ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಹಳದಿ ಚಿಟ್ಟೆ’ ಬಗ್ಗೆ ಸುಬ್ರಾಯ ಚೊಕ್ಕಾಡಿ..

ಇದು ಹಿರಿಯ ಗಮನಾರ್ಹ ಕವಿ ಆರ್ ವಿಜಯರಾಘವನ್ ಅವರ ಹೊಸ ಕವಿತಾ ಸಂಕಲನ ‘ಹಳದಿ ಚಿಟ್ಟೆ’ಬಗ್ಗೆ ಸುಬ್ರಾಯ ಚೊಕ್ಕಾಡಿ ಅವರು ಬರೆದ ಟಿಪ್ಪಣಿ.

-ಸುಬ್ರಾಯ ಚೊಕ್ಕಾಡಿ

’ಹಳದಿ ಚಿಟ್ಟೆ’ ಹಾಗೂ ’ಪೀನೀ ಹೂ’ ಕೃತಿಗಳಲ್ಲಿನ ಕವಿತೆಗಳನ್ನು ಓದಿ ಈ ಪತ್ರ ಬರೆಯುತ್ತಿದ್ದೇನೆ. ನಿಮ್ಮ ಕವಿತೆಗಳ ಬಗ್ಗೆ ಬರೆಯುವುದು ತುಂಬಾ ಕಷ್ಟದ ಕೆಲಸ. ಮುಖ್ಯವಾಗಿ ನಿಮ್ಮ ದೊಡ್ಡ ಕವಿತೆಗಳು, ನನ್ನನ್ನು ಒಳನುಗ್ಗಲು ಬಿಡುತ್ತಿಲ್ಲವೋ ಅಥವಾ ನನಗೇ ಒಳನುಗ್ಗಲು ಸಾಧ್ಯವಾಗುತ್ತಿಲ್ಲವೋ ಗೊತ್ತಾಗ್ತಿಲ್ಲ. ಬಹುಶ: ನನ್ನ ಅಧ್ಯಯನದ ಕೊರತೆ ಅಥವಾ ಸಂವೇದನೆಯ ಮಿತಿ ಕಾರಣವಾಗಿರಬಹುದು. ಹಾಗೆ ನೋಡಿದರೆ ಎಲ್ಲ ಉತ್ತಮ ಕವಿತೆಗಳೂ ಹಾಗೆಯೇ ಅಲ್ಲವೇ? ಎಲ್ಲವೂ ಸುಲಭವಾಗಿ ತಿಳಿಯುತ್ತದೆ ಎನ್ನುವ ಹಾಗಿದ್ದರೆ, ಅವು ಕವಿತೆಗಳಾಗಿ ಉಳಿಯಲಾರವು ಅಲ್ಲವೇ? ನಿಮ್ಮ ಕವಿತೆಗಳು ನನ್ನಲ್ಲಿ ಹುಟ್ಟಿಸಿದ ಬೆರಗು ಹಾಗೂ ಆತಂಕಗಳಿಂದಾಗಿ ಅವನ್ನು ಮತ್ತೆ ಮತ್ತೆ ಓದಿದ್ದೇನೆ. ಹಾಗೆ ಓದಿದಾಗ ಅನೇಕ ಕವಿತೆಗಳು ನನ್ನ ಸಮೀಪ ಬಂದವು. ಹಾಗೆ ಸಮೀಪ ಬಂದು ನನಗೆ ಇಷ್ಟವಾದ ಕವಿತೆಗಳಲ್ಲಿ ಬೆನ್ನ ಹಿಂದಿನ ಕಣ್ಣು, ಆಸ್ಪತ್ರೆಯ ಮುಂದು, ವೃದ್ಧಾಶ್ರಮದಲ್ಲಿ, ಶರದೃತುವಿನಾಖೈರಿನ ನೀಲಿ ಆಕಾಶ, ಆತ್ಮಗೌರವ, ಬೆರೆತ ಕೊಂಬೆಗಳ ನಡುಹಗಲ ನೆರಳು , ಗಿಡ ಮತ್ತು ಗರಗಸ, ಹೂ ಉದುರಿದ ಗುಲ್ಮೊಹರ್, ಈವರೆಗೆ ಬರೆದ ಕವಿತೆ, ನದಿಯ ಮೌನದ ನಾಳೆ, ಛೇ ಆ ಕಣ್ಣುಗಳು ಅವೇಕೆ ಹಾಗಿವೆ, ಆ ಹನಿ ಆಮೇಲೆ, ಬೆಳಕಿಗೊಂದು ಕನಸು, ಹುಳುಕಾಟದ ಬಳ್ಳಿ, ಬಂಡೆಯ ಮೇಲೆ ಕೂತ ಹಕ್ಕಿ, ಕಲಿಕೆ, ಶಂಸುದೀನ್ ಜತೆ, ಎರಡು ಹಕ್ಕಿಗಳು , ರಾಮಚಂದ್ರಶರ್ಮರ ನೆನಪು, ಮನುಷ್ಯರೊಡನೆ ಮಾತನಾಡುವ ಮರ, ದಮಯಂತಿ ಹೇಳಿದ ಕತೆ, ಕೆಲವು ಚಿಕ್ಕ ಪದ್ಯಗಳು ಹಾಗೂ ಸಂದಿಗ್ಧ ಕವಿತೆಗಳು ನನಗೆ ಇಷ್ಟವಾದವು – ಇನ್ನೊಮ್ಮೆ ನಿಧಾನವಾಗಿ ಓದಿಕೊಂಡಾಗ ಇನ್ನಷ್ಟು ಕವಿತೆಗಳು ನನ್ನೊಳಗೆ ಇಳಿಯಬಹುದೇನೋ ಏನೋ!

’ಪೀನೀ ಹೂ ನಲ್ಲಿನ ಕವಿತೆಗಳು ತುಂಬಾ ಇಷ್ಟವಾದವು. ಈ ಅನುವಾದಗಳನ್ನ  ಈ ಹಿಂದೆಯೇ ಅಲ್ಲಲ್ಲಿ (ಅನಿಕೇತನ…) ಓದಿ ಮೆಚ್ಚಿಕೊಂಡವನು, ಕೆಲವನ್ನು (ಪೋಪಾ, ಲೋರ್ಕ) ಇಂಗ್ಲೀಷಿನಲ್ಲಿ ಸ್ವಲ್ಪ ಮಟ್ಟಿಗೆ ಓದಿಕೊಂಡಿದ್ದೆ. ಅಷ್ಟೊಂದು ಅಧ್ಯಯನ ಮಾಡಿದವನಲ್ಲ. ದಾವ್ ದ ಜಿಂಗ್, ತಾವೋ ಪದ್ಯಗಳನ್ನು ಅನಂತಮೂರ್ತಿ, ಮಂಜುನಾಥ್, ಎಂ ರಾಜಗೋಪಾಲ್ ಮೊದಲಾದವರು ಈಗಾಗಲೇ ಕನ್ನಡಕ್ಕೆ ತಂದಿದ್ದು, ಕುತೂಹಲಕ್ಕಾಗಿ ಯುಆರ್‌ಎ ಹಾಗೂ ರಾಜಗೋಪಾಲರ ಅನುವಾದದೊಂದಿಗೆ ನಿಮ್ಮದನ್ನು ಇಟ್ಟುಕೊಂಡು ನೋಡಿದೆ. ನಿಮ್ಮ ಅನುವಾದ ನನಗೆ ಹೆಚ್ಚು ಇಷ್ಟವಾಯಿತು. ನಜೀಂ ಹಿಕ್ಮತ್ ಕವಿತೆಗಳನ್ನು ನಾನು ಈ ಹಿಂದೆ ಓದಿದ್ದಿಲ್ಲ. ಈಗ ನಿಮ್ಮ ಮೂಲಕ ಅವೆಲ್ಲ ಒಟ್ಟಾಗಿ ಸಿಗುತ್ತಿರುವುದು ತುಂಬ ಸಂತೋಷದ ಸಂಗತಿ.

ನಿಮ್ಮ ಕವಿತೆಗಳನ್ನು ಓದಿದಾಗಿನ ಅನಿಸಿಕೆ ಇದು. ನಾನು ನಿಧಾನ ಓದುಗ. ಮತ್ತೆ ಮತ್ತೆ ಓದಿದಾಗಲೇ ಕವಿತೆ ನನ್ನ ಅರಿವಿನ ಪರಿಧಿಯೊಳಗೆ ನುಗ್ಗೋದು. ನಿಮ್ಮ ಕವಿತೆಗಳನ್ನು ಮತ್ತೊಮ್ಮೆ ಓದಬೇಕಾಗಿದೆ. ಹಾಗೆಯೇ ಓದುವ ಸುಖಕ್ಕಾಗಿ ಅನುವಾದ (ಇವನ್ನು ಹಾಗೆಂದು ಕರೆಯಬಹುದೇ? ಕನ್ನಡಕ್ಕೆ ಬಂದ ಕವಿತೆಗಳು ಎನ್ನುವುದೇ ಸರಿಯಲ್ಲವೇ?)ಗಳನ್ನು ಓದಬೇಕಾಗಿದೆ.

 

 

‍ಲೇಖಕರು avadhi

30 October, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading