ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೀಗೊಮ್ಮೆ ಬಸ್ನಲ್ಲಿ …..

-ಸುಧಾ ಚಿದಾನಂದಗೌಡ

ಬಸ್ಸು ಆ ತಿರುವಿನಲ್ಲಿ ಟರ್ನ್ ತೆಗೆದುಕೊಳ್ಳುತ್ತಿದ್ದಂತೆ ಆ ಅಜ್ಜಿ ಧಿಗ್ಗನೆದ್ದು ನಿಂತು, ನಿಲ್ಸಪೋ… ನಿಲ್ಸಪೋ…ಎಂದು ಕಿರುಚಿದ ರಭಸಕ್ಕೆ ಕಂಡಕ್ಟರನ್ನೊಳಗೊಂಡಂತೆ ಪ್ರಯಾಣಿಕರೆಲ್ಲರೂ ಬೆಚ್ಚಿಬಿದ್ದು ನೋಡಿದರು. ಅಜ್ಜಿಯ ಪಕ್ಕದ ಸೀಟಿನಲ್ಲಿದ್ದ ಮೇಡಂ ಅಂತೂ ಮೆಟ್ಟಿಬಿದ್ದು ಕಂಗಾಲಾದಳು. ಏನಾಯ್ತು ಅಜ್ಜೀ ಏನಾಯ್ತು?…ಪ್ರಶ್ನೆ ಅಜ್ಜಿಯ ಕಿವಿ ಸೇರಲಿಲ್ಲ. ಆಕೆಯ ದೃಷ್ಟಿ-ಗಮನವೆಲ್ಲ ಕಂಡಕ್ಟರ್ನೆಡೆಗೇ ಇತ್ತು…ಏಯ್… ನಿಲ್ಸಪೋ ಬಸ್ನ ಮೊದ್ಲು! ನಿನಗೇನು ತಲಿಗಿಲಿ ಐತಿಲ್ಲ? ಯಾವ ರೂಟಿನಾಗ ಹೋಕೈತಿ ಬಸ್ಸು ಅಂತ ಮೊದ್ಲ ಹೇಳಬೇಕ, ಬ್ಯಾಡ? ನಾ ಬೊಮ್ನಳ್ಳಿಗೆ ಹೋಗ್ಬೇಕು. ಕ್ಯಾದ್ಗಿಹಳ್ಳಿಗಲ್ಲ… ನಿಲ್ಸಪಾ…ಕಂಡಕ್ಟರ್ ಮೊದಲು ಬೆಪ್ಪಾದ… ನಂತರ ಸಿಟ್ಟಾದ ಏನಜ್ಜೀ, ಹೀಗಂತೀಯಾ? ಈ ಬಸ್ಸು ಕ್ಯಾದ್ಗಿಹಳ್ಳಿಗ್ಹೋಗಿ ಮತ್ತೆ ವಾಪಸ್ ಬಂದೇ ಮುಂದಕ್ಹೋಗೋದು. ನೀ ಹತ್ತುತ್ತಿದ್ದಾಗ್ಲೇ ಹೇಳಿದ್ನಲ್ಲ… ಏನ್ ಹೊಸದಾಗಿ ಬಂದೀಯೇನು ಊರಿಗೆ…?ಅಜ್ಜಿ ಬೆದರಲಿಲ್ಲ. ಹೆದರಲಿಲ್ಲ. ಇನ್ನಷ್ಟು ರೇಗಿದಳು. ಯಾವಾಗ ಹೇಳ್ದೀ? ಹೇಳಿದ್ರ ನಾ ಯಾಕ ಹತ್ತುತ್ತಿದ್ದೆ? ನನಗೆ ಅರ್ಜಂಟೈತಿ. ನಿಲ್ಸು ಬಸ್ನ. ನಾ ಇಲ್ಲೇ ಕ್ರಾಸ್ನಾಗ ಇಳ್ಕಂತೀನಿ.ಇಳಿದ್ರ ಮತ್ತ ಹತ್ಸಂಗಿಲ್ಲ-ನೋಡು. ಇಲ್ಲೀತಂಕ ಬಂದಿದ್ದು ಟಿಕೀಟು ಮೂರು ರೂಪಾಯಿದು… ತಗೋ…ಬೇಕಾಗಿಲ್ಲ, ನಿನ್ ಟಿಕೀಟು ನೀನ ಇಟ್ಕ. ಮೊದ್ಲು ಸರ್ಯಾಗಿ ಹೇಳ್ಲಿಲ್ಲದ್ದು ನಿಂದ ತಪ್ಪು. ನಾ ಈಗ್ಯಾಕ ಟಿಕೇಟ್ ತಗಳ್ಳಿ? ಇಲ್ಲೇ ಇಳಿತೀನಿ, ಇಳ್ಸು. ಇಲ್ಲಿಂದ ಬೊಮ್ನಳ್ಳಿಗೆ ಹೋಗಾಕಾರ ತಗಂತೀನಿ.ಏಯ್, ಏಯ್… ಮುದುಕೀ… ನಿಂಗೇನ್ ತಲಿ ನೆಟ್ಟಗೈತಿಲ್ಲ? ಟಿಕೀಟ ತಗಳ್ಳದಂಗ ಬರಬೇಕಂತಿಯೇನು? ನನ್ ತಲಿ ತಗೀಬೇಕಂತ ಮಾಡೀಯೇನು?ಹಂಗ ತಿಳ್ಕ, ಸರ್ಕ, ದಾರಿ ಬಿಡು. ಏಯ್, ಇಳ್ದಿ ಅಂತ ಮತ್ತ ಹತ್ತಂಗಿಲ್ಲ ನೋಡು. ಚ್ಯಾಷ್ಟಿ ಮಾಡ್ತೀಯೇನು? ಕಂಡಕ್ಟರ್ಗೆ ಅಯೋಮಯವಾಗಿ, ಆತನೂ ರೇಗತೊಡಗಿದ್ದ.

ಅಜ್ಜಿಯ ಪಕ್ಕದಲ್ಲಿದ್ದ ಆತನ ಮೊಮ್ಮಗನೂ ಬೆಪ್ಪಾಗಿದ್ದ.ಚ್ಯಾಷ್ಟಿ ಮಾಡ್ತಿರಾದು ನಾನ? ನೀನ? ನಿನ್ ಮನೀದೇನು ಬಸ್ಸು? ಗೌರ್ನಮೆಂಟಿಂದು. ಹತ್ತಿಸಿಗೊಳ್ಳದಂಗ ಹೋಗು ಆವಾಗ ಹೇಳ್ತೀನಿ. ಬಸ್ಸಿಗೆ ಅಡ್ಡ ಮಲಗಲಿಲ್ಲಂದ್ರ ಕೇಳು. ಓಹೋಹೋ… ಹತ್ಸಿಂಗಿಲ್ಲಂತ ಹತ್ತಂಗಿಲ್ಲ… ಮೊದ್ಲು ಸರೀಗೆ ಮಾತಾಡಾದು ಕಲಿ. ಅಜ್ಜಿ ಕೂಗಾಡುತ್ತಾ, ಮೊಮ್ಮಗನನ್ನೂ, ಬಟ್ಟೆಯ ಗಂಟನ್ನೂ ಒಂದೊಂದು ಕೈಯಲ್ಲಿ ಹಿಡಿದುಕೊಂಡು ಬಸ್ನಿಂದ ಇಳಿದು ಹೋದಾಗ… ಪ್ರಯಾಣಿಕರಿಗೆ ಧೋ… ಎಂದು ಮಳೆ ಸುರಿದು ಒಮ್ಮಲೇ ನಿಂತುಹೋದ ಅನುಭವ… ಅಲ್ಲಾ, ಎಷ್ಟ್ ಮಾತಾಡ್ತಾಳ ನೋಡ್ರಿ. ಟಿಕೀಟ ತಗಳ್ಲಿಲ್ಲ! ನಾ ಮೊದ್ಲ ಹೇಳೀನಿ. ವೈಯಾ ಕ್ಯಾದ್ಗಿಹಳ್ಳಿ ಅಂತ…ಇಲ್ಲ ಅಂತಾಳ ನೋಡ್ರಿ…ಕಂಡಕ್ಟರ್ ಅವಮಾನಿತನಾಗಿದ್ದವನು ಬಸ್ನಲ್ಲಿದ್ದವರೆಲ್ಲರ ಸಹಾನುಬೂತಿ ಗಳಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದ. ಡ್ರೈವರ್ ಮಲ್ಲಪ್ಪನದು ಯಥಾ ಪ್ರಕಾರ ನಿಲಿಪ್ತ ನಗೆ. ಹೊಲ, ಗದ್ದೆಗಳ ಪಕ್ಕ ಕೂಡ ಬಸ್ ನಿಲ್ಲಿಸಿ ಕೈ ಮಾಡಿದ ರೈತರನ್ನು ಹತ್ತಿಸಿಕೊಳ್ಳುವ ಮಲ್ಲಪ್ಪ, ತಲೆ ಕೆಡಿಸಿಕೊಳ್ಳದೆ ಅಜ್ಜಿ ಕೆಳಗಿಳಿದೊಡನೆ ಕ್ರಾಸ್ನಲ್ಲಿ ತಿರುವಿಕೊಂಡು ಮುಂದೋಡಿಸಿದ್ದ. ಡ್ರೈವರ್ನ ಕಡೆಗಾಗಲಿ, ಕಂಡಕ್ಟರ್ನ ಕಡೆಗಾಗಲಿ ಎಂದೂ ಹೆಚ್ಚು ಲಕ್ಷ್ಯ ಕೊಡದ ಗ್ರಾಮಸ್ಥ ಪ್ರಯಾಣಿಕರು ಅಜ್ಜಿ ಮತ್ತೆ ಬಸ್ಸು ಹತ್ತುತ್ತಾಳೋ ಇಲ್ಲವೋ ಎಂಬ ಸ್ವಾರಸ್ಯಕರ ಚಚರ್ೆಯಲ್ಲಿ ತೊಡಗಿದರು. ಅಲ್ಲಾ, ಅಜ್ಜಿ ಟಿಕೀಟ್ ತಗೋಬೇಕಿತ್ತು. ಮತ್ತ ಈ ಕಂಡಕ್ಟರನೂ ಸರ್ಯಾಗಿ ಹೇಳಬೇಕಾಗಿತ್ತು ಅದೆಲ್ಲಕ್ಕಿಂತ ಈ ಬಸ್ಸಿನ ವ್ಯವಸ್ಥೆನೇ ಸರಿಯಿಲ್ಲ ಬಿಡ್ರಿ. ಪ್ರತಿಸಲ ಮೇನ್ ರೋಡಿನಿಂದ ಒಳಕ್ನ ಮೂರು ಕಿಲೋಮೀಟರ್ ಅನಾವಶ್ಯಕ. ಬಸ್ ಹೋಕೈತಂದ್ರ ಕೆಟ್ಟ ಬೇಜಾರಲ್ಲೇನ್ರಿ? ಮತ್ತ ಮ್ಯಾಲ ಐದ್ರುಪಾಯಿ ಜಾಸ್ತೀನೂ ಕೊಡಬೇಕು. ಇದೆಲ್ಲೀದು ತಗಿರೀ, ಅರ್ಥ ಇಲ್ಲ ಮಣ್ಣಿಲ್ಲ. ಹೌದ್ಹೌದು. ಇದೊಂದಂತೂ ಖರೇ ಮಾತು. ನಾನೂ ಒಂದೊಂದ್ಸಲ ಪೂತರ್ಾ ದುಡ್ಡು ಕೊಟ್ಟು ಟಿಕೀಟು ತಗಂಡಿದ್ರೂನೂ ಈ ಕ್ರಾಸ್ನಾಗ ಇಳಿದುಬಿಡ್ತೀನಿ ನೋಡ್ರಿ. ಬಸ್ಸು ತಿರುಗಿ ಬಂದಾಗ ಹತ್ತಕ್ಯಂಡು ಹೋದ್ರಾತು. ಹೂಂ ಮತ್ತ. ಆ ಧೂಳದಾಗ ಆ ಹಳ್ಳೀತಂಕ ಯಾಕ ಹೋಗಾದು? ಈ ಅಜ್ಜೀ ಏನ್ಮಾಡ್ತಾಳೋ? ಹತ್ತುತ್ತಾಳೋ. ಏನ್ ಯಾವ್ದಾರ ಟಂ ಟಂ ಆಟೋ ಹತ್ತುತ್ತಾಳೋ… ಏಯ್ ತಗೀರಿ ನೀವಂತೂ. ನಾ ಬಸ್ ನಿಲ್ಸೋವ್ನಲ್ಲ ಕಂಡಕ್ಟರ್ ಕೋಪ ಇಳಿಯುವ ಪರಿಯದಾಗಿರಲಿಲ್ಲ. ಚಚರ್ೆಯ ನಡುವೆ ಬಸ್ಸು ಹಳ್ಳಿ ಮುಟ್ಟಿ, ವಾಪಾಸು ಮೇನ್ ರೋಡಿನೆಡೆ ರಭಸದಿಂದ ಹೊರಟಾಗ, ಕೆಲ ಪ್ರಯಾಣಿಕರು ಅಜ್ಜಿ ಇದಾಳೋ ಇಲ್ಲೋ ಎಂಬ ಕುತೂಹಲದಿಂದ ಕಿಟಕಿಯಿಂದ ತಲೆ ಹೊರಹಾಕಿ ನೋಡತೊಡಗಿದ್ದರು… ಮೇಡಮ್ಮಳೂ ನೋಡಿದಳು…

ಅಜ್ಜಿ ಮೊಮ್ಮಗನನ್ನು ಒಂದು ಕೈಯಲ್ಲಿ, ಗಂಟನ್ನು ಇನನೊಂದು ಕೈಯಲ್ಲಿ ಹಿಡಿದು ಮೇನ್ ರೋಡಿನ ಮಧ್ಯದಲ್ಲಿ ಧೃಡವಾಗಿ ನಿಂತಿದ್ದಳು-ಬಸ್ಸಿಗೆ ಸವಾಲಾಗಿ! ಕಂಡಕ್ಟರ್ ಮತ್ತೆ ಅಯೋಮಯಗೊಂಡು, ಡೈವರನ ಮೇಲೆ ಒತ್ತಡ ಹೇರುತ್ತಾ ಹೇಳಿದ… ನಿಲ್ಸಬ್ಯಾಡ್ರಿ ಸೈಡ್ ತಗಂಡು ನಡೀರಿ ಮುಂದಕ್ಕ… ಡ್ರೈವರ್ ಮಲ್ಲಪ್ಪನ ನಿಲರ್ಿಪ್ತ ನಗೆ ಯಾವುದರಿಂದಲೂ ಬದಲಾಗದು. ಬ್ಯಾರೆ ಪ್ಯಾಸೆಂಜರ್ಸ್ ಅದಾರಲ್ರೀ ಕ್ರಾಸ್ನಾಗ ಎಂದಂದು ಬ್ರೇಕನ್ನೂ ಒತ್ತಿಯಾಗಿತ್ತು. ಕಂಡಕ್ಟರ್ ಪೂತರ್ಿ ಮುಖಭಂಗಿತನಾದ. ಡ್ರೈವರ್ನೇ ತನ್ನ ಮಾತು ಕೇಳಲಿಲ್ಲವೆಂದರೆ…? ದುಮುದುಮು ಮುಖದಿಂದಲೇ ಕೆಳಗಿಳಿದು, ಅವಮಾನ ಮುಚ್ಚಿಕೊಳ್ಳಲು ಜಲ್ದೀ ಹತ್ರೀ… ಜಲ್ದೀ ಹತ್ರೀ… ಎಂದು ಜೋರು ಮಾಡಿದ. ಅಜ್ಜಿಯೂ ಮೊಮ್ಮಗನೊಂದಿಗೆ ಬಸ್ ಹತ್ತಿ ಕುಳಿತಳು. ಏಯ್ ಅಜ್ಜೀ ಮತ್ತೆ ಹತ್ತದ್ಯೇನು? ಎಲ್ಲಿಂದ ಹತ್ತಿದ್ಯೋ ಅಲ್ಲಿಂದ ಪೂತರ್ಿ ಹದಿನೈದು ರೂಪಾಯಿ ಟಿಕೀಟು ತಗ ನೀನು. ಕಂಡಕ್ಟರನ ಮತ್ತದೇ ರಾಗ ಕೇಳಿ ಅಜ್ಜಿ ಈಗ ನಖಶಿಖಾಂತ ಸಿಟ್ಟೇರಿ ರುದ್ರಕಾಳಿಯಾದಂತಾದಳು. ಏಯ್, ಏನ್ ತಿಳ್ಕಂಡಿದೀ? ನಾ ಯೇನು ಪುಗ್ಸಟ್ಟೆ ಬಸ್ ಹತ್ತೀನೇನು? ಸರಿಯಾಗಿ ರೂಟ್ ಹೇಳಲಿಲ್ಲದ್ದು ನಿಂದ ತಪ್ಪು. ನಾ ಇಲ್ಲಿಂದ ಹತ್ತೀನಿ. ಆರು ರೂಪಾಯಿದು ಟಿಕೀಟು ಕೊಡು ಮಯರ್ಾದಿ ಸರೀಗೆ. ತಗ, ನಿನ್ನ ರೊಕ್ಕ ಯಾರಿಗೆ ಬೇಕಾಗೇತಿ? ಆರುರೂಪಾಯಿ ಟಿಕೆಟ್ ಕೊಡು ಅಷ್ಟ. ಜಾಸ್ತಿ ಮಾತಾಡಬ್ಯಾಡ. ಅದ್ಹೇಗೆ ಆಗ್ತೈತಿ?ಮತ್ತ ಆ ಊರಿಂದ ಹತ್ತಿಗ್ಯಂಡು ಬಂದು ಇಲ್ಲಿ ಇಳಿದ್ಯಲ್ಲ. ಅದನ್ನೇನು ನಿಮ್ಮಪ್ಪ ಕೊಡ್ತಾನೇನು? ಕಂಡಕ್ಟ್ರ, ನಮ್ಮಪ್ಪನ ತಂಟ್ಯಾಗ ಹೋಗಬ್ಯಾಡ. ನಿನ್ನ ಗ್ರಹಚಾರ ಬಿಡಿಸಿಬಿಟ್ಟೇನು. ಭೋ… ಮಗನ. ಮೊದ್ಲ ಸರಿಯಾಗಿ ಹೇಳಕಾಗ್ಲಿಲ್ಲ ನಿನಗ? ನಿಂದ ತಪ್ಪು. ನನಗಂತೀ ಏನು? ಮರ್ವಾದಿ ಸರೀಗೆ ಆರುಪಾಯಿ ಟಿಕೀಟು ಕೊಡು… ಇಲ್ಲ ಕೊಡಾದಿಲ್ಲ. ಇಳ್ದುಬಿಡು ಬೇಕಾದ್ರ…ನಾ ಕರೆಕ್ಟಾಗಿ ರೂಟ್ ಹೇಳೀನಿ ನಾ ಯೇನು ಕಿವಿಯಿಲ್ಲದ ಕೆಪ್ಪಿ ಅಂತ ತಿಳ್ಕಂಡೀಯೇನು? ನೀ ಹೇಳೇ ಇಲ್ಲ. ಇಲ,್ಲ ನಾ ಹೇಳೀನಿ. ಇಲ್ಲ. ನೀ ಹೇಳಿಲ್ಲಯಾವುದೋ ಜನ್ಮಾಂತರದ ಯುದ್ಧದಂತಿದ್ದ ಆ ಜಗಳ ಬಸ್ ತುಂಬ ವಿವಿಧ ಅಲೆ ಎಬ್ಬಿಸಿತ್ತು. ಈ ಅಜ್ಜೀದೂ ಭಾರೀ ಆತು ಬಿಡು. ಹತ್ತಿಗ್ಯಂಡು ಬಂದಾಳ ಟಿಕಿಟ್ ತಗಳಲ್ಲ ಅಂದ್ರ ಹೆಂಗ? ತಗಳಲ್ಲ ಅಂತ ಆಕಿ ಎಲ್ಲಿ ಹೇಳಿದ್ಲು? ಇಲ್ಲಿ ಹತ್ತೀನಿ ಇಲ್ಲಿಂದ ತಗಂತೀನಿ ಅಂತಾಳಲ್ಲ… ಏನ್ ತಪ್ಪೈತಿ? ಇವ್ರು ಸರ್ಯಾಗಿ ರೂಟ್ ಹೇಳಿದ್ರ ನಾ ಹತ್ತುತ್ತಿದ್ದಿಲ್ಲ ಅಂತಾನೂ ಹೇಳಕ್ಹತ್ಯಾಳಲ್ಲ… ಪಾಪ. ಇಷ್ಟ್ ವಯಸ್ಸಾಗೇತಿ ಸುಳ್ಳು ಯಾಕ ಹೇಳ್ತಾಳ? ಕಂಡಕ್ಟರ್ನಿಗೆ ಮೈ ಪರಚಿಕೊಳ್ಳುವುದೊಂದೇ ಬಾಕಿ…ಆಗಾಗ ಅದೇ ಬಸ್ಗೆ ಬರುವ ಮೇಡಂ ಕೂಡಾ… ಕಂಡಕ್ಟರ್ ಸಾಬ್, ನೀವು ಕನ್ಫ್ಯೂಸಾಗಿದೀರಿ. ಪ್ರತಿದಿನ ರೂಟ್ ಹೇಳ್ತಿದ್ರಿ, ನಿಜ ಆದ್ರ ಈವೊತ್ತು ಹೇಳಿಲ್ಲಂತ ಕಾಣಸ್ತೈತಿ ನೋಡ್ರಿ. ನನಗೂ ನೆನಪಿದ್ದಂಗಿಲ್ಲ. ಹೋಗ್ಲಿ ಬಿಡ್ರಿ ಪಾಪ… ಎಂದುಬಿಟ್ಟಳು. ಹೌದ್ಹೌದು ಇಲ್ಲಿಂದನ ಟಿಕೀಟ್ ಕೊಟ್ಟುಬಿಡ್ರಿ. ದೇಶದಾಗ ಯಾರ್ಯಾರೋ ಎಲ್ಲೆಲ್ಲೋ ಎಷ್ಟೆಷ್ಟೋ ಲೂಟಿ ಮಾಡ್ತಾರ.ಯಕಃಶ್ಚಿತ್ ಏಳೆಂಟು ರೂಪಾಯಿಗೆ ಯಾಕ ಜಗಳ… ಹೀಗೆ ನಾಲ್ಕೈದು ಕಂಠಗಳು ಒಗ್ಗಟ್ಟಾದಾಗ ಕಂಡಕ್ಟರ್ ಅಸಹಾಯಕನಂತೆ ಟಿಕೀಟು ಹರಿದು ಅಜ್ಜಿಯ ಕೈಗೆ ತುರುಕಿದ. ಈ ಹುಡುಗಂದೂ ತಗೋ ಜೋರು ಮಾಡಿದ. ಅಜ್ಜಿ ಅದಕ್ಕಿಂತ ಜೋರಾಗಿ ಅಯ್ಯಯ್ಯ, ನಿನಗೇನು ಕಣ್ಣುಗಿಣ್ಣು ಕಾಣ್ತಾವ ಇಲ್ಲ? ಅವ್ನಿಗಿನ್ನು ಆರೇಳು ವರ್ಷ ಅಷ್ಟ ಎಂದಾಗ ಎದುರು ವಾದಿಸುವುದು ವ್ಯರ್ಥ ಎಂದು ಅರ್ಥ ಮಾಡಿಕೊಂಡ ಕಂಡಕ್ಟರ್ ಕದನವಿರಾಮ ಘೋಷಿಸಿಕೊಂಡ. ದಿಗ್ವಿಜಯ ಸಾಧಿಸಿದ ಅಜ್ಜಿ ಮೊಮ್ಮಗನೊಂದಿಗೆ ಸೀಟಿನಲ್ಲಿ ವಿರಾಜಮಾನಳಾದಳು.

ಮೊಮ್ಮಗನ ಮೊಗದಲ್ಲಿ ಗಾಬರಿಯ ಜೊತೆಗೊಂದಿಷ್ಟು ನಿರಾಳತೆ ಈಗ ಮೂಡಿತು. ಅಲ್ಲಿಂದಾಚೆಗೆ ಬಸ್ನಲ್ಲಿ ಮೌನ ಸಾಮ್ರಾಜ್ಯ. ಮಲ್ಲಪ್ಪ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಬಸ್ ಓಡಿಸುತ್ತಿದ್ದ. ಬೊಮ್ನಳ್ಳಿ ಸರಹದ್ದು ಪ್ರವೇಶಿಸುತ್ತಿದ್ದಂತೆಯೇ ಅಜ್ಜಿ ಲಗುಬಗೆಯಿಂದ ಎದು ನಿಂತಳು. ಇಲ್ಲೇ ನಿಲ್ಸು… ಇಲ್ಲೇ ನಿಲ್ಸು… ಇನ್ನೂ ಮುಗುಮ್ಮಾಗಿದ್ದ ಕಂಡಕ್ಟರ್ ಮುಖ ಊದಿಸಿಕೊಂಡೇ ಸೀಟಿ ಊದಿದ. ಅಜ್ಜಿ, ಮೊಮ್ಮಗನ ಕೈ ಹಿಡಿದು ಕೆಳಗಿಳಿದು, ಅವಸರದಿಂದ ಆಸ್ಪತ್ರೆಯೆಡೆಗೆ ಹೆಜ್ಜೆ ಹಾಕತೊಡಗಿದಳು. ಹತ್ಹೆಜ್ಜೆ ನಡೆದ ಮೊಮ್ಮಗ ತಡೆದು ನಿಂತ. ಅಜ್ಜೀ, ಅಜ್ಜೀ, ಅವ್ನು ರೂಟ್ ಸರಿಯಾಗೇ ಹೇಳದ್ನಬೇ ಅಜ್ಜೀ ನೀನು ಸುಮ್ ಸುಮ್ನ ಜಗಳಾಡ್ದಿ ನೋಡು ಅಸಮಧಾನದಿಂದ ಹೇಳಿದಾಗ, ಅಜ್ಜಿಯೂ ನಿಂತು ಉಸಿರೆಳೆದುಕೊಂಡಳು. ಹೌದಪಾ. ನೀ ಹೇಳಾದು ಖರೆ ಹಾಂ? ಮೊಮ್ಮಗ ಬೆಕ್ಕಸಬೆರಗಾದ. ಅಜ್ಜಿಯ ಈ ಅನಿರೀಕ್ಷಿತ ಮಾತು ಅವನು ಕೌತುಕಗೊಳ್ಳುವಂತೆ ಮಾಡಿತು. ಅಂದ್ರ, ನಿನಗೆ ರೂಟ್ ಗೊತ್ತಿತ್ತ? ಹೂಂ. ಗೊತ್ತಿತ್ತು. ಮತ್ಯಾಕ ಜಗಳಾಡ್ದಿ? ಸುಳ್ ಸುಳ್ಳ? ಮೊಮ್ಮಗನ ಸಿಟ್ಟಿನ ದನಿಗೆ ಅಜ್ಜಿ ತಲೆ ಕೆಳವಾಲಿಸಿದಳು. ಬ್ಯಾರೆ ದಾರಿ ಏನಿತ್ತೋ ನನ್ ಮೊಮ್ಮಗ್ನೇ? ಈ ವಾರ ಎಲ್ಲ ಕೂಲಿ ಕೆಲ್ಸ ಇಲ್ಲ. ನಿಮ್ಮಜ್ಜಂಗ ನಾಲ್ಕು ದಿನದಿಂದ ಕೆಮ್ಮು. ಅದರಾಗ ತನ್ನ ಹತ್ರ ಇದ್ದಿದ್ದು ಐವತ್ರುಪಾಯಿ ನನ್ ಕೈಗೇ ಕೊಟ್ಟಾನ. ನಿಮ್ಮವ್ವನ್ನ ಕರ್ಕಂಬರಾಕ ಅಂತ… ತನ್ನವ್ವನ ನೆನಪಿನಿಂದ ಮೊಮ್ಮಗನ ಮುಖ ಮೃದುವಾಯಿತು. ಅಜ್ಜಿ ಕಂಬನಿದುಂಬಿದ ಕಂಗಳಿಂದ ಆಸ್ಪತ್ರೆಯನ್ನೇ ದಿಟ್ಟಿಸಿದಳು. ನೀನು ಹುಟ್ಟಿದ್ದೂ ಇದ ಆಸ್ಪತ್ರೆಯಾಗ. ಈಗ ನಿಮ್ಮವ್ವ ನಿನ್ ತಮ್ಮನ್ನೋ, ತಂಗೀನ್ನೋ ಹಡಿಯಾಕ ಮತ್ತ ಇದ ಆಸ್ಪತ್ರಿ ಸೇರ್ಯಾಳ. ನಿಮ್ಮಪ್ಪಂತೂ ದೊಡ್ಡ ಪುಣ್ಯಾತ್ಮ. ಅವ್ನ ನೆಕ್ಕಂಡ್ಹೋಗ್ಲಿ! ಎರಡು ತಿಂಗಳಾಗ ಕಳ್ಸಪಾ ಕರ್ಕೊಂಡ್ಹೋಕ್ತೀವಿ ಅಂದ್ರ ಈವೊತ್ತು-ನಾಳೆ-ನಾಡಿದ್ದು ಅಂತ ದಿನ ತಳ್ಳಿಬಿಟ್ಟ. ತುಂಬಿದ ಬಸುರಿ ಕೈಯಾಗ ಮನಿಗೆಲಸ ಎಲ್ಲಾ ಮಾಡಿಸಿಗ್ಯಂಡ. ಈಗ ಬ್ಯಾನಿ ಸುರು ಆಗೇತಂತ ಸೀದ ಆಸ್ಪತ್ರಿಗೆ ಕಳಿಸ್ಯಾನ. ಪುಣ್ಯಕ್ಕ ನಮಗ ಜಲ್ದಿನಾರ ಸುದ್ದಿ ಕೊಟ್ಟಾನಲ ಅಷ್ಟ ಸಾಕು. ನಡಿ ನಡಿ. ಮೊದ್ಲು ಒಳಗ್ಹೋಗಾಣು… ನಿನ್ನನ್ನಾರ ನಂ ಜೊತಿಗಿರಾಕ ಕಳ್ಸಿಕೊಟ್ನಲ್ಲ. ಸಾಲಿಗೆ ಹೋಗ್ತಿ ನಂ ಮನ್ಯಾಗಿದ್ರ. ಇಲ್ಲಂದ್ರ ನೀನೂ ಕೂಲಿ ಮಾಡಾಕ ಹೋಗ್ಬೇಕಾಕೈತಿ ನೋಡು… ಅಲ್ಲಬೇ ಅಜ್ಜೀ, ಅದಕೂ ನೀ ಬಸ್ನಾಗ ಸುಳ್ ಹೇಳಿದ್ದಕೂ ಏನ್ ಸಂಬಂಧ…?ನನಿಗೇನು ಆರೇಳು ವರ್ಷ ಏನಬೇ? ಹನ್ನೆರಡು ವರ್ಷ ನನಿಗೆ! ಮೊಮ್ಮಗ ಪಟ್ಟು ಹಿಡಿದು ಕೇಳಿದಾಗ ಅಜ್ಜಿ ನಿಸ್ಸಹಾಯಳಾದಳು. ಹೌದು ಮತ್ತೆ. ಇರೋ ಐವತ್ರುಪಾಯಾಗ ಹದಿನೈದು ರೂಪಾಯಿ ಬಸ್ ಚಾಜರ್ಿಗೇ ಕೊಟ್ಟುಬಿಟ್ರ, ಆಸ್ಪತ್ರಿ ಖಚರ್ಿಗೆ ಏನ್ಮಾಡಾದು? ನಾಳೆ ನಿಮ್ಮವ್ವಗ ಅಂದ್ರ ನನ ಮಗಳಿಗೆ ಹೆರಿಗೆ ಆದಮ್ಯಾಲ ಬಸ್ನಾಗ ಹೆಂಗ ಮನಿಗೆ ಕರ್ಕಂಡೋಗಾದು? ಆಟೋ ಚಾಚರ್ಿಗೆ ದುಡ್ಡು ಬ್ಯಾಡ? ಆಕಿಗೆ ನಾಲ್ಕು ಇಡ್ಲಿ ಕೊಡ್ಸಕಾರ ಚಿಲ್ರೆ ಕಾಸು ಬ್ಯಾಡಾ? ನಿನಗಿದೆಲ್ಲ ಅರ್ಥ ಆಗಾದಿಲ್ಲ. ನಡಿ ಸುಮ್ನ ಅಜ್ಜಿ ಲಗುಬಗೆಯಿಂದ ಆಸ್ಪತ್ರೆಯೊಳಕ್ಕೆ ನಡೆಯತೊಡಗಿದಾಗ ಹಿಂಬಾಲಿಸಿದ ಮೊಮ್ಮಗ ಮತ್ತೆ ತಡೆದು ನಿಂತ- ಅಲ್ಲಜ್ಜೀ, ರೋಡ್ ನಡುವೆ, ಬಸ್ ಬರೋ ಹೊತ್ತಿನಾಗ ಅಡ್ಡ ನಿಂತುಬಿಟ್ಟಿದ್ಯಲ್ಲ… ಡ್ರೈವರ್ರು ಹೊಡ್ಕಂಡ ಹೋಗಿಬಿಟ್ಟಿದ್ರ ಏನ್ಮಾಡ್ತಿದ್ದೀ? ಹೋದ್ರ ಹೋಗ್ಲಿ ಬಿಡಲೇ ಮೊವ್ಮ್ಮಗ್ನೇ! ನಮ್ಮಂತೋರು- ಬಡವ್ರು, ಇಂಥಾ ಭಂಡಬಾಳ್ವಿ ಮಾಡ್ಕಂಡು ಬದುಕಿರೋ ಬದ್ಲು ಬಸ್ಸಿನ ಗಾಲಿಗೆ ಸಿಕ್ಕು ಸತ್ಹೋಗಿ ಬಿಡದೇ ಮೇಲು. ಅಜ್ಜಿಯ ಕಣ್ಣಿನ ನೀರು ಕೆನ್ನೆಗಿಳಿದಾಗ ಮೊಮ್ಮಗ ಇನ್ನು ಪ್ರಶ್ನೆ ಕೆಳದಿರಲು ನಿಶ್ಚಯಿಸಿದವನಂತೆ, ಹೆರಿಗೆ ನೋವಿನಿಂದ ನರಳುತ್ತಿರಬಹುದಾಗ ತನ್ನವ್ವನನ್ನು ಹುಡುಕಲು ನಡೆದ.

ಚಿತ್ರಕೃಪೆ -ಮಾಕ್ಸ್ ಸ್ಟಫ್,ಅಂತರ್ಜಾಲ

 

‍ಲೇಖಕರು avadhi

15 November, 2011

6 Comments

  1. D.RAVIVARMA

    manakalakuva haage baredidderi,nanage kumvi kathe nenapu barutte. yaro maneya saavige kayuttiruva ondu jananga ello satta suddi banda mele halage hodeyutta sambramisuttare, aa neevu helida ajji bari lower class nalli illa even madyama vargadallu idale,akege sose koduva himse,magana asahayakatana, gandanillada baduku, ivella aakege tayi banashankari nannannu karakondu hogavva ennuttale avara munjane suruvagutte. nimagu nimma manasinolagina samvedanegu namaskara,idu namma samajada badukina dina nityada satya, istelladara madye “india is shining” anno udgara bere. ajji kone matu “inta banda balve madkandu badukiro badlu bassina galige sikku sattogade melu” ultimate idu ee naadinalli nadeyuttiruva dina nityda satya sangati, nimagondu hrudayapurvaka abhinandanegalu.
    RAVI VARMA HOSAPETE.

    • sudha chidanandagowda

      Dhanyavaada.

  2. Sarala

    ಕಥೆ ನನ್ನ ಮನಸನ್ನೂ ಕಲಕಿತು.

    D ರವಿವರ್ಮ ಅವರ ಕಾಮೆಂಟ್ ಅನ್ನು transliterate ಮಾಡಿದೀನಿ. ಓದೋದಕ್ಕೆ ಸುಲಭವಾಗಲಿ ಅಂತ.
    ಮನಕಲಕುವ ಹಾಗೆ ಬರೆದಿದ್ದೆರಿ,ನನಗೆ ಕುಮ್ವಿ ಕಥೆ ನೆನಪು ಬರುತ್ತೆ. ಯಾರೋ ಮನೆಯ ಸಾವಿಗೆ ಕಾಯುತ್ತಿರುವ ಒಂದು ಜನಾಂಗ ಎಲ್ಲೋ ಸತ್ತ ಸುದ್ದಿ ಬಂದ ಮೇಲೆ ಹಲಗೆ ಹೊಡೆಯುತ್ತ ಸಂಬ್ರಮಿಸುತ್ತಾರೆ, ಆ ನೀವು ಹೇಳಿದ ಅಜ್ಜಿ ಬರಿ ಲೋವೆರ್ ಕ್ಲಾಸ್ ನಲ್ಲಿ ಇಲ್ಲ even ಮದ್ಯಮ ವರ್ಗದಲ್ಲೂ ಇದಾಳೆ,ಅಕೆಗೆ ಸೊಸೆ ಕೊಡುವ ಹಿಂಸೆ,ಮಗನ ಅಸಹಯಕತನ, ಗಂಡನಿಲ್ಲದ ಬದುಕು , ಇವೆಲ್ಲ ಆಕೆಗೆ ತಾಯಿ ಬನಶಂಕರಿ ನನ್ನನ್ನು ಕರಕೊಂಡು ಹೋಗವ್ವ ಎನ್ನುತ್ತಲೇ ಅವರ ಮುಂಜಾನೆ ಸುರುವಗುತ್ತೆ. ನಿಮಗೂ ನಿಮ್ಮ ಮನಸಿನೊಳಗಿನ ಸಂವೇದನೆಗೂ ನಮಸ್ಕಾರ, ಇದು ನಮ್ಮ ಸಮಾಜದ ಬದುಕಿನ ದಿನ ನಿತ್ಯದ ಸತ್ಯ, ಇಷ್ಟೆಲ್ಲದರ ಮದ್ಯೆ “india is shining” ಅನ್ನೋ ಉದ್ಗಾರ ಬೇರೆ. ಅಜ್ಜಿ ಕೊನೆ ಮಾತು “ಇಂತ ಬಂಡ ಬಾಳ್ವೆ ಮಾಡ್ಕಂಡು ಬದುಕಿರೋ ಬದ್ಲು ಬಸ್ಸಿನ ಗಾಲಿಗೆ ಸಿಕ್ಕು ಸತ್ತೊಗೋದೆ ಮೇಲು” ultimate ಇದು ಈ ನಾಡಿನಲ್ಲಿ ನಡೆಯುತ್ತಿರುವ ದಿನ ನಿತ್ಯದ ಸತ್ಯ ಸಂಗತಿ, ನಿಮಗೊಂದು ಹೃದಯಪೂರ್ವಕ ಅಭಿನಂದನೆಗಳು.

  3. sudha chidanandagowda

    dhanyavaadagalu.

  4. Basava Raju L

    Good one!

  5. D.RAVIVARMA

    sarala madam,nimma alochanegu,haagu kalajigu,ananta vandanegalu.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading