ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಾಡ್ಲಹಳ್ಳಿ ನಾಗರಾಜ್ ಅಂಕಣ – ಶ್ರಮದಾನ…

ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.

ಬಿ.ಎಸ್ಸಿ ಪದವೀಧರರಾಗಿದ್ದು, ಎನ್.ಸಿ.ಸಿ ಇಲಾಖೆಯಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಅವರ ಕಾರ್ಯ ವೈಖರಿಯಿಂದಾಗಿ ಮುಖ್ಯಮಂತ್ರಿಗಳ ಶ್ಲಾಘನಾ ಪತ್ರಕ್ಕೆ ಪಾತ್ರರಾಗಿದ್ದಾರೆ. ಗೆಜೆಟೆಡ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಪ್ರಸ್ತುತ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.

ದೇವರಬೆಟ್ಟ, ಗುದ್ದಿನಿಂದ ತೆಗೆದ ಹೆಣ, ನಕ್ರ ಹಾಗೂ ನಾನು, ಕುಂಭದ್ರೋಣ (ಕತಾಸಂಕಲನಗಳು), ಬಾಡಿಗೆಬಂಟರು, ಬಿಂಗಾರೆಕಲ್ಲು, ಬೆಂಕಿಯಸುಳಿ, ಗೃಹ ಪುರಾಣ, ಕಡವೆಬೇಟೆ, ನಿಲುವಂಗಿಯ ಕನಸು ಕಾದಂಬರಿಗಳು ಪ್ರಕಟವಾಗಿವೆ.

‘ಕಾಡುಹಕ್ಕಿಯ ಹಾದಿನೋಟ’ ಎಂಬ ಆತ್ಮಕಥನ ಸ್ವರೂಪದ ಪ್ರಬಂಧ ಸಂಕಲನವಾಗಿದೆ. ಸುಮಾರು ನಾಲ್ಕು ದಶಕಗಳಿಂದಲೂ ಮಿತ್ರರೊಡಗೂಡಿ ಹಾಸನದಲ್ಲಿ ಹೊಯ್ಸಳ ಕಲಾ ಸಂಘ ಎಂಬ ಸಾಂಸ್ಕ್ರತಿಕ ಸಂಘಟನೆ ನಡೆಸುತ್ತಿದ್ದು, ಸಾಹಿತ್ಯಿಕ ಚಟುವಟಿಕೆ, ನಾಟಕ ಹಾಗೂ ಜನಪದ ಗೀತ ಗಾಯನ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಸಾಹಿತ್ಯ ಪ್ರಕಾರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಕೊಡಮಾಡುವ ಕಿರಂ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಸಿದ್ದಗಂಗಾ ಮಠ ಅನ್ನ ದಾಸೋಹ, ಅಕ್ಷರ ದಾಸೋಹ ಮುಖೇನ ವಿದ್ಯಾದಾನಕ್ಕೆ ಕಾರಣವಾಗಿ ನಾಡಿನ ಲಕ್ಷಾಂತರ ಬಡ ವಿದ್ಯಾರ್ಥಿಗಳ ಬದುಕಿನಲ್ಲಿ ಬೆಳಕು ಮೂಡಿಸಿದೆ.

ವಿದ್ಯೆಯಿಂದ ವಂಚಿತರಾಗಿ ಎಲ್ಲೋ ಮೂಲೆ ಗುಂಪಾಗಬೇಕಾಗಿದ್ದ ಬಡ ಗ್ರಾಮೀಣ ಮಕ್ಕಳು ಮಠದ ಮಡಿಲಿಗೆ ಬಿದ್ದ ಕಾರಣ ಸಮಾಜದ ಹಲವಾರು ರಂಗಗಳಲ್ಲಿ ತಮ್ಮ ಪ್ರತಿಭೆ ಮೆರೆಯಲು ಸಾಧ್ಯವಾಗಿದೆ. ಅಲ್ಲಿ ವಿದ್ಯೆ ಕಲಿತು ಹೋದವರು ಸಾಹಿತಿಗಳಾಗಿದ್ದಾರೆ, ಶಿಕ್ಷಣ ತಜ್ಙರಾಗಿದ್ದಾರೆ, ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದಾರೆ, ಐ ಎ ಎಸ್, ಐ ಪಿ ಎಸ್ ಅಧಿಕಾರಿಗಳಾಗಿದ್ದಾರೆ, ನಾಟಕ, ಸಿನಿಮಾರಂಗಗಳಲ್ಲಿ ಮಿಂಚಿದ್ದಾರೆ.

ಹೀಗೆ ಮಠದ ಅನ್ನ ದಾಸೋಹ, ಅಕ್ಷರ ದಾಸೋಹಗಳು ಲಕ್ಷಾಂತರ ಬಡಮಕ್ಕಳ ಬದುಕಿನಲ್ಲಿ ‘ದಾಟು ಹಲಗೆ’ಯಾಗಿ ಪರಿಣಮಿಸಿದೆ. ಈ ಶ್ರೀ ಮಠದಲ್ಲಿ ವಿದ್ಯಾರ್ಜನೆ ಮಾಡಿ ಬದುಕು ರೂಪಿಸಿಕೊಂಡ ಹಾಡ್ಲಹಳ್ಳಿ ನಾಗರಾಜ್ ಕತೆಗಾರರಾಗಿಯೂ, ಕಾದಂಬರಿಕಾರರಾಗಿಯೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ.

ಸಿದ್ದಗಂಗೆಯಲ್ಲಿನ ಅವರ ಅನುಭವ ಕಥನಗಳನ್ನು ಇಲ್ಲಿ ನಿರೂಪಿಸಿದ್ದಾರೆ.

6

ಆಗ ಮಠದಲ್ಲಿ ಮೂರು ಸಾವಿರಕ್ಕಿಂತಲೂ ಹೆಚ್ಚು ಹುಡುಗರಿದ್ದರೂ ಅವರನ್ನೆಲ್ಲ ಹಳೆಯ ಕಟ್ಟಡಗಳಲ್ಲೇ ʼಗಿಜಗುಡುವಂತೆʼ ತುಂಬುವ ವಿಧಿಯಿಲ್ಲದ ಸಂದರ್ಭ. ಮಠಕ್ಕೆ ಸೇರುವ ಬಡ ವಿದ್ಯಾರ್ಥಿಗಳ ಬೇಡಿಕೆಯಂತೂ ವರ್ಷ ವರ್ಷವೂ ಏರುತ್ತಲೇ ಇತ್ತು. ಪ್ರತಿ ವರ್ಷವೂ ಅವಕಾಶ ಬೇಡಿ ಬಂದ ಅರ್ಧದಷ್ಟು ವಿದ್ಯಾರ್ಥಿಗಳಿಗೆ ನಿರಾಸೆ ಮಾಡಿ ಹಿಂತಿರುಗಿಸುವ ಅನಿವಾರ್ಯ ಸ್ಥಿತಿ ಸ್ವಾಮಿಗಳ ಮನಸ್ಸಿಗೆ ಬೇಸರ ತರಿಸುತ್ತಿತ್ತು.

ಇನ್ನು ಕೆಲ ವರ್ಷ ಕಳೆಯುವದರ ಒಳಗೆ ಎಂಟು ಹತ್ತು ಸಾವಿರ ವಿದ್ಯಾರ್ಥಿಗಳಿಗೆ ಮಠದಲ್ಲಿ ಅನ್ನದಾಸೋಹ, ವಿದ್ಯಾದಾಸೋಹ ನಡೆಯುವಂತಾಗಬೇಕು ಎಂದು ಶ್ರೀ ಶಿವಕುಮಾರ ಸ್ವಾಮಿಗಳು ಯೋಜನೆ ರೂಪಿಸಿಕೊಂಡಿದ್ದರು.

ಅಷ್ಟು ಹುಡುಗರ ನೆಲೆಗೆ ವಸತಿ ನಿಲಯಗಳು, ಭೋಜನ ಶಾಲೆಗಳು, ಪಾಕಶಾಲೆಗಳು, ಶೌಚ ಸ್ಥಳಗಳು ಬೇಕಲ್ಲ. ಅದಕ್ಕೆಲ್ಲಾ ನೀಲ ನಕ್ಷೆ ತಯಾರಾಗಿತ್ತು.

ಕಲ್ಲಿನಲ್ಲೇ ಕಟ್ಟಲು ಯೋಚಿಸಿದ್ದ ಆ ಕಟ್ಟಡಗಳ ನಿರ್ಮಾಣಕ್ಕೆ ಕಲ್ಲುಗಳು ಬೇಕಲ್ಲ. ಕಲ್ಲಿನ ಬೆಟ್ಟದ ಬುಡದಲ್ಲೇ ಮಠ ನಿರ್ಮಾಣವಾಗಿದ್ದುದರಿಂದ ಅದಕ್ಕೇನು ಕೊರತೆ! ವಡ್ಡರ ಹಲವಾರು ಕುಟುಂಬಗಳು ಬೆಟ್ಟದ ಬುಡದಲ್ಲಿ ಕಲ್ಲು ಒಡೆದು ಸೈಜುಗಲ್ಲು ಮಾಡುವ ಕೆಲಸದಲ್ಲಿ ನಿರತವಾಗಿದ್ದವು.

ಅವುಗಳನ್ನು ಕಟ್ಟಡಗಳನ್ನು ಕಟ್ಟಲು ನಿಯೋಜಿಸಲಾಗಿದ್ದ ಸ್ಥಳಗಳಿಗೆ ಹೊತ್ತು ಸಾಗಿಸುವುದು ಶ್ರಮದಾನದ ಒಂದು ಭಾಗ. ಜಯನಿಲಯದಲ್ಲಿ ವಾಸವಿದ್ದ, ತುಮಕೂರು ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿಗಳ ಜೊತೆಗೆ ಮಠದಲ್ಲೇ ಹನ್ನೊಂದನೇ ತರಗತಿ ಓದುತ್ತಿದ್ದ ನಾವೂ ಈ ಶ್ರಮದಾನದ ಕೆಲಸದಲ್ಲಿ ಭಾಗವಹಿಸಬೇಕಾಗುತ್ತಿತ್ತು. ಎಸೆಸೆಲ್ಸಿವರೆಗಿನ ವಿದ್ಯಾರ್ಥಿಗಳಿಗೆ ಮಠದ ಹೊಲಗಳಲ್ಲಿ ಕಳೆ ಕೀಳುವುದು, ಮಠದ ಆವರಣ ಶುಚಿಗೊಳಿಸುವುದು ಇಂತಹ ಹಗುರವಾದ ಕೆಲಸಗಳು.

ಶ್ರಮದಾನದ ಅವಧಿ ಮೂರು ಗಂಟೆ. ಆ ಅವಧಿಯಲ್ಲಿ ನಾವು ಪ್ರತಿಯೊಬ್ಬರೂ ಅರ್ಧ ಕಿಲೋ ಮೀಟರ್‌ ದೂರದ ಬೆಟ್ಟದ ಬುಡದಿಂದ ಹತ್ತು ಹತ್ತು ಸೈಜುಗಲ್ಲುಗಳನ್ನು ಹೊತ್ತು ಸಾಗಿಸಬೇಕಾಗಿತ್ತು. ಯಾರೂ ಕೆಲಸ ಕದಿಯುವಂತಿರಲಿಲ್ಲ. ಎಷ್ಟು ಕಲ್ಲು ಹೊತ್ತುಕೊಂಡು ಹೋಗಿದ್ದಾರೆ ಎಂದು ಲೆಕ್ಕ ಬರೆದುಕೊಳ್ಳಲು ಬಂಡೆಯ ಬಳಿ ಒಬ್ಬ ವಿದ್ಯಾರ್ಥಿ, ಸ್ಥಳಕ್ಕೆ ಎಷ್ಟು ಕಲ್ಲು ತಲುಪಿಸಿದ್ದಾರೆ ಎಂದು ಗುರುತು ಹಾಕಿಕೊಳ್ಳಲು ಮಠದ ಬಳಿ ಒಬ್ಬ ವಿದ್ಯಾರ್ಥಿ ನಿಯೋಜಿತರಾಗಿರುತ್ತಿದ್ದರು. ಜತೆಗೆ ಇದೆಲ್ಲಾ ಕೆಲಸ ವ್ಯವಸ್ಥಿತವಾಗಿ ನಡೆಯುವಂತೆ ನೋಡಿಕೊಳ್ಳಲು ಒಂದೊಂದು ಬಂಡೆಯ ಬಳಿಯೂ ಒಬ್ಬೊಬ್ಬ ಅಧ್ಯಾಪಕರು ನಿಯೋಜಿತರಾಗಿರುತ್ತಿದ್ದರು.

ಮಠದ ಆವರಣದಲ್ಲಿ ಬಿಡುವಿನ ವೇಳೆ ತಿರುಗಾಡುತ್ತ ಎಲ್ಲಾ ಆಗು ಹೋಗುಗಳ ಬಗ್ಗೆ ಗಮನವಿಟ್ಟಿರುತ್ತಿದ್ದ ಸ್ವಾಮೀಜಿಗಳು ಕಲ್ಲು ಬಂಡೆಯ ಕಡೆಗೂ ಬರುತ್ತಿದ್ದರು. ಹಾಗಾಗಿ ಮಠದ ಆವರಣದಲ್ಲಿ ಯಾವುದೇ ವಿದ್ಯಾರ್ಥಿಯೂ ಅನಾವಶ್ಯಕವಾಗಿ ಅಲೆದು ಅಶಿಸ್ತು ಪ್ರದರ್ಶಿಸಲು ಸಾಧ್ಯವಿರುತ್ತಿರಲಿಲ್ಲ.

ಮಹಾನ್‌ ತತ್ವಜ್ಞಾನಿಯಾಗಿದ್ದ ಅವರು ಇಂಗ್ಲಿಷ್‌ ಹಾಗೂ ಸಂಸ್ಕೃತ ಸಾಹಿತ್ಯದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದರು. ಸಾಮೂಹಿಕ ಪ್ರಾರ್ಥನೆಯ ವೇಳೆ ಅವರು ಯಾವುದೇ ಗ್ರಂಥದ ನೆರವಿಲ್ಲದೇ ಭಗವದ್ಗೀತೆಯ ಶ್ಲೋಕಗಳನ್ನು ಬೋಧಿಸುತ್ತಿದ್ದುದು ನಮಗೆಲ್ಲಾ ಅಚ್ಚರಿ ಮೂಡಿಸುತ್ತಿತ್ತು.

ವಯಸ್ಸು ಎಪ್ಪತ್ತರ ಆಸುಪಾಸಿನಲ್ಲಿದ್ದರೂ ಅವರ ಅಗಾಧ ಜ್ಞಾಪಕಶಕ್ತಿಗೆ ಎಲ್ಲರೂ ಬೆರಗಾಗುತ್ತಿದ್ದರು. ಅಷ್ಟು ಅಪಾರ ಸಂಖ್ಯೆಯ ಹುಡುಗರ ಮಧ್ಯೆ ಹಲವಾರು ಜನರನ್ನು ಹೆಸರಿನಿಂದ ಗುರುತಿಸುತ್ತಿದ್ದುದು ನಮಗೆ ಕೌತುಕವೆನಿಸುತ್ತಿತ್ತು….

ಒಂದು ದಿನ ನಾನು ರೂಮಿನಲ್ಲಿ ಬೇಸರವಾಯಿತೆಂದು ಜಯ ನಿಲಯದ ಬಳಿಯೇ ಕ್ಯಾತ್ಸಂದ್ರಕ್ಕೆ ಹೋಗುವ ದಾರಿಯಲ್ಲಿದ್ದ ಕಲ್ಯಾಣಿಯ ಬಳಿ ನಿಂತುಕೊಂಡಿದ್ದೆ. ಅದೇ ವೇಳೆಗೆ ತಿರುವಿನಲ್ಲಿ ಸ್ವಾಮೀಜಿ ಬಂದು ಬಿಡಬೇಕೆ? ಅವರೊಂದಿಗೆ ಮಠದ ಆಡಳಿತಾಧಿಕಾರಿಗಳಿದ್ದರು.

ʼನಾನು ಸಿಕ್ಕಿಕೊಂಡು ಬಿಟ್ಟೆ. ನನಗೆ ಉಳಿಗಾಲವಿಲ್ಲʼ ಎಂದು ಭಯವಾಯಿತು.
ಸಮೀಪಿಸಿದ ಸ್ವಾಮೀಜಿ ಭಯದಿಂದ ಕಂಪಿಸುತ್ತಿದ್ದ ನನ್ನ ಮುಖವನ್ನೇ ತದೇಕ ಚಿತ್ತರಾಗಿ ನೋಡುತ್ತಿದ್ದರು. ಆಡಳಿತಾಧಿಕಾರಿಗಳು ʼನಿನ್ನ ಹೆಸರೇನು?ʼ ಎಂದರು ಸಿಟ್ಟಿನಿಂದ. ʼನಾಗರಾಜುʼ ಎಂದೆ.

ʼನೀನು ಸಕಲೇಶಪುರದ ಕಡೆಯವನಲ್ವಾʼ ಎಂದ ಸ್ವಾಮೀಜಿ ʼಹೀಗೆಲ್ಲಾ ಅನಾವಶ್ಯಕ ಅಲೆದಾಡಬಾರದು ಎಂಬುದು ಗೊತ್ತಿಲ್ವಾʼ… ಈ ರೀತಿ ಇನ್ನೊಮ್ಮೆ ನನ್ನ ಕೈಗೆ ಸಿಕ್ಕಿ ಹಾಕಿಕೊಂಡರೆ ನೋಡು… ನಿಮ್ಮ ಅಪ್ಪನನ್ನು ಬರ ಹೇಳಿ ನಿನ್ನನ್ನು ಊರಿಗೆ ವಾಪಾಸ್‌ ಕಳಿಸಿ ಬಿಡುತ್ತೇನೆ…. ಈಗ ಹೋಗುʼ ಎಂದು ಎಚ್ಚರಿಕೆ ಕೊಟ್ಟು ಕಳಿಸಿದ್ದರು….

ಎಂದಿನಂತೆ ಆ ಶನಿವಾರವೂ ಶ್ರಮದಾನದಲ್ಲಿ ಭಾಗವಹಿಸಿದ್ದೆ.
ದಿನ ಕಳೆದಂತೆ ಮಲೆನಾಡ ಕಡೆಯ ಹುಡುಗರು ಹಾಗೂ ಜಯನಿಲಯದವರು ಅಷ್ಟೇ ಅಲ್ಲದೇ ಅದೇಕೋ ಇತರ ಹಲವಾರು ಹುಡುಗರೂ ನನಗೆ ಆಪ್ತರಾಗಿದ್ದರು. ಅದರಲ್ಲಿ ಶ್ರಮದಾನದಲ್ಲಿ ಕಲ್ಲಿನ ಲೆಕ್ಕ ಬರೆದುಕೊಳ್ಳುತ್ತಿದ್ದ ಆ ಇಬ್ಬರೂ ಹಿರಿಯ ವಿದ್ಯಾರ್ಥಿಗಳು ಸಹಾ.

ಓದಿನಲ್ಲಿ ಚುರುಕು ಇದ್ದೇನೆಂದೋ, ಚಿಕ್ಕ ಹುಡುಗನೆಂದೋ, ತಿಳಿಯದು ,ನನ್ನ ಬಗ್ಗೆ ವಿಶೇಷವಾದ ಮೃದುಧೋರಣೆ ತಳೆಯುತ್ತಿದ್ದರು. ಅದೇನು ಪ್ರೀತಿಯೋ, ಮಮತೆಯೋ, ಕರುಣೆಯೋ ಒಂದೂ ನನಗೆ ಅರ್ಥವಾಗುತ್ತಿರಲಿಲ್ಲ.

ಚಿಕ್ಕಂದಿನಿಂದಲೂ ಮಲೆನಾಡಿನಲ್ಲಿ ಬೆಳೆದವನಾಗಿದ್ದ ನಾನು, ಮನೆಗೆ ಬೇಕಾದ ಸೌದೆ ಸೊಪ್ಪು, ಹುಲ್ಲು ಮುಂತಾದವುಗಳನ್ನು ಐದು ಕಿಲೋ ಮೀಟರ್‌ ದೂರದ ಕಾಡಿನಿಂದ ತಲೆ ಹೊರೆಯಲ್ಲೆ ಹೊತ್ತು ತಂದು ರೂಢಿಯಾಗಿತ್ತು. ಆ ಬಯಲಿನಲ್ಲಿ ಹತ್ತು ಕಲ್ಲು ಹೊತ್ತು ತರುವುದೂ ಅಂತಹಾ ಕಷ್ಟವೇನೂ ಆಗುತ್ತಿರಲಿಲ್ಲ. ಆದರೆ ಆ ಇಬ್ಬರು ನನಗೆ ಕಷ್ಟವಾಗಬಹುದೆಂದು ವಿಶೇಷ ಅನುಕಂಪದಿಂದ, ನಾನು ಒಂದು ಕಲ್ಲು ಸಾಗಿಸಿದರೆ ಇಬ್ಬರೂ ಎರಡೆರಡು ಕಲ್ಲು ಎಂದು ಬರೆದುಕೊಳ್ಳುತ್ತಿದ್ದರು.

ಅಂದು ನಾನು ಮೂರು ದಾರಿ ಕಲ್ಲು ಹೊತ್ತಿದ್ದೆ. ಎರಡು ಕಡೆಯವರೆಗೂ ʼಆರು ಕಲ್ಲುʼ ಎಂದು ನನ್ನ ಹೆಸರಿನ ಮುಂದೆ ಗುರುತು ಹಾಕಿಕೊಂಡಿದ್ದರು.

ನಾನು ನಾಲ್ಕನೆಯ ಕಲ್ಲು ಹೊತ್ತುಕೊಂಡು ಕಲ್ಲು ಇಳಿಸುವ ಸ್ಥಳ ಸಮೀಪಿಸಿದ್ದೆ.
ಲೆಕ್ಕ ಬರೆಯುವವನ ಬಳಿ ಅಧ್ಯಾಪಕರೊಂದಿಗೆ ನಿಂತಿದ್ದ ಸ್ವಾಮೀಜಿ, ಲೆಕ್ಕದ ಪುಸ್ತಕ ಕೈಗೆ ತೆಗೆದುಕೊಂಡು ನೋಡುತ್ತ ಆ ಹುಡುಗನೊಂದಿಗೆ ಏನೋ ಮಾತಾಡುತ್ತಿದ್ದರು.

ಸುಳ್ಳು ಲೆಕ್ಕ ಬರೆದಿದ್ದ ರಿಂದ ನನಗೆ ಮೈ ಭಯದಿಂದ ಅದುರಿತು. ನನಗೆ ಬೆನ್ನು ಹಾಕಿ ನಿಂತಿದ್ದ ಸ್ವಾಮೀಜಿ ಅಲ್ಲಿಂದ ಕದಲಿ ನನ್ನೆಡೆಗೆ ತಿರುಗಿದರು.

ಎರಡು ಹೆಜ್ಜೆ ನನ್ನೆಡೆಗೆ ನಡೆದು ನನ್ನನ್ನೇ ದೃಷ್ಟಿಸಿ ನೋಡಿದರು. ಕಲ್ಲು ಹೊತ್ತುಕೊಂಡ ನಾನು ಹಾಗೆಯೇ ನಿಂತುಕೊಂಡಿದ್ದೆ.

ಭಯದಿಂದ ಕಂಪಿಸುತ್ತಿದ್ದ ನನ್ನನ್ನು ಕಂಡ ಸ್ವಾಮೀಜಿ ʼಇವನ ಕಲ್ಲು ಇಳಿಸಿʼ ಎಂದರು. ಲೆಕ್ಕ ಬರೆಯುತ್ತಿದ್ದ ಹುಡುಗ ಧಾವಿಸಿ ಬಂದು ಕಲ್ಲು ಇಳಿಸಿ ನಿಂತುಕೊಂಡ.

ಸ್ವಾಮೀಜಿ ಕೋಪಿಸಿಕೊಂಡಂತಿದ್ದರು. ʼನೀನು ನಾಗರಾಜ ಅಲ್ವಾʼ ಆವೇಶದಿಂದ ಅವರ ಮಾತು ತೊದಲುತ್ತಿತ್ತು.
ಎಷ್ಟು ಕಲ್ಲು ಹೊತ್ತೆ? ಎಂದರು.

ʼನನಗ್ಯಾಕೆ ಬೇಕಾಗಿತ್ತು, ಈ ಕಳ್ಳ ಲೆಕ್ಕದ ಉಸಾಬರಿʼ ಎಂದು ಹಲುಬುತ್ತಾ ನಿಂತುಕೊಂಡೆ.
ನಿಜ ಸ್ಥಿತಿ ಹೇಳದೇ ವಿಧಿಯಿಲ್ಲ. ʼಮೂರಾಗಿದೆ, ಇದು ನಾಲ್ಕನೆಯದುʼ ಎಂದು ಸತ್ಯ ಹೇಳಲು ಅನುವಾದೆ. ಕೈಕೈ ಹಿಸುಕಿಕೊಳ್ಳುತ್ತಾ ನಿಂತಿದ್ದ ಲೆಕ್ಕದ ಹುಡುಗ ನನಗಿಂತ ಮೊದಲೇ ಬಾಯಿತೆರೆದ.

“ಈಗಾಗಲೇ ಆರು ಕಲ್ಲು ಹೊತ್ತಿದ್ದಾನೆ, ಬುದ್ದಿ” ಎಂದ. ಸ್ವಾಮೀಜಿ ಅದನ್ನೇನೂ ಗಂಭೀರವಾಗಿ ಪರಿಗಣಿಸಿದಂತೆ ತೋರಲಿಲ್ಲ. ಹುಡುಗ ಬರೆದ ಲೆಕ್ಕದ ಬಗ್ಗೆ ಅವರಿಗೆ ತಿಳಿದಿರಲೂ ಇಲ್ಲ.

ಅವರು ಅಧ್ಯಾಪಕರೆಡೆಗೆ ತಿರುಗಿ ʼಇಷ್ಟು ಸಣ್ಣ ಹುಡುಗನಿಗೆ ಸೈಜುಗಲ್ಲು ಹೊರಿಸುತ್ತಾರಾ. ನಿಮಗಾದರೂ ತಿಳಿಯಬಾರದಾʼ? ಎಂದರು.

“ಇಲ್ಲ ಬುದ್ಧಿ, ಇವನು ಹನ್ನೊಂದನೇ ತರಗತಿ” ಎಂದು ಅಧ್ಯಾಪಕರು ಸಮಜಾಯಿಸಿ ಕೊಡತೊಡಗಿದರು.
“ಅದೆಲ್ಲಾ ನನಗೆ ಗೊತ್ತಿದೆ. ಹುಡುಗನ ದೇಹ ಪ್ರಕೃತಿ ನೋಡದೆ ಇಂತಾ ಶ್ರಮದ ಕೆಲಸ ಮಾಡಿಸುತ್ತಾರಾ ಯಾರಾದರೂ. ಮುಂದಿನ ವಾರದಿಂದ ಇವನಿಗೆ ಯಾವುದಾದರೂ ಹಗುರವಾದ ಕೆಲಸ ಕೊಡಿ” ಎಂದು ಆಜ್ಞಾಪಿಸಿ ನನ್ನೆಡೆಗೆ ತಿರುಗಿ “ಈಗ ನೀನು ರೂಮಿಗೆ ಹೋಗು” ಎಂದರು.

ಭಯದಿಂದ ಉಸಿರು ಕಟ್ಟಿದಂತಾಗಿದ್ದ ನಾನು ಸರಾಗವಾಗಿ ಉಸಿರಾಡತೊಡಗಿದೆ.
ನನಗಿಂತ ಹೆಚ್ಚಿನ ಭಯ ಭೀತನಾಗಿದ್ದ ಲೆಕ್ಕದ ಹುಡುಗ ತನ್ನ ಆಸನದ ಬಳಿ ನಡೆದು ಬಿಡುಗಡೆಯ ನಿಟ್ಟುಸಿರು ಬಿಡತೊಡಗಿದ.

‍ಲೇಖಕರು Admin

24 August, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading