ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಳೆಯ ವಸ್ತುಗಳ ವಿಲೇವಾರಿ ಸಂಕಟ…

ರಹಮತ್‌ ತರೀಕೆರೆ

ಮನೆಯಲ್ಲಿ ಅಪ್ಪನಿಗೆ ಅವನವೇ ಆದ ಕೆಲವು ಪ್ರಾಣಪ್ರಿಯ ವಸ್ತುಗಳಿದ್ದವು. ಅವುಗಳಲ್ಲಿ ಅವನ ಕುರ್ಚಿ, ಕೋವಿ, ಟ್ರಂಕು ಕೋಟುಗಳು ಸೇರಿದ್ದವು. ಅವನು ಜಳಕಮಾಡಿ ತೇಗದಮರದಿಂದ ಮಾಡಿದ ಭಾರವಾದ ಕುರ್ಚಿಯನ್ನು ಹಾಲಿನಲ್ಲಿ ಹಾಕಿಕೊಂಡು ಕುಲುಮೆಯತ್ತ ನೋಡಿಕೊಂಡು ಕೂರುತ್ತಿದ್ದನು. ಅವನು ಮನೆಯಲ್ಲಿದ್ದಾಗ ಯಾರೂ ಸಿಂಹಾಸನವನ್ನು ಆರೋಹಣ ಮಾಡುತ್ತಿರಲಿಲ್ಲ. ಶಿಕಾರಿ ಸಂಗಾತಿಯಾಗಿದ್ದ ಕೋವಿ ಅವನ ಎರಡನೇ ಪ್ರಾಣವಾಗಿತ್ತು. ವಿರಾಮದಲ್ಲಿರುವಾಗ ಅದನ್ನು ಬಿಚ್ಚಿ ಜಂಗುಹಿಡಿದ ಅದರ ಅವಯವಗಳನ್ನು ಸೀಮೆಯೆಣ್ಣೆಯಲ್ಲಿ ಅದ್ದಿ ತೊಳೆದು ಸ್ವಚ್ಛಗೊಳಿಸಿ, ಒರೆಸಿ ಮರಳಿ ಜೋಡಿಸುವುದು ಅವನಿಗೆ ಪರಮಾನಂದದ ಕೆಲಸ. ಹಳಗಾಲದ ಕೇಪಿನ ಕೋವಿಯ ಉತ್ತರಾಧಿಕಾರ ಪಡೆಯಲು ಗಂಡುಮಕ್ಕಳಾದ ನಾವೆಲ್ಲ ನಿರಾಕರಿಸಿ, ಅವನಿಂದ ‘ಹೇಡಿಗಳು ಎಂಬ ಬಿರುದನ್ನು ಸ್ವೀಕಾರ ಮಾಡಿದ್ದೆವು.

ಅಪ್ಪನು ತನ್ನ ಮೂರನೇ ಪ್ರಾಣವಾದ ಟ್ರಂಕನ್ನು ಆಗಾಗ್ಗೆ ಬಿಚ್ಚಿ, ಅದರೊಳಗಿದ್ದ ಪುಟ್ಟಡೈರಿ ಕಾಗದ ಪತ್ರಗಳನ್ನು ಪರಿಶೀಲಿಸುತ್ತಿದ್ದನು. ಸ್ಕೂಲ್ ಮೆಟ್ಟಿಲನ್ನು ಹತ್ತದಿದ್ದರೂ, ಅವನಿಗೆ ಕನ್ನಡವನ್ನು ಕಾಗುಣಿತ ಹಂಗಿಲ್ಲದೆ ಬರೆವ ಅಭ್ಯಾಸವಿತ್ತು. ದಸಣ 20ರೂ ಬಂದಿಲ’ದೂಡಮ್ಮ 25ರೂ, ಅಮನ ಹಬಕೆ ಚುಕತಾ’ ಎಂಬಿತ್ಯಾದಿ ಕೈಸಾಲದ ವಿವರಗಳು ಶಾಸನಲಿಪಿಯಲ್ಲಿದ್ದವು. ಡೈರಿಗಳಲ್ಲಿ ಮಕ್ಕಳು ಹುಟ್ಟಿದ ಮತ್ತು ಶಾಲೆ ಸೇರಿದ ದಿನ, ಅಕ್ಕನ ಮದುವೆ ಖರ್ಚಿನ ವಿವರಗಳಿದ್ದವು. ಕೆಲವು ಪ್ರಾಮಿಸರಿ ನೋಟುಗಳು, ಗ್ರಾಮ ಪಂಚಾಯಿತಿ ಎಲೆಕ್ಷನಿಗೆ ನಿಂತಾಗ ಹೊರಡಿಸಿದ ಪ್ರಚಾರದ ಕರಪತ್ರ, ಹೊರಗಿನಿಂದ ಬಂದ ಪತ್ರಗಳು, ಕಂದಾಯ ಕಟ್ಟಿದ ರಶೀದಿ, ರೇಡಿಯೊ ಲೈಸೆನ್ಸು, ಸೈಕಲ್ ಕೊಂಡ ಬಿಲ್ಲು, ಲೈಟಿಲ್ಲದೆ ಸೈಕಲ್ ಚಲಾಯಿಸಿದ್ದಕ್ಕೆ ತೆತ್ತ ದಂಡದ ರಶೀದಿಗಳಿದ್ದವು.

ಇಂಗ್ಲೀಶು ಉರ್ದು ಅಂಗ್ರೇಜಿಗಳಲ್ಲಿ 1 ಪೈಸೆ ಮುದ್ರೆಯಿರುವ, 1943ನೇ ಇಸವಿಯೂ, ಇಂಗ್ಲೆಂಡ್ ರಾಣಿಯ ಕಿರೀಟವೂ, ಹಿಂಬದಿ ಸುಂದರವಾದ ಹೂಬಳ್ಳಿಯೂ ಇದ್ದ, ತಾಮ್ರದ ತೂತು ನಾಣ್ಯಗಳ ಚೀಲವಿತ್ತು. ಅಪ್ಪ ಕಾಗದಗಳನ್ನು ಹೊರತೆಗೆದು, ಒಳಸೇರಿರುವ ಜಿರಲೆ ಮರಿಗಳನ್ನು ಸಾಯಿಸಿ, ಪತ್ರಗಳ ಮಡಚಿದ ಕಿವಿಗಳನ್ನು ಹುಶಾರಾಗಿ ಸರಿಮಾಡಿ, ನಮ್ಮಿಂದ ಓದಿಸುತ್ತಿದ್ದನು. ಕೈಸಾಲ ಪಡೆದ ವ್ಯಕ್ತಿ ತೀರಿಹೋಗಿದ್ದರೆ, ಮರಗಯಾರೇ ಚಿನಾಲ್ಕ. ಅಚ್ಛಾ ಅದ್ಮಿ’ ಎಂದು ಸ್ಮರಿಸುತ್ತಿದ್ದನು. ಕಡೆಗೆ ಅವನ್ನು ಮತ್ತೆ ನೀಟಾಗಿ ಕಟ್ಟಿ ಟ್ರಂಕಿನಲ್ಲಿಡುತ್ತಿದ್ದನು. ಕೆಲವು ಕಾಗದ ಪತ್ರಗಳು ಮುಗ್ಗು ವಾಸನೆ ಬೀರುತ್ತಿದ್ದವು. ಸಾಲ ವಸೂಲಿಯಾದ ಬಳಿಕ ಅಥವಾ ಇಸಮು ಫೌತಿಯಾದ ಬಳಿಕ ಅವನ್ನು ಹರಿದುಹಾಕಬೇಕು, ಜತನವಾಗಿಟ್ಟು ಫಾಯದೆಯೇನು ಎಂದು ನಮ್ಮ ವಾದ.ನಿಮಗೆ ಗೊತ್ತಾಗಲ್ಲ’ ಎಂದು ಬಾಯ್ಮುಚ್ಚಿಸುತ್ತಿದ್ದನು. ಆದರೂ ನಾವು ಅವನಿಗೆ ಗೊತ್ತಿಲ್ಲದೆ ಕೆಲವು ವಾಯಿದೆ ಮುಗಿದ ಕಾಗದಗಳನ್ನು ನೀರೊಲೆಗೆ ಸಮರ್ಪಿಸುತ್ತಿದ್ದೆವು.

ಅಪ್ಪನ ನಾಲ್ಕನೆಯ ಪ್ರಾಣ ಕೋಟಿನಲ್ಲಿತ್ತು. ಅದು ಯಾವಾಗ ಹೊಲಿಸಿದ್ದೊ ತಿಳಿಯದು, ಅದನ್ನವನು ಮದುವೆ ಕಾರ್ಯಕ್ಕೆ, ಫೋಟೊ ಸ್ಟುಡಿಯೊಗೆ, ತಹಸಿಲ್ದಾರ್ ಕಛೇರಿಗೆ ಹಾಗೂ ಗನ್ ಲೈಸೆನ್ಸನ್ನು ನವೀಕರಿಸಲು ಪೋಲಿಸ್ ಸ್ಟೇಶನ್ನಿಗೆ ಹೋಗುವಾಗ ಮಾತ್ರ ಧರಿಸುತ್ತಿದ್ದನು. ಉಳಿದ ದಿನಗಳಲ್ಲಿ ಅದು ಗೋಡೆಯ ಗೂಟಕ್ಕೆ ನೇಲುತ್ತಿರುತ್ತಿತ್ತು. ಅದಕ್ಕೆ ಒಳಹೊರಗೆ ಸೇರಿ ಒಟ್ಟು ಆರು ಜೇಬುಗಳಿದ್ದವು. ಅವುಗಳಲ್ಲಿ ನಾವು ಅಂಗಿಯಿಂದ ಕಳಚಿ ಅನಾಥವಾದ ಗುಂಡಿಗಳನ್ನು, ಚಾಲ್ತಿ ಕಳೆದುಕೊಂಡ ಕಾಸುಗಳನ್ನು, ಸೂಜಿಚುಚ್ಚಿದ ದಾರದುಂಡೆಯನ್ನು ಹಾಗೂ ಲೆಕ್ಕದ ಚೀಟಿಗಳನ್ನು ಇಡುವ ಕಪಾಟನ್ನಾಗಿ ಮಾಡಿಕೊಂಡಿದ್ದೆವು. ಅದು ಕ್ರಮೇಣ ಧೂಳು ಹಿಡಿದು ತನ್ನ ವೈಭವವನ್ನೆಲ್ಲ ಕಳೆದುಕೊಂಡಿತು. ಅದನ್ನು ಗಿಡಬುಡಕಿ ಕಲಾವಿದರು ಬಂದು ಕೇಳಲು ಸಂತೋಷದಿಂದ ಕೊಟ್ಟು ಕೈತೊಳೆದುಕೊಂಡೆವು.

ಒಂದು ಕಾಲಕ್ಕೆ ಅಪ್ಪ ಹೊದೆಯುತ್ತಿದ್ದ ಕೌದಿಗೂ ಇದೇ ಅವಸ್ಥೆ ಬಂದಿತು. ಹೊಲಿಗೆ ಕೆಲಸದಲ್ಲಿ ಪರಿಣತೆಯಾಗಿದ್ದ ಅಮ್ಮ ಸವುಡು ಸಿಕ್ಕಾಗಲೆಲ್ಲ ಹಳೆಬಟ್ಟೆ ಸೇರಿಸಿ ಹೊಲಿಯುತ್ತ, ಅದು ಎರಡು ದಶಕಗಳಲ್ಲಿ ಮನೆಯ ಸದಸ್ಯರು ಉಟ್ಟ ಬಟ್ಟೆಯ ಅವಶೇಷಗಳನ್ನು ಧಾರಣಮಾಡಿತ್ತು. ಅದು ಹರಿದಾಗ ಯಾವುದಾದರೂ ಬಟ್ಟೆ ಕಾಣಿಸಿದರೆ, ಇದು ಫಲಾನೆ ಈ ಸೀರೆಯದು, ಇಂಥ ಹೊತ್ತಲ್ಲಿ ಕೊಂಡ ಈ ಅಂಗಿಯದು ಎಂದು ಅಮ್ಮ, ಮೂಕಜ್ಜಿಯ ಕನಸುಗಳು’ ಕಾದಂಬರಿಯ ಪುರಾತತ್ವ ತಜ್ಞೆಯಂತೆ ವಿವರಿಸುತ್ತಿದ್ದಳು.

ಬೇಸಗೆಯಲ್ಲಿ ಯಾರಿಗೂ ಬೇಡದ ಮಗುವಾಗುತ್ತಿದ್ದ ಕೌದಿಯ ಮೇಲೆ, ಚಳಿಗಾಲದಲ್ಲಿ ಹಕ್ಕುಸಾಧಿಸಲು ನಮ್ಮಲ್ಲಿ ಮಾರಾಮಾರಿ ಸಂಭವಿಸುತ್ತಿತ್ತು. ಚುಚ್ಚುವ ಮತ್ತು ರೋಮ ಉದುರಿಸುವ ಕಂಬಳಿಯ ಕಿರಿಕಿರಿಗೆ ಹೋಲಿಸಿದರೆ ಅದು ಮೈಯನ್ನು ಹಿತವಾಗಿ ಅಪ್ಪಿಕೊಳ್ಳುತ್ತಿತ್ತು. ಕಾಯಿಲೆ ಬಿದ್ದಾಗ ಹಾಸಿಗೆಯಾಗಿ ರೂಪಾಂತರ ಪಡೆಯುತ್ತಿತ್ತು. ವರ್ಷಕ್ಕೊಮ್ಮೆ ಅದನ್ನು ಕೆರೆಗೊಯ್ದು ಚೌಳುಹಾಕಿ ಕಾಲಲ್ಲಿ ಪಚಪಚ ತುಳಿದು ಒಗೆಯುತ್ತಿದ್ದೆವು. ನೀರಿಗೆ ಬಿದ್ದಬಳಿಕ ಮಣಭಾರ ಪಡೆಯುತ್ತಿದ್ದ ಅದನ್ನು ಎತ್ತಿ ಸೆಣೆಯುವುದಾಗಲಿ ಹಿಂಡುವುದಾಗಲಿ ಅಸಾಧ್ಯ. ಈ ಕೌದಿಯ ಸಾಥಿಗಳೆಂದರೆ ಹಳೇಬಟ್ಟೆ ಅಥವಾ ರಾಗಿಯ ಸುಂಕು ತುಂಬಿದ ದಿಂಬುಗಳು. ಇವು ಮಲಗಿದವರ ತಲೆಯೆಣ್ಣೆ ಕುಡಿಕುಡಿದು ಕಪ್ಪಗಾಗಿದ್ದರೂ, ಹಂಸತೂಲಿಕಾತಲ್ಪದ ಹಾಗೆ ಬೆಚ್ಚಗೆ ಮೆತ್ತಗೆ ಇರುತ್ತಿದ್ದವು. ಕಂಬಳಿ, ರಗ್ಗು, ಹತ್ತಿದಿಂಬುಗಳ ಪ್ರವೇಶ ಬಳಿಕ ಈ ಕೌದಿ-ದಿಂಬು ಗಡಿಪಾರಾದವು. ಈಗ ಅಪ್ಪನ ಗುರುತಾಗಿ ಸದ್ಯ ನಮ್ಮ ಮನೆಯಲ್ಲಿರುವ ವಸ್ತುವೆಂದರೆ ಟೇಬಲ್. ಅದನ್ನು ಅವನು ಕೊಡಿಸಿದ್ದು ನಾಟಕೀಯವಾದ ಒಂದು ಸನ್ನಿವೇಶದಲ್ಲಿ. ನಾನು ಅಧ್ಯಾಪಕನಾದ ಹೊಸತರಲ್ಲಿ, ಶಿವಮೊಗ್ಗೆಯಲ್ಲಿ ರೂಂ ಮಾಡಿಕೊಂಡಿದ್ದೆ. ಅದರೊಳಗೆ ನನ್ನ ಸಹೋದ್ಯೋಗಿಯೊಬ್ಬನೂ ವಾಸವಿದ್ದನು.

ಒಮ್ಮೆ ನಮ್ಮಬ್ಬರ ನಡುವೆ, ರೂಮಿನ ಕಸವನ್ನು ಯಾರು ಉಡುಗಬೇಕು ಎಂಬ ವಿಷಯಕ್ಕೆ ಭೀಕರ ಜಗಳವಾಯಿತು. ಜಗಳ ನಿಂತ ಬಳಿಕ ಆತ ಕಟುವಾಗಿಇವತ್ತಿನಿಂದ ನನ್ನ ಟೇಬಲ್ ಬಳಸಬೇಡ’ ಎಂದು ನೋಟಿಸು ಕೊಟ್ಟನು. ಸರಿಯೆಂದು ನಾನು ನನ್ನ ಕುರ್ಚಿಯ ಮೇಲೆ ಕೂತು, ತೊಡೆಗಳ ಮೇಲೆ ಕಾರ್ಡ್ ಬೋರ್ಡನ್ನು ಇಟ್ಟುಕೊಂಡು ಬರೆಯುವುದು, ಉತ್ತರ ಪತ್ರಿಕೆಗಳ ಮೌಲ್ಯಮಾಪಿಸುವುದು ಮಾಡುತ್ತಿದ್ದೆ. ಒಮ್ಮೆ ನನ್ನ ಯೋಗಕ್ಷೇಮ ವಿಚಾರಿಸಲು ಅಪ್ಪ ಅಚಾನಕ್ ರೂಮಿಗೆ ಬಂದನು. ಹೊನ್ನಪದಕ ವಿಜೇತನಾಗಿಯೂ ವಂಶದಲ್ಲೇ ಮೊದಲ ನೌಕರಸ್ಥನಾಗಿಯೂ ಇರುವ ಸುಪುತ್ರನು ಮೇಜಿಲ್ಲದೆ ಇರುವುದು ಅವನಿಗೆ ಮರ್ಯಾದೆಗೇಡು ಎನಿಸಿತು. ನಿಂತ ಹೆಜ್ಜೆಯಲ್ಲಿ ಊರಿಗೆ ಹೋದವನೇ, ತನ್ನ ಮಿತ್ರನಾದ ಬಸಪ್ಪನ ಹೋಟೆಲಿನಿಂದ ಒಂದು ಟೇಬಲನ್ನು ಎತ್ತಿಕೊಂಡು ಬಂದನು. ಅದರ ಹಲಗೆಗಳು ನಮ್ಮೂರ ಜನ ಇಡ್ಲಿದೋಸೆಗಳನ್ನು ಚೆಲ್ಲಾಡಿಕೊಂಡು ತಿನ್ನುವಾಗ ಸುರಿದ ಸಾಂಬಾರು ಚಟ್ನಿಗಳನ್ನು ಉಚಿತವಾಗಿ ಸವಿದು, ಕಾಫಿ ಟೀಗಳನ್ನು ಯಥೇಚ್ಛವಾಗಿ ಕುಡಿದು, ಲಡ್ಡಾಗಿದ್ದವು. ನಾನು ಅವುಗಳ ಮೇಲೆ ಒಂದು ಶೀಟನ್ನು ಹಾಕಿಸಿ, ಬರೆಯಲು ಅರ್ಹಗೊಳಿಸಿಕೊಂಡೆ. ಮುಂದೆ ಬಾನು ತನ್ನ ಸ್ವರ್ಗವಾಸಿ ತಂದೆಯವರು ಕೂರುತ್ತಿದ್ದ, ಅವರು ಸರ್ಕಾರಿ ನೌಕರರಾಗಿದ್ದರಿಂದ ವರ್ಗಾವಣೆಯಾದಾಗಲೆಲ್ಲ ಊರಿಂದ ಊರಿಗೆ ಸಾಗಿ ಶಿಥಿಲವಾಗಿದ್ದ, ಕುರ್ಚಿಯನ್ನು ನೆನಪಿಗೆಂದು ತಂದಳು. ಅದು ಆಸೀನನಾಗುವ ವ್ಯಕ್ತಿಯನ್ನು ಯಾವುದೇ ಕ್ಷಣದಲ್ಲೂ ನೆಲಕ್ಕೆ ಕೆಡವಲು ಸಿದ್ಧವಾಗಿರುವ ಕಿರುಗುಟ್ಟುವ ಕೀಲುಕುದುರೆ. ಅದರ ಕೈಕಾಲಿಗೆ ಕಬ್ಬಿಣದ ಪಟ್ಟಿ ಕೊಟ್ಟು ಮಜಬೂತಗೊಳಿಸಿದೆವು. ನನ್ನ ಬಹುತೇಕ ಸಾಹಿತ್ಯವು, ಈಯೆರಡು ಹಿರೀಕರ ಮೇಜು-ಕುರ್ಚಿಗಳ ಮೇಲೆಯೇ ಸೃಷ್ಟಿಯಾಯಿತು. ತಮ್ಮ ಜೀವನದಲ್ಲಿ ಎಂದೂ ಭೇಟಿಯಾಗದ ನಮ್ಮಿಬ್ಬರ ಅಪ್ಪಂದಿರು, ಈ ಪ್ರಕಾರವಾಗಿ ಕುರ್ಚಿ-ಮೇಜುಗಳ ರೂಪದಲ್ಲಿ ಒಗ್ಗೂಡಿದರು.

ಆದರೆ ಹಿರಿಯರ ನೆನಪಿನ ಗುರುತುಗಳನ್ನು ಭೌತಿಕವಾದ ವಸ್ತುಗಳ ಮೂಲಕ ಎಷ್ಟು ಕಾಲ ಇಟ್ಟುಕೊಳ್ಳಬಹುದು? ಕಾಲದ ಕರೆ ಬಂದಾಗ ವಿಸರ್ಜನೆ ಅನಿವಾರ್ಯ. ನಾವು ಪಟ್ಟಣಕ್ಕೆ ವಲಸೆ ಬಂದ ಬಳಿಕ, ಹಳ್ಳಿಯಲ್ಲಿದ್ದ ಜಮೀನನ್ನು ಉಳಿಸಿಕೊಳ್ಳಬೇಕು ಎಂದು ಅಪ್ಪ ಕನವರಿಸುತ್ತಿದ್ದನು. ಅದು ಅವನು ದರಖಾಸ್ತಿನಲ್ಲಿ ಮಾಡಿದ ಸ್ವಯಾರ್ಜಿತ ಆಸ್ತಿ. ಆದರೆ ಪಟ್ಟಣದ ಬದುಕು ಮಣ್ಣಿನ ನಂಟನ್ನು ಸಡಿಲಗೊಳಿಸಿತು. ಬಾಡಿಗೆ ಮನೆಗಳ ವಾಸ ಸಾಕಾಗಿ, ಸ್ವಂತ ಮನೆ ಮಾಡುವ ಅವಕಾಶ ಬಂದಾಗ, ಜಮೀನನ್ನು ಮಾರಬೇಕೆಂದು ನಾವೆಲ್ಲ ಒತ್ತಡ ಹಾಕಿದೆವು. ಅಪ್ಪನಿಗೆ ವಜ್ರದ ಹರಳನ್ನು ಕೊಟ್ಟು ಗಾಜಿನ ಬಟ್ಟಲನ್ನು ಕೊಳ್ಳುವ ಸಂಕಟ. ಆದರೆ ಮನೆ ಜರೂರಿಯಾಗಿತ್ತು. ಜಮೀನು ಕೈಬಿಟ್ಟಿತು. ಸ್ವಂತಮನೆಯ ಸುಖವನ್ನು ಎಲ್ಲರೂ ಅನುಭವಿಸಿದೆವು. ಮುಂದೆ ನಾವೆಲ್ಲ ಪಟ್ಟಣ ಬಿಟ್ಟು ನೌಕರಿಗಾಗಿ ಬೇರೆಬೇರೆ ನಗರಗಳಿಗೆ ಚದುರಿದೆವು.

ಅಪ್ಪ ಕಟ್ಟಿಸಿದ ಮನೆಗೆ ವಾರಸುದಾರಿಕೆ ಪಡೆದ ತಮ್ಮನ ಮಕ್ಕಳು ಅದನ್ನು ಬಿಕರಿ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಅಪ್ಪ ಕಾಗದಪತ್ರ ಕೋಟು ಜಮೀನುಗಳನ್ನು ವಿಸರ್ಜಿಸುವಾಗ ಅನುಭವಿಸಿದ ಸಂಕಟವೇನೆಂದು ತುಸುವೇ ಅರಿವಾಗುತ್ತಿದೆ. ಹಿಂದಿನಿಂದ ಬಂದ ವಸ್ತು, ನಂತರದ ತಲೆಮಾರಿಗೆ ಭಾವನಾತ್ಮಕ ಕಾರಣದಿಂದ ಅಮೂಲ್ಯವೆನಿಸಬಹುದು. ಈ ಭಾವನಾತ್ಮಕ ನಂಟನ್ನು ಮೂರನೇ ತಲೆಮಾರಿನಿಂದ ಹೇಗೆ ನಿರೀಕ್ಷಿಸುವುದು? ಅದಕ್ಕೆ ಹಿರೀಕರಿಂದ ಬಂದ ವಸ್ತುಗಳು ವಿಲೇವಾರಿ ಮಾಡಬೇಕಾದ ಸೊತ್ತುಗಳಾಗುತ್ತವೆ. ಒಮ್ಮೊಮ್ಮೆ ನನ್ನ ಪುಸ್ತಕದ ಕಪಾಟುಗಳನ್ನು ನೋಡುವಾಗ, ಮರುಕ ಉಕ್ಕುವುದುಂಟು. ಬಾಳಲ್ಲಿ ಅಪ್ರಸ್ತುತಗೊಳ್ಳುವ ಅಥವಾ ಹೊಸರೂಪದಲ್ಲಿ ಮರುಹುಟ್ಟು ಪಡೆವ ಅವಸ್ಥೆಯನ್ನು ತಪ್ಪಿಸಲಾಗದು. ತಪ್ಪಿಸಲೂಬಾರದು.

‍ಲೇಖಕರು Admin

2 January, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading