ವೈ ಕೆ ಸಂಧ್ಯಾಶರ್ಮ
`ಸದಾರಮೆ’ ನಾಟಕದ ಬಗ್ಗೆ ಹಿಂದಿನವರು ಯಾರು ಕೇಳಿಲ್ಲ? ಒಂದು ಶತಮಾನದಷ್ಟು ಹಳೆಯ ನಾಟಕ. 1909ರಲ್ಲಿ ಬೆಳ್ಳಾವೆ ನರಹರಿ ಶಾಸ್ತ್ರಿಗಳಿಂದ ವಿರಚಿತವಾದ `ಸದಾರಮಾ ನಾಟಕಂ’ ಮೂಲತಃ ಗುಬ್ಬೀ ಕಂಪೆನಿಯಲ್ಲಿ ಸಾವಿರಾರು ಪ್ರಯೋಗಗಳನ್ನು ಕಂಡು ನಂತರ ನಟ-ನಾಟಕಕಾರ ಹಿರಣ್ಣಯ್ಯನವರಿಂದ ಮತ್ತೆ ಹಲವಾರು ಪ್ರಯೋಗಗಳನ್ನು ಕಂಡು ಪ್ರಸಿದ್ಧವಾಗಿತ್ತು. ಅನಂತರ ಇದನ್ನು ನೀನಾಸಂ ಸ್ಥಾಪಕ, ಹೆಸರಾಂತ ರಂಗ ನಿದರ್ೇಶಕ ಕೆ.ವಿ.ಸುಬ್ಬಣ್ಣನವರು ಪ್ರಸ್ತುತ ಸನ್ನಿವೇಶಕ್ಕೆ ಬದಲಾಯಿಸಿ `ಮಿಸ್. ಸದಾರಮೆ’ ಎಂದು ಹೆಸರಿಸಿ ಬಿ.ವಿ.ಕಾರಂತರ ನಿರ್ದೇಶನದಲ್ಲಿ ನೀನಾಸಂ ತಿರುಗಾಟದಲ್ಲಿ ನೂರಾರು ಪ್ರದರ್ಶನಗಳನ್ನು ಮಾಡಿಸಿದರು. ಈ ನಾಟಕವು ಕನ್ನಡದಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತದ ಇತರ ಕೆಲವು ಭಾಷೆಗಳಲ್ಲೂ ಪ್ರಯೋಗವಾದ ದಾಖಲೆಗಳಿವೆ. ಈ ಎಲ್ಲ ಸಂಗತಿಗಳು `ಸದಾರಮೆ’ಯ ಜನಪ್ರಿಯತೆಯನ್ನು ಸಾರುತ್ತವೆ.
ಇತ್ತೀಚೆಗೆ `ರಂಗಶಂಕರ’ ದಲ್ಲಿ ಈ ನಾಟಕವು `ಸಮಷ್ಟಿ’ ತಂಡದಿಂದ ಯಶಸ್ವೀ ಪ್ರಯೋಗ ಕಂಡಿತು. ಹಾಸ್ಯವೇ ಜೀವಾಳವಾದ ಸದಾರಮೆ ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದಳೂ ಕೂಡ. ನಾಟಕದ ವಸ್ತು ಸಾರ್ವಕಾಲಿಕವಾಗಿ ಸಲ್ಲುತ್ತಾ ಬಂದಿದೆ. ಆಗಿನ ಕಾಲದಲ್ಲಿ ನಾಟಕ, ಸಂಗೀತ ಮುಂತಾದ ಕಲೆಗಳೇ ಮನರಂಜನೆಯ ಸಾಧನವಾಗಿದ್ದ ಕಾರಣ , `ಸದಾರಮೆ’ಗೂ ಮನರಂಜನೆಗಿಂತ ಹೆಚ್ಚಿನ ಉದ್ದೇಶ ಇದ್ದಂತೆ ತೋರುವುದಿಲ್ಲ. ಅಂದಿನ ಸಾಮಾಜಿಕ ಬದುಕಿನ ಸ್ಥಿತಿ-ಗತಿಗಳ ಚಿತ್ರಣ ಇದರಲ್ಲಿ ದೊರಕಬಹುದಾದರೂ ಜಾನಪದ ಕಥೆಯನ್ನು ಹೋಲುವ ಇದರ ಕಥಾ ಓಟದಲ್ಲಿ ಆಸಕ್ತಿ,ಕುತೂಹಲ, ಸ್ವಾರಸ್ಯಗಳನ್ನು ಉಳಿಸಿಕೊಳ್ಳಲಾಗಿದೆ. ಇಲ್ಲಿ ನಾಯಕನ ಪಾತ್ರಕ್ಕಿಂತ ಎಲ್ಲ ಹಾಸ್ಯ ಪಾತ್ರಗಳೇ. ಪ್ರತಿ ಅಂಕದಲ್ಲೂ ನಗೆ ಹೊನಲು ಹರಿಯುತ್ತದೆ. ನುರಿತ ನಟರು ಪ್ರೇಕ್ಷಕರ ಗಮನವನ್ನು ಹಿಡಿದಿಟ್ಟುಕೊಂಟು ನಗಿಸುತ್ತ ಹೋಗುವುದು ಈ ನಾಟಕದ ವಿಶೇಷ.

`ಸದಾರಮೆ’ ಪಾತ್ರದ ಸುತ್ತ ಭ್ರಮಿಸುವ ವ್ಯಕ್ತಿಗಳು ಸರಾಗವಾಗಿ ಕಥಾ ಎಳೆಯನ್ನು ಕೋಯ್ದುಕೊಂಡು ಹೋಗುವರು. ಇಂದ್ರಾವತಿ ಪಟ್ಟಣದ ರಾಜಕುಮಾರ ವಿವಾಹ, ಸಂಸಾರ, ರಾಜವೈಭೋಗಗಳಲ್ಲಿ ಆಸಕ್ತಿ ತೋರದೆ, ತಂದೆಯ ಆಸೆಯನ್ನು ಭಗ್ನಗೊಳಿಸಿ ಊರ ಹೊರಗಿನ ವನದಲ್ಲಿ ನೆಲೆಸಿರುವಾಗ ಆಕಸ್ಮಿಕವಾಗಿ, ಆ ಊರಿನ ವರ್ತಕ ಬಂಗಾರ ಸೆಟ್ಟಿಯ ಮಗಳಾದ ಚೆಲುವೆ ಸದಾರಮೆಯನ್ನು ಕಂಡು ಅವಳಿಗೆ ಮನಸೋಲುತ್ತಾನೆ. ಅವಳಿಗಾಗಿ ರಾಜ್ಯ-ಕೋಶಗಳನ್ನು ತ್ಯಜಿಸಿ, ಅವಳನ್ನು ಮದುವೆಯಾಗಿ ದೇಶಾಂತರ ಹೊರಟುಹೋಗುವನು. ಯಾರದೇ ಆಸರೆ-ಸಹಾಯಗಳಿಲ್ಲದ ಆ ದಂಪತಿಗಳು ಅನೇಕ ಕಷ್ಟಗಳಿಗೆ ಗುರಿಯಾಗಿ, ಕಡೆಯಲ್ಲಿ ವಿಧಿವೈಚಿತ್ರ್ಯದಿಂದ ಬೇರೆ ಬೇರೆಯೂ ಆಗಿ ದುಃಖಕ್ಕೀಡಾಗುವರು. ಮುಗ್ಧೆಯಾದ ಸದಾರಮೆ ಹಲವಾರು ವಂಚಕರ ಕೈಗೆ ಸಿಲುಕಿದರೂ ತನ್ನ ಸಮಯಪ್ರಜ್ಞೆ, ಬುದ್ಧಿಮತ್ತೆಯಿಂದ ಅವರಿಂದ ಪಾರಾಗಿ ಅಮರಾವತಿಯ ರಾಜಕುಮಾರಿಯ ಬಳಿ ಆಶ್ರಯ ಪಡೆದು, ಕಳೆದುಹೋದ ತನ್ನ ಗಂಡನನ್ನು ಉಪಾಯದಿಂದ ಹುಡುಕುತ್ತಾಳೆ. ಅವಳ ಸಂತಸ ಗರಿಗಟ್ಟುವಷ್ಟರಲ್ಲಿ, ಅವಳ ಬದುಕಿನ ಅಧ್ಯಾಯದಲ್ಲಿ ವಿಪರ್ಯಾಸದ ಘಟನೆಯೊಂದು ಜರುಗಿ, ಅವಳ ಆರಾಧಕ ಪತಿಯ ಚಂಚಲ ನಡೆಯಿಂದ ಆಘಾತಕ್ಕೊಳಗಾಗುತ್ತಾಳೆ. ಅವಳ ಬಾಳನೌಕೆ ಅನಿರೀಕ್ಷಿತವಾದ ತಿರುವೊಂದು ಪಡೆಯುತ್ತದೆ. ಗಂಡನಿಗಾಗಿ ಅವಳು ಪಟ್ಟ ಶ್ರಮ-ಹಂಬಲವೆಲ್ಲ ವ್ಯರ್ಥವಾಗುತ್ತದೆ. ಯಾವ ಒಬ್ಬ ಸುಂದರಿಗಾಗಿ ತನ್ನ ಇಡೀ ರಾಜ್ಯ ವೈಭೋಗ, ಸಂಪತ್ತುಗಳನ್ನೆಲ್ಲ ತ್ಯಾಗ ಮಾಡಿಬಂದಂಥ ಒಬ್ಬ ಅಪ್ಪಟ ಪ್ರೇಮಿ, ಈಗ ಸುಖದ ಕನಸಿಗೆ ಆಂತು , ರಾಜಕುಮಾರಿ ಲೀಲಾವತಿಯ ಸಾಂಗತ್ಯ, ರಾಜ್ಯ ಪಟ್ಟಾಭಿಷೇಕದ ಆಮಿಷಕ್ಕೆ ಬಲಿಯಾಗಿ, ತನ್ನ ಪ್ರಾಣಪ್ರಿಯೆ ಸದಾರಮೆಯನ್ನು ಅಲಕ್ಷಿಸಿಬಿಡುವ ಅವನ ನಿಧರ್ಾರ ಅವಳನ್ನು ಜರ್ಜರಿತಗೊಳಿಸುತ್ತದೆ.
ಈ ಸನ್ನಿವೇಶದಲ್ಲಿ ಅವಳ ಮನಸ್ಸಿನೊಳಗಣ ತಾಕಲಾಟ, ವೇದನೆ, ಚಿಂತನೆಗಳು ಮುಪ್ಪುರಿಗೊಂಡು ಅವಳು ಗಟ್ಟಿಗೊಳ್ಳುತ್ತಾಳೆ. ಅವಳ ಅಂತರಂಗದ ಕಣ್ಣು ತೆರೆಯುತ್ತದೆ. ನಶ್ವರ ಜೀವನದ ಈ ಹುಸಿ ಆಸೆಗಳಿಗೆ ಮನಸ್ಸು ತೆತ್ತ , ತನ್ನ ಗಂಡ ಎನಿಸಿಕೊಂಡ ಹುಲು ಮಾನವನ ಬಗ್ಗೆ ಕನಿಕರಿಸುತ್ತ, ವೈರಾಗ್ಯಮುಖಳಾಗಿ, ನಿತ್ಯ ಸತ್ಯ ಸಖನಾದ ಆ ಮಲ್ಲಿಕಾರ್ಜುನನನ್ನು ಅರಸುತ್ತ ತಂಬೂರಿ ಹಿಡಿದು ಧ್ಯಾನಿಸುತ್ತ ಅಲ್ಲಿಂದ ಹೊರಟೇ ಬಿಡುತ್ತಾಳೆ , ಸದಾರಮೆ. `ಚಿಳಿಮಿಳಿಯಂದೋದುವ ಗಿಳಿಗಳಿರಾ, ನೀವು ಕಾಣಿರೇ, ಮಲ್ಲಿಕಾಜರ್ುನನ ನೀವು ಕಾಣಿರೇ’ ಎಂಬ ಅಕ್ಕ ಮಹಾದೇವಿಯಂತಿನ ಅವಳ ತಪ್ತ ಹೃದಯದ ದನಿ ಪ್ರೇಕ್ಷಕರ ಹೃದಯದಲ್ಲೂ ಮರುಧ್ವನಿಸುತ್ತದೆ. ಗಂಭೀರ ಭಾವದ ಅಲೆ ವೇದಿಕೆಯಿಂದಿಳಿದು, ನೋಡುಗರ ಮಧ್ಯೆ ಅವಳು ಝರಿಯಾಗಿ ಹರಿಯುವಾಗ ಕರುಣಾರಸ ಸ್ರವಿಸಿ ಮನವು ಭಾರವಾಗುವುದು. ನಾಟಕದ ಅಂತಿಮ ಘಟ್ಟದಲ್ಲಿ, ಮೊದಲು ವೈರಾಗ್ಯ ಭಾವದಿಂದ ವೈಭವ ತ್ಯಜಿಸಿ ಬಂದಿದ್ದಂಥ ರಾಜಕುಮಾರ, ಮರಳಿ ಸುಖದ ಸುಪ್ಪತ್ತಿಗೆ ಬಯಸಿ ಅಧಿಕಾರ ಗದ್ದುಗೆ ಹಿಡಿವ ಬದಲಾವಣೆ ಮತ್ತು ಮೊದಲು ತುಂಟತನದಲ್ಲಿ ಮಿಂಚುತ್ತ, ಸುಖವಾಗಿ ಬೆಳೆದಿದ್ದ ಸುಕುಮಾರಿ ಸದಾರಮೆ ಅನಂತರ ಪರಿಸ್ಥಿತಿಯ ವೈಪರಿತ್ಯದಿಂದ ವೈರಾಗ್ಯದ ಮೂರ್ತಿಯಾಗಿ ಪರಿವರ್ತನೆಯಾಗಿ ಹೊರಹೊಮ್ಮುವ ಘಟನೆಗಳು ಪರಿಣಾಮಕಾರಿಯಾಗಿವೆ.

ಮೂಲ ಕಥೆಯಲ್ಲಿನ ಬಹುತೇಕ ಅಂಶಗಳನ್ನು ಉಳಿಸಿಕೊಂಡು, ಕಾಲಕ್ಕನುಗುಣವಾಗಿ ಸನ್ನಿವೇಶಗಳನ್ನು ಸೃಷ್ಟಿಸಿರುವುದು ಉಚಿತವಾಗಿದೆ. ಸದಾರಮೆ ಮನರಂಜಿಸುವುದರಲ್ಲಿ ಅನುಮಾನವಿಲ್ಲ. ಹಾಗೂ ಅಂತ್ಯದಲ್ಲಿ ಮೂಡಿಬಂದಿರುವ ಜಿಜ್ಞಾಸೆ ಇಡೀ ಕಥೆಗೊಂದು ತಿರುವು ನೀಡಿದೆ. ಸನ್ನಿವೇಶದ ಆರ್ದತೆಯನ್ನು ಮನಗಾಣಿಸುವಲ್ಲಿ ಕವಿ ದ.ರಾ. ಬೇಂದ್ರೆಯವರ `ಮೊದಲಗಿತ್ತಿ’ ಯ ಕವನದ ಸಾಲುಗಳನ್ನು ಬಳಸಿಕೊಂಡದ್ದು ನಿರ್ದೇಶಕರ ಪರಿಣತಿಗೆ ಸಾಕ್ಷಿ ನುಡಿಯಿತು. ನೀನಾಸಂ ರಂಗಶಿಕ್ಷಣ ಪಡೆದ ನಿರ್ದೇಶಕ ಮಂಜುನಾಥ ಬಡಿಗೇರ ಅವರ ಮಾರ್ಗದರ್ಶನದಲ್ಲಿ ಪ್ರತಿಯೊಬ್ಬ ನಟರೂ ತಮ್ಮ ನಟನಾ ಚಾತುರ್ಯವನ್ನು ಸಮರ್ಥವಾಗಿ ದುಡಿಸಿಕೊಂಡದ್ದು ದೃಗ್ಗೋಚರವಾಗಿತ್ತು.
`ಸಮಷ್ಟಿ’ ರಂಗತಂಡದ ಸಮಷ್ಟೀ ಪ್ರಯತ್ನ ಎದ್ದು ಕಂಡ `ಮಿಸ್.ಸದಾರಮೆ’ ಹಾಸ್ಯನಾಟಕ ಇಂದಿನ ಯಾಂತ್ರಿಕ ಜೀವನದಲ್ಲಿ ವೀಕ್ಷಣೆಗೆ ಅವಶ್ಯಕ ಎನ್ನಲಡ್ಡಿಯಿಲ್ಲ. ಕಳ್ಳನ ಪಾತ್ರಧಾರಿ (ಪಿ. ಆನಂದ್)ಯ ಆಂಗಿಕ ಅಭಿನಯ, ಮ್ಯಾನರಿಸಂಗಳು ವಿಶಿಷ್ಟವಾಗಿದ್ದು ಗಮನ ಸೆಳೆಯಿತು. ಬಂಗಾರ ಶೆಟ್ಟಿ(ಸಿ. ರಾಘವೇಂದ್ರ ಪ್ರಸಾದ್), ಸಿಪಾಯಿ (ಹರೀಶ್ ರುದ್ರಯ್ಯ) ಮಂತ್ರಿ, ಇಂಗ್ಲೀಷ್ ನಾಯಕ (ಕೆ. ಪರಮೇಶ್ವರ) ಅವನ ಸಹಾಯಕ(ಗಂಗಾಧರ್ ತರೀಕೆರೆ) ಸದಾರಮೆ(ಕೃತಿ ಬಿ. ಶೆಟ್ಟಿ) ಮುಂತಾದವರ ನಟನೆ ಉತ್ತಮವಾಗಿದ್ದವು. ಕಂಪನಿ ನಾಟಕದ ಮಟ್ಟುಗಳು, ಸಂಗೀತ (ಗಜಾನನ ಹೆಗಡೆ) ಕೇಳಲು ಇಂಪಾಗಿದ್ದು ನಾಟಕದ ಪರಿಣಾಮಕ್ಕೆ ಸಾಥ್ ನೀಡಿತ್ತು. ರಂಗಸಜ್ಜಿಕೆ , ಬೆಳಕಿನ ಚಮತ್ಕಾರ( ರವೀಂದ್ರ ಪೂಜಾರಿ) ಗುರುತಿಸುವಂತ್ತಿತ್ತು. ಒಟ್ಟಿನಲ್ಲಿ `ಸದಾರಮೆ’ ಆಪ್ಯಾಯಮಾನವಾಗಿದ್ದಳೆಂದರೆ ಅತಿಶಯೋಕ್ತಿಯಲ್ಲ.






0 Comments