ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಿಂದುತ್ವ v/s ಆಹಿಂದತ್ವ… ಮಂಡಲ v/s ಕಮಂಡಲ

ಹಿಂದುತ್ವ v/s ಆಹಿಂದತ್ವ…
ಅನ್ನುವಿರಾ?
ಅಥವಾ…ಮತ್ತೆ
ಮಂಡಲ v/s ಕಮಂಡಲ
ಎನ್ನುವಿರಾ?

-ಭಾರತ ರಾಜಕಾರಣ ತನಗೆ ತಾನೇ ಚಾರಿತ್ರಿಕ ಪ್ರಯೋಗಕ್ಕೆ ಒಡ್ಡಿಕೊಂಡಂತೆ ಕಾಣುತ್ತಿರುವ ಈ ಹೊತ್ತಲ್ಲಿ ಉದ್ಭವವಾಗುವ ಪ್ರಶ್ನೆಗಳಿವು.

ಪ್ರಸಕ್ತ ಲೋಕಸಭೆ ಚುನಾವಣೆಗಳು ಭಾರತ ಪ್ರಜಾಸತ್ತೆ ಯಲ್ಲಿ, ಹೊಸ ರಾಜಕೀಯ ಸೂತ್ರಗಳನ್ನು ಸೃಷ್ಟಿಸಬಹುದೆಂಬ ವಿಶ್ಲೇಷಣೆಯ ನಡುವೆ, ಹೊಸತನದ ನಿರೀಕ್ಷೆ ಆರಂಭವಾಗಿದೆ. ಯಾಕೆಂದರೆ ಅತ್ಯಂತ ಸಂಕೀರ್ಣ ಘಟ್ಟದಲ್ಲಿ ಈ ಲೋಕಸಭೆ ಚುನಾವಣೆ ನಡೆಯುತ್ತಿದೆ.

ತಮ್ಮ ತಮ್ಮ ಪರ ಅಲೆಯಿಬ್ಬಿಸಲು ರಾಜಕೀಯ ಪಕ್ಷಗಳು ಹೈಟೆಕ್ ತಂತ್ರಗಳು ಬಳಸಿದರೂ ಅವು ಮತದಾರರ ಮನಕ್ಕೆ ನಾಟಿದಂತೆ ಕಂಡು ಬರುತ್ತಿಲ್ಲ.
ನಾವು ಕೆಲವೊಮ್ಮೆ ಸೋಲು ಗೆಲುವಿನ ಬಗ್ಗೆ ಸಾಂಪ್ರದಾಯಿಕ ಲೆಕ್ಕ ಹಾಕುತ್ತೇವೆ. ರಾಷ್ಟ್ರ ರಾಜಕಾರಣದಲ್ಲಿ ನಡೆದಿರುವ ಪ್ರಯೋಗಕ್ಕೂ ಈ ಸಾಂಪ್ರದಾಯಿಕ ಲೆಕ್ಕಾಚಾರಕ್ಕೆ ಸಂಬಂಧವಿದೆಯೇ? ಇದನ್ನು ಅರ್ಥೈಸಲು ಹೊಸ ದೃಷ್ಟಿಯೊಂದು ಬೇಕಾಗಿದೆಯೆ?
ಇದೀಗ ಪ್ರಧಾನಿ ಮೋದಿ ಆಗಲಿ, ರಾಹುಲ್ ಆಗಲಿ ಅತ್ತ್ಯಂತ ವಿಭಿನ್ನ ಸ್ಥಿತಿಯ ಚುನಾವಣೆ ಎದುರಿಸುತ್ತಿದ್ದು ಸಾಂಪ್ರದಾಯಿಕ ರಾಜಕಾರಣ ಆಟ ನಡೆಯುವುದಿಲ್ಲ ಎನ್ನುವುದಂತೂ ಅರ್ಥವಾಗಿದೆ.

ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟದ ಕಾಲದಿಂದ ಇದ್ದ ಪಕ್ಷ ಎಂಬ ಗುಡ್ ವಿಲ್ ಮಾಯವಾಗಿದೆ. ನೆಹರೂ ಮೇಲ್ನೋಟದ ನೆನಪಾಗಿ ಕ್ರಮೇಣ ನೇಪಥ್ಯಕ್ಕೆ ಸರಿಯುತ್ತಿದ್ದಾರೆ. ನೆಹರೂ, ಇಂದಿರಾ ಮುಖ ನೋಡಿಕೊಂಡು ಮತ ಹಾಕುವಂಥ ಪರಿಸ್ಥಿತಿ ಈಗ ಇಲ್ಲ.

ಇವೆಲ್ಲಕ್ಕಿಂತ ಹೆಚ್ಚಾಗಿ ಹೊಸ ತಲೆಮಾರಿನ ಮತದಾರರ ಆಯ್ಕೆಗಳು ಬೇರೆಯಾಗಿವೆ. ರಾಜಕೀಯ ಪ್ರಜ್ಞೆ, ನಾಯಕತ್ವದ ವರಸೆಗಳನ್ನು ನೋಡುವ ದೃಷ್ಟಿ ಬದಲಾಗಿದೆ. ಯಾವುದೇ ಪ್ರಭಾವವಿಲ್ಲದೆ ನಿರ್ಲಿಪ್ತ ಸ್ಥ್ಠಿತಿಯಲ್ಲಿ ಮತ ಚಲಾಯಿಸಲು ಸಜ್ಜಾಗುತ್ತಿರುವ ಈ ಹೊಸ ಮತದಾರರನ್ನು ಸೆಳೆಯಲು ಮೋದಿ, ಖುದ್ದು ತಾವೇ ಯುವ ನಾಯಕನಂತೆ ಸಿನಿಮೀಯ ಶೈಲಿಯಲ್ಲಿ ಗರ್ಜಿಸತೊಡಗಿದ್ದಾರೆ.

ಮತ್ತೊಂದೆಡೆ ಹೈಟೆಕ್ ತಂತ್ರಗಳನ್ನು ಬಳಸುತ್ತಿರುವ ಮೋದಿ ರಾಷ್ಟ್ರೀಯತೆಯ ಹುಯ್ಲ ಎಬ್ಬಿಸುತ್ತಿರುವ ರೀತಿ ನೋಡಿದರೆ ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಹರಸಾಹಸ ನಡೆಸುತ್ತಿರುವುದು ಗೋಚರವಾಗುತ್ತಿದೆ. ವಾಸ್ತವದ ಕಟು ಸತ್ಯವನ್ನು ಮರೆ ಮಾಚಿ ಕೃತಕ ಅಲೆ ಎಬ್ಬಿಸಲು ಯತ್ನ ನಡೆಸುತ್ತಿರುವ ರೀತಿ ಕಾಣುತ್ತಿದೆ.

ಮೋದಿ ಮತ್ತು ಶಾ ಜೋಡಿ ಇಬ್ಬರೂ ಸೇರಿಕೊಂಡು ಚುನಾವಣೆ, ಸರ್ಕಾರ, ಪಕ್ಷವನ್ನು ಅವರು ಡಿಟ್ಟೋ ಬಹುರಾಷ್ಟ್ರೀಯ ಕಂಪನಿ ರೀತಿಯಲ್ಲಿ ನಡೆಸುತ್ತಿರುವುದನ್ನು ಕಂಡರೆ ಸೋಲು, ಗೆಲುವಿಗೆ ಅನುಸರಿಸಬೇಕಾದ ತಂತ್ರಗಳು ಬೇರೆಯೇ ಇವೆ ಅನ್ನಿಸುವುದಂತು ನಿಶ್ಚಿತ.
ಇಂಥ ಜಟಿಲ ಸಂದರ್ಭದಲ್ಲಿ ಬಿಜೆಪಿಗೆ ಸವಾಲು ಹಾಕುತ್ತಿರುವ, ಹಿಂದುತ್ವಕ್ಕೆ ಎದುರಾಗಿ ನಿಂತಿರುವ ರಾಜಕೀಯ ತಂತ್ರವೇ “ಅಹಿಂದತ್ವ”.

ಮೊದಲಿಗೆ ಕರ್ನಾಟಕದಿಂದ ಶುರು ಮಾಡೋಣ.

ಮೈತ್ರಿ ಸರ್ಕಾರದ ರಚನೆ ಕೇವಲ ಸ್ಥಳೀಯ ರಾಜಕೀಯ ಹೊಂದಾಣಿಕೆ ಆಗಿರದೆ, ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕಾರ ಮಾಡಿದ ವೇಳೆ ನೆರೆದಿದ್ದ ನಾಯಕರು ರಾಷ್ಟ್ರ ರಾಜಕಾರಣದಲ್ಲಿ ಪರ್ಯಾಯ ಶಕ್ತಿ ಕಟ್ಟುವ ಮಹತ್ತರ ಸುಳಿವು ನೀಡಿದರು.
ಮೇಲ್ನೋಟಕ್ಕೆ ಇದು ಹೊಂದಾಣಿಕೆ. ಆಳಕ್ಕೆ ನೋಡಿದರೆ ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ದಲಿತರನ್ನು ಒಗ್ಗೂಡಿಸಿ ಬಿಜೆಪಿವಿರುದ್ದ ಗಟ್ಟಿಯಾದ ರಾಜಕೀಯ ಸೂತ್ರವನ್ನು ರೂಪಿಸುವ ಯತ್ನವೂ ಆಗಿತ್ತು.

ರಾಜ್ಯದ ಮಟ್ಟಿಗೆ ಇದರ ರೂವಾರಿ ಆಗಿದ್ದ ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಜೆಡಿಎಸ್ ಜೊತೆಗಿನ ಬಿನ್ನಮತವನ್ನು ಪಕ್ಕಕ್ಕೆ ಇರಿಸಿ ಮುಖ್ಯಮಂತ್ರಿ ಪಟ್ಟವನ್ನೆ ಈ ಪಕ್ಷಕ್ಕೆ ಬಿಟ್ಟುಕೊಟ್ಟದ್ದೆ “ಅಹಿಂದ ಮತ ಬ್ಯಾಂಕ್ “ ಗಟ್ಟಿ ಮಾಡುವ ಉದ್ದೇಶದಿಂದ. ಭಾರತೀಯ ಜನತಾ ಪಕ್ಷವನ್ನ ಲಿಂಗಾಯಿತ ಸಮುದಾಯಕ್ಕೆ ಸೀಮಿತಗೊಳಿಸಿ, ಒಕ್ಕಲಿಗರು, ಕುರುಬರು, ಇನ್ನಿತರೆ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರನ್ನು ಒಗ್ಗೂಡಿಸುವ ವಿಶಾಲ ಉದ್ದೇಶ.

ಬಿಜೆಪಿಯ ರಾಷ್ಟ್ರೀಯವಾದಾದ ಕೂಗು ಏನೇ ಇರಲಿ, ಅದನ್ನು ಕೇವಲ ಕೆಲವೇ ವರ್ಗದ ಪಕ್ಷವೆಂದು ಬಿಂಬಿಸಿ, ಇನ್ನುಳಿದ ಸಮುದಾಯಗಳಲ್ಲಿ ರಾಜಕೀಯ ಒಗ್ಗಟ್ಟು ರೂಪಿಸಿ ಹಿಮ್ಮೆಟ್ಟಿಸುವ ತಂತ್ರ. ಕರ್ನಾಟಕದಲ್ಲಿ ಹಿಂದುತ್ವ v/s ಅಹಿಂದತ್ವ ಎಂಬ ಹೆಗ್ಗಳಿಕೆ ಪಡೆದ ಈ ರಾಜಕೀಯ ತಂತ್ರವೇ ಇದೀಗ ರಾಷ್ಟ್ರಮಟ್ಟದಲ್ಲಿ ಮಂಡಲ v/s ಕಮಂಡಲ ಎಂಬ ವಿಶ್ಲೇಷಣೆಗೆ ಕಾರಣವಾಗಿದೆ.

ಉತ್ತರಭಾರತದ ಚುನಾವಣೆಯಲ್ಲಿ ಮೋದಿ ತಮ್ಮ ಪ್ರಾಬಲ್ಯವನ್ನು ಕಳೆದುಕೊಳ್ಳುವ ಭೀತಿಗೆ ಒಳಗಾಗಿರುವುದು ಈ ಮಂಡಲ -. ಕಮಂಡಲ ರಾಜಕೀಯದ ಕಾರಣಕ್ಕೆ.  ಉತ್ತರಪ್ರದೇಶ, ಬಿಹಾರದಲ್ಲಿ ಒಟ್ಟು 120 ಸ್ಥಾನಗಳಿದ್ದು, ಇದರಲ್ಲಿ ಕಳೆದ ಚುನಾವಣೆಯಲ್ಲಿ 104 ಸ್ಥಾನಗಳನ್ನು ಬಿಜೆಪಿ ಬಾಚಿಕೊಂಡಿತ್ತು. ಆದರೆ ಈ ಬಾರಿ ಗಣನೀಯ ಸ್ಥಾನಗಳನ್ನು ಕಳೆದುಕೊಳ್ಳುವುದು ಬಹುತೇಕ ಖಚಿತವಾಗಿದೆ.
ರಾಮನ ನೆಲದಲ್ಲಿ ಧರ್ಮಾಧಾರಿತ “ ಕಮಂಡಲ“ ರಾಜಕಾರಣ ಮೂಲಕ ಹೆಚ್ಚು ಸ್ಥಾನ ಕಸಿಯಬಹುದೆಂಬ ಅವರ ನಂಬಿಕೆಗೆ ಇಲ್ಲಿಯ ಅಹಿಂದ ಶೈಲಿಯ “ಮಂಡಲ“ ರಾಜಕಾರಣ ಕೊಡಲಿ ಪೆಟ್ಟು ಕೊಟ್ಟಿದೆ.

ಅಂದು ರಾಮನ ಅಲೆಯ ವಿರುದ್ದ ಇದೇ ಆಹಿಂದತ್ವದ ಮಂಡಲ ರಾಜಕೀಯ ಸೆಡ್ಡು ಹೊಡೆದಿದ್ದು ಗೊತ್ತೇ ಇದೆ.
“ಮಿಲೆ ಮುಲಾಯಂ ಕಾಂಶೀರಾಂ – ಹವಾಮೆ ಉಡಗಾಯೆ ಜೈಶ್ರೀರಾಂ “ ಎಂಬ ಜನಪ್ರಿಯ ಘೋಷಣೆ ಬಿಜೆಪಿಯ ಮತಾಂಧ ರಾಜಕಾರಣವನ್ನು ಹಿಮ್ಮೆಟ್ಟಿಸಿತ್ತು.  ಆದರೆ ಇಂದು ಮತ್ತೊಮ್ಮೆ ಅಂಥದ್ದೇ ಮಹಾಪ್ರಯೋಗಕ್ಕ ರಂಗ ಸಜ್ಜಾಗಿದ್ದು “ ಲಾತಿ (ಯಾದವ), ಹಾತಿ (ದಲಿತ), ಸಾತ್ಸೌ ಚಯಾಸಿ (786 ಮುಸ್ಲಿಂ) “ ಎಂಬ ಹೊಸ ಘೋಷಣೆ ಕಮಂಡಲ ಸಂಸ್ಕೃತಿ ವಿರುದ್ದ ಮತ್ತೊಂದು ಮಂಡಲ ಹೋರಾಟಕ್ಕೆ ರಾಜಕೀಯ ಭೂಮಿಕೆಯನ್ನು ಅಣಿಗೊಳಿಸಿದೆ.

ದಲಿತರು, ಯಾದವರು, ಮುಸ್ಲಿಮರು ಇತರೆ ಹಿಂದುಳಿದವರು ಒಗ್ಗಟ್ಟಾಗಿ ಬಿಜೆಪಿಯ ಹಿಂದುತ್ವ ಪರಿಕಲ್ಪನೆಗೆ ಎದಿರೇಟು ನೀಡುವ ಈ ಮಹಾತಂತ್ರ ಮೋದಿಯವರನ್ನು ಹೇಗೆ ಬೆಚ್ಚಿ ಬೀಳಿಸಿದೆ ಎಂದರೆ ಬಿಜೆಪಿ ರಾಮನನ್ನೆ ಮರೆತು ಬಿಟ್ಟಿದ್ದೆ. ಉತ್ತರ ಭಾರತದಲ್ಲಿ ರಾಮನ ಹೆಸರೇ ಇಲ್ಲದ ಚುನಾವಣೆ. ಬದಲಿಗೆ ಖುದ್ದು ಪ್ರಧಾನಿ ಮೋದಿ ತಮ್ಮ ವರಸೆ ಬದಲಾಯಿಸಿ ತಾವು ಅತ್ಯಂತ ಹಿಂದುಳಿದ “ ಘಂಚಿ ತೇಲಿ “ ಸಮುದಾಯಕ್ಕೆ ಸೇರಿದವರೆಂದು ಹೇಳಿಕೊಂಡು ಮತಯಾಚನೆ ಮಾಡುವ ಪರಿಸ್ಥಿತಿ ಬಂದಿದೆ.

ಇಲ್ಲಿ ಬಿಜೆಪಿ ಗೊಂದಲದ ಸುಳಿಗೆ ಸಿಲುಕಿದ್ದು, ತೀರಾ ಹಿಂದುಳಿದವರು, ದಲಿತರನ್ನು ಓಲೈಸಲು ಹೊರಟರೆ ಮುಂದುವರೆದ ಕೋಮಿನ ಮತ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಆದ್ದರಿಂದಲೇ ಬಿಹಾರ, ಉತ್ತರಪ್ರದೇಶದ ಹಲವೆಡೆ ಬಿಜೆಪಿ ನಾಯಕರು “ ದೋ ಕೋ ಚೋಡೋ. ಸಬ್ ಕೋ ಜೋಡೋ “ ಅಂದರೆ ದಲಿತರು, ಮುಸ್ಲಿಮರನ್ನು ಬಿಟ್ಟು ಉಳಿದವರು ಒಂದಾಗಿ ಎಂಬ ಹೊಸ ಅಭಿಯಾನ ಆರಂಭಿಸಿದ್ದು, ಹೆಚ್ಚು ಸ್ಥಾನ ಗಿಟ್ಟಿಸಲು ಹತಾಶ ಯತ್ನವನ್ನು ನಡೆಸಿದ್ದಾರೆ.

ಮೊದಲು ನಡೆದ ಮಂಡಲ ಹೋರಾಟದಲ್ಲಿ ಕಾಂಶೀರಾಮ್, ಮುಲಾಯಂ ಒಂದಾಂದಂತೆ, ಇಂದು ನಡೆಯುತ್ತಿರುವ ಕದನದಲ್ಲಿ ಮಾಯಾವತಿ, ಅಖಿಲೇಶ್, ತೇಜಸ್ವಿ ಯಾದವ್ ಸೆಡ್ದು ಹೊಡೆದಿರುವುದು ಕುತೂಹಲಕಾರಿ ಸಂಗತಿಯಾಗಿದೆ. ಭಾರತದ ಉದ್ದಗದ ರಾಜಕಾರಣ ನೋಡಿದಾಗ ಭೌಗೋಳಿಕವಾಗಿ ಬೇರೆ ಬೇರೆ ಇದ್ದರೂ ತಾತ್ವಿಕವಾಗಿ ಕಮಂಡಲ v/s ಮಂಡಲದ ಆಧಾರದಲ್ಲೇ ಹಣಾಹಣಿ ನಡೆದಿದೆ.

ಹರ್ಯಾಣ, ಚೆತ್ತೀಸ್ ಘರ್, ಜಾರ್ಖಂಡ್ ಅಷ್ಟೇ ಅಲ್ಲದೆ ನೆರೆಯ ತಮಿಳುನಾಡು, ಕೇರಳದಲ್ಲಿ ಕೂಡಾ ಬಿಜೆಪಿಯ ರಾಷ್ಟ್ರೀಯವಾದದ ಹಿಂದುತ್ವ ಮತ್ತು ದಲಿತರು, ಅಲ್ಪಸಂಖ್ಯಾತರು, ಇತರೆ ಹಿಂದುಳಿದ ವರ್ಗಗಳ “ಆಹಿಂದತ್ವ“ ನಡುವೆಯೇ ರಾಜಕೀಯ ಜಟಾಪಟಿ ನಡೆದಿದೆ.

ಹೀಗಾಗಿಯೆ ಈ ಚುನಾವಣೆ ಐತಿಹಾಸಿಕ ಆಗಲಿದ್ದು ಈ ಪ್ರಯೋಗದ ಫಲಿತಾಂಶ ಭಾರತದ ಭವಿಷ್ಯದ ಮೇಲೆ ಪರಿಮಾಣ ಬೀರಲಿದೆ.
ಕರ್ನಾಟಕಕ್ಕೂ ಈ ಲೋಕಸಭೆ ಪಲಿತಾಂಶ ಮುಖ್ಯವಾಗಿದ್ದು, ಒಕ್ಕಲಿಗ ಕುರುಬ ಸಮುದಾಯ ಒಗ್ಗಟ್ಟಿನಿಂದ ರಾಜಕೀಯ ಶಕ್ತಿ ಪ್ರದರ್ಶಿಸಿದೆಯೋ? ಇಲ್ಲವೇ ಇದೊಂದು ವಿಫಲ ಯತ್ನವೋ ಎಂಬುದನ್ನು ಕಾದು ನೋಡಬೇಕಿದೆ..

‍ಲೇಖಕರು avadhi

6 May, 2019

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. ashfaq peerzade

    ವಸ್ತುನಿಷ್ಠ ವಿಶ್ಲೇಷಣೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading