"ಹಿಂಬದಿ ಪುಕಲೇಶಿ"- "ಮುಂಬದಿ ತಿಕಲೇಶಿ"

vaddagere2 ವಡ್ಡಗೆರೆ ನಾಗರಾಜಯ್ಯ 

ಇವೊತ್ತು, ಇಪ್ಪತ್ತೆರಡು ವರ್ಷಗಳ ಹಿಂದಿನ ನನ್ನ ಹಳೆಯ ವಿದ್ಯಾರ್ಥಿಗೆಳೆಯನೊಬ್ಬ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಸಿಕ್ಕಿ, “ನಮಸ್ಕಾರ ಸಾರ್, ನಾನು ಉಮೇಶ, ನಿಮ್ಮ ಹಳೆ ವಿದ್ಯಾರ್ಥಿ” ಎಂದು ನನ್ನ ನೆನಪಿನ ಬುತ್ತಿ ಬಿಚ್ಚಿದ. ಶಿರಾ ಸೀಮೆಯ ಹಳ್ಳಿಗಾಡಿನ ಅವನು ಬದುಕಿನ ಕಷ್ಟಕೋಟಲೆಗಳಿಗೆ ಸಿಲುಕಿದ ಪರಿಣಾಮ ವಯಸ್ಸಿನಲ್ಲಿ ನನಗಿಂತಲೂ ಹಿರೀಕನಂತೆ ನನಗೆ ಕಂಡುಬಂದ. ನೆರೆತುಹೋದ ಗಡ್ಡ, ಕೆದರಿದಂತೆ ತಲೆಯ ಮೇಲೆ ಚೆಲ್ಲೊಡೆದ ಬಿಳಿ ಕೂದಲ ಅವನನ್ನು ನೋಡಿದ ನನಗೆ ಕರುಳು ಚುರ್ ಅಂತು..
face stripesನನಗಿರುವ ಸಾವಿರಾರು ಹಳೆಯ ವಿದ್ಯಾರ್ಥಿಗಳಲ್ಲಿ ಕೆಲವರಷ್ಟೇ ನೆನಪಿನಲ್ಲಿದ್ದಾರೆ. ಕೆಲವರು ಇಂದಿಗೂ ನನ್ನೊಂದಿಗೆ ಬಾಂಧವ್ಯ ಉಳಿಸಿಕೊಂಡು ಬಂದಿದ್ದಾರೆ . ಇಷ್ಟೊಂದು ದೀರ್ಘ ಕಾಲದ ನಂತರದಲ್ಲಿ ಭೇಟಿಯಾದ್ದರಿಂದ ಸಹಜವಾಗಿ ಉಮೇಶ ಮರೆತುಹೋಗಿದ್ದ. “ಏನಯ್ಯಾ ಉಮೇಶ ಏನು ಮಾಡಿಕೊಂಡಿದ್ದೀಯಾ?” ಕೇಳಿದೆ. “ಸರ್, ಬೇಸಾಯ ಮಾಡ್ಕೊಂಡಿದ್ದೀನಿ. ನಮ್ಮೂರ ಕೆರೆಯಲ್ಲಿ ಬೇಸಿಗೆಯಲ್ಲಿ ಇಟ್ಟಿಗೆ ಸುಡಿಸಿ ಮಾರಾಟ ಮಾಡ್ತೀನಿ. ನೀವು ನನ್ನ ಬದುಕಿನಲ್ಲಿ ನನ್ನ ಮೇಲೆ ತುಂಬಾ ಪ್ರಭಾವ ಬೀರಿದ ನನ್ನ ನೆಚ್ಚಿನ ಮೇಷ್ಟ್ರು ಸರ್. ನೀವು ನಮಗೆ Part time lecturer ಆಗಿದ್ದರೂ full time lectures ಗಿಂತಲೂ ವಿದ್ಯಾರ್ಥಿಗಳಾದ ನಾವು ನಿಮ್ಮನ್ನು ಹೆಚ್ಚು ಇಷ್ಟಪಡುತ್ತಿದ್ದೆವು ಸಾರ್ ” ಅಂದ.
ಥ್ರಿಲ್ ಆದ ನಾನು ಅವನಿಗೆ ಊಟ ಕೊಡಿಸಲೆಂದು ಹೋಟೆಲಿಗೆ ಕರೆದುಕೊಂಡು ಹೋದೆ. ಊಟ ಬೇಡವೆಂದ ಉಮೇಶ ಕಾಫಿ ಕುಡಿದ. ನಿರುದ್ಯೋಗಿಯಾದ ಅವನು ಬಿ.ಎ. ಪದವಿಯ ನಂತರ ವ್ಯಾಸಂಗ ಮುಂದುವರೆಸದೆ ಇಟ್ಟಿಗೆ ಬ್ಯುಸಿನೆಸ್ ಮಾಡಿಕೊಂಡು, ಮದುವೆಯಾಗಿ ಮೂರು ಮಕ್ಕಳ ತಂದೆಯಾಗಿದ್ದಾನೆ. ಕಾಫಿ ಕುಡಿಯುತ್ತಾ ಮಾತನಾಡುವಾಗ, “ಸಾರ್, ನನ್ನನ್ನು ಕ್ಷಮಿಸಬೇಕು. ನಿಮ್ಮ ಹೆಸರೇನು ಹೇಳಿ. ನಾನು ನಿಮ್ಮ ಹೆಸರು ಮರೆತಿದ್ದೇನೆ!” ಅಂದ. “ನಿನ್ನ ಬದುಕಿನ ಮೇಲೆ ಪ್ರಭಾವ ಬೀರಿದ ನನ್ನ ಹೆಸರೇ ನಿನಗೆ ಗೊತ್ತಿಲ್ಲವೆಂದ ಮೇಲೆ, ನಾನು ಎಷ್ಟರಮಟ್ಟಿಗೆ ಪ್ರಭಾವಿಸಿರಬೇಕು?! ಹಹಹ!” ಎಂದು ನಕ್ಕೆ.
ನನ್ನ ನಗುವಿನಿಂದ ಪೆಚ್ಚಾದ ಉಮೇಶ, “ಸರ್, ತಪ್ಪು ಬಾವಿಸಬೇಡಿ. ನಿಮ್ಮ real name ಮರೆತಿದ್ದೇನೆ. ನಿಮಗೆ ನಾವು ವಿದ್ಯಾರ್ಥಿಗಳು ಕೊಟ್ಟುಕೊಂಡಿದ್ದ ಅಡ್ಡಹೆಸರು ಮಾತ್ರ ನೆನಪಿಗಿದೆ” ಅಂದ. ಅಸಲಿಗೆ ನಮ್ಮೂರಿನ ನನ್ನ ಬಾಲ್ಯದ ಕೆಲವು ಗೆಳೆಯರು ನನ್ನನ್ನು “ನಾಗರಿ” ಎಂಬ ಅಡ್ಡ ಹೆಸರಿನಿಂದ ಕರೆಯುತ್ತಿದ್ದರು. ಅದು ನಂತರದಲ್ಲಿ ಜನರ ನೆನಪಿನಿಂದ ಸಂಪೂರ್ಣ ಮಾಸಿಹೋಗಿತ್ತು. ಇನ್ನ್ಯಾವ ಅಡ್ಡಹೆಸರು ನನಗಿದ್ದಂತೆ ನನ್ನ ಕಿವಿ ಮೇಲೆ ಬಿದ್ದದ್ದಿಲ್ಲ. ಹೀಗಿರುವಾಗ ಉಮೇಶನಿಗೆ ನನ್ನ ಬಾಲ್ಯದ ಅಡ್ಡಹೆಸರು ಗೊತ್ತಿರುವುದು ಸಾಧ್ಯವಿಲ್ಲದ ಮಾತು. ಅವನೇ ಹೇಳಿದಂತೆ ನನಗೆ ವಿದ್ಯಾರ್ಥಿಗಳೇ ಕೊಟ್ಟುಕೊಂಡಿದ್ದ ಅವರ ಅಂತರಂಗದ ಮತ್ತು ನನಗೆ ತಿಳಿಸದೇ ಇದ್ದ ಅಡ್ಡಹೆಸರು ಅದಾಗಿತ್ತು.
finger print stripesಉಮೇಶನ ಗೆಳೆಯರು ಅದ್ಯಾವ ಅಡ್ಡಹೆಸರನ್ನು ನನಗೆ ಕೊಟ್ಟಿದ್ದರಿರಬೇಕು ಎಂಬ ಕುತೂಹಲ ಉಂಟಾಯಿತು. ತಿಳಿದುಕೊಳ್ಳಲು ಬಯಸಿ “ಆ ಅಡ್ಡ ಹೆಸರೇನು?” ಅಂದೆ . ಹೇಳಲು ಹಿಂಜರಿದ ಅವನು ಒತ್ತಾಯಿಸಿದ ಬಳಿಕ, “ಒಕೊಂಕೊ” ಎಂದಷ್ಟೇ ಹೇಳಿ ಹಿಹಿಹಿ ಎಂದು ನಕ್ಕ. ನಾನು ತುಮಕೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ part time ಉಪನ್ಯಾಸಕನಾಗಿ English literature ಬೋಧಿಸುತ್ತಿದ್ದಾಗ ದ್ವಿತೀಯ ಬಿಎ ವಿದ್ಯಾರ್ಥಿಗಳಿಗೆ ಚಿನುವಾ ಅಚಿಬೆಯ Things Fall Apart ಕಾದಂಬರಿ ಬೋಧಿಸುತ್ತಿದ್ದೆ. ನೈಜಿರಿಯಾದ ಶ್ರೇಷ್ಠ ಕಾದಂಬರಿಕಾರ ಅಚಿಬೆ ಬರೆದ ಆ ಕಾದಂಬರಿಯ ನಾಯಕನ ಹೆಸರು ಒಕೊಂಕೊ!
ಇದೊಂದು ಚೆಂದದ ಅಡ್ಡಹೆಸರಿನಿಂದ ನನ್ನ ವಿದ್ಯಾರ್ಥಿಗಳು ನನ್ನನ್ನು ಕರೆಯುತ್ತಿದ್ದ ವಿಷಯ ಕೇಳಿದ ನನಗೆ ಕಣ್ಣುಗಳು ತುಂಬಿಬಂದವು. ಉಮೇಶನು ಬೇಡಬೇಡವೆಂದರೂ ಅವನ ಜೇಬಿಗೆ ಐನೂರು ರೂಪಾಯಿ ಇರಿಸಿ, “ಮನೆಗೆ ಹೋಗುವಾಗ ನಿನ್ನ ಮಕ್ಕಳಿಗೆ ಓದಲು-ಬರೆಯಲು ಏನಾದರೂ ತೆಗೆದುಕೊಂಡು ಹೋಗು” ಎಂದು ಹೇಳಿ ಅವನನ್ನು ಬಸ್ಸು ಹತ್ತಿಸಿ ಬಂದೆ.
ಮನೆಗೆ ಬಂದಾಗ ಅದೇ ಅಡ್ಡಹೆಸರಿನದೇ ನೆನಪು ಒತ್ತರಿಸಿ ಬಂತು. ನಾನು ವಿದ್ಯಾರ್ಥಿಯಾಗಿದ್ದಾಗಲೂ ಹೀಗೆಯೇ ಅಡ್ಡಹೆಸರಿನಿಂದ ಶಿಕ್ಷಕರನ್ನು ಮತ್ತು ಗೆಳೆಯರನ್ನು ಕರೆಯುತ್ತಿದ್ದೆವು. ಹೈಸ್ಕೂಲಿನಲ್ಲಿ ಇತಿಹಾಸ ಶಿಕ್ಷಕರ ಶಿಕ್ಷೆಗೆ ಹೆದರುತ್ತಿದ್ದ ನನ್ನ ಗೆಳೆಯ ಶಿವಕುಮಾರ ಹಿಂದಿನ ಬೆಂಚಿನಲ್ಲಿ ಮೈಕೈ ಮುದುರಿ ಕುಳಿತುಕೊಳ್ಳುತ್ತಿದ್ದನು. ಅವನನ್ನು ನಾವು “ಹಿಂಬದಿ ಪುಕಲೇಶಿ ” ಎಂದೂ , ಇತಿಹಾಸ ಶಿಕ್ಷಕರಿಗೆ “ಮುಂಬದಿ ತಿಕಲೇಶಿ” ಎಂದೂ ಕರೆಯುತ್ತಿದ್ದೆವು!

‍ಲೇಖಕರು admin

November 19, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: