ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ.
ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ.ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು.ಇನ್ನು ಕೆಲವಕ್ಕೆ, ದಿನದ ದುಡಿಮೆಯ ದಣಿವು ನೀಗಿಸಿ ಮನಸು ಹಗುರಮಾಡಿಕೊಳ್ಳವ, ಸ್ವಾರಸ್ಯಕರ ಮಾತುಗಾರರು, ಸೋಮಾರಿಕಟ್ಟೆಯಲ್ಲಿ ಕುಳಿತು, ಕತೆಗಳ ಪೋಷಾಕು ತೊಡಿಸಿ ಹರಟೆಯ ರೂಪದಲ್ಲಿ ಹೇಳುವ ಪ್ರಯತ್ನವೂ ಇದಾಗಿದೆ.
ಮಲೆನಾಡಿನ ಬೈನೆ ಸೇಂದಿಯ ಅಡಸಾಲೆಗಳಲ್ಲಿ ಧಗಧಗಿಸುವ ಬೆಂಕಿಯ ಸುತ್ತ ಕುಳಿತು ಸಂಜೆಯ ಪಾನಗೋಷ್ಟಿಗಳನ್ನು ಉತ್ತೇಜನದಾಯಕವಾಗಿಸಲು ಹೇಳಿದ ʻಗುಂಡು ಪಾರ್ಟಿʼಯ ಕಥಾ ಪ್ರಸಂಗಗಳಾಗಿರಲೂಬಹುದು.
ಜನಪದ ಕತೆಗಳಂತೆ ಜನರ ಬಾಯಿಂದ ಬಾಯಿಗೆ ಹರಿದುಬಂದು ʻಕೇಳು ಕತೆʼ ಗಳಾಗಿ ಗಾಳಿಯಲ್ಲಿ ತೇಲಾಡಿ ಹೋಗುವ ಇಂತಹಾ ಪ್ರಸಂಗಗಳು ಹಲವಾರು.ಓದುಗರಿಗೆ ಹಿತವಾಗುವಂತಹಾ ಈ ಎಲ್ಲಾ ಪ್ರಸಂಗಗಳ ಹ್ಯೂಮರ್ ಮನಸ್ಸನ್ನು ಪ್ರಫುಲ್ಲಗೊಳಿಸಬಲ್ಲದೆಂಬುದನ್ನು ಮನಗಂಡು ʻಹಗ್ರಾಣದ ಕತೆʼಗಳ ರೂಪ ಕೊಟ್ಟು ಇಲ್ಲಿ ಪ್ರಸ್ತುತಪಡಿಸಲಾಗಿದೆ.
ಅಂಕಣ – ೧ ೦
ʻಇವತ್ತು ಶನಿವಾರ, ಮಾರ್ನೆ ಕ್ಲಾಸು. ಇಸ್ಕೂಲು ಬುಟ್ಟೇಟ್ಗೆ ಗದ್ದೆ ತಾಕೇ ಬಂದ್ಬುಡಿʼ ಎಂದು ಅವ್ವ ಬೆಳಗ್ಗೆ ಹೇಳಿದ್ದ ಮಾತನ್ನು ನೆನಪಿಸಿಕೊಂಡ ರಾಜ ಪುಳಕಿತನಾಗಿದ್ದ. ಶಾಲೆ ಬಿಟ್ಟೊಡನೆಯೇ ಓಡೋಡಿ ಬಂದ ಅವನು ಮನೆಯ ಹೊರಗಿನ ಗುಡ್ಲಿನಲ್ಲಿ ಬ್ಯಾಗು ನೇತು ಹಾಕಿದ. ಪಕ್ಕದ ಊರಿನ ಮಾಧ್ಯಮಿಕ ಶಾಲೆಗೆ ಹೋಗಿದ್ದ ಅಣ್ಣಂದಿರು ಬರಲು ತಡವಾಗುತ್ತದೆಂದು ಅವನಿಗೆ ತಿಳಿದಿತ್ತು.
ಇವತ್ತು ಮಜವೇ ಮಜಾ! ಅವ್ವ ಹೇಳಿದ ಸಣ್ಣ ಪುಟ್ಟ ಕೆಲಸ ಮಾಡಿಕೊಟ್ಟು ನಂತರ ಗದ್ದೆ ಬಯಲಿನ ತುಂಬಾ ಕುಣಿಯಬಹುದು. ಹಳ್ಳದಲ್ಲಿ ಏಡಿ ಹಿಡಿಯುತ್ತ, ಗದ್ದೆಯ ಕೊಲ್ಲಿಯಲ್ಲಿ ಕೊರೆಮೀನು, ಸಸಲು ಬೇಟೆಯಾಡುತ್ತಾ ಮಜವಾಗಿ ಕಾಲ ಕಳೆಯಬಹುದು ಎಂದುಕೊಳ್ಳುತ್ತಾ ಬಿದಿರು ಕೋಲಿನ ತುದಿಗೆ ಮರದ ಒಂಟಿ ಚಕ್ರ ಅಳವಡಿಸಿದ್ದ ತನ್ನ ಗಾಡಿಯನ್ನು ತಳ್ಳುತ್ತಾ, ಡರ್ರ್ ಎಂದು ಬಾಯಲ್ಲಿ ಸದ್ದು ಹೊರಡಿಸುತ್ತಾ ಉಲ್ಲಾಸದಿಂದ ಗದ್ದೆ ತಲಪಿದ.
ಆದರೆ ತನಗೆ ಇಷ್ಟವಾಗದ ಬೇರೊಂದು ಕೆಲಸ ಅಲ್ಲಿ ನಿಗಧಿಯಾಗಿರುತ್ತದೆಂದು ಅವನಿಗೆ ಹೇಗೆ ಅರಿವಾಗಬೇಕು!
ಕೊಲ್ಲಿಯಂಚಿನ ಜೀರಕೆ ಮರದ ನೆರಳಲ್ಲಿ ಮೌನವಾಗಿ ಮಣ್ಣು ಕೆರೆಯುತ್ತಾ ಕುಳಿತಿದ್ದ ಇಬ್ಬರು ತಂಗಿಯರು ಆಟಕ್ಕೆ ಅಣ್ಣ ಸಿಕ್ಕಿದನು ಅಂದುಕೊಳ್ಳುತ್ತಾ ಖುಷಿಯಾಗಿ ಅವನೆಡೆಗೆ ಓಡಿಬಂದರು. ಗಾಡಿಯನ್ನು ಅವನ ಕೈಯಿಂದ ಕಿತ್ತುಕೊಂಡು ನೂಕುತ್ತಾ, ನೀರಿನಲ್ಲಿ ಪುಣುಪುಣನೆ ಸರಿದಾಡುವ ಸಸಲು ಮೀನುಗಳನ್ನು ಅವನಿಗೆ ತೋರಿಸಲೆಂದು ಅವನನ್ನು ಕೊಲ್ಲಿಯೆಡೆಗೆ ಕೈಹಿಡಿದು ಎಳೆಯ ತೊಡಗಿದರು.
ರಾಜ ʻನೀನು ಅವರ ಜೊತೆ ಆಡ್ತಾ ಕೂರ್ಬೇಡ. ಈವತ್ತು ನೀನೇ ತ್ವಾಟಕ್ಕೆ ಹೋಗಿ ಗುಡ್ಲು ಮುಂದೆ ಬೆಂಕಿ ಹಾಕಿ ಬರ್ಬೇಕು. ನಾವೆಲ್ಲಾ ಇಲ್ಲಿ ಕೂತ್ಗಂಡ್ರೆ ಅಲ್ಲಿ ಕಪಿ, ಕಾಟಿ ಎಲ್ಲಾ ತ್ವಾಟಕ್ಕೆ ನುಗ್ಗಿ ಲೂಟಿ ಮಾಡಿ ಹೋಗ್ಬುಟ್ರೆ ಏನ್ ಮಾಡದುʼ.
ಅವ್ವನ ಮಾತು ಕೇಳಿ ಆಟದ ಹುರುಪಿನಲ್ಲಿದ್ದ ರಾಜನ ಉತ್ಸಾಹವೆಲ್ಲಾ ಒಮ್ಮೆಲೇ ಜರ್ರನೆ ಇಳಿದುಹೋಯಿತು.
ʻಇಲ್ಲ ಇಲ್ಲ ನನಗೆ ಆ ಕಾಡುತ್ವಾಟಕ್ಕೆ ಒಬ್ನೇ ಹೋಗಕೆ ಹೆದರಿಕೆ ಆಗುತ್ತೆ. ಅಣ್ದಿರು ಬಂದ್ ಮೇಲೆ ಯಾರನಾದ್ರೂ ಕಳ್ಸುʼ ಎಂದು ರಾಜ ತಪ್ಪಿಸಿಕೊಳ್ಳಲು ಯತ್ನಿಸಿದ.
ʻಎಂತಾ ಹೆದ್ರಿಕೆನಾ ನಿಂಗೆ. ಅಲ್ಲೇನು ಹಗಲ್ಹೊತ್ತೇ ದಯ್ಯ ಕುಣಿತಿರ್ತಾವಾ! ಇವತ್ತು ಅಣ್ದಿರು ನಾವೆಲ್ಲಾ ಸೇರಿ ಮ್ಯಾಲ ತಿಪ್ಪೆಯಿಂದ ಗೊಬ್ರ ಹೊತ್ತುಹಾಕ್ತೀವಿ……ನೀನೇ ಹೋಗಿಬಾ. ನೋಡು ನಿನಗೇ ಅಂತಲೇ ರೊಟ್ಟಿ ಮುರಿದು ತುಪ್ಪ ಜೇನು ಬೆರ್ಸಿ ತಂದೀನಿʼ ಎಂದು ಸಣ್ಣ ಗಂಟೊಂದನ್ನು ಅವನೆಡೆಗೆ ಚಾಚುತ್ತಾ ಪುಸಲಾಯಿಸಿದಳು.
ಆ ಗಂಟಿನಿಂದ ಹೊರಹೊಮ್ಮಿದ ಪರಿಮಳ ಅವನ ಬಾಯಲ್ಲಿ ನೀರೂರಿಸಿತಾದರೂ ಮುಂದಿನ ಪಯಣದ ವಿಚಾರ ಹಿತವೆನಿಸಲಿಲ್ಲ.
ಅದರಿಂದ ಹೇಗೆ ಪಾರಾಗುವುದು ಎಂದು ಯೋಚಿಸುತ್ತಿರುವಷ್ಟರಲ್ಲೇ ಅವ್ವ ಸಣ್ಣ ಗಂಟನ್ನು ಅವನ ಚಡ್ಡಿ ಜೇಬಿಗೆ ತುರುಕಿ ,ಅಂಗಿ ಜೇಬಿಗೆ ಬೆಂಕಿ ಪೊಟ್ಟಣ ಇಟ್ಟು ,ಕೈಯಿಗೆ ಒಂದು ಮುಂಡಗತ್ತಿ ಕೊಡುತ್ತಾ ʻಹೂಂ ಹೋಗು ಹೋಗು…..ನೀನೇನು ಇಡೀ ತ್ವಾಟ ಎಲ್ಲ ತಿರುಗಾಡ್ಬ್ಯಾಡ…..ಸೀದಾ ಬೆಂಕಿ ಹಾಕ ಮಾಮೂಲಿ ಜಾಗಕ್ಕೆ ಹೋಗು….ಉರ್ದು ಉಳ್ದಿರ ಹಳೇ ಕೊಳ್ಳಿ ಎಲ್ಲಾ ಇರ್ತಾವೆ……ಅವನ್ನೇ ನೂಕಿ ಸರಿಮಾಡಿ, ಅಷ್ಟು ದರಗು, ಒಣಹುಲ್ಲು, ಸಣ್ಣ ಕಡ್ಡಿಪುಳ್ಳೆ ಹಾಕಿ ಬೆಂಕಿ ಕಡ್ಡಿ ಗೀರು…..ಕತ್ತಿಗಳುತ್ತೆ……ಆ ಮೇಲೆ ಒಂದೆಳ್ಡ್ ಸಲ ಜೋರಾಗಿ ಕೂಗ್ ಹಾಕು….ಕಾಡ್ ಪ್ರಾಣಿಗಳಿಗೆ ಮನುಷ್ರು ಇರದು ಗೊತ್ತಾದರೆ ದೂರ ಹೋತವೆ…..ಆ ಮೇಲೆ ನೀನು ನಿನ್ ಪಾಡಿಗೆ ಇತ್ಲಾಗಿ ಬಾʼ
ಅವ್ವ ಹೇಳುತ್ತಲೇ ಹೋದಳು. ರಾಜನಿಗೆ ತಪ್ಪಿಸಿಕೊಳ್ಳಲು ಯಾವುದೇ ದಾರಿ ಉಳಿದಿರಲಿಲ್ಲ…………
ಕಳೆದ ಭಾನುವಾರ ಮನೆಯವರೆಲ್ಲಾ ತೋಟದ ಕೆಲಸಕ್ಕೆ ಹೊರಟಿದ್ದಾಗ ರಾಜ ಉಲ್ಲಾಸದಿಂದ ಕುಣಿದು ಕುಪ್ಪಳಿಸುತ್ತಾ ತಾನೇ ಎಲ್ಲರಿಗಿಂತ ಮುಂದಾಗಿ ಗದ್ದೆ ಆಚೆಯ ಮಲ್ಟಿ ಏರುತ್ತಿದ್ದುದನ್ನು ಕಂಡಿದ್ದ ಅವ್ವ ,ಇಂದು ಮಗ ಯಾಂತ್ರಿಕವಾಗಿ ತನ್ನ ಗಾಡಿ ನೂಕುತ್ತಾ ಏರುದಾರಿಯಲ್ಲಿ ಗುಡ್ಡದ ಕಡೆ ಹೋಗುವುದನ್ನೇ ಕೆಲ ಕಾಲ ನೋಡುತ್ತಾ ನಿಂತಿದ್ದಳು.
ಎಂದಿನಂತೆ ಗುಡ್ಡದ ಓರೆಯ ಚೊಟ್ಟೆ ಹಣ್ಣಿನ ಮೆಳೆಗಳಾಗಲೀ, ಈಚಲು ಹಣ್ಣಿನ ಗುತ್ತಿಗಳಾಗಲೀ, ಅಬ್ಬಲು ಹಣ್ಣಿನ ಮರಗಳಾಗಲೀ, ಹುಲಗೂರುಹಣ್ಣಿನ ಮೆಣೆಗಳಾಗಲೀ ಅವನನ್ನು ಸೆಳೆಯಲಿಲ್ಲ.
ಮನದಲ್ಲಿ ಯಾವುದೇ ಮಧುರ ಭಾವನೆ ಹೊಂದಿರದ ರಾಜ ಗುಡ್ಡದೋರೆಯ ಎರಡು ಮೈಲಿ ದಾರಿ ಕ್ರಮಿಸಿ, ಕಾಡು ತೋಟ ಪ್ರವೇಶಿಸುವ ಬೇಲಿಯಂಚಿನ ಉಣುಗಲು ತಲಪಿದ. ಕೈಯಲ್ಲಿನ ಗಾಡಿಯನ್ನು ಬೇಲಿಗೊರಗಿಸಿ ಕ್ಷಣಕಾಲ ನಿಂತ. ಮುಂದೆ ಕ್ರಮಿಸಬೇಕಾದ ದಟ್ಟ ಅರಣ್ಯದೊಳಗೆ ಅಲ್ಲಿಂದಲೇ ಕಣ್ಣು ಹಾಯಿಸಿದ. ಕಾಡೊಳಗೆ ಎಲ್ಲೆಡೆ ಹರಡಿದ ಕಗ್ಗತ್ತಲೆ ಕಂಡು ಅವನ ಮನ ಕ್ಷಣ ಬೆಚ್ಚಿತು. ಆ ಕಾಡನ್ನು ಕಾಯುವ ದಯ್ಯ ಅಲ್ಲೇ ಎಲ್ಲೋ ಹತ್ತಿರದಲ್ಲೇ ಸುಳಿದಡುತ್ತಿರಬಹುದು ಎಂದು ಅನಿಸಿ ಭಯದಿಂದ ಮೈ ಬೆವರಿತು.
ʻಇಲ್ಲಿಂದಲೇ ಹಿಂತಿರುಗಿ ಓಡಿ ಹೋದರೆ ಹೇಗೆ?ʼ ರಾಜ ಯೋಚಿಸಿದ.
ಅದೆಲ್ಲಿ ಸಾಧ್ಯ? ನಾಳೆ ಅಪ್ಪ ಬಂದಾಗ ಬೆಂಕಿ ಹಾಕಿಲ್ಲದ್ದು ಗೊತ್ತಾಗಿ ನನ್ನ ಚಮಡ ಸುಲಿಯದೆ ಬಿಟ್ಟಾನೇ? ಮೇಲಾಗಿ ಕಾಡು ಪ್ರಾಣಿಗಳು ತೋಟ ಲೂಟಿ ಮಾಡಿದ್ದರಂತೂ ನನಗೆ ಉಳಿಗಾಲವಿದೆಯೆ?
ಮರುಯೋಚಿಸಿದ ರಾಜನಿಗೆ ಕಾಡೊಳಗೆ ಇಳಿದು ಗುಡಿಸಿಲಿನ ಮುಂಭಾಗದಲ್ಲಿ ಬೆಂಕಿ ಹಾಕಿ ಬರದೇ ನಿರ್ವಾಹವೇ ಇಲ್ಲವೆನಿಸಿತು.
ಕ್ಷಣ ನಿಂತು ಮನಸ್ಸಿಗೆ ಧೈರ್ಯ ತಂದುಕೊಂಡ. ಅಲ್ಲಿಯೇ ಬಿದ್ದಿದ್ದ ದರಗು, ಒಣಹುಲ್ಲು, ಸಣ್ಣ ಸಣ್ಣ ಕಡ್ಡಿ ಪುಳ್ಳೆ ಬಾಚಿ ತಬ್ಬಿಕೊಂಡು ಕಾಡೊಳಗಿನ ದಾರಿಯಲ್ಲಿ ಧಡ ಧಡ ನೆಗೆಯುತ್ತಾ ಓಡತೊಡಗಿದ.
ಅವ್ವನೊಂದಿಗೆ ಬಂದಾಗ ಆಪ್ಯಾಯಮಾನವೆನಿಸುತ್ತಿದ್ದ ಕಾಡು ಭಯದಿಂದ ಪ್ರಕ್ಷುಬ್ಧವಾಗಿದ್ದ ಅವನ ಮನಸ್ಸಿಗೆ ಭಯಾನಕವಾಗಿ ಕಾಣತೊಡಗಿತು. ಅಣ್ಣಂದಿರೊಂದಿಗೆ ಧುಮ್ಮಿಕ್ಕುವ ನೀರಿಗೆ ತಲೆಯೊಡ್ಡಿ ಮೀಯವ ಮಜಾ ಅನುಭವಿಸುತ್ತಿದ್ದ ಅಬ್ಬಿ, ತಗ್ಗಿನಲ್ಲಿ ಕೆಲವೇ ಮೀಟರುಗಳ ದೂರದಲ್ಲಿ ಭೋರ್ಗರೆದು ಅಬ್ಬರಿಸುತ್ತಿರುವಂತೆ ಕೇಳಿಸುತ್ತಿತ್ತು.
ಉರಿದು ಆರಿ ಹೋಗಿದ್ದ ಸೌದೆ ಹಾಗೂ ಕೊರಡುಗಳನ್ನು ಅನಸರ ಅವಸರವಾಗಿ ಒಂದೆಡೆ ನೂಕಿ, ಕಡ್ಡಿ ಪುಳ್ಳೆ, ದರಗು ಹಾಗೂ ಒಣಹುಲ್ಲನ್ನು ಅವುಗಳ ಬಳಿ ಹಾಕಿ ಕಡ್ಡಿ ಗೀರಿ ಹಿಡಿದ.
ಗಂಟೆಗೊಂದು ಬಾರಿ ಕೂಗುವ ಕಟುರನ ಹಕ್ಕಿಗಳು ಕೂಗತೊಡಗಿದವು. ಗಿಣಿವಿಂಡುಗಳು ಮರದಿಂದ ಮರಕ್ಕೆ ಹಾರಿ ಕುಳಿತವು. ಹಸಿರು ಪಾರಿವಾಳದಂತಹಾ ಕಾಡಿನ ಕುಕ್ಕಲುಗಳು,ಮರಗಳ ಮೇಲೆ ಗುಂಪು ಗುಂಪಾಗಿ ಕುಳಿತು ಸದ್ದು ಮಾಡತೂಡಗಿದವು. ಉದ್ದ ಬಾಲದ ಕಾಜಾಣಗಳು ಕಣ್ಣಿದುರಿಗೇ ಬಂದು ಕೊಂಬೆಯ ಮೇಲೆ ಕುಳಿತವು.
ಇದ್ಯಾವುದರ ಆನಂದವನ್ನೂ ಸವಿಯುವ ಮನಸ್ದಿತಿ ಇಂದು ರಾಜನಿಗಿರಲಿಲ್ಲ.
ಕಾಡೊಳಗೆ ಸಣ್ಣಗೆ ಗಾಳಿ ಸುಳಿಯುತ್ತಿತ್ತು. ಅದುವರೆಗೂ ಗುಡಿಸಲ ಕಡೆ ದೃಷ್ಟಿ ಹರಿಸಲು ಧೈರ್ಯ ಸಾಲದಾಗಿದ್ದ ರಾಜ ವಾರೆಗಣ್ಣಿನಲ್ಲಿ ಅತ್ತ ದೃಷ್ಟಿ ಹಾಯಿಸಿದ. ಅದರೊಳಗೆ ಏನೋ ನೆರಳು ಸರಿದಾಡಿದಂತೆ ಭಾಸವಾಯಿತು.
ದಯ್ಯ ಅದರೊಳಗೇನಾದರೂ ಅಡಗಿ ಕುಳಿತಿರಬಹುದೆ !….ಯಾರಿಗೆ ಗೊತ್ತು ಈ ಗೊಂಡಾರಣ್ಯದೊಳಗೆ ದಯ್ಯ ಯಾವ ರೂಪದಲ್ಲಿ ಬರುವುದೋ !
ಸುಳಿಯುತ್ತಿದ್ದ ಗಾಳಿ ನಿಂತಿತು. ತೊನೆಯುತ್ತಿದ್ದ ಕಾಡು ಒಮ್ಮೆಲೇ ಮಲೆತು ನಿಂತಂತೆ ಕಂಡಿತು. ಎದುರಿಗೆ ಸನಿಹದಲ್ಲೇ ಇದ್ದ ಬೃಹದಾಕಾರದ ಬೊಬ್ಬಿ ಮರಕ್ಕೆ ಕಣ್ಣು ಬಾಯಿ ಮೂಡಿ ರಾಕ್ಷಸಾಕಾರ ತಾಳುತ್ತಿರುವಂತೆ ಭಾಸವಾಗತೊಡಗಿತು.
ಹೊಳೆಯಾಚೆ ದೂರದಲ್ಲಿ ಎಲ್ಲೋ ಮರಕುಟುಕವೊಂದು ಒಣ ಬೈನೆ ದಬ್ಬಲಿಗೆ ತನ್ನ ಬಲಿಷ್ಟ ಕೊಕ್ಕಿನಿಂದ ಎಡೆಬಿಡದೆ ರಭಸವಾಗಿ ಕುಟುಕುತ್ತಿದ್ದು, ಅದರ ಸದ್ದು ರಾಜನ ಕಿವಿಗೆ ವಿಕಾರವಾಗಿ ಅಪ್ಪಳಿಸತೊಡಗಿತು.
ಕವರಿಕೊಳ್ಳುತ್ತಿದ್ದ ಬೆಂಕಿಯಿಂದ ಎದ್ದುಬರುತ್ತಿದ್ದ ಹೊಗೆ ರಾಜನ ಮೂಗಿಗೆ ನುಗ್ಗಿ ಉಸಿರುಕಟ್ಟಿದಂತೆನಿಸತೊಡಗಿತು. ಬೆಂಕಿ ಹತ್ತಿಕೊಂಡಿರುವುದು ಖಾತ್ರಿಯಾಯಿತು. …ಇನ್ನು ಕೂಗು ಹಾಕಲು ಹೇಳಿದ್ದರಲ್ಲ…… ಉಸಿರು ಹೊರಟರೆ ತಾನೇ ಕೂಗಿನ ಮಾತು!
ಆ ಭಯಾನಕವಾದ ವಾತಾವರಣದಿಂದ ಪಾರಾಗಿ, ಬಚಾವಾದರೆ ಸಾಕು ಎಂದುಕೊಳ್ಳುತ್ತಾ, ಕೆಮ್ಮುತ್ತಲೇ, ಬಂದ ದಾರಿಯಲ್ಲೇ ಹಿಂದಕ್ಕೆ ಓಡಿ ಬೇಲಿಯಂಚು ತಲಪಿ ಉಣುಗಲಿನ ಮೇಲಿಂದ ಹಾರಿ ನೆಗೆದು ಆಚೆಯ ಬಯಲಿನ ಬೆಳಕಿಗೆ ಕುಕ್ಕರಿಸಿಕೊಂಡ.
ಆಗ ಅವನ ಮನಸ್ಸಿಗೆ ನಿರಾಳವಾಯಿತು. ಹಾಗೆಯೇ ಕುಳಿತು ದೀರ್ಘವಾಗಿ ಉಸಿರೆಳೆದುಕೊಳ್ಳತೊಡಗಿದ. ಹೊಟ್ಟೆ ಚುರುಗುಡುತ್ತಿತ್ತು. ರೊಟ್ಟಿಯ ಗಂಟು ನೆನಪಾಯಿತು. ಜೇಬಿನಿಂದ ಹೊರತೆಗೆದ. ಅವನ ಸುತ್ತ ಅದರ ಪರಿಮಳ ಹರಡಿಕೊಳ್ಳತೊಡಗಿತು. ಆದರೆ ಅವನಿಗೇಕೋ ಅಲ್ಲಿಯೇ ಕುಳಿತು ತಿನ್ನಬೇಕೆನಿಸಲಿಲ್ಲ.
ಹಾಗೆಯೇ ಕಾಡಂಚಿನಲ್ಲಿ ಉದ್ದಕ್ಕೂ ಹಬ್ಬಿರುವ ಬೆಟ್ಟದ ನೆತ್ತಿಯಲ್ಲಿ ಸ್ವಲ್ಪ ದೂರ ನಡೆದು ನಂತರ ಯಾವುದಾದರೂ ಮರದ ನೆರಳಲ್ಲಿ ಕುಳಿತು ಸಾವಕಾಶವಾಗಿ ರೊಟ್ಟಿಯ ಮಜಾ ಸವಿಯಬೇಕೆನಿಸಿತು. ಮುಂಡಗತ್ತಿಯನ್ನು ಎಡ ಕಂಕುಳಲ್ಲಿ ಇರುಕಿಕೊಂಡು ರೊಟ್ಟಿಯ ಗಂಟನ್ನು ಹಾಗೆಯೇ ಒಂದು ಕೈಯಲ್ಲಿ ಹಿಡಿದು ಇನ್ನೊಂದು ಕೈಯಲ್ಲಿ ಗಾಡಿ ನೂಕುತ್ತಾ ಬೆಟ್ಟದೋರೆಯಲ್ಲಿ ಸ್ವಲ್ಪ ದೂರ ತನ್ನದೇ ಲಹರಿಯಲ್ಲಿ ನಡೆದಿದ್ದ.
ಕೆಳಗಿನ ಕಾಡಿನಲ್ಲಿ ದರಗಿನ ಸದ್ದಾದಂತಾಯಿತು. ಅತ್ತ ದೃಷ್ಟಿ ಹರಿಸಿದ. ಕಾಡೊಳಗಿಂದ ಬಯಲಿಗೆ ಏನೋ ನೆಗೆದಂತಾಯಿತು. ಮತ್ತೆ ಮನ ಬೆಚ್ಚಿದಂತೆನಿಸಿತು.
ಕಾಡಿನ ದಯ್ಯ ಏನಾದರೂ ಹಿಂಬಾಲಿಸಿ ಬಂದಿತೇ! ಎಂದುಕೊಳ್ಳುತ್ತಾ ಕ್ಷಣ ಹೆಜ್ಜೆ ತಡೆದು ಅತ್ತಲೇ ಗಮನಿಸಿದ.
ತನ್ನ ಎದೆ ಮಟ್ಟದಷ್ಟು ಎತ್ತರವಿರುವ ಮಿರಿ ಮಿರಿ ಹೊಳೆಯುವ ಮೈ ಬಣ್ಣದ ಅಳಗ ನಾಯಿ!
ಅಚ್ಚಕಪ್ಪು ಬಣ್ಣದ ಮೈಯ ಮಧ್ಯೆ ಅಲ್ಲಲ್ಲಿ ಅಂಗೈಯಗಲದ ಬಿಳಿಯ ಮಚ್ಚೆ!
ಆ ತರದ ನಾಯಿಯನ್ನು ಅವನು ಕಂಡಿರಲೇ ಇಲ್ಲ.
ತನ್ನೆದುರಿಗೇ ತುಸುದೂರದಲ್ಲಿ ನಿಂತಿದ್ದ ಅವನನ್ನು ಅದು ದುರುಗುಟ್ಟಿಕೊಂಡು ನೋಡಿತು. ಅದರ ಕೆಂಡದುಂಡೆಯಂತ ಕೆಂಪು ಕಣ್ಣುಗಳು ಗರ ಗರ ತಿರುಗುತ್ತಿರುವಂತೆನಿಸಿತು.
ʻಇದ್ಯಾಕೋ ಇಲ್ಲಿ ನಿಲ್ಲುವುದು ಸರಿಯಲ್ಲʼಎನಿಸಿ ಹೆಜ್ಜೆ ಚುರುಕುಗೊಳಿಸಿದ.
ಅದೂ ನಿಧಾನಕ್ಕೆ ಅವನನ್ನೇ ಹಿಂಬಾಲಿಸುವಂತೆ ನಡೆಯತೊಡಗಿತು.
ಸ್ವಲ್ಪ ದೂರ ನಡೆದವನು ಮತ್ತೆ ಧೈರ್ಯ ತಂದುಕೊಂಡು ಹಿಂತಿರುಗಿ ನೋಡಿದ. ಅದೂ ಬರುತ್ತಲೇ ಇದೆ. ತನ್ನ ಗೇಣುದ್ದದ, ತೆಳುವಾದ ನಾಲಿಗೆಯನ್ನು ಹೊರಚಾಚಿಕೊಂಡು ಜೊಲ್ಲು ಸುರಿಸುತ್ತಾ ಇದೆ. ಅದರ ಕೆಳದವಡೆಯ ಕೋರೆ ಹಲ್ಲುಗಳನ್ನು ಕಂಡು ಬೆಚ್ಚಿದ…..
ಇದು ದಯ್ಯವಾಗಿರಲಾರದು….. ಯಾರೋ ಕಾಡು ಬೇಟೆಗೋ ಮೀನು ಬೇಟೆಗೋ ಬಂದವರಿಂದ ತಪ್ಪಿಸಿಕೊಂಡ ನಿಜವಾದ ನಾಯಿಯೇ ಇರಬಹುದೇನೋ ಎಂದು ಮನಸ್ಸಿಗೆ ಧೈರ್ಯ ತಂದುಕೊಳ್ಳಲೆತ್ನಿಸುತ್ತಾ, ಹೇಗಾದರೂ ಸರಿ ಇದರಿಂದ ಪಾರಾಗಿ ತನ್ನ ಪಾಡಿಗೆ ತಾನು ಹೋಗಿ ಬಿಡಬೇಕು ಎಂದುಕೊಂಡು ಓಡು ನಡಿಗೆಯಲ್ಲಿ ಸಾಗತೊಡಗಿದ.
ಆ ನಾಯಿಯೇನಾದರೂ ಇನ್ನೂ ಹಿಂಬಾಲಿಸುತ್ತಲೇ ಇರಬಹುದೇ ಎಂಬ ಗುಮಾನಿಯಾಯಿತು. ನಡೆಯುತ್ತಲೇ ವಾರೆಗಣ್ಣಿನಲ್ಲಿ ಹಿಂದಕ್ಕೆ ನೋಡಿದ. ಆ ಅಳಗ ನಾಯಿಯೂ ಕೂಡಾ ಇವನಷ್ಟೇ ವೇಗದಲ್ಲಿ ಹಿಂಬಾಲಿಸುತ್ತಿದೆ.
ಅವನಿಗೆ ಅದರ ನಡವಳಿಕೆಯ ಬಗ್ಗೆ ಸಂಶಯ ಹೆಚ್ಚಾಗತೊಡಗಿತು.
ಇದು ಕಾಡ ದಯ್ಯವಲ್ಲದಿದ್ದರೆ ನನ್ನನ್ನೇಕೆ ಹೀಗೆ ಹಿಂಬಾಲಿಸುತ್ತಿದೆ. ಇದರಿಂದ ಹೇಗಾದರೂ ಪಾರಾಗಲೇಬೇಕು ಎಂದು ಗಟ್ಟಿ ಮನಸ್ಸು ಮಾಡಿ ಜೋರಾಗಿ ಓಡತೊಡಗಿದ.
ಒಂದು ಮರ ಎದುರಾಯಿತು. ಕೈಯಲ್ಲಿದ್ದ ಕತ್ತಿ ಹಾಗೂ ಗಾಡಿಯನ್ನು ಅಲ್ಲೇ ಎಸೆದು, ಬಿರ ಬಿರನೆ ಮರ ಏರತೊಡಗಿದ. ರೊಟ್ಟಿಯ ಗಂಟು ಮಾತ್ರ ಕೈಯಲ್ಲಿಯೇ ಇತ್ತು. ನಾಲ್ಕಾಳು ಎತ್ತರ ಏರಿ ಕೊಂಬೆಯ ದಟ್ಟ ಸೊಪ್ಪಿನ ಮಧ್ಯೆ ಅಡಗಿ ಕುಳಿತುಕೊಂಡ.
ಏದುಸಿರು ಒಂದು ಹದಕ್ಕೆ ಬಂದಂತಾಯಿತು. ಜೋರಾಗಿ ಉಸಿರೆಳೆದುಕೊಳ್ಳುತ್ತಾ, ಆ ಅಳಗ ನಾಯಿ ಎತ್ತ ಹೋಯಿತು ಎಂದು ಕೆಳಗೆ ದಿಣ್ಣೆಯ ಕಡೆಗೆ ನೋಡಿದ.
ಅಯ್ಯೋ !…..ಏನಾಶ್ಚರ್ಯ !…..
ಅದೂ ಕೂಡಾ ಮರದ ಕಡೆಗೇ ಬರುತ್ತಿದೆ !…….
ಮರದ ಬುಡಕ್ಕೇ ಬಂದುಬಿಟ್ಟಿತು…….. ಅಲ್ಲಿ ಬಿದ್ದಿದ್ದ ಕತ್ತಿಯನ್ನೊಮ್ಮೆ, ಮೂಸಿ ನೋಡಿತು……ನಂತರ ಮರದ ಬೊಡ್ಡೆಯನ್ನೊಮ್ಮೆ ಮೂಸಿ, ಆಮೇಲೆ ಮರದ ಮೇಲಕ್ಕೆ ನೋಡತೊಡಗಿತು. ಇನ್ನೇನು ಅದು ಅಲ್ಲಿಂದ ಎತ್ತಲಾದರೂ ತನ್ನ ದಾರಿ ಹಿಡಿದು ಹೋಗಬಹುದೆಂದು ನೋಡತೊಡಗಿದ
ಇಲ್ಲ, ಅದು ಅಲ್ಲಿಂದ ಹೋಗುವ ಸೂಚನೆಯೇನೂ ಕಾಣಲಿಲ್ಲ !
ನೆಲವನ್ನೊಮ್ಮೆ ಬಲಗಾಲಿನಿಂದ ಕೆರೆಯಿತು. ಹಾಗೆಯೇ ನೆಲದ ಮೇಲೆ ಕುಳಿತು, ಮೂತಿಯನ್ನು ಮುಂಚಾಚಿ, ಮುಂಗಾಲುಗಳನ್ನು ಆರಾಮವಾಗಿ ನಿಡಿದಾಗಿ ನೀಡಿತು. ಸ್ವಲ್ಪ ಹೊತ್ತಿನಲ್ಲೆ ನೆಲಕ್ಕೆ ದುಂಡೂರಿ ಹಾಗೆಯೇ ನಿದ್ದೆಹೋಯಿತು.
ರಾಜನಿಗೆ ಗಾಬರಿಯಾಗತೊಡಗಿತು. ಈ ಪ್ರಾಣಿ ತನ್ನನ್ನು ಬಿಟ್ಟುಹೋಗಲಾರದು. ತನ್ನನ್ನು ಸತಾಯಿಸಲೆಂದೇ ಕಾಡೊಳಗಿಂದ ಹಿಂಬಾಲಿಸಿ ಬಂದಿದೆ. ಇನ್ನು ಎಷ್ಟು ಹೊತ್ತು ಈ ಮರದ ಸೊಪ್ಪೊಳಗೆ ಅಡಗಿ ಕೂರುವುದು? ಅದೂ ಸಹಾ, ನೀನು ಕೆಳಗಿಳಿಯದ ಹೊರತು ನಾನು ಇಲ್ಲಿಂದ ಹೋಗಲಾರೆ ಎಂದು ಪಟ್ಟು ಹಿಡಿದವರಂತೆ ಮಲಗಿಬಿಟ್ಟಿದೆ. ಹೀಗೆಯೇ ಕತ್ತಲಾಗಿಬಿಟ್ಟರೆ……..ಆಗ ಕೆಳಗೆ ಕಾಯುತ್ತಿರುವ ಅದರದೇ ಮೇಲುಗೈಯಾಗುವುದಿಲ್ಲವೇ!….. ಈಗಾಗಲೇ ಮದ್ಯಾಹ್ನ ಮೀರಿದೆ. ಇಲ್ಲಿಯೇ, ಹೀಗೆಯೇ ಕುಳಿತು ಮುಂದೇನು ಮಾಡುವುದು?…ಈ ಕಷ್ಟದಿಂದ ಪಾರಾಗುವ ಪರಿಯೆಂತು?…..ಎಂದು ಯೋಚಿಸುತ್ತಾ ಕುಳಿತ. ಹಾಗೆಯೇ ಅರ್ಧ ಗಂಟೆ ಕಳೆಯಿತು. ಮರದ ಬುಡದ ಕಡೆಗೆ ಕಣ್ಣು ಹಾಯಿಸಿದ. ಆ ಅಳಗ ನಾಯಿ ಅಲ್ಲಿಯೇ ನೀಳವಾಗಿ ಮೈಚಾಚಿ ಮಲಗಿಬಿಟ್ಟಿದೆ.
ಹೀಗೆ ನಾನು ಹೆದರಿಕೊಂಡು ಅಡಗಿ ಕುಳಿತರೆ ಆಗದು. ನಾನು ಅದನ್ನೊಮ್ಮೆ ಏಕೆ ಹೆದರಿಸಿ ನೋಡಬಾರದು ಎನಿಸಿತು ರಾಜನಿಗೆ.
ಧೈರ್ಯ ತಂದುಕೊಂಡ. ಏನನ್ನಾದರೂ ಅದರ ಮೇಲೆ ಜೋರಾಗಿ ಎಸೆದರೆ, ಅದು ನಾಯಿಯೇ ಆಗಿದ್ದರೆ ಹೆದರಿ ಓಡದೇ ಇರುವುದಿಲ್ಲ……ಯೋಚಿಸುತ್ತಾ, ಕುಳಿತಲ್ಲೇ ಯಾವುದಾದರೂ ವಸ್ತುವಿಗಾಗಿ ಹುಡುಕಾಡಿದ. ಕೈಯಲ್ಲಿ ರೊಟ್ಟಿಯ ಗಂಟು ಮಾತ್ರ ಇತ್ತು. ಅದನ್ನು ಎಸೆಯುವ ಮನಸ್ಸಾಗಲಿಲ್ಲ. ಹಾಗೆಯೇ ಕಣ್ಣಾಡಿಸಿದ. ಮೊಳದುದ್ದದ ಒಣಕಟ್ಟಿಗೆಯೊಂದು ಕೊಂಬೆಯ ನಡುವೆ ಸಿಲುಕಿಕೊಂಡಿತ್ತು. ಮೆಲ್ಲಗೆ ಕೈಗೆ ತೆಗೆದುಕೊಂಡು , ಗುರಿಯಿಟ್ಟು ಕೆಳಗೆ ಮಲಗಿದ್ದ ಅಳಗ ನಾಯಿಯ ಮೇಲೆ ಜೋರಾಗಿ ಎಸೆದ.
ಗಾಢನಿದ್ದೆಯಲ್ಲಿದ್ದ ಅದರ ಬೆನ್ನ ಮೇಲೆ ಏನೋ ಜೋರಾಗಿ ಅಪ್ಪಳಿಸಿದ್ದರಿಂದ ಅದಕ್ಕೆ ನಿದ್ದೆಗೇಡಾಯಿತು. ದಿಗ್ಭ್ರಮೆಗೊಳಗಾದ ಆ ಅಳಗ ನಾಯಿ ʻಕಯ್ಯಂಯ್ಯೋ…ಕಯ್ಯಂಯ್ಯೋʼ ಎಂದು ಕಿರುಚುತ್ತಾ ಹಿಂತಿರುಗಿ ತಾನು ಬಂದಿದ್ದ ದಾರಿಯಲ್ಲೇ ನಾಗಾಲೋಟದಲ್ಲಿ ಓಡತೊಡಗಿತು.
ರಾಜನ ಮುಖದಲ್ಲಿ ಮಂದಹಾಸ ಮೂಡಿತು.
ಅಲ್ಲಿಯೇ ಕುಳಿತು ರೊಟ್ಟಿಯ ಗಂಟು ಬಿಚ್ಚತೊಡಗಿದ.






0 Comments