
ಡಾ. ಎಚ್ ಎಸ್ ಸತ್ಯನಾರಾಯಣ
ಡಾ. ರಾಜಶೇಖರ ಹಳೇಮನೆಯವರ ಆಹ್ವಾನಕ್ಕೆ ಮಣಿದು ಇವತ್ತು ಉಜಿರೆಯ ಎಸ್.ಡಿ.ಎಂ. ಪದವಿ ಕಾಲೇಜಿನ ಕನ್ನಡ ಸಂಘದ ಉದ್ಘಾಟನೆಗೆಂದು ಹೋಗಿದ್ದೆ. ಕಾರ್ಯಕ್ರಮ ಶುರುವಾಗಲು ಸಾಕಷ್ಟು ಸಮಯವಿದ್ದುದರಿಂದ ಡಾ.ಹಾ.ಮಾ. ನಾಯಕರ ಪುಸ್ತಕಗಳನ್ನು ನೋಡುವ ಅಪೇಕ್ಷೆಯಾಯಿತು.
ಹಾಮಾನಾ ಅವರ ಮನೆಯಲ್ಲಿದ್ದ ಇಪ್ಪತ್ತೇಳು ಸಾವಿರ ಪುಸ್ತಕಗಳನ್ನು ಅವರ ಕಾಲಾನಂತರ ಈ ಕಾಲೇಜಿನ ಗ್ರಂಥಾಲಯಕ್ಕೆ ಯಶೋಧರಮ್ಮನವರು ಕೊಟ್ಟಿದ್ದರು. ಅಷ್ಟು ಪುಸ್ತಕಗಳನ್ನೂ ಪ್ರಕಾರಾನುಸಾರ ವರ್ಗೀಕರಿಸಿ ಜೋಡಿಸಿರುವ ಈ ಕಾಲೇಜಿನ ಗ್ರಂಥಾಲಯದ ಒಂದು ಮಹಡಿಗೆ ಹಾಮಾನಾ ಸಂಶೋಧನಾ ಕೇಂದ್ರವೆಂದು ನಾಮಕರಣ ಮಾಡಿದ್ದಾರೆ.
ಹಾಮಾನಾ ಅವರ ಸುಂದರ ಪಟ, ಅವರು ಬಳಸುತ್ತಿದ್ದ ಟೈಪ್‌ರೈಟರ್ ಕೂಡ ಇಲ್ಲಿದೆ. ಸೃಜನಶೀಲ ಹಾಗೂ ಶಾಸ್ತ್ರ ಸಾಹಿತ್ಯಕ್ಕೆ ಸಂಬಂಧಿಸಿದ ಕನ್ನಡ, ಇಂಗ್ಲಿಷ್ ಪುಸ್ತಕಗಳ ಒಟ್ಟಿಲೇ ಇಲ್ಲಿದೆ. ಯಾರೂ ಬೇಕಾದರೂ ಇಲ್ಲಿ ಕುಳಿತು ಈ ಪುಸ್ತಕಗಳನ್ನು ಓದಬಹುದು. ಮನೆಗೆ ಒಯ್ಯುವ ಅವಕಾಶವಿಲ್ಲ. ನಾನು ಹಾಮಾನಾ ಅವರಿರುವಾಗ ಮೈಸೂರಿನ ಜಯಲಕ್ಷ್ಮೀಪುರಂನ ಗೋಕುಲ ರಸ್ತೆಯಲ್ಲಿದ್ದ ಅವರ ಮನೆ ‘ಗೋಧೂಳಿ’ಯಲ್ಲಿ ಒಂದೆರಡು ಸಲ ಈ ಪುಸ್ತಕಗಳ ರಾಶಿಯನ್ನು ನೋಡಿದ್ದೆ. ಇವತ್ತು ಆ ಎಲ್ಲದರ ನೆನಪು ಮರುಕಳಿಸಿತು.

ಕರೆಂಟ್ ಕೈ ಕೊಟ್ಟ ಕಾರಣ ಸಮಾಧಾನವಾಗುವವರೆಗೂ ನೋಡಲಾಗಲಿಲ್ಲ ಮತ್ತು ಪಕ್ಕದಲ್ಲೇ ಇರುವ ರಂ.ಶ್ರೀ. ಮುಗುಳಿ, ಪ್ರೊ. ಜಿ. ವೆಂಕಟಸುಬ್ಬಯ್ಯ ಅವರು ಕೊಟ್ಟಿರುವ ಪುಸ್ತಕಗಳ ಸಂಗ್ರಹವನ್ನು ನೋಡುವ ಅವಕಾಶವಾಗಲಿಲ್ಲ. ಪದವಿ ಕಾಲೇಜೊಂದರಲ್ಲಿ ಈ ಬಗೆಯ ಗ್ರಂಥ ಸಂಪತ್ತನ್ನು ಕಾಣುವುದೇ ಒಂದು ಸಂತೋಷದ ಸಂಗತಿ.
ಹಾಮಾನಾ ಅವರಿಗೆ ಕುವೆಂಪು, ಬೇಂದ್ರೆ, ಪುತಿನ, ಗೊರೂರು, ರಾಜರತ್ನಂ ಅವರುಗಳೆಲ್ಲ ಹಸ್ತಾಕ್ಷರ ಹಾಕಿ ಕಿಟ್ಟಿರುವ ಪುಸ್ತಕಗಳನ್ನು ಅಲ್ಲಿ ನೋಡಿ ಖುಷಿಯಾಯಿತು. ಸಂದು ಹೋದ ಕಾಲಘಟ್ಟವೊಂದು ಮತ್ತೆ ದರ್ಶನ ಕೊಟ್ಟುಹೋದ ಅನುಭವವಾಯ್ತು.






0 Comments