ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೆಚ್ ಎಸ್ ಈಶ್ವರ್ ಅವರ ಹೊಸ ಮಾಧ್ಯಮ ಕೃತಿ ಬಂದಿದೆ..

ಹೆಚ್ ಎಸ್ ಈಶ್ವರ

ನಾಗರೀಕ ಸಮಾಜ ಸುಸೂತ್ರವಾಗಿ ಕಾರ್ಯನಿರ್ವಹಿಸಲು ಹಲವು ವ್ಯವಸ್ಥೆಗಳನ್ನು ರೂಪಿಸಿಕೊಂಡಿದೆ; ಪ್ರಸ್ತುತದಲ್ಲಿ ಅಂತಹ ವ್ಯವಸ್ಥೆಗಳಲ್ಲಿ ಸಮೂಹ ಮಾಧ್ಯಮಗಳಿಗೆ ಮಹತ್ವದ ಸ್ಥಾನ ಇದೆ. ಸಮಾಜದ ಆಗುಹೋಗುಗಳನ್ನು, ಅಲ್ಲಿನ ಅಧಿಕಾರ, ಆಡಳಿತ ಮತ್ತು ನ್ಯಾಯ ಪರಿಪಾಲನೆಯನ್ನು ಗಮನಿಸಿ ಅವುಗಳನ್ನು ವಿಮರ್ಶಿಸುವ, ವ್ಯಾಖ್ಯಾನಿಸುವ ಹಾಗೂ ಸೂಕ್ತ ಸಲಹೆಗಳನ್ನು ಸೂಚಿಸುವ ಪ್ರಮುಖ ಉದ್ದೇಶಗಳನ್ನು ಮಾಧ್ಯಮಗಳಿಗೆ ಆರೋಪಿಸಲಾಗಿದೆ.

ಈ ಉದ್ದೇಶಗಳನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಮಾಧ್ಯಮಗಳು ಎಷ್ಟರ ಮಟ್ಟಿಗೆ ಶ್ರಮಿಸುತ್ತವೆ, ಸಫಲವಾಗಿವೆ ಎನ್ನುವ ಚರ್ಚೆಗಳು ಅವಿರತವಾಗಿ ನಡೆಯುತ್ತಲೇ ಇವೆ. ಜಾಗತೀಕರಣದ ಈ ದಿನಗಳಲ್ಲಿ ತಾಂತ್ರಿಕವಾಗಿ ಮತ್ತು ವ್ಯಾಪಕವಾಗಿ ಮಾಧ್ಯಮಗಳು ಹಿಂದೆಂದಿಗಿಂತಲೂ ಹೆಚ್ಚು ಪ್ರಭಾವಿತವಾಗಿದ್ದು, ಅವುಗಳ ಕಾರ್ಯನಿರ್ವಹಣೆ ಹೆಚ್ಚಿನ ಪರಿಶೀಲನೆಗೆ ಒಳಪಡಬೇಕಾದ ಅಗತ್ಯವಿದೆ. ಮಾಧ್ಯಮ ವೃತ್ತಿಯಲ್ಲಿ ತೊಡಗಿದವರು ಸಹ, ತಮ್ಮ ಜವಾಬ್ದಾರಿ ಮತ್ತು ವೃತ್ತಿಧರ್ಮಗಳ ಚೌಕಟ್ಟಿನಲ್ಲಿ, ತಮ್ಮ ವೃತ್ತಿ ಪರಿಪಾಲನೆಯ ಬಗ್ಗೆ ಅಂತರಾವಲೋಕನ ಮಾಡಿಕೊಳ್ಳುವ ಹೊಣೆ ಅವರ ಪಾಲಿಗಿದೆ.

ಮಾಧ್ಯಮಗಳ ಸ್ವಾಯತ್ತತೆ, ಸಾಮಾಜಿಕ ಹೊಣೆಗಾರಿಕೆ, ನಿಷ್ಪಕ್ಷಪಾತ ಕಾರ್ಯನಿರ್ವಹಣೆಗಳ ಬಗೆಗಿನ ವಿಮರ್ಶೆಗಳು ಸಾಕಷ್ಟು ವಿಪುಲವಾಗಿವೆ. ಮಾಧ್ಯಮಗಳ ಪ್ರಮುಖ ವ್ಯಾಖ್ಯಾನಕಾರರು ಮಾರ್ಕ್ಸ್ ವಾದಿಗಳು. ಮಾರ್ಕ್ಸ್ ವಾದಿ ಚಿಂತಕರು ಮಾಧ್ಯಮಗಳ ಒಡೆತನವನ್ನು ತಮ್ಮ ಚರ್ಚೆಯ ಕೇಂದ್ರವಾಗಿಟ್ಟುಕೊಂಡು, ಮಾಧ್ಯಮಗಳು ಬಂಡವಾಳಶಾಹಿಗಳ ಕೈಗೊಂಬೆಗಳಾಗಿ ಕೆಲಸ ಮಾಡುತ್ತವೆ ಎನ್ನುವ ಆರೋಪವನ್ನು ಪ್ರತಿಪಾದಿಸುತ್ತಲೇ ಬಂದಿದ್ದಾರೆ. ನೋಮ್ ಚಾಮ್‌ಸ್ಕಿ ಬರೆವಣಿಗೆಗಳನ್ನು ಇಲ್ಲಿ ಪ್ರಮುಖವಾಗಿ ಗುರುತಿಸಬಹುದು.

ಮಾಧ್ಯಮ ವ್ಯವಸ್ಥೆ ಮತ್ತು ಅವುಗಳ ಕಾರ್ಯಕ್ಷಮತೆಯಲ್ಲಿನ ನ್ಯೂನತೆಗಳನ್ನು ಕುರಿತಂತೆ ಇತರ ವಿದ್ವಾಂಸರೂ ವಿಫುಲವಾಗಿ ಚರ್ಚಿಸಿದ್ದಾರೆ. ಅಪ್ಟನ್ ಸಿಂಕ್ಲೇರ್, ಜಾರ್ಜ್ ಸೆಲ್ಡೆಸ್, ಬೆನ್ ಬ್ಯಾಗ್ಡಿಕಿಯನ್ ಇವರೇ ಮೊದಲಾದ ಹಲವಾರು ವಿಮರ್ಶಕರು ವಿವಿಧ ಆಯಾಮಗಳಿಂದ ಮಾಧ್ಯಮಗಳ ಸ್ವರೂಪ ಮತ್ತು ಸರಕುಗಳನ್ನು ವಿಶ್ಲೇಷಿಸಿ, ತೀವ್ರವಾದ ದೋಷಾರೋಪಣೆಗಳನ್ನು ಮಾಡಿದ್ದಾರೆ. ಮಾಧ್ಯಮಗಳ ಬಗೆಗಿನ ಈ ವಿಮರ್ಶಾ ಸಾಹಿತ್ಯ ಮಾಧ್ಯಮ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ಮತ್ತು ಅವರ ವೃತ್ತಿ ತರಬೇತಿಗೆ ಅವಶ್ಯಕ ಹಿನ್ನೆಲೆ ಎನ್ನುವುದು ನಿರ್ವಿವಾದ ಸಂಗತಿ.

ಈ ಸಂಕಲನದ ಒಂದು ಲೇಖನ ಮಾರ್ಕ್ಸ್ ಮಾಧ್ಯಮ ಸಿದ್ಧಾಂತವನ್ನು ಕುರಿತದ್ದೇ ಆಗಿದೆ; ಮತ್ತೊಂದು ಲೇಖನ ಸಿಂಕ್ಲೇರನ ‘ದಿ ಬ್ರಾಸ್ ಚೆಕ್’ ಎಂಬ ಮಾಧ್ಯಮ ವಿಮರ್ಶೆ ಕುರಿತ ‘ಕ್ಲಾಸಿಕ್’ ಕೃತಿಯ ಪರಿಚಯವಾಗಿದೆ. ಪ್ರಸ್ತುತ ಸಂಕಲನದ ಇತರ ಮೂರು ಲೇಖನಗಳು, ಮೇಲಿನ ಎಲ್ಲ ಚಿಂತನೆಗಳ ಹಿನ್ನೆಲೆಯಲ್ಲಿ, ನಮ್ಮ ಸಮಕಾಲೀನ ಮಾಧ್ಯಮ ಪರಿಸರವನ್ನು ಅವಲೋಕಿಸುವ ಪ್ರಯತ್ನಗಳಾಗಿವೆ.

ಮಾಧ್ಯಮ ನೀತಿ ಸಂಹಿತೆ, ಮಕ್ಕಳ ಮೇಲೆ ಟೆಲಿವಿಷನ್ ವೀಕ್ಷಣೆಯ ಪ್ರಭಾವ, ಮತ್ತು ಸಾಮಾಜಿಕ ಜಾಲತಾಣಗಳ ಅತಿ ಬಳಕೆಯ ಆಪತ್ತುಗಳು –ಈ ವಿಷಯಕ್ಕೆ ಸಂಬಂಧಿಸಿದ ಮತ್ತೆ ಮೂರು ಲೇಖನಗಳು ಈ ಸಂಕಲನದಲ್ಲಿ ಸೇರಿವೆ. ಇಲ್ಲಿನ ಎಲ್ಲ ಬರೆಹಗಳ ವಿಷಯಗಳೂ ಸಂಕೀರ್ಣವೂ, ವಿವಾದಾಸ್ಪದವೂ ಆಗಿದ್ದು, ಬಹಳಷ್ಟು ಸಂಶೋಧನೆಗಳಿಗೆ ಎಡೆಮಾಡಿಕೊಟ್ಟಿವೆ. ಆ ವಿಚಾರಗಳಿಗೆ ಸಂಬಂಧಿಸಿದ ವಿಸ್ತೃತ ಪರಿಶೀಲನೆ ಇಲ್ಲಿನ ಬರೆಹಗಳ ವ್ಯಾಪ್ತಿಗೆ ಮೀರಿದ್ದು; ಇವು ಕೇವಲ ಸ್ಥೂಲವಾದ ಪರಿಚಯಾತ್ಮಕ ಲೇಖನಗಳು.

ಅನುಬಂಧದಲ್ಲಿ ಸೇರಿರುವ ನನ್ನ ಭಾಷಣಗಳ ಮೂರು ತುಣುಕುಗಳನ್ನು ಬಿಟ್ಟರೆ ಉಳಿದೆಲ್ಲ ಲೇಖನಗಳು ಈ ಮೊದಲು ಬೇರೆ ಬೇರೆ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಬರೆವಣಿಗೆ ವಿಚಾರದಲ್ಲಿ ನನ್ನದು ಸಂಕೋಚ ಸ್ವಭಾವ; ಹೇಳಲು ಯೋಗ್ಯವಾದ ಯಾವುದೋ ಮಹತ್ವದ ಸಂಗತಿಗಳು ನನ್ನಲ್ಲಿವೆ ಎಂದು ನನಗೆ ಯಾವತ್ತೂ ಅನ್ನಿಸಿಲ್ಲ. ಹಾಗಾಗಿ, ಇಲ್ಲಿನ ಬಹಳಷ್ಟು ಲೇಖನಗಳು ಸ್ನೇಹಿತರ ಒತ್ತಾಸೆಗೆ ಕಟ್ಟುಬಿದ್ದು ಬರೆದವು. ‘ಮಾಧ್ಯಮ ಸ್ವಾತಂತ್ರ್ಯ, ಸಾಮಾಜಿಕ ಜವಾಬ್ದಾರಿ, ವಸ್ತುನಿಷ್ಠತೆ’ ಕುರಿತ ಲೇಖನ ನನ್ನ ಆತ್ಮೀಯರಾದ ಡಾ. ಜಿ. ರಾಮಕೃಷ್ಣ ಅವರು ತಮ್ಮ ‘ಹೊಸತು’ ಪತ್ರಿಕೆಯ ವಿಶೇಷ ಸಂಚಿಕೆಯೊಂದಕ್ಕೆ ಬರೆಯುವಂತೆ ಪ್ರೇರಿಪಿಸಿ, ಬರೆಸಿದ್ದು. ಅದೇ ಪತ್ರಿಕೆಯಲ್ಲಿ ಪ್ರಕಟವಾಗಿರುವ ಸಿಂಕ್ಲೇರ್ ಮತ್ತು ಮಾರ್ಕ್ಸ್ ಮಾಧ್ಯಮ ಸಿದ್ಧಾಂತ ಕುರಿತ ಲೇಖನಗಳಿಗೂ ಅವರ ವಿಶ್ವಾಸವೇ ಪ್ರೇರಣೆ.

ಇನ್ನೊಬ್ಬ ಅಪ್ತರು ಡಿ. ಎಸ್. ನಾಗಭೂಷಣ ಅವರ ಒತ್ತಾಯಕ್ಕೆ ಮಣಿದು, ಅವರ ‘ಹೊಸ ಮನುಷ್ಯ’ ವಿಶೇಷ ಸಂಚಿಕೆಯೊಂದಕ್ಕೆ ಬರೆದ ಲೇಖನ ‘ಇಂದಿನ ಮಾಧ್ಯಮಗಳ ಪರಿದೃಶ್ಯ.’ ಕಲ್ಬುರ್ಗಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನೆಪಿನ ಸಂಚಿಕೆ ‘ಕಲ್ಯಾಣ ಕರ್ನಾಟಕ’ದ ಸಂಪಾದಕರಾಗಿದ್ದ ಪ್ರೊ. ಅಮರೇಶ ನುಡಗೋಣಿಯವರ ಆಹ್ವಾನದ ಮೇಲೆ ಬರೆದ ಲೇಖನ ‘ಮಾಧ್ಯಮಗಳ ಸಾಮಾಜಿಕ ಜವಾಬ್ದಾರಿ ಪರಿಕಲ್ಪನೆ ಮತ್ತು ಭಾರತೀಯ ಮಾಧ್ಯಮಗಳ ಕಾರ್ಯವೈಕರಿ.’

ಆಕಾಶವಾಣಿಯಲ್ಲಿ ಪ್ರಸಾರವಾದ ‘ಮಾಧ್ಯಮ ನೀತಿ ಸಂಹಿತೆ’ಗೆ ಕಾರಣವಾದ ಇನ್ನೊಬ್ಬರು ನನಗೆ ಪ್ರಿಯವಾದ ಶ್ರಿಮತಿ ನೂತನ್ ಕದಂ ಅವರು. ಆಕಾಶವಾಣಿಯಲ್ಲಿ ಪ್ರಸಾರವಾದ ಈ ಭಾಷಣ ನಂತರಲ್ಲಿ ‘ಹೊಸತು’ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದೆ. ಮಕ್ಕಳ ಮೇಲೆ ಟೆಲಿವಿಷನ್ ಪ್ರಭಾವ ಕುರಿತ ಲೇಖನ ‘ಸಂಯುಕ್ತ ಕರ್ನಾಟಕ’ ಸಾಪ್ತಾಹಿಕ ಪುಟಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳ ಬಗಿಗಿನ ಬರೆಹ ‘ತರಂಗ’ ವಾರಪತ್ರಿಕೆಯಲ್ಲಿ ಪ್ರಕಟವಾಗಿವೆ.

ಈ ಲೇಖನಗಳಿಗೆ ಕಾರಣರಾದ ಎಲ್ಲ ಹಿತೈಷಿ ಗಳಿಗೆ ಮತ್ತು ಅವುಗಳನ್ನು ಪ್ರಕಟಿಸಿದ ಸಂಪಾದಕರಿಗೆ ನನ್ನ ಧನ್ಯವಾದಗಳು. ವಾಸ್ತವದಲ್ಲಿ, ಔಪಚಾರಿಕ ಧನ್ಯವಾದಗಳಿಗೂ ಮಿಗಿಲಾದ ಕೃತಜ್ಞತೆಯ ಭಾವನೆಯನ್ನು ನಾನು ಇಲ್ಲಿ ವ್ಯಕ್ತಪಡಿಸುತ್ತಿದ್ದೇನೆ. ಅನುಬಂಧದಲ್ಲಿ ಸೇರಿರುವ ಲೇಖನಗಳು ಮೂರು ವಿಭಿನ್ನ ಸಂದರ್ಭಗಳಲ್ಲಿ ನಾನು ಆಡಿದ ಮಾತುಗಳ ಲಿಖಿತ ಟಿಪ್ಪಣಿಗಳು.

ಆ ಸಂದರ್ಭಗಳಿಗೆ ಅನುಗುಣವಾಗುವ ಮಾತುಗಳಷ್ಟೇ ಅಲ್ಲದೆ, ಮಾಧ್ಯಮಗಳಿಗೆ ಸಂಬಂಧಿಸಿದ ಕೆಲವು ವಿಚಾರಗಳು ಅವುಗಳಲ್ಲಿ ಪ್ರಸ್ತಾಪವಾಗಿರುವ ಕಾರಣ ಅವುಗಳನ್ನು ಇಲ್ಲಿ ದಾಖಲಿಸಲಾಗಿದೆ. ಆ ಸಂದರ್ಭಗಳಿಗೆ ಕಾರಣರಾದ ಜಾನಪದ ವಿಶ್ವವಿದ್ಯಾಲಯದ ಅಂದಿನ ಕುಲಪತಿಗಳಾಗಿದ್ದ ಪ್ರೊ. ಅಂಬಳಿಕೆ ಹಿರಿಯಣ್ಣ, ಮೈಸೂರು ವಿಶ್ವವಿದ್ಯಾಲಯದ ಪ್ರೊ. ಉಷಾರಾಣಿ ಮತ್ತು ಭಾರತೀಯ ವಿದ್ಯಾಭವನದ ಶ್ರೀ ಜಯರಾಮ ಅಡಿಗ ಅವರುಗಳ ವಿಶ್ವಾಸವನ್ನು ನನು ಇಲ್ಲಿ ಧನ್ಯತೆಯಿಂದ ಸ್ಮರಿಸುತ್ತೇನೆ.

ಇಲ್ಲಿಯ ಲೇಖನಗಳು ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆಯವೇ ಆದ ನಿಯತಕಾಲಿಕಗಳಿಗಾಗಿ ಸಿದ್ದಪಟ್ಟು ಪ್ರಕಟವಾದವು. ಅವುಗಳಲ್ಲಿನ ಹಲವು ಅಂಶಗಳು, ಬಳಸಿಕೊಂಡ ಉದಾಹರಣೆಗಳು ಮತ್ತು ಹೇಳಿಕೆಗಳಲ್ಲಿ ಪುನರಾವರ್ತನೆಗಳನ್ನು ಓದುಗರು ಸುಲಭವಾಗಿ ಗುರುತಿಸುತ್ತಾರೆ. ಕೆಲವೊಂದು ಕಡೆ ನನ್ನದೇ ಇನ್ನೊಂದು ಲೇಖನದ ಸಾಲುಗಳನ್ನು ಯಥಾವತ್ತಾಗಿ ಉದ್ಧರಿಸಿದ ಸಂದರ್ಭಗಳೂ ಇವೆ. ಲೇಖನದ ಸಮಗ್ರತೆಯನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಈ ಬಗೆಯ ಪುನರಾವರ್ತನೆಗಳು ಅನಿವಾರ್ಯವಾಗಿ ನುಸುಳಿಕೊಂಡಿವೆ. ಈ ಬಗೆಯ ಪುನರುಕ್ತಿಗಳನ್ನು ಓದುಗರು ಸಹನೆಯಿಂದ ಸ್ವೀಕರಿಸುತ್ತರೆಂದು ಆಶಿಸುತ್ತೇನೆ. ಸಂವಹನ ಪ್ರಕ್ರಿಯೆಹಲ್ಲಿ, ‘ರಿಡಂಡನ್ಸಿ’ಗಳು ಸಹಾಯಕ ಎನ್ನುವ ಮಾತು ಸಹ ಇದೆ.

ಈ ಸಂಕಲನಕ್ಕೆ ಒಂದು ಮುನ್ನುಡಿ ಬರೆದುಕೊಡುವಂತೆ ಡಾ. ಪದ್ಮರಾಜ ದಂಡಾವತಿ ಅವರನ್ನು ಕೇಳಿಕೊಂಡೆ. ಅವರು ತಮಗಿಂತ ದೊಡ್ಡವರು ಯಾರಾದರೂ ಬರೆಯುವುದು ಸೂಕ್ತವೇನೋ ಎಂದು ಸೂಚಿಸಿದರು. ‘ದೊಡ್ಡತನ’ದ ನನ್ನವೇ ಮಾನದಂಡಗಳ ಚೌಕಟ್ಟಿನಲ್ಲಿ ಡಾ.ದಂಡಾವತಿಯವರು ದೊಡ್ಡವರು ಎನ್ನುವುದು ನನ್ನ ಅನ್ನಿಸಿಕೆ. ಅವರು ಹಿರಿಯ ಪತ್ರಕರ್ತರು; ವೃತ್ತಿಯ ತತ್ವಗಳು ಮತ್ತು ಮೌಲ್ಯಗಳಿಗೆ ಬದ್ಧರಾಗಿ, ಆ ವೃತ್ತಿಗೆ ಗೌರವ ತಂದುಕೊಟ್ಟವರು.

ಪತ್ರಿಕೋದ್ಯಮದ ಆಂತರ್ಯ ಮತ್ತು ಬಹಿರಂಗಗಳನ್ನು ಸಮೀಪದಿಂದ ಬಲ್ಲವರು. ಅವರ ‘ಸೀತಾ’, ಕನ್ನಡ ಅನುವಾದ ಸಾಹಿತ್ಯಕ್ಕೆ ಒಂದು ಮಹತ್ವದ ಕೊಡುಗೆ. ನನ್ನ ಬಗೆಗಿನ ಅವರ ವಿಶ್ವಾಸದ ಕಾರಣಕ್ಕೆ ನನ್ನ ಕೋರಿಕೆಯನ್ನು ಮನ್ನಿಸಿ ಈ ಸಂಕಲನಕ್ಕೆ ಮುನ್ನುಡಿಯ ರೂಪದಲ್ಲಿ ಅರ್ಥವತ್ತಾದ ಪ್ರಸ್ತಾವನೆಯನ್ನು ಬರೆದುಕೊಟ್ಟಿದ್ದಾರೆ. ಈ ವಿಚಾರದಲ್ಲಿ, ಕೇವಲ ಮಾತುಗಳಲ್ಲಿ ವ್ಯಕ್ತಪಡಿಸಲಾಗದ ಧನ್ಯತಾ ಭಾವನೆಯನ್ನು ನಾನು ಅವರಿಗೆ ವ್ಯಕ್ತಪಡಿಸುತ್ತೇನೆ.

ಈ ಸಂಕಲನದ ಲೇಖನಗಳನ್ನು ಓದಿ, ಅವುಗಳನ್ನು ಕುರಿತಂತೆ ತಮ್ಮ ವಿಮರ್ಶಾತ್ಮಕ ಅಭಿಪ್ರಾಯಗಳನ್ನು ತಿಳಿಸಿದ ಡಾ. ಉಷಾರಾಣಿ, ಡಾ. ಪೂರ್ಣಾನಂದ ಮತ್ತು ಡಾ. ನಿರಂಜನ ವಾನಳ್ಳಿ, ಮತ್ತು ಈ ಸಂಕಲನದ ಕೆಲವು ಲೇಖನಗಳನ್ನು ಅವುಗಳ ತಯಾರಿಕೆಯ ಹಂತದಲ್ಲಿ ಓದಿ, ತಿದ್ದಿದ ಪ್ರೊ. ಎಸ್. ಬಾಲಸುಬ್ರಮಣ್ಯ ಅವರುಗಳಿಗೆ ನನ್ನ ಧನ್ಯವಾದಗಳು.

ಈ ಪುಸ್ತಕದ ಪ್ರಕಾಶನದ ಹೊರೆ ಹೊತ್ತವರು ನನ್ನ ದೀರ್ಘ ಕಾಲದ ಸ್ನೇಹಿತರೂ, ಹಿತೈಷಿಗಳೂ ಆಗಿರುವ ಡಾ. ಆರ್. ಪೂರ್ಣಿಮ ಮತ್ತು ಡಾ. ಸಿ. ವೀರಣ್ಣ ದಂಪತಿಗಳು. ವ್ಯವಹಾರದ ಪ್ರಸ್ತಾಪವೇ ಇಲ್ಲದೆ, ತಾವು ಇದನ್ನು ಪ್ರಕಟಿಸುವುದಾಗಿ ಮುಂದೆ ಬಂದು, ಅದಕ್ಕೆ ಸಂಬಂಧಿಸಿದ ಎಲ್ಲ ಜವಾಬ್ದಾರಿಗಳನ್ನು ಅವರೇ ನಿರ್ವಹಿಸಿ, ವಿಶ್ವಾಸ ತೋರಿದ್ದಾರೆ. ಅವರ ಸಹಕಾರ, ಪ್ರೋತ್ಸಾಹಗಳು ಇಲ್ಲದೆ ಇದ್ದರೆ, ಈ ಸಂಕಲನ ಹೊರ ಬರುತ್ತಿರಲಿಲ್ಲ ಎನ್ನುವುದು ನೂರಕ್ಕೆ ನೂರು ಸತ್ಯ. ಅವರ ಈ ವಿಶ್ವಾಸಕ್ಕೆ ನಾನು ಯಾವತ್ತೂ ಆಭಾರಿಯಾಗಿದ್ದೇನೆ.

ಈ ಸಂಕಲನವನ್ನು ನಾನು ನನ್ನ ವಿದ್ಯಾರ್ಥಿಗಳಿಗೆ ಅರ್ಪಿಸುತ್ತಿದ್ದೇನೆ. ಒಬ್ಬ ಅಧ್ಯಾಪಕನಿಗೆ ನ್ಯಾಯವಾಗಿ ಸಲ್ಲಬೇಕಾದ ಪ್ರೀತಿ, ವಿಶ್ವಾಸ ಮತ್ತು ಗೌರವಗಳಿಗಿಂತ ತುಸು ಹೆಚ್ಚು ಆತ್ಮೀಯನ್ನು ತೋರುತ್ತಲೇ ಬಂದಿದ್ದಾರೆ. ಅವರಲ್ಲಿ ಅನೇಕರು ನನ್ನ ಬದುಕಿನ ಈ ಶರತ್ಕಾಲದಲ್ಲೂ ನನ್ನೊಂದಿಗೆ ತಮ್ಮ ಸಂಪರ್ಕ ಹೊಂದಿದ್ದು ನನ್ನ ಸುಖ ದುಃಖಗಳನ್ನು ವಿಚಾರಿಸಿಕೊಳ್ಳುತ್ತಿದ್ದಾರೆ. ಅವರಿಗೆ ನನ್ನ ಮಾತು: ಧನ್ಯೋಸ್ಮಿ.

‍ಲೇಖಕರು Avadhi

1 April, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading