ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ.
ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ.ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು.ಇನ್ನು ಕೆಲವಕ್ಕೆ, ದಿನದ ದುಡಿಮೆಯ ದಣಿವು ನೀಗಿಸಿ ಮನಸು ಹಗುರಮಾಡಿಕೊಳ್ಳವ, ಸ್ವಾರಸ್ಯಕರ ಮಾತುಗಾರರು, ಸೋಮಾರಿಕಟ್ಟೆಯಲ್ಲಿ ಕುಳಿತು, ಕತೆಗಳ ಪೋಷಾಕು ತೊಡಿಸಿ ಹರಟೆಯ ರೂಪದಲ್ಲಿ ಹೇಳುವ ಪ್ರಯತ್ನವೂ ಇದಾಗಿದೆ.
ಮಲೆನಾಡಿನ ಬೈನೆ ಸೇಂದಿಯ ಅಡಸಾಲೆಗಳಲ್ಲಿ ಧಗಧಗಿಸುವ ಬೆಂಕಿಯ ಸುತ್ತ ಕುಳಿತು ಸಂಜೆಯ ಪಾನಗೋಷ್ಟಿಗಳನ್ನು ಉತ್ತೇಜನದಾಯಕವಾಗಿಸಲು ಹೇಳಿದ ʻಗುಂಡು ಪಾರ್ಟಿʼಯ ಕಥಾ ಪ್ರಸಂಗಗಳಾಗಿರಲೂಬಹುದು.
ಜನಪದ ಕತೆಗಳಂತೆ ಜನರ ಬಾಯಿಂದ ಬಾಯಿಗೆ ಹರಿದುಬಂದು ʻಕೇಳು ಕತೆʼ ಗಳಾಗಿ ಗಾಳಿಯಲ್ಲಿ ತೇಲಾಡಿ ಹೋಗುವ ಇಂತಹಾ ಪ್ರಸಂಗಗಳು ಹಲವಾರು.ಓದುಗರಿಗೆ ಹಿತವಾಗುವಂತಹಾ ಈ ಎಲ್ಲಾ ಪ್ರಸಂಗಗಳ ಹ್ಯೂಮರ್ ಮನಸ್ಸನ್ನು ಪ್ರಫುಲ್ಲಗೊಳಿಸಬಲ್ಲದೆಂಬುದನ್ನು ಮನಗಂಡು ʻಹಗ್ರಾಣದ ಕತೆʼಗಳ ರೂಪ ಕೊಟ್ಟು ಇಲ್ಲಿ ಪ್ರಸ್ತುತಪಡಿಸಲಾಗಿದೆ.
ಅಂಕಣ – 8
ಜೇನು ಕೀಳಲೆಂದು ಕೈಯಲ್ಲಿ ಸಣ್ಣದೊಂದು ಮಡಿಕೆಯನ್ನು, ಅದಕ್ಕೆ ಕಟ್ಟಿದ್ದ ಹಗ್ಗ ಹಿಡಿದು ನೇತಾಡಿಸುತ್ತಾ ರಾಜ ಆ ಕಾಡು ದಾರಿಯಲ್ಲಿ ಬಹಳ ಉಲ್ಲಾಸದಿಂದ ನಡೆದಿದ್ದ, ಅವನ ಸಂಭ್ರಮಕ್ಕೆ ಬೇರೆಯದೇ ಕಾರಣವಿತ್ತು. ಅಂದು ಮೊದಲ ಬಾರಿಗೆ ಅವನು ಕಾಡು ಬಸವಣ್ಣನನ್ನು ಕಣ್ಣಾರೆ ನೋಡುವವನಿದ್ದ !
‘ಇನ್ನೇನು ಮಳೆಗಾಲ ಬಂತು, ಗೊರಗ ನೇಯಿಸಕೆ ವಾಟೆ ಬೇಕು. ಹೆಡ್ನಳ್ಳಿ ಹೊಳೆತಾವ ನೋಡ್ಕಂಡ್ ಬಂದಿನಿ. ನಾನು ಹೊತ್ತಾನೆ ಹೋಗಿ ಒಂದ್ ಹೊರೆ ವಾಟೆ ಕಡ್ಕಂಡ್ ಬತ್ತಿನಿ.. ನೀನು ಅಣ್ದಿರ್ ಜೊತೆ ಹೋಗಿ ಒಂದ್ ಹೊರೆ ಸೌದೆ ತಂದ್ ಹಾಕಿ ರೊಟ್ಟಿ ತಿನ್ಕಂಡ್ ಬಾ…ಅಲ್ಲೇ ಒಂದ್ ಮೇಸ್ರಿ ಜೇನೈತೆ ಕಿಕ್ಕೊಡ್ತಿನಿ, ಔಸ್ದಿಗಾಗುತ್ತೆ… ಅಣ್ದಿರೆಲ್ಲಾ ಅವ್ವನ ಜೊತೆ ತ್ವಾಟದ ಕಡೆ ದನ ಹೊಡ್ಕಂಡ್ ಹೋಗಿ ಗುಡ್ಲಿಗೆ ಹೊರ್ಸಕ್ಕೆ ಕಲ್ಡ ಕುಯ್ಲಿʼ ಎಂದು ಅಪ್ಪ ರಾತ್ರಿಯೇ ಹೇಳಿದ್ದ.
`ಎಂದೂ ಕಾಣ್ದ ಹಾದಿ. ಆ ಹೆಡ್ನಳ್ಳಿ ಕಾಡಲ್ಲಿ ನೀವ್ ಯಾವ ತವ ಇರ್ತೀರಿ ಅಂತ ಹುಡ್ಕುತ್ತೆ ಈ ಹುಡ್ಗ..ʼ ಅವ್ವ ಸಂಶಯ ವ್ಯಕ್ತಪಡಿಸಿದ್ದಳು.
ʻನೀನೇ ಮಕ್ಳಿಗೆಲ್ಲಾ ಚಾಲ್ ಕಲುಸ್ತಿಯ. ಹೆಡ್ನಳ್ಳಿ ದಾರಿ ಏನು ಯಾರೂ ತಿರ್ಗಾಡುದ್ದಾ !ʼ ಎಂದು ಅವ್ವನ ಬಾಯಿ ಮುಚ್ಚಿಸಿದ ಅಪ್ಪ, ಇಲ್ಲಿಂದ ಸೀದ ಹೊರಟ್ರೆ ದೊಣ್ ಕಲ್ ಗುಡ್ಡ ದಾಟಿ, ಎರಡು ಮೈಲಿ ಒಂದೇ ದಾರಿಲಿ ನಡುದ್ರೆ ಆಯ್ತು. ಅಲ್ಲೆ ದಾರಿ ಅಡೆ ಒಂದ್ ದೊಡ್ಡ ಮೀಟ್ಲಿಮರ ಐತೆ. ಬಲಕ್ಕೆ ಕಾಡೊಳಗೆ ಒಂದೆರ್ಡು ಮಾರ್ ದೂರ್ದಲೆ ಕಾಡ್ ಬಸವಣ್ಣ… ಹತ್ ಗಂಟೆ ಹೊತ್ಗೆ ಬಂದು ಅದೇ ಮೀಟ್ಲಿಮರದ ಬಡ್ಡೆಲಿ ಕೂತಿರು…… ನಾನು ಕಾಡೊಳಕ್ಕೆ ಇಳ್ದು ಹೆಡ್ನಳ್ಳಿ ಹೊಳೆಲಿ ವಾಟೆ ಕಡ್ಕಂಡು ಅಷ್ಟ್ ಹೊತ್ಗೆ ಅಲ್ಲಿಗೆ ಬಂದಿರ್ತೀನಿ’ ಎಂದು ಹೇಳಿದ್ದ.
ರಾಜನಿಗೆ ಕಾಡೇನೂ ಹೊಸದಲ್ಲ. ಆದರೆ ಈ ದಾರಿಯ ಅನುಭವ ಇದೇ ಮೊದಲು. ದೊಡ್ಡ ಕಲ್ಲು ಗುಡ್ಡವನ್ನು ದೂರದಿಂದಲೇ ನೋಡಿ ಆಕರ್ಷಿತನಾಗಿದ್ದರೂ, ಸ್ವತ: ಅದರ ಬುಡದಲ್ಲೇ ಹಾದು ಹೋಗುವಾಗ ರೋಮಾಂಚನಗೊಂಡಿದ್ದ. ಅಪ್ಪ ಹತ್ತು ಗಂಟೆಯ ವೇಳೆಗೆ ಬರಹೇಳಿದ್ದರೂ ಉಲ್ಲಾಸಗೊಂಡಿದ್ದ ಅವನು ಲಗುಬಗೆಯಿಂದ ನಡೆದು ಅರ್ಧ ಗಂಟೆ ಮೊದಲೇ ಮೀಟ್ಲಿ ಮರ ತಲುಪಿದ್ದ. ದಾರಿಯ ಬದಿಯಲ್ಲಿ ವಿಶಾಲವಾಗಿ ಹರಡಿಕೊಂಡಿದ್ದ ಆ ಮರದ ಸೌಂದರ್ಯವನ್ನು ನೋಡುವ ಬದಲು, ಬಲಕ್ಕೆ ಕುರುಚಲು ಕಾಡಿನಿಂದ ಆವೃತವಾದ ಬಂಡೆಗಳ ಕಡೆಗೆ ಅವನ ದೃಷ್ಟಿ ಹರಿದಿತ್ತು. ಹರಡಿದ ಪೊದೆಯೊಳಗೆ ಒಂದೆರಡು ಮಾರು ನುಸುಳಿ ಹೋಗುವಷ್ಟರಲ್ಲಿ ನೆಲಮಟ್ಟದಿಂದ ಒಂದಡಿ ಮೇಲಕ್ಕೆ ಹರಡಿಕೊಂಡಿದ್ದ ವಿಶಾಲವಾದ ಬಂಡೆ ಗೋಚರಿಸಿತು. ಅದರ ಮೇಲೆ ಕವಿದಿದ್ದ ಪೊದೆಗಳನ್ನು ಎರಡು ಕೈಗಳಿಂದಲೂ ಪಕ್ಕಕ್ಕೆ ಸರಿಸಿದ.
ಎದುರಿಗೇ ನಿಂತ ಭಂಗಿಯಲ್ಲಿ ಬಸವಣ್ಣ ! ಹರುಷದಿಂದ ಪುಲಕಿತನಾದ ಅವನು ಆ ವಿಗ್ರಹವನ್ನು ತದೇಕಚಿತ್ತದಿಂದ ನೋಡತೊಡಗಿದ. ಅದರ ಗೊರಸುಗಳು, ಬಲಿಷ್ಠ ತೊಡೆಗಳು, ಅವುಗಳ ನಡುವೆ ನೇತಾಡುವ ಬೀಜ, ಹಿಂದಿನ ಬಾಲ, ಹೆಗಲ ಬಳಿ ಉಬ್ಬಿ ನಿಂತಿದ್ದ ಹಿಳಲು, ಕಿವಿಗಳು, ನೀಳವಾದ ಕೊಂಬುಗಳು ಎಲ್ಲವನ್ನೂ ಒಂದನ್ನೂ ಬಿಡದೆ ಆ ಮಬ್ಬು ಬೆಳಕಿನಲ್ಲಿ ಪ್ರೀತಿಯಿಂದ ಸವರುತ್ತಿದ್ದ. ಅವನಿಗೆ ಹೊತ್ತು ಹೋದದ್ದೇ ಗೊತ್ತಾಗಲಿಲ್ಲ ಮೀಟ್ಲಿಮರದ ಬಳಿ ‘ಜಬ್’ ಎಂದು ಸದ್ದಾಯಿತು.
‘ಈ ಹುಡ್ಗ ಇಷ್ಟೊತ್ತಾದ್ರೂ ಬರ್ದೆ ಎಲ್ಲಿ ಹೋಯಿತು?’ ಮನಸ್ಸನ್ನೆಲ್ಲಾ ಕಾಡು ಬಸವಣ್ಣನ ಮೇಲೆಯೇ ಕೇಂದ್ರೀಕರಿಸಿದ್ದ ರಾಜ ಅಪ್ಪನ ದನಿ ಕೇಳಿ ಹೊದೆಯೊಳಗಿಂದ ಹೊರ ಬಂದ. ಹೊರೆಯಿಳಿಸಿ ಮೀಟ್ಲೆ ಮರದ ಕೊಂಬೆಗೆ ಒರಗಿಸಿ ಮರದ ಬುಡದಲ್ಲಿ ಕುಳಿತು ಊರ ಕಡೆ ದಾರಿಯ ಮೇಲೆ ದೃಷ್ಟಿ ನೆಟ್ಟಿದ್ದ ಅಪ್ಪ ಬೀಡಿ ಹಚ್ಚುತ್ತಿದ್ದ.
‘ಈ ಕಾಡಿನ ನಡುವೆ ದಾರಿ ಬದಿಯಲ್ಲಿ ಈ ಬಸವಣ್ಣನ ವಿಗ್ರಹ ಏಕೆ ಪ್ರತಷ್ಠಾಪಿಸಿದ್ದಾರೆ? ಅಪ್ಪನನ್ನು ಈಗಲೇ ಕೇಳಿ ತಿಳಿದುಕೊಳ್ಳಬೇಕುʼ ಎಂದು ಅವಸರಿಸುತ್ತ ಅಪ್ಪನ ಬಳಿಸಾರಿದ,
‘ಎಲ್ಲಿ ಹೋಗಿದ್ಯಾ ಮಾರಾಯ್ನೆ….ಇನ್ನೂ ಬಂದಿಲ್ವೆನಾ ಅಂತಿದ್ದೆ. ಹ್ಞೂಂ, ಬಾ ಬಾ ಮಡಿಕೆ ತಗಾ’ ಎಂದು ಅವಸರಿಸುತ್ತಾ ಅಪ್ಪ ಕಾಡೊಳಗೆ ಹತ್ತಾರು ಮಾರು ದೂರ ನುಸುಳಿ ಒಂದು ಸಣ್ಣ ನಂದಿ ಮರದ ಬುಡದಲ್ಲಿ ನಿಂತುಕೊಂಡ. ತನ್ನ ಮನಸ್ಸಿನ ಕುತೂಹಲ ನೀಗದೆ ನಿರಾಶನಾಗಿದ್ದ ರಾಜ ಅಪ್ಪನನ್ನು ಹಿಂಬಾಲಿಸಿ ಬಂದು ಮರದ ಬಳಿ ನಿಂತುಕೊಂಡ.
ಖಾಕಿ ಅಂಗಿ, ಖಾಕಿ ಚಡ್ಡಿ ತೊಟ್ಟಿದ್ದ ಅಪ್ಪ, ಸೊಂಟಕ್ಕೆ ಬೆಲ್ಟಿನಂತೆ ಕಟ್ಟಿಕೊಂಡಿದ್ದ ವಡ್ಯಾಣಕ್ಕೆ ಮುಂಡಗತ್ತಿ ಸಿಕ್ಕಿಸಿಕೊಂಡು, ವಡ್ಯಾಣದ ಕೊಕ್ಕೆಗೆ ಉಗ್ಗದ ಮಡಿಕೆ ನೇತಾಡಿಸಿಕೊಂಡು ಸರಸರನೆ ಮರ ಏರಿ ಎರಡಾಳೆತ್ತರದಲ್ಲಿದ್ದ ಅಡ್ಡ ಕೊಂಬೆಯ ಮೇಲೆ ಕುಳಿತುಕೊಂಡ.
ಆ ಮರದಲ್ಲಿ ಜೇನು ಎಲ್ಲಿದೆ ಎಂದು ರಾಜ ಕುತೂಹಲದಿಂದ ಮರದ ಮೇಲೆಲ್ಲಾ ಕಣ್ಣಾಡಿಸುತ್ತಾ ನಿಂತುಕೊಂಡ, ಜೇನಿನ ಸುಳಿವು ಎಲ್ಲಿಯೂ ಕಾಣಲಿಲ್ಲ. ಅದುವರೆಗೂ ಅವನು ತಮ್ಮ ತೋಟದ ದೊಡ್ಡ ಮರದ ಕೊಂಬೆಗಳಲ್ಲಿ ನೇತಾಡುವ ಹೆಜ್ಜೇನು ನೋಡಿದ್ದ. ಹುತ್ತಗಳಲ್ಲಿ, ಬೈನೆ ದಬ್ಬಲುಗಳ ಒಳಗೆ ಕಟ್ಟಿದ್ದ ತುಡುವೆ ಜೇನು ನೋಡಿದ್ದ. ಆದರೆ ಅಪ್ಪ ಹೇಳುವ ಈ ಮೇಸ್ರಿ ಜೇನು ಎಂಬ ಪ್ರಭೇದದ ಜೇನಿನ ಗೂಡನ್ನು ನೋಡಿರಲಿಲ್ಲ. ಅಣ್ಣನ ಪಠ್ಯಪುಸ್ತಕದಲ್ಲಿ ನೋಡಿದ್ದ. ಸೊಳ್ಳೆಯಷ್ಟು ಸಣ್ಣ ಜೇನ್ನೊಣಗಳು ಮರದ ಸಣ್ಣ ಸಣ್ಣ ಮೊಟರೆಗಳಲ್ಲಿ ಗೂಡು ಮಾಡಿಕೊಂಡು ಜೇನು ಸಂಗ್ರಹಿಸುವ ನುಸುರಿ’ ಜೇನು ಎಂದರೆ ಇದೇ ಇರಬಹುದೇ ಎಂದುಕೊಳ್ಳುತ್ತಾ ಅಪ್ಪನ ಚಟುವಟಿಕೆಯ ಕಡೆಯೇ ಗಮನವಿಟ್ಟು ನಿಂತುಕೊಂಡ.
ಮಡಿಕೆಯನ್ನು ಪಕ್ಕದ ಸಣ್ಣ ಕೊಂಬೆಗೆ ನೇತು ಹಾಕಿದ ಅಪ್ಪ ಅಡ್ಡ ಗೊಂಬೆಯಲ್ಲಿ ಒಂದು ಕಡೆ ಮಳ್ಳೆಯಂತೆ ಮಡಿಕೆಯಾಕಾರದಲ್ಲಿ ಉಬ್ಬಿಕೊಂಡಿದ್ದ ಜಾಗದಲ್ಲಿ ಮುಂಡಗತ್ತಿಯಿಂದ ಕಡಿಯತೊಡಗಿದ. ಅವನು ಕಡಿಯುತ್ತಿದ್ದ ಜಾಗದಿಂದ ಹೊರಬಂದ ಸಣ್ಣ ಸಣ್ಣ ಕೀಟಗಳಂತಹ ಜೇನ್ನೊಣಗಳು ಅವನ ಗಡ್ಡ, ಮೀಸೆಗಳಿಗೆಲ್ಲಾ ಮೆತ್ತಿಕೊಂಡು ಹಿಡಿದು ತಿರುಚ ತೊಡಗಿದವು. ಅವುಗಳ ಕಿರಿಕಿರಿಯನ್ನು ಸಹಿಸುತ್ತಲೇ ಕಡಿಯುತ್ತಾ ಹೋದ ಅಪ್ಪ, ಆ ಮರದ ಟೊಳ್ಳೊಳಕೆ ತನ್ನ ಒಂದು ಕೈ ನುಸುಳುವಂತಾದಾಗ ನಿಲ್ಲಿಸಿದ. ಆ ಮರದ ಪೊಟರೆಯೊಳಗೆ ಕೈ ತೂರಿಸಿ ಹಿಡಿ ತುಂಬಾ ಉಂಡೆ ಉಂಡೆ ಜೇನು ಹೊರತಂದು ಮಡಿಕೆಗೆ ಹಾಕತೊಡಗಿದ. ಕೈ ಬೆರಳ ಸಂಧಿಯಲ್ಲಿ ಸೋರುತ್ತಿದ್ದ ಜೇನನ್ನು ನೆಕ್ಕಿಕೊಳ್ಳುತ್ತಾ ಮತ್ತೆ ಮತ್ತೆ ಪೊಟರೆಯೊಳಗೆ ಕೈ ತೂರಿಸಿ ಹೊರತರುವುದನ್ನು ನೋಡುತ್ತಾ ನಿಂತಿದ್ದ ರಾಜನ ಬಾಯಿಂದ ಜೊಲ್ಲು ಇಳಿದು ಹೋಗುತ್ತಿತ್ತು.
ತನ್ನ ಕೆಲಸ ಮುಗಿಸಿದ ಅಪ್ಪ ತನ್ನ ಗಡ್ಡ, ಮೀಸೆ, ಕಣ್ಣು ಹುಬ್ಬು ಹೀಗೆ ಮುಖದ ಮೇಲಿನ ಕೂದಲುಗಳನ್ನು ತಬ್ಬಿ ನುಲಿಯುತ್ತಿದ್ದ ಆ ಪುಟ್ಟ ಜೇನ್ನೊಣಗಳನ್ನು ಕಿತ್ತು ಕಿತ್ತು ಎಸೆಯತೊಡಗಿದ. ರಾಜನಿಗೆ ಮರೆತಂತಾಗಿದ್ದ ಕಾಡು ಬಸವಣ್ಣನ ವಿಚಾರ ಮತ್ತೆ ಕಾಡತೊಡಗಿತು. ಅಪ್ಪ ಕೆಳಗಿಳಿಯುತ್ತಲೇ ಆ ವಿಚಾರ ಕುರಿತು ಕೇಳಿ ತಿಳಿದುಕೊಳ್ಳಲೇಬೇಕು ಎಂದುಕೊಳ್ಳುತ್ತಾ ಮರದ ಬುಡಕ್ಕೆ ಹೋಗಿ ನಿಂತುಕೊಂಡ.
ಮತ್ತೆ ತಡ ಮಾಡಬಾರದು ಎಂದುಕೊಳ್ಳುತ್ತಾ ‘ಅಪ್ಪಾ ಆ ಕಾಡು ಬಸವಣ್ಣನ ವಿಚಾರ..” ಎಂದು ಶುರು ಮಾಡಿದ. ‘ಅದೊಂದು ದೊಡ್ಡ ಕತೆ ಬುಡು… ಇನ್ಯಾವಾಗಲಾದ್ರೂ ಹೇಳ್ತಿನಿ….ಈಗ ಹಿಡಿ’ ಎನ್ನುತ್ತಾ ಜೇನು ಅರಿಯಿಂದ ತುಂಬಿದ ಮಡಿಕೆಯ ಉಗ್ಗವನ್ನು ರಾಜನ ಕೈಗೆ ಹಿಡಿಸಿದ.
ಮುಖದ ಕೂದಲಿನೊಳಗೆ ಇನ್ನೂ ಉಳಿದು ಕಿರಿಕಿರಿ ಮಾಡುತ್ತಿದ್ದ ನೊಣಗಳನ್ನು ಹುಡುಕಿ ತೆಗೆಯುತ್ತಾ ಮುಂದೆ ನಡೆಯುತ್ತಿದ್ದ ಅಪ್ಪನನ್ನು ರಾಜ ಸಪ್ಪೆ ಮೋರೆ ಹಾಕಿಕೊಂಡು ಹಿಂಬಾಲಿಸಿದ.
ಕೊಂಚ ಸುಧಾರಿಸಿಕೊಳ್ಳಬೇಕೆನಿಸಿದ ಅಪ್ಪ ಕಟ್ಟೆಯಂತೆ ಹೆಣೆದುಕೊಂಡಿದ್ದ ಮೀಟ್ಲಿ ಮರದ ಬೇರುಗಳ ಮೇಲೆ ಕುಳಿತುಕೊಂಡ. ನಿರಾಸೆಯಿಂದ ಕುಗ್ಗಿಹೋಗಿದ್ದ ರಾಜ, ಅಪ್ಪನೆದುರಿಗೆ ನಿಂತು ಬಸವಣ್ಣನ ಬಂಡೆಯಿರುವ ಪೊದೆಯೆಡನೆ ಕೈ ಮಾಡುತ್ತಾ ಕೊನೆಯ ಪ್ರಯತ್ನವೆಂಬಂತೆ “ಅಪ್ಪಾ….’ ಎಂದು ರಾಗ ಎಳೆದ.
ಮಗನ ಧ್ವನಿಯಲ್ಲಿದ್ದ ದೈನ್ಯತೆ ಗಮನಿಸಿದ ಅಪ್ಪನಿಗೆ ಮನ ಕರಗಿತು. ಹೇಳುವುದೇ ಸರಿ ಎನಿಸಿತು. ನೆರಳಿನಲ್ಲಿ ಮತ್ತಷ್ಟು ವಿರಾಮವಾಗಿ ಕುಳಿತುಕೊಳ್ಳುತ್ತಾ ಜೇಬಿನಿಂದ ಒಂದು ಬೀಡಿ ತೆಗೆದು ಹೊತ್ತಿಸಿ ‘ಬಾ ಈ ಕಡೆ ಕೂತ್ಗ ಹೇಳ್ತೀನಿ’ ಎಂದು ಶುರು ಮಾಡಿದ.
ಇಲ್ಲಿಂದ ಒಂದ್ ಮೈಲಿ ಅಷ್ಟೆ… ಎದುರಿನ ಗುಡ್ಡ ಇಳುದ್ರೆ, ಅದೇ ಹೆಡ್ನಳ್ಳಿ, ಅಲ್ಲಿ ಕಟ್ಣೇಗೌಡ್ರು ಅಂತಾ ಒಬ್ರಿದ್ರು… ಆ ಕಾಲಕ್ಕೆ ಈ ಸುತ್ತಮುತ್ತ ದನಿನ ಆಸ್ಪತ್ರೆ ಹೋಗ್ಲಿ, ಮನುಷ್ಯರ ಆಸ್ಪತ್ರೆನೇ ಇತ್ತಿಲ್ಲ… ದನಕರುಗಳಿಗೆ ಏನೇ ಕಾಯಿಲೆ ಕಷ್ಟ ಆದ್ರೂ ಸುತ್ತಲ ಹಳ್ಳಿಯ ಜನ ಎಲ್ಲಾ ಈ ಕಟ್ಣೇಗೌಡ್ರ ಹತ್ರಕ್ಕೆ ಹೋಗ್ತಿದ್ದರು.
ಅವರು ಕಟ್ಳೆ ಮಾಡಿ ಮಂತ್ರಿಸಿ ಕೊಟ್ಟ ಬೂದಿಯನ್ನು ತಂದು ದೇವರ ಫೋಟದ ಮುಂದೆ ಇಟ್ಟು, ನಂತರ ಹುಷಾರು ತಪ್ಪಿದ ದನದ ಮೇಲೆ ಸಿಂಪಡಿಸುವುದರಿಂದ ರೋಗ ವಾಸಿಯಾಗುತ್ತದೆಂದು ಜನ ನಂಬುತ್ತಿದ್ದರು. ಮಂತ್ರಿಸಿದ ಬೂದಿ ಅಲ್ಲದೇ ಆದರೊಂದಿಗೆ ಆಯಾ ಕಾಯಿಲೆಗಳಿಗೆ ಆನುಗುಣವಾಗಿ ಹಸಿರು ಔಷಧಿಯನ್ನೂ ಕೊಟ್ಟು ಕಳಿಸುತ್ತಿದ್ದರು.
ಜ್ವರ ಚಳಿಯಿಂದ ಮಂಕಾಗಿದ್ದರೆ, ಹೊಟ್ಟೆ ಉಬ್ಬರಿಸಿಕೊಂಡು ಸಗಣಿ ಹಾಕದೇ ನಿಂತಿದ್ದರೆ, ನೀರಿನಂತೆ ಉಚ್ಚುತ್ತಿದ್ದರೆ, ಅವರು ಮಂತ್ರಿಸಿ ಕೊಟ್ಟ ಬೂದಿಯಿಂದಲೋ, ಇಲ್ಲ ಕಳಿಸಿದ ಹಸಿರು ಔಷಧಿಯಿಂದಲೋ, ಅಂತೂ ಆಯಾ ಜಾನುವಾರುಗಳ ಕಾಯಿಲೆ ಗುಣವಾಗುತ್ತಿತ್ತು.
ಜೋರು ಮಳೆಗಾಲದಲ್ಲಿ ಮಳೆ-ಗಾಳಿ, ಚಳಿಗೆ ಕೊರೆತುಕೊಂಡು ಇನ್ನೇನು ಬದುಕಲಾರವು ಎಂದು ಆಸೆ ಬಿಟ್ಟಿದ್ದ ದನಗಳೂ ಸಹ ಕಟ್ಣೇಗೌಡರು ಜೇನುತುಪ್ಪ ಬೆರೆಸಿ ಮಾಡಿ ಕಳಿಸುತ್ತಿದ್ದ ಔಷಧದಿಂದ ಎದ್ದು ನಿಂತು ಮೇವು ತಿಂದು ಬದುಕಿಕೊಳ್ಳುತ್ತಿದ್ದದ್ದು ಒಂದು ರೀತಿ ಪವಾಡದಂತೆ ತೋರುತ್ತಿತ್ತು.
ಅವನ ಅಪ್ಪ ಹೇಳುತ್ತಲೇ ಇದ್ದ. ರಾಜನ ಕುತೂಹಲ ಇನ್ನೊಂದು ದಿಕ್ಕಿಗೆ ಹರಿಯಿತು. ʻಔಷ್ದಿಗೆ ಮಂತ್ರಕ್ಕೆ ಎಲ್ಲ ಎಷ್ಟ್ ಚಾರ್ಜ್ ಮಾಡ್ತಾ ಇದ್ರು?… ಹಂಗಾದ್ರೆ ಆ ಗೌಡ್ರು ಒಳ್ಳೆ ದುಡ್ ಮಾಡಿರಬೌದಲ್ವ?ʼ ಎನ್ನುತ್ತಾ ಅಪ್ಪನ ಮುಖ ನೋಡಿದ.
ʻಇಲ್ಲ ಇಲ್ಲ ಅವ್ರ ನಾಟಿ ವೈದ್ಯಕ್ಕೆ ದುಡ್ ಮುಟ್ತಾ ಇತ್ತಿಲ್ಲ. ಹಂಗೇನಾದ್ರೂ ಯಾರಾದ್ರೂ ದುಡ್ ತಗೊಳ್ಲೇಬೇಕು ಅಂತಾ ಜುಲ್ಮೆ ಮಾಡಿದ್ರೆ,ʻಹಂಗೇನಾದ್ರೂ ದುಡ್ ತಗಂಡ್ರೆ ಔಷದಿಯ ಮಹಿಮೆನೇ ಕಡಿಮೆ ಆಗುತ್ತೆ. ಸುಮ್ನೆ ಒತ್ತಾಯ ಮಾಡ್ಬೇಡ. ಎಂದು ನಿರಾಕರಿಸಿಬಿಡ್ತಿದ್ದರು.
ʻಜನ ಅವರಿಗೆ ಪ್ರಿಯವಾದ ಭ.ಟ್ಟಿ, ಬೇಯಿಸಿದ ಕೋಳಿಮೊಟ್ಟೆ ಕೊಟ್ಟರೆ ಒಪ್ಪಿ ಪ್ರೀತಿಯಿಂದ ಪಡೆದುಕೊಳ್ಳುತ್ತಿದ್ದರು. ಔಷದಿ ತಯಾರುಮಾಡಲು ಬೇಕಾದ ಜೇನುತುಪ್ಪ,ತೈಲ ಇತ್ಯದಿಗಳನ್ನು ಮಾತ್ರ ಜನರೇ ತಂದುಕೊಡಬೇಕಾಗಿತ್ತು. ರಾಜನಿಗೆ ಆ ಮಾತು ಕೌತುಕವೆನಿಸಿತು.
ʻಹೌದಾʼ ಎಂದು ಅಪ್ಪನ ಮುಖ ನೋಡಿದ.
ಆದರೆ ಅಷ್ಟು ಹೊತ್ತು ಹೇಳಿದರೂ ಅವನ ಅಪ್ಪ ಮುಖ್ಯ ವಿಚಾರಕ್ಕೆ ಬಂದಿಲ್ಲವಲ್ಲ ಎಂದು ಕಸಿವಿಯಾಯಿತು.
‘ಕಾಡು ಬಸವಣ್ಣ…’ ಎಂದು ನೆನಪು ಮಾಡಲು ಯತ್ನಿಸಿದ..
‘ಹೇಳ್ತೀನಿ ತಡಿ’ …ಎನ್ನುತ್ತಾ ಅಪ್ಪ ಮುಂದುವರೆಸಿದ…
ಸಣ್ಣ ಪುಟ್ಟ ಕಾಯಿಲೆಯ ಗುಣಲಕ್ಷಣ ಹೇಳಿ ಮಂತ್ರಿಸಿದ ಬೂದಿ ಹಾಗೂ ಔಷಧಿಯನ್ನೇನೋ ತರಬಹುದಾಗಿತ್ತು. ಆದರೆ ಇಳಿಜಾರಿನಲ್ಲಿ ದನಗಳು ಜಾರಿ ಕುಕ್ಕರಿಸಿಕೊಂಡು ರುಂಡಿ ಜಾರಿದಾಗ, ರುಂಡಿ ಒತ್ತಿಸಿಕೊಂಡು ಸರಿಪಡಿಸಿಕೊಂಡು ಬರಲು ಆ ದನವನ್ನೇ ಹೆಡ್ನಳ್ಳಿಯ ಅವರ ಮನೆಯ ಬಳಿಯೇ ಹೊಡೆದು ಕೊಂಡು ಹೋಗಬೇಕಾಗುತ್ತಿತ್ತು……
ರಾಜನಿಗೆ ಅವನ ಅಪ್ಪನ ಮಾತುಗಳ ಅರ್ಥ ಏಕೋ ತಿಳಿಯಲಿಲ್ಲ.
‘ರುಂಡಿ ಅಂದರೆ!” ಎಂದ. ಅವನ ಅಪ್ಪ ಮತ್ತೊಂದು ಬೀಡಿ ಹೊತ್ತಿಸಿಕೊಂಡು ಮಾತು ಮುಂದುವರಿಸಿದ.
ತೊಡೆಯ ಮೂಳೆಯ ಕೀಲು, ಮೇಲಿನ ದೊಡ್ಡ ಮೂಳೆಗೆ ಸೇರಿಕೊಳ್ಳುವ ಜಾಗಕ್ಕೆ ‘ರುಂಡಿ’ ಅಂತಾರೆ. ಜಾರಿ ಮೂಳೆಯ ಆ ಕೀಲು ತಪ್ಪಿದಾಗ ದನಗಳು ಮುಂದೆ ನಡೆಯಲಾರದೆ ಕುಂಟತೊಡಗುತ್ತವೆ. ಅದನ್ನೇ ಅಲ್ವಾ ಈಗ ದನಿನ್ ಡಾಕ್ಟ್ರು ಅದೆಂತದೋ ‘ಡಿಸಲೊಕೇಸನ್ನು’ ಅನ್ನದು. ಅಂತಾ ‘ರುಂಡಿ ಹೋದ’ ದನಗಳನ್ನು ಕಟ್ಣೇಗೌಡರ ಮನೆಯ ಬಳಿಗೆ ಹೊಡೆದುಕೊಂಡು ಹೋದರೆ ತೈಲ ಹಾಕಿ ನೀವಿ ‘ರುಂಡಿ ಒತ್ತಿʼ ಸರಿಪಡಿಸುತ್ತಿದ್ದರು. ಆದರೆ ನಾನು ಆಗ್ಲೇ ಹೇಳಿದಂತೆ ಅವರು ಯಾವುದಕಾರಣಕ್ಕೂ ಯಾರದೇ ಮನೆಯ ಬಳಿಗೂ ಬರುತ್ತಿರಲಿಲ್ಲ.
ಹಿಂಗಿರುವಾಗ ನಮ್ಮ ಮನೆಯ ಒಂದು ಎತ್ತಿನ ರುಂಡಿ ಜಾರಿಬಿಟ್ಟಿತ್ತು. ಅದು ಎಷ್ಟು ಜೋರಾಗಿ ಜಾರಿ ಕುಕ್ಕರಿಸಿಕೊಂಡು ಬಿಟ್ಟಿತ್ತೋ ಏನೋ!
ಹೆಜ್ಜೆ ಕಿತ್ತಿಟ್ಟು ಕುಂಟಿಕೊಂಡು ಸಹಾ ನಡೆಯಲಾರದಂತಾಗಿತ್ತು. ವಚ್ಚಮಗ್ಗುಲಾಗಿ ಮಲಗಿ ನಾಲ್ಕು ಕಾಲುಗಳನ್ನೂ ನಿಡಿದಾಗಿ ಚಾಚಿ ನೋವು ತಿನ್ನುತ್ತಾ ಮಲಗಿಬಿಟ್ಟಿತು.
ಕಟ್ಣೇಗೌಡರ ವೈದ್ಯವಿಲ್ಲದೆ ಇದು ಸರಿಯಾಗಲಾರದು….. ಆದರೆ ಎದ್ದು ಕಾಲೂರಿ ನಿಲ್ಲಲೂ ಆಗದ ಇದನ್ನು ನಡೆಸಿಕೊಂಡು ಅವರ ಬಳಿ ಹೋಗುವುದು ಹೇಗೆ?... ಮನೆಯವರೆಲ್ಲಾ ತಲೆ ಕೆಡಿಸಿಕೊಂಡರು.
ಹೇಗಾದರೂ ಮಾಡಿ ಕಟ್ಣೇಗೌಡರಿಂದ ಈ ಎತ್ತಿನ ರುಂಡಿ ನೀವಿಸಿದರೆ ಕೀಲು ಕೂಡುವಂತೆ ಆಗಿ ಎದ್ದು ನಿಲ್ಲುವಂತೆ ಆದೀತು… ಆದರೆ ಅಲ್ಲಿಗೆ ತಲಪುವುದು ಹೇಗೆ?
ನಮ್ಮ ಅಪ್ಪ ಕೆಲವರೊಂದಿಗೆ ಚರ್ಚೆ ಮಾಡಿ ಒಂದು ನಿರ್ಧಾರಕ್ಕೆ ಬಂದರು.
ಎತ್ತಿನ ಮುಂದಿನ ಹಾಗೂ ಹಿಂದಿನ ಕಾಲುಗಳನ್ನು ಹಗ್ಗದಿಂದ ಜೋಡಿಸಿ ಕಟ್ಟಿದರು. ಒಂದು ಗಟ್ಟಿಯ ಗಳವನ್ನು ತಂದು ಕಾಲುಗಳ ಸಂದಿ ಸರಿದು ಹಿಂದೆ ಮೂರು ಜನ, ಮುಂದೆ ಮೂರು ಜನ ಹೊತ್ತುಕೊಂಡು ಹೆಡ್ನಳ್ಳಿಯ ಕಡೆ ನಡೆಯಲು ಶುರು ಮಾಡಿದರು.
ನಾನು ಆಗಿನ್ನೂ ನಿನ್ನಷ್ಟು ಹುಡುಗ…. ತೈಲ ಹಾಗೂ ಇತರ ಸಾಮಗ್ರಿಗಳನ್ನು ತುಂಬಿದ ಚೀಲವನ್ನು ಹೆಗಲಲ್ಲಿ ನೇತು ಹಾಕಿಕೊಂಡು ನಾನೂ ಅವರ ಹಿಂದೆ ನಡೆದೆ. ಹೊತ್ತಿದ್ದವರು ನಡೆದಂತೆ, ಶರೀರ ತಲೆ ಕೆಳಗಾಗಿದ್ದ ಎತ್ತಿನ ದೇಹ ಕುಲುಕಿದಂತೆ ಕೆಳಕ್ಕೆ ಜಗ್ಗುತ್ತಿತ್ತು.
ನಾವು ಈ ಜಾಗಕ್ಕೆ ಬಂದು ತಲುಪುವ ವೇಳೆಗೆ ಎತ್ತನ್ನು ಹೊತ್ತಿದ್ದವರಿಗೆ ಬಹಳ ಆಯಾಸವಾಗಿತ್ತು. ಹೊರೆಯನ್ನು ಇಳುಕಿ ಎತ್ತನ್ನು ಗಳದ ಸಮೇತ ನೆಲದ ಮೇಲೆ ಮೆಲ್ಲಗೆ ಮಲಗಿಸಿ ಬೀಡಿ ಹತ್ತಿಸಿದರು.
ದಣಿವಾರಿಸಿಕೊಳ್ಳುತ್ತಿದ್ದ ನಮಗೆ ಎತ್ತಿನ ಬಳಿ ಏನೋ ಚಲನೆ ಕಂಡಂತಾಯಿತು. ಕುತೂಹಲದಿಂದ ಆ ಕಡೆ ನೋಡಿದೆವು.
ಏನಾಶ್ಚರ್ಯ! ಊರಲ್ಲಿ ಸ್ವಲ್ಪವೂ ಮಿಸುಕಾಡದೆ ಹೆಣದಂತೆ ನಿಡಿದಾಗಿ ಕಾಲು ಚಾಚಿರುತ್ತಿದ್ದ ಎತ್ತು ಕಾಲುಗಳನ್ನು ಅಲುಗಿಸುತ್ತಿದೆ. ಇದ್ದ ಜನರೆಲ್ಲ ಕುತೂಹಲದಿಂದ ಅದರ ಸುತ್ತುವರೆದವರು, ನಮ್ಮಪ್ಪನನ್ನು ನೋಡಿದ ಅದು ತಲೆಯನ್ನು ಒಂದೆರಡು ಬಾರಿ ಎತ್ತಿ ಎತ್ತಿ ಹಾಕಿತು. ಎಲ್ಲರೂ ಕೌತುಕದಿಂದ ಗಮನಿಸತೊಡಗಿದರು
ಎತ್ತು ಕಾಲುಗಳನ್ನು ಹಿಂದೆ ಮುಂದೆ ಅಲುಗಿಸುತ್ತಿದೆ. ಅದು ಏಳಲು ಪ್ರಯತ್ನಿಸುತ್ತಿದೆ ಎಂದು ಗೊತ್ತಾಯಿತು. ಗಳವನ್ನು ತೆಗೆದು ಹಾಕಿ ಕಟ್ಟಿದ ಕಾಲುಗಳನ್ನು ಬಿಚ್ಚಿದರು. ಸ್ವಲ್ಪ ಹೊತ್ತು ದೇಹ ಅಲುಗಿಸಿ ಹಿಂದೆ ಮುಂದೆ ಸರಿದಾಡಿದ ಆ ಎತ್ತು ಎದ್ದು ಕುಳಿತುಕೊಂಡಿತು.
ನಂತರ ಸ್ವಲ್ಪ ಹೊತ್ತು ಸುಧಾರಿಸಿಕೊಂಡು ಎದ್ದು ನಿಂತಿತು, ಊರ ದಿಕ್ಕಿಗೆ ತಿರುಗಿ ನಡೆಯತೊಡಗಿತು. ಅಲ್ಲಿಯವರೆಗೂ ಹೊತ್ತು ತಂದಿದ್ದ ಆ ಜನ ವಿಸ್ಮಯದಿಂದ ಮಾತಾಡುತ್ತಾ ಅದನ್ನು ಹಿಂಬಾಲಿಸಿದರು.
ಇದೇನಿದು ಈ ಪವಾಡ ಎಂದು ಕೆಲವರು ವಿಸ್ಮಯ ಪಟ್ಟರೆ, ನಮ್ಮ ಅಪ್ಪ ಮಾತ್ರ-ಇಲ್ಲಿಯವರೆಗೂ ದೇಹ ಸಣ್ಣಗೆ ಕುಲುಕುತ್ತಾ ಬಂದಿದ್ದರಿಂದ ತಪ್ಪಿ ಹೋಗಿದ್ದ ಈ ಕೀಲು ಏನಾದರೂ ಅದರ ಜಾಗಕ್ಕೆ ಕೂಡಿಕೊಂಡಿರಬಹುದೇ’ ಎಂದು ಅನುಮಾನದಿಂದಲೇ ಹೇಳುತ್ತಿದ್ದರು.
ಹೊತ್ತುಕೊಂಡು ಹೋಗಿದ್ದ ಎತ್ತು ಎದ್ದು ನಡೆದು ಬರುವ ಕೌತುಕ ನೋಡಲು ಜನ ಜಮಾಯಿಸಿದರು. ಪಟೇಲರೂ ಸೇರಿದಂತೆ ಊರ ಹಿರಿಯರೂ ಆ ಗುಂಪಿನಲ್ಲಿ ಸೇರಿಕೊಂಡರು. ಊರ ದೇವಸ್ಥಾನದ ಪೂಜೆ ಮಾಡುವ ಪುರೋಹಿತರಿಗೂ ಸುದ್ದಿ ಹೋಯಿತು. ಬೆಳಗ್ಗೆ ಪಟೇಲರಿಗೆ ಕರೆ ಕಳಿಸಿದರು, ಪಟೇಲರೊಂದಿಗೆ ನಮ್ಮ ಅಪ್ಪನೂ ಹೋಗಿದ್ದರು.
ʻನಡೆಯಲಾರದೆ ಹೊತ್ತುಕೊಂಡು ಹೋಗಿದ್ದ ಎತ್ತು ಆ ಸ್ಥಳದಲ್ಲಿ ಎದ್ದು ನಿಂತು ನಡೆಯತೊಡಗಿತೆಂದರೆ ಸ್ಥಳ ಮಹಿಮೆಯಲ್ಲದೆ ಇನ್ನೇನು’ ಎಂದರು ಪುರೋಹಿತರು. ಪಟೇಲರು ತಲೆದೂಗಿದರು. ಅಪ್ಪ ತನ್ನ ಅಭಿಪ್ರಾಯ ಹೇಳಲು ಬಾಯಿ ತೆರೆದರೂ ಅವರೆದುರಿಗೆ ಧ್ವನಿ ಹೊರಡಾಗಿತ್ತು.
ಪುರೋಹಿತರ ಸಲಹೆಯಂತೆ ಇದೇ ಸ್ಥಳದಲ್ಲಿ ಬಸವಣ್ಣನ ವಿಗ್ರಹ ಸ್ಥಾಪಿಸುವುದೆಂದು ನಿರ್ಧಾರವಾಯಿತು. ಊರವರೆಲ್ಲಾ ಚಂದಾ ಹಾಕಿದರು. ವಿಗ್ರಹ ಕೆತ್ತಿಸಿ ಬಂಡೆಯ ಮೇಲೆ ಪ್ರತಿಷ್ಠಾಪಿಸಲಾಯಿತು. ಪುರೋಹಿತರ ನೇತೃತ್ವದಲ್ಲಿ ಹೋಮ ಹವನಗಳು ಅದ್ಧೂರಿಯಾಗಿ ನಡೆದವು.
ವರ್ಷಕ್ಕೊಮ್ಮೆ ಎತ್ತು ಎದ್ದು ನಡೆದ ದಿನದಂದೇ ಅದ್ದೂರಿ ಬಸವನ ಹಬ್ಬ. ಜೋಯಿಸರ ಮಕ್ಕಳು ದಾನದ ವಸ್ತುಗಳನ್ನು ಮಡಿ ಪಂಚೆಯಲ್ಲಿ ಕಟ್ಟಿ ಹೊತ್ತುಕೊಂಡು ಹೋಗುವುದನ್ನು ನಾವು ಮಕ್ಕಳೆಲ್ಲಾ ಕುತೂಹಲದಿಂದ ನೋಡುತ್ತಾ ನಿಲ್ಲುತ್ತಿದ್ದೆವು.
ಮನೆಯ ಜನರ ಕಾಯಿಲೆ ಕಷ್ಟಗಳಿಗೆ ಪುರೋಹಿತರ ಬಳಿಗೆ ಎಡತಾಕುತ್ತಿದ್ದ ಜನ, ಜಾನುವಾರುಗಳ ಕಾಯಿಲೆಗೂ ಅವರ ಬಳಿಗೇ ಹೋಗಿ ತಾಯಿತ, ಚೀಟು ಬರೆಸಿ ತರತೊಡಗಿದರು.
‘ಹಂಗಾದ್ರೆ ಚೀಟು ತಾಯತದಿಂದಲೇ ದನಗಳ ಕಾಯಿಲೆ ಗುಣವಾಗುತ್ತಿತ್ತಾ?’ ರಾಜ ಸಹಜವಾಗಿಯೇ ಕುತೂಹಲ ವ್ಯಕ್ತಪಡಿಸಿದ
‘ಹೇ! ಎಲ್ಲಾದ್ರೂ ಮಂತ್ರಕ್ಕೆ ಮಾವಿನಕಾಯಿ ಉದುರ್ತಾವೇನಾ!?ʼ
ಕಟ್ಣೇಗೌಡ್ರು ಹಸಿರು ಔಷಧಿ ಮಾಡುವ ಗಿಡ ಮೂಲಿಕೆಗಳನ್ನು ನೋಡಿಕೊಂಡಿದ್ದ ಜನ, ತಾಯತವನ್ನು ದೇವರ ಫೋಟೋದ ಮುಂದೆ ಇಟ್ಟು, ಮೂಲಿಕೆಗಳನ್ನು ತಂದು ಅರೆದು ತಮಗೆ ತಿಳಿದಂತೆ ಔಷಧಿ ಮಾಡುತ್ತಿದ್ದರು.
ಎತ್ತುಗಳ ರುಂಡಿ ಜಾರಿ ನಡೆಯದಂತಾದಾಗ ಜೋಯಿಸರು ತೆಂಗಿನಕಾಯಿ ಮಂತ್ರಿಸಿ ಕಟ್ಲೆಕಾಯಿ ಪೂಜಿಸಿ ಕೊಡುತ್ತಿದ್ದರು. ಆರಿಸಿನದ ಬಟ್ಟೆಯಲ್ಲಿ ಕಟ್ಟಿದ ಕಾಯನ್ನು ಮನೆಯ ಬಾಗಿಲ ಬಳಿ ಬೆಂಗಟೆಗೆ ಕಟ್ಟಿ, ಜನ ಅವರವರೇ ಸೇರಿ ತೈಲ ತಿಕ್ಕಿ, ಎತ್ತಿನ ರುಂಡಿ ಒತ್ತುವ ಕೆಲಸ ಮಾಡುತ್ತಿದ್ದರು.
‘ಹಂಗಾದ್ರೆ ಅಷ್ಟು ಶ್ರದ್ಧೆಯಿಂದ ಸ್ಥಾಪಿಸಿದ ಬಸವಣ್ಣನ ಗುಡಿ ಏಕೆ ಹಾಳು ಬಿತ್ತು….’ ರಾಜನ ಪ್ರಶ್ನೆಯಲ್ಲಿದ್ದ ಕುತೂಹಲ ಅವನ ಅಪ್ಪನಿಗೆ ಅರ್ಥವಾಯಿತು. ಅಪ್ಪ ಮಾತು ಮುಂದುವರೆಸಿದ.
ಜನ ಹೇಗೂ ಕಟ್ಣೇಗೌಡರ ಬಳಿ ಹೋಗುವುದು ನಿಲ್ಲಿಸಿದ್ದರು. ಜೋಯಿಸ ಮಂತ್ರಿಸಿದ ಕಟ್ಲೆಕಾಯಿ, ಚೀಟುಗಳ ಮೇಲೆ ಜನ ಅವಲಂಬಿತರಾಗಿದ್ದರೂ, ತಮ್ಮ ಜಾನುವಾರುಗಳಿಗೆ ತಾವೇ ಅಷ್ಟಿಷ್ಟು ಔಷಧಿ ಮಾಡಿಕೊಳ್ಳುವುದು ನಡೆದೇ ಇತ್ತು.
ಹಿಂಗೇ ಹಲವಾರು ವರ್ಷ ಕಳೆಯುವ ವೇಳೆಗೆ ಊರಿಗೆ ದನದ ಆಸ್ಪತ್ರೆ ಬಂತು ನೋಡು….
ಜೋಯಿಸರು ಮಕ್ಕಳನ್ನು ಓದಿಸುವ ನೆಪದಲ್ಲಿ ಪೇಟೆಯ ಕಡೆ ಮುಖ ಮಾಡಿದರು. ಪೇಟೆಯ ದೊಡ್ಡ ರೋಡಿನಲ್ಲೇ ಎರಡು ಮಹಡಿಯ ಮನೆ ಕಟ್ಟಿಕೊಂಡರು. ಅದರ ಮುಂದಿನ ‘ಜೋಯಿಸರು ಹಾಗೂ ಅಡುಗೆ ಕಂಟ್ರಾಕ್ಟರು’ ಬೋರ್ಡು ಜನರನ್ನು ಆಕರ್ಷಿಸತೊಡಗಿತು.
ರೈತಾಪಿ ಜನ ಕೈಯಲ್ಲಿ ಬಾಟಲಿ ಹಿಡಿದು, ಜೇಬಲ್ಲಿ ಚಿಲ್ಲರೆ ಕಾಸು ಇಟ್ಟುಕೊಂಡು ದನದ ಆಸ್ಪತ್ರೆಯ ಮುಂದೆ ನಿಲ್ಲುವುದಕ್ಕೆ ಒಗ್ಗಿಕೊಂಡರು…. ಎನ್ನುತ್ತಾ ಅಪ್ಪ ಹೆಗಲ ಮೇಲಿನ ಟವೆಲ್ ಕೊಡವುತ್ತಾ ಎದ್ದು ನಿಂತ.
‘ಹಂಗಾಗಿ ಕಾಡು ಬಸವನ ವಿಗ್ರಹ ಹಾಳು ಬಿತ್ತು ಅನ್ನು’ ಎನ್ನುತ್ತಾ ರಾಜ ಜೇನಿನ ಮಡಿಕೆಯ ಉಗ್ಗಕ್ಕೆ ಕೈ ಹಾಕಿದ.






0 Comments