ಉರುಳಾಗಿ ಕಾಡಿತ್ತು ಮಾತು

ಜಿ ಟಿ ನಾರಾಯಣ ರಾಯರು ವಿಶ್ವ ಕೋಶಕ್ಕೆ ಘನತೆ ತಂದವರು. ಕೋಶದ ವಿಜ್ಞಾನ ವಿಭಾಗದ ಸಂಪಾದಕರಾಗಿದ್ದವರು
ಆವರು ತಮ್ಮ ‘ಮುಗಿಯದ ಪಯಣ’ ಕೃತಿಯಲ್ಲಿ
ದೇಜಗೌ ಅವರನ್ನು ಹೀಗೆ ನೆನೆದಿದ್ದಾರೆ
೧೯೬೮ರ ನವೆಂಬರ್, ಬೆಂಗಳೂರು ವಿಶ್ವವಿದ್ಯಾಲಯದ ಹುದ್ದೆಗೆ ಔಪಚಾರಿಕ ಸಂದರ್ಶನ (ಹಾಗೆಂದು ಅಲ್ಲಿಯ ವರಿಷ್ಠರು ನನಗೆ ಆಶ್ವಾಸಿಸಿದ್ದರು) ನಡೆಯಿತು. ಖುದ್ದು ಗಣಿತ ವಿಭಾಗದ ಮುಖ್ಯಸ್ಥರೇ ನನ್ನ ಅರ್ಹತೆ, ಸಾಮರ್ಥ್ಯ ಮುಂತಾದವನ್ನು ಕುರಿತು ನನಗೇ ಮುಜಗರವಾಗುವಂತೆ ಸಮಿತಿಗೆ ವರ್ಣಿಸಿದರು. ಇನ್ನುಳಿದಿರುವುದೇನು? ವಿಧಾನ ವೀಥಿಯ ಈ ಕಡೆಯಿಂದ (ಸರ್ಕಾರೀ ಕಾಲೇಜ್) ಆ ಕಡೆಗೆ (ಸೆಂಟ್ರಲ್ ಕಾಲೇಜ್) ಅಧಿಕೃತವಾಗಿ ದಾಟುವುದು ಮಾತ್ರ ಎಂಬ ಸಂತೃಪ್ತ ಭಾವದಿಂದ ತೇಲುತ್ತಿದ್ದೆ.
ಮರುದಿನ ಕುಲಸಚಿವರಿಂದಲೂ ಗಣಿತ ಮುಖ್ಯಸ್ಥರಿಂದಲೂ ನನಗೆ ತುರ್ತು ಕರೆ. ಇಂದೇ ಹುದ್ದೆಯ ಆದೇಶ ಪತ್ರ ಕೊಡುತ್ತಾರೆಂಬ ಪೂರ್ಣ ಭರವಸೆಯಿಂದ ಹೋದೆ, ಮೊದಲು ಕುಲಸಚಿವರಲ್ಲಿಗೆ. ತೀರ ವಿಷಣ್ಣ ವದನರಾಗಿ ಅವರೆಂದರು, “ವಿಭಾಗ ಮುಖ್ಯಸ್ಥರು ನಿಮ್ಮ ನೇಮನವನ್ನು ಒಪ್ಪಲಿಲ್ಲ. ಇನ್ನೊಂದು ಅಧಿಕ ಉಪನ್ಯಾಸಕ ಹುದ್ದೆ ಕೇಳಿರೆಂದು ಅವರಿಗೆ ಸೂಚಿಸಲಾಗಿದೆ. ಅವರಿಂದ ಅಧಿಕೃತ ಕೋರಿಕೆ ಬಂದ ಒಡನೆ ಮಂಜೂರು ಮಾಡಿ ನಿಮ್ಮನ್ನು ನೇಮಿಸುತ್ತೇವೆ. ಒಟ್ಟಾರೆ ನಿಮ್ಮ ಸೇವೆ ವಿಶ್ವವಿದ್ಯಾಲಯಕ್ಕೆ ಬೇಕೇಬೇಕು.”
ಮುಖ್ಯಸ್ಥರಲ್ಲಿಗೆ ಹೋದಾಗ ಇನ್ನೊಂದು ಆಘಾತ, “ನಿಮ್ಮ ಸಾಮರ್ಥ್ಯ ಮತ್ತು ಯೋಗ್ಯತೆ ಗಮನಿಸಿ ನಿಮ್ಮನ್ನು ಇನ್ನೂ ಉನ್ನತ ಶ್ರೇಣಿಯಲ್ಲಿ, ಸದ್ಯವೇ ವಿಶ್ವವಿದ್ಯಾಲಯ ಪ್ರಾರಂಭಿಸಲಿರುವ ಪ್ರಸಾರಾಂಗದ ನಿರ್ದೇಶಕರಾಗಿ, ನೇಮಿಸಬೇಕೆಂಬುದು ನನ್ನ ಅಭಿಪ್ರಾಯ. ಈ ಕಾರಣದಿಂದಲೇ ಉಪನ್ಯಾಸಕ ಹುದ್ದೆಗೆ ಬೇರೊಬ್ಬರನ್ನು ಶಿಫಾರಸು ಮಾಡಿದ್ದೇನೆ.”
ನಾನು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ, “ನನ್ನ ಭವಿಷ್ಯ ಕುರಿತು ನಿರ್ಣಯಿಸಬೇಕಾದವ ನಾನೇ ಹೊರತು ಬೇರೆ ಯಾರೂ ಅಲ್ಲ. ಗೊತ್ತಿಲ್ಲದ ನನ್ನನ್ನು ಅವರು ಹುಡುಕಿ ಬಂದರು. ಗೊತ್ತಿರುವ ನೀವಾದರೋ ಈಗ ಉಲ್ಟಾ ಹೊಡೆಯುತ್ತಿದ್ದೀರಿ. ನಿಮ್ಮ ನೈತಿಕ ಮಾನಕದ ಬಗ್ಗೆ ನನಗೆ ಖೇದವಿದೆ. ಹೇಗೂ ಇರಲಿ ಸರ್ಕಾರೀ ಹುದ್ದೆ ನನಗಿದ್ದೇ ಇದೆಯಲ್ಲ.”
ನನ್ನ ನೆಲ ಬೆಂಗಳೂರು, ಹೊಲ ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಬಲ ಕನ್ನಡದ ಕೆಲಸ ಎಂದು ನಾನು ದುಡಿದಿದ್ದ ನೆಲೆ ಈಗ ಹಠಾತ್ತನೆ ಪರಕೀಯವಾಗಿತ್ತು. ಯಾವುದೋ ದುಷ್ಟ ರಾಜಕೀಯಕ್ಕೆ ಗಣಿತ ಮುಖ್ಯಸ್ಥರು ಸಿಕ್ಕಿಹಾಕಿಕೊಂಡು ಅದರಿಂದ ವಿಮೋಚನೆಗೊಳ್ಳಲು ಬೆಕ್ಕಿನ ತಲೆಗೆ ತುಪ್ಪ ಪೂಸಿದಂತೆ ನನ್ನೆದುರು ಹೊಸ ಹುದ್ದೆಯ ಆಮಿಷ ಒಡ್ಡಿದ್ದರು. ನನಗೆ ಅವರು ಕೊಡಲಿದ್ದೇವೆಂಬ ಪ್ರಸಾರಾಂಗದ ನಿರ್ದೇಶಕತ್ವ ಎಂಬುದಕ್ಕೆ ಆಗಲೇ ‘ಕನ್ನಡ ಪಠ್ಯ ಪುಸ್ತಕ ಸಮಿತಿ’ಯಲ್ಲಿ ಸಾಕಷ್ಟು ಅನುಭವ ನನಗೆ ಲಭಿಸಿತ್ತು. ಒಂದು ನಿದರ್ಶನ ನೋಡಿ.
ಸಮಿತಿಯ ವತಿಯಿಂದ ನಾವು ತಜ್ಞರಿಗೆ ಅಧಿಕೃತ ಪತ್ರ ಬರೆದು ಹಸ್ತ ಪ್ರತಿಗಳನ್ನು ಆಹ್ವಾನಿಸುತ್ತಿದ್ದೆವು. ಮುಂದೆ ಇವನ್ನು ಬೇರೆ ಬೇರೆ ಹಂತಗಳಲ್ಲಿ ವಿವಿಧ ಸಂಸ್ಕಾರಗಳಿಗೆ ಒಳಪಡಿಸಿ ಪರಿಷ್ಕೃತವಾದವನ್ನು ಮುದ್ರಣಾಲಯಕ್ಕೆ ರವಾನಿಸುತ್ತಿದ್ದೆವು. ಮುದ್ರಿತ ಕೃತಿಗಳಿಗೆ ನಿಯಮಾನುಸಾರ ರಾಯಧನವನ್ನೂ ಪಾವತಿಸುತ್ತಿದ್ದೆವು. ಆದ್ದರಿಂದ ವಿಶ್ವವಿದ್ಯಾಲಯದ ಪ್ರಕಟಣೆ, ಅದೂ ಕನ್ನಡದಲ್ಲಿ ಎಂದರೆ, ಆಯಾ ಲೇಖಕರಿಗೆ ಅದೊಂದು ಪ್ರತಿಷ್ಠೆಯ ಸೂಚಕವಾಯಿತು. ವೃತ್ತಿ ಬಡ್ತಿಗೆ ಹೇತುವೂ ಆಯಿತು. ಇವೆಲ್ಲ ಪ್ರಕ್ರಿಯೆಗಳ ವೇಳೆ ವಿಷಯ, ಗುಣಮಟ್ಟ, ಶೈಲಿ ಕುರಿತಂತೆ ಕನ್ನಡತನ ಮತ್ತು ಸಮಗ್ರ ವ್ಯವಹಾರ ಕುರಿತಂತೆ ಪಾರದರ್ಶಕತೆ ಮಾತ್ರ ನನ್ನೆದುರು ಇರುತ್ತಿದ್ದ ಲಕ್ಷ್ಯಗಳು.
ಇಲ್ಲೇ ನನಗೆ ಹೊಸ ಮತ್ತು ಊಹಿಸಿರದ ವೃತ್ತಿ ಗಂಡಾಂತರ ಎದುರಾದದ್ದು. ನಮ್ಮ ಪ್ರಕಟಣೆಗಳ ಸಂಖ್ಯೆ ಏರಿದಂತೆ ಲೇಖಕರ ಕೋಮು ವಿವರಗಳು ಬೇಕೆಂಬ ಅಲಿಖಿತ ಕೋರಿಕೆ ಪ್ರಬಲ ವ್ಯಕ್ತಿಯೊಬ್ಬರಿಂದ ಬಂತು. ಮಾತಿನಲ್ಲೇ ಹೇಳಿದೆ, “ಅವೆಂದೂ ಇಲ್ಲಿ ಪರಿಗಣನೆಗೆ ಬರುವುದಿಲ್ಲ. ಇಂಥ ವೃಥಾ ಹಸ್ತಕ್ಷೇಪ ಯಾರೂ ಎಂದೂ ಎಲ್ಲಿಯೂ ಮಾಡತಕ್ಕದ್ದಲ್ಲ.”
ಈ ನೇರ ನುಡಿ ಕ್ರಮೇಣ ಉರುಳುವ ಹಿಮಗಡ್ಡೆಯಂತೆ ತೋರಗೊಳ್ಳುತ್ತ ಹೋಗುತ್ತಿತ್ತೆಂದು ಕೆಲವು ಮಿತ್ರರಿಂದ ತಿಳಿದಾಗ ನನ್ನಲ್ಲಿ ಮೊಳೆತದ್ದು ತಿರಸ್ಕಾರ. ನಿವೃತ್ತ ಪ್ರಾಧ್ಯಾಪಕರೊಬ್ಬರು ನನ್ನಲ್ಲಿಗೆ ಬಂದು ತಮ್ಮ ಓಬೀರಾಯನ ಕಾಲದ ಹಸ್ತಪ್ರತಿಯೊಂದನ್ನು ಕೊಟ್ಟು ಹೆಚ್ಚು ಕಡಿಮೆ ಆದೇಶಿಸಿದರು, “ಇದನ್ನು ನೀವು ಪ್ರಕಟಿಸಬೇಕು. ಶಿಫಾರಸು ಪತ್ರಗಳನ್ನು ಲಗತ್ತಿಸಿದ್ದೇನೆ, ನೋಡಿ” ಎಂದರು. ಆ ಹಸ್ತಪ್ರತಿ ವಿಜ್ಞಾನಕ್ಕೆ ಸಂಬಂಧಿಸಿದ್ದಲ್ಲ. ಆದರೂ ಅದರ ಮೊದಲ ಪುಟದಲ್ಲೇ ಹಲವಾರು ಸ್ಖಾಲಿತ್ಯಗಳಿದ್ದುದನ್ನು ಅವರಿಗೆ ಓದಿ ಹೇಳಿದೆ. ಸಾಮಾನ್ಯ ಪ್ರಜ್ಞೆ ಇರುವ ಯಾರಿಗೂ ಹೊಳೆಯುವ ದೋಷವದು.
“ಕನ್ನಡಕ್ಕೆ ಇಷ್ಟು ಸಾಕು. ನನಗೆ ಪುಸ್ತಕ ಶೀಘ್ರದಲ್ಲಿಯೇ ಹೊರಬರುವುದು ಮುಖ್ಯ. ನೋಡಿ ಎಂಥೆಂಥ ಪ್ರಬಲ ರಾಜಕಾರಣಿಗಳು ನನ್ನ ಈ ಕೃತಿಗೆ ಶಿಫಾರಸು ಕಾಗದ ಕೊಟ್ಟಿದ್ದಾರೆ.”
ತಾಳ್ಮೆಗೆಡದೆ ಅವರಿಗೇನೋ ಸಬೂಬು ಹೇಳಿ ಸದ್ಯದ ಸ್ಫೋಟದಿಂದ ಪಾರಾದೆ. ಆದರೆ ಈ ಎಲ್ಲ ಕಿರಿಕಿರಿಗಳು ನನ್ನನ್ನು ಅಂತರ್ಮುಖಿಯಾಗಿಸಿದುವು: ಅಧಿಕಾರ, ಹಣ ಮತ್ತು ವಶೀಲಿ ಇರುವ ಯಾವುದೇ ಹುದ್ದೆ ಅಥವಾ ಹೊಣೆಯ ಹತ್ತಿರ ನಾನು ಸುಳಿಯತಕ್ಕದ್ದಲ್ಲ.
ಒಡನೆ ದೇಜಗೌಅವರಿಗೆ ಪತ್ರ ಬರೆದೆ. ಸಾರಾಂಶ: ಬೆಂಗಳೂರು ವಿಶ್ವವಿದ್ಯಾಲಯಕ್ಕೆ ನೀಡಿದ್ದ ವಚನವೆಂಬ ಉರುಳಿನಿಂದ ಪಾರಾಗಿದ್ದೇನೆ; ಹಿಂದಿನ ಆಹ್ವಾನ ಇಂದೂ ಸಿಂಧುವಾಗಿದ್ದರೆ ಮೈಸೂರಿಗೆ ಬರಲು ಸಿದ್ಧನಿದ್ದೇನೆ. ಆದರೆ ಇದರಿಂದ ಅಲ್ಲಿ ಅವರು (ಮೈಸೂರು) ಈಗಾಗಲೇ ನೇಮಿಸಿರಬಹುದಾದ ಇನ್ನೊಬ್ಬರನ್ನು ವಿಸ್ಥಾಪಿಸಬೇಕಾದರೆ ನನ್ನ ಬಗ್ಗೆ ಮರೆತುಬಿಡಿ – ಪರರಿಗೆ ಮುಳುವಾಗಿ ನಾನು ಮೆರೆಯಬೇಕಾಗಿಲ್ಲ.
ಅವರ ಮಾರೋಲೆ (ಡಿಸೆಂಬರ್ ೬, ೧೯೬೮), “…ನೀವು ಕನ್ನಡ ವಿಶ್ವಕೋಶದ ವಿಜ್ಞಾನ ವಿಭಾಗದ ಸಂಪಾದಕರಾಗಿ ಬರಲು ಒಪ್ಪಿಕೊಂಡಿರುವುದು ನನಗೆ ತುಂಬ ಸಂತೋಷವನ್ನುಂಟುಮಾಡಿದೆ. ನಿಮ್ಮಂಥ ತಜ್ಞರ ಹಾಗೂ ನುರಿತ ಲೇಖಕರ ಸಹಾಯ ಸಹಕಾರಗಳು ದೊರಕುವುದಾದರೆ ವಿಶ್ವಕೋಶ ಬಹು ಶೀಘ್ರವಾಗಿ ಹೊರಬೀಳುತ್ತದೆ… ನಿಮ್ಮ ಆಗಮನಕ್ಕಾಗಿ ನಾನು ತುಂಬ ಕಾತರದಿಂದಿದ್ದೇನೆಂದು ಹೇಳಬೇಕಾಗಿಲ್ಲ, ತಾನೆ?” ಸಾಮಾನ್ಯತೆಯನ್ನು ಅಸಮಾನ್ಯತೆಗೆ ಉತ್ತಾರಣೆಗೊಳಿಸುವ ಪರುಷಸ್ಪರ್ಷಕ್ಕೆ (ಪುರುಷಸ್ಪರ್ಷಕ್ಕೆ ಕೂಡ) ಉದಾಹರಣೆ ನಮ್ಮ ಆದರಣೀಯ ದೇಜಗೌ.
ಮರುದಿನ ಸಾಕ್ಷಾತ್ ಹರಿದಾಸ ಭಟ್ಟರೇ ನನ್ನ ಮನೆಗೆ ಬಂದರು. ದೇಜಗೌರಿಗೆ ನನ್ನ ಕಾಗದ ತಲಪಿದಾಗ ಇವರೂ ಮೈಸೂರಿನಲ್ಲಿದ್ದರಂತೆ. ಅಂದಿನ ತನಕವೂ ಅವರಿಗೆ ವಿಜ್ಞಾನ ಸಂಪಾದಕ ಹುದ್ದೆಗೆ ಸಮರ್ಥ ವ್ಯಕ್ತಿ ದೊರೆತಿರಲಿಲ್ಲವಂತೆ. “ತುರ್ತಾಗಿ ಗಂಟು ಮೂಟೆ ಕಟ್ಟಿ ಮೈಸೂರಿನಲ್ಲಿ ಹೊಸ ಬಿಡಾರ ಹೂಡಲು ಸನ್ನದ್ಧರಾಗಿ” ಎಂದು ಸಲಿಗೆಯಿಂದ ಆಜ್ಞಾಪಿಸಿದರು.
ಕಾಲೇಜಿನ ಮತ್ತು ಮಕ್ಕಳ ಶೈಕ್ಷಣಕ ವರ್ಷ ಮುಗಿದೊಡನೆ (ಮೇ ೧೯೬೯) ಮೈಸೂರಿಗೆ ಹೊರಡಲು ನನ್ನ ಲಿಖಿತ ಸಮ್ಮತಿ ರವಾನಿಸಿದೆ: ಅಲ್ಲಿಯ ಬೌದ್ಧಿಕ ಪರಿಸರ ನನಗಿಷ್ಟವಾದರೆ ಹಾಗೂ ಅವರಿಗೆ (ದೇಜಗೌ) ನನ್ನ ಕಾರ್ಯಶೈಲಿ ಒಪ್ಪಿಗೆಯಾದರೆ ಸದ್ಯಕ್ಕೆ ಸರಕಾರದಿಂದ ಎರವಲು ಸೇವೆ ಮೇರೆಗೆ ಬರಲು ಸಿದ್ಧನಿದ್ದೇನೆ ಎಂಬುದು ಸಾರಾಂಶ. ಮುಂದಿನದು ಕೇವಲ ಔಪಚಾರಿಕ ದಫ್ತರ ಚಲಾವಣೆ: ಮೈಸೂರು ವಿಶ್ವವಿದ್ಯಾನಿಲಯದಿಂದ ಕಾಲೇಜ್ ಶಿಕ್ಷಣ ನಿರ್ದೇಶಕರಿಗೆ
ಕೋರಿಕೆ ಪತ್ರ ಹೋಯಿತು, ಯುಕ್ತ ವೇಳೆಯಲ್ಲಿ ಬಿಡುಗಡೆ ಆದೇಶ ಬಂದಿತು. ಅಧಿಕೃತವಾಗಿ ಕಾಲೇಜ್ ಸೇವೆಯಿಂದ ಹೊರಡುವ ಮೊದಲು ನಿರ್ದೇಶಕಿ ಜಯಲಕ್ಷ್ಮಮ್ಮಣ್ಣಿಯವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಲು ಹೋದೆ. ಅವರೊಂದು ದೊಡ್ಡ ಮಾತು ಹೇಳಿ ನನಗೆ ಶುಭವಿದಾಯ ಕೋರಿದರು, “ನಿಮ್ಮಂಥ ಸಮರ್ಥರ ಸೇವೆಯನ್ನು ನಮ್ಮ ಇಲಾಖೆಯಿಂದ ತಾತ್ಕಾಲಿಕವಾಗಿಯಾದರೂ ಎರವಲು ಕೊಡುವುದು ನನಗೇನೂ ಪ್ರಿಯವಾದ ಸಂಗತಿಯಲ್ಲ. ಆದರೆ ಕನ್ನಡದ ಕೆಲಸ ಬಲು ದೊಡ್ಡದು. ಕನ್ನಡ ನಾಡಿಗೆ ಒಳ್ಳೆಯದಾಗಲಿ.”
ಹೀಗೆ ಹಲವು ಹೃದಯಗಳು, ಸದಾಶಯಗಳು ಮತ್ತು ಘನೋದ್ದೇಶಗಳು ಸಂಘನಿಸಿ ನನ್ನನ್ನು ಬೆಂಗಳೂರಿನಿಂದ ಮೈಸೂರಿಗೆ ಉಡಾಯಿಸಿದುವು. ಅರಿಯದ ನೆಲದಲ್ಲಿ, ತಿಳಿಯದ ಕಾರ್ಯ ನಿರ್ವಹಿಸಲು, ಗೊತ್ತಿಲ್ಲದ ಭವಿಷ್ಯ ಕುರಿತು ಹೊಸ ಹವೆಗೆ ದುಮುಕಿದೆ ಮತ್ತು ವಿಶ್ವಕೋಶ ಪರ್ವತಾರೋಹಣಕ್ಕೆ ಸಜ್ಜಾದೆ; ಮೈಸೂರು ಮಾನಸ ಗಂಗೋತ್ರಿಯಲ್ಲಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ವಿಶ್ವಕೋಶದ ವಿಜ್ಞಾನ ಸಂಪಾದಕನಾಗಿ ಜೂನ್ ೧೭, ೧೯೬೯ರ ಮುಂಜಾನೆ ದಾಖಲಾದೆ. ಸಂಸ್ಥೆಯ ನಿರ್ದೇಶಕರೂ ಪದನಿಮಿತ್ತ ವಿಶ್ವಕೋಶದ ಪ್ರಧಾನ ಸಂಪಾದಕರೂ ಆಗಿದ್ದ ದೇಜಗೌಅವರು ನನ್ನನ್ನು ಆದರದಿಂದ ಸ್ವಾಗತಿಸಿದರು, ಮತ್ತು ಸಂಸ್ಥೆಯ ಎಲ್ಲ ವಿಭಾಗಗಳಿಗೂ ನನ್ನನ್ನು ಕರೆದೊಯ್ದು ಆತ್ಮೀಯವಾಗಿ ಪರಿಚಯಿಸಿದರು. ಅವರು “ಪರಗುಣ ಪರಮಾಣುವುಮಂ ಗಿರಿಗೈದುರ್ಬುವ” ಸುಜನರೆಂಬುದು ಹೆಜ್ಜೆಹೆಜ್ಜೆಗೂ ನನ್ನ ಅರಿವಿಗೆ ಬಂದು ಕೆಲಸ ಮತ್ತು ಪರಿಸರದ ಬಗ್ಗೆ ಉತ್ಸಾಹ ಹಾಗೂ ಭರವಸೆ ತಳೆದೆ.





0 Comments