಿ ಆ ಬಟ್ಟೆಗಳೆಲ್ಲಾ ನನ್ನದಲ್ಲ ಅನಿಸಿದ್ದು ನಿಜ, ಬಸಿದಬೆವರು ಕರಗಿ ಯಾವುದಕ್ಕೂ ಎಟುಕದಾದಾಗ ಪೆದ್ದುತನಕ್ಕು ಸ್ವಾಭಿಮಾನಕ್ಕು ವಾಸ್ತವದ ಅರ್ಥ ವಿವರಿಸಿ ಅವರಿವರು ಆಡಿಕೊಂಡು ನಕ್ಕರು. ತಿಂಗಳು ತಿಂಗಳು ಬಟ್ಟೆಬರೆಗೆ ದುಡಿದ್ದಿದ್ದೆಲ್ಲಾ ಸೋರುವಾಗ ,ಬಣ್ಣತೊಡದ ನಾನೂ ಯಾವುದಕ್ಕೂ ಬೇಡವಾದೆ ಎಂದೆನಿಸಿ ರೇವತಿಗೆ ಗಂಟಲುಬ್ಬಿ ಬಂತು .

onlineನ್ನೊಳಗೆ ಮುಗಿದೋಗುತ್ತಿದ್ದ ಶಾಪಿಂಗು ಬೋರೆನಿಸಿ ಶಾಪಿಂಗ್ ಮಾಲ್ ಗೆ ಜೊತೆಬಂದ್ದಿದಳು ನಾರ್ತಿ ಹುಡುಗಿ; ಆಟೋ-ಬಸ್ಸು ಚಾಲಕರ ಜೊತೆ ಎಷ್ಟು ಚೆನ್ನಾಗಿ ಪಳಗಿದ್ದಾಳೆ ಆಶ್ಚರ್ಯವಾಯಿತು .ಭೈಯ್ಯ ಪ್ಲೀಸ್ ಎಂದೆನ್ನುತ್ತ ಸರಾಗವಾಗಿ ಮಾತಿಗಿಳಿತಾಳೆ .ಬೆಳೆಯುತ್ತಿರುವ ಬೆಂಗಳೂರಿಗೂ ಹೊರಗಿನವರೇ ಅಚ್ಚುಮೆಚ್ಚು,ಆಟೋದವರ ಒಳಗೊಳಗಿನ ನಗು ಕೂಡ ಅದನ್ನೇ ಹೇಳುತ್ತಿದೆ . ಹುಟ್ಟೂರಿನ ಬದಲಾವಣೆಗಳಿಗೆ ಒಗ್ಗಿಸಿಕೊಳ್ಳಲಾಗದೆ ಪರಕೀಯಳಾದಂತ ಅನಾಥ ಪ್ರಜ್ಞೆ ತನ್ನೊಳಗೆ ಎನಿಸಿತು .
ಈ ಬಿಟಿಎಸ್ ಬಸ್ಸು,ಗಿಜಿಗುಡುವ ಟ್ರಾಫಿಕ್ ನನ್ನದಲ್ಲ ಅನಿಸಿ ಬಹಳ ಕಾಲವಾಗಿದೆ.ಕಾಲೇಜಿನ ದಿನಗಳ ಗಂಟೆಗಟ್ಟಲೆಯ ಕಾಯುವಿಕೆ, ಬಸುರಿ ಬಸ್ಸಿನಲ್ಲಿ ಸೀಟಿಗಾಗಿ ಸಾಹಸ,ಪರದಾಟ, ಟಿಕೆಟ್ ನೀಡದ್ದಕ್ಕೆ ವಾದ,ಚಿಲ್ಲರೆಗೆ ನೆನಪು ಹಳೆ ಜನ್ಮದ್ದು ಎನಿಸುವಂತೆ ಕುಡಿದ ನೀರು ಅಲುಗಾಡಿಸದ ನೈಸ್ ರೋಡಿನ ನುಣುಪು,ಕ್ಯಾಬ್ ನೊಳಗೆ ಕಾಯ್ದಿರಿಸಿದ ಸೀಟು,ಟ್ರಾನ್ಸ್ ಪೋರ್ಟಿನ ಟಾಲ್, ಆ ಮೌನದ ಜನ,ಆವೇಗದ ಓಟ..ಹೌದು ವೇಗಗಳಿಸಿಕೊಂಡಿದೆ ಬದುಕು. ಟಿಪ್ಸ ಅಂತ 100-200 ಇಡುವಾಗ, ಓಲ ಕ್ಯಾಬ್ ಬುಕ್ ಮಾಡೋವಾಗ, ರೆಸಾರ್ಟ್ ಮಾಲ್ ರೆಸ್ಟೊರೆಂಟ್ಗಳು ಹಳತೆನಿಸಿ ಆಟೋದವನು ಮಿನಿಮಮ್ಗೆ 80ರ ಬದಲು 50ಹೇಳಿದರೆ ಆಗುವ ಖುಷಿಗಳ ಗೋಜಲಲ್ಲಿ ಹಾಗೆನಿಸುತ್ತದೆ, ಇದೆಲ್ಲ ನಿಜವಾಗಲು ನಿಜಾನ ಇಲ್ಲಾ ವೈಭವ ಮುಗಿಯುವವರೆಗಿನ ಭ್ರಮೆಗಳ? ಸತ್ಯ ಗೊತ್ತು, ಯೋಚಿಸಲು ಬೆಚ್ಚಿದಳು ರೇವತಿ .
ತುಂಡುತೋಳಿನ ಟಾಪ್,ಗಿಡ್ಡಗಿಡ್ಡ ಪ್ಯಾಂಟ್,ಇಳಿಬಿಟ್ಟ ಕೂದಲಿನ ಹುಡುಗಿಯನ್ನು ಉಪೇಕ್ಷೆಯಿಂದ ಕಾಣುವ ಅವನು ತನ್ನ ಬಳಿಯಿದ್ದ ಒಂದೇ ಜೊತೆ ಜೀನ್ಸ್, ಚಪ್ಪಲಿಯಿಲ್ಲದೆ ಸವೆಸಿದ ಸರ್ಕಾರಿ ಶಾಲೆಯ ದಾರಿಯ ಕಥೆ ಹೇಳಿಕೊಂಡಿದ್ದ.ಆ ಹುಡುಗಿ 1500ಕಿ.ಮಿ ದೂರಕ್ಕೆ ಬಿಟ್ಟುಬಂದ ಮನೆಜನರ ನೋಡುವುದಕ್ಕೆ ಡಿಸಂಬರಿನ ರಜೆವರೆಗೂ ಉಸಿರಿಡಿದು ಕಾಯುತ್ತಾಳೆ, ಮನೆ ನೆನಪಾದಾಗಲೆಲ್ಲಾ ಪಿ.ಜಿ ಯಲ್ಲಿನ ಮೂಲೆಹಿಡಿದು ಬಿಕ್ಕುತ್ತಾಳೆ, ಅನಾಥ ಪ್ರಜ್ಞೆ ಮೀರುವುದಕ್ಕೆ ಕಮರ್ಷಿಯಲ್ ಷ್ರೀಟ್ ತುಳಿಯುತ್ತಾಳೆ .ಮತ್ತವನು ಬೆಳಗ್ಗೆ ಎಂಟರಿಂದ ರಾತ್ರಿ ಎಂಟರವರೆಗೆ ಯಾವ ಪ್ರಲೋಭನೆಗಳಿಗೂ ಕ್ಯಾರೆ ಎನ್ನದೆ ಕಂಪ್ಯೂಟರ್ ಹೊಕ್ಕು ತೌಡುಕುಟ್ಟುತ್ತಾನೆ .ಅಪ್ಪಅಮ್ಮನ ಜವಾಬ್ದಾರಿ,ಇಬ್ಬಿಬ್ಬರು ಅಕ್ಕಂದಿರ ಮದುವೆ,ಭರಿಸಲಾಗದಷ್ಟು ಖರ್ಚು ಜವಾಬ್ದಾರಿಗಳಿಗೆ ತನ್ನ ಎಳೆ ಹೆಂಡತಿ,ಹಸುಗೂಸು ಕಂದಮ್ಮನನ್ನು ಹಳ್ಳಿಮನೆಯಲ್ಲೆ ಬಿಟ್ಟುಬಂದಿದ್ದಾನೆ . ಪುರುಷಪುಂಗರ ದಬ್ಬಾಳಿಕೆ ನೋಡಿಕೊಂಡೇ ಬೆಳೆದ ಅವಳಿಗೆ ಮದುವೆಯೆಂದರೆ ಭಯ.ಎಲ್ಲಿಂದಲೋ ಬಂದು ಇಲ್ಲಿ ಮನೆ ಸಂಪಾದಿಸಿ ಎಂಟು ವರ್ಷಗಳು ಒಂಟಿಯಾಗಿ ಘನತೆಯಲ್ಲಿ ಬದುಕುವುದೆಂದರೆ ಅದೇನು ಸುಲಭವಲ್ಲ,ಸಾಧನೆ.ರೆಸ್ಟ್ ರೂಮಿನ ಆಸನದಲ್ಲಿ ನಿತ್ರಾಣಗೊಂಡವಳಂತೆ ಒರಗುವ ಹಸಿ ಮಧುಮಗಳ ಕಣ್ಣಲ್ಲಿ ನೀರು . ನೆನಪಾದ ದೂರದ ತವರುಮನೆ ಕಾರಣವೋ ,ಸುಧಾರಿಸಿಕೊಳ್ಳಲು ಬಿಡದ ಮನೆಕಛೇರಿಗಳ ಒತ್ತಡಗಳೋ ,ಅವನ ಅವಗಣನೆಯೋ,ಎಷ್ಟೆಲ್ಲಾ ಮಾಡಿದ ಮೇಲೂ ಸಿಡಿಮಿಡಿವ ಅತ್ತೆಬಳಗವೋ … ಒಂದೊಂದು ಐಡಿ ಕಾರ್ಡಿನ ಒಳಗೂ ಸ್ಕಾನ್ ಆಗದ ಅದೆಷ್ಟೋ ಕಥೆಗಳು,
ನಾಳಿನ ಇಷಾರಾಮಿ ಸೌಲಭ್ಯಗಳ ಕನಸುಗಳಿಗೆ ಹಗಲುರಾತ್ರಿಗಳನ್ನು ನಮ್ಮದಲ್ಲವೆಂಬಂತೆ ಮೊಗಚಿಹಾಕಿದ ಹಳೆಯ ವರ್ಷಗಳ ಸೂತಕ. ಸಿಕ್ಕಿತೇ ನೆಮ್ಮದಿ?
ದುಡಿಯುವ ತಾಕತ್ತಿರದೆ , ಹಿಂದಿನವರು ಮಾಡಿಟ್ಟ ಆಸ್ತಿ ತಿನ್ನುತ್ತ ಮದಿಸಿದ ತಲೆಮಾಸಿದವನೊಬ್ಬ ತೊಡೆತಟ್ಟುತ್ತಾ ವಿಷಕಾರಿದ್ದ, ನೋಡಲ್ವ ದಿನ ಬೆಳಗಾದರೆ ನಿಮ್ಮಂತವರ ಕಥೆಗಳ. ಕೈತುಂಬಾ ಸಿಗುವ ದುಡ್ಡಿನ ದುರಹಂಕಾರ, ಗಂಡು ಹೆಣ್ಣು ಭೇದವಿರದೆ ಮಿತಿಮೀರಿದ ಸಂಸ್ಕೃತಿ…
ವಿಷಮ ವೃತ್ತದಿಂದ ಹೊರಗಾದರೂ ತಲೆಯಿಂದ ಹೊರಹೋಗದ ಹಳೆಯ ನೆನಪುಗಳು , ನೋವು ಕೊಡವಿದಳು ರೇವತಿ
ಹಿಂದಿರುಗಿಸಬೇಕಾದ ಒಂದು ರೂಪಾಯಿಯ ಚೇಂಜ್ ಬಗ್ಗೆ ,ಹಳೆ ಬಸ್ಸುಗಳನ್ನೂ ಸೇರಿಸಿ ಈ ಬಸ್ಸಿನವನೂ ಮುಲಾಜು ಇಟ್ಟುಕೊಳ್ಳದಕ್ಕೆ ತಾನೂ ತಲೆಕೆಡಿಸಿಕೊಂಡಿಲ್ಲ ಎನ್ನುವ ಉದಾಸೀನವೆ ಕಾರಣವೆನಿಸಿತು ಅವಳಿಗೆ . ಎದುರು ಸೀಟಿನಲ್ಲಿ ಕೂತ ,ಕಡಿಮೆ ದರ್ಜೆಯ ಮಾಸಲು ಬಟ್ಟೆತೊಟ್ಟ ವೃದ್ದ ದಂಪತಿಗಳ ಬಳಿಯಿರುವ ತುಂಬು ಬದುಕು ಫೋರಮ್ ಮಾಲಿನ ಅಧಿಕೃತ ಕವರುಗಳ ಒಳಗಿನದೆಲ್ಲಾ ಸುರಿದು ಖಾಲೀಖಾಲಿಯಾಗಿಸಿ ಅಣಕಿಸಿದಂತೆ ಭಾಸವಾಗಿ ಭಯಗೊಂಡಳು.
ಆಗ ಆಗುತ್ತಿದ್ದ ಇಕ್ಕಟ್ಟ್ಟು ಇರುಸುಮುರುಸಿಗೆ ಶಪಿಸಿಕೊಳ್ಳುತ್ತಿದ್ದ ಮೆಟ್ರೋ ಫ್ಲಯ್ಓವರ್ಗಳೂ ಒಂದು ಹಂತಕ್ಕೆ ಬಂದು ತಲುಪಿವೆ . ಹತ್ತಿರದವು ಹತ್ತಿರವಲ್ಲ, ದೂರಗಳು ದೂರವೂ ಅಲ್ಲ .ಮನೆಯವರು ಸಂವಹಿಸಲಾರದಷ್ಟು ದೂರ, ಅಮೇರಿಕ ಆಷ್ರೇಲಿಯಾದ ಕ್ಲೈಂಟ್ಗಳೂ ನಮ್ಮೊಳಗೊಂದಾಗುವ ಸೋಜಿಗ.ಕುತ್ತಿಗೆಗೆ ಸದಾ ಜೋತುಬೀಳುವ ಐಡೆಂಟಿಟಿ ಕಾರ್ಡ್ ಮೇಲ್ಯಾಕೆ ಸಂಬಂಧಿ ಅಕ್ಕನಿಗೆ ಅಂತಾ ಅಸಮಾಧಾನ , ಸಿಡಿಮಿಡಿಮಾಡಿ ತೋರಿದ್ದಳು ಮಾರಾಯ್ತಿ .ಜೊತೆಗೆ ಟೀ ಕುಡಿಯಲು ಬರುತ್ತಿದ್ದವ ನಾಳೆ ಲಾಸ್ಎಂಜಲೀಸ್ನಲ್ಲಿರುತ್ತಾನೆ … ಏನೆಲ್ಲಾ ಜನ-ಜೀವನ … ಯೋಚಿಸುತ್ತ ತಲೆ ದಿಮ್ಮಂತು .
ಇತ್ತ ರಸ್ತೆ ಬದಿಯ ಟ್ರಾಫಿಕ್ ಸಿಗ್ನಲ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದಾಗ ಅತ್ತ ಅರ್ಧಾ ಗಂಟೆಗೆ ಒಂದೊಂದರಂತಿದ್ದ ಕಡೆ ಕಡೆಯ ಎರಡು ಬಸ್ಸುಗಳು ಹೊರಟೆ ಹೋದವು …
ಯೂನಿವರ್ಸಿಟಿಯ ಜನರಹಿತ ರಸ್ತೆಗಳು ,ರಾತ್ರಿಗೆ ಯೋಗ್ಯವಲ್ಲ . ಇಬ್ಬರು ಗಂಡಸರ ಮಧ್ಯೆ ಕೂರುವ ಆಟೋ ಪಯಣಕ್ಕಿಂತ ಘೋರ ಶಿಕ್ಷೆ ಮತ್ತೊಂದಿಲ್ಲ . ಇವಳ್ಯಾರೋ ಹುಡುಗಿ ಬಸ್ ಸ್ಟಾಪ್ ನಲ್ಲೆ ಚಕ್ಕಳಮಕ್ಕಳ ಹಾಕಿಕೊಂಡು ಮಾತಿಗೆ ಕೂತಿದ್ದಾಳೆ . ಸಮಯ, ಸ್ಥಳದ ಪರಿಜ್ಞಾನವಿದ್ದಂತೆ ಕಾಣುತ್ತಿಲ್ಲ, ಅತ್ತ ಕಡೆಯ ಧ್ವನಿ ಯಾರದ್ದೋ , ಇಹದ ಪರಿವೆ ಮರೆತು ಕಳೆದುಹೋಗಿದ್ದಾಳೆ …..
ನೌಕರರನ್ನು ಇಳಿಸಿ ಖಾಲಿಯಾದ ಕಂಪನಿ ಬಸ್ , ಅರೆ ತನ್ನದೇ ಹಳೆ ಕಂಪನಿಯ ಬಸ್ ಅಲ್ಲವೇ … ಅಂದು ಡ್ರೈವರ್ ಕಷ್ಟಗಳ ಇಷ್ಟುದ್ದ ವಿವರಣೆ ಕೊಟ್ಟು ಮೇಡಂ ಮೇಲ್ಕಾಸುಸಿಗುತ್ತೆ, ಹತ್ತಿಸಿಕೊಳ್ಳಲ ಕೇಳಿಕೊಂಡಿದ್ದ . ಪಾಪ ಅನಿಸಿ ಆಗಲಿ ಎಂದಿದ್ದು ನೆನಪಾಯಿತು … ಕಾಲ ಬದಲಾಗುತ್ತೆ,ಈಗ ನನಗದರ ಮೇಲೆ ಯಾವುದೇ ಹಕ್ಕಿಲ್ಲ , ಅವನಿಗೂ ನನ್ನ ನೆನಪಿಲ್ಲ… ಅಪತ್ಭಾಂದವನ ತರಹ ಬಸ್ ಬಂದಿದೆ , ಖುಷಿಯಲ್ಲಿ ಸುಮ್ಮನೆ ಹತ್ತಿಕೂತಳು .
ಸಿಗ್ನಲ್ ನಲ್ಲಿ ನಿಂತ ಕಾರ್ ಒಳಗೆ , ಲೋಕಾಭಿರಾಮವಾಗಿ ಫೋನ್ ನಲ್ಲಿ ಮಾತಾಡುತ್ತ ಅಡಿಕೆ ಜಗಿಯುತ್ತಿರುವ ಇವನು ಅವನೇ ಅಲ್ಲವೇ … ಅತ್ತೆ ನಾದಿನಿ ಗಂಡನ ವಿರುದ್ಧ ಕಂಪ್ಲೇಂಟ್ ಕೊಟ್ಟಾಗ ಸ್ಟೇಷನ್ ಗೆ ಅವರ ಪರವಹಿಸಿ ಬಂದು ಮಾತಾಡಿದ ಪುಡಾರಿ ರಾಜಕಾರಣಿ. ದುಡ್ಡೊಂದು ಚೆಲ್ಲಿದರೆ ಪರವಿರೋಧವಹಿಸೋದನ್ನೇ ಕಾಯಕ ಮಾಡಿಕೊಂಡ ಮಂದಿ ಖರೀದಿಗೆ ಸಿಗುತ್ತಾರೆ . ಯಾರದೋ ಮನೆಯ ಹೆಣ್ಣು, ಅವಳ ಬಾಳು , ಇಂತವರು ಜಗಿಯುವ ಕನಿಷ್ಠ ಅಡಿಕೆಯಾಗುತ್ತದೆ .
ಕೆಲಸವಿಲ್ಲದ ಪರ್ತಕರ್ತರ ಜತೆಗಾಕಿಕೊಂಡು ರೂಲ್ಸ್ ಮಾತಾಡೋಕೆ, ಅವರು ಗೊತ್ತು ಇವರು ಗೊತ್ತು ಅಂತಾ ಫೋನ್ ಮಾಡಿಸಿ ಡೀಲ್ ಮಾಡಿ ನೆಕ್ಕಿಕೊಳ್ಳೋಕೆ ಬಂದಿದ್ದ ಮನುಷ್ಯ , ಅಸಹ್ಯ !ಅಂತ ಕೈಹಿಡಿದವನ ದೆಸೆಯಿಂದ ಇಂತ ಕತ್ತೆಗಳ ಕಾಲು ನೆಕ್ಕಬೇಕು ರೇವತಿ ಹೈರಾಣಾಗಿದ್ದಳು . ಇವನ ಮೇಲೆ ರೇಗಿದ್ದಕ್ಕೆ ಇನ್ನಷ್ಟು ಮಸಿಬಳೆದು ಹೌಹಾರಿದ್ದ . ವಕಾಲತ್ತು ಹಾಕುತ್ತ ಬರುವ ಅಂತ ಬಳಗದ ಜಾಲವೇ ದೊಡ್ಡದಿದೆ . ಕೆಲವರು ನುಣ್ಣಗೆ ಮಾತಾಡುತ್ತಾರೆ, ಉಳಿದವರು ಉಳ್ಳುಳ್ಳಗೆ ಮಾತಾಡಿಬಿಡುತ್ತಾರೆ . ಪರಿಣಾಮ ಒಂದೇ ಆದರು ತಳುಕಿಗೆ ಮೋಸಹೋಗುತ್ತೇವೆ. ಮೋಸ ಅನ್ನುವುದಕ್ಕಿಂತ ಒಳ್ಳೆತನವನ್ನು , ಒಳ್ಳೆಜನರನ್ನು ಆರಾಧಿಸಲು , ಅಭಿನಂದಿಸಲು ಹಾತೊರೆಯುತ್ತಿರುತ್ತದೆ ಮನಸು . ಇವರಿಗಿಂತ ಅವರು ಮನುಷ್ಯರು, ನಾಗರೀಕರು ಅಂದುಕೊಳ್ಳುತ್ತಿರುವಾಗಲೇ ಬೆನ್ನಿಗಿಳಿದ ಚೂರಿಯಿಂದ ಕೆಂಪು ವಸರುತ್ತದೆ ಥೇಟ್ ಅಡಿಕೆಯ ಜೊಲ್ಲು ನೀರಿನಂತೆ . ಕಾಲುಗಳಲ್ಲಿ ನಡುಕ, ಕಲ್ಲು ಒಗೆಯುವಷ್ಟು ಆಕ್ರೋಶ! ಹುಳಗಳು!! ಇನ್ನೊಬ್ಬರ ಬದುಕು ಕಿತ್ತುತಿನ್ನುವ ಹುಳುಗಳು ಚೀರಬೇಕೆನಿಸುತ್ತದೆ . ಕೈನಲ್ಲಿ ಬ್ರಾಂಡೆಡ್ ಬಟ್ಟೆ ..!!!! ಕತ್ತಲ್ಲಿ ಕಂಪನಿ ಟ್ಯಾಗ್ , ಬಾಯಿ ಕಟ್ಟಿಹೋಗುತ್ತದೆ .
ಕಾಸಿದ್ದಂಗೆ ಕಜ್ಜಾಯ ಮದುವೆ ತಯಾರಿ ವೇಳೆ ಚುಚ್ಚಿದ್ದ ಅವನ ಮಾವ . ಬಟ್ಟೆ ನಮ್ಮನ್ನು ನಿರ್ಧರಿಸಲ್ಲ ನಮ್ಮ ವ್ಯಕ್ತಿತ್ವ ನಮ್ಮನ್ನು ನಿರ್ಮಿಸುತ್ತದೆ ,ನಿರ್ಧರಿಸುತ್ತದೆ ಅಪ್ಪ ತಲೆತುಂಬಿದ್ದರು . ಬಂದುಹೋದ ಜನಕ್ಕೆ ಯಾವುದು ಗೊತ್ತಿರಲಿಲ್ಲ . ಎದೆ ಬಿಚ್ಚಿರಿಯುವ ಹಾಗೆ ಹುಚ್ಚುನಗು ನಗಬೇಕೆನಿಸಿತು ಅವಳಿಗೆ , ಹೇಳಿಕೊಂಡಳು ತನಗೆ ತಾನೇ ಇಂತಾ ಬಟ್ಟೆ ತೊಟ್ಟರೆ ಸುಲಭಕ್ಕೆ ಮಾತಾಡಲು ಒಂದಷ್ಟು ಜನ ಕಡೆಪಕ್ಷ ಹಿಂಜರಿಯುತ್ತಾರೆ . ಅಥವಾ ಅದನ್ನೂ ಇನ್ಯಾವುದಕ್ಕೋ ಹೋಲಿಸಿ ……
ಸರಿಪಡಿಸಲು ಡ್ರೈನೇಜ್ ಪೈಪ್ ಅಗಿದ್ದಿದ್ದಾರೆ. ಬಿಲ್ಡಿಂಗ್ ನ ಅಪಸವ್ಯಗಳೆಲ್ಲ ಮನೆ ಮುಂದೆ ಹರಿದು ಗಬ್ಬು ಹೊಡೆಯುತ್ತಿದೆ , ಮಣ್ಣು ಮುಚ್ಚಿದರೆ ಒಳಗಿನ ಹರಿವು ಗೊತ್ತಾಗಲ್ಲ,ಮೇಲೆ ಎಲ್ಲವು ಸುಂದರ , ಸ್ವಚ್ಛ .
ಮನೆ ಹೊಕ್ಕಂತೆ ಮತ್ತದೇ ಮಾತುಗಳು, ಇಷ್ಟೆಲ್ಲಾ ಖರ್ಚು ಮಾಡೋದು ಕಲಿತುಕೊಂಡರೆ , ನಾಳಿನ ಏರುಪೇರಿಗೆ ಯಾರು ಹೆಗಲು ನೀಡುತ್ತಾರೆ ..
ಡಾಕ್ಟರನ ರಿಪೋರ್ಟ್ ಭಾಕಿ ಇದೆ, ನೆಗೆಟಿವೆ ರಿಸಲ್ಟ್ ಬಂದರೆ ನನ್ನಮೇಲಿನ ಆಸೆ ಬಿಟ್ಟುಬಿಡು,ಬದುಕಿನ ವಿರುದ್ಧ ಹೋರಾಡಲು ನನಗೂ ಮಿತಿಯಿದೆ, ಮೊದಲ ಬಾರಿಗೆ ಸೋತು ನುಡಿದ ನ ರೇವತಿಯ ಮಾತಿಗೆ,ನೆನ್ನೆ ಅಮ್ಮ ಕುಸಿದ್ದಿದ್ದಳು .
ಓಡಿ ಬಂದ ಮಗು ತಬ್ಬಿ ನಕ್ಕಿತು .. ಬಹುಷ್ಯ ಮನೆಹೊಕ್ಕಾಗ ಈ ಮುಗ್ದ ನಿಷ್ಕಲ್ಮಶ ನಗುವೊಂದು ಇರದೇ ಹೋಗಿದ್ದಿದ್ದರೆ , ಎಷ್ಟು ಭೀಕರವಾಗುತ್ತಿತ್ತು ಜೀವನ ಎಂದುಕೊಳ್ಳುತ್ತ ಅಮ್ಮಾ ಒಂದು ಕಪ್ ಚಹಾ ಎಂದಳು ರೇವತಿ !!!!






Intense… like a poem
Vidya : dhanyavadagalu 🙂