
ಶಬರಿಮಲೆಗೆ ಮಹಿಳೆಯರಿಗೂ ಅವಕಾಶ ನೀಡಬೇಕು ಎಂಬುದರ ಬಗ್ಗೆ ಸುಪ್ರೀಂ ಕೋರ್ಟ್ ಧನಾತ್ಮಕವಾಗಿ ಸ್ಪಂದಿಸಿದ್ದನ್ನು ಬ್ರೇಕಿಂಗ್ ನ್ಯೂಸ್ ಆಗಿ ನೋಡಿ ಖುಷಿ ಪಡುವುದರ ಹಿಂದೆ, ಶೀರೂರು ಮಠದ ಸಾವಿನ ನಂತರ ಅವರಿಗೆ ‘ಸ್ತ್ರೀಯರ ವೀಕ್ ನೆಸ್’ ಇತ್ತು ಎಂದು ಪೇಜಾವರ ಶ್ರೀಗಳಂಥವರು ಹೇಳಿದ್ದು ದೊಡ್ಡ ಸುದ್ದಿಯಾಗುವುದರ ಹಿಂದೆ ಅಥವಾ ಸ್ವತಃ ಶೀರೂರು ಶ್ರೀಗಳೇ ಹಿಂದೊಮ್ಮೆ ಅಷ್ಠ ಮಠದ ಎಲ್ಲ ಶ್ರೀಗಳು ಮಕ್ಕಳನ್ನು ಹೊಂದಿದ್ದಾರೆ ಎಂದು ಹೇಳಿದ್ದನ್ನು ವಿವಾದವಾಗಿ ಕಾಣುವುದರ ಹಿಂದಿರುವ ಮನಸ್ಥಿತಿ ಎಂಥದ್ದಿರಬಹುದು ಎಂಬುದನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಒಂದು ಅಂಶ ಸ್ಪಷ್ಟವಾಗಿ ಗೋಚರಿಸುತ್ತದೆ .
ಹೆಣ್ಣನ್ನು ತಿರಸ್ಕರಿಸಿ, ಧಿಕ್ಕರಿಸಿ, ದೂರ ಇಟ್ಟು, ಹೊರಗಿಟ್ಟು ಗೆದ್ದುಬಿಡುತ್ತೇನೆ ಎಂದು ಹೊರಟವರು ಅದೆಷ್ಟು ಅಸಹಾಯಕರಾಗಿ ಹೆಣ್ಣಿನ ಮುಂದೆ ಮಂಡಿಯೂರಿ ಶರಣಾಗಿದ್ದಾರೆ ಎಂಬುದು.
ಹೇಳಿ ಕೇಳಿ, “ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ” ಎಂದು ಹೇಳುತ್ತಲೇ
“ನ ಸ್ತ್ರೀ ಸ್ವಾತಂತ್ರ್ಯ ಮ್ ಅರ್ಹತಿ” ಎಂಬುದನ್ನು ಬಲವಾಗಿ ಪ್ರತಿಪಾದಿಸಿದ ಸಂಸ್ಕೃತಿ ನಮ್ಮದಲ್ಲವೆ ? ಹಾಗಾಗಿ ಸಾಮಾಜಿಕವಾಗಿ, ಆರ್ಥಿಕವಾಗಿ, ಧಾರ್ಮಿಕವಾಗಿ ಹೆಣ್ಣನ್ನು ಸದಾ ” Exclude” (ಹೊರಗಿಡುವ) ಮನಸ್ಥಿತಿಯೇ ನಮ್ಮದಾಗಿದ್ದಕ್ಕೆ ನಮ್ಮ ಪುರುಷ ಪ್ರಧಾನ ಕೌಟುಂಬಿಕ ವ್ಯವಸ್ಥೆಯೇ ಕಾರಣ.
ಸ್ತ್ರೀಯು ಸ್ವತಂತ್ರಕ್ಕೆ ಅರ್ಹಳಲ್ಲ ಎಂಬ ಧೋರಣೆಯನ್ನೇ ತೆಗೆದುಕೊಳ್ಳುವುದಾದರೆ, ಅವರಿಗೆ ಸ್ವಾತಂತ್ರ್ಯವನ್ನು ಕೊಡುವವರು ಯಾರೋ ಇದ್ದಾರೆ ಎಂಬಂತಾಗುತ್ತದೆ ಮತ್ತು ಅದನ್ನು ಅವರು ಪುರುಷರಿಂದ ಪಡೆಯಬೇಕು ಎಂಬ ಅಲಿಖಿತ ನಿಯಮವಿದೆ ಎಂಬುದನ್ನು ಸಾರಾಸಗಟಾಗಿ ಒಪ್ಪಿಕೊಂಡಂತಾಗುತ್ತದೆ. ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳಲ್ಲಿ ಧಾರ್ಮಿಕ ಹಕ್ಕು ಕೂಡ ಒಂದು ಎಂದಾದಲ್ಲಿ ಧಾರ್ಮಿಕ ಕ್ಷೇತ್ರವಾದ ಶಬರಿಮಲೆಗೆ ಹೋಗಲು ಇತರೆಲ್ಲ ಭಕ್ತರಂತೆಯೇ ಅವರಿಗೂ ಸಹಜವಾಗಿ ಪ್ರವೇಶವಿರಬೇಕು. ಆದರೆ ಮುಟ್ಟಾಗುವ ಕಾರಣಕ್ಕಾಗಿ ನಿರ್ಧಿಷ್ಟ ವಯೋಮಾನದ ಹೆಣ್ಮಕ್ಕಳಿಗೆ ಪ್ರವೇಶ ನಿರಾಕರಿಸುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯೇ ಅಲ್ಲವೆ ?
ಮುಟ್ಟಾಗುವುದು ಸೃಷ್ಟಿ ಕ್ರಿಯೆಯ ಅತೀ ಮಹತ್ವದ ಅಂಶ. ಅದು ನೈಸರ್ಗಿಕವಾದ ವರ. ಪೃಕೃತಿಯ Scheme of things (ನಿಸರ್ಗ ನಿಯಮ) ಗಳಲ್ಲಿ ಅದೂ ಒಂದು. ಅದಿಲ್ಲದೆ ಜಗತ್ತಿನ ಮುಂದುವರಿಕೆಯೇ ಸಾಧ್ಯವಿಲ್ಲ . ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಶಬರಿಮಲೆಗೆ ಬರುವುದಕ್ಕೂ , ಅವರ ಹುಟ್ಟಿಗೂ ಈ ಕ್ರಿಯೆಯೇ ಕಾರಣ. ಹಾಗಾಗಿಯೇ ಇರಬೇಕು ಅಯ್ಯಪ್ಪ ಸ್ವಾಮಿಯನ್ನು ‘ಹರಿಹರಸುತ’ ಎಂದು ಕರೆಯುವುದನ್ನು ಈ ಹಿಂದೆ ಗದ್ದರ್ ಅವರು ಪ್ರಶ್ನಿಸಿದ್ದರು. ಸೃಷ್ಟಿಯಂತ ಪವಿತ್ರ ಕಾರ್ಯಕ್ಕೆ ಅತೀ ಅಗತ್ಯವಾದ ಅಂಶವನ್ನು ‘ಮೈಲಿಗೆ ಅಥವಾ ಅಪವಿತ್ರ’ ಎಂದು ಕರೆಯುವುದು, ಸ್ತ್ರೀಯರನ್ನು ಆ ಕಾರಣಕ್ಕಾಗಿ ಹೊರಗಿಡುವುದು ಅಮಾನವೀಯವೂ ,ಅನೈತಿಕವೂ ಅಲ್ಲದೆ ಮತ್ತಿನ್ನೇನು ?
ಮುಟ್ಟು ಇಲ್ಲದ ಹುಟ್ಟು ಜಗತ್ತಿನಲ್ಲಿ ಸಾಧ್ಯವಾದರೂ ಇದೆಯಾ?
ಇನ್ನು ಈ ಸನ್ಯಾಸತ್ವದ ವಿಷಯಕ್ಕೆ ಬರೋದಾದರೆ, ಅದು ಗೃಹಸ್ಥಾಶ್ರಮದ ನಂತರದಲ್ಲಿ ಬರಬೇಕಾದದ್ದು. ಮದುವೆಯಾಗಿ ಸಂಸಾರ ನಿರ್ವಹಣೆಯ ಪ್ರಾಪಂಚಿಕ ಸುಖಭೋಗಗಳನ್ನು ಅನುಭವಿಸಿದ ನಂತರ ಸನ್ಯಾಸ ಸ್ವೀಕರಿಸಬೇಕೆಂಬುದನ್ನು ಸಮಾಜಶಾಸ್ತ್ರದಲ್ಲಿ ಓದಿದ ನೆನಪು. ಅದಲ್ಲದೆ ನಮ್ಮ ಅನೇಕ ಸನ್ಯಾಸಿಗಳು ಈ ಮಾರ್ಗ ಅನುಸರಿಸದೆ ಬೈಪಾಸ್ ರೂಟಿನಲ್ಲಿ ಸನ್ಯಾಸಿಗಳಾಗುತ್ತಾರೆ.
ಹಾಗೆ ಆದವರಲ್ಲಿ ಅನೇಕರದ್ದು ಗ್ರಹಸ್ಥಾಶ್ರಮದ ಮನಸ್ಸು ಮತ್ತು ದೇಹವಾಗಿರುತ್ತದೆ. ಆದರೆ ವಸ್ತ್ರ ಮಾತ್ರ ಸನ್ಯಾಸಾಶ್ರಮದ್ದಾಗಿರುತ್ತದೆ. ಹಾಗಾಗಿಯೇ ಎರಡಕ್ಕೂ ಹೊಂದಾಣಿಕೆಯಾಗದೆ ನಿಸರ್ಗದತ್ತ ವಾಂಛೆಗಳು ಅವರನ್ನು ಕಾಡುತ್ತವೆ . ಕೆಲವರಿಗೆ ಅದನ್ನೂ ಮೀರಿ ನಿಲ್ಲಲು ಸಾಧ್ಯವಾಗುತ್ತದೆ. ಇನ್ನು ಕೆಲವರು ಸಾಧ್ಯವಾಗದೆ ಅದಕ್ಕೂ ಬೈಪಾಸ್ ರೂಟುಗಳನ್ನು ಕಂಡುಕೊಳ್ಳುತ್ತಾರೆ.
ನಿತ್ಯಾನಂದ, ಬಾಬಾ ಅಸಾರಾಮ್, ಬಾಬಾ ಗುರ್ಮಿಟ್ ರಾಮ್ ರಹೀಮ್ ಸಿಂಗ್, ರಾಘವೇಶ್ವರ ಶ್ರೀ (ಅದು ಒಪ್ಪಿತವೋ, ಬಲತ್ಕಾರವೋ ಸ್ತ್ರೀಯನ್ನು ತಿರಸ್ಕರಿಸುವುದು ಸಾಧ್ಯವಾಗಿಲ್ಲ) ಬಾಬಾ ರಾಮ್ ಪಾಲ್ ಇಂಥವರ ಸೆಕ್ಸ್ ಸ್ಕ್ಯಾಂಡಲ್ ಗಳು ಪಟ್ಟಿಯು ದೊಡ್ಡದಿರುವುದನ್ನು ನೋಡಿದಾಗ ಅರ್ಥ ಮಾಡಿಕೊಳ್ಳಬೇಕಾದ ಅತೀ ಮುಖ್ಯ ಅಂಶ ಅಂದರೆ ಪೃಕೃತಿ ಸಹಜವಾದುದರ ವಿರುದ್ದ ನಾವು ಸೃಷ್ಟಿಸಿಕೊಂಡಿರುವ ಅತಾರ್ಕಿಕ ಮತ್ತು ದಬ್ಬಾಳಿಕೆಯ ಯಾವ ನಿಯಮವೂ ನಿಲ್ಲಲು ಸಾಧ್ಯವಿಲ್ಲ ಎಂಬುದು.
ಹೆಣ್ಣು -ಗಂಡು ಗಳನ್ನು ಸೃಷ್ಟಿಯ Partner (ಸಂಗಾತಿಗಳು) ಆಗಿ ನೋಡದೇ ನಾವು ಡಾಮಿನೇಟ್ ಮಾಡಲು ಹೋದುದರ ಪರಿಣಾಮ ಇಂಥ ಅಸಂಭದ್ದ ಹೇರಿಕೆಗಳು ಪ್ರಾರಂಭವಾಗಿರಬೇಕು. 2011 ರ ಏಪ್ರಿಲ್ 22 ರಂದು ” Harmony with nature ” ಎಂಬ ವಿಷಯದಡಿಯಲ್ಲಿ ಸಭೆ ಸೇರಿದ ವಿಶ್ವಸಂಸ್ಥೆಯು ತನ್ನ ವರದಿಯಲ್ಲಿ ಮಂಡಿಸಿದ ಅಭಿಪ್ರಾಯ ಹೀಗಿದೆ;
“ಜಗತ್ತಿನ ಬಹುತೇಕ ಸಮಸ್ಯೆಗಳಿಗೆ ಕಾರಣವಾಗಿರುವುದು ಮತ್ತು ನಾವು ಕೊನೆಗಾಣಿಸಲೇ ಬೇಕಿರುವ ಅಂಶಗಳೆಂದರೆ; Domination of humans over nature, men over women and the rich over poor”
ಮನುಷ್ಯ ಪೃಕೃತಿಯನ್ನು ತನ್ನ ಸಹಭಾಗಿ ಎಂದುಕೊಳ್ಳದೆ ಕೇವಲ ಅನುಭೋಗೀ ದೃಷ್ಟಿಯಿಂದ ನೋಡುತ್ತಿರುವುದರಿಂದ ಅದರ ಮೇಲೆ ದಬ್ಬಾಳಿಕೆ ಮಾಡಲೆತ್ನಿಸುತ್ತಾನೆ ಎಂಬುದು ಎಷ್ಟು ಸತ್ಯವೋ ಹಾಗೆಯೇ ಗಂಡು ಹೆಣ್ಣನ್ನು Partner ಆಗಿ ನೋಡದೆ ಹೋದರೆ Dominate ಮಾಡಲು ಶುರು ಮಾಡುತ್ತೇವೆ. ಇಂತಹ ಡಾಮಿನೇಷನ್ ನ ಒಂದು ಭಾಗವೇ ಅವಳನ್ನು ಶಬರಿಮಲೆಗೆ ಬಾರದಂತೆ ತಡೆಗಟ್ಟುವ ಹುನ್ನಾರ ಮಾಡುತ್ತದೆ . ಅವಳನ್ನು ತಿರಸ್ಕರಿಸಿ ಮಹತ್ತರದ್ದೇನೋ ಸಾಧಿಸಿಬಿಡುತ್ತೇನೆ ಎಂಬ ಗರ್ವಕ್ಕೆ ಎಡೆಮಾಡುತ್ತದೆ. ಆದರೆ ಇದು ಎಷ್ಟರ ಮಟ್ಟಿಗೆ ಸಾಧ್ಯವಾಗುತ್ತದೆ ಎಂಬುದು ಮುಖ್ಯ.
“ಶೀರೂರು ಶ್ರೀಗಳಿಗೆ ಇತ್ತಂತೆ ಸ್ತ್ರೀಯರ ವೀಕ್ನೆಸ್”ಎಂಬ ತಲೆಬರಹದ ಸುದ್ದಿಯನ್ನು ಓರ್ವ ಹೆಣ್ಣು ಮಗಳೇ ಟಿವಿಯಲ್ಲಿ ಕೂತು ದೊಡ್ಡದಾಗಿ ಅಬ್ಬರಿಸಿದ್ದನ್ನು ನೋಡಿದಾಗ ನನಗೆ ಆಶ್ಚರ್ಯವಾಯಿತು. ಸ್ತ್ರೀಯು ಅದ್ಹೇಗೆ ವೀಕ್ ನೆಸ್ ಆಗ್ತಾಳೆ ? ಹಾಗೆ ಕರೆಯುವ ದಾಷ್ಟ್ಯವನ್ನಾದರೂ ಮಾಡಿದವರು ಯಾರು ? ಮತ್ತೆ ಇದನ್ನು ಸ್ತ್ರೀ ಸಮುದಾಯ ಹೇಗಾದರೂ ಒಪ್ಪಿಕೊಳ್ಳುತ್ತದೆ?
ಅದರ ಹಿಂದಿರುವುದು ಕೂಡ ಸ್ತ್ರೀಯನ್ನು ತಿರಸ್ಕರಿಸಿ, ಧಿಕ್ಕರಿಸಿ ಬದುಕುವುದು ಶ್ರೇಷ್ಠತೆ ಎಂಬ ಹೀನ ಮನಸ್ಸೇ ಅಲ್ಲದೆ ಮತ್ತೇನು ಅಲ್ಲವೆ ? ಅದನ್ನು ಪೇಜಾವರರು ಈಗ ಹೊರಹಾಕುವುದನ್ನು ನೋಡುತ್ತಿದ್ದರೆ ನಗು ಬಾರದಿರದು. ಈ ಸ್ವಾಮಿಗಳಿಗೆಲ್ಲ ಈ ರೀತಿ ಸ್ತ್ರೀ ಸಂಗ ಇತ್ತು ಎಂಬುದು ಬಯಲಾದಾಗೆಲ್ಲ ಸಾಬೀತಾಗುವುದಾದರೂ ಏನು ? ನಿಸ್ಸಂಶಯವಾಗಿ ‘ಹೆಣ್ಣನ್ನು ತಿರಸ್ಕರಿಸಲು ಸಾಧ್ಯವಾಗುವುದಿಲ್ಲ’ ಎಂಬುದು. ಹಾಗಾಗಿ ಅದು ತಪ್ಪೆಂದು ನನಗನ್ನಿಸುವುದಿಲ್ಲ. ಏಕೆಂದರೆ ಸಹಜವಾದುದ್ದರ ವಿರುದ್ದ ಹೊರಟವರು ಸಹವಾದದ್ದನ್ನೇ ಮಾಡುವ ಅನಿವಾರ್ಯತೆಗೆ, ಪೇಚಿಗೆ ಸೀಲುಕುತ್ತಾರೆ ನೋಡಿ ಅದು ಬಹು ಮುಖ್ಯವಾದುದು.
ಶಬರಿಮಲೆಗೆ ಹೆಣ್ಣು ಮಕ್ಕಳಿಗೆ ಪ್ರವೇಶ ಇಲ್ಲ ಎಂಬುದು, ಯಾರೋ ಸ್ವಾಮೀಜಿಗೆ ಹೆಂಗಸರ ವೀಕ್ ನೆಸ್ ಇದೆ ಎಂಬುದು ನಿಚ್ಚಳವಾಗಿ ಪೃಕೃತಿಯ ವಿರುದ್ಧವೇ ಹೋದಂತೆ. “ಪೃಕೃತಿಗೆ ಸೃಷ್ಟಿಸುವ ಗುಣ ಇದೆ. ಹೆಣ್ಣಿಗೂ ಸೃಷ್ಟಿಸುವ ಗುಣ ಇದೆ. ಅಂದಮೇಲೆ ಹೆಣ್ಣನ್ನು ತಿರಸ್ಕರಿಸುವುದು, ಅವಳ ಅಸ್ತಿತ್ವವನ್ನು ಧಿಕ್ಕರಿಸುವುದು ಯಾವ ಧರ್ಮಕ್ಕೂ ಒಪ್ಪುವಂತದ್ದಲ್ಲ. ಹಾಗೆ ಮಾಡುವುದೆಂದರೆ ಅದು ಪೃಕೃತಿಯನ್ನೇ ತಿರಸ್ಕರಿಸಿದಂತೆ ಮತ್ತು ಆ ಮೂಲಕ ಪೃಕೃತಿಯೇ ಮೂಲವಾಗಿರುವ ಧರ್ಮವನ್ನೂ ಕೂಡ”
ದುರಂತವೆಂದರೆ ನಮಗೆ ಪೃಕೃತಿಯ ಮೇಲಿನ ದಬ್ಬಾಳಿಕೆಯನ್ನೂ, ಹೆಣ್ಣಿನ ಮೇಲಿನ ದಬ್ಬಾಳಿಕೆಯನ್ನೂ ತಪ್ಪೆಂದು ಹೇಳಲು ಸುಪ್ರೀಂ ಕೋರ್ಟ್ ಬರಲೇಬೇಕಾಗುವುದು !
ಪೃಕೃತಿಯನ್ನು ತಿರಸ್ಕರಿಸುವುದೆಂದರೆ ಅಸ್ತಿತ್ವವನ್ನೇ ತಿರಸ್ಕರಿಸುವುದು ಮತ್ತು ಹೆಣ್ಣನ್ನು ತಿರಸ್ಕರಿಸುವುದೆಂದರೆ ಸೃಷ್ಟಿಯನ್ನೇ ತಿರಸ್ಕರಿಸುವುದು ತಾನೆ ?






Good one
Very thoughtful
“ಹೆಣ್ಣನ್ನು ತಿರಸ್ಕರಿಸುವುದೆಂದರೆ ಸೃಷ್ಟಿಯನ್ನೇ ತಿರಸ್ಕರಿಸಿಂತೆ” .ನಿಜ. ಈ ಮಾತು ಬಹಳ ತೂಕ ಉಳ್ಳದ್ದು.ನಿಜಕ್ಕೂ ಹೆಣ್ಣು ಮಾಯೆ, ಅವಳು ಸ್ವಾತಂತ್ರ್ಯ ಕ್ಕೆ ಅರ್ಹಳಲ್ಲ, ಮುಟ್ಟಾದಾಗ ಅವಳು ಅಸ್ಪೃಶ್ಯಳು ಇವಕ್ಕೆಲ್ಲ ಏನು ಅರ್ಥ ಅಂತ ನನಗೆ ತಿಳೀತಿಲ್ಲ.ಹೆಣ್ಣು ಗಂಡಿಗೆ ಮಾಯೆ ಆದರೆ ಗಂಡು ಹೆಣ್ಣಿಗೆ ಮಾಯೆ ಅಲ್ವೆ? ಮಠಾಧೀಶರು ಹೆಣ್ಣಿನ ಜೊತೆ ಮಾತನಾಡುವುದು ನಿಷಿದ್ಧ ಎಂಬಂತಾಡುವುದು ಎಷ್ಟು ಸರಿ?ಆ ಪೀಠದ ಮೇಲೆ ಕುಳಿತ ಮೇಲೆ ಹೆಣ್ಣು ಗಂಡು ಎಂಬ ತಾರತಮ್ಯ ಸರಿಯೇ, ಹೆಣ್ಣಿನ ಜೊತೆ ಮಾತನಾಡಿ ದೊಡೆ ನಿಯತ್ತು ಸಡಿಲಾಗುವಷ್ಟು ಮನೋಧಾರ್ಡ್ಯ ಅಳ್ಳಕವೇ ? ಹೆಣ್ಣು ಮೈಲಿಗೆ ಯಾದರೆ ಹುಟ್ಟು ಎಲ್ಲಿಂದ?ಆ ಮೈಲಿಗೆ ಯಲ್ಲೇ ತಾನೇ?? ಅಂದ ಮೇಲೆ ಈ ಹುಚ್ಚಾಟ ಕ್ಕೆ ಅರ್ಥ ಏನು ಗೊತ್ತೇ ಆಗುತ್ತಿಲ್ಲ.ಹುಟ್ಟುವ ಪ್ರತಿ ಜೀವಿಯೂ ಸ್ವತಂತ್ರವೇ.ಯಾರೂ ಯಾರಿಗೂ ಅದನ್ನು ದಾನವಾಗಿ ನೀಡಬೇಕಿಲ್ಲ.ಪ್ರಕೃತಿ ಸ್ತ್ರೀ ಅಂತಾರೆ.ಅವಳು ಸ್ವತಂತ್ರಳಲ್ಲವೇ? ಇವೆಲ್ಲ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದುಹೋಗುವಂತಿದೆ ಈ ಪುರುಷ ಪ್ರಧಾನ ಸಮಾಜದಲ್ಲಿ.ಉತ್ತರ ದೊರೆತಂದು ಸಾಮರಸ್ಯ ಮೂಡೀತು , ಗೊಂದಲ ಕಡಿಮೆಯಾದೀತು.
ಅಭಿಪ್ರಾಯ ವ್ಯಕ್ತಪಡಿಸಿದ ಮೂವರಿಗೂ ಧನ್ಯವಾದಗಳು