ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೀಗೊಂದು ಇಲಿಬೇಟೆ ಕಥೆ….

ಇಲಿ ಬೇಟೆ

-ರವಿಕುಮಾರ್ ಈಚಲಮರ


ನಾನು ಮತ್ತು ನನ್ನ ಬಾಲ್ಯ ಸ್ನೇಹಿತರಾರ ರವಿ ಮತ್ತು ವಿಜಿ ಒಂದು ಬಾನುವಾರ ಇಲಿ ಬೇಟೆಗೆ ಹೊರಟೊ. ನಾವಿನ್ನು ಆಗ 8ನೇ ತರಗತಿಯಲ್ಲಿದ್ದೊ, ರಜೆ ಬಂದರೆ ಸಾಕು ನಮ್ಮ ಮನೆಯಲ್ಲಿ ಸೌದೆ ತರಲು ಆಜ್ಞೆ ಮಾಡುತ್ತಿದರು. ಎಲ್ಲರ ಬಾಯಲ್ಲು ಸೌದೆ ತರಬೇಕಂತ ಒಂದೆ ಕೂಗು. ಸರಿ ನಾವು ಮೂರು ಜನ ಮಾತ್ತಾಡಿಕೊಂಡು ಸೌದೆ ಕಟ್ಟಲು ಹಗ್ಗ ತೊಗೊಂಡು ತಲೆಗೆ ಟವಲ್ ತಗೊಂಡು ಇಲಿ ಹಿಡಿಯಲು ಒಂದು ಗುದ್ದಲಿ, ಅದಕ್ಕೆ ಉಪ್ಪು, ಕಾರದ ಪುಡಿ ತೊಗೊಂಡು ನಮ್ಮೂರಿನ ಕೆರೆ ಕಡೆ ಹೋರಟೊ. ಕೆರೆ ಬಯಲಿಗೆ ಬಂದು ಇಲಿ ಬೆಲ ಹುಡುಕಲು ಶುರು ಮಾಡಿದೊ, ಅದು ಜನವರಿ ತಿಂಗಳು ಕೆರೆ ನೀರೆಲ್ಲ ಕಾಲಿಯಾಗಿತ್ತು. ಹೊಲದಲ್ಲಿನ ರಾಗಿ ಮೆದೆಗೆ ಇಲಿಗಳು ಲಗ್ಗೆ ಇಡುತ್ತಿದವು. ಆದ್ದರಿಂದ ಕೆರೆಯಲ್ಲಿಯೇ ಬಿಲವನ್ನು ಮಾಡಿಕೊಂಡಿದೊ, ಕೆರೆಯಲ್ಲಿ ನಮಗೊಂದು ಬಿಲ ಕಾಣಿಸಿತು, ಅದರಲ್ಲಿ ಹೆಚ್ಚು ಬಿಲಗಳು ಇರಲಿಲ್ಲ ಅದು ತೋಡ( ಗಂಡು ಇಲಿ) ಆದ್ದರಿಂದ ಒಂಟಿಯಾಗಿಯೇ ಇತ್ತು ಸರಿ ನಾವು ಮಾತಾಡಕೊಂಡು ಬಿಲ ಅಗಿಬೇಕಂತ ತೀರ್ಮಾನಿಸಿದೊ. ರವಿ ಹೇಳಿದ ಲೇ ನಾನು ಅಗಿತೀನಿ ನೀವಿಬ್ರು ಮಣ್ಣು ಎತ್ತಾಕ್ರಿ ಅಂದ. ನಾನು ವಿಜಿ ಉಂ.. ಅಂದೊ ಅವನು ಅಗಿತಾಯಿದ್ದ ನಾವಿಬ್ರು ಮಣ್ಣ ಎತ್ತಾಕಿದೇವು ಸ್ವಲ್ಪ ತೊಡಿದ ಮೇಲೆ ಇಲಿ ಮಲಗುವ ಹಾಸಿಗೆ ಕಾಣಿಸ್ತು ಮತ್ತು ಹಸಿ ಮಣ್ಣು ಕಾಣಿಸ್ತು ಪಾಪ ಅದು ಹೆದರಕೊಂಡು ಮಣ್ಣನ್ನು ಇನ್ನು ಆಳಕ್ಕೆ ತೊಡ್ತಾಯಿತ್ತು. ಸಿಕ್ತು ಸಿಕ್ತು ಅಂತಾ ರವಿ ಗುದ್ದಲಿ ಬಾಯಿನ್ನ ಬಿಲಕ್ಕೆ ಅಡ್ಡಲಾಗಿ ಇಟ್ಟ ನಾವಿಬ್ರು ಬಿಲವನ್ನೆ ದಿಟ್ಟಿಸಿ ನೋಡ್ತಿದ್ದೊ !
ರವಿ ಸ್ವಲ್ಪ ಸ್ವಲ್ಪವೇ ಗುದ್ದಲಿ ಬಾಯನ್ನ ಮೇಲಕ್ಕೆತ್ತುತ್ತಿದ್ದ ಇಲಿಯು ಸಹ ಸ್ವಲ್ಪ ಸ್ವಲ್ಪವೇ ತಲೆಯನ್ನು ಹೊರಗಿಡುತ್ತಿತು ಹೇಗಾದರು ಮಾಡಿ ಇವರ ಕೈಯಿಂದ ತಪ್ಪಿಸಿಕೊಳ್ಳಬೇಕೆಂದು ಹರ ಸಾಹಸ ಪಡುತ್ತಿತ್ತು. ತಲೆ ಪೂರ್ತಿ ಆಚೆ ಬಂತು ರವಿ ಒಂದು ಕೈಯಿಂದ ಗುದ್ದಲಿಯನ್ನು ಹಿಡಿದು ಕೊಂಡು ಎಡಗೈಯಿಂದ ಇಲಿಯ ತಲೆಯನ್ನ ಹಿಡಿದು ಕೊಂಡ ನಾವಿಬ್ರು ಅದು ತಪ್ಪಿಸ್ಕೊಬೋದು ಅಂತಾ ಹಿಡಿಯಕ್ಕೆ ಕಾಯಿತ್ದೋ ರವಿ ಇಲಿನ ಹಿಡಿದು ಬಿಟ್ಟ. ಖುಷಿಯಾಯಿತು ಅದು ಇನ್ನು ಸತ್ತಿರಲಿಲ್ಲ ರವಿ ಕೈಯಲ್ಲಿ ಸಿಕ್ಕಾಕೊಂಡು ಒದ್ದಾಡಾತ್ತಿತ್ತು ಅಲ್ಲೇ ಪಕ್ಕದಲ್ಲಿದ ಕಲ್ಲನ್ನ ತಗಂಡು ಅದರ ಹಲ್ಲನ್ನ ಮುರಿದ್ವಿ ನಾನೇಳ್ದೆ ಲೇ ರವಿ ಇದನ್ನ ಸಾಯ್ಸೋದು ಬೇಡಾ ಇನ್ನು ಸ್ವಲ್ಪ ಹೊತ್ತು ಅಂಗೆ ಇರ್ಲಿ ಅಂದೆ ಅದಕ್ಕೆ ಅವ್ರಿಬ್ರು ಮತ್ತೆ ಎಲ್ಲಿ ಇಡೊದೋ ಅದು ಓಡಿ ಹೋಗ್ಬಿಟ್ರೆ ಅಂದ್ರು ಅದಕ್ಕೆ ನಾನಂದೆ ಕೊಡಿಲ್ಲಿ ನನ್ ಜೇಬಗೆ ಜಿಪ್ ಐತೆ ಅದಕ್ಕೆ ಹಾಕ್ಕಂತೀನಿ ಅಂದೆ, ಇಲಿನ ಕೈಗೆ ಇಸ್ಕೊಂಡು ನನ್ನ ಜೇಬಗೆ ಹಾಕಿ ಜಿಪ್ ಹಾಕ್ದೆ ಪಾಪ ಅದು ನನ್ನ ಜೇಬ್ನಲ್ಲಿ ಬಂದಿ ಯಾಗಿತ್ತು. ನನ್ನ ಜೇಬ್ನ ಕಡಿಯಕ್ಕೆ ಅದಕೆ ಹಲ್ಲು ಇರಲಿಲ್ಲ. ಹಾಗೇ ಕೆರೆಯಲ್ಲ ಓಡಾಡಿ ಮೂರು ಇಲಿ ಹಿಡಿದೊ, ಟೈಮ್ ಆಯ್ತು ಕಣ್ರೋ ಇನ್ನ ಸೌದೆ ಬೇರೆ ಆಯ್ಕಾಂಬೇಕು ಮೂರೇ ಸಾಕು ಹೋಗೋಣಾ ಅಂದೆ ಅದಕ್ಕೆ ಅವ್ರಿಬ್ರು ಒಪ್ಪಿಕೊಂಡರು.
ಅಲ್ಲೇ ಕೆರೆ ಪಕ್ಕದಲ್ಲಿ ನಮ್ಮೂರಿನ ವಕ್ಲಿಗಿರ ತೋಟ ಇತ್ತು ಅವರು ದನ ಕರಿಗೆ ನೀರು ಕೂಡುಯೋಕೆ ಅಂತಾ ಕಟ್ಟೆ ತೊಡಿಸಿದ್ದರು ನಾವು ಅಲ್ಲಿಗೆ ಹೋಗಿ ಇಲಿನ ಸಾಯಿಸಿ ಬೆಂಕಿಹಾಕಿ ಇಲಿನ ನೀರಿನಲ್ಲಿ ಅದ್ದಿ ತೆಗೆದು ಸ್ವಲ್ಪ ಬೆಂಕಿಗೆ ಹಿಡಿದು ಪುಕ್ಕನೆಲ್ಲ ಕಿತ್ತಾಕ್ದೊ ಅಲ್ಲೆ ಅವುಗಳ ಹೊಟ್ಟೆನ ಬಗದೊ, ಕಳ್ಳು ಕಸಾನೆಲ್ಲ ಬಿಸಾಕಿ ಈರಿ-ದೋಮ್ಮೆ ತಗೊಂಡು ರವಿ ಅವ್ರ ಹೊಲದ ಕೆಡೆ ಹೋದೊ. ಅವರ್ದು ನೀಲಗಿರಿ ತೋಪಿತ್ತು ಅದರಲ್ಲೇ ಸ್ವಲ್ಪ ಪುಳ್ಳೆ ಸೌದೆನಾ ಗುಡ್ಡ ಹಾಕ್ದೊ ಪಕ್ಕದ ಮೇಷ್ಟ್ರ ತೋಟದಲ್ಲಿ ಅಡಕೆ ಪಟ್ಟೆನ ತೊಗೊಂಡು ಇಲಿಗಳನ್ನ ಅದಕ್ಕೆ ತುಂಡುಮಾಡಿ ಹಾಕಿ, ಅದಕ್ಕೆ ಉಪ್ಪು ಕಾರ ಬೆರಸಿ ಅಡಕೆ ಪಟ್ಟೆಯನ್ನ ಮಡಚಿ ಅದಕ್ಕೆ ತಂತಿ ಸುತ್ತಿ ಪುಳ್ಳೆ ಸೌದೆಗೆ ಬೆಂಕಿ ಹಾಕಿ ಅಡಕೆ ಪಟ್ಟೆಯನ್ನು ಬೆಂಕಿಯ ಮೇಲಿಟ್ಟೊ. ನಾವು ಇಲಿನ ಕ್ಲೀನ್ ಮಾಡುವಾಗ ಒಬ್ಬ ವಕ್ಕಲಿಗರ ಹುಡುಗ ಬಂದ ಅವನು ನಮಗಿಂತ ಸಣ್ಣವನು, ನಾವು ಮಾಡೊದನೆಲ್ಲ ನೊಡ್ತಾಇದ್ದ ಬೆಂಕಿ ಎಲ್ಲಾ ಆರಿತು ಅಡಕೆ ಪಟ್ಟಿಯಿಂದ ಘಂ ಅಂತ ವಾಸನೆ ಬರ್ತಿತ್ತು, ವಿಜಿ ಅದನ ಆಚೆ ತೆಗದು ಕಾದ ತಂತಿನ ಕಲ್ಲಿನಿಂದ ಬಿಡಿಸಿದ. ಅದನ್ನ ಬಿಚ್ಚಿ ನೊಡ್ತಿವಿ ಚೆನ್ನಾಗಿ ಬೆಂದಿತ್ತು ನಮ್ಮ ಜೊತೆ ಬಂದ್ದಿದ ಹುಡಗನಿಗೆ ಬಾಯಲ್ಲಿ ನೀರು ಬರ್ತಿತ್ತು. ನಾವು ಸರಿ ಅಂತ ತಿನ್ನೊಕೆ ಶುರು ಮಾಡಿದೆವು.
ಆ ಹುಡಗನ್ನ ಕೇಳಿದೊ ಬೇಕಾ ಅಂತ ಅವನು ಬೇಡಾ ಅಂದ ನಾವು ಜಾಸ್ತಿ ಬಲವಂತ ಮಾಡಲಿಲ್ಲ ಯಾಕಂದ್ರೆ ನಾವು ಮುಟ್ಟಿದನ್ನ ವಕ್ಕಲಿಗರು ತಿನ್ನಲ್ಲ ಅಂತ ನಮಗೆ ಗೊತ್ತಿತ್ತು. ನಾವು ತಿಂತಾ ಇರಬೇಕಾದ್ರೆ ಆ ಹುಡುಗ ಕೇಳಿದ ಅಣ ಯಾರಿಗೂ ಹೇಳಬೇಡ್ರಿ ನಂಗು ಒಂದ ಪೀಸ್ ಕೊಡ್ರಿ ಅಂದ ಅವನಿಗೆ ರುಚಿ ಹಿಡಸ್ತು ನಮ್ಮ ಜೊತೆನೆ ತಿನ್ನಕೆ ಶುರು ಮಾಡಿದ, ಎಲ್ಲಾ ಮುಗಿದ ಮೇಲೆ ಯಾರ್ಗೂ ಹೇಳಬೇಡ್ರಿ ಅಂತಹೇಳಿ ಹೋರಟು ಹೋದ. ನಾವು ಮೂರು ಜನ, ಈಗ ಸಿಕ್ರೆ ಆ ಹುಡುಗನನ್ನ ನೆನಪಿಸಿಕೊಂಡು ಜೋರಾಗಿ ನಗ್ತೀವಿ. ಅಂತು ಇಲಿ ಬಾಡು ಸಕ್ಕತ್ತಾಗಿತ್ತು, ಬಾಡು ತಿನ್ನೊ ನೆಪದಲ್ಲಿ ನಾವು ಬಂದಿರುವ ಕೆಲಸವನ್ನೆ ಮರೆತು ಬಿಟ್ಟಿದ್ದೊ, ಸಮಯ ನೋಡಿದ್ರೆ ಆಗಲೆ ಮೂರು ಘಂಟೆ ಆಗಿತ್ತು. ಸೌದೇನ ಆಯ್ದು ಹೊರೆ ಕಟ್ಟಕ್ಕೆ ಟೈಮ್ ಇರ್ಲಿಲ್ಲ, ಸೌದೆ ತಗೊಂಡು ಹೋಗ್ಲಿಲ್ಲ ಅಂದ್ರೆ ಮನೆಯಲ್ಲಿ ಬೆಳಗ್ಗೆ ಇಂದ ಎಲ್ಲಿಗೆ ಹೋಗಿದ್ದೆ ಅಂತ ಕೇಳ್ತಾರೆ, ಏನ್ ಮಾಡೋದು ಅಂತ ಮೂರು ಜನ ಮಾತಡ್ಕಂಡೊ ರವಿ ಅವ್ರ ಅಪ್ಪ ಅವರ ನೀಲಗಿರಿ ತೋಪು ಕಡಿದಾಗ ಸೌದೆ ಮೆದೆ ಹಾಕಿದ್ರು. ಅವ್ರ ಮೆದೆನಾಗೆ ಮೂರು ಜನ ಯಾರಿಗು ಕಾಣದ ಹಾಗೆ ಸೌದೆ ಕಟ್ಟಿಕೊಂಡು, ಒಬ್ರಿಗೊಬ್ರು ಹೊರೆನಾ ಎತ್ಕಳಕ್ಕೆ ಸಹಾಯ ಮಾಡಿ ಮನೆಗೆ ಹೊರಟೊ ಮನೆ ತಲುಪೊ ಅಷ್ಟರಲ್ಲಿ ಐದು ಘಂಟೆ ಆಗಿತ್ತು. ನಮ್ಮ ಅವ್ವ ಅಕ್ಕ ಕೇಳಿದ್ರು ಯಾಕಿಷ್ಟು ಲೇಟು ಅಂತ ಬೆಳಗ್ಗೆ ಹೋದೋನು ಸಂಸಾರಿ ಈಗ ಬಂದಿದ್ದೀಯಲ್ಲ ಅಂತಾ ಕೇಳಿದ್ರು, ಇನ್ನು ಏನೇನೋ ಬೈತಾ ಇದ್ರು ನಾನು ಅದುನ್ನೆಲ್ಲಾ ತಲೆಗೆ ಹಾಕಿ ಕೊಳ್ಳಲಿಲ್ಲ ಇಲಿ ತಿಂದ ಖುಷಿಯಲ್ಲಿ ಬೈಗುಳ ನನ್ನ ಕಿವಿಗೆ ಬೀಳಲಿಲ್ಲ. ಹೀಗೆ ರಜೆ ಸಿಕ್ಕಾಗಲೆಲ್ಲ ನನ್ನ ರವಿ ಮತ್ತು ವಿಜಿಯ ಇಲಿ ಬೇಟೆ ನಡೆಯುತ್ತಿತ್ತು.
 
 

‍ಲೇಖಕರು avadhi

23 February, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading