ಒತ್ತರಿಸಿ ಹುಯ್ಯೋ ಮಳೆರಾಯ!
ಮೈ ಮನ ಭಾರವಾಗಿ ಬೆಳಕು ಹರಿಯುವದೇ ಬೇಡ ಎನ್ನುವಂತಾಗಿ, ಹಾಸಿಗೆಯಲ್ಲಿಯೇ ಮುದ್ದೆಯಾಗಿ ಮುದುಡಿದ ನನ್ನನ್ನು ನನ್ನ ಮಗ ‘ಪಪ್ಪಾ ಏಳು’ ಅಂದಾಗಲೂ ಹೂಂಗುಡದ, ಹಾಂಗುಡದ ಮುಗ್ಗಲುತನ ಅದೆಲ್ಲಿಂದ ನನ್ನ ಮೈಹೊಕ್ಕಿತೋ ನಾನರಿಯೆ. ಆಕಾಶವಾಣಿಯಲ್ಲಿ ಭಕ್ತಿಗೀತೆ ಕಾರ್ಯಕ್ರಮ ಮುಗಿದು, ಇದೀಗ ಚಿಂತನೆ ಆರಂಭ ಎನ್ನುವವರೆಗಿನ ಮಾತುಗಳೂ ಮಸುಕುಮಸುಕಾಗಿ ಕೇಳಿಸಿ, ಚಿಂತನೆಯೂ ಒಂದು ಚಿಂತೆಯಾಗಿ ರೇಡಿಯೋ ಟ್ಯುನ್ ಆಫ಼್ ಮಾಡುವಷ್ಟು ಮನಸು ಮುಗ್ಗುಲಗೇಡಿಯಾದದ್ದು ಇದೇ ಮೊದಲೇನೂ ಅಲ್ಲ. ಅನೇಕ ದಿನಗಳಿಂದ ಬರೀ ಮೋಡ ಮುಸುಕಿದ ವಾತಾವರಣ. ಧೋ..ಧೋ.. ಎಂದು ಸುರಿ0ುುವ ಮಳೆ ನೋಡದೇ ವರ್ಷಗಳೇ ಕಳೆದಿವೆ. ಬಾಲ್ಯದಲ್ಲಿ ಬಯಲುಕಡೆಗೂ ಸವಡು ಕೊಡದ ಆ ಗಂಡು ಮಳೆ ಎಲ್ಲಿ.. ಈಗ ಹೇಸಿಕೊಂಡು ಹನಿಯುವಂತೆ ಜಿಟಿ ಜಿಟಿ ಸುರಿಯುವ ಈ ಹೆಣ್ಣು ಮಳೆ ಎಲ್ಲಿ..? ನನ್ನ ಶರೀರ ಮೋಡ ಮುಸುಕಿದರೆ ಸಾಕು ಚಟಪಡಿಸಲು ಆರಂಭಿಸುತ್ತದೆ. ಇನ್ನೊಂದರ್ಥದಲ್ಲಿ ನನ್ನ ಶರೀರವೇ ಒಂದು ದೊಡ್ಡ ಹವಾಮಾನ ಇಲಾಖೆಯ೦ತೆ, ವಾತಾವರಣದ ವೈಪರೀತ್ಯಗಳು ಮೊದಲು ಮುಟ್ಟುವದೇ ನನ್ನ ಶರೀರವನ್ನು, ಪರಿಣಾಮವೇ ನನ್ನ ನಾಸಿಕದ ಒಂದು ಬಾಗಿಲು, ಒಮ್ಮೊಮ್ಮೆ ಎರಡೂ ಬಾಗಿಲು ಜಾಮ್ ಆಗಿ ಉಸಿರಾಟದ ದೊಡ್ಡ ಕಿರಿಕಿರಿ ಆರಂಭ..! ಹೀಗೆ ಜಾಮ್ ಆದ ಬಾಗಿಲುಗಳು ಮತ್ತೆ ತೆರೆಯುವದು ಚುರುಚುರು ಎನ್ನುವ ಬಿಸಿಲು ಮೂಡಿದಾಗಲೇ… ಜಾಮ್ ಆದ ಬಾಗಿಲುಗಳ ಸಂದಿಗೆ ಎಣ್ಣೆ ಹೊಯ್ಯುವಂತೆ ನನ್ನ ನಾಸಿಕದ ಕವಾಟುಗಳನ್ನು ಸಡಿಲಿಸಲು ತರಾವರಿ ಸ್ಪ್ರೇ ಬಳಸಿದರೂ ಮತ್ತದೇ ರಾಗ ಅದೇ ಹಾಡು. ಜೋರಾಗಿ ಮಳೆ ಹೊಡೆದು, ರಸ್ತೆಯ ಹುಡಿಯೆುಲ್ಲಾ ಹಸನಾಗಿ ಹೋದರೆ ಒಂದು, ಬಂದೂ ಬಾರದ ಹಾಗೆ ಕಣ್ಣ ಹನಿಯುಂತೆ ಟಪಕುವ ಮಳೆರಾಯು ನನ್ನಂಥಾ ಅಲರ್ಜಿ ಆಸಾಮಿಗಳಿಗೆ ರೇಜಿಗೆಯುನ್ನುಂಟು ಮಾಡುವದಂತೂ ಹೌದು. ಮಳೆ ಬಂದರೆ ಕೆಟ್ಟಲ್ಲ, ಮಗ ಉಂಡರೆ ಕೆಟ್ಟಲ್ಲ ಎನ್ನುವ ಮಾತಿದೆ. ಎರಡೂ ಹಿತಮಿತವಾಗಿರಬೇಕು ಎನ್ನುವ ವಾಸ್ತವವನ್ನು ಮೀರಿದ ಈ ಮಾತು ಮಳೆಯು ಬಗೆಗಿನ ಬಯುಕೆಯುನ್ನು ಬಲವಾಗಿಸಿದೆ. ಒಕ್ಕಲು ಮಗ ಬಿಕ್ಕುವಂತೆ ಮಾಡಬಾರದು ಎನ್ನುವದರ ಆಶಯುವೂ ಅಲ್ಲಿದೆ. ಸದಾ ಸುರಿಯುವ ಮಳೆರಾಯು ‘ಧಾರವಾಡದ ಮಳೆಯುನ್ನು ನಂಬಬಾರದು’ ಎನ್ನುವ ಮಾತನ್ನೂ ಹುಸಿ ಹೋಗಿಸಿ, ಧಾರವಾಡದ ಮಳೆಯುನ್ನು ನಂಬಬಹುದು ಎನ್ನುವಂತೆ ಮಾಡಿದ ಈ ಜಿನುಗು ಮಳೆರಾಯು ಮೈ-ಮನ ಭಾರ ಮಾಡಿರುವದಂತೂ ಹೌದು. ಮಾಡದೇ ಮಟ್ಟದೇ ಮುಗ್ಗಲಾಗುವ, ಹಾಸಿಗೆಯಲ್ಲಿ ಮಗ್ಗಲು ಹೊರಳಿಸುವ, ಕವುಚಿ ಮಲಗುವ ದಟ್ಟ ದರಿದ್ರ ಗುಣಗಳ ಜನುಮದಾತ ಈ ಜಿಟಿಜಿಟಿ ಮಳೆರಾಯ. ಇಂಥಾ ಮಳೆರಾಯ ನನ್ನ ಓಣಿಯ ಬಿಡಾಡಿ ನಾಯಿಗಳಿಗೆ ಮಾತ್ರ ರತಿಸುಖದ ಸೋಪಾನವನ್ನೇ ಹೊತ್ತು ತಂದಿದ್ದಾನೆ. ಮನೆಯು ಹಿತ್ತಲಲ್ಲಿ ಮಲಗಿದ ನಾಯಿ ಹೆಚ್ಚೆಂದರೆ ಪಟ್ ಪಟಾಂತ್ ಕಿವಿ ಜಾಡಿಸುವ, ಇಲ್ಲವೇ ಕಿವಿಯಲ್ಲಿಯ ತೊನಸಿಯನ್ನು ಜಾಡಿಸಿಕೊಳ್ಳುವ ಖಯಾಲಿಯುನ್ನು ಮರೆತು ಈಗ ಕಾಮನಾಟಕೆ ಕುಂಯ್ ಗುಡುತ್ತಿದೆ. ಹತ್ತಿರದಲ್ಲಿ ಸುತ್ತಿ ಸುಳಿಯುವ ಹೆಣ್ಣು ನಾಯಿಯ ಬಾಡಿ ಕೆಮೆಸ್ಟ್ರಿಯೊ0ದು ಹತ್ತಾರು ನಾಯಿಗಳ ನಿದ್ದೆಗೆಡಿಸಿದೆ. ಬರೀ ಅದು ಹಾದು ಹೊಗುವ ಗಮಲಿನಲ್ಲಿಯ ಸುಂದಾಗುವ ಇಂಥಾ ಅನೇಕ ಬಿಡಾಡಿ ನಾಯಿಗಳು ಖರೆಖರೆ ಬೀದಿ ಕಾಮಣ್ಣಗಳು ನಾವೇ… ನಮ್ಮನ್ನು ಮೀರಿಸುವ ತಾಕತ್ತು ಯಾರಿಗೂ ಇಲ್ಲ ಎನ್ನುವ ಗತ್ತಿನಲ್ಲಿ ಆ ಜಿಟಿ ಜಿಟಿ ಮಳೆಯಲ್ಲೂ ಎಲ್ಲೆಂದರಲ್ಲಿ ಹೂಂಕರಿಸುವ, ಮೈ ಏರುವ ಅವುಗಳ ಕ್ರಿಯೆ ತುಸು ಅಸಹ್ಯ ಹುಟ್ಟಿಸಿದರೂ ಸಹಜಪ್ರವೃತ್ತಿ ಎನ್ನುವ ರಿಯಾಯತಿಯೊಂದಿಗೆ ಮುಂದುವರೆದಿದೆ. ತಮ್ಮ ರತಿಕ್ರೀಡೆಗೆ ವೈರಿಗಳು ಅಪಾರ ಎನ್ನುವ ಸತ್ಯ ನಮ್ಮ ಹಿತ್ತಲಲ್ಲಿರುವ ನಾಯಿಗೆ ಅದು ಹೇಗೆ ಹೊಳೆಯಿತೋ ಗೊತ್ತಿಲ್ಲ, ತನ್ನಾಕೆಯನ್ನು ಕರೆದುಕೊಂಡು ಆ ಜಿಟಿಜಿಟಿ ಮಳೆಯಲ್ಲಿಯೂ ಅದು ಮಾಳಿಗೆ ಏರಿ ಹೋದದ್ದು ವಿಚಿತ್ರ.
ಇಂಥಾ ಜಿಟಿಜಿಟಿ ಮಳೆಯಲ್ಲಿ ಕುರುಕುರು ಎನ್ನುವ ಖಾರಾ ಮೆತ್ತಿದ ಚುರುಮುರಿ ಇದ್ದರೆ ಎಂಥಾ ಸ್ವಾದ..! ಎಂದು ಯೋಚಿಸುತ್ತಿರುವಾಗಲೇ ತನ್ನ ವಿಚಿತ್ರನಾದಲಹರಿಯಲ್ಲಿ ಕೂಗುತ್ತಾ ಮಂಡಕ್ಕಿ ಮಾರುವವ ಬಂದೇ ಬಿಟ್ಟ. ಅವನ ಕೂಗು ಕೇಳಿದ್ದೇ ನನ್ನ ಕಿವಿ ಚುರುಕಾದವು. ಹಾಸಿಗೆಯಲ್ಲಿಯೇ ಹೊರಳಿ ‘ಏ..ಮಂಡಕ್ಕಿ ತಗೊ’ ಅಂದೆ. ನನ್ನಾಕೆ ‘ಈಗೆಂತಾ ಮಂಡಕ್ಕಿ..? ಬೆಳ್ಳಂಬೆಳಿಗ್ಗೆ..?’ಅಂದಾಗ ಚೂಡಾ ಮಾಡುವಂತಿ ಎಂದು ಹೇಳಲು ಮನಸಾಗಲಿಲ್ಲ. ಅಷ್ಟಕ್ಕೂ ಹಾಸಿಗೆ ಬಿಟ್ಟೇಳದವರಿಗೆ ಆ ಹಕ್ಕು ಎಲ್ಲಿದೆ..? ಆ ಮಂಡಕ್ಕಿ ಮಾರುವವನು ಹಾಗೇ ಕೂಗುತ್ತಾ ನಡೆದ. ನಾನು ಆತ ಹೊತ್ತು ತರುವ ಮಂಡಕ್ಕಿ ಚೀಲದ ಮೇಲೂ ಈ ಜಿಟಿ ಜಿಟಿ ಮಳೆಯ ಪ್ರಭಾವ ಆಗಲಿದ್ದೀತೇ..? ಅವು ಕೂಡಾ ನನ್ನ ಹಾಗೆಯೇ ಮೆತ್ತಗಾಗಿ ಮುದುಡಿ ಮಲಗಿರಬಹುದು. ಎಂದು ಸಮಾಧಾನಪಟ್ಟುಕೊಂಡೆ.
ಮದುವೆಯಾದ ಹೊಸತರಲ್ಲಿ ಹೆಂಡತಿ ಸಿನೇಮಾದಲ್ಲಿಯ ನಾಯಕಿಯೊಬ್ಬಳು ನಾಯಕ ಮಳೆಯುಲ್ಲಿ ಅದ್ದಿಬಂದಾಗ ತಲೆಯುನ್ನು ಟವಲಿಂದ ಎದೆಗವಿತುಕೊಂಡು ಹಿತವಾಗಿ ಒರೆಸುವಂತೆ ಮಾಡುತ್ತಿದ್ದಳು. ಅದನ್ನು ಅನುಭವಿಸಲಿಕ್ಕಾಗಿಯೇ ನಾನು ಮತ್ತೆ ಮತ್ತೆ ಅದ್ದಿ ಬರುತ್ತಿರುವದೂ ಇತ್ತು. ಮೊನ್ನೆಯೊಮ್ಮೆ ಈ ಜಿಟಿಜಿಟಿ ಮಳೆಯಲ್ಲಿ ಒದ್ದೆಯಾಗಿ ಬಂದಾಗ ತೀರಾ ಕಟಿಕಟಿಯಾಗಿರುವ ಟವಲ್ ಒಂದನ್ನು ತಂದು ನನ್ನೆಡೆಗೆ ಬೀಸಾಕಿದ ರೀತಿ ಭಯ೦ಕರವಾಗಿತ್ತು! ಆ ಎಸೆತಕ್ಕೆ ನನ್ನ ತಲೆ ತಾನೇ ತಾನಾಗಿ ಒಣಗಿ ಹೋಗಿತ್ತು. ಜೊತೆಗೆ ಮನಸು ‘ಮಗನೇ ಯಾವಾಗಲೂ ಮದುವೆಯಾದ ಹೊಸತರಲ್ಲಿಯ ಹಾಗೆ ಇರಬೇಕೆನ್ನುವೆಯೇನು..? ಹಾಗಾದರೆ ಇನ್ನೊಂದು ಮದುವೆಯಾಗು’ ಎಂದಂತಿತ್ತು. ಎರಡನೆಯು ಮದುವೆಯ ಬಗ್ಗೆ ಹೀಗೇ ಯೋಚಿಸುತ್ತಿರುವಾಗ ಅಡುಗೆಯ ಮನೆಯ ಪಾತ್ರೆಗಳ ಸದ್ದು ಆ ಯೋಚನೆಯನ್ನೇ ತುಂಡು ಮಾಡಿದವು.
ಮಳೆ ತೀರಾ ಸಣ್ಣದಾಗಿ ಹನಿಯುತ್ತಿದೆ. ಇಡೀ ದಿನ ಮಳೆಯಲ್ಲಿ ನಿಂತರೂ ಬಟ್ಟೆ ಒದ್ದೆಯಾಗದ ಹಾಗೆ ಹನಿಯುವ ಈ ಮಳೆ ಕಚಕ್..ಪಿಚಕ್ ಅಂತ ತಿರುಗಾಡ್ತಾ ನಾಗಪಂಚಮಿಯಲ್ಲಿ ನಾಗಪ್ಪನಿಗೆ ಹಾಲೆರೆಯುವ೦ತೆ ಮಾಡುತ್ತದೆ. ಗ್ರಾಮೀಣ ಭಾಗದ ಪೋರ-ಪೋರಿಯರು ಈ ಜಿಡಿಮಳೆಯಲ್ಲಿಯೇ ಜೋಕಾಲಿ ತೂಗುವ, ತೊನೆಯುವ ನೆನಪಾಗುತ್ತಾರೆ. ಬಾಲ್ಯದಲ್ಲಿ ಈ ಬಗೆಯ ಜಿಟಿಜಿಟಿ ಮಳೆಯಲ್ಲಿಯೇ ನಾನು ಊರು ಸುತ್ತುವ, ಜೋಕಾಲಿ ಆಡುವ ಕೊಬ್ಬರಿ, ಅಳ್ಳು, ಉಂಡೆ ತಿಂದ ನೆನಪಾಗುತ್ತದೆ. ಇವೆಲ್ಲವನ್ನೂ ಮೀರಿ ಕೈಯಲ್ಲಿ ತಂಬಿಗೆ ಹಿಡಿದು, ಬರೀಗಾಲಲ್ಲಿಯೇ ನಡೆದು ಆ ಜಿಟಿಜಿಟಿ ಮಳೆಯಲ್ಲಿಯೇ ಯಾರ್ಯಾರದೋ ಗದ್ದೆಯ ಬದುವಿನಲ್ಲಿ ಮರೆಯಾದದ್ದೂ ಇರುತ್ತಿತ್ತು. ಹೀಗೆ ಅಳುವ ಹೆಣ್ಣಿನಂತೆ ಸುರಿಯುತ್ತಿರುವ ಈ ಮಳೆ ಅದ್ಯಾವಾಗ ನಗುವ ಗಂಡಸಿನಂತೆ ಅಬ್ಬರಿಸುವದೋ ನಾ ಕಾಣೆ. ಆ ಬಗೆಯ ಒತ್ತರಕ್ಕಾಗಿ ಕಾದು ಕುಳಿತವರು ರಾಶಿ ರಾಶಿ. ಮಳೆ ಬರಲಿ ಆದರೆ ಜಿಟಿ ಜಿಟಿ ಬೇಡ. ಬಿಲ್ಕುಲ್ ಇಲ್ಲವೇ ಇಲ್ಲ ಎನ್ನುವೆಡೆ ಈ ಜಿಟಿ ಜಿಟಿಯಾದರೂ ಬರಲಿ.]]>




heart touching……