ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೀಗೊಂದು ತಳಕಾ ಬಳಕಾ ಸವಾಲು:

ನಾಗೇಶ ಹೆಗಡೆ

ನಿಮಗೆ ಈ ಅಚ್ಚರಿ ಗೊತ್ತೆ? ಕಣ್ಣು ತೆರೆದೇ ಇದ್ದರೆ ಒಂಟಿ ಕಾಲಲ್ಲಿ ನೀವು ನಿಮಿಷಗಟ್ಟಲೆ ನಿಲ್ಲಬಹುದು; ಆದರೆ ಕಣ್ಣು ಮುಚ್ಚಿದರೆ ಹತ್ತು ಸೆಕೆಂಡ್‌ ಕೂಡ ನಿಲ್ಲಲಾರಿರಿ.

ಕಳೆದ ಭಾನುವಾರ ಗೆಳೆಯ ಶ್ರೀವತ್ಸ ಅವರ ಮಾಗಡಿ ಸಮೀಪದ ಕಾಡುತೋಟದಲ್ಲಿದ್ದೆ. ಅವರ ಕೃಷಿ ಹೊಂಡ ಏಳೆಂಟಡಿ ಆಳ ಇದೆ. ವಿಹಾರಕ್ಕೆಂದು ಅವರೊಂದು ತೆಪ್ಪವನ್ನೂ ಇಟ್ಟಿದ್ದಾರೆ. ಒಬ್ಬೊಬ್ಬರೇ ಸವಾರಿ ಮಾಡಬೇಕು. ನನಗಿಂತ ಮುಂಚೆ ಸವಾರಿ ಮಾಡಿದವರೆಲ್ಲ ಚಕ್ಕಳಮಕ್ಕಳ ಹಾಕಿ ಕೂತು ಕೊಳದಲ್ಲಿ ಸುತ್ತಾಡಿ ಬಂದಿದ್ದರಿಂದ ತೆಪ್ಪ ಸಾಕಷ್ಟು ಒದ್ದೆಯಾಗಿತ್ತು.

ನನ್ನ ಪಾಳಿ ಬಂದಾಗ, ಪ್ಯಾಂಟ್‌ ಒದ್ದೆಯಾದೀತೆಂದು ನಿಂತೇ ಸವಾರಿ ಮಾಡಿದೆ. ಪ್ರೇಕ್ಷಕವರ್ಗಕ್ಕೆ ಅಚ್ಚರಿಯೋ ಅಚ್ಚರಿ. ಸ್ವಲ್ಪ ಬ್ಯಾಲೆನ್ಸ್‌ ತಪ್ಪಿದರೂ ಪಲ್ಟಿ ಹೊಡೆಯುವ ಅಪಾಯ ಇದ್ದುದರಿಂದ ಯಾರೂ ಒಂದು ನಿಮಿಷ ನಿಲ್ಲುವ ಧೈರ್ಯವನ್ನೂ ಮಾಡುತ್ತಿರಲಿಲ್ಲವಂತೆ. ನಾನು ಸಲೀಸಾಗಿ, ಹುಷಾರಾಗಿ ಹುಟ್ಟು ಹಾಕುತ್ತ ಒಂದು ಸುತ್ತು ಹಾಕಿ ಬಂದೆ.

ಈಗೊಂದು ಚಂದದ ನರವಿಜ್ಞಾನದ ಪಾಠ ಹೇಳುತ್ತೇನೆ. ಗಮನವಿಟ್ಟು ಕೇಳುವಂಥವರಾಗಿ.

ದೇಹಾರೋಗ್ಯ (ಫಿಟ್ನೆಸ್‌) ಅಂದರೆ ಹೆಚ್ಚಿನವರೆಲ್ಲ ಮೈಕೈ ಬಾಗಿಸುವ, ಭಾರ ಎತ್ತುವ, ಓಡುವ ಕಸರತ್ತು ಮಾಡುತ್ತಾರೆ. ದೇಹದ ಸಮತೋಲ ಕಾಯುವತ್ತ ಯಾರೂ ಗಮನ ಹರಿಸುವುದಿಲ್ಲ. ದಾಖಲೆಗಳ ಪ್ರಕಾರ, ಅಪಘಾತ ಬಿಟ್ಟರೆ ಅತಿ ಹೆಚ್ಚಿನ ಮೂಳೆ ಮುರಿತ, ಸಾವು ಸಂಭವಿಸುವುದು ಬ್ಯಾಲೆನ್ಸ್‌ ತಪ್ಪುವುದರಿಂದಲೇ. ಅದರಲ್ಲೂ ವಯಸ್ಸಾದಂತೆ ಬಾಥ್‌ರೂಮ್‌ನಲ್ಲಿ ಅಥವಾ ಮೆಟ್ಟಿಲು ಏರುವಾಗ ಹತೋಟಿ ತಪ್ಪಿ ಬೀಳುವ ಸಂಭವ ಜಾಸ್ತಿಯಾಗುತ್ತ ಹೋಗುತ್ತದೆ. ಮೂಳೆವೈದ್ಯರಿಗೆ ಜಾಸ್ತಿ ಗಿರಾಕಿಗಳು ಸ್ನಾನದ ಮನೆಯಿಂದಲೇ ಬರುತ್ತಿರಬಹುದು.

ನಿಮ್ಮ ಬಾಡಿ ಬ್ಯಾಲೆನ್ಸಿಂಗ್‌ ಸಾಮರ್ಥ್ಯ ಎಷ್ಟಿದೆ? ಇಲ್ಲಿದೆ ಒಂದು ಸರಳ ಪರೀಕ್ಷೆ:

ಪಾದರಕ್ಷೆ ಕಳಚಿಟ್ಟು, ಟೊಂಕದ ಮೇಲೆ ಕೈ ಇಟ್ಟು ಗಡಿಯಾರದ ಎದುರು ಒಂಟಿ ಕಾಲಲ್ಲಿ ನಿಲ್ಲಿ. ಮೊದಲ ಪರೀಕ್ಷೆಯಲ್ಲಿ ಕಣ್ಣು ತೆರೆದೇ ಇರಲಿ. ಎಷ್ಟು ಸೆಕೆಂಡ್‌ ನಿಂತಿರುತ್ತೀರಿ ನೋಡಿ. ಎರಡನೆಯ ಬಾರಿ ಅದೇ ಭಂಗಿಯಲ್ಲಿ ಕಣ್ಣು ಮುಚ್ಚಿಕೊಂಡು ಒಂಟಿಕಾಲಲ್ಲಿ ನಿಲ್ಲಿ. ಎಷ್ಟು ಸೆಕೆಂಡ್‌ ನಿಲ್ಲಬಲ್ಲಿರಿ? (ಹತೋಟಿ ಕಾಯ್ದುಕೊಳ್ಳಲೆಂದು ನಿಂತ ಒಂಟಿಕಾಲನ್ನು ಎತ್ತಿ ಅತ್ತಿತ್ತ ಜರುಗಿಸಲು ಯತ್ನಿಸಿದರೂ ಔಟ್‌. ನೆನಪಿರಲಿ). ಮೂರು ಮೂರು ಬಾರಿ ಯತ್ನಿಸಿ. ಗರಿಷ್ಠ ಟೈಮಿಂಗ್‌ ದಾಖಲಿಸಿಕೊಳ್ಳಿ.

ಸರಾಸರಿ ದಾಖಲೆಗಳು ಹೀಗಿವೆ:
40ಕ್ಕಿಂತ ಕಿರಿಯರು: ಕಣ್ತೆರೆದು 45 ಸೆಕೆಂಡ್‌, ಕಣ್ಣುಮುಚ್ಚಿ 15 ಸೆಕೆಂಡ್‌.
40-50ರ ನಡುವಣ ವ್ಯಕ್ತಿ: ಕಣ್ತೆರೆದು 42 ಸೆ. ಕಣ್ಮುಚ್ಚಿ 13 ಸೆ.
51-60ರ ನಡುವಣ ವ್ಯಕ್ತಿ: ಕಣ್ತೆರೆದು 41 ಸೆ. ಕಣ್ಮುಚ್ಚಿ 8 ಸೆ.
60-70ರ ನಡುವಣ ವ್ಯಕ್ತಿ: ಕಣ್ತೆರೆದು 32 ಸೆ. ಕಣ್ಮುಚ್ಚಿ 4 ಸೆ .
70-80ರ ನಡುವಣ ವ್ಯಕ್ತಿ: ಕಣ್ತೆರೆದು 22 ಸೆ. ಕಣ್ಮುಚ್ಚಿ 3 ಸೆ.

ನಿಮ್ಮದು ಎಷ್ಟಿದೆ? ನಾನೂ ನೋಡಿದೆ: ಕಣ್ತೆರೆದು ನಿಂತಾಗ 60+ ಸೆಕೆಂಡ್‌ ಆಗಿತ್ತು. ಬೋರ್‌ ಆಗಿ ನಾನೇ ಎರಡನೇ ಕಾಲೂರಿದೆ. ಕಣ್ಮುಚ್ಚಿದಾಗ ಮಾತ್ರ ಢಮಾರ್‌! ಕೇವಲ 5 ಸೆಕೆಂಡ್‌ ಅಷ್ಟೆ. ರಾತ್ರಿ ಸ್ವಿಚಾಫ್‌ ಮಾಡಿಕೊಂಡು ಕತ್ತಲಲ್ಲಿ ಕಣ್ಣು ಬಿಟ್ಟು ಇದೇ ಸರ್ಕಸ್‌ ಮಾಡಿದೆ. ಟೈಮಿಂಗ್‌ ನೋಡಲು ಆಗಲಿಲ್ಲ! ಆದರೆ ಕಣ್ಣು ಮುಚ್ಚಿದ್ದಾಗಿನ ಟೈಮಿಂಗ್‌ಗಿಂತ ಇದು ಉತ್ತಮವಿತ್ತು.

ಏಕೆ ಈ ಹತೋಟಿ ಪರೀಕ್ಷೆ ಅಷ್ಟೊಂದು ಮಹತ್ವದ್ದು ಗೊತ್ತಾ?
ಏಕೆಂದರೆ ಒಂಟಿಕಾಲಲ್ಲಿ ನಿಂತಾಗ ಮಿದುಳಿನ ಮೇಲೆ ಭಾರೀ ಒತ್ತಡ ಬೀಳುತ್ತದೆ. ಒತ್ತಡ ಏಕೆಂದರೆ ಅದು ಏಕಕಾಲಕ್ಕೆ ಮೂರು ಎಂಜಿನ್‌ಗಳ ಮೇಲೆ ನಿಗಾ ಇಟ್ಟಿರಬೇಕಾಗುತ್ತದೆ: 1. ಕಣ್ಣಿನಿಂದ ಬರುವ ಮೂರು ಆಯಾಮಗಳ ಮಾಹಿತಿಗಳನ್ನೆಲ್ಲ ಸಂಸ್ಕರಣೆ ಮಾಡುತ್ತಿರಬೇಕು. 2. ಒಳಕಿವಿಯ ಹಿಂಭಾಗದಲ್ಲಿರುವ ವೆಸ್ಟಿಬ್ಯೂಲರ್‌ ಎಂಬ ಜಲಮಟ್ಟದಂಥ ಅಂಗದಿಂದ ಬರುವ ಮಾಹಿತಿಗಳನ್ನ ಗ್ರಹಿಸುತ್ತಿರಬೇಕು. 3. ಕೈಕಾಲುಗಳ ಪ್ರೊಪ್ರಯೊಸೆಪ್ಟರ್ಸ್‌ ನರಕೋಶಗಳಿಂದ ಬರುವ ಮಾಹಿತಿಯನ್ನು ವಿಶ್ಲೇಷಿಸುತ್ತಿರಬೇಕು.
ಕಣ್ಣು ಮುಚ್ಚಿ ಒಂಟಿಕಾಲಲ್ಲಿ ನಿಂತರಂತೂ ಒಂದು ಪ್ರಮುಖ ಕಂಪ್ಯೂಟರೇ ಕೈಕೊಟ್ಟಂತಾಗಿ ಮಿದುಳು ಇನ್ನಷ್ಟು ಒತ್ತಡಕ್ಕೆ ಸಿಲುಕುತ್ತದೆ.

ನಿಲ್ಲಿ, ಸ್ವಾರಸ್ಯ ಇನ್ನೂ ಇದೆ.

ನಿಮ್ಮ ಒಂಟಿಗಾಲಿನ ತಾಕತ್ತು ಎಷ್ಟಿದೆ ಎಂಬುದರ ಮೇಲೆ ನಿಮ್ಮ ಇನ್ನುಳಿದ ಆಯಸ್ಸೂ ನಿರ್ಧಾರವಾಗುತ್ತದೆ ಎಂದು ವಿಜ್ಞಾನಿಗಳು ಲೆಕ್ಕಾಚಾರ ಮಾಡಿ ಹೇಳಿದ್ದಾರೆ. ಬ್ರಿಟನ್ನಿನ 53 ವರ್ಷ ವಯಸ್ಸಿನ 2760 ಗಂಡು ಹೆಣ್ಣುಗಳನ್ನು ಲ್ಯಾಬಿಗೆ ಕರೆಸಿ ಮೂರು ಬಗೆಯ ಸಾಮರ್ಥ್ಯಗಳ ಪರೀಕ್ಷೆ (ಮುಷ್ಟಿಗಟ್ಟಿ ತಾಕತ್ತು, ಕೂತಲ್ಲಿಂದ ಹಠಾತ್‌ ಎದ್ದು ನಿಲ್ಲುವ ತಾಕತ್ತು ಮತ್ತು ಒಂಟಿಗಾಲಿನ ತಾಕತ್ತಿನ ಪರೀಕ್ಷೆ) ನಡೆಸಿದರು.

ಹದಿಮೂರು ವರ್ಷಗಳ ನಂತರ (2012ರಲ್ಲಿ) ಅವರಿಗೆಲ್ಲ 66 ವರ್ಷಗಳಾಗಿರಬೇಕು ತಾನೆ? ಆಗ ಅವರಲ್ಲಿ ಎಷ್ಟು ಮಂದಿ ಬದುಕುಳಿದಿದ್ದಾರೆ ಎಂದು ಸಮೀಕ್ಷೆ ನಡೆಸಿದರು. ಈ ಪ್ರಯೋಗದ ಫಲಿತಾಂಶವನ್ನು ಪ್ರತಿಷ್ಠಿತ ಬ್ರಿಟಿಷ್‌ ಮೆಡಿಕಲ್‌ ಜರ್ನಲ್‌ (BMJ)ನಲ್ಲಿ 2014ರಲ್ಲಿ ಪ್ರಕಟಿಸಿದರು. ಈ ಮೂರೂ ಬಾಬ್ತಿನಲ್ಲಿ ಯಾರು ದುರ್ಬಲರಿದ್ದಾರೊ ಅವರು ಬದುಕುಳಿದಿಲ್ಲ ಎಂದು ನಿರ್ಣಯಿಸಿದರು (ಆಕರ: https://www.bmj.com/content/348/bmj.g2219). ನಿಮ್ಮ ನಿಮ್ಮ ಸಾಮರ್ಥ್ಯವನ್ನು ಈಗ ಮತ್ತೊಮ್ಮೆ ಪರೀಕ್ಷಿಸಿ ನೋಡಿ.

ಹೆದರಬೇಡಿ, ಕೊರತೆಯನ್ನು ಸರಿದೂಗಿಸಬಹುದು!

ಇದು ಒಳ್ಳೇ ಸುದ್ದಿ! ನೀವು ಯೋಗ ಅಥವಾ (ಜಪಾನೀ) ತಾಯಿಚೀ ಅಭ್ಯಾಸ ಮಾಡುತ್ತಿದ್ದರೆ ನಿಮ್ಮ ತಳಕಾಬಳಕಾಗಳನ್ನು ಈಗಲೂ ಸರಿಪಡಿಸಿಕೊಳ್ಳಬಹುದು. ಅವೇ ಆಗಬೇಕೆಂದೇನೂ ಇಲ್ಲ. ನೀವು ಟಿವಿ ನೋಡುವಾಗ ಅಥವಾ ಹಲ್ಲುಜ್ಜುವಾಗ ಒಂಟಿಗಾಲಿನಲ್ಲಿ ಆಗಾಗ ನಿಲ್ಲುತ್ತಿರಿ. ಮೊಮ್ಮಕ್ಕಳ ಜೊತೆ ಕುಂಟಲಿಪಿ ಆಡಿ. ಕೈಹಿಡಿದವಳು ರೆಡಿ ಆಗಿ ಬರಲೆಂದು ಕಾಯುತ್ತ ನೀವು ಹೊರಬಾಗಿಲಲ್ಲಿ ಬೀಗ ಹಿಡಿದು ನಿಂತಿದ್ದರೆ ಒಂಟಿ ಕಾಲಲ್ಲಿ ನಿಲ್ಲಲು ಯತ್ನಿಸಿ. ಅಂತೂ ಮಿದುಳಿಗೆ ಈ ಬಗೆಯ ತುಸು ಕೆಲಸ ಕೊಡಿ, ಏನೂ ಅಪಾಯವಿಲ್ಲ.

ನಾನು ಸ್ವಿಸ್‌ ರೇಡಿಯೋ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದಾಗ ಅಲ್ಲಿ ದಿನವೂ ಬೆಳಿಗ್ಗೆ ಕಚೇರಿಗೆ ಬಂದ ಎಲ್ಲರೂ ಒಂದೆಡೆ ಸೇರಿ 15 ನಿಮಿಷ ತಾಯಿಚಿ ಅಭ್ಯಾಸ ಮಾಡುತ್ತಿದ್ದರು. ಅದಕ್ಕೂ ಮುನ್ನ ನಾನಂತೂ ಜೆಎನ್‌ಯುದಲ್ಲಿ ಸ್ಕೇಟಿಂಗ್‌ ಮಾಸ್ಟರ್‌ ಆಗಿದ್ದೆ.

ಪೂರಕ ಮಾಹಿತಿ: ಕರ್ನಾಟಕದ ಖ್ಯಾತ ಭರತನಾಟ್ಯ ಕಲಾವಿದೆ ಸುಧಾ ಚಂದ್ರನ್‌ 1981ರಲ್ಲಿ ರಸ್ತೆ ಅಪಘಾತಕ್ಕೆ ಸಿಲುಕಿ ಒಂದು ಕಾಲನ್ನು ಕಳೆದುಕೊಂಡರು. ಕೃತಕ ಕಾಲುಗಳಲ್ಲೇ ನಾಟ್ಯ ಮಾಡಿದರು, ಸಿನೆಮಾ ತಾರೆ ಕೂಡ ಆದರು. ಸುಧಾ ಪತ್ರಿಕೆಯ ಒಂದು ಸಂದರ್ಶನದಲ್ಲಿ ಅವರು ಹೇಳಿದ್ದರು: ʼನಾನು ಛಂಗನೇ ಆಚೆ ನೆಗೆಯದೇ ಇದ್ದಿದ್ದರೆ ಎರಡೂ ಕಾಲು ಅಥವಾ ಜೀವವೇ ಹೋಗುತ್ತಿತ್ತು; ನನ್ನ ನಾಟ್ಯಾಭ್ಯಾಸವೇ ನನ್ನನ್ನು ಜೀವಂತ ಇಟ್ಟಿದೆʼ ಎಂದು.

ತೆಪ್ಪದ ಮೇಲಿನ ತನ್ನ ಒಂದು ಫೋಟೊ ತೋರಿಸಲು ಇಷ್ಟೆಲ್ಲ ಉಪನ್ಯಾಸ ಬೇಕಿತ್ತೇ ಎಂದು ನೀವು ಕೇಳಬಹುದು. ಮತ್ತಿನ್ನೇನು? ಇದರ ಬದಲು ಹಣಕಾಸು ಸಚಿವೆ ನಿರ್ಮಲಾ ಮೇಡಮ್‌ ಮಾಡಿದ ಸರ್ಕಸ್‌ ಬಗ್ಗೆ, ಅಥವಾ ಪೆಗಾಸಸ್‌ ಎಂಬ ರೆಕ್ಕೆಯ ಕುದುರೆಯನ್ನು ಖರೀದಿಸಿ ಅದನ್ನು ಮುಚ್ಚಿಡಲೆಂದು ಸರಕಾರ ಮಾಡುತ್ತಿರುವ ಡೊಂಬರಾಟದ ಬಗ್ಗೆ ಬರೆದರೆ -ಅಂಥ ಗಂಭೀರ ವಿಷಯ ಯಾರಿಗೆ ಬೇಕಾಗಿದೆ?

ಚಿತ್ರ ಕುರಿತ ಮಾಹಿತಿ: ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದ ಶ್ರೀವತ್ಸ 9845707043 ಮಾಗಡಿ ಸಮೀಪ 13 ಎಕರೆ ಗುಡ್ಡಗಾಡನ್ನು ಖರೀದಿಸಿ ಅಲ್ಲಿ ‘Nature Inspires- Chiguru Ecospace’ ಎಂಬ ಇಕೊ ಶಿಕ್ಷಣ ಕ್ಯಾಂಪನ್ನು ನಡೆಸುತ್ತಿದ್ದಾರೆ.

ಎರಡು ಎಕರೆಯಲ್ಲಿ ಇಂಥ ಏಳು ಕೃಷಿಹೊಂಡಗಳಿವೆ. ಅವರ ಸೃಷ್ಟಿಯನ್ನು ನೋಡಲೆಂದು ಕೊಪ್ಪಳದ ಕೃಷಿ ಪಂಡಿತ ಪ್ರಶಸ್ತಿ ವಿಜೇತ ಶಂಕರ್‌, ಇನ್ನೊಬ್ಬ ಸಾವಯವ ಕೃಷಿಕ ಶ್ರೀಪಾದ್‌, ಆನಂದ ತೀರ್ಥಪ್ಯಾಟಿ ಮತ್ತು ಮಲ್ಲಿಕಾರ್ಜುನ ಹೊಸಪಾಳ್ಯ ಬಂದಿದ್ದರು. ಹೊಸಪಾಳ್ಯರ ಈಚಿನ ಪುಸ್ತಕ ʼಬೆಲ್ಲಂಪುಲ್ಲಕ್ಕʼವನ್ನು ಮತ್ತೊಮ್ಮೆ ಅಲ್ಲಿ ಬಿಡುಗಡೆ ಮಾಡಲೆಂದು ʼಭೂಮಿ ಬುಕ್ಸ್‌ʼ ಪ್ರಕಾಶಕಿ ವಿಶಾಲಾಕ್ಷಿ ಶರ್ಮಾ ಮತ್ತು ನಾನು ಕೂಡ ಆಹ್ವಾನಿತರಾಗಿದ್ದೆವು. ಆ ನಾಲ್ವರಲ್ಲಿ ಯಾರೋ ಈ ಚಿತ್ರ ತೆಗೆದಿದ್ದಾರೆ.

‍ಲೇಖಕರು Admin

5 February, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading