ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೆಸರು ವೆಂಕಟೇಶ್ ಭಂಡಾರ್ಕರ್..

 

ಗುರುವಾದ ಜವಾನ

suchith kotian

ಸುಚಿತ್ ಕೋಟ್ಯಾನ್ ಕುರ್ಕಾಲು

ನಾನು ಹುಟ್ಟಿದೂರಲ್ಲೇ ಪ್ರೈಮರಿ ಶಾಲೆಯಿತ್ತು. ಅಲ್ಲಿಗೆ ಬರೋ ವಿದ್ಯಾರ್ಥಿಗಳು, ಮೇಷ್ಟರುಗಳೆಲ್ಲಾ ನಮಗೆ ಪರಿಚಿತರೇ ಆಗಿದ್ದರು. ಏನಾದ್ರೂ ತಪ್ಪು ಮಾಡಿದ್ರೆ ನಮ್ಮ ಮನೆ ಬಾಗಿಲಿನವರೆಗೆ ದೂರು ಬರೋದೂ ಖಾಯಂ ಆಗಿತ್ತು. ಇಂತಿಪ್ಪ ಪ್ರೈಮರಿ ಶಾಲೆಯಲ್ಲಿ ಏಳನೇ ಈಯತ್ತೆ ಮುಗಿಸಿ ಹೈಸ್ಕೂಲು ವಿದ್ಯಾಭ್ಯಾಸಕ್ಕೆಂದು ನಾನು ಹೊರಟದ್ದು ಪಕ್ಕದ ಊರಾದ ಶಂಕರಪುರಕ್ಕೆ. ಕರಾವಳಿ ಪ್ರದೇಶದಲ್ಲಿ ಅತಿ ಜನಪ್ರಿಯವಾದ  ಮಲ್ಲಿಗೆ ಕಂಪಿನ ತವರೂರಿಗೆ.

tundu hykluಹೊಸ ಶಾಲೆ, ಹೊಸ ಊರು, ಹೊಸ ಗೆಳೆಯರು, ನಿಧಾನಕ್ಕೆ ಬೆಳೆಯುತ್ತಿರೋ ಕುಡಿಮೀಸೆ; ಎಲ್ಲವೂ ಒಂದಕ್ಕೊಂದು ಬೆರೆತು ಹೈಸ್ಕೂಲು ಜೀವನ ನಾನೆಣಿಸಿದ್ದಕ್ಕಿಂತ ಹೆಚ್ಚು ಖುಷಿ ಕೊಡತೊಡಗಿತ್ತು. ಎಲ್ಲಾದರೂ ತಪ್ಪಿ ನಡೆದರೆ ಕಪಾಳಕ್ಕೆ ಬಾರಿಸಲು ಸಿದ್ದರಾಗಿದ್ದ ‘ಸ್ಟ್ರಿಕ್ಟ್’ ಅಧ್ಯಾಪಕರ ತರಗತಿಗಳ ಭಯವಿದ್ದರೂ ಉಳಿದೆಲ್ಲಾ ವಿಚಾರಗಳಲ್ಲಿ ನಾವು ಆಗಷ್ಟೇ ರೆಕ್ಕೆ ಮೂಡುತ್ತಿದ್ದ ಹಕ್ಕಿಗಳಾಗಿದ್ದೆವು.

ಇಂತಹಾ ದಿನಗಳಲ್ಲಿ ಪರಿಚಯವಾದದ್ದೇ ಈ ವಿಶಿಷ್ಟ ವ್ಯಕ್ತಿ. ಎಲ್ಲರ ಅನಾದರ, ಉಪೇಕ್ಷೆ, ತಮಾಷೆಗಳಿಗೆ ಒಳಗಾದರೂ ಅದು ತನಗಲ್ಲವೆಂಬಂತೆ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದ ಇವರು ನಮ್ಮ ಸ್ಕೂಲಿನ ಜವಾನ. ಹೆಸರು ವೆಂಕಟೇಶ್ ಭಂಡಾರ್ಕರ್.

ಅದು ಶಾಲೆ- ಕಾಲೇಜುಗಳಿರಲಿ, ಆಫೀಸು ಅಥವಾ ಸಂಸ್ಥೆಯಿರಲಿ, ಅಲ್ಲೊಂದು ಅಲಿಖಿತ ನಿಯಮವಿದೆ. ಮೇಲ್ಮಟ್ಟದ ಹುದ್ದೆಯಲ್ಲಿರುವವರು ತಮ್ಮ ಕೆಳಗಿನವರು ಜೊತೆ ಎಷ್ಟು ಬೇಕು ಅಷ್ಟೇ ಸಂಬಂಧ ಹೊಂದಿರುತ್ತಾರೆ. ‘ಮುನ್ನಾಭಾಯಿ ಎಂಬಿಬಿಎಸ್’ ನೋಡಿ ಬೆಳೆದ ನನ್ನ ಜಮಾನಾದವರು ಹಾಗಿರಬಾರದೆಂದು ಎಷ್ಟೇ ಅಂದುಕೊಂಡರೂ ನನ್ನಂಥವರಿಗೂ ವೃತ್ತಿ ಜೀವನದ ಅನುಭವದಲ್ಲಿ ಇದು ಒಮ್ಮೊಮ್ಮೆ ಅರಿವಿಗೆ ಬಂದಿದೆ.

ಹೀಗಿರುವಾಗ ಜನರಿಂದ ‘ಸ್ವಲ್ಪ ಹೆಡ್ಡ’ ಎಂಬ ಹಣೆಪಟ್ಟಿ ಕಟ್ಟಿಕೊಂಡ ವೆಂಕಟೇಶಣ್ಣನಿಗೆ ಇನ್ನೆಷ್ಟು ಮರ್ಯಾದೆ ಸಿಗಬಹುದು ಹೇಳಿ? ಬಹುಶಃ ಈ ಕಾರಣದಿಂದಲೇ ನನ್ನ ಬಹಳಷ್ಟು ಜೊತೆ ಸಹಪಾಠಿಗಳಿಗೆ ವೆಂಕಟೇಶಣ್ಣನೆಂದರೆ ಅನುಕಂಪ ಮಿಶ್ರಿತವಾದ ಗೌರವ. ನಾವು ಯಾರೂ ಅವರ ಬಗ್ಗೆ ಕೀಳಾಗಿ ಮಾತನಾಡುತ್ತಿರಲಿಲ್ಲ, ಬದಲಾಗಿ ಸೀನಿಯರ್ ಗಳು ಅಂದಂತೆಯೇ ಆ ವ್ಯಕ್ತಿಯಲ್ಲಿ ಅಗಾಧ ಪ್ರತಿಭೆಯಿದೆ ಅನ್ನುತ್ತಿದ್ದೆವು. ಆದರೆ ನನಗೆ ಆ ಪ್ರತಿಭೆಯ ನಿಜರೂಪ ಅರಿವಾದದ್ದು ನಾನು ಆ ಶಾಲೆ ಮುಗಿಸಿ ಹೊರಬಂದ ನಂತರವೇ.

ನಾನು ಹೈಸ್ಕೂಲು ಬಿಡುವ ಕೊನೆಯಲ್ಲಿ ಸ್ಲ್ಯಾಮ್ ಬುಕ್ (Slam Book) ಮಾಡಿದ್ದೆ. ಅದರಲ್ಲಿ ಸ್ವ-ಪರಿಚಯ ಬರೆಯುವಾಗ ಲೈಫ್ ನಲ್ಲಿ ಪ್ರಭಾವ ಬೀರಿದ ವ್ಯಕ್ತಿ ಯಾರು ಎಂಬ ಪ್ರಶ್ನೆಗೆ ಅದ್ಯಾಕೋ ಗೊತ್ತಿಲ್ಲ ವೆಂಕಟೇಶಣ್ಣನ ಹೆಸರು ಬರೆದಿದ್ದೆ.

ಇಂದು ಹೈಸ್ಕೂಲು ಬಿಟ್ಟು ಹತ್ತು ವರ್ಷವಾದರೂ ವೆಂಕಟೇಶಣ್ಣ ಇಂದಿಗೂ ನೆನಪಾಗುತ್ತಾರೆ. ಅಪರೂಪಕ್ಕೊಮ್ಮೆ ಬಸ್ಸಲ್ಲಿ ಸಿಕ್ಕಾಗ ಅವರೇ ಹೆಸರಿಡಿದು ಕರೆಯುತ್ತಾರೆ. ನಾನು ಪತ್ರಿಕೆಗಳಿಗೆ ಬರೆಯುವ ಎಲ್ಲಾ ಲೇಖನಗಳಿಗೆ ಅವರು ಅಭಿಮಾನಿ. ಬಹುಶಃ ನಾನು ಬರೆದ ಎಲ್ಲಾ ಲೇಖನಗಳನ್ನು ಓದಿದ ಕೆಲವೇ ಕೆಲವು ವ್ಯಕ್ತಿಗಳಲ್ಲಿ ವೆಂಕಟೇಶಣ್ಣ ಒಬ್ಬರು. ಪ್ರತೀ ಲೇಖನದ ಮುಖ್ಯ ವಿಷಯದಿಂದ ಹಿಡಿದು ಅದರಲ್ಲಿ ಬರೆದ ಚಿಕ್ಕಪುಟ್ಟ ಸಂಗತಿಗಳೂ ಅವರಿಗೆ ನೆನಪಲ್ಲಿವೆ. ಎಷ್ಟೋ ಸಾರಿ ನಾನೇ ಬರೆದು ನಾನೇ ಮರೆತ ವಿಚಾರಗಳನ್ನು ಇವರು ನೆನಪಿಸಿದ್ದಾರೆ.

ಮಾತು ಕೆಲವೊಮ್ಮೆ ಅದೇ ಶಾಲೆಯಲ್ಲಿ ಕಲಿತ ನನ್ನಣ್ಣನ ವಿಷಯದ ಕಡೆಗೆ ಹೊರಳುತ್ತದೆ. ಅಣ್ಣನ ಹೆಸರು, ಅವನ ಸಹಪಾಠಿಗಳ ಹೆಸರು, ನನ್ನ ಕ್ಲಾಸ್ ಮೇಟ್ ಗಳ ಹೆಸರು ಎಲ್ಲವನ್ನೂ ವೆಂಕಟೇಶಣ್ಣ ತಪ್ಪಿಲ್ಲದೆ ಹೇಳುವಾಗ ಈ ವ್ಯಕ್ತಿ ಸಾಮಾನ್ಯನಲ್ಲ ಎಂದೆನಿಸುತ್ತದೆ. ನಾವು ಯಾವ ವರ್ಷದಲ್ಲಿ ಶಾಲೆ ಸೇರಿದ್ದು, ಯಾವ ವರ್ಷ ಬಿಟ್ಟದ್ದು, ಆ ವರ್ಷಗಳಲ್ಲಿ ಏನೆಲ್ಲಾ ಕಾರ್ಯಕ್ರಮಗಳಾಗಿದ್ದವು ಹೀಗೆ ಎಲ್ಲವೂ ವೆಂಕಟೇಶಣ್ಣನ ಬ್ರೈನ್ ಕಂಪ್ಯೂಟರ್ ನಲ್ಲಿ ಸ್ಪಷ್ಟವಾಗಿ ಮೂಡಿಬರುತ್ತದೆ. ಆ ಶಾಲೆಯಲ್ಲಿ ಕಲಿತ ಪ್ರತಿಯೊಬ್ಬರ ಬಗ್ಗೆಯೂ ವೆಂಕಟೇಶಣ್ಣ ಹೀಗೆ ಹೇಳಬಲ್ಲರು!

cycleಆದರೆ ಲೋಕದ ಕಣ್ಣಲ್ಲಿ ಈತ ಹೆಡ್ಡ,  ಓದಿ ಓದಿ ಮರುಳಾದವ, ಜವಾನ ಕೆಲಸಕ್ಕಾಗಿಯೇ ಹುಟ್ಟಿದವನು… ಏನ್ಮಾಡೋಣ ಹೇಳಿ? ಇದೆಲ್ಲಾ ಮಾತಾಡಿ ಮುಗಿಸಿ ಬಸ್ಸಿನಿಂದ ಇಳಿಯುವಾಗ “ಇನ್ನೊಮ್ಮೆ ಸಿಗುವ, ನಿಮ್ಮ ಜೊತೆ ತುಂಬಾ ಮಾತಾಡಬೇಕು” ಎಂದು ಇಷ್ಟಗಲ ಮುಖಮಾಡಿ ನಕ್ಕು ಇಳಿದು ಹೋಗುತ್ತಾರೆ.

ವೆಂಕಟೇಶಣ್ಣ ನನಗೆ ದೊಡ್ಡದೊಂದು ಜೀವನ ಪಾಠ ಕಲಿಸಿದ್ದಾರೆ. ಯಾವ ವ್ಯಕ್ತಿಯೂ ನಾವೆಣಿಸಿದಂತೆ ಇರುವುದಿಲ್ಲ. ನಾವು ಏನೂ ಅಲ್ಲ ಎಂದು ಭಾವಿಸುವ ಕೆಲವು ವ್ಯಕ್ತಿಗಳು ಬಹಳಷ್ಟು ಪ್ರತಿಭಾನ್ವಿತರಾಗಿರಬಹುದು, ಲೋಕದ ದೃಷ್ಟಿಯಲ್ಲಿ ಉನ್ನತ ಹುದ್ದೆ, ದೊಡ್ಡ ಸ್ಥಾನವಿಲ್ಲದಿದ್ದರೂ ವಿಶಾಲ ಹೃದಯದವನಾಗಿರಬಹುದು. ನಮ್ಮಲ್ಲಿ ಎಷ್ಟೋ ಮಂದಿ ತಮ್ಮ ಕೈ ಕೆಳಗಿರುವ ಜವಾನರನ್ನು ತೆಗಳುತ್ತಾ, ತಮ್ಮ ವೈಯಕ್ತಿಕ ಕೆಲಸಗಳನ್ನೆಲ್ಲಾ ಅವರಿಂದ ಮಾಡಿಸುತ್ತಾ, ಅವರ ಯೋಗ್ಯತೆಯೇ ಅಷ್ಟು ಎಂದು ಹೀಗೆಳೆಯುವವರಿದ್ದಾರೆ.

ಆದರೆ ಅವರೊಳಗೂ ಒಂದು ಮನಸ್ಸಿದೆ..

‍ಲೇಖಕರು admin

30 July, 2016

4 Comments

  1. Sangeeta Kalmane

    “ನಾವು ಏನೂ ಅಲ್ಲ ಎಂದು ಭಾವಿಸುವ ಕೆಲವು ವ್ಯಕ್ತಿಗಳು ಬಹಳಷ್ಟು ಪ್ರತಿಭಾನ್ವತರಾಗಿರಬಹುದು” ಈ ಮಾತು ಎಷ್ಟು ನಿಜ ಸರ್.

    • ಸುಚಿತ್ ಕೋಟ್ಯಾನ್ ಕುರ್ಕಾಲು

      ಥ್ಯಾಂಕ್ಸ್…

  2. Vignesh Holla Thekkar

    ದುರ್ಬಲ ಅನ್ನಿಸುವ ಪ್ರತಿ ಜೀವದೊಳಗೆ ಅದ್ಭುತ ಚೈತನ್ಯವಿರುತ್ತದೆ ಎಂಬ್ ಮಾತು ನಿಜವಾಗಿಸಿದ ವೆಂಕಟೇಶಣ್ಣ……ವಿಷಯದಂತೆ ಲೇಖನವೂ ಚೆನ್ನಾಗಿದೆ ಸುಚಿತ್

    • ಸುಚಿತ್ ಕೋಟ್ಯಾನ್ ಕುರ್ಕಾಲು

      Thank you Vignesh Sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading