ವಿಜಯಲಕ್ಷ್ಮಿ ಸತ್ಯಮೂರ್ತಿ ಅವರ ಕಾದಂಬರಿ ‘ಮೌನದಿಬ್ಬನಿ’
‘ಋತುಗಾನ’ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿಯ ಕುರಿತು ಆನಂದ ಕುಮಾರ್ ಎಸ್ ಡಿ ಅವರ ಒಂದು ನೋಟ ಇಲ್ಲಿದೆ.
-ಆನಂದ ಕುಮಾರ್ ಎಸ್ ಡಿ
ಹೃದಯಗಳು ಈ ರೀತಿ ಪಿಸುಮಾತಿಗೆ ನಿಲ್ಲದಿದ್ದರೆ ‘ಮೌನದಿಬ್ಬನಿ’ ಹೇಗೆ ಕರಗೀತು? ಯಾರು ಯಾರಿಗೆ ಮೌನದ ದಿಬ್ಬ? ಯಾವ ಹೃದಯದ ಮೌನ ಇಬ್ಬನಿಯಂತೆ ಕರಗಬೇಕು? ಹೃದಯದ ದಿಬ್ಬದಲ್ಲಿ ಹಬ್ಬವೆಂದು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ, ಶ್ರೀಮತಿ ವಿಜಯಲಕ್ಷ್ಮಿ ಸತ್ಯಮೂರ್ತಿ ಅವರ ಕಾದಂಬರಿ ‘ಮೌನದಿಬ್ಬನಿ’.
ತಮ್ಮ ಬರವಣಿಗೆಗೆ ನವಿರಾದ ಸ್ಪರ್ಶ ನೀಡಿ, ಮೌನದ ಅಕ್ಷರಾಭರಣ ತೊಡಿಸಿ, ನಿರಾಭರಣ ಮನಸ್ಸುಗಳು ಬಿಂಕಬಿಟ್ಟು, ಬಿಗುಮಾನವೆನ್ನೆತ್ತಿ ಪಕ್ಕಕ್ಕಿಟ್ಟು, ಬೊಗಸೆಯಲ್ಲಿ ದಕ್ಕುವ ಓದಿನ ಸುಖವನ್ನು ಮೆಲ್ಲನೆ ಮೆಲ್ಲುವಂತೆ ಮಾಡಿಬಿಡುತ್ತಾರೆ.

ಇಲ್ಲಿ ಸುರಿಯುವ ಜಿಟಿಜಿಟಿ ಮೌನದ ಮಳೆಗೆ ಕಣ್ಣು ತೋಯಿಸದಿದ್ದರೆ ಕೇಳಿ. ಮನಸ್ಸಿನ ಮಾತುಗಳಿಗೆ ಇಲ್ಲಿ ಕೊಂಚ ಬಿಂಕದ ಸೋಂಕಿದೆ, ಆದರೂ ಎಲ್ಲ ಮರೆವಿನ ಔಷಧ ಪ್ರೀತಿಯಲ್ಲೇ ಇದೆ ನೋಡಿಕೊಳ್ಳಿ ಎಂದು ವಿಶದಪಡಿಸುವ ಬಗೆಯುಂಟಲ್ಲ, ಅದು ಈ ಕಾದಂಬರಿಯ ಹೈಲೈಟ್.
ಪರಸ್ಪರರನ್ನು ದೂರವಾಗಿಟ್ಟಿದ್ದ ಕಾಲವು, ಪ್ರೀತಿಗೆ ಸಾವಿರ ಸೆಲ್ಯೂಟ್ ಹೊಡೆದು, ‘ಅವನು ಒಮ್ಮೆ ಮೌನ ಮುರಿದಾಗ ನನ್ನ ಅಪ್ಪಿಕೋ..’, ‘ಅವಳೊಮ್ಮೆ ಒಪ್ಪಿ ತನ್ನ ಮಡಿಲಲ್ಲಿ ನನ್ನ ಮಲಗಿಸಿಕೊಂಡು ತಲೆ ನೇವರಿಸಿಬಿಡಲಿ..’ ಎಂದು ಆರ್ದ್ರವಾಗಿ ಭಿನ್ನವಿಸಿಕೊಳ್ಳುವ ರೀತಿಯೇ ಇಲ್ಲಿನ ಸ್ಪೆಷಲ್.
ಒಂದು ಸಾಂತ್ವನಕ್ಕಾಗಿ ಒಂದು ಸಣ್ಣ ನೇವರಿಕೆ ಸಾಕಲ್ಲವಾ? ಕೋಪ ಐಸ್ ಕ್ರೀಮ್ ನಂತೆ ಕರಗಲು ಮಗುವಿನ ಮನಸ್ಸು ಇರಬೇಕಲ್ಲವಾ? ಹಚ್ಚಿಕೊಂಡವರ ಮನದಲ್ಲಿ ಹುಚ್ಚುಮನಸ್ಸು ಬೇರೂರಬಾರದು ಎಂದು ಅರ್ಥೈಸುತ್ತಾ ‘ಮೌನವಾಗಿರಬೇಡ, ಪ್ಲೀಸ್, ಮಾತಾಡು’..ಎಂದು ಎರಡೂ ಹೃದಯಗಳು ತೊದಲುವ ಬಗೆಯನ್ನು ಅನನ್ಯವಾಗಿ ಬರೆದಿದ್ದಾರೆ.
ಅದರಲ್ಲೂ ಮಧ್ಯವಯಸ್ಸಿನ ಭಾವನೆಗಳಿಗೆ, ಐವತ್ತರ ಹರೆಯದಲ್ಲಿ ಶೃಂಗಾರಕಾವ್ಯದ ಬದುವಿನುದ್ದಕ್ಕೂ ಬಿತ್ತಿದ್ದ ಕಾರ್ಮೋಡದ ಬೀಜಗಳು, ಪ್ರೇಮಿಗಳ ಎದೆಯೊಳಗೆ ಹೇಗೆ ಕಳೆಯಂತೆ ಬೆಳೆದಿದ್ದವು ಎಂಬುದನ್ನು ವಿವರಿಸುತ್ತಾ ಸಾಗುತ್ತಾರೆ.
ಕಣ್ಣಲ್ಲಿ ನೀರು ಜಿನುಗಿದ್ದನ್ನು ಕಾಣದಂತೆ ಒರೆಸಿಕೊಳ್ಳುವ ಗಂಡು, ನೋವುಗಳನ್ನು ಹೇಳದೆ ಒಳಗೇ ನುಂಗಿಕೊಳ್ಳುವ ಹೆಣ್ಣಿನ ಗುಣಗಳನ್ನು ತನ್ನದೇ ವಿಶಿಷ್ಟ ಬರವಣಿಗೆಯ ಶೈಲಿಯಿಂದ ಆವರಿಸಿಕೊಳ್ಳುವ ವಿಜಯಲಕ್ಷ್ಮಿಯವರ ‘ಮೌನದಿಬ್ಬನಿ’ ಕನ್ನಡದ ಮಟ್ಟಿಗೆ, ಬಿಸಿಲ ಬೇಗೆಯಲ್ಲಿ ಎದೆಗೊರಗಿಕೊಳ್ಳುವ ನೆರಳು.. ಹಗಲಲ್ಲಿ ಕಂಡ ಬೆಳಕಿನ ತೋಳುಗಳನು ಹುಡುಕಿ ರಾತ್ರಿ ಬರುವ ನೆನಪುಗಳ ಇರುಳು.
ವಿಶ್ವದ ಎಲ್ಲಾ ಪ್ರೀತಿಸುವ ಜೀವಗಳಿಗೆ ತಮ್ಮ ಪುಸ್ತಕವನ್ನು ಅರ್ಪಿಸುವ ಲೇಖಕಿ, ಜೀವನದ ಲಾಂಗ್ ಡ್ರೈವ್ ನಲ್ಲಿ ಒಂದಷ್ಟು ಮುರಿದುಹೋಗಿದ್ದ ಕನಸುಗಳ ಹಂಪುಗಳನ್ನು ದಾಟಿಸುವಲ್ಲಿ ಯಶಸ್ವಿಯಾಗಿದ್ದಾರೆಂದೇ ಹೇಳಬಹುದು.
ಕನ್ನಡಿಗರ ಪುಸ್ತಕ ಪ್ರೀತಿಗೆ, ಪ್ರತಿ ಪುಟದಲ್ಲೂ ಹೊಸತನದ ಗೆರೆಯನ್ನು ಬರೆದಿರುವ ಶ್ರೀ ಜಬೀಉಲ್ಲಾ ಎಂ.ಅಸದ್ ರವರಿಗೆ, ಸದಾ ಬದುಕಿಗೆ ಪ್ರೀತಿಯ ಒರತೆ ನೀಡುವ ಲೇಖಕಿಯ ಇರಾದೆಗೆ ಶುಭವನ್ನು ಕೋರುತ್ತಾ…






0 Comments