ಹಾರುವ ಹಲ್ಲಿ, ತೇಜಸ್ವಿ ಮತ್ತು ಹಳದಿ ಚಂದಪ್ಪನ ಹೃದಯ

ಮಂಜುನಾಯಕ ಟಿ

ಡಿಗ್ರಿಯಲ್ಲಿ ನಾನು ತೆಗೆದುಕೊಂಡಿದ್ದ ಮೂರು ಐಚ್ಛಿಕ ವಿಷಯಗಳಲ್ಲಿ ಪ್ರಾಣಿಶಾಸ್ತ್ರವೂ ಒಂದು. ಹೆಂಚಿನ ಮಾಡು, ದೊಡ್ಡದೊಡ್ಡ ಗಾಜಿನ ಕಿಟಕಿ, ವಿಶಾಲವಾದ ಪ್ರಾಂಗಣ ಹಾಗೂ ಗತಕಾಲದ ನೆನಪನ್ನು ಸೂಸುವ ಕಂದು ಕಟ್ಟಿಗೆಯ ಅಲಮಾರ ಟೇಬಲ್ಲುಗಳಿದ್ದ, ಬ್ರಿಟೀಷರು ಕಟ್ಟಿಸಿ ಬಿಟ್ಟು ಹೋದ ಯುರೋಪಿಯನ್ ವಾಸ್ತು ಶೈಲಿಯ ದೊಡ್ಡ ಕೊಠಡಿಯೊಂದು ನಮಗೆ ಪ್ರಾಣಿಶಾಸ್ತ್ರದ ಪ್ರಯೋಗಾಲಯವಾಗಿತ್ತು! ಎಂದೋ ಸತ್ತು ಇನ್ನೂ ಸಂಸ್ಕಾರಕ್ಕೊಳಗಾಗದೆ ಬೇಜಾರಿನಲ್ಲಿರುವ ತರಹೇವಾರಿ ಮೀನು, ಕಪ್ಪೆ , ಕೀಟ, ಹಾವು, ಹಲ್ಲಿ ಇತ್ಯಾದಿಗಳು ಅಲ್ಲಿನ ಮುಖ್ಯ ಆಕರ್ಷಣೆ. ಅವುಗಳ ಪ್ರಾರಬ್ಧಕ್ಕೆ ಹೊಟ್ಟೆ ತೊಳೆಸುವ ವಾಸನೆಯ ಫಾಮರ್ಾಲಿನ್ ದ್ರಾವಣದ ಬಾಟಲಿಗಳಲ್ಲಿ ಮೂಗು ಮುಚ್ಚಿಕೊಳ್ಳದೆ ಬಂಧಿಯಾಗಿದ್ದವು. ಕೆಲವು ಪಕ್ಷಿಗಳು ಮತ್ತು ಸಸ್ತನಿಗಳು ಸೌಗಂಧಯುತ ಫಾಮರ್ಾಲಿನ್ ದ್ರಾವಣದಲ್ಲಿ ತೇಲುವ ಶಿಕ್ಷೆಯಿಂದ ವಂಚಿತರಾಗಿದ್ದವು. ಆದರೆ, ಅವು ಟ್ಯಾಕ್ಸಿಡರ್ಮಸ್ಟಗಳ ಕೈಗೆ ಸಿಕ್ಕಿ ಹೊಟ್ಟೆಯೊಳಗೆಲ್ಲ ಹತ್ತಿ ತುಂಬಿಸಿಕೊಂಡು ಗಡದ್ದು ಊಟವಾದವರಂತೆ ಪೋಸು ಕೊಡುತ್ತಿದ್ದವು. ಮೊದಲೇ ಹೇಳಿದಂತೆ ಗತಕಾಲದ ನೆನಪನ್ನು ಸೂಸುವ, ಯಾವುದೋ ಹಳೆಯ ಕಾಲದ ಟ್ರೇನೊಂದರ ಸದ್ದನ್ನು ಕೇಳಿಸುವ ಕಂದು ಕಟ್ಟಿಗೆಯ ಅಲಮಾರಗಳಲ್ಲಿ ಪ್ರಯೋಗಗಳಿಗೆ ಅವಶ್ಯವಾದ ಜೀವ ಜಂತುಗಳನ್ನೆಲ್ಲ ಕಾಪಿಟ್ಟಿರುತ್ತಿದ್ದರು. ಲ್ಯಾಬ್ ಅಟೆಂಡರ್ ನಾಗಪ್ಪ ಅಂಕಲ್ ಅವತ್ತಿನ ಪ್ರಯೋಗಕ್ಕೆ ಬೇಕಾದವುಗಳನ್ನೆಲ್ಲ ಆರಿಸಿ ತಂದು ಉದ್ದಕ್ಕೆ ಮಲಗಿರುತ್ತಿದ್ದ ಟೇಬಲ್ಲುಗಳ ಮೇಲಿಡುತ್ತಿದ್ದರು. ನಾವು ಅವುಗಳನ್ನು ಗಮನಿಸಿ ಅಧ್ಯಯನ ಮಾಡುವುದು ಬಿಟ್ಟು ಅವುಗಳೊಂದಿಗೆ ತಮಾಷೆ ಮಾಡಿದ್ದೇ ಹೆಚ್ಚು. ಬರೀ ಸತ್ತ ಪ್ರಾಣಿಗಳಿಂದ ತುಂಬಿಕೊಂಡಿದ್ದರೂ ಮತ್ತೆಲ್ಲೂ ಕಾಣಸಿಗದಂಥ ಅರ್ಥವಾಗದ ಜೀವಂತಿಕೆಯೊಂದು ಆ ಜಾಗದಲ್ಲಿ ಚಾಲ್ತಿಯಲ್ಲಿತ್ತು. ‘ಹೊತ್ತು ಹೋಗುವುದೆನಗೆ ಸತ್ತವರ ಸಂಗದಲಿ’ ಎಂಬ ಬಿ.ಎಂ.ಶ್ರೀ ಅವರ ಮಾತನ್ನು ಇಲ್ಲಿ ಅನ್ವಯಿಸಬಹುದೇನೋ?!
ತೇಜಸ್ವಿಯ ಕರ್ವಾಲೋ ಕಾದಂಬರಿಯಲ್ಲಿ ಬರುವ ಹಾರುವ ಹಲ್ಲಿಯನ್ನು ಪ್ರಯೋಗಾಲಯದಲ್ಲಿ ನೋಡಿದಾಗ ಆದ ಪುಳಕ ಅಷ್ಟಿಷ್ಟಲ್ಲ! ಕಾದಂಬರಿಯಲ್ಲಿ ಸಿಕ್ಕಾಪಟ್ಟೆ ಸತಾಯಿಸಿ ಕೊನೆಗೂ ಕೈಗೆ ಸಿಗದೆ ಪ್ರಪಾತಕ್ಕೆ ನೆಗೆದು ಪರಾರಿಯಾಗುವ ಪಟಿಂಗ ಹಾರುವ ಹಲ್ಲಿ ಸಿಕ್ಕಷ್ಟೇ ಅಂದು ಖುಷಿಯಾಗಿತ್ತು. ಆ ಕಾದಂಬರಿಗೆ ಮತ್ತೊಂದು ಕ್ಲೈಮ್ಯಾಕ್ಸ್ ಕರ್ನಾಟಕ ಕಾಲೇಜಿನ ಪ್ರಾಣಿಶಾಸ್ತ್ರ ಪ್ರಯೋಗಾಲಯದಲ್ಲಿ ಸಿಕ್ಕಿಬಿಟ್ಟಿತ್ತು. ಪಾರದರ್ಶಕ ಪ್ಲಾಸ್ಟಿಕ್ಕು ಹಾಳೆಯಂಥ ರೆಕ್ಕೆಗಳಿದ್ದ ಆ ಹಲ್ಲಿಯನ್ನು ಎಲ್ಲಿಂದ ಹಿಡಿದುಕೊಂಡು ಬಂದಿದ್ದರೋ? ಆ ರೆಕ್ಕೆಗಳಿಗೆ ಪೆಟಾಜಿಯಮ್ ಅಂತೇನೋ ಹೆಸರು. ಹಲ್ಲಿಗೆ ಆ ರೆಕ್ಕೆಗಳು ಹಕ್ಕಿಗಳಂತೆ ಹಾರಲು ಸಹಾಯಕವಾಗದಿದ್ದರೂ ಮರದಿಂದ ಮರಕ್ಕೆ ಜಿಗಿಯಲು ಅನುವಾಗುವಂತೆ ರೂಪುಗೊಂಡಿವೆ. ಹಾಗಾಗಿ ಅದಕ್ಕೆ ಹಾರುವ ಹಲ್ಲಿ ಅನ್ನುವ ಬದಲು ‘ಜಿಗಿಯುವ ಹಲ್ಲಿ’ ಅಂದರೆ ಅಂಥ ಪ್ರಮಾದವೇನೂ ಆಗುವುದಿಲ್ಲವೆನ್ನಿಸುತ್ತೆ. ಅವತ್ತು ‘ಅರ್ಧ ಅಂಗೈಗೆ ಚೂರು ಜಾಸ್ತಿಯಾಗುವಷ್ಟು ಉದ್ದಕಿರುವ ಈ ಜೀವಿಯನ್ನಿಟ್ಟುಕೊಂಡು ಅದೆಂಥ ಕೃತಿಯನ್ನು ಬರೆದಿದ್ದಾನಲ್ಲ ಈ ಮನುಷ್ಯ’ ಅಂತನ್ನಿಸಿ ಕೃತಿಕಾರನ ಕುರಿತು ಅಚ್ಚರಿಯೆನಿಸಿತ್ತು. ಹಾಗೆ ನೋಡಿದರೆ ನನ್ನಲ್ಲಿ ವಿಕಾಸವಾದದ ಮತ್ತು ಪ್ರಾಣಿಶಾಸ್ತ್ರದ ಕುರಿತು ತಕ್ಕ ಮಟ್ಟಿಗೆ ಆಸಕ್ತಿ ಬಂದದ್ದೇ ಅವರ ದೆಸೆಯಿಂದ.

ಹಾರುವ ಹಲ್ಲಿಯನ್ನು ನೋಡಿ ಪುಳಕಗೊಂಡಿದ್ದೋನಿಗೆ ಐದನೇ ಸೆಮಿಸ್ಟರಿನಲ್ಲಿ ಮತ್ತೊಂದು ಅದ್ಭುತ ಅನುಭವ ಕಾದಿತ್ತು. ಅವತ್ತಿನ ಪ್ರಾಕ್ಟಿಕಲ್ಲನ್ನು ರೀನಾ ಮೇಡಂ ತೆಗೆದುಕೊಂಡಿದ್ದರು. ಅದು ಕೋಳಿ ಭ್ರೂಣದ ವಯಸ್ಸನ್ನು ಕಂಡುಹಿಡಿಯುವುದು; ಅದೂ ಗಂಟೆಗಳ ಲೆಕ್ಕದಲ್ಲಿ. ಅದಕ್ಕಾಗಿ ಮೊಟ್ಟೆಯನ್ನು ಒಡೆದು ನೀರಿನ ಬಟ್ಟಲಲ್ಲಿ ಹಾಕಿ ಹಳದಿ ಭಾಗದ ನಡುವಲ್ಲಿ ಚೂರು ಚೂರು ಕೆಂಪು ಗೆರೆಗಳೆಳೆದಂತಿರುವ ಜಾಗದ ಪದರನ್ನು ಕತ್ತರಿಸಿಕೊಂಡು ಸ್ಲೈಡಿನ ಮೇಲಿಟ್ಟು ಯಾವ್ಯಾವುದೋ ರಾಸಾಯನಿಕಗಳ ಅಭಿಷೇಕ ಮಾಡಿ ಆಮೇಲೆ ಕವರ್ ಸ್ಲಿಪ್ನಿಂದ ಮುಚ್ಚಿ ನಂತರ ಮೈಕ್ರೋಸ್ಕೋಪ್ನಲ್ಲಿಟ್ಟು ಗಮನಿಸಬೇಕಿತ್ತು. ಅದರಲ್ಲಿ ಕಾಣುವ ಚಿತ್ರದ ಸಹಾಯದಿಂದ ಕೋಳಿ ಭ್ರೂಣದ ವಯಸ್ಸನ್ನು ನಿರ್ಧರಿಸಬಹುದು.
ಅವತ್ತು ತತ್ತಿಯ ತೊಗಟೆಯನ್ನು ಕತ್ತರಿಸುತ್ತಿದ್ದ ಮೇಡಂರ ಸುತ್ತ ಎಲ್ಲರೂ ಸೇರಿದ್ದೆವು. ಕತ್ತರಿಸಿಯಾದ ಮೇಲೆ ಮೇಡಂ ಅದನ್ನು ಬಟ್ಟಲಿಗೆ ಹಾಕಿ ಸ್ವಲ್ಪ ಹೊತ್ತು ಅದರೊಳಗೆ ಏನನ್ನೋ ಹುಡುಕುವವರಂತೆ ನೋಡಿ ‘ಇಲ್ಲಿ ನೋಡಿ ಹಾರ್ಟ್ ಬೀಟಾಗ್ತಿರೋದು ಕಾಣಿಸ್ತಿದೆ’ ಅಂತ ಫೋರಸೆಪ್ನ ತುದಿಯನ್ನು ಅದರ ಸಮೀಪಕ್ಕೆ ಒಯ್ದರು. ಮೊದಲು ನನಗೆ ಅಲ್ಲಿ ಅಂಥ ವಿಶೇಷವೇನೂ ಕಾಣಿಸಲಿಲ್ಲ. ಒಂದಿಪ್ಪತ್ತು ಮೂವತ್ತು ಕ್ಷಣಗಳ ದಿಟ್ಟಿಸುವಿಕೆಯ ನಂತರ ಆ ಹಳದಿ ಚಂದಪ್ಪನ ಮಧ್ಯದಲ್ಲೆಲ್ಲೋ ಸಣ್ಣಗೆ ಏನೋ ಮಿಡಿಯುತ್ತಿರುವುದು ಕಾಣಿಸಿತು. ಒಂದು ಕ್ಷಣ ಎಲ್ಲಾ ಮರೆತು ‘ಅಲಾ ಇವ್ನ..’ ಅನ್ನಬೇಕೆನಿಸುವಷ್ಟು ಅಚ್ಚರಿಯಾಗಿತ್ತು ಜೀವಕ್ಕೆ. ಒಲೆ ಮೇಲಿಟ್ಟ ತವೆ ಮೇಲೆ ಹಾಕಿದರೆ ಆಮ್ಲೆಟ್ ಆಗಿಬಿಡುವ ಅರಿಷಿಣ ಬಣ್ಣದ ಗೋಲವೊಂದರ ನಡುವಲ್ಲಿ ಸಣ್ಣಗೆ ಮಿಡಿಯುವ ಹೃದಯವಿರುತ್ತೆ ಅನ್ನುವ ಸಂಗತಿಯೇ ಆ ಅಚ್ಚರಿಗೆ ಕಾರಣವಾಗಿತ್ತು. ಮಿಡಿಯುತ್ತಿರೋ ಹಸಿಹಸಿ ಹೃದಯಾನ ನೋಡಿದ್ದು ಹೆಸರಿಡಲಿಕ್ಕಾಗದ್ಯಾವುದೋ ಬಗೆಯ ಖುಷಿಯ ನೀಡಿತ್ತು. ಇಷ್ಟು ಪುಟ್ಟಕಿರುವ, ನೋಡುತ್ತಿದ್ದರೆ ಅನಿರ್ವಚನೀಯ ಅನುಭವ ನೀಡುವ ಹೃದಯವಿರುವ ಬ್ರೂಣವೊಂದು ಬೆಳೆದು ದೊಡ್ಡದಾಗಿ ಕೊಕ್ಕೊಕೋ ಅನ್ನುವ ಕೋಳಿಯಾಗಿ ನಮ್ಮೂರ ಕೋಳಿಸಾಬಣ್ಣನ ಕೈಗೆ ಸಿಕ್ಕಿ ಕಚಕಚ ಕತ್ತರಿಸಲ್ಪಟ್ಟು ಯಾರದೋ ಮನೆಯ ಬುಧವಾರದ ಊಟಕ್ಕೆ ಬಲಿಯಾಗುವ ಸಂಗತಿಗೆ ಏನನ್ನಬೇಕೋ? ನಮ್ಮ ಈ ಪ್ರಯೋಗಕ್ಕೆ ಜವಾರಿ ಮೊಟ್ಟೆಗಳನ್ನು ಎಲ್ಲಿಂದಲೋ ತರುತ್ತಿದ್ದ ನಜೀರ್ ಬಯ್ಯಾನನ್ನೇ ಕೇಳಬೇಕು.
ನಮ್ಮ ಹೃದಯವೂ ಮೊದಮೊದಲು ಅಷ್ಟೇ ಇರುತ್ತದಾ? ಹಾಗೆ ನೋಡಿದರೆ ಅರ್ಧ ಕ್ವಿಂಟಾಲಿಗೂ ಮಿಕ್ಕಿದ ಮಾಂಸದ ಮೂಟೆಯಾಗಿರುವ ನಾವೂ ಕೂಡ ಹಿಂದೊಂದು ದಿನ ಇಷ್ಟೇ ಪುಟ್ಟಕಿದ್ದ ದ್ರವ್ಯವಾಗಿದ್ದವರು. ಫರ್ಟಿಲೈಜೇಷನ್ ಅಥವಾ ಅಂಡಾಣು ವೀರ್ಯಾಣುಗಳ ಸಮ್ಮಿಲನವಾದ ಇಪ್ಪತ್ತೆರಡನೇ ದಿನಕ್ಕೆ ಮಾನವ ಭ್ರೂಣದ ಹೃದಯ ಹುಟ್ಟಿಕೊಂಡಿರುತ್ತದಂತೆ. ಅಂದರೆ ತಾಯಿಗೆ ತಾನು ಗರ್ಭಿಣಿಯಾಗಿದ್ದೇನೆ ಅಂತ ಗೊತ್ತಾವುದಕ್ಕೆ ತೀರಾ ಮುಂಚೆ! ಸೃಷ್ಟಿ ನಿಜಕ್ಕೂ ವಿಸ್ಮಯ.

‍ಲೇಖಕರು G

May 5, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. Aravind

    Nice use of language. This boy is quite promising in his writeup. Good job manjunayak.

    ಪ್ರತಿಕ್ರಿಯೆ
  2. Praveen V Savadi

    ವಿಜ್ಞಾನವನ್ನ ಸಾಹಿತ್ಯದಲ್ಲಿ ಅಳವಡಿಸಿದ ಸುಂದರವಾದ ಬರಹ.. ತೇಜಸ್ವಿ ಯವರ ಬರಹದ ಹಾಗೆ ವಿಷಯ ಮತ್ತು ಸಾಹಿತ್ಯ ವೊಂದಕ್ಕೊಂದು ಪೈಪೊಟಿಯಾಗಿವೆ. ಇನ್ನೂ ಹೆಚ್ಚು ಹೆಚ್ಚು ಲೇಖನಗಳು ನಿಮ್ಮಿಂದ ಮೂಡಿಬರಲಿ

    ಪ್ರತಿಕ್ರಿಯೆ
  3. ಬಂದೇಸಾಬ ಮೇಗೇರಿ

    ನಿಮ್ಮ ಲೇಖನ ತುಂಬಾ ಚೆನ್ನಾಗಿದೆ, ನೀವು ಬಳಸಿರುವ ಶಬ್ಧ ಭಂಡಾರವೂ ಅಷ್ಟೇ…..ಚಂದ ಇದೆ ಸರ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: