ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಹೆಡ್’ ‘ಟ್ರಂಕ್’ ‘ಟೇಲ್’

3

ಬದುಕಿನ ಹಾದಿ

ಹಾ.ಮಾ.ನಾ ಹುಟ್ಟಿದ್ದು ಸೆಪ್ಟಂಬರ್ 12, 1931. ಆದರೆ ಅಧಿಕೃತ ದಾಖಲೆಗಳ ಪ್ರಕಾರ ಅದು ಫೆಬ್ರವರಿ 5, 1931.

ಈ ಗೊಂದಲದ ಹಿನ್ನೆಲೆಯನ್ನು ಕುರಿತು ಅವರೇ ಸ್ವಾರಸ್ಯಕರವಾದ ವಿವರಣೆಯೊಂದನ್ನು ಕೊಟ್ಟಿದ್ದಾರೆ. ಶಾಲೆಗೆ ಸೇರುವ ಸಮಯಕ್ಕೆ ಅಧ್ಯಾಪಕರು ಜನ್ಮ ದಿನಾಂಕವನ್ನು ನಮೂದಿಸಿಕೊಳ್ಳಲು ವಿದ್ಯಾರ್ಥಿಯನ್ನು ವಿಚಾರಿಸಿದರು. ವಿದ್ಯಾರ್ಥಿ ತನಗೆ ತೋಚಿದ ತಾರೀಖು, ತಿಂಗಳುಗಳನ್ನು ಹೇಳಿ ತನ್ನ ಬಗೆಗಿನ ದಾಖಲೆಯನ್ನು ತಾನೇ ಸೃಷ್ಟಿಸಿಕೊಂಡ. ಮುಂದೆ ಈ ದಾಖಲೆಯನ್ನು ಸರಿಪಡಿಸಬೇಕಾದ ಅವಶ್ಯಕತೆ ನಾಯಕರಿಗೆ ಕಾಣಬರಲಿಲ್ಲ. ಅದು ಹಾಗೆಯೇ ಮುಂದುವರಿದುಕೊಂಡು ಹೋಗಿ, ಮುಂದೆ ಅದರ ಪ್ರಕಾರವೇ ಅವರು ತಮ್ಮ ಸೇವೆಯಿಂದ ನಿವೃತ್ತಿ ಪಡೆದರು.

ತಮ್ಮ ಹಳ್ಳಿಯಲ್ಲಿ ಶಾಲೆ ಇಲ್ಲದ ಕಾರಣ ಅವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ತಮ್ಮ ತಾಯಿಯ ತವರಾದ ನಾಲೂರಿನಲ್ಲಿ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ಅಲ್ಲಿಗೆ ಸಮೀಪದ ಮೇಗರವಳ್ಳಿಯಲ್ಲಿ ಮುಂದುವರಿಸಿದರು. ಅವರ ಪ್ರತಿಭೆಯನ್ನು ಗುರುತಿಸಿದ ಶಾಲೆಯ ಅಧ್ಯಾಪಕರು ಅವರನ್ನು ಪ್ರೋತ್ಸಾಹಿಸಿದರು. ಇತರೆ ವಿಷಯಗಳಲ್ಲಿ ಅವರಿಗೆ ಆಸಕ್ತಿಯಿದ್ದರೂ ಅದೇಕೊ ಗಣಿತ ಅವರಿಗೆ ಮೆಚ್ಚುಗೆಯ ವಿಷಯವಾಗಿರಲಿಲ್ಲ. ಅವರ ಮುಂದಿನ ಬದುಕಿನಲ್ಲಿ ಸಹ ಅವರ ವ್ಯವಹಾರಗಳಲ್ಲಿ ಗಣಿತ ಮಹತ್ವ ಪಡೆದುಕೊಳ್ಳಲಿಲ್ಲ ಎನ್ನುವುದು ದಿಟ.

ಶಾಲೆಯ ದಿನಗಳಲ್ಲೇ ನಾಯಕರ ಸಾಹಿತ್ಯ ಆಸಕ್ತಿ ಚಿಗುರುತ್ತಿದ್ದುದಕ್ಕೆ ಸಾಕಷ್ಟು ಕುರುಹುಗಳು ಸಿಗುತ್ತವೆ. ಚಿಕ್ಕ ವಯಸ್ಸಿನಲ್ಲೇ ಅವರು ಪುಸ್ತಕ ಪ್ರಿಯರಾಗಿದ್ದರು, ಮಕ್ಕಳ ಪತ್ರಿಕೆಗಳಲ್ಲಿ ಅವರು ತಮ್ಮ ಬರಹಗಳನ್ನು ಪ್ರಕಟಿಸುತ್ತಿದ್ದರು, ಸಾಹಿತಿಗಳ ಬಗೆಗೆ ಆಸಕ್ತರಾಗಿದ್ದರು, ಕವನಗಳನ್ನು ಹಾಡುತ್ತಿದ್ದರು. ಮಗನ ಈ ಚಟುವಟಿಕೆಗಳನ್ನು ತಂದೆತಾಯಿಯರು ಪ್ರೋತ್ಸಾಹಿಸಿದರು. ಅವರ ಸಾಹಿತ್ಯದ ಮೊದಲ ಓದುಗರು ಮತ್ತು ಆಸ್ವಾದಿಕರು ಅವರ ತಾಯಿಯೇ ಆಗಿದ್ದರು. ತಾಯಿಯ ಸೋದರ ಮಾವಂದಿರಾದ ನಾಲೂರು ಶಂಕರಪ್ಪ ಗೌಡರು ಮತ್ತು ಚಿನ್ನಪ್ಪ ಗೌಡರು ಸಾಹಿತ್ಯದಲ್ಲಿ ಅಭಿರುಚಿಯುಳ್ಳವರಾಗಿದ್ದ ಕಾರಣ ಅವರ ಮನೆಗೆ ಆಗಾಗ ಸಾಹಿತಿಗಳು ಬಂದು ಹೋಗುತ್ತಿದ್ದರು.

ಹಾಗೆ ಬಂದವರಲ್ಲಿ ಆಗಿನ ಕಾಲಕ್ಕೆ ಸರ್ಕಾರದ ಉನ್ನತ ಹುದ್ದೆಯಲ್ಲಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರರು ಒಬ್ಬರಾಗಿದ್ದರು. ಬಾಲಕ ಮಾನಪ್ಪನಿಗೆ ಅಲ್ಲಿಯೇ ಮಾಸ್ತಿಯವರ ಮೊದಲ ಭೆಟ್ಟಿಯಾಯಿತು. ಮಾಸ್ತಿಯವರು ಬಾಲಕನನ್ನು ಮೆಚ್ಚಿಕೊಂಡರು, ಅವನಲ್ಲಿದ್ದ ಸಾಹಿತ್ಯದ ಒಲವನ್ನು ಗುರುತಿಸಿ ಪ್ರೀತಿಯ ಮಾತುಗಳನ್ನಾಡಿ ಪ್ರೋತ್ಸಾಹಿಸಿದರು. ಅಂದು ಅಂಟಿಕೊಂಡ ಮಾಸ್ತಿ-ಮಾನಪ್ಪರ ಬೆಸುಗೆ ಅವರ ಜೀವನದ ಕೊನೆಯವರೆಗೂ ಆತ್ಮೀಯವಾಗಿ ಮುಂದುವರಿದುಕೊಂಡು ಹೋದದ್ದು ಹಿರಿಕಿರಿಯರ ನಡುವಿನ ಸಾಮರಸ್ಯಕ್ಕೊಂದು ಉತ್ತಮ ನಿದರ್ಶನ.

ಮೇಗರವಳ್ಳಿಯಲ್ಲಿ ಮಾಧ್ಯಮಿಕ ಶಾಲೆ ಮುಗಿಸಿದ ಮಾನಪ್ಪ ಮುಂದೆ ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ತೀರ್ಥಹಳ್ಳಿಗೆ ಬಂದರು. ಆ ಸಮಯಕ್ಕೆ ತೀವ್ರವಾಗಿದ್ದ ಸ್ವಾತಂತ್ರ್ಯ ಚಳವಳಿ ಮಾನಪ್ಪ ಅವರನ್ನು ಸೆಳೆಯಿತು. ಜೀವನದ ತಿರುವುಗಳೇ ಬಲು ವಿಚಿತ್ರ. ಆದೇ ಸಮಯಕ್ಕೆ ಮಾನಪ್ಪ ತೀವ್ರ ಕೀಲುರೋಗ ಭಾದೆಗೆ ಗುರಿಯಾಗಿ, ಕೇರಳದ ಆಯುರ್ವೇದ ಪಂಡಿತರ ಉಪಚಾರ ಪಡೆಯಲು ಕೆಲವು ಕಾಲ ಉಡುಪಿಯಲ್ಲಿ ಇರಬೇಕಾಗಿ ಬಂತು.  ಆ ಕಾರಣ ಅವರ ಸ್ವಾತಂತ್ರ್ಯ ಚಳವಳಿ ಮೊಟಕುಗೊಂಡಿತು.

ಆದರೆ ಅವರ ಸಾಹಿತ್ಯ ಚಟುವಟಿಕೆಗಳಿಗೆ ಅಡಿಪಾಯ ಹಾಕುವಲ್ಲಿ ತೀರ್ಥಹಳ್ಳಿಯ ಪ್ರೌಢಶಾಲೆ ಪ್ರಮುಖ ಪಾತ್ರ ವಹಿಸಿತು. ಅದೇ ಶಾಲೆಯಲ್ಲಿ ಕನ್ನಡ ಪಂಡಿತರಾಗಿದ್ದ ಕಮಕೋಡು ನರಸಿಂಹ ಶಾಸ್ತ್ರಿಯವರ ಮಾರ್ಗದರ್ಶನ ಮತ್ತು ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಕೆ. ಕೃಷ್ಣಸ್ವಾಮಿ ಅಯ್ಯಂಗಾರ್ ಇವರ ಪ್ರೋತ್ಸಾಹಗಳು ಮಾನಪ್ಪ ಅವರಿಗೆ ಆಸರೆಯಾದವು. ಅವರ ಹೈಸ್ಕೂಲ್ ದಿನಗಳಲ್ಲೇ ಅವರ ಮೊದಲ ಕೃತಿ ‘ಬಾಳ್ನೋಟಗಳು’ ರಚಿತವಾಗಿ, ಧಾರವಾಡದ ಮನೋಹರ ಗ್ರಂಥಮಾಲೆಯ ಮೂಲಕ ಪ್ರಕಟಗೊಂಡಿತು. ಆ ಪುಟ್ಟ ಪುಸ್ತಕವನ್ನು ಮಾನಪ್ಪ ತನ್ನ ಗುರುಗಳಾಗಿದ್ದ ಕೃಷ್ಣಸ್ವಾಮಿ ಅಯ್ಯಂಗಾರರಿಗೆ ಅರ್ಪಿಸಿರುವುದು ಮತ್ತು ಅದಕ್ಕೆ ಇನ್ನೊಬ್ಬ ಗುರುಗಳಾದ ನರಸಿಂಹ ಶಾಸ್ತ್ರಿಗಳು ಮುನ್ನುಡಿ ಬರೆದಿರುವುದು ಗಮನಾರ್ಹ ಅಂಶಗಳು. ಅವರು ತಮ್ಮ ಜೀವನದುದ್ದಕ್ಕೂ ಬೆಳೆಸಿಕೊಂಡು ಬಂದ ಗುರುಹಿರಿಯರ ಬಗೆಗಿನ ಕೃತಜ್ಞತಾ ನಡವಳಿಕೆಗಳಿಗೆ ಇದೊಂದು ನಿದರ್ಶನ.

ತೀರ್ಥಹಳ್ಳಿಯ ಶಾಲಾ ದಿನಗಳಲ್ಲಿ ಮಾನಪ್ಪ ಅಲ್ಲಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾಪಗಳಿಗೆ ಸೂಕ್ತ ವೇದಿಕೆಯೊಂದನ್ನು ಪ್ರಾರಂಭಿಸಿದರು. ‘ಮಿತ್ರರ ಬಳಗ’ ಎಂಬ ಸಂಘವನ್ನು ಕಟ್ಟಿಕೊಂಡು ಅದರ ವತಿಯಿಂದ ನಾಡಿನ ಶ್ರೇಷ್ಠ ಸಾಹಿತಿಗಳನ್ನು ತೀರ್ಥಹಳ್ಳಿಗೆ ಬರಮಾಡಿ, ಅವರ ಭಾಷಣಗಳನ್ನು ಏರ್ಪಡಿಸಿದರು. ಹಾಗೆ ಬಂದವರಲ್ಲಿ ಶಿವರಾಮ ಕಾರಂತರು, ಎಂ. ವಿ. ಶ್ರೀನಿವಾಸಮೂರ್ತಿ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಅ. ನ. ಕೃಷ್ಣರಾಯರು, ತ. ರಾ. ಸುಬ್ಬರಾಯರು, ಚದುರಂಗ ಪ್ರಮುಖರು.  ಮಾನಪ್ಪನ ಸಾಹಿತ್ಯಕ ಆಸಕ್ತಿಗಳು ಬೆಳೆಯುವಲ್ಲಿ ಮತ್ತು ಬದುಕನ್ನು ರೂಪಿಸುವಲ್ಲಿ ಚಿಕ್ಕ ವಯಸ್ಸಿನಲ್ಲಿ ಇಂಥ ಸಾಹಿತ್ಯ ದಿಗ್ಗಜರ ಸಂಪರ್ಕ ಪರಿಣಾಮಕಾರಿ ಪ್ರಭಾವ ಬೀರಿತು ಎಂದು ಊಹಿಸಿಕೊಳ್ಳಬಹುದು. ಮುಂದೆ ಎರಡು ವರ್ಷ ಶಿವಮೊಗ್ಗ ಇಂಟರ್‍ಮೀಡಿಯಟ್ ಕಾಲೇಜಿನಲ್ಲಿ ಅಭ್ಯಾಸ; ಮಹತ್ತರ ಘಟನೆಗಳೇನೂ ಸಂಭವಿಸದ ಒಂದು ಬಗೆಯ ನಿಶ್ಚಲ ಅವಧಿ. ಹಾಗಾದರೂ ಇದೇ ಸಮಯದಲ್ಲಿ. ಮುಂದೆ ತಮ್ಮ ಬರವಣಿಗೆಯ ಪ್ರಮುಖ ಪ್ರಕಾರವಾದ ಅಂಕಣ ಲೇಖನಗಳನ್ನು ಬರೆಯಲು ಪ್ರಾರಂಭಿಸಿದರು. ಕೆಲವು ಕಥೆಗಳನ್ನೂ ಇಲ್ಲಿಯೇ ಬರೆದರು.

 

ಇಂಟರ್ ಮುಗಿಸಿದ ನಾಯಕರ ಮುಂದಿನ ನಿಲ್ದಾಣ ಮೈಸೂರಿನ ಮಹಾರಾಜ ಕಾಲೇಜು. ಬಹುಶಃ ಮಹಾರಾಜ ಕಾಲೇಜಿನ ದಿನಗಳು ಅವರ ಜೀವನದ ಮಹತ್ವದ ಘಟ್ಟಗಳಲ್ಲಿ ಒಂದು ಎಂದು ಪರಿಗಣಿಸಬಹುದೇನೋ? ಕನ್ನಡ ಆನರ್ಸ್ ಸೇರಿದ ಅವರಿಗೆ ದೊರೆತ ಅಧ್ಯಾಪಕ ವರ್ಗ, ಅವರ ಸಹಪಾಠಿಗಳು ಮತ್ತು ಅಲ್ಲಿ ಅವರು ಬೆಳೆಸಿಕೊಂಡ ಸಂಪರ್ಕಗಳು ಯಾರೂ ಹೆಮ್ಮೆ ಪಟ್ಟುಕೊಳ್ಳಬಹುದಾದ ಉತ್ಕೃಷ್ಟ ರೀತಿಯವು. ಅವರ ಗುರುಗಳಾಗಿದ್ದವರು—ಕುವೆಂಪು, ಡಿ. ಎಲ್. ನರಸಿಂಹಾಚಾರ್, ಎಸ್. ವಿ. ಪರಮೇಶ್ವರ ಭಟ್ಟ, ತ. ಸು. ಶ್ಯಾಮರಾಯ, ದೇ. ಜವರೇಗೌಡ ಮುಂತಾದ ಸಾಹಿತ್ಯ ದಿಗ್ಗಜರು ಮತ್ತು ಮಹಾನ್ ಪಂಡಿತರು. ಇವರೆಲ್ಲರೂ ನಾಯಕರನ್ನು ತಮ್ಮ ಶಿಷ್ಯನನ್ನಾಗಿ ಆತ್ಮೀಯವಾಗಿ ಸ್ವೀಕರಿಸಿದರು ಮತ್ತು ಆಶೀರ್ವದಿಸಿದರು ಎನ್ನುವುದು ಅವರ ಜೀವನದ ಮಹಾ ಭಾಗ್ಯ.

ಇನ್ನು ಆನರ್ಸ್ ತರಗತಿಯಲ್ಲಿ ಅವರ ಸಹಪಾಠಿಗಳಾಗಿದ್ದವರು ಮುಂದೆ ಕನ್ನಡ ಸಾರಸ್ವತ ಲೋಕದಲ್ಲಿ ಹೆಸರು ಮಾಡಿದ ಜಿ.ಎಸ್. ಸಿದ್ದಲಿಂಗಯ್ಯ, ಸಾ. ಶಿ. ಮರುಳಯ್ಯ, ಎಸ್. ಎಂ. ವೃಷಭೇಂದ್ರಸ್ವಾಮಿ ಅವರಂಥ ಪ್ರತಿಭಾವಂತರು. ಅಂದಿನ ಮಹಾರಾಜಾ ಕಾಲೇಜಿನ ಸಂದರ್ಭದಲ್ಲಿ ಹಾ. ಮಾ. ನಾಯಕರ ವಿದ್ಯಾರ್ಥಿ ಜೀವನವನ್ನು ಕುರಿತು ವೃಷಭೇಂದ್ರಸ್ವಾಮಿ ಹೀಗೆ ಬರೆಯುತ್ತಾರೆ: “ಸಹಪಾಠಿ ಮಿತ್ರ ಹಾಮಾನಾರ ವಿದ್ಯಾರ್ಥಿಜೀವನ, ಭಾಷಣ ಸ್ಪರ್ಧೆಗಳು, ಮಿತ್ರರ ಸಹಸ್ಪಂದನ, ಅಂದಿನ ಮೈಸೂರಿನ ‘ನವೋದಯ-ನವ್ಯ ಸಾಹಿತ್ಯ ಸಂಘರ್ಷ’, ಮೈಸೂರು ವಿ.ವಿ.ದಲ್ಲಿ ಕನ್ನಡದ ಸ್ಥಾನ-ಮಾನ ರಕ್ಷಣೆಗೆ ವಿದ್ಯಾರ್ಥಿಗಳ ಹೋರಾಟದಲ್ಲಿ ನಾಯಕರ ಪಾತ್ರ, ಅಂದಿನ ಮಹಾರಾಜ ಕಾಲೇಜಿನ ಕನ್ನಡ ವಿಭಾಗದ ಹೇಮಾ-ಹೇಮಿ ಪ್ರಾಧ್ಯಾಪಕರು, ಭರವಸೆ ತುಂಬಿದ ಕಣ್ಣುಗಳ ಕನ್ನಡ ವಿದ್ಯಾರ್ಥಿಗಳು—ಡಾ. ತಿಪ್ಪೇರುದ್ರಸ್ವಾಮಿ, ಡಾ. ಪ್ರಭುಶಂಕರ, ಡಾ. ಜಿ.ಎಸ್. ಶಿವರುದ್ರಪ್ಪ, ಡಾ. ಚಿದಾನಂದಮೂರ್ತಿ, ವೆಂಕಟಾಚಲಶಾಸ್ತ್ರಿ, ಸುಜನಾ, ನಾನು (ವೃಷಭೇಂದ್ರಸ್ವಾಮಿ), ಮರುಳಯ್ಯ, ಕೆ.ವಿ. ಸುಬ್ಬಣ್ಣ, ಜಿ.ಎಸ್. ಸಿದ್ದಲಿಂಗಯ್ಯ ಮುಂತಾದ ‘ಕನ್ನಡ ನಕ್ಷತ್ರ’ ಬಳಗದಲ್ಲಿ ಡಾ. ಹಾಮಾನಾ ಒಂದು ‘ಬೆಳ್ಳಿ ನಕ್ಷತ್ರ’ದಂತಿದ್ದರು.” (1)

ಮಹಾರಾಜ ಕಾಲೇಜು ದಿನಗಳಲ್ಲಿ ನಾಯಕರ ಸಾಹಿತ್ಯ ಚಟುವಟಿಕೆಗಳು ಗರಿಗೊಂಡವು, ಮಿತ್ರವೃಂದವೂ ವ್ಯಾಪಕವಾಗಿ ಬೆಳೆಯಿತು. ಅಂದಿನ ಚರ್ಚಾಸ್ಪರ್ಧೆಗಳಲ್ಲಿ ನಾಯಕರದೇ ಸಾರ್ವಭೌಮತ್ವ. ಕೆ.ವಿ. ಸುಬ್ಬಣ್ಣ ಜೊತೆಯಲ್ಲಿ ಸಂಪಾದಿಸಿ, ಎಸ್. ವಿ. ರಂಗಣ್ಣ ಅವರಿಗೆ ಅರ್ಪಿಸಿದ ‘ಬಾಗಿನ’ ಒಂದು ವಿಶಿಷ್ಟ ಪರಂಪರೆಯ ಮಹತ್ವದ ದಾಖಲೆ. ಕುವೆಂಪು ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದಾಗ, ಅವರ ಅಭಿನಂದನಾ ಸಮಾರಂಭದಲ್ಲಿ ನಾಯಕರು ಮಾಡಿದ ಭಾಷಣ, ಆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು.

ಅವರು ಆನರ್ಸ್ ವಿದ್ಯಾರ್ಥಿಯಾಗಿದ್ದಾಗಲೇ ‘ಇಂಡಿಯನ್ ಪಿ. ಇ. ಎನ್’ನ ಸದಸ್ಯರಾಗಿದ್ದು, ಅದರ ಪತ್ರಿಕೆಗೆ ಬರೆಯುತ್ತಿದ್ದರು ಎನ್ನುವುದು ನನ್ನ ನೆನಪು. ಅದಕ್ಕೆ ಸಂಬಂಧಪಟ್ಟಂತೆ ನನಗೆ ಇನ್ನೂ ಒಂದು ಘಟನೆ ನೆನಪಿನಲ್ಲಿ ಉಳಿದು ಬಂದಿದೆ. ಆ ಪತ್ರಿಕೆಗೆ ಒಂದು ಲೇಖನ ಸಿದ್ದಪಡಿಸಿ, ತಮ್ಮ ಸ್ನೇಹಿತರಾದ ಇಂಗ್ಲಿಷ್ ಆನರ್ಸ್ ಓದುತ್ತಿದ್ದ ನ. ರತ್ನ ಅವರಿಗೆ ಅದರ ವ್ಯಾಕರಣ ನೋಡಲು ಕೊಟ್ಟರು. ರತ್ನ ಅವರು ಲೇಖನದಲ್ಲಿನ ನಾಯಕರ ಅಭಿಪ್ರಾಯಗಳನ್ನು ಕುರಿತು ಸಲಹೆ ಕೊಟ್ಟರು. ಆಗ ನಾಯಕರು, “ಸ್ವಾಮಿ, ಏನು ಬರೆಯಬೇಕು ಎನ್ನುವ ವಿಚಾರ ನನಗೆ ಬಿಡಿ. ನೀವು ಲೇಖನದ ಭಾಷಾ ತಪ್ಪುಗಳನ್ನು ಮಾತ್ರ ತಿದ್ದಿದರೆ ಸಾಕು” ಎಂದರು. ಇದು ನಾಯಕರ ರೀತಿ. ಯಾರೂ ತಮ್ಮ ಅಭಿಪ್ರಾಯಗಳ ಮೇಲೆ ಸವಾರಿ ಮಾಡಲು ಅವಕಾಶ ಕೊಡುತ್ತಿರಲಿಲ್ಲ. ಇದು ಅವರ ಆತ್ಮವಿಶ್ವಾಸವನ್ನು ಸೂಚಿಸುತ್ತಾದರೂ, ಅತಿಯಾದ ಆತ್ಮವಿಶ್ವಾಸ ಸಹ ಒಂದು ಬಗೆಯ ದೌರ್ಬಲ್ಯ ಆಗಲೂಬಹುದು!

ಮೈಸೂರಿನಲ್ಲಿ ಆನರ್ಸ್ ಓದುತ್ತಿದ್ದ ಮೂರು ವರ್ಷಗಳ ಕಾಲ ಮಹಾರಾಜ ಕಾಲೇಜ್ ಹಾಸ್ಟೆಲಿನಲ್ಲಿ ನಾಯಕರ ವಾಸ್ತವ್ಯ. ಆ ಮೂರು ವರ್ಷಗಳಲ್ಲಿ ಒಂದು ವರ್ಷ ನಾನು ಅವರೂ ಒಂದೇ ಕೊಠಡಿಯಲ್ಲಿದ್ದೆವು. ಹಾಸ್ಟೆಲಿನಲ್ಲಿ ಸಹ ಅವರು ಜನಪ್ರಿಯ ವಿದ್ಯಾರ್ಥಿಯಾಗಿದ್ದರು. ಹಾಸ್ಟೆಲ್ ಮ್ಯಾಗಜಿನ್‍ಗೆ ಅವರೇ ಸಂಪಾದಕರಾಗಿದ್ದರೆಂದು ನನ್ನ ನೆನಪು. ಅಲ್ಲಿ ಅವರ ಸಂಗಾತಿಗಳಾಗಿದ್ದವರು ಕೆ. ವಿ. ಸುಬ್ಬಣ್ಣ, ಎಚ್. ಎಸ್. ಬಿಳಿಗಿರಿ, ನ. ರತ್ನ ಮುಂತಾದವರು. ಆ ಕಾಲಕ್ಕೆ ನಾಯಕರು ಎಂಥ ಪ್ರಭಾವಿ ಸಾಹಿತಿಗಳ ಸ್ನೇಹ ಸಂಪರ್ಕದಲ್ಲಿದ್ದರೆಂದು ತಿಳಿಯಲು ಅವರ ಕೊಠಡಿಗೆ ಬಂದು ಹೋಗುತ್ತಿದ್ದವರ ಪಟ್ಟಿಯನ್ನು ನೋಡಿದರೆ ಸ್ಪಷ್ಟವಾಗುತ್ತದೆ. ಹಾಗೆ ಬರುತ್ತಿದ್ದವರಲ್ಲಿ ಗೋಪಾಲಕೃಷ್ಣ ಅಡಿಗರು, ನಿರಂಜನರು, ಎಸ್. ವಿ. ಪರಮೇಶ್ವರ ಭಟ್ಟರು, ಹೆಚ್. ಎಂ. ಶಂಕರನಾರಾಯಣರಾಯರು, ಕಲಾವಿದ ಆರ್. ಎಸ್. ನಾಯ್ಡು ಅವರು, ದೇ. ಜವರೇಗೌಡರು ನನ್ನ ನೆನಪಿನಲ್ಲಿ ಉಳಿದುಕೊಂಡಿದ್ದಾರೆ.

ಆನರ್ಸ್ ಮುಗಿಯುತ್ತಿದ್ದಂತೆ ನಾಯಕರು ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ನೇಮಕಗೊಂಡು ಅಲ್ಲಿಗೆ ಹೋದರು. ಅದು ಅವರ ವೃತ್ತಿ ಜೀವನದ ಮೊದಲ ಹೆಜ್ಜೆ. ಕಾಲೇಜಿಗೆ ಹಾಗೂ ವೃತ್ತಿಗೆ ಹೊಸಬರಾದರೂ, ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿ, ಸಾಕಷ್ಟು ಮನ್ನಣೆ ಪಡೆದುಕೊಂಡರು. ಇದಕ್ಕೆ ಪೂರಕವಾಗಿ ನನ್ನದೇ ಆದ ಮಾಹಿತಿ ಇದೆ. ಅದೇ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದು, ನಂತರ ಮೈಸೂರಿನಲ್ಲಿ ನನ್ನ ಸಹಪಾಠಿಯಾಗಿದ್ದ ನನ್ನ ಮಿತ್ರರೊಬ್ಬರು ತಮಾಷೆಯಾಗಿ ಹೇಳುತ್ತಿದ್ದ ಒಂದು ಸಂಗತಿಯನ್ನು ಇಲ್ಲಿ ಉಲ್ಲೇಖಿಸಬಹುದು. ಆ ಸಂದರ್ಭದಲ್ಲಿ ತುಮಕೂರಿನ ಕಾಲೇಜಿನಲ್ಲಿ ಮೂವರು ಕನ್ನಡ ಅಧ್ಯಾಪಕರಿದ್ದರಂತೆ. ಒಬ್ಬರು ಪ್ರೊ. ಸಿ. ಮಹದೇವಪ್ಪನವರು-ಸೇವೆಯಲ್ಲಿ ಹಿರಿಯರು. ಇನ್ನೊಬ್ಬರು ನಾಯಕರು–ಸೇವೆಯಲ್ಲಿ ಕಿರಿಯರು. ಇವರಿಬ್ಬರ ನಡುವೆ ಇನ್ನೊಬ್ಬರು—ಅವರ ಹೆಸರು ನೆನಪಿಗೆ ಬರುತ್ತಿಲ್ಲ. ಕಾಲೇಜಿನ ವಿದ್ಯಾರ್ಥಿಗಳು ಮಹದೇವಪ್ಪನವರನ್ನು ‘ಹೆಡ್’ ಎಂದು, ಆ ಇನ್ನೊಬ್ಬರನ್ನು ‘ಟ್ರಂಕ್’ ಎಂದು, ನಾಯಕರನ್ನು ‘ಟೇಲ್’ಎಂದೂ ಕರೆಯುತ್ತಿದ್ದರಂತೆ. ನನ್ನ ಸ್ನೇಹಿತ ಹೇಳಿದ ಪ್ರಕಾರ, ‘ಹೆಡ್’ ಮತ್ತು ‘ಟ್ರಂಕ್’ ಗಳಿಗಿಂತ ‘ಟೇಲೇ’ ವಿದ್ಯಾರ್ಥಿಗಳ ನಡುವೆ ಹೆಚ್ಚು ಜನಪ್ರಿಯವಾಗಿತ್ತು. ತುಮಕೂರಿನಲ್ಲಿ ನಾಯಕರು ಇದ್ದದ್ದು ಕೇವಲ ಒಂದು ಅಥವಾ ಒಂದುವರೆ ವರ್ಷಗಳು ಮಾತ್ರ; ಅಲ್ಲಿರುವಾಗಲೇ ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ವೇತನ ಪಡೆದು ಭಾಷಾಶಾಸ್ತ್ರದಲ್ಲಿ ಹೆಚ್ಚಿನ ವ್ಯಾಸಂಗಕ್ಕೆ ಕಲ್ಕತ್ತಾ ವಿಶ್ವವಿದ್ಯಾಲಯಕ್ಕೆ ತೆರಳಿದರು.

ಮುಂದಿನ ಎರಡು ವರ್ಷ ನಾಯಕರು ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರದ ಎಂ. ಎ. ಪದವಿಗೆ ಅಭ್ಯಾಸ ಮಾಡಿದರು. ಅಲ್ಲಿಯೂ ಅವರಿಗೆ ದೊರೆತ ಗುರುವರ್ಗವನ್ನು ಅವರು ಸದಾ ಹೆಮ್ಮೆಯಿಂದ ಸ್ಮರಿಸಿಕೊಳ್ಳುತ್ತಿದ್ದರು. ಡಾ. ಸುನೀತಕುಮಾರ ಚಟರ್ಜಿ ಮತ್ತು ಡಾ. ಸುಕುಮಾರ ಸೇನ್ ಅವರುಗಳು ಪ್ರಮುಖರು. ಈ ಹಿರಿಯರು ನಾಯಕರನ್ನು ಅತಿಯಾಗಿ ಮೆಚ್ಚಿಕೊಂಡಿದ್ದರು. ನಾಯಕರ ಬಗೆಗಿನ ಸುಕುಮಾರ ಸೇನ್‍ರ ವಿಶ್ವಾಸವಂತೂ ವಿಶಿಷ್ಟವಾದದ್ದಾಗಿತ್ತು. ನಾಯಕರು ತಮ್ಮ ಹೆಚ್ಚಿನ ಅಧ್ಯಯನಕ್ಕೆ ಅಮೆರಿಕಾಕ್ಕೆ ಹೋದ ಸಂದರ್ಭದಲ್ಲಿ, ಸೇನರು ಮೈಸೂರು ವಿಶ್ವವಿದ್ಯಾಲಯಲ್ಲಿ ವಿಶೇಷ ಉಪನ್ಯಾಸಗಳನ್ನು ಕೊಡಲು ಅಲ್ಲಿಗೆ ಬಂದವರು, ನಾಯಕರ ಮನೆಯಲ್ಲಿಯೇ ಮೂರು ದಿನ ತಂಗಿದ್ದರು. ವಿಶ್ವವಿದ್ಯಾಲಯದ ಪ್ರತಿಷ್ಠಿತ ಅತಿಥಿಯಾಗಿದ್ದ ಅವರು ಇಷ್ಟಪಟ್ಟಿದ್ದರೆ, ವಿಶ್ವವಿದ್ಯಾಲಯದ ಆತಿಥ್ಯ ಪಡೆದುಕೊಳ್ಳುವ ಅವಕಾಶ ಇದ್ದಿತು. ಹಾಗಾದರೂ ಅವರು ನಾಯಕರ ಮನೆಯಲ್ಲಿ ಉಳಿದುಕೊಂಡದ್ದು ಅವರ ಶಿಷ್ಯನ ಬಗೆಗೆ ಅವರು ತೋರಿದ ಉದಾತ್ತ ಪ್ರೀತಿಯ ದ್ಯೋತಕ ಎನ್ನಬಹುದು. ತೀರಾ ಹಿರಿಯರಾಗಿದ್ದ ಸೇನ್‍ರನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನದಾಗಿತ್ತು. ಆ ಸಮಯದಲ್ಲಿ ಅವರು ನಾಯಕರನ್ನು ಕುರಿತು ಆಡಿದ ಮೆಚ್ಚುಗೆಯ ಮಾತುಗಳು ನನಗೆ ಇನ್ನೂ ನೆನಪಿನಲ್ಲಿ ಉಳಿದಿವೆ.

ನಾಯಕರ ಕಲ್ಕತ್ತದ ದಿನಗಳಲ್ಲಿ ಅವರ ಆಸಕ್ತಿ ಬರಿಯ ಭಾಷಾಶಾಸ್ತ್ರ ಅಧ್ಯಯನಕ್ಕೆ ಸೀಮಿತವಾಗಿರಲಿಲ್ಲ. ಬಂಗಾಳಿ ಸಾಹಿತ್ಯ ಮತ್ತು ರವೀಂದ್ರನಾಥ ಠಾಗೂರ್ ಬಗ್ಗೆ ಅಪಾರ ಒಲವಿದ್ದ ಅವರು ಅಲ್ಲಿನ ಸಾಹಿತ್ಯ ಮತ್ತು ಸಂಸ್ಕೃತಿಯ ಪರಿಚಯವನ್ನೂ ಪಡೆದುಕೊಂಡರು. ಅಲ್ಲಿ ಅವರು ಸಾಹಿತ್ಯ ಮಿತ್ರರನ್ನು ಸಂಪಾದಿಸಿದರು. ಆ ಕಾಲಕ್ಕೆ ಅಲ್ಲಿಯ ರಾಷ್ಟ್ರೀಯ ಗ್ರಂಥಾಲಯದ ಮುಖ್ಯ ಅಧಿಕಾರಿಯಾಗಿದ್ದ ಕನ್ನಡಿಗ ಪದ್ಮಶ್ರೀ ಬಿ. ಎಸ್. ಕೇಶವನ್ ಅವರ ಪರಿಚಯ ಮತ್ತು ಒಡನಾಟ ಆ ನಂತರದಲ್ಲೂ ಮುಂದುವರಿದುಕೊಂಡು ಹೋಯಿತು. ಕಲ್ಕತ್ತದಿಂದ ಹಿಂತಿರುಗಿದ ನಂತರದಲ್ಲಿ ನಾಯಕರು ರವೀಂದ್ರನಾಥ ಠಾಕೂರ್ ಕುರಿತು ಒಂದು ಪುಸ್ತಕವನ್ನು ಬರೆದು ಪ್ರಕಟಿಸಿದರು. ಆ ಪುಸ್ತಕವನ್ನು ಅವರು ತಮ್ಮ ಗುರುಗಳಾದ ಸುಕುಮಾರ ಸೇನ್‍ರಿಗೆ ಅರ್ಪಣೆ ಮಾಡಿದ್ದಾರೆ.

 

ಕಲ್ಕತ್ತದಲ್ಲಿ ಹೆಚ್ಚಿನ ವ್ಯಾಸಂಗ ಮುಗಿಸಿ ವಾಪಾಸಾದ ನಾಯಕರನ್ನು ಸರ್ಕಾರ ಶಿವಮೊಗ್ಗೆಯ ಪ್ರಥಮ ದರ್ಜೆ ಕಾಲೇಜಿಗೆ (ಈಗಿನ ಸಹ್ಯಾದ್ರಿ ಕಾಲೇಜು) ಕನ್ನಡ ಅಧ್ಯಾಪಕರನ್ನಾಗಿ ನೇಮಕ ಮಾಡಿತು. ಹಿಂದೆ ಅಲ್ಲಿಯೇ ಅವರು ತಮ್ಮ ಇಂಟರ್ ಮೀಡಿಯಟ್ ತರಗತಿಗಳನ್ನು ಓದಿದ್ದು. ತಾವೇ ವಿದ್ಯಾರ್ಥಿಯಾಗಿದ್ದ ಪರಿಚಿತ ಪರಿಸರದಲ್ಲಿ ಅವರು ಸ್ವಲ್ಪವೇ ಸಮಯ ಕೆಲಸ ಮಾಡಿದರು. ಅಲ್ಲಿದ್ದ ಕಡಿಮೆ ಸಮಯದಲ್ಲಿ ಅವರ ಬದುಕಿನ ಯಾವುದೇ ಮಹತ್ತರ ಘಟನೆಗಳೂ ಸಂಭವಿಸಲಿಲ್ಲ ಎನ್ನುವುದು ನನ್ನ ನೆನಪು.

ಶಿವಮೊಗ್ಗದಿಂದ ಮೈಸೂರಿಗೆ ವರ್ಗವಾದ ನಾಯಕರು, ಮುಂದೆ ತಮ್ಮ ಇಡಿಯ ಜೀವನವನ್ನು ಅಲ್ಲಿಯೇ ಬದುಕಿದರು. ಈ ಹಿಂದೆ ಅವರು ಮೈಸೂರಿನ ಮಹರಾಜಾ ಕಾಲೇಜಿನಲ್ಲಿ ತಮ್ಮ ಕನ್ನಡ ಆನರ್ಸ್ ಪದವಿಯನ್ನು ಪಡೆದುಕೊಂಡಿದ್ದರು; ಈಗ ಅದೇ ಕಾಲೇಜಿಗೆ ಅಧ್ಯಾಪಕರಾಗಿ ಬಂದದ್ದು ಅವರಿಗೆ ಹೆಮ್ಮೆಯ ವಿಷಯವಾಗಿತ್ತು. ತಮ್ಮ ಗುರುಗಳಾಗಿದ್ದ ಡಿ. ಎಲ್. ಎನ್., ದೇ.ಜ.ಗೌ., ಪರಮೇಶ್ವರ ಭಟ್ಟ ಮುಂತಾದವರ ಜೊತೆಯಲ್ಲಿ, ಅವರ ಸಹೋದ್ಯೋಗಿಯಾಗಿ ಕೆಲಸ ಮಾಡುವ ಅವಕಾಶ ದೊರೆತದ್ದು ಅವರಿಗೆ ಸಂತೋಷವನ್ನು ತಂದುಕೊಟ್ಟಿತ್ತು. ಹಾಗೆಯೇ ಮೈಸೂರಿನ ಸಾಹಿತ್ಯ ಮತ್ತು ಸಂಸ್ಕೃತಿಯ ಪರಿಸರಗಳು ಕೂಡಾ ಅವರಿಗೆ ಅಪ್ಯಾಯಮಾನವಾಗಿದ್ದವು.

ಕುವೆಂಪು ಅವರ ದೂರದೃಷ್ಟಿಯ ಪ್ರತೀಕವಾಗಿ, 1960ರ ಸಮಯಕ್ಕೆ ಮೈಸೂರು ವಿಶ್ವವಿದ್ಯಾಲಯದ ಸ್ನಾತ್ತಕೋತ್ತರ ಇಲಾಖೆಗಳು ಮಾನಸ ಗಂಗೋತ್ರಿ ಕೇಂದ್ರದಲ್ಲಿ ಸ್ಥಾಪಿತವಾದವು. ಆಗ ಕನ್ನಡ ಸ್ನಾತ್ತಕೋತ್ತರ ವಿಭಾಗಕ್ಕೆ ಪ್ರೊ. ತೀ. ನಂ. ಶ್ರೀಕಂಠಯ್ಯನವರು ಮುಖ್ಯಸ್ಥರಾಗಿದ್ದರು. ಅಲ್ಲಿಗೆ ನಾಯಕರು ವರ್ಗವಾಗಿ ಬಂದವರು, (ತಮ್ಮ ಉನ್ನತ ಶಿಕ್ಷಣಕ್ಕೆ ಅಮೆರಿಕಾಕ್ಕೆ ತೆರಳಿದ ಎರಡು ವರ್ಷಗಳು ಮತ್ತು ಕುಲಪತಿಗಳಾಗಿ ಗುಲ್ಬರ್ಗಾಕ್ಕೆ ಹೋದ ಎರಡು ವರ್ಷಗಳನ್ನು ಹೊರತು ಪಡಿಸಿ) ತಮ್ಮ ನಿವೃತ್ತಿಯವರೆಗೆ, ಅಲ್ಲಿಯೇ ಉಳಿದುಕೊಂಡರು. ಸುದೀರ್ಘ ಮೂವತ್ತೈದು ವರ್ಷಗಳಷ್ಟು ಕಾಲ, ಗಂಗೋತ್ರಿಯ ಕನ್ನಡ ವಿಭಾಗ ಮತ್ತು ನಂತರದಲ್ಲಿ ಅಲ್ಲಿನ ಕನ್ನಡ ಅಧ್ಯಯನ ಸಂಸ್ಥೆ ಅವರ ಕರ್ಮಭೂಮಿಯಾಗಿ, ಅವರ ಬದುಕಿನ ಮಹತ್ಸಾಧನೆಗಳಿಗೆ ಸಾಕ್ಷಿಯಾಯಿತು.

ಮಾನಸಗಂಗೋತ್ರಿಯಲ್ಲಿ ನೆಲೆಯೂರಿದ ಕೆಲವೇ ಸಮಯದಲ್ಲಿ ಹಾಮಾನಾ ಅವರಿಗೆ ಹೆಚ್ಚಿನ ವ್ಯಾಸಂಗಕ್ಕೆ ಅಮೆರಿಕಾಕ್ಕೆ ಹೋಗುವ ಅವಕಾಶ ದೊರಕಿ ಬಂತು. ಫುಲ್‍ಬ್ರೈಟ್ ಶಿಷ್ಯವೇತನವನ್ನು ಪಡೆದು ಅವರು ಅಲ್ಲಿನ ಇಂಡಿಯಾನಾ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರದಲ್ಲಿ ಪಿಎಚ್. ಡಿ. ಅಧ್ಯಯನಕ್ಕೆ ತೆರಳಿದರು. ಅಲ್ಲಿ ಅವರಿಗೆ ಹಲವು ಪ್ರತಿಷ್ಠಿತ ಭಾಷಾಶಾಸ್ತ್ರಜ್ಞರ ಸಂಪರ್ಕ ದೊರಕಿತು. ಫ್ರೆಡ್ ಹೌಸ್‍ಹೋಲ್ಡರ್ ಎಂಬ ವಿದ್ವಾಂಸರ ಮಾರ್ಗದರ್ಶನದಲ್ಲಿ ಹಾಮಾನಾ ಎರಡು ವರ್ಷಕ್ಕೂ ಮೊದಲೇ ತಮ್ಮ ಡಾಕ್ಟರೇಟ್ ಪದವಿ ಗಳಿಸಿ ವಾಪಾಸಾದರು. ಅಷ್ಟು ಕಡಿಮೆ ಅವಧಿಯಲ್ಲಿ ಅವರು ತಮ್ಮ ಪಿಎಚ್. ಡಿ. ಅಧ್ಯಯನ ಮುಗಿಸಿದ್ದು ಒಂದು ಅಪರೂಪದ ದಾಖಲೆಯಾಗಿ ತೋರುತ್ತದೆ.

ಹಾಮಾನಾ ಅಲ್ಲಿ ಓದುತ್ತಿದ್ದ ಕಾಲಕ್ಕೆ ಡಾ. ಎ. ಕೆ. ರಾಮಾನುಜನ್ ಸಹ ಹಿರಿಯ ವಿದ್ಯಾರ್ಥಿಯಾಗಿ ಅದೇ ಇಲಾಖೆಯಲ್ಲಿ ಹೌಸ್‍ಹೋಲ್ಡರ್ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡುತ್ತಿದ್ದರು. ಮುಂದೆ ನಾನು ವಿಸ್ಕಾನ್ಸಿನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ಸಮಯದಲ್ಲಿ ಡಾ. ರಾಮಾನುಜಮ್ ಅಲ್ಲಿಗೆ ಅವರ ತಂಗಿ ಸರೋಜ ಮತ್ತು ಭಾವ ಡಾ. ಎಂ. ಜಿ. ಕೃಷ್ಣಮೂರ್ತಿಯವರನ್ನು ಕಾಣಲು ಬರುತ್ತಿದ್ದರು. ಸರೋಜ ಮತ್ತು ಕೃಷ್ಣಮೂರ್ತಿಯವರು ನನಗೆ ಆಪ್ತರೂ, ಹಿತೈಷಿಗಳೂ ಅಗಿದ್ದ ಕಾರಣ ನಾನು ಆಗಾಗ ಅವರ ಮನೆಗೆ ಹೋಗುತ್ತಿದ್ದೆ. ಅಂಥ ಒಂದು ಸಂದರ್ಭದಲ್ಲಿ ರಾಮಾನುಜನ್ ಹಾಮಾನಾ ಅವರನ್ನು ನೆನೆಸಿಕೊಂಡು ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದು ಇನ್ನೂ ನನ್ನ ನೆನಪಿನಲ್ಲಿ ಉಳಿದುಕೊಂಡಿದೆ.

1964ರಲ್ಲಿ ವಾಪಾಸಾದ ಹಾಮಾನಾ ತಮ್ಮ ವೃತ್ತಿ ಜೀವನದಲ್ಲಿ ಮೇಲೇರುತ್ತಾ ಸಾಗಿದರು. 1965ರಲ್ಲಿ ಭಾಷಾಶಾಸ್ತ್ರದ ರೀಡರ್ ಆಗಿ ಬಡ್ತಿ ಹೊಂದಿದ ನಾಯಕರು, 1968ರಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ನೇಮಕಗೊಂಡರು. 1969ರಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದರು. 1974ರಲ್ಲಿ ಹಿರಿಯ ಪ್ರಾಧ್ಯಾಪಕರ ಮಟ್ಟಕ್ಕೆ ಏರಿದರು. ವಿಶ್ವವಿದ್ಯಾಲಯದ ಡೀನ್, ಸಿಂಡಿಕೇಟ್, ಅಕಡೆಮಿಕ್ ಕೌನ್ಸಿಲ್, ಸೆನೆಟ್ ಸಮಿತಿಗಳ ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸಿದರು. ವಿವಿಧ ವಿಶ್ವವಿದ್ಯಾಲಯಗಳ ಜೊತೆಯಲ್ಲಿ ನಿಕಟ ಸಂಬಂಧ ಹೊಂದಿದ್ದ ನಾಯಕರು, ಅಲ್ಲಿನ ಅನೇಕ ಶೈಕ್ಷಣಿಕ ಸಮಿತಿಗಳ ಸದಸ್ಯರಾಗಿಯೂ ಕೆಲಸ ನಿರ್ವಹಿಸಿದರು. 1984ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕವಾದ ನಾಯಕರು ತಾತ್ವಿಕ ವಿಚಾರಗಳನ್ನು ಮುಂದೊಡ್ಡಿ ಆ ಹುದ್ದೆಗೆ ರಾಜಿನಾಮೆ ಸಲ್ಲಿಸಿ, 1987ರಲ್ಲಿ ಅದರಿಂದ ಹೊರಬಂದರು. ನಂತರದಲ್ಲಿ ಮೈಸೂರಿಗೆ ವಾಪಾಸಾಗಿ, ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಮುಂದುವರಿದು 1991ರಲ್ಲಿ ಸೇವೆಯಿಂದ ನಿವೃತ್ತಿ ಪಡೆದರು.

ವಿಶ್ವವಿದ್ಯಾಲಯದ ಸೇವೆಗೆ ಹೊರತಾಗಿ, ನಾಯಕರು ಅಲಂಕರಿಸಿದ ಸಾಹಿತ್ಯ, ಸಂಸ್ಕೃತಿ ಮತ್ತು ಸಾರ್ವಜನಿಕ ಕ್ಷೇತ್ರಗಳಲ್ಲಿನ ಸ್ಥಾನಗಳು ಅಪರಿಮಿತವೆಂದರೆ ಅತಿಶಯೋಕ್ತಿಯಲ್ಲ. ಹಲವು ಜಿಲ್ಲಾಮಟ್ಟದ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷತೆ, 1985ರಲ್ಲಿ ಬೀದರ್‍ನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯೂ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿ ಆಯ್ಕೆ ಸಮಿತಿಗಳ ಸದಸ್ಯತ್ವ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾದೆಮಿಯೂ ಸೇರಿದಂತೆ ಹಲವು ಅಕಾದೆಮಿಗಳ ಅಧ್ಯಕ್ಷತೆ ಮತ್ತು ಸದಸ್ಯತ್ವಗಳು, ಅನೇಕ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕ ಹುದ್ದೆಗಳು–ಹೀಗೆ ನಾಯಕರು ಅಲಂಕರಿಸಿದ ಸ್ಥಾನಮಾನಗಳಿಗೆ ಸುಲಭವಾಗಿ ಲೆಕ್ಕ ಸಿಗುವುದಿಲ್ಲ. ಅವರು ಎಲ್ಲೆಲ್ಲಿ ಕೆಲಸ ಮಾಡಿದರೋ ಅಲ್ಲೆಲ್ಲ ನ್ಯಾಯ ನಿಷ್ಠುರತೆಯಿಂದ, ದಕ್ಷತೆಯಿಂದ, ಆ ಸಂಸ್ಥೆಗಳ ಘನತೆ ಎತ್ತಿ ಹಿಡಿಯುವಂಥ ಕೆಲಸ ಮಾಡಿದರು. ಅವರ ಕೆಲಸವನ್ನು ಜನ ಮೆಚ್ಚಿಕೊಂಡರು, ಶ್ಲಾಘಿಸಿದರು. ಆಗೊಮ್ಮೆ ಈಗೊಮ್ಮೆ ಅಪಸ್ವರ ಕೇಳಿಬಂದಿರಬಹುದು; ಆದರೆ ನಾಯಕರು ತಮ್ಮ ‘ಆತ್ಮಸಾಕ್ಷಿ’ಗೆ ಎಂದೂ ಧಕ್ಕೆ ಬಾರದಂತೆ ನಡೆದುಕೊಂಡರು ಎನ್ನುವುದು ನನ್ನ ವಿಶ್ವಾಸ.

ನಾಯಕರ ವೃತ್ತಿ ಜೀವನ, ಅವರ ಸಾಹಿತ್ಯ, ಬರವಣಿಗೆ, ಕನ್ನಡ ಸೇವೆ ಇತ್ಯಾದಿ ಅವರ ಸಾಧನೆ ಮತ್ತು ಪ್ರಭಾವಗಳನ್ನು ಕುರಿತಂತೆ ಅವರ ವಿದ್ಯಾರ್ಥಿಗಳು, ಸಹೋದ್ಯೋಗಿಗಳು, ಸ್ನೇಹಿತರು ಮತ್ತು ವಿಮರ್ಶಕರು ವಿಪುಲವಾಗಿ ಬರೆದಿದ್ದಾರೆ. ಆ ಕುರಿತು ನಾನು ಹೇಳಲು ಸಮರ್ಥನೂ ಅಲ್ಲ ಮತ್ತು ಈ ಬರವಣಿಗೆಯ ಉದ್ದೇಶ ಕೂಡಾ ಅದಕ್ಕೆ ಹೊರತಾದದ್ದು. ನಾಯಕರ ಸೇವೆ ಮತ್ತು ಸಾಮರ್ಥ್ಯಗಳನ್ನು ಕುರಿತಂತೆ ಹಲವು ಹೊತ್ತಿಗೆಗಳು ಲಭ್ಯ ಇವೆ (2). ಆಸಕ್ತರು ಅವುಗಳನ್ನು ಅವಲೋಕಿಸಬಹುದು.

। ಇನ್ನುಳಿದದ್ದು ನಾಳೆಗೆ.. ।

 

ಅಡಿಟಿಪ್ಪಣಿಗಳು

1.ಡಾ. ಎಸ್. ಎಂ. ವೃಷಭೇಂದ್ರಸ್ವಾಮಿ. ಡಾ. ಹಾಮಾನಾ: ಒಂದು ಸ್ಮರಣೆ. ಶಿವರಾಮ ಕಾಡನಕುಪ್ಪೆ (ಸಂ.): ಹಾಮಾನಾ–ಸಾಹಿತ್ಯಾವಲೋಕನ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು. 2003 ಪು. 5.

2.ಹಾಮಾನಾ ಬದುಕು ಮತ್ತು ಬರಹಗಳನ್ನು ಕುರಿತ ಲಭ್ಯವಿರುವ ಕೆಲವು ಪುಸ್ತಕಗಳು: ಚಂದ್ರಯ್ಯ ನಾಯ್ಡು: ಕನ್ನಡದ ನಾಯಕ–ಹಾ. ಮಾ.ನಾಯಕರು. ಶ್ರೀಮತಿ ಶಾರದಮ್ಮ ಡಾ. ಜಿ. ಬಿ. ಲಕ್ಕೇಗೌಡ, ಚಿಕ್ಕಮಗಳೂರು, 1987; ಎಚ್. ಎಸ್. ಸುಜಾತಾ (ಸಂ) ಹಾಮಾನಾ ಹೊತ್ತಗೆಗಳು. ಸುಹಾಸ ಪ್ರಕಟಣೆಗಳು, ಮೈಸೂರು. 1991; ಎನ್. ಎಸ್. ಶಾರದಾ ಪ್ರಸಾದ್ (ಸಂ.) ಹಾ. ಮಾ. ನಾಯಕ ಅವರನ್ನು ಕುರಿತು. ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ಮೈಸೂರು, 1991. ಎಸ್. ಎಲ್. ಭೈರಪ್ಪ, ಜೆ. ಆರ್. ಲಕ್ಷ್ಮಣರಾವ್ ಮತ್ತು ಪ್ರಧಾನ್ ಗುರುದತ್ತ (ಸಂ.) ಮಾನ–ಹಾ ಮಾ ನಾಯಕ ಅಭಿನಂದನ ಗ್ರಂಥ. ಗೀತಾ ಬುಕ್ ಹೌಸ್, ಮೈಸೂರು. 1992; ಪ್ರಧಾನ್ ಗುರುದತ್ತ : ಹಾಮಾನಾ: ಒಂದು ಅಧ್ಯಯನ. ಶಾರದಾ ಮಂದಿರ, ಮೈಸೂರು. 1992: ಎ. ಬಿ. ಹಿರೇಮಠ ಮತ್ತು ಎಸ್. ಎಂ. ಕಮ್ಮಾರ: ಹಾಮಾನಾ- ಸಂಪ್ರತಿ. ಕೆ. ಆರ್. ಬೆಲ್ಲದ ಕಾಲೇಜ್, ಮುಂಡರಗಿ. 1992; ಪದ್ಮಾ ಶೇಖರ್ ಮತ್ತು ಸೋಮಶೇಖರಗೌಡ (ಸಂ.) ನಮ್ಮ ನಾಯಕರು. ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ಮೈಸೂರು. 1998; ಸ. ಚಿ. ರಮೇಶ (ಸಂ.) ಶಬ್ದಾಂಜಲಿ. ಅಂಶು ಪ್ರಕಾಶನ, ಹೊಸಪೇಟೆ. 2001; ಬೋಳಂತಕೋಡಿ ಈಶ್ವರ ಭಟ್ಟ (ಸಂ.) ನೆನಪಿನಂಗಳದಲ್ಲಿ ಹಾಮಾನಾ. ಕರ್ನಾಟಕ ಸಂಘ, ಪುತ್ತೂರು, 2001;

ಜಿ. ಎಚ್. ನಾಯಕ: ‘ಅಂಕಣ’ದ ಅಗ್ರಗಣ್ಯ: ಹಾ. ಮಾ. ನಾಯಕ. ಗುಣಗೌರವ. ಲೋಹಿಯಾ ಪ್ರಕಾಶನ, ಬಳ್ಳಾರಿ, 2002; ಪ್ರಧಾನ್ ಗುರುದತ್ತ (ಸಂ) ಹಾ ಮಾ ನಾಯಕ. ನವಕರ್ನಾಟಕ ಸಾಹಿತ್ಯ ಸಂಪದ, ಬೆಂಗಳೂರು. 2002; ಶಿವರಾಮು ಕಾಡನಕುಪ್ಪೆ (ಸಂ.) ಹಾಮಾನಾ–ಸಾಹಿತ್ಯಾವಲೋಕನ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು. 2003; ಜೆ. ಕೆ. ರಮೇಶ: ಹಾ ಮಾ ನಾಯಕ. ಕೇಂದ್ರ ಸಾಹಿತ್ಯ ಅಕಾದೆಮಿ, ನವ ದೆಹಲಿ, 2010; ಸೋಮಶೇಖರ ಗೌಡ ಮತ್ತು ಪದ್ಮಾಶೇಖರ್: ಕನ್ನಡದ ಕಾರಣಿಕ ಹಾಮಾನಾ. ಕರ್ನಾಟಕ ಸಂಘ (ರಿ), ಮಂಡ್ಯ, 2012.

 

 

‍ಲೇಖಕರು avadhi

17 September, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading