ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಸಿರು ತೋರಣ

ನುಡಿಗಣ್ಣು ವಿನಿಂದ..

-ಶ್ರೀಧರ ಪಿಸ್ಸೆ


ಗುಜರಾತಿ-ಪನ್ನಾಲಾಲ್ ಪಟೇಲ್
ಶಾರದಾಳಿಗೆ ನಲವತ್ತು ವರುಷವಾಯಿತು. ಪ್ರತಿನಿತ್ಯ ಅವಳು ತನ್ನನ್ನೆ ನಿಂದಿಸಿಕೊಳ್ಳುತ್ತಿದ್ದಳು. ಯಾವುದೇ ಹೆಂಗಸು ತನ್ನ ಗಂಡ ಹೋದ ಮೇಲೆ ದುಡಿಮೆ ಬಗ್ಗೆ ಯೋಚಿಸುತ್ತಾಳೆ ಎನ್ನುವ ಮಾತು ನೆನಪಿಗೆ ಬಂದಾಗಲೆಲ್ಲ ನಿಟ್ಟಸಿರು ಬಿಡುತ್ತಿದ್ದಳು. ಹೊಲಿಗೆಯೋ ಬೇರೆ ಯಾವುದೋ ಕೆಲಸ ಕಲಿತಿದ್ದರೆ, ಗಂಡನ ಜತೆ ಸಣ್ಣ ಪುಟ್ಟ ಜಗಳಗಳೇ ಇರುತ್ತಿರಲಿಲ್ಲ. ಅವನೂ ಮನೆ ಬಿಟ್ಟು ಹೋಗುತ್ತಿರಲಿಲ್ಲ. ಇನ್ನೊಂದು ಮನೆ ಮಾಡುವ ಪ್ರಶ್ನೆ ಇರುತ್ತಿರಲಿಲ್ಲ. ವಠಾರದ ಯಜಮಾನನ ಹಿಂಸೆಯೂ ಇರುತ್ತಿರಲಿಲ್ಲ. ಈ ಮಾತನ್ನು ಅವಳು ಗಟ್ಟಿಯಾಗಿ ಹೇಳಿಕೊಳ್ಳುತ್ತಿದ್ದಳು.

ಅವಳು ತನ್ನ ಗಂಡನ ಚಿಂತೆಯಲ್ಲಿ-ಆತ ಎಲ್ಲಿರಬಹುದು? ಎಂದು ಅಚ್ಚರಿ ಪಡುತ್ತ ತನ್ನನ್ನೆ ಮರೆತುಬಿಡುತ್ತಿದ್ದಳು. ಅವನು ಖಂಡಿತ ಆತ್ಮಹತ್ಯೆ ಮಾಡಿಕೊಂಡಿರಬೇಕು. ಜೀವಂತವಾಗಿ ಇದ್ದಿದ್ದರೆ ಹಿಂದಿರುಗದೆ ಇರಲು ಹೇಗೆ ಸಾಧ್ಯ? – ಎಂದುಕೊಳ್ಳುತ್ತಿದ್ದಳು.

ಆಗಾಗ ಅವಳು ತನ್ನ ಗಂಡ ಬರೆದ ಕೊನೆಯ ಪತ್ರವನ್ನು ಹೊರತೆಗೆದು ಓದುತ್ತಾಳೆ. ಸಂಕ್ಷಿಪ್ತವಾದ ಅವನ ಮೊದಲ ಪತ್ರವನ್ನು ಕೂಡ ಆಕೆ ಎಚ್ಚರಿಕೆಯಿಂದಲೇ ಎತ್ತಿಟ್ಟಿದ್ದಾಳೆ: ನನ್ನನ್ನು ಹುಡುಕಬೇಡ. ನಾನು ಯಾವತ್ತಿಗೂ ಮನೆಗೆ ಹಿಂದಿರುಗುವುದಿಲ್ಲ. ಇಬ್ಬರು ಹುಡುಗರು ಮತ್ತು ನಿನ್ನನ್ನು ದೇವರ ರಕ್ಷಣೆಯಲ್ಲಿ ಬಿಟ್ಟಿದ್ದೇನೆ. ನಾನು ಸತ್ತು ಹೋದೆನೆಂದು ತಿಳಿದುಕೋ. ನಿನಗೆ ದೇವರು ಮನಸ್ಸು ಕೊಟ್ಟ ಹಾಗೆ ಮಾಡು. ನನ್ನ ಉಳಿದ ಜೀವನವನ್ನು ಒಬ್ಬ ಅಲೆಮಾರಿಯ ಹಾಗೆ ಸಾಗಿಸುತ್ತೇನೆ. -ಹರ್ ಸಿಂಗ್

ಮತ್ತೊಂದು ಪತ್ರ ಸುಮಾರು ಒಂದೂವರೆ ತಿಂಗಳ ನಂತರ ಬಂದಿತು. ಆ ಪತ್ರವನ್ನು ಅವಳು ಸಾಕಷ್ಟು ಸಲ ಓದಿದ್ದರೂ ಇವತ್ತು ಮತ್ತೆ ಓದಲು ಪ್ರಾರಂಭಿಸಿದಳು:

ನನ್ನ ಪ್ರೀತಿಯ ಶಾರದ,

ನಾನು ಮನೆ ಬಿಟ್ಟು ಒಂದೂವರೆ ತಿಂಗಳಿಗಿಂತ ಹೆಚ್ಚಾಗಿದೆ. ನನಗೆ ವಾಪಸ್ಸು ಬರಬೇಕೆಂದು ಆಸೆ. ಆದರೆ ನನಗೆ-ನಿನಗೂ ಕೂಡ-ಗೊತ್ತು. ನಾವು ಜಗಳ ಮಾತ್ರ ಮಾಡುತ್ತೇವೆ. ಆದ್ದರಿಂದ ನಾನು ಸಾಕಷ್ಟು ಬಾರಿ ಯೋಚಿಸಿ ಈ ಪತ್ರ ಬರೆಯುತ್ತಿದ್ದೇನೆ. ಏನೆಂದರೆ ನಾನು ಸತ್ತು ಹೋದೆನೆಂದು ತಿಳಿದುಕೊ ಮತ್ತು ಎರಡು ಮಕ್ಕಳಿಗೋಸ್ಕರ ಮತ್ತೆ ಮದುವೆ ಮಾಡಿಕೊ. ಮೂವತ್ತೊಂದನೆಯ ವಯಸ್ಸಿನಲ್ಲಿ ನೀನಿನ್ನೂ ಚಿಕ್ಕವಳಾಗಿಯೆ ಕಾಣಿಸುತ್ತೀಯೆ. ಅದಕ್ಕಿಂತ ಹೆಚ್ಚಾಗಿ ನಮ್ಮ ಜಾತಿಯಲ್ಲಿ ದೊಡ್ಡ ಜನರೆಲ್ಲ ಮರುಮದುವೆ ಮಾಡಿಕೊಳ್ಳಲು ಶುರು ಮಾಡಿದ್ದಾರೆ. ನಿನಗೆ ಯಾರೂ ಬೈಯ್ಯುವುದಿಲ್ಲ. ಜಾತಿ ನಿಯಮ ಕೂಡ ಇಗೀಗ ಕಾಣೆಯಾಗುತ್ತಿದೆ. ನೀನು ನಿನ್ನ ಸ್ವಂತ ಸುಖಕ್ಕಾಗಿ ಮದುವೆ ಆಗುತ್ತಿಲ್ಲ. ನೀವು ಮೂವರೂ ಚೆನ್ನಾಗಿದ್ದರೆ ನನಗೂ ನೆಮ್ಮದಿ. ಇನ್ನೊಂದು ಮದುವೆಯಾಗು. ನನ್ನನ್ನು ನಿಮ್ಮ ಮೂವರ ಚಿಂತೆಯಿಂದ ಬಿಡುಗಡೆ ಮಾಡು… ನಾನು ಕೂಡ ಕೇವಲ ಒಬ್ಬ ಮನುಷ್ಯ ಮತ್ತು ಆ ಮಕ್ಕಳ ತಂದೆ. ನೀನು ನನ್ನ ಕೊನೆಯ ಕೋರಿಕೆಯನ್ನು ಒಪ್ಪಿಕೊಳ್ಳುತ್ತಿಯೆಂದು ನಂಬಿದ್ದೇನೆ.

ನಿರುದ್ಯೋಗಿ ಹರ್ ಸಿಂಗ್ ಮತ್ತೆ ಬರೆದದ್ದು:

ಇಂದಿನಿಂದ ಎಲ್ಲ ಕಾಲಕ್ಕೂ ನಾನು ನಿನ್ನಿಂದ ದೂರನಾದೆನೆಂದು ನಂಬು. ನಾನು ನಿನ್ನಿಷ್ಟದಂತೆ ನಿನ್ನನ್ನು ಸ್ವತಂತ್ರಳನ್ನಾಗಿ ಮಾಡುತ್ತಿದ್ದೇನೆ. ಮಕ್ಕಳ ಭವಿಷ್ಯ ಚೆನ್ನಾಗಿ ಆಗಬೇಕೋ ಹಾಳಾಗಬೇಕೋ ಎನ್ನುವುದೆಲ್ಲ ನಿನಗೂ ದೇವರಿಗೂ ಬಿಟ್ಟಿದ್ದು. ವಿದಾಯ -ಹರ್ ಸಿಂಗ್

ಈ ಹಿಂದಿನ ಪ್ರತಿಯೊಂದು ಸಂದರ್ಭದಂತೆ ಶಾರದ ಪೂರ್ಣ ವೃತ್ತಾಂತವನ್ನು ನೆನಪಿಗೆ ತಂದುಕೊಂಡು ಕಣ್ಣೀರಿಡುತ್ತಿದ್ದಳು. ಆತ ತನ್ನ ಬದುಕನ್ನು ಕೊನೆಗಾಣಿಸಿಕೊಂಡಿದ್ದಾನೆಂದು ಅವಳಿಗೆ ಪೂರ್ಣ ಖಾತರಿ.

ಆದರೂ ಅವನು ಆ ರೀತಿ ಮಾಡಿಕೊಳ್ಳುವುದಿಲ್ಲವೆಂದು ಅವಳ ಮನಸ್ಸಿನಾಳದಲ್ಲಿ  ತೋಚುತ್ತಿತ್ತು. ಈ ಭಾವನೆಯನ್ನು ಸಮರ್ಥಿಸುವುದಕ್ಕೆ ಒಂದು ಘಟನೆ ಸಾಕು. ಒಂದು ಸಾರಿ ನಿರುದ್ಯೋಗಿ ಹರ್ ಸಿಂಗ್ ಗೆ ಸಾಲಗಾರರ ಕಾಟದಿಂದ ಸಾಕಾಗಿಹೋಗಿತ್ತು. ಅವರಿಬ್ಬರು ಜತೆಯಲ್ಲೆ ಸಾಯಬೇಕೆಂದು ನಿರ್ಧರಿಸಿ ಒಂದು ವಿಷದ ಬಾಟಲನ್ನು ತಂದಿದ್ದ. ಹುಡುಗರನ್ನು ಅನಾಥಾಶ್ರಮಕ್ಕೆ ಸೇರಿಸುವ ಎಲ್ಲ ವ್ಯವಸ್ಥೆಯನ್ನು ಅವರಿಬ್ಬರು ಕೂಡಿ ಮಾಡಿದ್ದರು. ಆದರೆ ಕೊನೆಯ ಗಳಿಗೆಯಲ್ಲಿ ಹರ್ ಸಿಂಗ್ ತನ್ನ ಮನಸ್ಸನ್ನು ಬದಲಿಸಿದ. ಒಂದು ಸಲ ಸಂತನೊಬ್ಬ ಪೇಪರಿನಲ್ಲೊಂದು ಪತ್ರ ಬರೆದಿದ್ದನ್ನ ಓದಿದ್ದೆ. ಆತ್ಮಹತ್ಯೆಗಿಂತ ದೊಡ್ಡ ಪಾಪ ಬೇರೊಂದಿಲ್ಲ. ನೀವು ಈ ಜನ್ಮದಲ್ಲಿ ಕಷ್ಟಗಳಿಂದ ಪಾರಾಗಬಹುದು. ಆದರೆ ಕಷ್ಟಗಳು ನಿಮ್ಮನ್ನು ಬಿಡುವುದಿಲ್ಲ. ಮುಂದಿನ ಜನ್ಮದಲ್ಲಿ ಕಾಡುತ್ತವೆ. ಅವನ್ನು ಅನುಭವಿಸಲೇಬೇಕು ಎಂದು ಬರೆದಿದ್ದರು ಎಂದು ಹೇಳಿದ್ದ ಹರ್ ಸಿಂಗ್ ವಿಷದ ಬಾಟಲನ್ನು ಚರಂಡಿಗೆ ಎಸೆದಿದ್ದ. ಅವನು ತನ್ನ ಹೆಂಡತಿಗೆ ಹೇಳಿದ್ದ: ನಾನು ಬಿಸಾಕಿದ್ದು ಬರಿ ವಿಷದ ಬಾಟಲಲ್ಲ. ಸಾಯುವ ವಿಚಾರವನ್ನೆ ನನ್ನ ಮನಸ್ಸಿನಿಂದ ಕಿತ್ತು ಬಿಸಾಕಿದ್ದೇನೆ. ಕಷ್ಟ ಕಾಲ-ಹಸಿವಿನಿಂದ ನಾವು ಸತ್ತರೂ ನಾನೀಗ ಯೋಚನೆ ಮಾಡುವುದಿಲ್ಲ.

ಆ ನಂತರದ ದಿನಗಳು ಹರ್ ಸಿಂಗ್ ಗೆ ನರಕವಾಗಿತ್ತು. ಕೆಲಸ ಹುಡುಕಲು ಆತ ಬೆಳಗಿನ ಜಾವ ಎದ್ದು ಹೋಗಬೇಕು. ಹೆಂಡತಿ ದಿನಸಿ ಅಂಗಡಿಯವನ ಬಳಿ ಹೋಗಿ ಬೇಡಿಕೊಳ್ಳುತ್ತಿದ್ದಳು. ಇಲ್ಲವೆ ಅವಳ ಕೆಲವು ಬೆಳ್ಳಿಯ ಒಡವೆಗಳನ್ನು ಮಾರಿ ಕಡಿಮೆ ಬೆಲೆಯ ಪದಾರ್ಥಗಳನ್ನು ಸ್ವಲ್ಪ ಸ್ವಲ್ಪವೆ ತರುತ್ತಿದ್ದಳು. ಆದರೆ ಆಕೆ ಹೀಗೆ ಎಷ್ಟು ದಿನ ಸಂಸಾರ ಸಾಗಿಸಲು ಸಾಧ್ಯ?

ಎಲ್ಲಿ ಹೊಗೆ ಏಳುತ್ತದೆಯೊ ಅಲ್ಲಿ ಬೆಂಕಿ ಯಾವತ್ತೂ ಇದ್ದೆ ಇರುತ್ತದೆ ಎಂದು ಹೇಳುತ್ತಾರೆ. ಅದೇ ಮಾತಿನಲ್ಲಿ ಹೇಳಬೇಕೆಂದರೆ ಎಲ್ಲಿ ಕಷ್ಟ ಸಂಕಷ್ಟಗಳು ಇರುತ್ತವೆಯೊ ಅಲ್ಲಿ ಯಾವತ್ತೂ ಸಣ್ಣ ಪುಟ್ಟ ಜಗಳಗಳು ಇದ್ದೇ ಇರುತ್ತವೆ. ಕಷ್ಟ ಸಂಕಷ್ಟಗಳು ಹೆಚ್ಚಾದ ಇವರ ವಿಚಾರದಲ್ಲಿ ಹೆಚ್ಚು ಜಗಳಗಳೂ ಇರುತ್ತಿತ್ತು; ಪರಸ್ಪರ ನಿಂದನೆಯೂ ಇರುತ್ತಿತ್ತು. ಒಂದೆರಡು ಬಾರಿ ಹರ್ ಸಿಂಗ್ ತನ್ನ ಒಳ್ಳೆಯ ಸ್ವಭಾವದ ಹೆಂಡತಿಯನ್ನು ಹೊಡೆದಿದ್ದ ಕೂಡ. ಕಿರಿಯ ಮಗ ಮಲಗಿದ್ದ ತೊಟ್ಟಿಲನ್ನು ಅವಳು ನೂಕಿಬಿಟ್ಟಿದ್ದಳು. ಆಗ ಹಿರಿಯ ಹುಡುಗ ವಠಾರ ದಾಟಿ ಓಡಿಹೋದ. ಎಲ್ಲ ಶಾಂತವಾದ ಮೇಲೆಯೆ ಅವನು ಹಿಂದಿರುಗಿ ಬಂದದ್ದು.

ಆಮೇಲೆ ಒಂದು ರಾತ್ರಿ ಹರ್ ಸಿಂಗ್ ತನ್ನ ಹೆಂಡತಿಗೆ ಹೊಡೆದ. ಆ ಸಂದರ್ಭದಲ್ಲಿ ರಾಜಪೂತ ಹೆಂಗಸಿನ ಹಾಗೆ ಅವಳೂ ಕೂಡ ಮುಯ್ಯಿ ತೀರಿಸಿಕೊಳ್ಳುವಂತೆ ಒಂದು ಇಕ್ಕಳವನ್ನು ಝಳಪಿಸಿ ಹೋರಾಡಿದಳು. ಅದೃಷ್ಟವಶಾತ್ ಹರ್ ಸಿಂಗ್ ಜಗಳವಾಡುವುದನ್ನು ನಿಲ್ಲಿಸಿ ಓಡಿಹೋದ. ಇಲ್ಲದಿದ್ದರೆ…?

ಮನೆಯಿಂದ ಹೊರ ಬಂದು ಆತ ಗೊಣಗಿಕೊಂಡ: ಈ ಮನೆಯಲ್ಲೀಗ ವಾಸ ಮಾಡಬೇಕು ಅನ್ನುವಂಥದ್ದು ಏನಿಲ್ಲ. ಅವಳನ್ನು ಸಾಯಿಸಬೇಕು ಇಲ್ಲ ನಾನು ಸಾಯಬೇಕು.

ಹರ್ ಸಿಂಗ್ ಹಿಂದಿರುಗಬಾರದೆಂದು ನಿಶ್ಚಯಿಸಿದ. ಶಿವನ ಮೇಲೆ ಆಣೆ. ನಾನೊಂದು ಕೆಲಸ ಹಿಡಿಯುವ ವರೆಗೂ ಮನೆಗೆ ವಾಪಸ್ಸಾಗೊಲ್ಲ! ಎಂದು ಹೇಳಿಕೊಂಡ.

ಗಂಡ ಜತೆಯಲ್ಲಿದ್ದಷ್ಟೂ ಕಾಲ ಶಾರದಳಿಗೆ ಸ್ವಲ್ಪ ಧೈರ್ಯವಿತ್ತು. ದೇವರಲ್ಲಿ ನಂಬಿಕೆ ಇತ್ತು. ಅವಳು ಪದೇ ಪದೇ ಹೇಳಿಕೊಳ್ಳುತ್ತಿದ್ದಳು: ನಮಗೆ ಕಷ್ಟದ ಮೇಲೆ ಕಷ್ಟ ಕೊಟ್ಟೂ ಕೊಟ್ಟು ದೇವರಿಗೂ ಒಂದು ದಿನ ಸಾಕಾಗಿಬಿಡುತ್ತದೆ. ಎಲ್ಲಾದರೂ ನನ್ನವರಿಗೆ ಒಂದು ಕೆಲಸ ಸಿಗುತ್ತದೆ. ತನ್ನ ಹತ್ತಿರ ಸ್ವಲ್ಪ ಹಣ ಇದ್ದಿದ್ದರೆ ಹಪ್ಪಳ ಸಂಡಿಗೆ ಮಾಡಿ ಮನೆ ಮನೆಗೂ ಹೋಗಿ ಮಾರಾಟ ಮಾಡಬಹುದಿತ್ತು ಎಂದೂ ಯೋಚಿಸುತ್ತಿದ್ದಳು. ಚೂರು ಕಾಗದ ಆಯುವ ಬಗ್ಗೆಯೂ ಯೋಚಿಸಿದಳು. ಕಾಗದ ಚೂರುಗಳನ್ನು ಯಾರು ಕೊಂಡುಕೊಳ್ಳತ್ತಾರೆ, ಎಷ್ಟು ಹಣ ಕೊಡುತ್ತಾರೆ ಎಂದು ಅದೇ ಕೆಲಸ ಮಾಡುತ್ತಿದ್ದ ಒಬ್ಬ ಹೆಂಗಸನ್ನು ವಿಚಾರಿಸಿದಳು.

ಆ ಹೆಂಗಸಿನ ಉತ್ತರ ನಿರಾಶೆ ಹುಟ್ಟಿಸುವ ಹಾಗಿತ್ತು. ಇಡೀ ಒಂದಿನ ಸುತ್ತಾಡಿದರೆ ಒಂದು ರೂಪಾಯಿನೋ ಎಷ್ಟೋ ಕೊಡಬೋದು.

ಶಾರದಳಿಗೆ ಒಂದು ರೂಪಾಯಿ ಸಾಕಷ್ಟು ದೊಡ್ಡ ಮೊತ್ತವಾಗಿದ್ದರೂ ಕಾಗದ ಆಯುವುದು ಅಷ್ಟು ಇಷ್ಟವಿರಲಿಲ್ಲ. ಆದರೆ ಈಗ ತನ್ನ ಗಂಡ ಹೋದ ಮೇಲೆ ಅವಳು ತನ್ನೆಲ್ಲ ಧೈರ್ಯವನ್ನು ಕಳೆದುಕೊಂಡಿದ್ದಳು. ನಾನೊಬ್ಬಳೆ ಇದ್ದಿದ್ದರೆ ಅದು ಬೇರೆ ಮಾತು. ಇನ್ನೊಬ್ಬನಿಗೆ ಹುಟ್ಟಿದ ಮಕ್ಕಳನ್ನು ಇಟ್ಟುಕೊಳ್ಳಲು ಯಾರು ತಾನೆ ಒಪ್ಪುತ್ತಾರೆೆ? ನಿರಾಶರಾದ ಯಾರೋ ಒಬ್ಬರು ಒಪ್ಪಿದರೂ ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತಾರೆ ಎಂದು ಹೇಗೆ ಹೇಳುವುದು? ತನ್ನ ಸುಖಕ್ಕಾಗಿ ಮಕ್ಕಳು ಪರಾವಲಂಬಿಗಳಾಗುವುದನ್ನು ಅವಳು ಬಯಸಲಿಲ್ಲ. ಆದರೆ ಗಂಡನಿಲ್ಲದೆ ಬದುಕು ಕಷ್ಟಕರವೆಂದು ಅವಳಿಗೆ ಭಾಸವಾಯಿತು. ತನ್ನ ಸೌಂದರ್ಯವೆ ತನಗೆ ಶಾಪವಾಗಿದೆ ಎಂದು ತಿಳಿದಳು.

ಒಂದು ದಿನ ಬೆಳಿಗ್ಗೆ ಚಿಕ್ಕಮಗುವನ್ನು ನೋಡಿಕೊಂಡಿರಲು ಹಿರಿಯ ಹುಡುಗನಿಗೆ ಹೇಳಿ ಅವಳು ಗೋಣಿಚೀಲವನ್ನು ಕಂಕುಳಲ್ಲಿರಿಸಿಕೊಂಡು ಹೊರಗೆ ಹೋದಳು. ಸಾಕಷ್ಟು ದೂರ ಸಾಗಿದ ಮೇಲೆ ಚೀಲವನ್ನು ತೆರೆದು ಬೆನ್ನಿನ ಮೇಲೆ ಹಾಕಿಕೊಂಡು ರಸ್ತೆಯ ಮೇಲೆ ಬಿದ್ದಿದ್ದ ಕಾಗದದ ಚೂರುಗಳನ್ನು ಎತ್ತಿಕೊಂಡು ಚೀಲಕ್ಕೆ ತುಂಬತೊಡಗಿದಳು.

ಹನ್ನೊಂದು ಗಂಟೆಯ ವೇಳೆಗೆ ಚೀಲ ತುಂಬಿತು. ಕಾಗದದ ಚೂರು ಆಯುವ ಹೆಂಗಸು ತಿಳಿಸಿದ್ದ ಅಂಗಡಿಯವನ ಬಳಿ ಹೋಗಿ ಒಂದೂ ಕಾಲು ರೂಪಾಯಿ ಪಡೆದಳು. ಅಂದು ಶಾರದಳ ಸಂತೋಷಕ್ಕೆ ಪಾರವೇ ಇರಲಿಲ್ಲ.

ಒಂದು ದಿನ ಆ ದಾರಿಯಲ್ಲಿ ಹೋಗುತ್ತಿದ್ದ ಇಬ್ಬರು ವಿದ್ಯಾವಂತ ಹೆಂಗಸರು ಅವಳು ಕಾಗದದ ಚೂರು ಆಯುವುದನ್ನು ಗಮನಿಸಿದರು. ಅವರು ಕಾರನ್ನು ನಿಲ್ಲಿಸಿ ಕೇಳಿದರು, ತಂಗಿ ಎಷ್ಟು ಹೊತ್ತಿನಿಂದ ಈ ರೀತಿ ಪೇಪರು ಆರಿಸುತ್ತಿದ್ದೀಯಮ್ಮಾ?

ಶಾರದೆಗೆ ಮೊದಲು ಆ ಬಗ್ಗೆ ತಿರಸ್ಕಾರವೆನಿಸಿತು. ಆದರೂ ಅವಳ ಜೀವನವಿಡೀ ಯಾರೊಬ್ಬರೂ ಸಹಾನುಭೂತಿಯಿಂದ ಅವಳನ್ನು ಮಾತಾಡಿಸಿದ್ದಿಲ್ಲ. ಒಂದು ಕಾಗದವನ್ನು ಎತ್ತಿಕೊಳ್ಳಲು ಬಾಗುತ್ತ ಅವಳು ಉತ್ತರಿಸಿದಳು. “ಬೆಳಿಗ್ಗೆ ಆರು ಗಂಟೆಯಿಂದ.

ದಿನಕ್ಕೆ ಎಷ್ಟು ಗಂಟೆ ಕೆಲಸ ಮಾಡುತೀಯಮ್ಮಾ?

ತನಗವರು ಕುತೂಹಲದಿಂದ ಪ್ರಶ್ನೆ ಮಾಡುತ್ತಿಲ್ಲವೆಂದು ಶಾರದಳಿಗೀಗ ಮನವರಿಕೆಯಾಯಿತು. ಅವರಿಗೆ ನಿಜವಾದ ಕಾಳಜಿಯಿದೆ ಎನಿಸಿತು. ಅದೇ ಕ್ಷಣ ಅವರು ತನ್ನ ವೇಳೆಯನ್ನು ಹಾಳು ಮಾಡುತ್ತಿದ್ದಾರೆಂದು ಅಂದುಕೊಂಡಳು.

ಶಾರದಾ ಸುಖದ ದಿನಗಳನ್ನು ನೋಡಿದ್ದಳು. ಈಗವಳು ತನ್ನ ಬಗ್ಗೆ ಹೆಚ್ಚು ಲಕ್ಷ್ಯವಹಿಸುವುದನ್ನು ಬಿಟ್ಟುಕೊಟ್ಟಿದ್ದರೂ ತಾನು ಮಾಡುತ್ತಿರುವುದು ಕೀಳು ಕೆಲಸವೆಂದು ಭಾವಿಸಿದ್ದಳು. ಆಕೆ ಒಣನಗೆ ಬೀರುತ್ತ ಹೇಳಿದಳು: ನೀವು ಅದೃಷ್ಟವಂತರು. ನನ್ನಂಥ ಕಷ್ಟಪಡೋ ಹೆಂಗಸನ್ನು ಕಂಡು ನಿಮಗೆ ಯಾಕೆ ಚಿಂತೆ?

ಆ ಹೆಂಗಸರಿಗೆ ಇವಳ ವಿಷಯದ ಬಗ್ಗೆ ಎಲ್ಲಿಲ್ಲದ ಆಸಕ್ತಿ ಬೆಳೆಯಿತು. ಅವರು ಮಾಡುತ್ತಿರುವ ಸರ್ವೆ ಬಗ್ಗೆ ಅವಳಿಗೆ ಹೇಳಿ, ಅವಳ ಬದುಕಿನ ಹಿನ್ನೆಲೆಯನ್ನು ಪರಿಚಯ ಮಾಡಿಕೊಳ್ಳಲು ಆಕೆಯ ಮನೆಗೆ ಹೋದರು.

ಮಾರನೆಯ ದಿನವೆ ಶಾರದಾ ಮಹಿಳಾ ಸ್ವ ಆಶ್ರಯ ಸಂಘಕ್ಕೆ ಹೋಗಿ ಹೊಲಿಗೆ ಕಲಿಯಲು ಆರಂಭಿಸಿದಳು.

ಅವಳ ಅದಮ್ಯವಾದ ಉತ್ಸಾಹ ಸಂಘದ ಸ್ವಯಂಸೇವಕರ ಮೇಲೆ ಪರಿಣಾಮ ಬೀರಿತು. ಸುಮಾರು ಜನ ಸಹಾಯ ಪಡೆಯಲು ಆಸಕ್ತರಾಗಿರುತ್ತಾರೆ. ಆದರೆ ಕೆಲವರು ಮಾತ್ರ ಪಡೆದ ಸಹಾಯಕ್ಕೆ ತಕ್ಕ ಹಾಗೆ ನಡೆದುಕೊಳ್ಳುತ್ತಾರೆ ಅವರು ಅವಳ ಕೆಲಸವನ್ನು ಹೊಗಳಿದರು.

ಶಾರದಾ ಮೂರು ತಿಂಗಳಲ್ಲಿ ಹೆಂಗಸರು ಮತ್ತು ಮಕ್ಕಳ ಉಡುಪು ಹೊಲಿಯುವುದನ್ನು ಕಲಿತಳು. ಹೆಚ್ಚು ಕಡಿಮೆ ಇಲ್ಲದೆ ಸರಿಯಾಗಿ ಅಳತೆ ತೆಗೆದುಕೊಳ್ಳುತ್ತಿದ್ದ ಕಾರಣವಾಗಿ ಆಕೆಯ ಹೊಲಿಗೆ ತುಂಬಾ ಚೆನ್ನಾಗಿರುತ್ತಿತ್ತು. ಪ್ರತಿಯೊಬ್ಬರೂ ಅವಳ ಕೆಲಸದ ಬಗ್ಗೆ ಒಂದಾದರೂ ಹೊಗಳಿಕೆಯ ಮಾತಾಡುತ್ತಿದ್ದರು.

ನಂತರ ಶಾರದಾ ತನ್ನದೆ ಸ್ವಂತ ಹೊಲಿಗೆ ಮೆಶಿನ್ನನ್ನು ಕಂತಿನ ಮೇಲೆ ಕೊಂಡುಕೊಂಡಳು. ಸಂಘ ಅವಳ ಪರವಾಗಿ ಗ್ಯಾರಂಟಿಯನ್ನು ನೀಡಿತು. ಗಾರ್ಮೆಂಟ್ ಕಂಪನಿಗಳಿಂದ ಅವಳಿಗೆ ಆರ್ಡರುಗಳನ್ನು ತಂದುಕೊಟ್ಟಿತು. ಅವು ಹೆಚ್ಚಿಗೆ ಕೂಲಿ ಕೊಡುತ್ತಿರಲಿಲ್ಲವಾದರೂ ಅವಳ ಕೆಲಸ ಮೆಚ್ಚಿದ್ದ ಸಂಘದ ಹೆಂಗಸರು ತಮ್ಮ ಬಟ್ಟೆಗಳನ್ನು ಅವಳಿಂದಲೆ ಹೊಲಿಸಿಕೊಂಡು ಮಾರ್ಕೇಟ್ ರೇಟು ನೀಡುತ್ತಿದ್ದರು.

ಶಾರದಾ ಎಲ್ಲರೂ ಒಪ್ಪುವಂತಹ ಕೆಲಸಗಾರಳಾಗಿದ್ದಳು. ಅವಳ ಉತ್ಸಾಹ ಪ್ರಾಮಾಣಿಕತೆ ಕಂಡು ಸಂಘದ ಸದಸ್ಯರೊಬ್ಬರು ನೀವು ಸಿಟಿಯ ಈ ತುದಿಯಲ್ಲಿ ಆರ್ಡರು ತೆಗೆದುಕೊಂಡು ಇನ್ನೊಂದು ತುದಿಗೆ ಹೋಗಿ ಕೆಲಸ ಮಾಡುತ್ತೀರಿ, ನಿಮ್ಮ ಟೈಮಲ್ಲಿ ಅರ್ಧ ಹಾಳುಮಾಡಿಕೊಳ್ಳುತ್ತೀದ್ದೀರಿ. ನೀವು ಇಷ್ಟಪಡುವುದಾದರೆ ರೋಡ್ ಪಕ್ಕದಲ್ಲಿರುವ ಗ್ಯಾರೇಜ್ ಬಿಟ್ಟುಕೊಡುತ್ತೇನೆ. ಹಿಂಭಾಗಕ್ಕೆ ಒಂದು ರೂಮನ್ನು ಕಟ್ಟಿಸುತ್ತೇನೆ ಎಂದು ತಮ್ಮ ಇಚ್ಛೆ ವ್ಯಕ್ತಪಡಿಸಿದ್ದರು.

ಮನೆಗೂ ಸಂಘದ ಕಟ್ಟಡಕ್ಕೂ ಓಡಾಡಲು ಬಸ್ಸಿನಲ್ಲಿ ಮೂರು ಗಂಟೆ ಕಳೆಯುತ್ತಿದ್ದುದು ಶಾರದಾಳಿಗೆ ಗೊತ್ತಿತ್ತು. ಅವಳಾಗಲಿ ಇಲ್ಲ ಬಸ್ಸಾಗಲಿ ಲೇಟಾದರೆ ಅರ್ಧ ದಿನವೇ ಹಾಳಾಗುತ್ತಿತ್ತು. ಅದಕ್ಕಿಂತ ಹೆಚ್ಚಾಗಿ ಅವಳು ಗ್ಯಾರೇಜ್ ನಲ್ಲಿ ತನ್ನ ಹೊಲಿಗೆ ಕೆಲಸ ಮಾಡಲು ಒಪ್ಪಿಕೊಂಡಿದ್ದರೆ ಆಕೆಯ ಹುಡುಗರಿಗೂ ಉತ್ತಮ ವಿದ್ಯಾಭ್ಯಾಸ ಸಾಧ್ಯವಿತ್ತು.

ಆದರೆ ಶಾರದಳಿಗೆ ಆ ವಠಾರವನ್ನೂ ತನ್ನ ರೂಮನ್ನೂ ಬಿಟ್ಟು ಬರುವುದು ಅದೇಕೋ ಸಹಿಸಲಿಲ್ಲ. ಆಕೆ ತನ್ನ ಗ್ಯಾರೇಜ್ ನೀಡಲು ಮುಂದೆ ಬಂದ ಹೆಂಗಸಿಗೆ ವಂದನೆಗಳನ್ನರ್ಪಿಸಿ ತನ್ನ ಹಳೆಯ ಜಾಗದಲ್ಲೆ ವಾಸಿಸುವುದನ್ನು ಮುಂದುವರಿಸಿದಳು.

ಅವಳು ಅಲ್ಲಿಂದಿಲ್ಲಿಗೆ ಆಗಾಗ ಓಡಾಡುತ್ತ ಆಯಾಸಗೊಳ್ಳುತ್ತಿದ್ದಳು. ಅಲ್ಲದೆ ಆಯಾಸಗೊಂಡಾಗ ತನ್ನ ಗಂಡ ತನ್ನನ್ನು ಬಿಟ್ಟು ಹೋದುದಕ್ಕೆ ಅವನಿಗೂ ಹಿಡಿಶಾಪ ಹಾಕುತ್ತಿದ್ದಳು. ಕೊನೆಯ ಪಕ್ಷ ಆತ ಯಾವುದಾದರೂ ಒಂದು ರೀತಿಯಲ್ಲಿ ಸಮಸ್ಯೆಯನ್ನು ಬಗೆಹರಿಸಬೇಕಿತ್ತು.

ಕೆಲವು ತಿಂಗಳ ನಂತರ ವಠಾರದ ಯಜಮಾನ ಹೇಳಿದ: ನನಗೆ ಹತ್ತು ತಿಂಗಳ ಬಾಡಿಗೆ ಕೊಡಬೇಕು ನೀನು. ನನಗೆ ನಿನ್ನ ಕಂಡರೆ ಗೌರವ ಇರುವುದರಿಂದ ಮನೆ ಖಾಲಿ ಮಾಡು ಅಂತ ನಾನು ಹೇಳಿಲ್ಲ. ಹರ್ ಸಿಂಗ್ ಹೊರಟುಹೋದ ಅಂತ ನನಗೂ ಗೊತ್ತು, ಆತ ಆತ್ಮಹತ್ಯೆ ಮಾಡಿಕೊಂಡ ಅಂತ ಹೇಳುತ್ತಾರೆ. ಇಲ್ಲದಿದ್ದರೆ ಇಂಥ ಸುಂದರ ಮಕ್ಕಳು, ನಿನ್ನಂಥ ಒಬ್ಬಳು ಹೆಂಡತಿ ಇದ್ದು ವಾಪಸ್ ಬರದೆ ಇರುತ್ತ್ತಿದ್ದನೆ? ಅವನು ನಿಜವಾಗಿಯೂ ಹೇಳಬೇಕಾಗಿದ್ದುದು: ನಿನ್ನ ಚೆಲುವು ನೋಡು! ಸತ್ತಿರುವವನೂ ಕೂಡ ಎದ್ದು ಬರಬೇಕು ಅಂತ ಬಯಸುತ್ತಾನೆ. ಹರ್ ಸಿಂಗ್ ಜೀವಂತವಾಗಿದ್ದಿದ್ದರೆ ಇಷ್ಟು ದಿನ ಅವನು ದೂರ ಇರುತ್ತಿದ್ದನೆ? ಅವನು ಒತ್ತಿ ಹೇಳಿದ. ನೀನು ನನಗೆ ಕೇಳಿದರೆ ಯಾರಾದರೂ ಒಳ್ಳೆಯವರ ಬಗ್ಗೆ ಯೋಚನೆ ಮಾಡಲೆ ಬೇಕು. ಈ ಲೋಕದಲ್ಲಿ ರಕ್ಷಣೆ ನೀಡುವ ಒಬ್ಬ ಗಂಡಸಿಲ್ಲದೆ ನಿನ್ನಂಥ ಹೆಂಗಸು ಬದುಕುವುದು ಕಷ್ಟವಾಗುತ್ತದೆ. ತನ್ನ ಭಾವನೆ ಬಗ್ಗೆ ಯೋಚಿಸಬಹುದೆಂದು ಅವನು ಸಲಹೆ ನೀಡಿದ.

ಮನಸ್ಸಿನಾಳದಲ್ಲಿ ಸೇಟುವಿನ ಮಾತುಗಳನ್ನು ನೇರ ತಳ್ಳಿಹಾಕದೆ ಶಾರದಾ ಶಾಂತವಾಗಿ ಕೇಳಿದಳು. ಅವಳು ಈ ಬಗ್ಗೆ ಯೋಚನೆ ಮಾಡುತ್ತೇನೆ. ಅವರು ಬರದೆ ಇದ್ದರೆ ನೋಡೋಣ… ಎಂದಳು.

ಅವರು ಹೋಗಿ ಮೂರು ವರುಷಗಳೇ ಆಯ್ತು. ಇನ್ನೂ ಆರು ತಿಂಗಳಲ್ಲಿ ಬರಲಿಲ್ಲ ಅಂದರೆ ನಾನು ಒಪ್ಪಿಕೊಂಡುಬಿಡುತ್ತೇನೆ. ಒಬ್ಬ ಮನುಷ್ಯ ಎಷ್ಟು ದಿನ ಅಂತ ಕಾಯೋದು? ಎಂದು ಒಂದು ಸಲ ಆಕೆ ಹೆಚ್ಚು ಕಡಿಮೆ ನಿರ್ಧರಿಸಿದಳು.

ರಾತ್ರಿ ಬಹಳ ಹೊತ್ತಿನವರೆಗೂ ಶಾರದಾ ಕೆಲಸ ಮಾಡುತ್ತಿದ್ದಳು. ಆದರೂ ಏರುತ್ತಿರುವ ಬೆಲೆಗಳಿಂದ ಖರ್ಚು ಸರಿ ತೂಗಿಸಲು ಇನ್ನು ಸಾಧ್ಯವಾಗುತ್ತಿರಲಿಲ್ಲ. “ನಾನು ಖಾಯಿಲೆ ಬಿದ್ದರೆ ಮಕ್ಕಳನ್ನು ನೋಡಿಕೊಳ್ಳುವರು ಯಾರು ಇಲ್ಲವೆಂದು ಯೋಚಿಸುತ್ತಾಳೆ. ಇನ್ನೂ ಮನಸ್ಸಿನಲ್ಲಿರುವ ತನ್ನ ಗಂಡನಿಗೆ ಅವಳು ಮೌನವಾಗಿ ಎಚ್ಚರ ನೀಡುತ್ತಾಳೆ. ದೀಪಾವಳಿ ತನಕ ನಾನು ನಿಮ್ಮವಳು. ಹೊಸ ವರುಷದಿಂದ ನಾನು ಸ್ವತಂತ್ರಳು. ಆಮೇಲೆ ನನಗೆ ಬೈಯಬೇಡಿ….

ಆ ಕಡೆ ಹರ್ ಸಿಂಗ್ ಕೂಡ ತೂಗುಯ್ಯಾಲೆ ಆಡುತ್ತಿದ್ದ. ಮರುಮದುವೆ ಮಾಡಿಕೊಳ್ಳಲು ಶಾರದಾಳಿಗೆ ಪತ್ರ ಬರೆದ ಮೇಲೆ ಆತ ಬಹುಶಃ ಟ್ರೈನುಗಳಲ್ಲಿ ಟಿಕೇಟಿಲ್ಲದೆ ಊರಿನಿಂದ ಊರಿಗೆ ಅಲೆಯುತ್ತಿದ್ದ!

ಶಾರದಾ ತನ್ನನ್ನು ಹಿಂದಿರುಗುವಂತೆ ಕೋರಿ ದಿನಪತ್ರಿಕೆಯಲ್ಲಿ ಪ್ರಕಟಣೆ ನೀಡಬಹುದೆಂದೂ ಅವನು ನಿರೀಕ್ಷಿಸಿದ್ದ. ಅವನು ಲೈಬ್ರರಿಯಲ್ಲಿ ದಿನಪತ್ರಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಲು ಆರಂಭಿಸಿದ. ಒಂದು ಲಾಡ್ಜಿನಲ್ಲಿ ಪಾತ್ರೆ ತೊಳೆಯುವ ಕೆಲಸ ಅವನ ಊಟಕ್ಕೆ ಖಾತರಿ ನೀಡಿತ್ತು.

ಪತ್ರಿಕೆಗಳ ಯಾವುದೇ ಪ್ರಕಟನೆ ಬಗೆಗೆ ಇದ್ದ ಆಸಕ್ತಿಯನ್ನು ಸುಮಾರು ಒಂದು ತಿಂಗಳ ನಂತರ ಕಳೆದುಕೊಂಡುಬಿಟ್ಟ. ಒಂದು ರೀತಿಯಲ್ಲಿ ಅವನು ಸಂತೋಷದಿಂದಲೂ ಇದ್ದ. ಶಾರದಾ ಮರುಮದುವೆಯ ತನ್ನ ಕೊನೆಯ ಕೊರಿಕೆಯನ್ನು ಒಪ್ಪಿಕೊಂಡಿದ್ದಾಳೆ ಎಂದು ಭಾಸವಾಯಿತು. ತನ್ನ ತಲೆಯ ಮೇಲಿನಿಂದ ಸಂಸಾರದ ಭಾರ ಇಳಿದು ಹೋಗಿದ್ದುದು ಅವನಿಗೆ ಸಮಾಧಾನವಾದರೂ ಒಂದು ರೀತಿ ಹೃದಯ ಭಾರವೆನಿಸುತ್ತಿತ್ತು. ಹೆಂಡತಿ ಮತ್ತು ಮಕ್ಕಳಿಗೆ ಈಗ ಕೊನೆಯ ಪಕ್ಷ ಊಟಕ್ಕಾದರೂ ಸಾಕಷ್ಟಿದೆ. ಒಳ್ಳೆಯದಕ್ಕೋಸ್ಕರ ಆಕೆಯಿಂದ ಬೇರೆಯಾಗಿರುವಾಗ ಇವೆಲ್ಲ ಸಹಜವೆಂದು ಹೇಳಿಕೊಳ್ಳುತ್ತಿದ್ದ.

ಯಾವುದಾದರೂ ಕೆಲಸಕ್ಕೆ ಪ್ರಕಟನೆ ಇರುತ್ತದೋ ಹೇಗೆ ಎಂಬ ನಿರೀಕ್ಷೆ ಮತ್ತು ಅಭ್ಯಾಸ ಬಲದಿಂದ ಅವನಿನ್ನೂ ದಿನಪತ್ರಿಕೆ ನೋಡಲು ಲೈಬ್ರರಿಗೆ ಭೇಟಿ ನೀಡುತ್ತಿದ್ದ. ಒಂದು ದಿನ ಮಾಂಸಾಹಾರಿ ಅಡುಗೆಯವನಿಗಾಗಿ ಪ್ರಕಟನೆಯಿದ್ದುದನ್ನು ಪತ್ತೆಹಚ್ಚಿದ. ಅದು ಹತ್ತು ವರುಷಗಳ ಒಪ್ಪಂದದ ಮೇರೆಗೆ ಜಾಂಬಿಯಾದಲ್ಲಿ ಕೆಲಸ ಮಾಡುವುದಾಗಿತ್ತು. ಪುಕ್ಕಟೆ ದಾರಿ ಖರ್ಚು, ಅರ್ಹತೆ ಆಧರಿಸಿ ಸಂಬಳ.

ಹರ್ ಸಿಂಗ್ ಅಡುಗೆಯವನಾಗಿ ಎಲ್ಲೂ ಕೆಲಸ ಮಾಡಿಲ್ಲ. ಆದರೆ ತನ್ನ ಚಿಕ್ಕಪ್ಪನ ಜತೆ ಹಳ್ಳಿಯಲ್ಲಿ ಸುಮಾರು ನಾಲ್ಕು ವರ್ಷ ಕಾಲಕಳೆದಿದ್ದ. ಆ ಸಮಯದಲ್ಲಿ ಆತ ಮನೆಯಲ್ಲಿ ಅಡುಗೆ ಮಾಡಿದ್ದಾನೆ. ಅವನ ಚಿಕ್ಕಪ್ಪ ಒಬ್ಬ ಸಣ್ಣ ಜಮೀನುದಾರ. ಇಬ್ಬರೂ ಬೇಟೆಗೆ ಹೋಗುತ್ತಿದ್ದರು ಮತ್ತು ಹಿಂದಿರುಗಿ ಬಂದು ತಮಗಾಗಿ ವಿಧ ವಿಧವಾದ ತಿಂಡಿ ಪದಾರ್ಥಗಳನ್ನು ಬೇಯಿಸಿಕೊಳ್ಳುತ್ತಿದ್ದರು.

ಹರ್ ಸಿಂಗ್ ತನ್ನ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯಿಂದ ಪೆನ್ನು ಕೇಳಿ ಪಡೆದು, ಶಿವನ ಹೆಸರು ಹೇಳಿ ಅರ್ಜಿಯನ್ನು ಬರೆದ. ಅವನಿಗೆ ಭರವಸೆ ಉಂಟಾದಂತೆ ಕಾಣುತ್ತಿತ್ತು. ಲಾಡ್ಜಿಗೆ ಬಂದು ಯಜಮಾನನನ್ನು ಸೋಪು ಕೇಳಿ, ತನ್ನ ಬಟ್ಟೆಗಳನ್ನು ಒಗೆದು ಒಣಗಿಸಿದ. ಸಾಯಂಕಾಲ ನೀಟಾಗಿ ಡ್ರೆಸ್ ಮಾಡಿಕೊಂಡು, ವೈಯಕ್ತಿಕವಾಗಿ ಕಂಡು ಅರ್ಜಿ ಸಲ್ಲಿಸಲು ಹೋದ.

ಸೇಟು ಕೇಳಿದ ಮೊದಲ ಪ್ರಶೆಯೆ ನಿನಗೆ ಮದುವೆ ಆಗಿದೆಯೇ? ಎಂಬುದಾಗಿತ್ತು.

ಹರ್ ಸಿಂಗ್ ಪ್ರಾಮಾಣಿಕನಾಗಿ ಉತ್ತರಿಸಿದ, ಇಲ್ಲ ಸ್ವಾಮಿ.

ನಂತರ ಅವನು ತನ್ನ ಅಡುಗೆ ಅನುಭವದ ಬಗ್ಗೆ, ಎರಡು ಹಳ್ಳಿಗಳ ಮುಖ್ಯಸ್ಥನಾಗಿದ್ದ ಅವನ ಚಿಕ್ಕಪ್ಪನ ಬಗ್ಗೆ, ತಾನು ಫ್ಯಾಕ್ಟರಿಯಲ್ಲಿ ಕೆಲಸ ಮಾಡಿರುವ ಬಗ್ಗೆ ಸರಿಯಾದ ಮಾಹಿತಿ ನೀಡಿದ.

ಒಬ್ಬ ಸಂಸಾರಸ್ಥ ಐದು ವರುಷ ಮಾತ್ರ ಹೊರಗಿದ್ದು ವಾಪಸ್ಸು ಬರುತ್ತಾನೆ ಸೇಟು ಹೇಳಿದ.

ವಾಪಸ್ಸು ಬರುವ ಪ್ರಶ್ನೆಯೇ ಇಲ್ಲ ಸ್ವಾಮಿ. ಹತ್ತು ವರುಷ ಆದ ಮೇಲೂ ನಾನು ಹಿಂದಕ್ಕೆ ಬರೋದಿಲ್ಲ. ನಿಮಗೆ ನನ್ನ ಕೆಲಸ ಇಷ್ಟವಾಯಿತೆ? ಉಳಿದ ಬದುಕೆಲ್ಲ ನಿಮ್ಮ ಜತೆಯಲ್ಲೆ ಕಳೆಯಲು ಇಷ್ಟಪಡುತ್ತೇನೆ. ಆದರೆ ಮರುಕ್ಷಣವೇ ಮನಸ್ಸಿನಲ್ಲಿ ಚುಚ್ಚಿದಂತೆ ಹರ್ಸಿಂಗ್ನಿಗೆ ಅನ್ನಿಸಿತು. ಹತ್ತು ವರುಷಕ್ಕೆ ಒಂದು ಸಾರಿ ಆದರೂ ಮನೆಗೆ ಹೋಗಿಬರಬೇಕೆಂದು ಯಾರಿಗಾದರೂ ಅನ್ನಿಸುತ್ತದೆ ಎಂದವನು ಹೇಳಿದ.

ಸೇಟು ಅನುಭವಸ್ಥ. ಒಬ್ಬ ಅಡುಗೆ ಭಟ್ಟ ತಿಂಗಳಿಗೆ ನಾನೂರು ರೂಪಾಯಿ ಸಂಪಾದಿಸಿದರೆ ಅದು ವರುಷಕ್ಕೆ ಬಡ್ಡಿ ಸೇರಿ ಐದು ಸಾವಿರ ಆಗುತ್ತದೆ. ಹತ್ತು ವರುಷಕ್ಕೆ ಅದೇ ಅರವತ್ತು ಸಾವಿರವಾಗುತ್ತದೆಂದು ಆತನಿಗೆ ಮನವರಿಕೆಯಾಗಿದೆ. ಇಷ್ಟೊಂದು ಹಣ ಯಾರ ಕೈಯಲ್ಲೇ ಇದ್ದರೂ ಒಳ್ಳೆಯದು… ಇದೀಗ ಹತ್ತು ವರುಷಕ್ಕೆ ಕರಾರು ಮಾಡಿಕೊಳ್ಳುವುದು ಸರಿ. ಮುಂದೆ ನೋಡೋಣ ಸೇಟು ಹೇಳಿದ.

ಮಾರನೆಯ ದಿನವೆ ಸೇಟು ಅವನನ್ನು ಕೆಲಸಕ್ಕೆ ನೇಮಿಸಿಕೊಂಡ. ಅಲ್ಲಿನ ಅಡುಗೆಯವನನ್ನು ಕರೆದು, ನಾನು ಇವನ ಪಾಸ್ ಪೋರ್ಟ್ ಗೆ ವ್ಯವಸ್ಥೆ ಮಾಡುತ್ತೇನೆ. ಅಲ್ಲಿನ ಅಡುಗೆ ಬಗ್ಗೆ ಇವನಿಗೆ ಸರಿಯಾಗಿ ತಿಳಿಸು ಎಂದು ಸೂಚನೆ ನೀಡಿದ.

ಮುಂದಿನ ತಿಂಗಳೆ ಹರ್ ಸಿಂಗ್, ಸೇಟು ಜೊತೆ ವಿಮಾನವೇರಿದ. ಸ್ವರ್ಗಕ್ಕೆ ಹೋಗುತ್ತಿರುವಂತೆ ಭಾವಿಸಿದ.

ಜಾಂಬಿಯಾದಲ್ಲಿ ಸೇಟುವಿನ ಮನೆ ಸ್ವರ್ಗದಂತೇ ಇತ್ತು. ಅದೃಷ್ಟ ಅವನನ್ನು ಕಣ್ಣು ಬಿಟ್ಟು ನೋಡಿತ್ತು. ಹರ್ ಸಿಂಗ್ ಆನಂದದಿಂದಿರುತ್ತಿದ್ದ. ಇದೆಲ್ಲ ಒಂದು ಕನಸಿನಂತೆ ಭಾಸವಾಗಿತ್ತು.

ಅದೇ ಕ್ಷಣ ಹೃದಯವನ್ನು ಹಿಂಡುವ ನೋವುಂಟಾಯಿತು. ಶಾರದಾಳಿಗೆ ವಿಷಯ ತಿಳಿಸಲು ತೀವ್ರ ಕಾತರವುಂಟಾಯಿತು. ಅವಳು ಇನ್ನೊಂದು ಮದುವೆ ಆಗಿದ್ದರೆ, ಅವಳ ಬದುಕೆ ಹಾಳಾಗುತ್ತದೆಯೆಂದು ಅನಿಸಿತು. ಅವಳಂಥ ಸುಂದರವಾದ ಹೆಣ್ಣು ಮತ್ತೊಬ್ಬ ಗಂಡನನ್ನು ಹುಡುಕಿಕೊಳ್ಳುವುದು ಕಷ್ಟವಾಗುವುದಿಲ್ಲ. ವಠಾರದ ಯಜಮಾನ ಕೂಡ ಅವಳಿಗೆ ಸಹಾಯ ಮಾಡಿರಬಲ್ಲ. ಅವಳಂಥ ಒಬ್ಬ ಸಮರ್ಥ ಹೆಣ್ಣು ತಪ್ಪು ಆಯ್ಕೆ ಮಾಡುವುದಿಲ್ಲ ಎಂದು ಯೋಚಿಸಿದ.

ಈ ರೀತಿಯ ಯೋಚನೆಗಳ ಕುರಿತೆ ಹರ್ ಸಿಂಗ್ ಗೆ ನಗು ಬಂತು. ಇದೆಲ್ಲ ಮೂರ್ಖ ಆಲೋಚನೆ ಎನಿಸಿತು. ಅದು ಶಾರದಳ ಕಷ್ಟಗಳನ್ನು ಕುರಿತು ಯೋಚಿಸುವಂತೆಯೂ ಮಾಡಿತು. ಆತ ಮನೆ ಬಿಟ್ಟಾಗ ದಿನಸಿ ಅಂಗಡಿಯವನು ಸಾಲ ಕೊಡುವುದನ್ನು ನಿಲ್ಲಿಸಿದ್ದ. ವಠಾರದ ಯಜಮಾನ ಕೂಡ ಅವಳ ಮೇಲಿನ ಮರುಕದಿಂದ ಎಷ್ಟು ದಿನ ಸುಮ್ಮನಿರುತ್ತಾನೆ? ಅಲ್ಲದೆ ಶಾರದಳಿಗೆ ಒಂದು ಜೊತೆ ಮಾತ್ರ ಬಟ್ಟೆಗಳಿದ್ದವು. ಮಕ್ಕಳ ಬಟ್ಟೆಗಳಂತೂ….ಅರೆಹೊಟ್ಟೆಯ, ಅರೆಬೆತ್ತಲೆಯ ತನ್ನ ಸಂಸಾರದ ಬಗ್ಗೆ ಯೋಚಿಸುತ್ತ ಅವನು ಗದ್ಗದಿತನಾಗಿ ಬಿಕ್ಕುವುದನ್ನು ಅದುಮಿಡಲು ಕಷ್ಟಪಟ್ಟ.

ಕೆಲವು ತಿಂಗಳುಗಳ ಸಂಬಳ ಬ್ಯಾಂಕಿನಲ್ಲಿ ಸಂಗ್ರಹವಾದ ಹಾಗೆ ತಾನು ದೊಡ್ಡ ನಿಧಿಯ ಯಜಮಾನನಂತೆ ಹರ್ಸಿಂಗ್ಗೆ ಭಾಸವಾಗತೊಡಗಿತು. ಶಾರದ ಇನ್ನೊಂದು ಮದುವೆ ಮಾಡಿಕೊಂಡಿದ್ದರೂ ಒಬ್ಬ ಅನಾಮಧೇಯನಾಗಿ ಅವಳಿಗೆ ಸ್ವಲ್ಪ ಹಣ ಕಳಿಸಿಕೊಡಬೇಕು. ಹಳೆಯ ವಿಳಾಸಕ್ಕೆ ಕಳಿಸಿದರೆ, ಬುದ್ಧಿವಂತಳಾದ ಅವಳು ಇದನ್ನೆಲ್ಲ ಅರ್ಥಮಾಡಿಕೊಳ್ಳದೆ ಇರುತ್ತಾಳೆಯೆ? ಇನ್ನೊಂದು ಮದುವೆ ಮಾಡಿಕೊಂಡಿದ್ದರೆ ಇದೇ ಅವಳ ತೊಂದರೆಗೆ ಕಾರಣವೂ ಆಗಬಹುದು.

ಒಂದು ದಿನ ಅವನು ದಿನಸಿ ಅಂಗಡಿಯವನ ಮೂಲಕ ಶಾರದಾಳಿಗೆ ಒಂದಷ್ಟು ಹಣ ಕಳಿಸಲು ತುದಿಗಾಲ ಮೇಲೆ ನಿಂತಿದ್ದ. ಆದರೆ ಅರ್ಧ ದಾರಿಗೆ ಹೋಗಿ ವಾಪಸ್ಸಾದ. ತಾನು ಮದುವೆಯಾದವನೆಂದು ದಿನಸಿ ಅಂಗಡಿಯವನು ಸೇಟುಗೇನಾದರೂ ತಿಳಿಸಿದರೆ ತನ್ನ ಮಾನ ಪೂರ್ತಾ ಹೋಗುತ್ತದೆ.

ಶಾರದಾ ತುಂಬ ಸ್ವಾಭಿಮಾನದ ಹೆಣ್ಣು. ಅವಳು ಮರುಮದುವೆ ಮಾಡಿಕೊಳ್ಳದೆ ಹಾಗೆ ಇದ್ದರೂ ಇದ್ದಳೆ. ಕೊನೆಯ ಬಾರಿ ಆಡಿದ ಜಗಳದಲ್ಲಿ ಅವಳು ಇಕ್ಕಳ ಝಳಪಿಳಿಸಿದ್ದನ್ನು ಅವನು ನೆನಪಿಸಿಕೊಂಡ. ತನ್ನ ಅತ್ತಿಗೆ ಯಾವುದೋ ಮಾತು ಎತ್ತಿ ಆಡಿದಳೆಂದು ತನ್ನ ಅಣ್ಣನನ್ನೆ ಅವಳು ಬಿಟ್ಟುಬಂದಿದ್ದಳು. ಅವಳು ತನ್ನನ್ನು ಪೂರ್ತಾ ಮರೆತಿಲ್ಲವೆನ್ನುವುದಕ್ಕೆ ಖಾತರಿಯೇನು? ಅವಳ ಕಷ್ಟ ಎಂಥದ್ದೆ ಇರಲಿ ತನ್ನ ದುಡ್ಡನ್ನು ಅವಳು ಪಡೆಯುವುದಿಲ್ಲ. ಗೋಜಲುಗಳನ್ನು ಕತ್ತರಿಸುವುದರಲ್ಲೆ ಅವಳಿಗೆ ನಂಬಿಕೆ. ತನ್ನ ಮನಸ್ಸಿಗೆ ಬಂದ ಹಾಗೆ ನಡೆದುಕೊಳ್ಳುವವರೆಗೂ ಅವಳು ಒಳ್ಳೆಯವಳೇ! ಇಲ್ಲದಿದ್ದರೆ…

ಕೊನೆಗೆ ಅಜ್ಞಾತನಾಗಿಯೆ ಉಳಿಯಲು ನಿರ್ಧರಿಸಿ ತನಗೆ ತಾನೇ ಸಮಾಧಾನ ಹೇಳಿಕೊಂಡ.

ಹೀಗೆಯೆ ಹತ್ತು ವರುಷ ಕಳೆಯಿತು. ಹರ್ ಸಿಂಗ್ ನ ಕರ್ತವ್ಯನಿಷ್ಟೆ ಸೇಟುವಿಗೆ ಸಂತೋಷವನ್ನುಂಟು ಮಾಡಿತ್ತು. ಆತ ಹೊರಟು ಬರುವಾಗ ಉದಾರವಾಗಿ ಬಹುಮಾನ ನೀಡಿದ ಮತ್ತು ಸಂಗ್ರಹಿತ ಬಾಕಿಯನ್ನು ಭಾರತದ ಅವನ ಊರಿನಲ್ಲಿ ಸಿಗುವಂತೆ ವ್ಯವಸ್ಥೆ ಮಾಡಿದ. ಅವನು ತಲೆ ತಿರುಗುವಂಥ ಅರವತ್ತೈದು ಸಾವಿರ ರೂಪಾಯಿಗಳ ದೊಡ್ಡ ಮೊತ್ತವನ್ನು ಪಡೆದ.

ಹರ್ ಸಿಂಗ್ ವಿಮಾನ ಹತ್ತುತ್ತಿದ್ದ ಹಾಗೆ ಅವನ ಎದೆ ಬಡಿದುಕೊಳ್ಳತೊಡಗಿತು. ತುಂಬ ಕಷ್ಟದಿಂದ ಅವನು ತನ್ನ ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡ. ತನ್ನ ಊರು ತಲುಪಲು ಆತ ಮುಂಬೈಯಲ್ಲಿ ವಿಮಾನ ಬದಲಿಸಿದ. ಈ ಮಧ್ಯೆ ತನ್ನ ಯೋಜನೆಯನ್ನು ರೂಪಿಸತೊಡಗಿದ.

ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಹಿಡಿದು, ನೇರವಾಗಿ ಒಳ್ಳೆಯ ಹೋಟೆಲಿಗೆ ಬಂದು, ಅವಸರವಸರವಾಗಿ ತಿಂಡಿ ತಿಂದು ತನ್ನ ಹಳೆಯ ವಠಾರಕ್ಕೆ ಹೋದ. ತಾನು ಗುರುತಿಸಲ್ಪಡುವ ಬಗ್ಗೆ ಅವನಿಗೆ ಚಿಂತೆ ಇರಲಿಲ್ಲ. ಟ್ಯಾಕ್ಸಿಯಿಂದ ಕೆಳಗಿಳಿದ ಮೇಲೂ ಸುತ್ತಲೂ ನೋಡುವ ಧೈರ್ಯ ತೋರಲಿಲ್ಲ.

ಒಮ್ಮೆ ತಾನು ವಾಸವಾಗಿದ್ದ ಮನೆಯ ಮುಂದೆ ಹಾದುಹೋದ ಹರ್ ಸಿಂಗ್, ಅಂಗಳದಲ್ಲಿ ಬಣ್ಣದ ಬಟ್ಟೆಗಳನ್ನು ಒಣಗಿ ಹಾಕಿರುವುದನ್ನು ಗಮನಿಸಿದ. ಬಾಗಿಲ ಹತ್ತಿರ ಒಬ್ಬ ಹೆಂಗಸು ಬಟ್ಟೆ ಹೊಲಿಯುವ ಮಿಷನ್ನಿನ ಮೇಲೆ ಕುಳಿತಿದ್ದಳು. ಹರ್ ಸಿಂಗ್ ನ ಎದೆ ವೇಗವಾಗಿ ಬಡಿದುಕೊಳ್ಳತೊಡಗಿತು. ಅವಳೇ….ಶಾರದಾ! ಅವಳ ಬಳಿ ಧಾವಿಸಿ ಹೋಗುವ ಆಸೆ ಒತ್ತರಿಸಿ ಬಂತು. ಆದರೆ ತನ್ನನ್ನು ತಾನೇ ನಿಯಂತ್ರಿಸಿಕೊಂಡ. ಬಹುಶಃ ಅವಳು ಇನ್ನೊಂದು ಮದುವೆ ಆಗಿದ್ದರೆ? ಹಾಗಿದ್ದೂ ಇನ್ನೂ ಇದೇ ಮನೆಯಲ್ಲಿ ವಾಸ ಮಾಡುತ್ತಿರಲು ಸಾಧ್ಯ. ಆತ ಕೆಲಸದ ಮೇಲೆ ಹೋಗಿರಬಹುದು, ಹುಡುಗರು ಶಾಲೆಯಲ್ಲಿರಬಹುದು.

ಚಿಕ್ಕ ಗೋಪುರದ ಪಕ್ಕದ ಮನೇಲಿ ಯಾರು ವಾಸ ಮಾಡುತ್ತಿದ್ದಾರೆ, ಗೊತ್ತೇನಮ್ಮ? ಬೀದಿಯ ತಿರುವಿನಲ್ಲಿ ಆತ ಒಬ್ಬ ಹೆಂಗಸನ್ನು ವಿಚಾರಿಸಿದ.

ನೀವು ಶಾರದಾಳ ಮನೆ ಕೇಳ್ತಿದ್ದೀರಾ?

ಕೊಂಚ ಕಷ್ಟದಿಂದ ಹರ್ ಸಿಂಗ್ ಹೇಳಿದ ಹೌದು, ಅಲ್ಲಿ ಹರ್ ಸಿಂಗ್ ಅಂತ ಒಬ್ಬರು ಇದ್ದ ಹಾಗಿತ್ತಲ್ಲ….

ನನಗೆ ಸರಿಯಾಗಿ ಗೊತ್ತಿಲ್ಲ. ಶಾರದಳ ಗಂಡ ಸುಮಾರು ವರುಷದಿಂದ ತಲೆತಪ್ಪಿಸಿಕೊಂಡಿದ್ದಾನೆ ಅಂತ ಜನ ಹೇಳ್ತಾರೆ. ಆತ ಹರ್ ಸಿಂಗ್ ಇರಬಹುದು.

ಇನ್ನಷ್ಟು ಕೇಳಲು ಹರ್ ಸಿಂಗ್ ಗೆ ಧೈರ್ಯಬಂತು. ಅಂದರೆ.. .ಅವಳೊಬ್ಬಳೆ ಆ ಮನೆಯಲ್ಲಿ ವಾಸವಾಗಿದ್ದಾಳೆಯೆ?

ಇಲ್ಲ. ಅವಳ ಜೊತೆ ಇಬ್ಬರು ಹುಡುಗರಿದ್ದಾರೆ.

ಆ ಮನೇಲಿ ಬೇರೆ ಯಾರೂ ಇಲ್ಲವೆ?

ಗಂಡ ಹೋದಮೇಲೆ ಇನ್ನಾರಿರ್ತಾರೆ? ಆ ಹೆಂಗಸು ನಿಟ್ಟುಸಿರಿಟ್ಟು ಹೊರಟುಹೋದಳು.

ಒಂದು ಕ್ಷಣ ಹರ್ ಸಿಂಗ್ ಗೆ ಮನೆಗೆ ನುಗ್ಗುವ ಆಸೆಯಾಯಿತು. ಆದರೆ ಆತನಲ್ಲಿ ಭರವಸೆಯೊಂದು ಹುಟ್ಟಿ ದುಡುಕಬಾರದೆಂದುಕೊಂಡ. ಅವಳು ಮದುವೆಯಾಗಿಲ್ಲವೆಂದು ಹೆಚ್ಚು ಕಡಿಮೆ ಖಚಿತವಾಗಿತ್ತು. ಇಷ್ಟಾದರೂ ಅವಳು ತನ್ನನ್ನು ಮತ್ತೆ ಸ್ವೀಕರಿಸುತ್ತಾಳೆ ಎಂಬುದರ ಬಗ್ಗೆ ಅವನಿಗೆ ಭರವಸೆ ಇರಲಿಲ್ಲ.

ಹರ್ ಸಿಂಗ್ ಹೋಟೆಲಿಗೆ ಹಿಂತಿರುಗಿದ. ಸ್ಥಳೀಯ ವಿಳಾಸಕೊಟ್ಟು ಅವಳಿಗೊಂದು ಪತ್ರ ಬರೆಯುವುದೆಂದು ನಡುದಾರಿಯಲ್ಲೇ ನಿರ್ಧರಿಸಿದ. ತನ್ನ ಇಷ್ಟದಂತೆ ಪ್ರತಿಕ್ರಿಯಿಸಲು ಅವಳಿಗೆ ಅವಕಾಶವಿರುತ್ತದೆ. ಆದರೆ ಒಂದು ಕ್ಷಣ ಯೋಚಿಸಿದ ಮೇಲೆ ಶಾರದಾಳನ್ನು ಹೋಟೆಲಿಗೆ ಕರೆಯುವುದು ಸರಿಯಲ್ಲವೆನಿಸಿತು. ಅದರ ಬದಲು ಅವನೊಂದು ಇನ್ ಲ್ಯಾಂಡ್ ಲೆಟರ್ ನಲ್ಲಿ ಕೆಲವೊಂದು ಸಾಲುಗಳನ್ನು ಗೀಚಿದ;

ಶಾರದಾ,

ನಾನು ಹತ್ತು ವರುಷಗಳ ಕಾಲ ಹೊರದೇಶದಲ್ಲಿ ವಾಸಮಾಡಿ ಊರಿಗೆ ವಾಪಸ್ಸು ಬಂದಿದ್ದೇನೆ. ನನ್ನನ್ನು ಕ್ಷಮಿಸಿ ್ನಗುವಿನೊಂದಿಗೆ ಒಪ್ಪಿಕೊಳ್ಳುವುದಾದರೆ, ಗುರುವಾರ-ಅಂದರೆ ನಾಳಿದ್ದು – ಆ ಚಿಕ್ಕ ಗೋಪುರದ ಕಂಬಿಯ ಮೇಲೆ ಒಂದು ಹಸಿರುಬಟ್ಟೆಯನ್ನು ಹಾರಿಸು. ನಿನ್ನನ್ನು ಹತ್ತು ವರುಷಗಳ ಹಿಂದೆ ತೊರೆದುಹೋದ,                             -ಹರ್ ಸಿಂಗ್

ಹರ್ ಸಿಂಗ್ ಪತ್ರವನ್ನು ಅಂಚೆಗೆ ಹಾಕಿದ. ಗುರುವಾರ ಅವನು ಹೋಟೆಲು ಬಿಡಲು ನಿರ್ಧರಿಸಿದ. ಕಂಬಿಗಳ ಮೇಲೆ ಹಸಿರು ಬಟ್ಟೆ ಇದ್ದರೆ ತುಂಬಾ ಚೆನ್ನಾಗಿರುತ್ತದೆ. ಇಲ್ಲದಿದ್ದರೆ ಅರಾವಳಿ ಬೆಟ್ಟದ ಬುಡದಲ್ಲಿರುವ ತನ್ನ ಹಳ್ಳಿಗೆ ಹೋಗಿ ತಾನೇ ಒಂದು ಚಿಕ್ಕಮನೆ ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದ.

ಹರ್ ಸಿಂಗ್ ಹೀಗೆ ಮಾನಸಿಕ ಒತ್ತಡಗಳಲ್ಲಿ ಅಸಹನೆಯಿಂದ ನರಳುತ್ತ, ಊರಿನ ಬೀದಿ ಬೀದಿಗಳನ್ನು ಸುಮ್ಮನೆ ಸುತ್ತುತ್ತ, ಸಿನಿಮಾಗಳನ್ನು ನೋಡುತ್ತ ಕಾಲ ಕಳೆದ.

ಗುರುವಾರ ಬೆಳಗಿನ ಜಾವವೆ ಹರ್ ಸಿಂಗ್ ಎದ್ದ. ಆಗ ಹೋಟೆಲಿನಲ್ಲಿ ಇನ್ನೂ ಯಾರೂ ಎದ್ದಿರಲಿಲ್ಲ. ಅವನು ಸ್ನಾನ ಮಾಡಿ ಬಟ್ಟೆ ಹಾಕಿಕೊಂಡು ಶೂ ಕಟ್ಟುತ್ತಿದ್ದಾಗ ಅಡುಗೆಮನೆಯಲ್ಲಿ ಆಗ ತಾನೇ  ದಿನದ ಕೆಲಸ ಆರಂಭವಾದ ಸದ್ದು ಕೇಳಿಸುತ್ತಿತ್ತು.

ತನ್ನ ಚಡಪಡಿಸುವ ಮನಸ್ಸಿಗಿಂತ ಒಂದು ಮದಿಸಿದ ಆನೆಯನ್ನು ಹರ್ ಸಿಂಗ್ ಸುಲಭವಾಗಿ ಹಿಡಿತದಲ್ಲಿ ಇಡಬಲ್ಲವನಾಗಿದ್ದ. ಆಗ ತಾನೆ ಆರು ಗಂಟೆ. ಇಷ್ಟು ಬೇಗ ಅವಳು ಹಸಿರು ಬಟ್ಟೆಯನ್ನು ತೂಗು ಹಾಕುವುದಿಲ್ಲ. ಸ್ವಲ್ಪ ಹೊತ್ತು ಬಿಟ್ಟು ಹೋಗುವುದು ಉತ್ತಮವೆಂದು ಭಾವಿಸಿದ.

ಕೊನೆಗೂ ಅವನು ತನ್ನ ಲಗೇಜು ತೆಗೆದುಕೊಂಡು ಹೋಟೆಲು ಬಿಟ್ಟು ಹೊರಟ, ಅವನ ಹೃದಯ ಹರಿದಾಡುತ್ತಿತ್ತು. ತಾನು ತನ್ನ ಹೆಂಡತಿ ಒಂದುಗೂಡಿದರೆ ಐದುಕಾಲು ತೊಲ ಬಂಗಾರದ ನಾಗರವನ್ನು ಮಾಡಿಸಿ ಹಾಕುವೆನೆಂದು ಅವನು ಶಿವನ ಹೆಸರಲ್ಲಿ ಹರಕೆ ಹೊತ್ತುಕೊಂಡ.

ಗೋಪುರ ಹತ್ತಿರದ ತಿರುವಿನಲ್ಲಿ ಆತ ಟ್ಯಾಕ್ಸಿ ನಿಲ್ಲಿಸಿದ. ಟ್ಯಾಕ್ಸಿ ನಿಲ್ಲಿಸುವ ಮೊದಲೆ ಅವನು ವಠಾರವನ್ನೊಮ್ಮೆ ಅವಲೋಕಿಸಿದ. ಅವನ ಹೃದಯ ಕಣ್ಣಿಗೆ ಬಂದಂತಾಯಿತು. ಕಂಬಿ ಪೂರ್ತಾ ಹಸಿರು ಬಟ್ಟೆಯಿಂದ ಸುತ್ತಿದ್ದು, ಅದು ಮನೆಯ ಬಾಗಿಲವರೆಗೂ ಹರಡಿಕೊಂಡಿತ್ತು.

ಹರ್ ಸಿಂಗ್ ಟ್ಯಾಕ್ಸಿಯನ್ನು ಗೋಪುರದ ತನಕ ಅಂದರೆ ಮನೆಯ ಬಾಗಿಲ ತನಕ ತೆಗೆದುಕೊಂಡು ಹೋಗಲು ಇಷ್ಟ ಪಟ್ಟ. ಆದರೆ ಗೋಪುರ ಮತ್ತು ಮನೆಯ ನಡುವೆ ಸಾಕಷ್ಟು ಜಾಗವಿರಲಿಲ್ಲ.

ಅವನು ಟ್ಯಾಕ್ಸಿಯನ್ನು ಬಿಟ್ಟು ಬಂದಾಗ ಬಾಗಿಲಿಗೆ ತೋರಣದ ರೀತಿ ಹಸಿರು ಬಟ್ಟೆಯನ್ನು ತೂಗುಹಾಕಿರುವುದು ಕಣ್ಣಿಗೆ ಬಿತ್ತು. ಶಾರದಾ ಹಸಿರು ಸೀರೆಯನ್ನುಟ್ಟು ಚೆಂದವಾಗಿ ಕಾಣುವ ಇಬ್ಬರು ಹುಡುಗರನ್ನು ಪಕ್ಕದಲ್ಲಿರಿಸಿಕೊಂಡು ಬಾಗಿಲ ಬಳಿ ನಿಂತಿದ್ದಳು.

ಶಾರದಾ ತಿರುವಿನ ಒಂದು ಪಕ್ಕದಲ್ಲಿ ಟ್ಯಾಕ್ಸಿ ನಿಲ್ಲುವುದನ್ನು ನೋಡಿದಳು. ಟ್ಯಾಕ್ಸಿ ನಿಂತಾಗ ಅವಳು ಪಿಳಿಪಿಳಿ ಕಣ್ಣು ಬಿಟ್ಟಳು. ಆದರೆ ಸೂಟು ಧರಿಸಿದ್ದ ವ್ಯಕ್ತಿಯನ್ನು ನೋಡಿ ಅವಳು ಮತ್ತೆ ಗೋಪುರದ ಕಡೆ ತಿರುಗಿದಳು. ಹರ್ ಸಿಂಗ್ ಕೂಡ ಟ್ಯಾಕ್ಸಿಯ ತೆರೆದ ಬಾಗಿಲನ್ನು ಹಾಗೆಯೆ ಬಿಟ್ಟು ಯಾವ ಹಿಂಜರಿತವಿಲ್ಲದೆ ಗೋಪುರ ದಾಟಿ ಮೆಟ್ಟಿಲು ಹತ್ತಿರ ಬಂದ…

ಕೆಲವೊಂದು ಕ್ಷಣ ಆ ಎರಡೂ ಜೊತೆ ಕಣ್ಣುಗಳು-ಮೆಟ್ಟಿಲ ಮೇಲೊಂದು, ಕೆಳಗೊಂದು-ವಿಸ್ಮಯಗೊಂಡು ನೋಡಿದವು. ಹುಡುಗರು ಆಶ್ಚರ್ಯಗೊಂಡಿದ್ದರು. ಮರುಕ್ಷಣವೇ ಆತ ಮೆಟ್ಟಿಲನ್ನು ಹತ್ತಿ ಅವಳನ್ನು ಕೇಳಿದ.

ನನ್ನನ್ನು ಗುರುತಿಸುವುದಿಲ್ಲವೆ?

ಅವನನ್ನು ಗುರುತಿಸಿದ ಆ ಕ್ಷಣ…ಶಾರದಾ ತನ್ನ ಬದುಕಿನಲ್ಲೆ ಮೊದಲ ಬಾರಿಗೆ ತನ್ನ ಸಮಯಾಸಮಯ ಪ್ರಜ್ಞೆ  ಕಳೆದುಕೊಂಡು, ನೀಟಾಗಿ ಶೇವ್ ಮಾಡಿರುವ ತನ್ನ ಗಂಡನನ್ನು ತಬ್ಬಿ ಹಿಡಿದು ಗದ್ಗದಿತಳಾಗಿ ಅಳತೊಡಗಿದಳು. ಹರ್ ಸಿಂಗ್ ಕೂಡ ಕಣ್ಣೀರ ಕೋಡಿ ಹರಿಸುತ್ತ, ಇಬ್ಬರು ಹುಡುಗರನ್ನೂ ತನ್ನ ಕಡೆ ಎಳೆದುಕೊಂಡ. ಆ ನಾಲ್ಕೂ ಮಂದಿ ಆನಂದದಲ್ಲಿ ಮುಳುಗಿದರು. ಅವರೇಕೆ ಜೋರಾಗಿ ಅಳುತ್ತಿದ್ದರೆಂದು ಹುಡುಗರಿಗೆ ಅರ್ಥವಾಗಲಿಲ್ಲ. ಅಳು ಕೂಡ ಹಿತಕರವಾಗಿರುತ್ತದೆ ಎಂಬುದು ಅವರಿಗೂ ಗೊತ್ತಿರಲಿಲ್ಲ.

ಸೌಜನ್ಯ- `ಪ್ರತಿಭಾ ಇಂಡಿಯಾ ಇಂಗ್ಲಿಶ್ ಸಾಹಿತ್ಯ ಪತ್ರಿಕೆ

‘ಹಸಿರು ತೋರಣ’ ಸಂಕಲನದಿಂದ

 

‍ಲೇಖಕರು avadhi

30 November, 2011

1 Comment

  1. Santoshkumar

    Super very heart touching story….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading