ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಾಡ್ಲಹಳ್ಳಿ ನಾಗರಾಜ್ ಅಂಕಣ – ಪೋಲಿ ಅಜ್ಜೇಗೌಡ್ರು..

ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ.

ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ.ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು.ಇನ್ನು ಕೆಲವಕ್ಕೆ, ದಿನದ ದುಡಿಮೆಯ ದಣಿವು ನೀಗಿಸಿ ಮನಸು ಹಗುರಮಾಡಿಕೊಳ್ಳವ, ಸ್ವಾರಸ್ಯಕರ ಮಾತುಗಾರರು, ಸೋಮಾರಿಕಟ್ಟೆಯಲ್ಲಿ ಕುಳಿತು, ಕತೆಗಳ ಪೋಷಾಕು ತೊಡಿಸಿ ಹರಟೆಯ ರೂಪದಲ್ಲಿ ಹೇಳುವ ಪ್ರಯತ್ನವೂ ಇದಾಗಿದೆ.

ಮಲೆನಾಡಿನ ಬೈನೆ ಸೇಂದಿಯ ಅಡಸಾಲೆಗಳಲ್ಲಿ ಧಗಧಗಿಸುವ ಬೆಂಕಿಯ ಸುತ್ತ ಕುಳಿತು ಸಂಜೆಯ ಪಾನಗೋಷ್ಟಿಗಳನ್ನು ಉತ್ತೇಜನದಾಯಕವಾಗಿಸಲು ಹೇಳಿದ ʻಗುಂಡು ಪಾರ್ಟಿʼಯ ಕಥಾ ಪ್ರಸಂಗಗಳಾಗಿರಲೂಬಹುದು.

ಜನಪದ ಕತೆಗಳಂತೆ ಜನರ ಬಾಯಿಂದ ಬಾಯಿಗೆ ಹರಿದುಬಂದು ʻಕೇಳು ಕತೆʼ ಗಳಾಗಿ ಗಾಳಿಯಲ್ಲಿ ತೇಲಾಡಿ ಹೋಗುವ ಇಂತಹಾ ಪ್ರಸಂಗಗಳು ಹಲವಾರು.ಓದುಗರಿಗೆ ಹಿತವಾಗುವಂತಹಾ ಈ ಎಲ್ಲಾ ಪ್ರಸಂಗಗಳ ಹ್ಯೂಮರ್‌ ಮನಸ್ಸನ್ನು ಪ್ರಫುಲ್ಲಗೊಳಿಸಬಲ್ಲದೆಂಬುದನ್ನು ಮನಗಂಡು ʻಹಗ್ರಾಣದ ಕತೆʼಗಳ ರೂಪ ಕೊಟ್ಟು ಇಲ್ಲಿ ಪ್ರಸ್ತುತಪಡಿಸಲಾಗಿದೆ.

ಅಂಕಣ – ೧ ೨

         ಆಡ್ತಾ ಆಡ್ತಾ ಐದು ವರ್ಷ ಮುಗಿದೇ ಹೋಯ್ತು. ಮತ್ತೊಂದು ಚುನಾವಣೆ ಎದುರಿಗೆ ಬಂದು ನಿಂತಿದೆ. ಆದರೆ ಜನಸಾಮಾನ್ಯರ ಬದುಕಿನ ಗುಣಮಟ್ಟ ಐದುವರ್ಷದ ಹಿಂದಿನದಕ್ಕಿಂತಲೂ ಮೇಲೆ ಹೋದಂತಿಲ್ಲ. ಸಾಮಾಜಿಕರಲ್ಲಿ ಕನಿಷ್ಠ ನೆಮ್ಮದಿಯೂ ಇಲ್ಲ. ಅದೇ ಗಲಾಟೆ, ಅದೇಕಿತ್ತಾಟ, ಜಾತಿಯ ಮೇಲಾಟ. ಕೋಮುಕೋಮುಗಳ ನಡುವೆ ಅಧಿಕಾರದಾಹಿಗಳು ಹಚ್ಚಿದ ಬೆಂಕಿಯನ್ನು ಶಮನಗೊಳಿಸುವ ಬದಲುಇನ್ನೂ ಧಗಧಗಿಸುಂತೆ ಮಾಡಿ, ಅದರಾಚೆಗೆ ಕಾಣುವ ಕುರ್ಚಿಯ ಕನಸು ಕಾಣುತ್ತಾ ಸುಖಿಸುವ ನಾಯಕರೆಂಬುವವರ ಪರಿ!

        ಹಳೆಯ ನೋಟು ರದ್ದು ಮಾಡಿ ಹೊಸದನ್ನು ಪ್ರಿಂಟು ಮಾಡಿದ್ದಾಯಿತು. ಕಳ್ಳ ಖದೀಮರ ಬಳಿ ಇರುವ ಕಪ್ಪು ಹಣವನ್ನು ಕಿತ್ತು ಬಡವರಿಗೆ ತಲುಪಿಸುವುದಾಗಿ ಆಸೆ ಹುಟ್ಟಿಸಲಾಯಿತು. ಬಡವರು ಬಾಯ್ಟಿಟ್ಟುಕೊಂಡು ಕಾಯುತ್ತಾ ಸಹಕರಿಸಿದ್ದೇ ಬಂತು. ಈಗ ʻಅದೆಲ್ಲಾ ದೇಶದ ಅಭಿವೃದ್ದಿಯ ದೂರಗಾಮಿ ಆಲೋಚನೆಗಳುʼಎಂದುರು. ಜನಸಾಮಾನ್ಯರಿಗೆ ಅರ್ಥವಾಗಲಿಲ್ಲ, ಸುಮ್ಮನಾದರು.

       ಇನ್ನು ಬಡವರಿಗಾಗಿ ಎಷ್ಟೊಂದು ಭಾಗ್ಯಗಳು! ಬಡವರ ಮೂಗಿಗೆ ಈ ಭಾಗ್ಯಗಳೆಂಬ ತುಪ್ಪ ಸವರುತ್ತಾ ಅವರನ್ನು ತಮ್ಮ ಹಿಂಬಾ ಲಕರಾಗಿಯೇ ಇರುವಂತೆ ನೋಡಿಕೊಡಿದ್ದೇ ಬಂತು! ಅವರು ದುಡಿದು ಸ್ವಾವಲಂಬಿಯಾಗಲು ನೆರವಾಗುವಂತಹ ಯಾವುದಾದರೂ ಭಾಗ್ಯ ಅವರ ಬದುಕಿನಲ್ಲಿ ಬಂತೆ?

       ಇನ್ನು ಕೃಷಿಕರಿಗೆ ಎಂತೆಂಹ ಭಾಗ್ಯಗಳು….!

       ಸೋತಾಗ ಆತ್ಮಹತ್ಯೆ ಮಾಡಿಕೊಳ್ಳಲೂ ಉಪಯೋಗಕ್ಕೆ ಬಾರದ ನೀರಿಲ್ಲದ ಹೊಂಡಗಳು! ಆ ಹೊಂಡದಿಂದ ಇಲ್ಲದ ನೀರನ್ನು ಎತ್ತಲು  ಪಂಪ್‌ ಸೆಟ್‌ ಗಳು! ಉದ್ಧಾರವಾಗಲು ಇನ್ನೇನು ಬೇಕು!

       ರೈತನಿಗೆ ಬೆಳೆಯ ಖಾತ್ರಿಯ ಬಗ್ಗೆ, ಬೆಳೆದ ಬೆಲೆಯ ಖಾತ್ರಿಯ ಬಗ್ಗೆ   ಯಾರದರೂ ಆಲೋಚಿಸಿದರಾ? ಹಾಗಾಗಿ ಅವನಿಗೆ ಕೊನೆಗೆ ಉಳಿದದ್ದು ಮರಣಭಾಗ್ಯ ಒಂದೇ ಎಂಬಂತಹಾ ಪರಿಸ್ಥಿತಿ. ಇದೆಂತಹಾ ವಿಪರ್ಯಾಸ!

       ಈಗಂತೂ ಚುನಾವಣೆ ಬಾಗಿಲಿಗೇ ಬಂದುಬಿಟ್ಟಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನವಣೆಗೇ ಮಹತ್ವ ಅಲ್ಲವೇ. ಈ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು ಎನ್ನುತ್ತಾರೆ. ಅದು ಎಲ್ಲಿಯವರೆಗೆ? ಅವರ ಮತ ಡಬ್ಬದೊಳಗೆ ಬೀಳುವವರೆಗೆ ಮಾತ್ರ!

       ಇದನ್ನು ಚುನಾವಣೆ ಎನ್ನುವುದಕ್ಕಿಂತಾ ಬಡಜನರಿಗೆ ಒಂದೆರಡು ತಿಂಗಳು ಮೋಜುಣಿಸುವ ಪ್ರಹಸನ  ಎನ್ನುವುದೇ ಸರಿ ಎನಿಸುತ್ತದೆ.

       ಆಗ ಎಂತೆಂತಹಾ  ನಾಯಕರು  ನುರಿತ ನಟರಂತೆ ರಂಗ ಪ್ರವೇಶ ಮಾಡುತ್ತಾರೆ!

       ಹಗಲು ಹಾದರ ಮಾಡಿ ಸಿಕ್ಕಿ ಬಿದ್ದವರು,ಮಲಿನ ಬಟ್ಟೆಯ ಬಿಸುಟು ಹೊಲಸು ಕಳೆದವರಂತೆ ಹೊಸ ಜುಬ್ಬಾ ಧರಿಸಿ ಬರುತ್ತಾರೆ. ಬ್ರಹ್ಮಂಡ ಬ್ರಷ್ಟಾಚಾರಕ್ಕಾಗಿ ಜೈಲು ಕಂಡಿದ್ದವರು ಖೈದಿ ಬಟ್ಟೆಯನ್ನು ಎಸೆದು ಮಿರಿಮಿರಿ ಮಿಂಚುವ ಶುಭ್ರ ಬಟ್ಟೆಯೊಂದಿಗೆ ಬಂದಿಳಿಯುತ್ತಾರೆ.

       ಜೀವನಪರ್ಯಂತ ಸರ್ಕಾರಿ ಹುಲ್ಲುಗಾವಲಿನಲ್ಲಿ ಮೇದು ಕೊಬ್ಬಿದ ಅಧಿಕಾರಿಗಳು, ನಿವೃತ್ತಿ ಪಡೆದು ಸಫಾರಿ ಸೂಟು ಬಿಚ್ಚೆಸೆದು, ದುಡ್ಡಿನ ಗಂಟು ತಬ್ಬಿಕೊಂಡು, ನಾಯಕರ ಹೊಸ ಪೋಷಾಕಿನಲ್ಲಿ ಜನರ ನಡುವೆ ಅವತರಿಸುತ್ತಾರೆ.

       ಒಬ್ಬರೇ ಇಬ್ಬರೇ, ನೂರಾರು ಸಾವಿರಾರು ಜನ. ಅವರ ದೊಡ್ಡ ದೊಡ್ಡ ಕಾರುಗಳು ಹೈವೇ ಬಿಟ್ಟು, ಹಳ್ಳಿ ಹಳ್ಳಿಯ ಗಲ್ಲಿಗಿಳಿಯುತ್ತವೆ. ಜನ ಸೇರಿದ್ದ ಸೋಮಾರಿಕಟ್ಟೆಯ ಬಳಿ ನಿಲ್ಲುತ್ತವೆ. ಕಾರಿನಿಂದಿಳಿದ ನಾಯಕರು ʻನೆಂಟ್ರೇʼ ಅಂತಾ ಬಾಯ್ತುಂಬಾ ಮಾತಾಡಿಸ್ತಾರೆ. ಕೆಲವರ ಹೆಸರು ಹಿಡಿದು ಕರಿತಾರೆ. ಮುಟ್ತಾರೆ. ಹಿರಿಯರಾದರೆ ಕಾಲೂ ಮುಟ್ತಾರೆ. ಹಬ್ಬಕ್ಕೆ ಬರ್ತಾರೆ. ದೇವಸ್ಥಾನದ ಪೂಜೆಗೆ ಬರ್ತಾರೆ. ಮದುವೆಗೆ ಬರ್ತಾರೆ. ತಿಥಿಗೂ ಬರ್ತಾರೆ !

       ಜನಸಾಮಾನ್ಯರು ಧನ್ಯರಾದೆವು ಅಂದುಕೊಂಡುಬಿಡ್ತಾರೆ!

       ನೋಡ ನೋಡುತ್ತಿದ್ದಂತೆಯೇ ಕಣ ರಂಗೇರುತ್ತದೆ. ಎದುರಾಳಿ ನಾಯಕರು ಅವರ ಚಡ್ಡಿಯನ್ನು ಇವರು ಬಿಚ್ತಾರೆ. ಇವರ ಚಡ್ಡಿಯನ್ನು ಅವರು ಬಿಚ್ತಾರೆ. ಇದೇ ಸಂದರ್ಭವನ್ನು ಕೆಲವರು ಸದುಪಯೋಗಪಡಿಸಿಕೊಳ್ತಾರೆ. ಯಾವುದೋ ನೆಪ ಮಾಡಿಕೊಂಡ ಕೆಲ ʻಹೋರಿʼಗಳು ಒಳ್ಳೆ ಮೇವಿರುವ ಹುಲ್ಲುಗಾವಲ ಕಡೆ ನೆಗದುಕೊಳ್ಳುತ್ತವೆ. ಇನ್ನು  ʻಅಂತಂವರೇ ಸೇರಿಕೊಂಡು ಅಂತರಗಟ್ಟೆ ಜಾತ್ರೆಗೆ ಹೋದರುʼ ಎಂಬಂತೆ ಎಲ್ಲೆಲ್ಲೋ ಇದ್ದವರು ಮೈತ್ರಿ ಎಂಬ ʻಕೂಡಾವಳಿʼ ಮಾಡಿಕೊಂಡು ಜನರ ಮುಂದೆ ಬರಲು ಅಣಿಯಾಗುತ್ತಾರೆ. ಚಾನಲ್‌ ಗಳವರು, ಇದನ್ನು ಕಣ್ಣಾರೆ ಕಾಣದೆ  ಮನೆಯಲ್ಲಿ ಕುಳಿತವರಿಗೆ  ಅಲ್ಲಿಗೇ ಉಣಬಡಿಸಿ ಧನ್ಯರಾಗುತ್ತಾರೆ.

         ಊರೂರುಗಳಲ್ಲಿ ಜನರಿಗಾಗಿ ಹಬ್ಬಗಳಾಗುತ್ತವೆ. ಹಣ ಹೆಂಡ ಯಥೇಚ್ಛವಾಗಿ ಹರಿದಾಡುತ್ತವೆ….ಯಾರಿಗುಂಟು ಯಾರಿಗಿಲ್ಲ! ಸಿಕ್ಕವರಿಗೆ ಸೀರುಂಡೆ!

        ತೋಳದ ವೇಷ ಕಳಚಿದ ನಾಯಕರು  ಹಸುವಿನ ಪೋಷಾಕಿನಲ್ಲಿ ಪ್ರತಿಯೊಬ್ಬರ ಬಾಗಿಲಲ್ಲೂ ಪ್ರತ್ಯೇಕವಾಗಿ ಪ್ರತ್ಯಕ್ಷವಾಗುತ್ತಾರೆ. ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ತಾರೆ. ತಾವೆಷ್ಟು ಸಾಚಾ  ಎಂಬುದನ್ನು ಸಮರ್ಥನೆಯ ಮೂಲಕ ನಿರೂಪಿಸುತ್ತಾರೆ. ಅವರ ಇತಿಹಾಸ ಗೊತ್ತಿದ್ದ ಜನ ತಬ್ಬಿಬ್ಬಾಗಿ ನಿಲ್ಲುತ್ತಾರೆ.

        ಅದೇ ರೀತಿಯದು ಈ ನಮ್ಮ ಅಜ್ಜೇಗೌಡರ ಕತೆ…….

        ಆ ಊರಲ್ಲಿ ಅಜ್ಜೇಗೌಡರೇ ನಾಯಕರು. ಊರ ಸುತ್ತಲಿನ ಹಾನಾದ ಜಮೀನೆಲ್ಲಾ ಅವರದೇ. ಬಹುತೇಕ ಜನ ಅವರ ಜಮೀನಿನಲ್ಲೇ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಅಷ್ಟಿಷ್ಟು ತುಂಡುಭೂಮಿ ಇದ್ದವರೂ ಒಂದಿಲ್ಲೊಂದು ಕಾರಣಕ್ಕೆ ಅಜ್ಜೇಗೌಡರ ಕುಟುಂಬವನ್ನು ಅವಲಂಬಿಸಬೇಕಾಗಿತ್ತು.

         ಆ ಕುಟುಂಬಕ್ಕೆ ಹಿಂದಿನಿಂದಲೂ ಒಳ್ಳೆಯ ಹೆಸರಿತ್ತು. ಆದರೆ, ಬರು ಬರುತ್ತಾ ,,ಅಜ್ಜೇಗೌಡರ ಕಾಲಕ್ಕೆ , ದುಡ್ಡಿನ ಮದ ಹೆಚ್ಚಾಗಿ ಅವನನ್ನು ನಿಧಾನಕ್ಕೆ ದಾರಿ ತಪ್ಪಿಸತೊಡಗಿತು. ದಬ್ಬಾಳಿಕೆ ಪ್ರವೃತ್ತಿ ಬೆಳೆಯಿತು. ಕಂಡ ಕಂಡ ಹೆಣ್ಣುಗಳನ್ನು ಕರೆದು ದಕ್ಕಿಸಿಕೊಳ್ಳತೊಡಗಿದ.

          ಜನ ಏನು ಮಾಡಿಯಾರು? ಅವರವರೇ ಗೊಣಗಾಡಿಕೊಂಡರು. ʻಅಜ್ಜೇಗೌಡರೇʼ ಎಂದು ಗೌರವ ತೋರುತ್ತಿದ್ದವರು ತಮ್ಮ ತಮ್ಮಲ್ಲೇ ʻಪೋಲಿ ಅಜ್ಜೇಗೌಡರುʼಅಂದುಕೊಳ್ಳತೊಡಗಿದರು. ಅದೇ ಗೌರವಸೂಚಕವೇನೋ ಎಂಬಂತೆ , ಬರುಬರುತ್ತಾ ಆ ಹೊಸ ಹೆಸರು ಸಾರ್ವಜನಿಕವಾಗಿ ಕೇಳಿಬರತೊಡಗಿ, ಅದೇ ಖಾಯಂ ಆಯಿತು.

          ಅಜ್ಜೇಗೌಡರ ಕುಟುಂಬದ ನೆಂಟರಿಷ್ಟರಿಗೆ ಇರುಸುಮುರುಸಾಗತೊಡಗಿತು. ಅವರಿಗೆ ಬುದ್ದಿವಾದ ಹೇಳಿದರು. ಹೊರಕ್ಕೆ ಮದುವೆ ಮಾಡಿಕೊಟ್ಟಿದ್ದ  ಅವರ ಹೆಣ್ಣುಮಕ್ಕಳು ಬಂದು ಬೈದರು. ʻನಾವು ತಲೆಯೆತ್ತಿ ತಿರುಗುವಂತಿಲ್ಲ…… ಎಂಥಾ ಘನತೆವೆತ್ತ ಕುಟುಂಬ ನಮ್ಮದು……ಈಗೆಷ್ಟು ಹಗುರವಾಗಿಹೋದಿವಿ ಜನರ ಕಣ್ಣಲ್ಲಿ……ಇನ್ನಾದರೂ ಜನರ ಜೊತೆ ಒಳ್ಳೆಯ ಸಂಬಂಧ ಇಟ್ಟುಕೋ….ಇಲ್ಲವಾದಲ್ಲಿ ನಾವು ತೌರುಮನೆಯ ಕಡೆ ತಲೇನೆ ಹಾಕೊದಿಲ್ಲʼ ಎಂದು ಧಮಕಿ ಹಾಕಿಬಿಟ್ಟರು.

         ಅಜ್ಜೇಗೌಡರು ಯೋಚಿಸಿದರು. ಅವರೆಲ್ಲಾ ಹೇಳುವುದು ಸರಿ ಎನಿಸಿತು. ಮೊದಲೆಲ್ಲ್ಲಾ ಊರ ಜನ ಎಷ್ಟೆಲ್ಲಾ ಪ್ರೀತಿ ಗೌರವದಿಂದ ʻಅಜ್ಜೇಗೌಡರೇʼ ಎಂದು ಬಾಯಿ ತುಂಬಾ ಕರೆಯುತ್ತಿದ್ದರು. ಈಗ ನನ್ನ ನಡವಳಿಕೆಯಿಂದಾಗಿ  ನನ್ನ ಹೆಸರಿನೊಂದಿಗೆ  ʻಪೋಲಿʼ ಎಂಬುದು ತಳುಕು ಹಾಕಿಕೊಂಡು  ಊರವರ ಮುಂದೆ ಎಷ್ಟೊಂದು ಹಗುರಾಗಿಬಿಟ್ಟೆ! …..ಮತ್ತೆ ಮೊದಲಿನಂತಾಗಲು ಸಾಧ್ಯವೇ?… ಆದರೆ ಜನಮಾನಸದಲ್ಲಿ ಬೇರೂರಿ ನಿಂತಿರುವ ಈ ಅಸಡ್ಡೆಯ ಭಾವವನ್ನು  ತೊಲಗಿಸಲು ಸಾಧ್ಯವೇ,ಎಂದೆಲ್ಲಾ ಯೋಚಿಸಿದರು.

         ʻಯಾಕಾಗುನವುದಿಲ್ಲ?  ಜನರ ನೆನಪಿನ ಶಕ್ತಿ ಕಡಿಮೆ. ಅವರನ್ನು ಮತ್ತೆ  ನನ್ನ ತೆಕ್ಕೆಗೆ ತೆಗೆದು ಕೊಳ್ಳುವುದು ಎಷ್ಟು  ಹೊತ್ತಿನ  ಕೆಲಸʼ. ಅವನ  ಉಡಾಫೆಯ ಮನಸ್ಸು ಹೇಳಿತು.

           ಒಂದು ದೊಡ್ಡ ಔತಣ ಕೂಟ ವ್ಯವಸ್ಧೆಮಾಡಿದ. ಆ ಹಳ್ಳಿಯ ಜನ ಎಂದೂ ಕಂಡರಿಯದಂತಹ ಅದ್ಬುತ ಔತಣ ಕೂಟ ಅದು..

          ಔತಣ ನಡೆಯುವಾಗ ಅಜ್ಜೇಗೌಡ ಹಂತಿ ಹಂತಿಯಲ್ಲೂ ತಿರುಗಾಡಿದ. ಜನ ಚಪ್ಪರಿಸಕೊಂಡು ಊಟ ಸವಿಯುತ್ತಿದ್ದರು. ಅವರ ಸಂಭ್ರಮ ಕಂಡು ಅಜ್ಜೇಗೌಡ ಖುಷಿಯಾದ.

         ಊಟ ಮುಗಿಯುತ್ತಾ ಬಂದಂತೆ ಜನರ ಹಳೆಯ ಪ್ರೀತಿಯನ್ನೇ ನಿರೀಕ್ಷಿಸುತ್ತಾ, ಜನ ಕೈ ತೊಳೆದು ಹೊರ ಹೋಗುವ ಜಾಗದ ಬಳಿ ಬಂದು ನಿಂತುಕೊಂಡ.

        ಊಟ ಮುಗಿಸಿ ತೃಪ್ತರಾದ ಜನ ಕೈ ತೊಳೆದುಕೊಂಡು ಹೊರಬರತೊಡಗಿದರು. ಅಜ್ಜೇಗೌಡರನ್ನು  ದಾಟಿದ ಪ್ರತಿಯೊಬ್ಬರೂ ʻಹೋಗಿ  ಬರ್ತಿವಿ ʻಪೋಲಿ ಅಜ್ಜೇಗೌಡರೆʼಎನ್ನುತ್ತಾ ನಿರ್ಗಮಿಸತೊಡಗಿದರು.

     ಕೊನೆಗೂ ಜನ ಯಾವುದೇ ಆಮಿಷಕ್ಕೆ ಬಲಿಯಾಗದೇ ತಮ್ಮ ನಾಯಕನ ಗುಣಧರ್ಮಗಳನ್ನು ಸರಿಯಾಗಿಯೇ ಗುರ್ತಿಸಿ ಅದಕ್ಕೆ ಸರಿಯಾಗಿ ನಡೆದುಕೊಂಡಿದ್ದರು.

ʼಪ್ರಜಾಪ್ರಭುತ್ವದಲ್ಲಿ, ಚುನಾವಣೆಯ ಕಾಲದಲ್ಲಿ ಜನರೂ ಹೀಗೆಯೇ ನೆಡೆದುಕೊಂಡರೆ ಎಷ್ಟು ಚನ್ನಾಗಿರುತ್ತದೆ, ಅಲ್ಲವೆ!ʼ ಎಂದು  ವಿದ್ಯಾವಂತರ ಗುಂಪೊಂದು ಮೂಲೆಯಲ್ಲಿ ನಿಂತು  ತಮ್ಮ ತಮ್ಮಲ್ಲಿಯೇ ಚರ್ಚಿಸುತ್ತಾ ನಿಂತಿತ್ತು.

। ಮುಕ್ತಾಯ ।

‍ಲೇಖಕರು Admin

10 January, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading