ಚೇತನಾ ತೀರ್ಥಹಳ್ಳಿ
ಹೂತಿಟ್ಟ ಹೆಣಗಳನ್ನ ಹೊರಗೆಳೆದು ಅಳೋದು ಅಂದ್ರೆ ಇದೇ!
ಹರವಿಕೊಂಡ ಕಥೆಗಳನ್ನ ಕಂಡು ಗೆಳೆಯ ರೇಗಿದ.
“ಯಾಕೇ ನೀನು ಹಿಂಗೆ?”
ನನ್ನಲ್ಲಿರುವ ಬಂಡವಾಳ ಅದೇ ಅಲ್ವೇ? ಹೊಟ್ಟೆ ಹೊರೆಯಲಿಕ್ಕೆ ಗೋರಿ ತೋಡುವ ಹೆಣ್ಣುಮಕ್ಕಳು ಅದೆಷ್ಟಿಲ್ಲ?
ಮತ್ತೆ ನಾನು ಗೋರಿಕಲ್ಲು ಬಗೆಯತೊಡಗಿದೆ.
* * *
ಹಾಗೆ ನೋಡಿದರೆ, ಎದೆ ಎದೆ ಬಡಕೊಂಡು ರುಡಾಲಿ ಪೋಸು ಕೊಡುವಂಥದ್ದು ನನಗೇನೂ ಆಗಿರಲೇ ಇಲ್ಲ.
ಬಹುತೇಕ ಗಂಡಸರಂತೆ ಅಂವ ಕೂಡ ಕಂಡೆರಡು ಬೇಲಿ ಜಿಗಿದಿದ್ದ.
ಸಿಕ್ಕಲ್ಲಿ ಕುಂತು ಉಂಡಿದ್ದ.
ಮತ್ತೇನಿಲ್ಲ…
ಅಪ್ಪ ಕೊಟ್ಟೊಂದು ಸರ, ಜೋಡಿ ಓಲೆ, ಮದುವೆ ಕಾಲದ್ದೊಂದೆರಡು ಬಳೆ- ಎಲ್ಲೋ ಗಿರವಿ ಇಟ್ಟು ಕಳೆದಿದ್ದ.
ಅಷ್ಟೇ.
ಜೊತೆಗೆ,
ಎಲ್ಲ ಟಿ.ವಿ ಸೀರಿಯಲ್ಲುಗಳ ಹಾಗೆ ಮನೆ ಸೇರಿದ ನಾದಿನಿ, ಬೆನ್ನಿಗೊಬ್ಬಳು ಅತ್ತೆ…
ದಿನದಿನಾ ರಗಳೆ, ಜಗಳ, ರೋತೆ!
* * *
ಎದೆಯಲ್ಲಿ ಹೂತಿರುವ ಈ ಕಥೆಗಳು ಶುದ್ಧ ಹಳಸಲು ಅನ್ನೋದು ನನಗೂ ಗೊತ್ತು.
ಅಮ್ಮ, ಅಜ್ಜಿ, ಪಕ್ಕದ ಮನೆ ಆಂಟಿ… ಎಷ್ಟೋ ಜನರ ಕಣ್ಣಲ್ಲಿ ಹನಿಯಾಗಿ, ಗಂಟಲ ಬಿಗುವಾಗಿ, ಸೆರಗಿನ ತುದಿಯಾಗಿವೆ ಅನ್ನೋದೂ ಗೊತ್ತು.
ಜೊತೆಗೆ ಈ ಕಥೆಗಳೆಲ್ಲ ಸತ್ತು ವರ್ಷಗಳೇ ಉರುಳಿಹೋಗಿವೆ ಕೂಡ.
ಆದರೂ ಸೂತಕ ಮಾತ್ರ ಕಳೆದಿಲ್ಲ.
ಊಹೂಂ… ನನಗೇ ಕಳೆದುಕೊಳ್ಳುವ ಮನಸ್ಸಿಲ್ಲ!
* * *
ಮತ್ತೆ ಗೆಳೆಯ, ಗಡ್ಡ ನೀವುತ್ತ ಕವಿತೆ ಅಂದ;
“ಹೆಣ ಸಿಂಗರಿಸೋದು ನಿಲ್ಲಿಸು.
ಪಿರಮಿಡ್ಡಿಂದ ಹೊರಗೆ ಬಾ.
ಕತ್ತಲಲ್ಲಿದ್ದರೇನಂತೆ?
ಆಕಾಶ ನೋಡು!
ಎಷ್ಟೊಂದು ಚಿಕ್ಕೆಗಳು…
ನಡುವಲ್ಲಿ ಚಂದಿರ!”
ತಲೆ ಎತ್ತಿದೆ ನಾನೂ. ಅರೆ! ಹೌದಲ್ಲ? ಬೆಳ್ಳನೆ ನಗು ಚಂದ್ರಮ.
ಚಿಣಮಿಣಕಿ ತಾರೆಗಳು ಹೇಗೆಲ್ಲ ಮಿಟುಕುತ್ತಿವೆ!
ನೆನಪಿನ ‘ಮಮ್ಮಿ’ ಬೂದಿಯಾಗಿರಲಿಲ್ಲ… ಚಂದ್ರನಲ್ಲಿ ಇಂವ ಕಂಡ.
ಮತ್ತೆ,
ಸುತ್ತಲೆಲ್ಲ ನನ್ನ ಸವತಿಯರು!



chandranalli priyarannu kaaNodu gottu. Taareyaru savatiyaraagirOdu..nimma kalpanege namonamaha.
and..
nanagE kaLedukoLLo manasilla..bravo!