ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಹರಿ ಚಿತ್ತ ಸತ್ಯ' ಸಣ್ಣ ಕಥೆ

– ಶ್ರೀನಾಥ್ ಭಲ್ಲೆ


“ಹರಿ ಚಿತ್ತ ಸತ್ಯ, ನಮ್ಮ ಹರಿ ಚಿತ್ತ ಸತ್ಯ,
ನರ ಚಿತ್ತಕೆ ಬಂದದ್ದು ಲವಲೇಶ ನೆಡೆಯದು”
 
ಈ ಹಾಡು ನನ್ನನ್ನು ಬಹಳ ಕಾಡಿದೆ ! ಕಾಡುತ್ತಲೇ ಇದೆ !!
 
ಸಮುದ್ರದ ದಂಡೆಯ ಮೇಲೆ ಊರಿಟ್ಟ ಹೆಜ್ಜೆಯನ್ನು ಅಳಿಸಲು ಸೋತು ಹಿಂದಕ್ಕೆ ಓಡಿದ ಅಲೆಗಳು ’ಮರಳಿ ಯತ್ನವ ಮಾಡು’ ಎಂದು ತನ್ನನ್ನೇ ಹುರುದುಂಬಿಸಿಕೊಂಡು ಮತ್ತೊಮ್ಮೆ ರಭಸದಿಂದ ಹಾಯ್ದು ಬರುವಂತೆ ಆಡುತ್ತಿವೆ ಈ ನೆನಪುಗಳು. ಹೃದಯದ ಮೇಲೆ ಬರೆಯಿಟ್ಟ ಆರದ ಗಾಯವನ್ನು ಅಳಿಸಲು ಸೋತ ಮನಸ್ಸು, ನೆನಪುಗಳನ್ನೇ ಉಕ್ಕಿ ಹರಿಸಿ ನೆನೆದೂ ನೆನೆದೂ ಮರೆಸಲು ಯತ್ನಿಸುವ ಕೆಟ್ಟ ಪ್ರಯತ್ನ ಮಾಡುತ್ತಿದೆ. ಯಾವುದೇ ಖಾದ್ಯವನ್ನು ಮೇಲಿಂದ ಮೇಲೆ ತಿನ್ನುತ್ತಲೇ ಇದ್ದಾಗ ಆ ಪದಾರ್ಥದ ಮೇಲೆ ವ್ಯಾಮೋಹವೇ ಹೊರಟುಹೋಗುವ ಪರಿ, ಮತ್ತೆ ಮತ್ತೆ ಮನಸ್ಸಿಗೆ ಬರುವ ನೆನಪುಗಳಿಗೇಕೆ ಅನ್ವಯಿಸುವುದಿಲ್ಲ?
ಇಂದಿಗೆ ತಾ ಬಂದ ಕೆಲಸವಾಯ್ತೆಂದು ಮುಳುಗುತ್ತಿದ್ದ ಸೂರ್ಯನ ಕಂಡು ಮನ ನುಡಿಯಿತು. ಒಂದೆಡೆ ಅಸ್ತವಾಗುತ್ತ ಮತ್ತೊಂದೆಡೆಗೆ ಉದಯವಾಗೋ ನೀನು ’ಭರವಸೆ’ ಎಂಬ ಮಾತಿಗೆ ನೈಜ ಉದಾಹರಣೆ. ಒಂದು ಅವಕಾಶ ತಪ್ಪಿತು ಇನ್ನೆಲ್ಲ ಕತ್ತಲು ಎಂದೇ ಭ್ರಮಿಸುವ ಜನರಿಗೆ, ಒಂದೆಡೆ ಮುಳುಗಿದರೇನು ಮತ್ತೊಂದೆಡೆ ಉದಯ ಇದ್ದೇ ಇದೆ ಎಂದು ನಿರೂಪಿಸಿದ ದೈವ ನೀನು. ಇನ್ನೂ ಒಂದು ರೀತಿ ನೋಡಿದಾಗ ಈ ಅವಕಾಶಗಳು, ಉದಯ, ಅಸ್ತ ಎಂಬುದೆಲ್ಲ ಇದ್ದೆಡೆಗೇ ಇವೆ, ನಾವು ಅದರ ಸುತ್ತಲೂ ಸುತ್ತಾಡಿಕೊಂಡು ಒದ್ದಾಡುತ್ತಿರುವುದು ಅಷ್ಟೇ ಎನಿಸುತ್ತದೆ.
ಹರಿ-ಚಿತ್ತ-ಸತ್ಯ ಎಂದರೆ ಹರೀಶ, ಚಿತ್ತರಂಜನ ಮತ್ತು ಸತ್ಯನಾರಾಯಣ. ಇವರುಗಳ ಜೀವನದಲ್ಲಿ ನೆಡೆದ ಹಲವಾರು ವಿಷಯಗಳು, ನನಗೂ ಬಿಸಿ ಮುಟ್ಟಿಸಿದೆ ಎನ್ನುವುದರಿಂದಲೇ ಈ ನೆನಪುಗಳು ಇಂದಿಗೂ ನನ್ನನ್ನು ಕಾಡಿರುವುದು. ಇವರುಗಳು ಇಂದು ಎಲ್ಲಿದ್ದಾರೋ ಗೊತ್ತಿಲ್ಲ ಆದರೆ ಅವರುಗಳ ನೆನಪನ್ನು ಮಾತ್ರ ಹಾಸಿಹೊದ್ದುಕೊಳ್ಳುವಷ್ಟು ಬಿಟ್ಟು ಹೋಗಿದ್ದಾರೆ.

***

ಮನೆ ಮುಂದೆ ’ಕೀಯ್, ಕೀಯ್, ಕೀಯ್’ ಎಂದು ಹೊಡ್ಕೊಳ್ಳೋ ಹಾರನ್ ಜೊತೆಗೆ ’ಡ್ರೂಣ್, ಡ್ರೂಣ್’ ಎಂದು ತಲೆಕಿತ್ಕೊಳ್ಳೋ ಹಾಗೆ ಮಾಡೊ ಸದ್ದು. ದಿನವೂ ನಾನು ತಯಾರಾಗಿ ಬೀದಿಯಲ್ಲಿ ನಿಂತರೂ ಕ್ಲಾಸ್ ಶುರುವಾಗೋ ಐದು ನಿಮಿಷದ ಮುಂಚೆ ಮನೆ ಮುಂದೆ ಬರೋ ಭೂಪತಿಗಳು ಮಂಗಳವಾರ ಮಾತ್ರ ಬೇಗ ಬಂದು ಬೀದಿಯಲ್ಲಿ ಗಲಭೆ ಮಾಡ್ತಾರೆ. ’ಉಳಿದಿರೋ ಕಾಫಿ ಮನೆಗೆ ಬಂದು ಕುಡಿ. ಈಗ ಹೊರಡು, ಆ ಬೈಕ್ ಶಬ್ದ ಕೇಳ್ತಿದ್ರೆ ತಲೆನೋವು ಬರುತ್ತೆ’ ಅಂತ ಅಮ್ಮ ಬೈದು ಕಳಿಸಿದರು. ಪುಸ್ತಕಗಳನ್ನೂ ಹೊತ್ತು ಸೀದ ಹೊರಗೆ ಹೋದವನು ಖಾಲಿ ಇದ್ದ ಸತ್ಯನ ಗಾಡಿ ಸೀಟಲ್ಲಿ ಕುಳಿತೊಡನೆ ಗಾಡಿಗಳೆರಡೂ ಹೊರಟಿತು. “ಮಳೆ ಬಂದು ನಿಂತ ಹಾಗಾಯ್ತು” ಅಂತ ಅಲ್ಲಿ ಅಮ್ಮ ಅಂದುಕೊಂಡಿರೋದು ಗ್ಯಾರಂಟಿ !
“ದಿನಾ ಲೇಟಾಗಿ ಬರ್ತೀರಾ ಮಕ್ಳಾ ನೀವು. ಮಂಗಳವಾರ ಮಾತ್ರ ಬೇಗ ಬಂದು ಸಾಯಿಸ್ತೀರ.” ಅಂತ ನಾನು ಗೊಣಗಿದೆ. “ಪ್ರತೀ ವಾರ ಇದೇ ಗೋಳು ನಿಂದು. ನಿನ್ನನ್ನು ಪಿಕ್-ಅಪ್ ಮಾಡೋದಲ್ದೇ ನಿನ್ ಗೊಣಗೊಣ ಬೇರೆ ಕೇಳಬೇಕು. ಜಾಸ್ತಿ ಗಲಾಟೆ ಮಾಡಿದ್ರೆ, ಇಲ್ಲೇ ಮೋರೀಲಿ ಎತ್ತಿಹಾಕಿಬಿಡ್ತೀನಿ” ಎಂದು ಬೈದಂತಹ ಸತ್ಯ ಮೋರಿ ಕಡೆ ಗಾಡಿ ಸುಮ್ಮನೆ ತಿರುಗಿಸಿದ ! ಹಿಂದೆ ಕೂತಿದ್ದ ನನಗೆ ಭಯವಾಗಿ ’ಲೋ! ಬೇಡ್ವೋ ಸುಮ್ನೆ ಹೇಳ್ದೆ” ಅಂತ ಕೂಗಿದೆ. “ಮರದ ಮೇಲಿಂದ ಆಪಲ್ ಕೆಳಗೆ ಬೀಳದೇ, ಮರವೇ ಬಿದ್ದಿದ್ದರೆ ನ್ಯೂಟನ್ನೂ ಇರ್ತಿರ್ಲಿಲ್ಲ, ಫಿಸಿಕ್ಸೂ ಇರ್ತಿರ್ಲಿಲ್ಲ ಈ ರಾಗಿಣಿ ಮೇಡಂ ಮೊದಲೇ ಇರ್ತಿರ್ಲಿಲ್ಲ” ಅಂತ ಗೋಳಾಡಿದ ಚಿತ್ತ. “ಸಾರ್! ಗೂಬೆ ಸಾರ್ !! ನೀವು ಗೋಳಾಡಿಕೊಂಡು ಗಾಡಿ ಅಲ್ಲಾಡಿಸೋದು ನಿಲ್ಲಿಸಿ. ನನಗೆ ಬ್ಯಾಲೆನ್ಸ್ ಮಾಡ್ಲಿಕ್ಕೆ ಆಗ್ತಿಲ್ಲ” ಅಂತ ಮರ್ಯಾದೆಯಿಂದ ಚಿತ್ತನಿಗೆ ಬೈದ ಹರೀಶ.
ಹರೀಶನದು ಸೌಮ್ಯ ಗುಣ. ಆದರೆ ಗುಟ್ಟಿನ ಗೂಡು. ಹೆಚ್ಚು ಮಾತನಾಡುತ್ತಿರಲಿಲ್ಲ. ತಾನಾಯ್ತು ತನ್ನ ಓದಾಯ್ತು ಅಂತಿದ್ದ. ಅಮ್ಮನಿಗೆ ಅವನನ್ನು ಕಂಡರೆ ಏನೋ ವ್ಯಾಮೋಹ. ಆಕೆ ಬಾಯಿಬಿಟ್ಟು ಹೇಳದೇ ಇದ್ದರೂ ತನ್ನ ಅಣ್ಣನ ಮಗಳನ್ನು ಇವನಿಗೆ ಕೊಡಬೇಕು ಅಂತ ಇರೋದು ನನಗೆ ಗೊತ್ತಿತ್ತು. ನನಗೇನೂ ಇದರಿಂದ ಭಾಧಕವಿಲ್ಲ. ಸ್ನೇಹಿತನನ್ನು ಬಂಧುವಾಗಿ ನೋಡೋದು ಹೇಗೆ ಅನ್ನೋದೇ ನನಗೆ ಹಿಂಸೆ. ನಾವುಗಳು ಇನ್ನೂ ಡಿಗ್ರಿ ಮುಗಿಸಿ, ಇನ್ನೇನಾದರೂ ಓದಿ, ಕೆಲಸಕ್ಕೆ ಸೇರಿ, ನಾಲ್ಕು ಕಾಸು ಮಾಡಿಕೊಂಡ ಮೇಲೆ ತಾನೇ ಆ ಮಾತು. ಈಗಿಂದ ಯಾಕೀ ತಲೆಬಿಸಿ ಅಂತ ನಾನೂ ಹೆಚ್ಚಾಗಿ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.
ಇನ್ನು ಚಿತ್ತ. ಅವನದು ಯಾವ ಊರು ಏನು ಎತ್ತ ಅಂಬೋದೇ ಗೊತ್ತಿಲ್ಲ. ಎಲ್ಲರೊಂದಿಗೆ ಭಯಂಕರ ಸ್ನೇಹದಿಂದ ಇರ್ತಾನೆ. ಕಾಲಿಟ್ಟ ಮನೆಯಲ್ಲಿ ಎಲ್ಲರನ್ನೂ ವಿಶ್ವಾಸದಿಂದ ಮಾತನಾಡಿಸಿಕೊಂಡು ಮನೆ ಜನರಲ್ಲಿ ಒಬ್ಬನಾಗಿ ಬೆರೆತು ಹೋಗುತ್ತಾನೆ. ಹಾಲಿನಂತಹ ಗುಣ ಅರ್ಥಾತ್ ಡಿಕಾಕ್ಷನ್’ಗೆ ಹಾಲು ಹಾಕಿದಂತೆ ! “ಚಿತ್ತ, ಈ ಮನೆ ಮಗ ಇದ್ದ ಹಾಗೆ” ಅಂತಾರೆ ಅಮ್ಮ. ಒಂದು ದಿನಕ್ಕೂ ಕ್ಯೂನಲ್ಲಿ ನಿಂತು ಸೀಮೆ ಎಣ್ಣೆ ತಂದಿಲ್ಲ, ಬಾವಿಯಿಂದ ನೀರು ಸೇದಿಲ್ಲ, ಗೋಡೆ ಧೂಳು ಹೊಡೆದಿಲ್ಲ. ಒಟ್ಟಿಗೆ ಓದೋಣ ಅಂತ ಮನೆಗೆ ಬರ್ತಾನೆ, ಸಂಜೆವರೆಗೂ ಇರ್ತಾನೆ. ಊಟ ತಿಂಡಿ ಕಾಫಿ ನಿದ್ದೆ ಎಲ್ಲ ಆದ ಮೇಲೆ ಸಮಯ ಸಿಕ್ಕರೆ ನನ್ ಜೊತೆ ಓದು, ಅಷ್ಟೇ! ಜಾಸ್ತಿ ಯಾರನ್ನೂ ತಲೆ ಮೇಲೆ ಕೂರಿಸಿಕೊಳ್ಳಬೇಡಿ ಅಂತ ಅಮ್ಮನಿಗೆ ಹೇಳಿ ಸಾಕಾಯ್ತು. ಬೆಳ್ಳಗಿರೋದೆಲ್ಲ ಹಾಲು ಎಂದು ನಂಬೋ ಅಮ್ಮನಿಗೆ ಎಷ್ಟೆಂದು ಹೇಳಲಿ. ’ಹೂವಿನ ಸುವಾಸನೆ ಹೀರುತ್ತಿದರೂ ಅದು ಹೂವಿಂದ ಬಂದಿದ್ದಾ, ಎಲೆಗಳಿಂದ ಬಂದಿದ್ದ ಅನ್ನೋ ಅನುಮಾನ ನಿನಗೆ’ ಅಂತ ನಾನೇ ಬೈಸಿಕೊಂಡಿದ್ದೆ.
ಸತ್ಯ ಅಲಿಯಾಸ್ ಸತ್ಯನಾರಾಯಣ ! ಶೃಂಗಾರ ಪುರುಷ ! ದೊಡ್ಡ ದೊಡ್ಡ ಕನಸುಗಳು ! ಎಷ್ಟು ಬೇಕೋ ಅಷ್ಟು ಓದು ! ಕ್ಯಾಂಟೀನ್’ನಲ್ಲಿ ಇವನ ವ್ಯವಹಾರ ನೋಡಿದರೇ ಗೊತ್ತಾಗುತ್ತೆ, ಬಲೇ ಟೋಪಿ ಹಾಕೋ ಮಾನವ ಅಂತ. ಕಾಲೇಜಿಗೆ ಬರೋದೇ ಸಹಪಾಠಿ ಹುಡುಗಿಯರಿಗಾಗಿ. ಯಾರೂ ಏನೂ ಆಗರ್ಭ ಶ್ರೀಮಂತರೇನಲ್ಲ ಆದರೆ ಕನಸುಗಳಿಗೆ ಮಾತ್ರ ಬಡತನವಿರಲಿಲ್ಲ. ಕ್ಯಾಂಟೀನ್’ನಲ್ಲಿ ಎರಡು ಪ್ಲೇಟ್ ಇಡ್ಲಿ ಎರಡು ಕಾಫಿ ಕೊಂಡು ನಾಲ್ಕೂ ಜನ ಹಂಚಿಕೊಳ್ಳುತ್ತಿದ್ದೆವು. ಸತ್ಯ ಇರೋದ್ರಿಂದ ಕೊಡೋ ದುಡ್ಡಿಗೆ ಇಡ್ಲಿಗಿಂತ ಚಟ್ನಿ ಜಾಸ್ತಿ ಸಿಗ್ತಿತ್ತು. ಎರಡು ಲೋಟ ಕಾಫಿ ಮೂರು ಲೋಟ ಆಗ್ತಿತ್ತು. ಅದು ಯಾವ ಮೂಲೆಗೂ ಸಾಲುತ್ತಿರಲಿಲ್ಲ ನಿಜ ಆದರೂ ಹೇಗೋ ನೆಡೀತಿತ್ತು ಕಾಲ. ಕೈಗೆ ಪ್ಲೇಟ್ ಬಂದೊಡನೆ ಸೈಲೆಂಟಾಗಿ ಬೇಗ ಮುಗಿಸಿಬಿಡುತ್ತಿದ್ದ ಚಿತ್ತ. ಆದರೆ ಹರೀಶ ತಿಂದರೆ ಇಡ್ಲಿಗೆಲ್ಲಿ ನೋವಾಗುತ್ತೋ ಅಂತ ಮೆಲ್ಲುತ್ತಿದ್ದ !
ಕಾಲ ಯಾರಿಗೆ ಕಾಯುತ್ತೆ? ಡಿಗ್ರಿ ಅಂತೂ ಮುಗೀತು. ಏನು ಕಲಿತೆ ಅನ್ನೋದು ಗೊತ್ತಿಲ್ಲ. ಡಿಗ್ರಿ ಹಿಡ್ಕೊಂಡು ಕೆಲಸಕ್ಕೆ ಹುಡುಕೋ ಹುಚ್ಚು ಕೆಲಸ ಮಾಡದೇ ಓದು ಮುಂದುವರೆಸಿದೆ. ಇನ್ನೂ ಕಲಿಯೋ ಆಸೆ ಇತ್ತು. ಆದರೆ ಬದುಕು ಕಲಿಸೋ ಪಾಠ ಇನ್ಯಾವ ವಿಶ್ವವಿದ್ಯಾಲಯವೂ ಕಲಿಸೋಲ್ಲ ಅನ್ನೋದು ಸತ್ಯವಾಯಿತು !
ಡಿಗ್ರಿ ಮುಗೀತಿದ್ದಂತೆ, ನಾಲ್ವರ ದಾರಿಗಳೂ ಬೇರೆ ಬೇರೆಯಾಯ್ತು ! ಚಿತ್ತ’ನಿಗೂ ಓದು ಮುಂದುವರೆಸುವ ಹಂಬಲ. ಇನ್ನೊಂದೆರಡು ವರ್ಷ ಓದುವಷ್ಟು ಸಬ್ಜೆಕ್ಟ್’ಸ್ ಉಳಿಸಿಕೊಂಡಿದ್ದ. ಜೊತೆಗೆ ಕೆಲಸದ ಅಲೆದಾಟಕ್ಕೆ ಶುರು ಹಚ್ಚಿಕೊಂಡಿದ್ದ. ಮಾತು ಅನ್ನೋ ಆಸ್ತಿ ಅವನಿಗೆ ಸಿದ್ದಿಸಿತ್ತು. ಇಷ್ಟೂ ವರ್ಷ ನಯಾ ಪೈಸೆ ಕೊಡದೆ ದೂರದ ನೆಂಟರ ಮನೆಯಲ್ಲೇ ಠಿಕಾಣಿ ಹೂಡಿದ್ದ ಎಂದರೆ ನೀವೇ ಊಹಿಸಿಕೊಳ್ಳಿ. ಜನರ ಮಧ್ಯೆ ಬದುಕೋ ಛಾತಿ ಇತ್ತು. ಮೂರು-ನಾಲ್ಕು ಜನರಿರೋ ಒಂದು ಸಣ್ಣ ಕಂಪನಿಗೆ ಸೇಲ್ಸ್’ನಲ್ಲಿ ಕೆಲಸಕ್ಕೆ ಸೇರಿದ. ಮೊದ ಮೊದಲು ವಾರಕ್ಕೊಮ್ಮೆ, ಹದಿನೈದು ದಿನಕ್ಕೊಮ್ಮೆ ಅಂತ ಮನೆಗೆ ಬರ್ತಿದ್ದ. ಒಮ್ಮೆ ಬೈಕಿನಲ್ಲಿ ಬಂದ. ಮತ್ತೊಮ್ಮೆ ಸ್ಕೂಟರ್. ಮಗದೊಮ್ಮೆ ಕಾರು. ಅಮ್ಮನ ಬಳಿ ಕಾರು ತೆಗೆದುಕೊಂಡೆ ಅಂತ ಹೇಳಿ ಸಿಹಿ ಮಾಡಿಸಿಕೊಂಡು ತಿಂದ. ನಾನು ಕೇಳಿದ್ದಕ್ಕೆ ಕಂಪನಿ ಕಾರು ಅಂದ ! ಒಂದೂ ಅರ್ಥವಾಗುತ್ತಿರಲಿಲ್ಲ !! ನಾಲ್ಕು ಕಾಸು ಸೇರುತ್ತಿದ್ದಂತೇ, ಇಷ್ಟೂ ದಿನ ಉಳಿದುಕೊಂಡಿದ್ದ ಬಂಧುಗಳಿಗೆ ಊರಿಗೆ ಹೋಗಿ ಬರ್ತೀನಿ ಅಂತ ಹೊರಟವನು ವಾಪಸ್ ಅವರ ಮನೆ ಕಡೆ ತಲೆ ಹಾಕಲಿಲ್ಲ ! ಇವೆಲ್ಲ ಸತ್ಯನಿಂದ ತಿಳೀತು.
ಇನ್ನು ಸತ್ಯ ! ಮೊದ ಮೊದಲು ಏನೇನೋ ಬಿಜಿನೆಸ್ಸ್ ಮಾಡ್ತೀನಿ ಅಂತ ಹೋಗಿ ಕೈಸುಟ್ಟುಕೊಂಡು ನಂತರ ರಿಯಲ್ ಎಸ್ಟೇಟ್ ಬಿಜಿನೆಸ್ ಮಾಡ್ತೀನಿ ಅಂತ ಸಾಲಗೀಲ ತೊಗೊಂಡು ಶುರು ಮಾಡಿದ. ಬಾಡಿಗೆ ಮನೆ ಕೊಡಿಸುವುದು, ಅಂಗಡಿ ಬಾಡಿಗೆಗೆ ಕೊಡಿಸುವುದು ಅಂತ ಶುರು ಮಾಡಿಕೊಂಡ. ಕೈಯಲ್ಲಿ ಕಾಸು ಓಡಾಡಲು ಶುರುವಾದೊಡನೆ ಶೋಕಿ ಇನ್ನೂ ಹೆಚ್ಚಿತು, ಸಹವಾಸಗಳು ಕೂಡ ಬೇರೆ ಆಯ್ತು. ಕೈಸುಟ್ಟುಕೊಂಡ ಕಾಲಕ್ಕೆ ಚಿತ್ತನ ಬಳಿ ದುಡ್ಡು ಕೇಳಿದ್ದನಂತೆ. ನಿನ್ನಿಂದ ವಾಪಸ್ ಬರೋ ಗ್ಯಾರಂಟಿ ಏನು ಅನ್ನೊ ಅರ್ಥದಲ್ಲಿ ಮಾತನಾಡಿ ಸದ್ಯಕ್ಕೆ ದುಡ್ಡಿಲ್ಲ ಅಂದೆ ಅಂತಂದ ಚಿತ್ತ. ಇದಕ್ಕೆ ಸತ್ಯ ಹೇಳಿದ್ದೇ ಬೇರೆ. ’ನಾನ್ಯಾಕೆ ಅವನ ಹತ್ತಿರ ದುಡ್ಡು ಕೇಳಲಿ. ನಾನ್ ಕೇಳಿದ್ದು ನಾನೇ ಕೊಟ್ಟ ಸಾಲ. ಮಗ ಅದಕ್ಕೂ ನಕ್ಷತ್ರ ತೋರಿಸಿದ’ ಅಂತ ಖಾರವಾಗಿ ನುಡಿದಿದ್ದ. ಒಟ್ಟಿನಲ್ಲಿ ಇಬ್ಬರ ಸ್ನೇಹ ಹಳಸಿತ್ತು. ದುಡ್ಡು ಮಾತನಾಡಲು ಶುರು ಮಾಡಿತ್ತು !!!
ಹರೀಶ ! ಅಮ್ಮನ ಅಚ್ಚುಮೆಚ್ಚಿನ ಹರೀಶ !! ಡಿಗ್ರಿ ಮುಗಿದೊಡನೆ ಹೆಚ್ಚು ಕಮ್ಮಿ ಒಂದು ತಿಂಗಳೇ ನಾಪತ್ತೆ ! ನಂತರ ಇದ್ದಕ್ಕಿದ್ದಂತೆ ಕಾಣಿಸಿಕೊಂಡ. “ಎಲ್ ಹಾಳಾಗಿಹೋಗಿದ್ಯೋ?” ಎಂಬ ಶಿಷ್ಟಾಚರದ ಪ್ರಶ್ನೆಗೆ ಉತ್ತರ ಕೊಟ್ಟಿದ್ದ “ಮಾನಸಗಂಗೋತ್ರಿ’ಯಲ್ಲಿ M.Scಗೆ ಸೇರಿದೆ ಕಣೋ”. ಇರೋ ಮೂರು ಜನರಲ್ಲಿ ಸ್ವಲ್ಪ ವಾಸಿ ಅನ್ನೋ ಹಾಗಿರೋ ಇವನೂ ದೂರ ಆಗ್ತಿದ್ದಾನೆ. ಮೈಸೂರೇನೂ ಅಮೇರಿಕ ಅಲ್ಲ ನಿಜ. ಆದರೆ ಹರೀಶನ ವಿಷಯ ತೆಗೆದುಕೊಂಡರೆ ಮೈಸೂರು ಕೂಡ ಅಂಟಾರ್ಟಿಕ ಇದ್ದ ಹಾಗೆ. ಪರೀಕ್ಷೆ ಸಮಯದಲ್ಲಿ ನಾಲ್ಕು ಬಸ್ ಸ್ಟಾಪ್ ದಾಟಿದರೆ ಇರೋ ಇವನ ಮನೆಗೆ ಹೋದ್ರೆ, ಒಂದೈದು ನಿಮಿಷ ಮಾತನಾಡಿ ಆಮೇಲೆ “ಬರ್ತೀನಿ” ಕಣೋ ಅಂತ ತಾನು ಮನೆಯೊಳಗೆ ಹೋಗ್ತಿದ್ದ ಭೂಪತಿ. ಅಂಥವನು, ಎಂ.ಎಸ್ಸಿ ಸೇರಿದ ಅಂದ ಮೇಲೆ, ಇವನ ಜೊತೆ ಮೂರು ನಿಮಿಷ ಮಾತನಾಡಲಿಕ್ಕೆ ಮೈಸೂರಿಗೆ ಹೋಗಲಿಕ್ಕೆ ಆಗುತ್ತಾ?
ಇವೆಲ್ಲ ಸರದಿಯಲ್ಲಿ ಆಗದಿದ್ದರೂ ಕ್ರಮೇಣ ಒಂದಾರು-ಎಂಟು ತಿಂಗಳಲ್ಲಾದ ಬವಣೆಗಳು .. ಅಲ್ಲ, ಬದಲಾವಣೆಗಳು. ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಸಿಗೋದೆಲ್ಲ ನಿಂತು ಹೋಗಿದೆ. ಎಲ್ಲರೂ ಅವರವರ ಕೆಲಸದಲ್ಲಿ ಬಿಜಿ.
ಸತ್ಯ ಈಗ ಮನೆಗಳ ಮಾರಾಟದ ಬಿಜಿನೆಸ್ ಕೂಡ ನೆಡೆಸುತ್ತಾನೆ. ಚೆನ್ನಾಗಿ ತಳ ಊರಿದ್ದಾನೆ ಅನ್ನೋದು ಜನ ಅವನ ಸುತ್ತಲೂ ಓಡಾಡುವುದನ್ನು ನೋಡಿದಾಗಲೇ ಗೊತ್ತಾಗುತ್ತೆ. ಆಗಾಗ ಸಿಗ್ತಾನೆ. ಎಷ್ಟೇ ಆಗಲಿ ನಾವಿದ್ದ ಏರಿಯಾದಲ್ಲೇ ಅವನ ವ್ಯವಹಾರ ಅಂತಾದ ಮೇಲೆ ಸಿಗದೇ ಎಲ್ಲಿ ಹೋಗ್ತಾನೆ ಅನ್ನಬೇಡಿ ! ಸಲೀಸಾಗಿ ಸಿಗೋಲ್ಲ. ಒಂದು ಏರಿಯಾದಲ್ಲಿ ಇಷ್ಟು ಪ್ಲಾಟುಗಳು ಇದೆ. ನೀನೂ ಒಂದು ತೊಗೋ ಅಂತ್ಲೋ, ಅಪಾರ್ಟ್ಮೆಂಟ್ ಕಟ್ಟಿಸ್ತಿದ್ದೀವಿ ನೀನೊಂದು ಬುಕ್ ಮಾಡು ಅಂತ್ಲೋ ಕೇಳ್ತಿರ್ತಾನೆ. ನಾನಿದುವರೆಗೂ ಯಾವುದಕ್ಕೂ ಸೊಪ್ಪು ಹಾಕಿಲ್ಲ. ಮತ್ತದೇ ಅನುಮಾನ, ಏನೋ ಸರಿ ಇಲ್ಲ ಅಂತ !
ಚಿತ್ತ, ’ಇಲ್ಲೇ ಒಂದು ಕಡೆ ಕೆಲ್ಸ ಇತ್ತು’ ಅಂತ ಶನಿವಾರ ಮಧ್ಯಾನ್ನ ಮನೆಗೆ ಬಂದು ಕಾಫಿ ಕುಡ್ಕೊಂಡ್ ಹೋಗ್ತಿದ್ದ. ಮೊದಲೆಲ್ಲ ಬಿಜಿ ಇದ್ದೀನಿ ಓದೋದಕ್ಕೆ ಆಗ್ತಿಲ್ಲ ಅಂತಿದ್ದ. ಇದ್ದಕ್ಕಿದ್ದಂತೆ ಒಮ್ಮೆ ’ಮೊನ್ನೆ ಸಪ್ಲಿಮೆಂಟರಿಯಲ್ಲಿ ಎಲ್ಲ ಸಬ್ಜೆಕ್ಟ್ಸ್ ಮುಗಿಸಿಬಿಟ್ಟೆ’ ಅಂದ !! ಡಿಗ್ರಿ ಕೈಗೆ ಬಂದ ಮೇಲೆ ಪ್ರಮೋಷನ್ ಕೂಡ ಆಯ್ತು ಅಂತ ಹೇಳಿ ಅಮ್ಮನ ಕೈಲಿ ಮೈಸೂರು ಪಾಕ್ ಮಾಡಿಸಿದ್ದ. ಪ್ರಮೋಷನ್ ವಿಷಯ ನನಗೆ ಹೇಳಲಿಲ್ಲ ಅನ್ನೋದು ಬೇರೆ ಮಾತು.
ಹರೀಶ ಒಂದೆಡೆ ಓದಿನಲ್ಲಿ ಬಿಜಿ. ನನ್ನ ಓದಿನಲ್ಲಿ ನಾನೂ ಬಿಜಿ.
ಸಂಜೆ ಕಳೆದು ಪೂರ್ತಿ ಕತ್ತಲಾಗುವ ಮುನ್ನ ಸ್ವಲ್ಪ ಸ್ವಲ್ಪವೇ ಬೆಳಕು ಕಡಿಮೆಯಾದಂತೆ, ಕೆಲಸದ ಬಿಜಿ ಎಂದು ಚಿತ್ತ ನಮ್ಮಿಂದ ನಿಧಾನವಾಗಿ ದೂರ ಸರಿಯುತ್ತಿದ್ದ, ಸತ್ಯ ಇದ್ದೂ ಕೈಗೆಟುಕದಂತಾಗಿದ್ದ, ಹರೀಶ ಇವರಿಬ್ಬರಿಗಿಂತ ಮುಂಚೆಯೇ ದೂರಾಗಿದ್ದ. ಈಚೆಗೆ ಯಾವುದೋ ಅಂಗಡಿಗೆ ಹೋಗಿದ್ದಾಗ ಅಲ್ಲಿ ಹರೀಶನ ತಂದೆ ಸಿಕ್ಕಿದ್ದರು. ಬಹಳ ದಿನಗಳಾದ ಮೇಲೆ ನನ್ನನ್ನು ಕಂಡು ಅವರಿಗೂ ಬಹಳ ಸಂತೋಷವಾಗಿತ್ತು. ಮಾತು ಸಹಜವಾಗೇ ಹರೀಶನ ಬಗ್ಗೆ ಹರಿಯಿತು. ಓದಿನಲ್ಲಿ ಬಿಜಿ ಜೊತೆಗೆ ಕೆಲಸವೂ ಮಾಡುತ್ತಿದ್ದಾನೆ, ಹಾಗಾಗಿ ಇಲ್ಲಿಗೆ ಬಂದು ಎರಡು ತಿಂಗಳು ಮೇಲಾಯ್ತು. ಅವನಮ್ಮನಿಗೆ ಮೈಹುಷಾರಿಲ್ಲದ ಕಾರಾಣ ನಾವೂ ಅಲ್ಲಿಗೆ ಹೋಗಿಲ್ಲ ಎಂದು ನವಿರಾದ ದು:ಖದಲ್ಲೇ ನುಡಿದರು. ನಿನ್ನ ಹಾಗೇ ಇಲ್ಲೇ ಇದ್ದು ಓದು ಮುಂದುವರೆಸಬಹುದಿತ್ತು ಎಂದೂ ಸೇರಿಸಿದರು. ಏನೂ ಸಾಂತ್ವನ ಹೇಳಲಾಗದೆ ಬಾಯಿ ಕಟ್ಟಿದಂತಾಗಿತ್ತು. ಅವರನ್ನು ಬೀಳ್ಕೊಟ್ಟು ನಾನೂ ಹೊರಟೆ.
ಕಾಲೇಜು ದಿನಗಳಲ್ಲಿ ನಾವೊಂದು ಒಪ್ಪಂದ ಮಾಡಿಕೊಂಡಿದ್ದೆವು. ನಮ್ಮ ಮದುವೆಗಳಲ್ಲಿ ಮೂರು ದಿನಗಳು ಒಟ್ಟಿಗೆ ಗಲಾಟೆ ಮಾಡಿಕೊಂಡು ಇರಬೇಕು ಅಂತ. ಈಗಲೂ ನೆನಪಿಸಿಕೊಂಡರೆ ನಗು ಬರುತ್ತೆ. ಮುಂದಾಗುವುದೆಲ್ಲ ನಮ್ಮ ಕೈಯಲ್ಲಿ ಇರುತ್ತದೆ ಎಂದು ಅಂದುಕೊಂಡು ಏನೆಲ್ಲ ಮಾತನಾಡ್ತೀವಿ. ನಾವಂದುಕೊಂಡ ಕಾಲು ಭಾಗವೂ ನಮ್ಮಿಚೆಯಂತೆ ನೆಡೆಯೋಲ್ಲ, ಎಲ್ಲ ಅವನ ಚಿತ್ತದಂತೇ ನೆಡೆಯೋದು.
ಕಾಲವನ್ನು ತಡೆಯೋರು ಯಾರೂ ಇಲ್ಲ, ಅಲ್ಲವೇ? ನನ್ನ ಓದು ಮುಗಿದು ಕೆಲಸದ ಬೇಟೆಗೆ ಶುರು ಹಚ್ಚಿದ್ದೆ. ನಗರದ ಮಧ್ಯಭಾಗದಲ್ಲೊಂದು ಕಂಪನಿಯ ಆಫೀಸಿನಲ್ಲಿ ಉದ್ಯೋಗವೂ ಆಯ್ತು. ಹೀಗೆ ಒಂದು ಸಂಜೆ ಕೆಲಸ ಮುಗಿಸಿ ಗಾಡಿಯಲ್ಲಿ ಬರುವಾಗ ಕಾರಿಳಿಯುತ್ತಿದ್ದ ಚಿತ್ತನನ್ನು ಕಂಡೆ. ಗಾಡಿ ನಿಲ್ಲಿಸಿ ಮಾತನಾಡಿಸಿದೆ. ಅವನ ಒತ್ತಾಯದ ಮೇರೆಗೆ, ಗಾಡಿ ಪಾರ್ಕ್ ಮಾಡಿ ಅವನ ಹಿಂದೆಯೇ ಹೋದೆ. ಅವನನ್ನು ಬಿಟ್ಟರೆ ಇದ್ದ ಮೂರು ಮಂದಿಯಲ್ಲಿ ಇಬ್ಬರು ಮನೆಗೆ ಹೋಗಿಯಾಗಿತ್ತು. ಇದ್ದ ಒಬ್ಬ ಹುಡುಗಿಯನ್ನು ಪರಿಚಯ ಮಾಡಿಕೊಟ್ಟು ಆಕೆಯ ಮುಂದೆ ನನ್ನನ್ನು ಬಹಳ ಹೊಗಳಿದ. ಯಾಕೆ ಅಂತ ಕೇಳಬೇಡಿ. ನನಗೆ ಗೊತ್ತಿದ್ದ ವಿಷಯ ಮಾತ್ರ ನಾನು ಹೇಳಬಲ್ಲೆ. ಹೊಗಳಿಕೆಯ ಬೊಗಳುವಿಕೆ ಆದ ಮೇಲೆ, ತನ್ನ ಆಫೀಸ್ ರೂಮಿಗೆ ಕರೆದೊಯ್ದ. ಆಫೀಸಿನ ಗಾಜಿನ ಬಾಗಿಲ ಮೇಲೆ ’ಚಿತ್ತರಂಜನ್, ಡೈರೆಕ್ಟರ್’ ಎಂದಿತ್ತು. ಡಿರೆಕ್ಟರ್ ಕೆಳಗೆ ಕೆಲಸ ಅಂದಿದ್ದ, ಈಗ ನೋಡಿದರೆ ಇವನೇ ಡೈರೆಕ್ಟರ್ ಅಂತ ಹಾಕಿಕೊಂಡಿದ್ದಾನಲ್ಲ? ನನ್ನ ಮುಖಭಾವ ಅರಿತು “ಮುಂಚೆ ಇದ್ದ ಡೈರೆಕ್ಟರ್’ಗೆ ಮೈ ಹುಷಾರಿಲ್ಲ ಕಣೋ. ಅದಕ್ಕೇ ನನಗೇ ನೋಡ್ಕೋ ಅಂತ ಕೊಟ್ರು” ಅಂತ ತೇಲಿಸಿ ಮಾತು ಬದಲಿಸಿದ. ನಂಬೋ ಮಾತಾ ಇದು ಎಂದು ತಲೆಬಿಸಿ ಆಯ್ತು. ಹೆಚ್ಚು ಹೊತ್ತು ಕೂರದೆ ಎದ್ದು ಬಂದೆ.
ಇದಾದ ಒಂದೆರಡು ತಿಂಗಳಾದ ಮೇಲೆ ಒಮ್ಮೆ ಅಮ್ಮ “ಚಿತ್ತ ಬಂದಿದ್ದ ಕಣೋ ಮದುವೆ ಕಾರ್ಡ್ ಕೊಡಲಿಕ್ಕೆ. ಹುಡುಗಿ ಚೆನ್ನಾಗಿದ್ದಾಳೆ” ಅಂದರು. ನಾನೂ ಕಾರ್ಡ್ ತೆಗೆದುಕೊಂಡು ನೋಡಿದೆ. ಫೋಟೋ ಅಂತೂ ಇರಲಿಲ್ಲ, ಹುಡುಗಿ ಚೆನ್ನಾಗಿದ್ದಾಳೆ ಅಂದರೇನರ್ಥ? ನಾನು ಕೇಳಿದ್ದಕ್ಕೆ “ಅವನು ಹುಡುಗಿ ಜೊತೆ ಬಂದು ಕಾರ್ಡ್ ಕೊಟ್ಟು ಹೋದ” ಅಂದರು. ಅಮ್ಮನ ಗಲಾಟೆಗೆ ಆಕೆಯನ್ನೂ ಕರೆದುಕೊಂಡು ರಿಸೆಪ್ಷನ್’ಗೆ ಹೋಗಿದ್ದೆ ! ಅವನ ಆಫೀಸಿನಲ್ಲಿ ಪರಿಚಯ ಮಾಡಿಕೊಟ್ಟಿದ್ದ ಹುಡುಗಿಯೇ ಈಗ ಇವನ ಹೆಂಡತಿ. ಆ ಸಮಯದಲ್ಲಿ ಅಲ್ಲೇ ಇದ್ದ ಅವನ ಅಪ್ಪ-ಅಮ್ಮನಿಗೆ ನಮ್ಮನ್ನು ಪರಿಚಯ ಮಾಡಿಕೊಟ್ಟಿದ್ದ. ಅಮ್ಮನ ಮುಖದಲ್ಲಿ ನಿರಾಸೆ ಎದ್ದು ಕಾಣುತ್ತಿತ್ತು. ಮಗನೆಂದು ಭಾವಿಸಿದ್ದ ಚಿತ್ತ, ತನ್ನ ಅಪ್ಪ-ಅಮ್ಮನಿಗೆ ’ನನ್ ಫ್ರೆಂಡ್ ಅಮ್ಮ’ ಅಂತ ಪರಿಚಯ ಮಾಡಿಕೊಟ್ಟಿದ್ದ ಪುಣ್ಯಾತ್ಮ !!! ಈ ಬಂಧನಗಳು ಏಕೆ ಬೆಳೆಯುತ್ತೆ, ಏಕೆ ಅದರಿಂದ ನೋವು ಬರುತ್ತದೆ ಎಂಬುದೇ ಅರ್ಥವಾಗೋಲ್ಲ.
ಮೊನ್ನೆ ಅಮ್ಮನ ದೂರಸಂಬಂಧಿಯೊಬ್ಬ ಬಂದಿದ್ದ, ಅದೂ ನನ್ನನ್ನು ಹುಡುಕಿಕೊಂಡು. ಬಂಧು-ಬಳಗದವರಲ್ಲಿ ನನ್ನನ್ನು ಅರಿತವರು ಬಹಳ ಕಡಿಮೆ. ನಾನೇ ಯಾರನ್ನೂ ಹಚ್ಚಿಕೊಂಡಿರಲಿಲ್ಲ. ತಿಂಡಿ-ಕಾಫಿ ಎಲ್ಲ ಸಾಮಾರಾಧನೆ ನೆಡೆಯುತ್ತಿರಬೇಕಾದರೆ ಆತ ನುಡಿದರು “ಬೆಂಗಳೂರು ಉತ್ತರಕ್ಕಿರೋ ಒಂದು ಕಡೆ ಹೊಸ ಅಪಾರ್ಟ್ಮೆಂಟ್ ಮಾಡ್ತಿದ್ದಾರೆ ಅಂತ ಕಳೆದ ವರ್ಷ ಸಾಲ ಮಾಡಿ ಹಣ ಕಟ್ಟಿದೆ. ಇದುವರೆಗೂ ಅಲ್ಲಿ ಒಂದು ಕಲ್ಲೂ ಭೂಮಿಯಿಂದ ಮೇಲೆ ಎದ್ದಿಲ್ಲ. ಏನೊ ತಗಾದೆಯಂತೆ. ದುಡ್ಡೂ ಕೊಡ್ತಿಲ್ಲ, ಕೆಲಸವೂ ಆಗ್ತಿಲ್ಲ. ಸಾಲ ಮಾಡಿದ ಹಣ ಕಟ್ಟದೇ ವಿಧಿಯಿಲ್ಲ”. ಎಲ್ಲೆಡೆ ದಗಾ, ವಂಚನೆ, ಮೋಸ. ಮನಕ್ಕೇನೋ ಬೇಸರವಾಯ್ತು ನಿಜ, ಆದರೆ ಇದರಲ್ಲಿ ನನ್ನ ಪಾಲಂತೂ ಏನಿಲ್ಲ, ನನ್ನ ಮುಂದೆ ಯಾಕೆ ಹೇಳ್ತಿದ್ದಾರೆ, ಅದೂ ನನ್ನನ್ನೇ ಹುಡುಕಿಕೊಂಡು ಬಂದು ಅನ್ನೋದು ಅರ್ಥವಾಗಲಿಲ್ಲ. ನಿಧಾನವಾಗೇ ಕೇಳಿದೆ “ನನ್ನಿಂದ ಏನಾಗಬೇಕು?” ಅಂತ. “ನಾನು ಹಣ ಕೊಟ್ಟಿರೋ ಆ ರಿಯಲ್ ಎಸ್ಟೇಟ್ ಆಸಾಮಿ ’ಸತ್ಯನಾರಾಯಣ’ ನಿಮ್ ಸ್ನೇಹಿತರಂತೆ. ಅದಕ್ಕೆ ನಿಮ್ಮ ಮಾತು ನೆಡೆಯುತ್ತಾ? ಸಹಾಯ ಮಾಡ್ತೀರಾ ಅಂತ ಕೇಳೋಕ್ಕೆ ಬಂದೆ” ಅಂದರು.
ಮುಂದೊಂದು ದಿನ ಈ ಸತ್ಯನ ಹೆಸರು ನನ್ನ ಹೆಸರಿನ ಜೊತೆ ಹೀಗೆ ಒಂದಾಗಬಹುದು ಅಂತ ಎಣಿಸಿರಲಿಲ್ಲ. ನನ್ನ ಮಾತಿಗೆ ಕವಡೆ ಕಾಸಿಗೂ ಬೆಲೆಯಿರೋದಿಲ್ಲ ಎಂದು ನನಗೆ ಗೊತ್ತಿತ್ತು. ಆದರೂ, ಮುಂಚೆಯೆಲ್ಲ ಒಂದು ಕ್ಯಾಂಟೀನ್’ನಲ್ಲಿ ಒಟ್ಟಿಗೆ ತಿಂದಿದ್ದೆವಲ್ಲ, ಅದಕ್ಕಾದರೂ ನನ್ ಮಾತು ಕೇಳಬಹುದೇನೋ ಅನ್ನಿಸಿತ್ತು. “ನಾನು ಅವನನ್ನು ವಿಚಾರಿಸಿ ನಿಮಗೆ ಹೇಳುತ್ತೇನೆ” ಅಂದೆ. “ಅದೂ, ನಾನು ಅವರಿಗೆ ಫೋನ್ ಮಾಡಿದ್ದೆ. ಇವತ್ತು ಸಂಜೆ ಬನ್ನಿ ಸಿಗ್ತೀನಿ. ಮಾತಾಡೋಣ ಅಂದ್ರು. ಜೊತೆಗೆ ಬಂದರೆ ಇವತ್ತೇ ಇತ್ಯರ್ಥ ಆಗುತ್ತೆ” ಅಂದರು. ಮನದಲ್ಲೇನೋ ಅಳುಕು, ಆದರೂ ಹೊರಟೆ.
ಆಫೀಸಿನಲ್ಲಿ ಕುಳಿತಿದ್ದ ಸತ್ಯ, ನನ್ನನ್ನು ಕಂಡು ನಗೆ ಬೀರಿದ, ಒಂದು ಕ್ಷಣ. ಏಕೆಂದರೆ ಮರು ಕ್ಷಣದಲ್ಲಿ ನನ್ನ ಹಿಂದೆ ಇದ್ದ ಇವರು ಅವನ ಕಣ್ಣಿಗೆ ಬಿದ್ದರು. ಇವರಿಬ್ಬರ ಮಾತಿಗೆ ನಾನು ಮೂಕಪ್ರೇಕ್ಷಕನಾಗಿದ್ದೆ. ನಾನು ಅವನಿಗೆ ಸ್ನೇಹಿತ ಎಂಬೋ ಸಲುಗೆಯಲ್ಲಿ ದುಡ್ಡು ವಾಪಸ್ ಕೊಟ್ಟುಬಿಡು ಅಂತ ಕೇಳಿದೆ. “ಅದು ನನ್ನ ಕೈಯಲ್ಲಿಲ್ಲ, ಇನ್ನೊಬ್ಬರನ್ನು ಭೇಟಿ ಮಾಡಬೇಕು. ಅವರು ಊರಲ್ಲಿಲ್ಲ. ಬಂದ ಕೂಡಲೇ ತಿಳಿಸ್ತೀನಿ. ಒಂದೆರಡು ತಿಂಗಳಲ್ಲಿ ಕೆಲಸ ಮಾಡಿಸಿಕೊಡ್ತೀನಿ” ಅಂತೆಲ್ಲ ತಾರಮ್ಮಯ್ಯ ಹಾಡಿದ. ನನ್ನ ಮನದಲ್ಲಿನ ಅನುಮಾನವಂತೂ ಸಾರಿ ಸಾರಿ ಹೇಳುತ್ತಿತ್ತು. ಆ ದುಡ್ಡು ಸಿಗೋಲ್ಲ ಅಂತ. ಇಬ್ಬರೂ ಎದ್ದು ಹೊರಟೆವು. ಬಾಗಿಲ ತನಕ ಬಂದ ಅವನು ಖುದ್ದಾಗಿ ನನಗೇ ನುಡಿದ “ಲೋ ಕುಡುಮಿ, ನೀನು ಸುಮ್ನೆ ಈ ವಿಚಾರಕ್ಕೆಲ್ಲ ಯಾರ ಹಿಂದೇನೂ ಬರಬೇಡ ಆಯ್ತ. ಇವೆಲ್ಲ ನಿನಗೆ ಅರ್ಥ ಆಗಲ್ಲ. ನಿನಗೆ ಮನೆಯೋ ಸೈಟೋ ಬೇಕಿದ್ರೆ ಕೇಳು. ಒಳ್ಳೇ ಏರಿಯಾ ನೋಡಿ ಕೊಡಿಸ್ತೀನಿ. ಬೈ” ಅಂತಂದು ಸೊಟ್ಟಗೆ ಕಿರುನಗೆ ನಕ್ಕು ಒಳಗೆ ಹೋಗಿ ಬಾಗಿಲು ಹಾಕಿಕೊಂಡ.
ಬಾಗಿಲು ಹಾಕಿಕೊಂಡಿದ್ದು ನನಗೆ ಸಂಕೇತದಂತೆ ಕಂಡಿತ್ತು. ಒಂದು ಬಂಧನ ಕಳಚಿದಂತೆ ಮನಸ್ಸಿಗೆ ಭಾಸವಾಗಿತ್ತು. ಅಂದೇ ಕಡೆ, ಅದಾದ ನಂತರ ಅಕಸ್ಮಾತ್ ಎದುರಿಗೆ ಸಿಕ್ಕರೂ ಸುಮ್ಮನೆ ಹೊರಾಟು ಹೋಗುತ್ತಿದ್ದ. ಮಾತೂ ಇಲ್ಲ, ಕಿರುನಗು ಮೊದಲೇ ಇಲ್ಲ.

ಹೀಗೇ ಒಂದು ಸಂಜೆ ಹರೀಶ ತಂದೆಯಿಂದ ಫೋನ್ ಬಂತು. ಹರೀಶನ ಅಮ್ಮನ ಕಣ್ಣಿಗೆ ಏನೋ ತೊಂದರೆ ಆಗಿತ್ತು. ನಾನು ಗಾಡಿ ಹಾಕಿಕೊಂಡು ಹೋದೆ. ಅವರದೇ ಕಾರು ಓಡಿಸಿಕೊಂಡು ಅವರನ್ನೂ ಕರೆದುಕೊಂಡು ಹೋದೆ. ಚೆಕ್-ಅಪ್ ಎಲ್ಲ ಆಗಿ ಆಪರೇಷನ್ ಆಗಬೇಕು ಅಂದರು. ಅದಕ್ಕೊಂದು ದಿನ ನಿಗದಿ ಮಾಡಿಕೊಂಡು ಹೊರಟೆವು. ’ಹರೀಶನಿಗೆ ಕರೆ ಮಾಡಿದ್ರಾ? ’ ಎಂದು ಕೇಳಿದೆ. ’ಕರೆ ಮಾಡಿದ್ದೆ. ಬರ್ತೀನಿ ಅಂದಿದ್ದಾನೆ’. ಯಾವಾಗ ಬರ್ತಾನೆ, ಏನು ಅಂತ ಅವರೂ ಹೇಳಲಿಲ್ಲ, ನಾನೂ ಕೇಳಲಿಲ್ಲ. ಹೊರಗೆ ಬರುವಾಗ ಚಿತ್ತ ಸಿಕ್ಕಿದ. ಇವರ ಸ್ಥಿತಿ ಕಂಡು ಅವನಿಗೂ ಬೇಸರವಾಯ್ತು. “ಇಲ್ಲಿನ ಡಾಕ್ಟರ್’ಸ್ ಎಲ್ಲ ನನಗೆ ಪರಿಚಯ. ನೀವೇನೂ ಯೋಚನೆ ಮಾಡಬೇಡಿ. ಆಪರೇಷನ್ ದಿನ ಹೇಳಿ. ನಾನು ದುಡ್ಡೂ ಕಾಸಿನ ಬಗ್ಗೆ ಮಾತಾಡ್ತೀನಿ” ಅಂತ ಹೇಳಿ ನಮ್ಮನ್ನು ಕಳಿಸಿಕೊಟ್ಟ.
ಆಪರೇಷನ್ ದಿನ ಹತ್ತಿರ ಬಂತು. ಹರೀಶನಿಗೆ ಬರಲಿಕ್ಕೆ ಆಗಿರಲಿಲ್ಲ ಎಂದು ತಿಳಿದು ನಾನು ರಜೆ ಹಾಕಿದ್ದೆ. ಹಿಂದಿನ ದಿನವೇ ಅಡ್ಮಿಟ್ ಆಗಬೇಕು ಎಂದಿದ್ದರಿಂದ, ಅಮ್ಮನನ್ನು ಕರೆದುಕೊಂಡು ಹಿಂದಿನ ದಿನ ಸಂಜೆ ಅವರ ಮನೆಗೆ ಹೋಗಿ, ನಾಲ್ಕೂ ಜನರು ಆಸ್ಪತ್ರೆಗೆ ಹೋದೆವು. ನಾನು ಅವರೊಂದಿಗೆ ಇದ್ದು, ಕಾಗದ ಪತ್ರ ಎಲ್ಲ ಸಹಿ ಹಾಕಿಸಲು ಸಹಾಯ ಮಾಡಿ, ರೂಮ್ ಸಿಕ್ಕಿದ ಮೇಲೆ ಚಿತ್ತನಿಗೆ ಕರೆ ಮಾಡಿದೆ. ಸುಮಧುರವಾಣಿ “…ವ್ಯಾಪ್ತಿಯಲ್ಲಿಲ್ಲ” ಎಂದು ಬಂತು. ಊರಲ್ಲಿ ಇದ್ದಾನೋ ಇಲ್ಲವೋ ಗೊತ್ತಿಲ್ಲ.
ಪೇಷಂಟ್ ಜೊತೆ ಯಾರೂ ಇರುವ ಅವಶ್ಯಕತೆ ಇಲ್ಲ, ಇಲ್ಲಿ ಯಾರೂ ಇರಕೂಡದು ಎಂದು ತಾಕೀತು ಮಾಡಿದ್ದರಿಂದ, ಹರೀಶನ ತಂದೆಯನ್ನು ನಮ್ಮ ಮನೆಗೆ ಕರೆದೊಯ್ದು, ಮರುದಿನ ಮೂವರೂ ಮತ್ತೆ ಆಸ್ಪತ್ರೆಗೆ ಹೋದೆವು. ದೇವರ ದಯೆಯಿಂದ ಆಪರೇಷನ್ ಯಶಸ್ವಿಯಾಗಿ ಮುಗಿಯಿತು. ಎಲ್ಲ ಸುಸೂತ್ರವಾಗೇ ಆಯ್ತು. ಒಂದು ದಿನಕ್ಕೆ ಡಿಸ್ಚಾರ್ಜ್ ಮಾಡ್ತೀವಿ, ದುಡ್ಡು ಸಿದ್ದ ಮಾಡಿಕೊಳ್ಳಿ ಎಂದು ಭಾರದ ಬಿಲ್ ಕೊಟ್ಟರು. ಹರೀಶನ ತಂದೆ ನನ್ನೆಡೆಗೆ ನೋಡಿದರು. ನಾನು ’ಸರಿ’ ಎಂದು ತಲೆಯಾಡಿಸಿ ಮೊದಲು ಹರೀಶನಿಗೆ ಕರೆ ಮಾಡಿದೆ. ಅವನು “ದುಡ್ಡಿಗೆ ಸ್ವಲ್ಪ ಅಡಚಣೆ ಇದೆ. ನೀನು ಕೊಟ್ಟಿರೋ. ನಾನು ಮುಂದಿನ ವಾರ ಬಂದ ಕೂಡಲೇ ಕೊಡ್ತೀನಿ” ಅಂದ. ಅವನೂ ಓದು ಮುಗಿಸಿ, ಮೂರು ತಿಂಗಳು ಅಲೆದು, ಈಗ ಯಾವುದೋ ಕಾಲೇಜಿನಲ್ಲಿ ಸೇರಿದ್ದಾನೆ. ಆಗಲಿ, ಅಂತ ಚಿತ್ತನಿಗೆ ಕರೆ ಮಾಡಿದೆ. ಮತ್ತೊಮ್ಮೆ ಅದೇ ಮೆಸೇಜು.
ಅದೂ ಇದೂ ಮಾಡ್ತಾ ಕೂತಿದ್ದಾಗ ಚಿತ್ತನ ಕರೆ ಬಂತು “ಏನೋ ಕುಡುಮಿ ಕಾಲ್ ಮಾಡಿದ್ದು? ಎಲ್ಲ ಆರಾಮ್ ತಾನೇ” ಅಂದ. ನಾನು “ಎಲ್ಲಿದ್ಯೋ?” ಅಂದೆ. “ಇಲ್ಲೇ ಹೊಸೂರ್ ಹತ್ತಿರ ಇರೋ ಒಂದು ರೆಸಾರ್ಟ್’ನಲ್ಲಿ ಮಗೂಗೆ ಆರು ತಿಂಗಳ ಬರ್ತ್’ಡೇ ಇಟ್ಕೊಂಡಿದ್ದೆ ಕಣೋ. ಬಿಜಿ ಇದ್ದೆ. ಇರಲಿ ಏನೋ ಫೋನ್ ಮಾಡಿದ್ದು? ನೀನು ಸುಮ್ ಸುಮ್ನೆ ಮಾಡಲ್ವಲ್ಲ?” ಆಪರೇಷನ್ ಬಗ್ಗೆ ಹೇಳ್ದೆ. “ಮೊನ್ನೆ ಕೋವಲಮ್ ಬೀಚ್’ಗೆ ಹೋದಾಗ ನನ್ ಐ-ಪ್ಯಾಡ್ ಮರಳಲ್ಲಿ ಬಿದ್ದು ಎಲ್ಲ ಡೇಟಾ ಹೋಯ್ತು ಕಣೋ. ಈ ವಿಷಯ ತಲೆಯಲ್ಲಿ ಇರಲಿಲ್ಲ. ನಾನು ಮುಂದಿನ ವಾರ ಆ ಕಡೆ ಬಂದು ಅಲ್ಲಿ ಆಸ್ಪತ್ರೇಲಿ ಮಾತಾಡ್ತೀನಿ. ಯೋಚನೆ ಮಾಡಬೇಡ. ಯಾವುದಕ್ಕೂ ನೀನು ದುಡ್ಡು ಕಟ್ಟಿರೋ” ಅಂತಂದು ಫೋನ್ ಇಟ್ಟ.
ಮತ್ತೊಂದು ಬಂಧನ ಕಳಚಿದಂತೆ ಮನಸ್ಸಿಗೆ ಭಾಸವಾಗಿತ್ತು. ಸಿಕ್ಕಾಗ ಮಾತನಾಡಿಸಿದರೂ ಆಸ್ಪತ್ರೆ ವಿಚಾರವಾಗಲಿ, ದುಡ್ಡಿನ ವಿಷಯವಾಗಲಿ ಮಾತಿನಲ್ಲಿ ಬರುವುದಿಲ್ಲ ಎಂಬುದು ಖಾತ್ರಿಯಾಯಿತು. ಕೋವಲಮ್ ಬೀಚ್ ವಿಚಾರವೂ ಬರೀ ಕಥೆ ಅನ್ನಿಸಿತು. ಈಚೆಗೆ ಸಂಪರ್ಕ ಅಂತ ಇರದಿದ್ದರೂ, ಅವನಿಗೆ ಆರು ತಿಂಗಳ ಮಗು ಇದೆ ಅನ್ನೋದು ನನಗೆ ತಿಳಿಯದಿರುವ ವಿಚಾರ.
ಚಿತ್ತ, ಅಲ್ಲ ಚಿತ್ತರಂಜನ್ ಬಗ್ಗೆ ಇನ್ನು ಯೋಚಿಸಿ ಫಲವಿಲ್ಲ.
’ಏನಂತೆ’ ಅಂತ ನೋಡಿದರು ಹರೀಶನ ತಂದೆ. “ಅವನು ಮಾತಾಡಿದ್ದಾನೆ, ಮಿಕ್ಕ ದುಡ್ಡು ನಾನು ಕಟ್ತೀನಿ. ನೀವೇನೂ ಯೋಚನೆ ಮಾಡಬೇಡಿ” ಅಂತ ಸುಳ್ಳಾಡುವುದು ಅನಿವಾರ್ಯವಾಯಿತು. ಇನ್ನೂ ಏನೋ ಗಹನವಾದ ಯೋಚನೆಯಲ್ಲಿದ್ದರು ಅನ್ನಿಸಿತು ಅವರ ಮುಖ ನೋಡಿದಾಗ. ಅಂದು ರಾತ್ರಿಯೂ ಅವರನ್ನು ಬಲವಂತ ಮಾಡಿ ನಮ್ಮ ಮನೆಗೇ ಕರೆದೊಯ್ದಿದ್ದೆ. ರಾತ್ರಿ ಊಟದ ನಂತರ ಎಲ್ಲರೂ ಮಾತನಾಡುತ್ತ ಕುಳಿತಿದ್ದೆವು. ನಾನು ಅವರೊಡನೆ ಇದ್ದು ಸಹಾಯ ಮಾಡಿದ್ದಕ್ಕೆ ಅವರು ಹೃದಯ ತುಂಬಿ ನೀನು ’ನನ್ನ ಮಗ ಇದ್ದ ಹಾಗೆ’ ಎಂದರು.
ಯಾರೊಂದಿಗೂ ಹೆಚ್ಚು ಸಂಪರ್ಕ ಇಟ್ಟುಕೊಳ್ಳದೇ ನನ್ನಷ್ಟಕ್ಕೆ ನಾನು ಇರಬೇಕು ಎಂದುಕೊಂಡಿದ್ದೆ. ನೀರಿನಲ್ಲೇ ಇದ್ದರೂ ನೀರನ್ನು ಅಂಟಿಸಿಕೊಳ್ಳದ ಕಮಲದ ಎಲೆಯಂತೆ ಇರಬೇಕು ಎಂದೆಣಿಸಿದ್ದೆ. ಸಂಬಂಧಗಳು ಹತ್ತಿರವಾದಾಗ, ಸ್ವಲ್ಪ ಎಚ್ಚರ ತಪ್ಪಿದರೂ ಆ ಸಂಬಂಧಗಳು ಸೂಕ್ಷ್ಮವಾಗಿ ನಂತರ ಹಳಸುತ್ತವೆ. ನನಗದು ಬೇಕಿರಲಿಲ್ಲ. ಇವೆಲ್ಲ ನರಚಿತ್ತ, ಆದರೆ ಹರಿಚಿತ್ತವೇ ಬೇರೆ.
ಬರೀ ಆಸ್ಪತ್ರೆ, ಆರೋಗ್ಯ ಅದೂ ಇದೂ ಮಾತು ಏಕೆ ಅಂತ ಅಮ್ಮ ಹರೀಶನ ಬಗ್ಗೆ ಹೊರಳಿಸಿ ಸೂಕ್ಷ್ಮವಾಗಿ “ನನ್ನಣ್ಣನ ಮಗಳ ಓದೂ ಮುಗಿಯಿತು. ಹರೀಶನೂ ಕೆಲಸಕ್ಕೆ ಸೇರಿದ್ದಾನೆ ಅಂತ ಗೊತ್ತಾಯ್ತು. ನಿಮ್ಮ ಮನೆಯವರೂ ಬಂದು ಸುಧಾರಿಸಿಕೊಂಡ ಮೇಲೆ, ಒಮ್ಮೆ ತುಮಕೂರಿನಿಂದ ಅವರುಗಳನ್ನ ಕರೆಸಲೇ? ನಿಮ್ಮ ಮನಸ್ಸಿಗೂ ಬಂದರೆ ಮುಂದುವರೆಯಬಹುದು. ದಾಕ್ಷಿಣ್ಯ ಎಲ್ಲ ಇಟ್ಟುಕೊಳ್ಳಬೇಡೀ.” ಅಂದರು. ಕೆಲವೊಮ್ಮೆ ಅನ್ನಿಸುತ್ತೆ, ಇಂತಹ ಸಮಯದಲ್ಲಿ ಇಂತಿಂತಹ ಮಾತು ಆಡಬಾರದಿತ್ತು ಅಂತ. ಆದರೆ ಮನಸ್ಸು ಬೇರೆಡೆಗೆ ಹರಿಸಲು ಅಥವಾ ಸಾಂತ್ವನ ಸಿಕ್ಕಲು ಇಂತಹ ವಿಚಾರಗಳು ಸಹಾಯಕವೂ ಆಗುತ್ತದೆ. ಅಮ್ಮನ ವಿಚಾರಧಾರೆ ಸರಿಯಾಗಿತ್ತು ಎಂದುಕೊಂಡು ಆಕೆಯತ್ತ ನೋಡಿ ಕಿರುನಗೆ ಸೂಸಿ, ಇತ್ತ ಕಡೆ ತಿರುಗಿದೆ. ಆದರೆ ಹರಿಚಿತ್ತವೇ ಬೇರೆಯಾಗಿತ್ತು ಮತ್ತೊಮ್ಮೆ !
ಹರೀಶನ ತಂದೆಯವರ ಕಣ್ಣಲ್ಲಿ ಧಾರಾಕಾರವಾಗಿ ನೀರು ಸುರಿಯುತ್ತಿತ್ತು. ನಮಗೆಲ್ಲ ಒಂದು ಕ್ಷಣ ಹೆದರಿಕೆಯೇ ಆಯ್ತು. ಆಡಬಾರದ ಮಾತಂತೂ ಆಡಿಲ್ಲ ಎಂದು ನಮಗೆ ಅನ್ನಿಸಿದ್ದರೂ ಏನೋ ಅಳುಕು. ಒಬ್ಬರ ಮುಖ ಒಬ್ಬರು ನೋಡಿಕೊಂಡೆವು. ಸುಮ್ಮನಿರಬಾರದಿತ್ತೇ ಅನ್ನೋ ರೀತಿ ಅಮ್ಮನ ಕಡೆ ಅಪ್ಪ ನೋಡುತ್ತಿದ್ದರು. ನಂತರ ಅಪ್ಪ ಅವರನ್ನು ಸಂತೈಸಿ ನನಗೆ ನೀರು ತರಲು ಹೇಳಿದರು. ಸುಮಾರು ಹೊತ್ತು ಮಾತನಾಡಲೆಂದು ಹೋದವರು ಬಿಕ್ಕಳಿಸುತ್ತ ಸುಮ್ಮನಾಗುತ್ತಿದ್ದರು. ಕಡೆಗೂ ಅವರೇ ಸಂತೈಸಿಕೊಂಡು “ನಿಮ್ಮ ಮುಂದೆ ತಲೆ ಎತ್ತಲೂ ನನಗೆ ನಾಚಿಕೆ ಆಗುತ್ತಿದೆ. ಮೈಸೂರಿಗೆ ಹೋದ ಹರೀಶ ಕಾಲೇಜಿಗೇನೋ ಸೇರಿದ. ಕೆಲಸಕ್ಕೆ ಸೇರೋ ಮುನ್ನವೇ, ಎಮ್.ಎಸ್ಸಿ’ಯ ಅವನ ಸಹಪಾಠಿಯನ್ನು ಪ್ರೀತಿಸಿ, ಮದುವೆಯೂ ಮಾಡಿಕೊಂಡು ಎರಡು ತಿಂಗಳ ಮಗುವಿನ ತಂದೆಯಾಗಿದ್ದಾನೆ. ಈ ಯಾವ ವಿಚಾರವನ್ನೂ ನಮಗೆ ಹೇಳದೆ ಮುಚ್ಚಿಟ್ಟಿದ್ದ. ಇತ್ತೀಚೆಗೆ ನಮಗೆ ಯಾರಿಂದಲೋ ವಿಷಯ ತಿಳಿದು ಖುದ್ದಾಗಿ ನಾವೇ ಹೋಗಿದ್ದೆವು. ನಿಜವೇ ಅದು. ಮೊದಲಿಂದಲೂ ಹೆಚ್ಚಿಗೆ ಮಾತಿಲ್ಲ ಕಥೆಯಿಲ್ಲ. ಗುಟ್ಟಿನ ಗೂಡಿನಂತೇ ಇದ್ದ. ಆದರೆ ಈ ಗುಟ್ಟು ಇಷ್ಟು ಬೆಳೆದು ದೊಡ್ಡದಾಗಿ ತಲೆತಗ್ಗಿಸೋ ಹಾಗಾಗುತ್ತದೆ ಎಂದೆಣಿಸಿರಲಿಲ್ಲ. ಆ ಹುಡುಗಿ ಬಗ್ಗೆ ನಮಗೆ ಬೇಸರವಿಲ್ಲ, ಒಳ್ಳೇ ಹುಡುಗಿ. ನಮ್ಮನ್ನು ಚೆನ್ನಾಗಿಯೇ ಮಾತನಾಡಿಸಿದಳು. ನಮ್ಮಿಬ್ಬರನ್ನು ನೋಡಬೇಕೆಂದು ಆಕೆ ಹೇಳಿದ್ದರೂ ಇಂದು-ನಾಳೆ ಅಂತ ಇವನೇ ಮುಂದಕ್ಕೆ ಹಾಕಿದ್ದಾನೆ. ಮಗು ಬಂಗಾರದ ಹಾಗಿದೆ. ನಮ್ ಪದಾರ್ಥವೇ ಸರಿ ಇಲ್ಲ ಅಷ್ಟೇ ! ಇದ್ದೊಬ್ಬ ಮಗನ ಮದುವೆ ನೋಡುವ ಸೌಭಾಗ್ಯವೂ ನಮಗಿಲ್ಲ. ಎಲ್ಲ ಅವನಿಚ್ಚೆ. ನಾವು ನಿಮಿತ್ತ ಮಾತ್ರ.”
ನರಚಿತ್ತಕೇ ಬಂದದ್ದೂ ಲವಲೇಶ ನೆಡೆಯದೂ ಹರಿಚಿತ್ತ ಸತ್ಯ . ಮೂರೂ ಸ್ನೇಹಿತರನ್ನು ಕಳೆದುಕೊಂಡಿದ್ದೆ.

***

“ಅಪ್ಪಾ! ಇಲ್ಲಿ ಬನ್ನಿ” ಅನ್ನೋ ಕೂಗಿಗೆ ಧಿಗ್ಗನೆ ಎಚ್ಚರವಾದ ಹಾಗಾಯ್ತು !
ಸಮುದ್ರದ ತೀರದಲ್ಲಿ ಕೂತು ಅಲೆಗಳನ್ನು ನೋಡುತ್ತ ನೆನಪಿನ ಅಲೆಗಳಲ್ಲಿ ತೇಲಿದ್ದ ನನ್ನನ್ನು ಎಚ್ಚರಿಸಿದ್ದು ನನ್ನ ಐದು ವರ್ಷದ ಮಗರಾಯನ ಕೂಗು. ಹೌದು, ನನ್ನ ಮದುವೆಯೂ ಆಗಿತ್ತು, ಇವರ್ಯಾರೂ ಅಂದು ಬಂದಿರಲಿಲ್ಲ.
ಮಗನನ್ನು ಕರೆದುಕೊಂಡು ಬಂದ ಪತ್ನಿ ನುಡಿದಳು “ಸ್ನೇಹದ ಸಂಬಂಧಗಳು ಯಾವಾಗಲೂ ಭೂಮಿಗೇ ಅಂಟಿಕೊಂಡು ನಿಂತ ಪರ್ವತದಂತೆ ಇರುವುದಿಲ್ಲ. ಕೆಲವೊಮ್ಮೆ, ಈ ಸ್ನೇಹದ ಸಂಬಂಧಗಳು ನೀರಿನ ಅಲೆಗಳಂತೆ. ಬರುತ್ತವೆ ಹೋಗುತ್ತವೆ. ಈಗ ತಾನೇ ಅಲೆಯೊಡನೆ ಸ್ನೇಹ ಮಾಡಿಕೊಂಡೆ ಆಗಲೇ ದೂರಾಯ್ತೇ ಎಂದು ಮರಳಿನ ಕಣ ಕೊರಗುವುದಿಲ್ಲ. ಹಾಗೆಂದು ಯಾವಾಗಲೂ ತಮ್ಮೊಂದಿಗೇ ಇರಬೇಕು ಎಂದು ಬಯಸೋದು ತಪ್ಪು. ನಿಂತ ನೀರಿನಿಂದ ಕೊಚ್ಚೆಯೇ ಹೊರತು ಹೊಸತನ ಇರುವುದಿಲ್ಲ. ಅವರುಗಳ ನೆನಪು ಇರಲಿ ಆದರೆ ಅವರದೇ ನೆನಪಲ್ಲಿ ನೀವಿರಬೇಡಿ. ಅವರನನ್ನು ನೆನೆಯಿರಿ ಆದರೆ ನೆನಪಲ್ಲೇ ಮಿಂದು ಮುಳುಗದಿರಿ. ಅದರಿಂದ ಏನೂ ಪ್ರಯೋಜನವಿಲ್ಲ ಬದಲಿಗೆ ಇರುವ ಸುಖದಿಂದಲೂ ವಂಚಿತರಾಗ್ತೀರಾ. ಹೊರಡಿ ಕೂಸಿನ ಜೊತೆ ನೀರಲ್ಲಿ ಆಟ ಆಡಿ ಬನ್ನಿ”.
ಮನಸ್ಸಿಗೆ ಮೆತ್ತುಕೊಂಡಿದ್ದ ಕಹಿ ನೆನಪುಗಳನ್ನು, ಬಟ್ಟೆಗೆ ಅಂಟಿಕೊಂಡಿದ್ದ ಮರಳಿನ ಕಣಗಳನ್ನು ಕೊಡವಿಕೊಂಡ ಹಾಗೆ ಕೊಡವಿ ಹೊಸಜೀವನ ಆರಂಭಿಸುತ್ತೇನೆ ಎಂದು ನಿರ್ಧಾರ ಮಾಡಿಕೊಳ್ಳುತ್ತ ಎದ್ದು ನಿಂತೆ. ಭೂತವನ್ನು ಹಿಂದಕ್ಕೆ ಹಾಕಿ, ವರ್ತಮಾನವನ್ನು ನೋಡಿ ಕಿರುನಗೆ ನಕ್ಕು, ಭವಿಷ್ಯದ ಕೈ ಹಿಡಿದು ನೀರಿನೆಡೆಗೆ ನೆಡೆದೆ ….
 

‍ಲೇಖಕರು G

19 June, 2014

2 Comments

  1. Kiran

    A good story, but I saw only for “Sathya” to really kill the link and the reasons for other two haven’t come strong enough to break ties..

  2. Srinath

    DhanyavaadagaLu Kiran … ‘Sathya’nadu nEravaada irita, haagaagi oMdE saari hOgibiDabahudu.
    “Chitta” barI maatugaara. vaagdaana neeDi neeDi pooraisade naMbikedrOha maaDuttaane. nODugarige arivaaguvudilla aadare anubhavisidavarigE gottu.
    “hari” aliyaas harisha … taMde taayige drOha, tanna taayiya naMbikege drOha. nEravaagi “nanna” jeevanakke hoDeta beeLadiddaroo yaara haMgoo bEDaveMdavanannu aarthikavaagiyoo hoDedaata.
    Respect your views on the story for sure. Thanks Kiran.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading