’ಹಳೆಯ ಗ್ರಾಮಾಫೋನು ಮತ್ತು ಮೂರು ಹೆಣ!’ – ಜೋಗಿ ಬರೀತಾರೆ

ಜೋಗಿ

ಆದಷ್ಟೂ ಸರಳವಾಗಿ ಇದನ್ನು ಹೇಳಬೇಕು ಅನ್ನುವ ಆಸೆ. ನನ್ನನ್ನಂತೂ ಮತ್ತೆ ಮತ್ತೆ ಕಾಡುವ ಕತೆ ಅದು. ಯಾಕಾದರೂ ಕಾಡುತ್ತದೋ ಗೊತ್ತಿಲ್ಲ. ಬದುಕಿನ ದುರಂತ ಮತ್ತು ಸಂತೋಷ ಎರಡೂ ಅದೇ ಆಗಿರಬಹುದು. ನಮಗೆ ಅತ್ಯಂತ ಸಂತಸವನ್ನು ಕೊಡುವ ಸಂಗತಿಯೇ ನಮ್ಮನ್ನು ಅತೀವ ದುಃಖಕ್ಕೂ ತಳ್ಳಬಹುದು. ನಾವು ಅತಿಯಾಗಿ ಪ್ರೀತಿಸುವುದನ್ನೇ ಕೊನೆಗೊಂದು ದಿನ ನಾವು ನಖಶಿಖಾಂತ ದ್ವೇಷಿಸಬೇಕಾಗಿ ಬರಬಹುದು.
ಈ ಕತೆಯನ್ನೊಮ್ಮೆ ಕೇಳಿ:
ಮೂವತ್ತೆರಡು ವರುಷದ ಜೀನ್ಸು ಪ್ಯಾಂಟು, ಗೀಟು ಗೀಟಿನ ಶರಟು, ಹವಾಯಿ ಚಪ್ಪಲಿ, ಕುರುಚಲು ಗಡ್ಡ, ವಾರೆನಗೆಯ ಕ್ಷೇಮೇಂದ್ರನನ್ನು ಒಂದು ರಾತ್ರೋರಾತ್ರಿ ಅವನ ಮನೆಗೆ ನುಗ್ಗುವ ಪೊಲೀಸರು ಬಂಧಿಸುತ್ತಾರೆ. ಮಾರನೇ ದಿನ ನ್ಯಾಯಾಲಯಕ್ಕೆ ಹಾಜರು ಪಡಿಸುತ್ತಾರೆ. ಸರ್ಕಾರಿ ವಕೀಲರು ಆತ ಕೊಲೆ ಮಾಡಿರುವುದಾಗಿಯೂ ಅದನ್ನು ಒಪ್ಪಿಕೊಂಡಿರುವುದಾಗಿಯೂ ಹೇಳಿ ಅವನಿಗೆ ಅತ್ಯಂತ ಕ್ರೂರವಾದ ಶಿಕ್ಷೆ ವಿಧಿಸುವಂತೆ ಮನವಿ ಮಾಡಿಕೊಳ್ಳುತ್ತಾರೆ.
ಕ್ಷೇಮೇಂದ್ರ ತನ್ನ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ ಗಂಡ ಹೆಂಡತಿ ಮತ್ತು ಅವರ ಇಪ್ಪತ್ತಾರು ವರುಷದ ಮಗನನ್ನು ಕೊಲೆ ಮಾಡಿದ್ದಾನೆ ಅನ್ನುವುದು ಆರೋಪ. ನೀನು ಕೊಲೆ ಮಾಡಿದ್ದು ಹೌದೇ ಅಂತ ನ್ಯಾಯಾಧೀಶರು ಗಂಭೀರವಾಗಿ ಕೇಳಿದಾಗ ಕ್ಷೇಮೆಂದ್ರ ಇಲ್ಲ ಎನ್ನಲಿಲ್ಲ. ಹೌದು ಎನ್ನಲಿಲ್ಲ. ಅವರು ಸತ್ತಿದ್ದು ನಿಜ. ನಾನು ಕೊಂದಿದ್ದು ನಿಜವೋ ಅಲ್ಲವೋ ಗೊತ್ತಿಲ್ಲ. ಪೊಲೀಸರು ನಾನೇ ಕೊಂದಿದ್ದೇನೆ ಅನ್ನುತ್ತಿದ್ದಾರೆ. ನಿರಾಕರಿಸುವುದಕ್ಕೆ ನನ್ನಲ್ಲಿ ಸಾಕ್ಷಿಗಳಿಲ್ಲ ಅಂತ ಉಡಾಫೆಯಿಂದಲೇ ಉತ್ತರಿಸಿದ. ಅವನ ಗಂಟಿಕ್ಕಿದ ಮುಖ, ನೋಟದಲ್ಲಿರುವ ತೀಕ್ಷ್ಣತೆ ಮತ್ತು ನ್ಯಾಯಾಧೀಶರನ್ನೇ ಲೆಕ್ಕಕ್ಕೆ ತೆಗೆದುಕೊಳ್ಳದ ಧಾಟಿಯನ್ನು ನೋಡಿದ ಎಲ್ಲರಿಗೂ ಅವನ ಮೇಲೆ ಸಿಟ್ಟು ಬಂತು.
ನ್ಯಾಯಾಧೀಶರಿಗೂ ಸಿಟ್ಟು ಬಾರದೇ ಇರಲಿಲ್ಲ. ಕೋರ್ಟಿನಲ್ಲಿ ಹಾಗೆಲ್ಲ ಅಸ್ಪಷ್ಟವಾಗಿ ಸಾಂಕೇತಿಕವಾಗಿ ಮಾತನಾಡಬಾರದು. ಕೊಲೆ ಮಾಡಿದ್ದೀಯೋ ಇಲ್ಲವೋ ಸ್ಪಷ್ಟವಾಗಿ ಹೇಳು ಎಂದು ಅವರು ಅಬ್ಬರಿಸಿದರು. ಆತ ಕೊಲೆ ಮಾಡಿದ್ದನ್ನು ಒಪ್ಪಿಕೊಳ್ಳದೇ ಹೋದರೆ ಪೊಲೀಸರು ನಿಜಕ್ಕೂ ಪರದಾಡಬೇಕಿತ್ತು. ಯಾಕೆಂದರೆ ಕೊಲೆಗೆ ಕಾರಣಗಳೇ ಇರಲಿಲ್ಲ. ಇಂಟೆನ್ಶನ್ ಏನು ಅಂತ ಯಾರಾದರೂ ಕೇಳಿದರೆ ಪೊಲೀಸರು ಕಂಗಾಲಾಗಿ ಹೋಗುತ್ತಿದ್ದರು. ಯಾಕೆಂದರೆ ಕೊಲೆಯಾದ ಮನೆಯಲ್ಲಿ ಒಂದು ಹಳೆಯ ಗ್ರಾಮಾಫೋನು ಬಿಟ್ಟರೆ ಬೇರೇನೂ ಕಳುವಾಗಿರಲಿಲ್ಲ. ಆಗ್ರಾಮಾಫೋನಿಗೋಸ್ಕರ ಯಾರಾದರೂ ಮೂರು ಕೊಲೆ ಮಾಡುತ್ತಾರೆ ಅಂತ ಹೇಳಿದರೆ ನ್ಯಾಯಾಧೀಶರೂ ನಂಬುತ್ತಿರಲಿಲ್ಲ.
ಕ್ಷೇಮೇಂದ್ರ ಏನು ಹೇಳುತ್ತಾನೆ ಅಂತ ಎಲ್ಲರೂ ಆತಂಕದಿಂದ ಕಾದರು. ಹೋಗ್ಲಿ ಬಿಡಿ, ಕೊಲೆ ಮಾಡಿದ್ದೀನಿ ಅಂತಿಟ್ಟುಕೊಳ್ಳಿ ಅಂತ ಕ್ಷೇಮೇಂದ್ರ ನಿರ್ಲಿಪ್ತನಾಗಿ ಉತ್ತರಿಸಿದ. ನ್ಯಾಯಾಧೀಶರು ಕೊಲೆಯ ಕಾರಣ ಮತ್ತು ವಿವರಗಳನ್ನು ನೀಡುವಂತೆ ಸರ್ಕಾರಿ ವಕೀಲರತ್ತ ನೋಡಿದರು. ಸರ್ಕಾರಿ ವಕೀಲರು ಪೊಲೀಸರು ಕೊಟ್ಟ ವರದಿಯನ್ನು ಓದಿದರು. ಅದು ಹೀಗಿತ್ತು;
ಕ್ಷೇಮೇಂದ್ರ ಬೆಟ್ಟೆಹಳ್ಳಿಯಿಂದ ಬೆಂಗಳೂರಿಗೆ ಬಂದು ಏಳು ವರುಷ ಆಗಿದೆ. ಅವನು ನಿರುದ್ಯೋಗಿ ಮತ್ತು ಬಡವ. ತಿಂಗಳಿಗೆ ಮುನ್ನೂರು ರುಪಾಯಿಯ ಸಿಂಗಲ್ ರೂಮಿನಲ್ಲಿ ಬಾಡಿಗೆಗೆ ಇದ್ದಾನೆ. ಮನೆಯ ಮಾಲಿಕ ಅಪಘಾತದಲ್ಲಿ ತೀರಿಕೊಂಡಿದ್ದಾನೆ. ಅವನ ಹೆಂಡತಿಗೆ ಗಂಡನ ಸಾವಿನಿಂದ ಹುಚ್ಚು ಹಿಡಿದಿದೆ. ಅವಳ ಆರೈಕೆಯಲ್ಲಿ ಇನ್ನೂ ಮದುವೆಯಾಗದ ಮಗಳು ದಿನಕಳೆಯುತ್ತಿದ್ದಾಳೆ. ಹೀಗಾಗಿ ಕ್ಷೇಮೇಂದ್ರನ ರೂಮಿನ ಬಾಡಿಗೆ ಏಳುವರುಷದಲ್ಲಿ ಒಮ್ಮೆಯೂ ಹೆಚ್ಚಿಸಿಲ್ಲ.
ಆ ಮನೆಗೆ ಒತ್ತಿಕೊಂಡಂತಿರುವ ಒಂದು ಮನೆಯಲ್ಲಿ ಒಂದು ಕುಟುಂಬ ವಾಸ ಮಾಡುತ್ತಿತ್ತು. ನಿವೃತ್ತ ಗಂಡ-ನಿರುದ್ಯೋಗಿ ಹೆಂಡತಿ-ಉಢಾಳ ಮಗ ಇದ್ದ ಕುಟುಂಬ ಅದು. ಅವರ ಬಳಿ ಒಂದು ಹಳೆಯಗ್ರಾಮಾಫೋನಿತ್ತು. ಹಳೇ ಕಾಲದ ಮ್ಯೂಸಿಕ್ ತಟ್ಟೆ ಹಾಕಿದರೆ ಅದರಿಂದ ಹಳೆಯ ಒಂದೇ ಒಂದು ಹಾಡು ಹೊರಹೊಮ್ಮುತ್ತಿತ್ತು. ಅದನ್ನು ಹಾಕಿ ದಿನವಿಡೀ ಅಪ್ಪ ಹಾಡು ಕೇಳುತ್ತಾ ಕೂರುತ್ತಿದ್ದ. ಅವನ ಹೆಂಡತಿ ಅದನ್ನು ಕೇಳುತ್ತಾ ತಲೆದೂಗುತ್ತಿದ್ದಳು. ಮಗನೂ ಆಗಾಗ ಆ ಹಾಡು ಕೇಳಿ ಸಂತೋಷವಾಗಿರುತ್ತಿದ್ದ.

ಆ ಹಾಡು ಪಕ್ಕದ ಮನೆಯಲ್ಲಿರುವ ಕ್ಷೇಮೇಂದ್ರನಿಗೂ ಕೇಳಿಸುತ್ತಿತ್ತು. ಆರಂಭದಲ್ಲಿ ಕಿರಿಕಿರಿ ಅನ್ನಿಸುತ್ತಿದ್ದ ಆ ಹಾಡು ಕೆಲವು ತಿಂಗಳ ಕ್ಷೇಮೇಂದ್ರನಿಗೆ ಅಭ್ಯಾಸವಾಗಿಹೋಯ್ತು. ಬೆಳಗ್ಗೆ ಏಳುತ್ತಿದ್ದಂತೆ, ರಾತ್ರಿ ಮಲಗುವ ಮುನ್ನ, ನಡುರಾತ್ರಿ ಎಚ್ಚರವಾದಾಗೆಲ್ಲ ಆ ಹಾಡು ಕಿವಿಗೆ ಬಂದು ಈ ಲೋಕವೇ ಮರೆತು ಹೋಗುತ್ತಿತ್ತು. ಅದನ್ನು ಕೇಳುತ್ತಾ ಎಷ್ಟೋ ದಿನ ಆತ ಊಟ ತಿಂಡಿ ಕೂಡ ಮಾಡದೇ ಸಂತೋಷವಾಗಿರುತ್ತಿದ್ದ. ಹಾಡು ವನನ್ನು ಪೊರೆಯುತ್ತಿತ್ತು.
ಈ ಮಧ್ಯೆ ಚಳಿಗಾಲ ಶುರುವಾಯಿತು. ಪಕ್ಕದ ಮನೆಯ ಮುದುಕನಿಗೆ ಉಬ್ಬಸ ಶುರುವಾಯಿತು. ವೈದ್ಯರು ಬಂದು ಅವನ ಎದೆಗೆ ಸ್ಟೆತೋಸ್ಕೋಪ್ ಇಟ್ಟು ನೋಡಿದರು. ಗಾಳಿಗೆ ಒಡ್ಡಿಕೊಳ್ಳಬಾರದು. ಬೆಚ್ಚಗಿರಬೇಕು ಅಂದರು. ವೈದ್ಯರ ಮಾತಿಗೆ ಬೆಲೆ ಕೊಟ್ಟು ಪಕ್ಕದ ಮನೆಯ ಹೆಂಗಸು ಆ ಮನೆಯ ಕಿಟಕಿಗಳನ್ನು ಮುಚ್ಚಿಬಿಟ್ಟಳು. ಗಾಳಿ ಒಂಚೂರೂ ಆಡದಂತೆ ಆಗಿಹೋಗಿ, ಒಳಗಿನಿಂದ ಹಾಡು ಕೇಳುವುದು ನಿಂತುಹೋಯಿತು. ಕ್ಪೇಮೇಂದ್ರನಿಗೆ ಆವತ್ತಿನಿಂದ ಹಾಡು ಕೇಳುವುದು ನಿಂತೇ ಹೋಯಿತು.
ಮೂರು ವರುಷ ಅವನು ಹಾಡಿಗಾಗಿ ಹಂಬಲಿಸಿದ. ಹಾಡಿಲ್ಲದೆ ಒದ್ದಾಡಿದ. ಅದನ್ನು ತನ್ನಲ್ಲೇ ಗುನುಗಲು ಯತ್ನಿಸಿದ. ಆದರೆ ಆ ಹಾಡಿನ ಸುಖ ಅವನಿಗೆ ಸಿಗಲೇ ಇಲ್ಲ. ಕ್ರಮೇಣ ಹಾಡು ಮರೆತೇ ಹೋಗುತ್ತಿದೆ, ರಾಗ ಶ್ರುತಿ ಎಲ್ಲ ಮರೆಯಾಗುತ್ತಿದೆ ಅನ್ನಿಸಿ ಗಾಬರಿಯಾಯಿತು. ನಾಲ್ಕನೆಯ ವರುಷದ ಹೊತ್ತಿಗೆ ಅವನಿಗೆ ಇಡೀ ಹಾಡು ಮರೆತುಹೋಯಿತು. ಅದನ್ನು ಕೇಳದೇ ಹೋದರೆ ಸತ್ತೇ ಹೋಗುತ್ತೇನೆ ಅನ್ನಿಸಿ ಒಂದು ಮುಸ್ಸಂಜೆ ಪಕ್ಕದ ಮನೆಗೆ ಹೋದ. ಕೈ ಮುಗಿದು ಒಂದೇ ಒಂದು ಸಲಗ್ರಾಮಾಫೋನಿನ ಹಾಡು ಕೇಳಿಸುವಂತೆ ವಿನಂತಿಸಿಕೊಂಡ.
ಅದೇ ಹೊತ್ತಿಗೆ ಮುದುಕ ಮಾರಣಾಂತಿಕವಾಗಿ ಕೆಮ್ಮುತ್ತಿದ್ದ. ಅವನ ಎದೆ ಉಜ್ಜುತ್ತಾ ಹೆಂಗಸು ಸಮಾಧಾನಿಸಲು ನೋಡುತ್ತಿದ್ದಳು. ಉಡಾಫೆಯ ಮಗ ತನ್ನ ಪಾಡಿಗೆ ತಾನು ಅರೆಗತ್ತಲ್ಲಿ ಅಂಗೈ ನೋಡುತ್ತಾ ಕೂತಿದ್ದ. ಕ್ಷಮೇಂದ್ರನ ಬೇಡಿಕೆಗೆ ಅವರು ಆಗೋಲ್ಲ ಎಂದರು. ಕ್ಷೇಮೇಂದ್ರ ಸಿಟ್ಟಿಗೆದ್ದು ಆ ಮನೆಯಲ್ಲಿದ್ದ ಮೂವರನ್ನೂ ಕೊಲೆ ಮಾಡಿ ಆಗ್ರಾಮಾಫೋನನ್ನು ತನ್ನ ಮನೆಗೆ ತಂದಿಟ್ಟುಕೊಂಡ.
ಹೀಗೊಂದು ಪ್ರಸಂಗವನ್ನು ವಿವರಿಸಿದ ಪೊಲೀಸರು ‘ ಇದೇ ಆ ಗ್ರಾಮಾಫೋನು’ ಎಂದು ಒಂದುಗ್ರಾಮಾಫೋನನ್ನು ನ್ಯಾಯಾಧೀಶರ ಮುಂದಿಟ್ಟರು. ಕ್ಷಮೇಂದ್ರ ಕೇಳಲು ಹೊರಟದ್ದು ಇದೇ ಹಾಡನ್ನು ಎದು ಆ ಹಾಡನ್ನೂ ಹಾಕಿದರು. ಹಾಡು ಬರುತ್ತಿದ್ದಂತೆ ಕ್ಷೇಮೇಂದ್ರ ಮುಗುಳುನಗುತ್ತಾ ಹಾಡಿಗೆ ಕಿವಿಯಾದ. ಅದನ್ನು ತಾನೂ ಗುನುಗುನಿಸುತ್ತಾ ತಲೆದೂಗಿದ. ಹಾಡು ನಿಂತೊಡನೆ ಅವನ ನಗುವೂ ನಿಂತುಹೋಯಿತು.
ಕೊಲೆ ಆರೋಪದ ಮೇಲೆ ಕ್ಷೇಮೇಂದ್ರನಿಗೆ ಜೈಲು ಶಿಕ್ಪೆಯಾಯಿತು. ಕ್ಷಮೇಂದ್ರ ಜೈಲಿಗೆ ಹೋಗುವಾಗ ಆ ಗ್ರಾಮಾಫೋನ್ ಒಯ್ಯಲು ಅನುಮತಿ ಕೊಡುವಂತೆ ಕೇಳಿಕೊಂಡ. ನ್ಯಾಯಾಧೀಶರಿಗೆ ಅದನ್ನು ಕೊಡುವ ಅನುಮತಿ ಇತ್ತು. ಯಾಕೆಂದರೆ ಅದಕ್ಕೀಗ ವಾರಸುದಾರರೇ ಇರಲಿಲ್ಲ. ಅಷ್ಟಕ್ಕೂ ಅದನ್ನು ಹರಾಜು ಹಾಕಿದರೆ ಮುನ್ನೂರು ರುಪಾಯಿಗೂ ಕೊಳ್ಳುವವರಿರಲಿಲ್ಲ. ನ್ಯಾಯಾಧೀಶರೇ ಅದನ್ನು ಖರೀದಿಸಿ ಆಥನಿಗೆ ಕೊಡಬಹುದಿತ್ತು.
ಆದರೆ ನ್ಯಾಯಾಧೀಶರು ಅದನ್ನು ಅವನಿಗೆ ಕೊಡಲಿಲ್ಲ. ತಾವೇ ಖರೀದಿಸಿ ಮನೆಗೆ ತಂದಿಟ್ಟುಕೊಂಡರು. ಕ್ಷೇಮೇಂದ್ರನ ಸಂತೋಷ ಮತ್ತು ದುಃಖದ ಮುಖ ಅವರ ಕಣ್ಮುಂದೆ ಆಗಾಗ ಹಾದು ಹೋಗುತ್ತಿತ್ತು. ತಾವು ಅವನಿಗೆ ಕೊಟ್ಟ ಶಿಕ್ಷೆ ಸರಿಯೋ ತಪ್ಪೋ ಅಂತ ಅವರು ಯೋಚಿಸತೊಡಗಿದರು. ಅವರ ಮನಸ್ಸಿನಲ್ಲಿ ತಾವು ಕೇಳಿದ ಆ ಹಾಡೇ ಸುಳಿಯುತ್ತಿತ್ತು. ತಾವು ಕೊಂಡ ಗ್ರಾಮೋ-ನು ಹಾಕಿಕೊಂಡು ಅವರೂ ಒಂದೆರಡು ಸಾರಿ ಹಾಡು ಕೇಳಿದರು. ಮೂರನೆ ಸಲ ಹಾಡು ಕೇಳುತ್ತಿದ್ದಂತೆ ಯಾಕೋ ಕ್ಷಮೇಂದ್ರನನ್ನು ನೋಡಬೇಕು ಅನ್ನಿಸಿತು. ಎದ್ದು ತಮ್ಮ ಖಾಸಗಿ ಕಾರು ಹತ್ತಿಕೊಂಡು ಸೀದಾ ಜೈಲಿಗೆ ಹೋದರು. ಅಲ್ಲಿ ಶಿಕ್ಪೆ ಅನುಭವಿಸುತ್ತಿದ್ದ ಕ್ಷೇಮೇಂದ್ರನಿಗಾಗಿ ಹುಡುಕಾಡಿದರು.
ಕ್ಷೇಮೇಂದ್ರ ಆ ಜೈಲಿನ ಇರಲಿಲ್ಲ. ಆ ಹೆಸರಿನ ಯಾರೂ ಇತ್ತೀಚಿನ ದಿನಗಳಲ್ಲಿ ಆ ಜೈಲಿಗೇ ಬಂದಿರಲಿಲ್ಲ. ಹಾಗಿದ್ದರೆ ಕ್ಷೇಮೇಂದ್ರ ಎಲ್ಲಿಗೆ ಹೋದ ಎಂಬ ಚಿಂತೆ ನ್ಯಾಯಾಧೀಶರನ್ನು ಕಾಡತೊಡಗಿತು. ಆತನಿಗಾಗಿ ಹುಡುಕುತ್ತಾ ಅವರು ಊರೆಲ್ಲ ಅಲೆದಾಡತೊಡಗಿದರು. ಆದರೆ ಆ ಊರಿನ ಯಾರೂ ಕ್ಪೇಮೇಂದ್ರನೆಂಬ ವ್ಯಕ್ತಿಯನ್ನೇ ನೋಡಿರಲಿಲ್ಲ. ನ್ಯಾಯಾಲಯದ ಮುಂದೆ ಆ ಹೆಸರಿನ ಯಾವ ಪ್ರಕರಣವೂ ಬಂದಿರಲೇ ಇಲ್ಲ. ನ್ಯಾಯಾಧೀಶರು ಪೊಲೀಸರಿಗೆ ಕೊಲೆಯಾದವರ ವಿವರಗಳನ್ನು ನೀಡುವಂತೆ ಆದೇಶ ನೀಡಿದರೆ, ಪೊಲೀಸರು ಆ ನಿರ್ದಿಷ್ಟ ದಿನ ಆ ನಿರ್ದಿಷ್ಟ ಪ್ರದೇಶದಲ್ಲಿ ಯಾವ ಕೊಲೆಯೂ ನಡೆದಿಲ್ಲ ಅನ್ನುತ್ತಾರೆ. ನ್ಯಾಯಾಧೀಶರು ಗಾಬರಿ ಬಿದ್ದು, ಆ ಪ್ರದೇಶಕ್ಕೆ ಹೋಗಿ ನೋಡುತ್ತಾರೆ. ಅಲ್ಲಿ ಒಂದು ಪುಟ್ಟ ರೂಮಿನಲ್ಲಿ ಕ್ಷೇಮೇಂದ್ರ ಇದ್ದಾನೆ. ಪಕ್ಕದ ಮನೆಯಲ್ಲಿ ನಿವೃತ್ತ ಗಂಡ-ನಿರುದ್ಯೋಗಿ ಹೆಂಡತಿ-ಉಢಾಳ ಮಗ ವಾಸಿಸುತ್ತಿದ್ದಾರೆ. ನ್ಯಾಯಾಧೀಶರು ಒಳಗೆ ಹೋಗಿ ವಿಚಾರಿಸುತ್ತಾರೆ. ಆಗ ಆ ಮನೆಯ ಯಜಮಾನ ಹೇಳುತ್ತಾನೆ; ಛೇ, ಛೇ. ಇಲ್ಲಿ ಕೊಲೆಗಿಲೆ ಏನೂ ನಡೆದಿಲ್ಲ. ಮೂರು ತಿಂಗಳ ಹಿಂದೆ ನಮ್ಮ ಮನೆಯಲ್ಲಿದ್ದ ಹಳೆಯ ಗ್ರಾಮಾಫೋನು ಕಳುವಾಗಿದೆ. ಅದನ್ನು ತಾವು ಹುಡುಕಿಸಿಕೊಟ್ಟರೆ ಉಪಕಾರ ಆಗುತ್ತದೆ.
ನ್ಯಾಯಾಧೀಶರು ಆತಂಕದಿಂದ ಮನೆಗೆ ಹೋಗಿ ನೋಡಿದರೆ ಅವರ ಮಂಚದ ಪಕ್ಕದ ಆ ಗ್ರಾಮಾಫೋನಿದೆ. ಹಾಗಿದ್ದರೆ ಅದನ್ನು ಕದ್ದಿದ್ದು ತಾನಾ? ಆ ಕೊಲೆ, ವಿಚಾರಣೆ ಎಲ್ಲವೂ ಸುಳ್ಳಾ? ಈ ಗ್ರಾಮಾಫೋನಿಗೋಸ್ಕರ ತಾನೇ ಕಟ್ಟಿದ ನಾಟಕವಾ?
ನ್ಯಾಯಾಧೀಶರು ಉದ್ವೇಗ ತಾಳಲಾರದೆ ಡ್ರಾಯರ್ ಎಳೆದು ರಿವಾಲ್ವರ ಕೈಗೆತ್ತಿಕೊಳ್ಳುತ್ತಾರೆ. ಬಲಕಿವಿಯ ಮೇಲೆ ರಿವಾಲ್ವರ್ ತುದಿಯನ್ನು ಒತ್ತಿ ಹಿಡಿದು ಟ್ರಿಗರ್ ಅದುಮುತ್ತಾರೆ.
ಕಥೆ ಹೀಗೆ ಮುಗಿಯುತ್ತದೆ. ಒಂದು ದಂತಕತೆಯಂತೆ, ಆಖ್ಯಾನದಂತೆ ಸಾಗುವ ಈ ಕತೆಯಲ್ಲಿ ತರ್ಕವಿಲ್ಲ, ರೂಪಕಗಳಿವೆ. ರೂಪಕಗಳಂತೆ ಕಾಣುವ ಸಂಕೇತಗಳಿವೆ. ಈ ರೂಪಕಗಳಿಗೆ ರೂಪ ಕೊಡುತ್ತಾ ಹೋದರೆ ಮರೆತ ರಾಗಗಳು ಕಣ್ಣಮುಂದೆ ಸುಳಿಯುತ್ತವೆ.
ಇಷ್ಟಕ್ಕೂ ಕತೆ ಏನು ಹೇಳುತ್ತದೆ? ಅದನ್ನು ನಮ್ಮೊಳಗೇ ನಾವೇ ಕೇಳಿಕೊಳ್ಳುತ್ತಾ ಹೋಗಬೇಕು. ನಮಗೆ ಸಿಕ್ಕ ಉತ್ತರಗಳು ನಮ್ಮ ಉತ್ತರಗಳು ಮಾತ್ರ.

‍ಲೇಖಕರು avadhi

September 2, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. ಶ್ರೀರಂಗ ವೆಂ. ಕಟ್ಟಿ

    ವಿಚಾರಪ್ರಚೋದಕ ಕಥೆ. ಒಂದು ಕ್ಷಣ ಮೈಮರೆಯುವಂತೆ ಮಾಡಿತು. ಅಭಿನಂದನೆಗಳು ಸರ್..

    ಪ್ರತಿಕ್ರಿಯೆ
  2. ಹೃದಯಶಿವ

    ಒಂಥರಾ ಕಥೆಯಿದು! ಒಂದು ಟೀ ಕುಡಿದು ಮತ್ತೊಮ್ಮೆ ಓದುತ್ತೇನೆ!!

    ಪ್ರತಿಕ್ರಿಯೆ
  3. Aravind

    ನಮಗೆ ಸಿಕ್ಕ ಉತ್ತರಗಳು ನಮ್ಮ ಉತ್ತರಗಳು ಮಾತ್ರ. True to the core. Dont remember such a wonderful story in the recent past. Thanks Girish.

    ಪ್ರತಿಕ್ರಿಯೆ
  4. Chinmay

    edge of tommarrow chitradalloo ide tharahada sanna ele ide 🙂 🙂 ..nee maayeyolago maaaye ninnolago…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: