ಜಯಶ್ರೀ ಬಿ ಕದ್ರಿ
‘ಹುಚ್ಚು ಖೋಡಿ ಮನಸು ಅದು ಹದಿನಾರರ ವಯಸು’ ಹೀಗೆ ಸಾಗುತ್ತದೆ ಕವಿತೆಯೊಂದರ ಸೊಲ್ಲು. ಹದಿಹರಯ, ಟೀನೇಜ್ ಎನ್ನುವುದೊಂದು ಬದುಕನ್ನೇ ತಲ್ಲಣಗೊಳಿಸಬಹುದಾದ, ಇಲ್ಲವೇ ಸಾಧನೆಯ ಅದಿಪಾಯವಾಗಬಹುದಾದ ಅತಿ ಸೂಕ್ಶ್ಮ ಕಾಲಘಟ್ಟವೇ ಸರಿ. ಕನ್ನಡಿಯೆದುರು ನಿಂತು ತನ್ನ ಅಂದ ತಾನೇ ಮೆಚ್ಚಿಕೊಳ್ಳುವ,ಇಲ್ಲವಾದಲ್ಲಿ ಒಂದು ಪಿಂಪಲ್ ಗೆ ತಲೆಕೆಡಿಸಿಕೊಳ್ಳುವ, ಗೆಳೆಯ ಗೆಳತಿಯರ ದಂಡು ಕಟ್ಟಿಕೊಂಡು ಉತ್ಸಾಹದ ಚಿಲುಮೆಯಂತಿರುವ, ಪ್ರಾಧ್ಯಾಪಕರನ್ನು ಗೋಳುಹುಯ್ದುಕೊಳ್ಳುವ ಇಲ್ಲವೇ ಅವರನ್ನು ಆರಾಧಿಸುವ , ಅವಕಾಶವಿದ್ದಲ್ಲಿ ತಮ್ಮ ಜೀವನ ಸಂಗಾತಿಯನ್ನು ಅಲ್ಲೇ ಕಂಡುಕೊಳ್ಳುವ ಇಲ್ಲವೇ ದೇವದಾಸ್ ನಂತೆ ವಿರಹಿಯಾಗುವ.. ಹೀಗೆ ಕಾಲೇಜು ಜೀವನವೆಂದರೆ ಅದೊಂದು ಸುವರ್ಣ ಕಾಲ.
ಅನೇಕ ವರ್ಷಗಳಿಂದ ವಿದ್ಯಾಥರ್ಿಗಳ ಒಡನಾಟದಲ್ಲಿರುವ ಕಾರಣ ಅವರ ಬಗ್ಗೆ, ಅವರ ಎಳೆಯ ಮನಸ್ಸುಗಳ ಬಗ್ಗೆ ಬರೆಯಬಹುದೇನೋ ಎನ್ನಿಸುತ್ತದೆ. ಕಾಲೇಜು ಎನ್ನುವುದು ಒಂದು ರೀತಿಯ ಭ್ರಮೆ, ಆದರ್ಶಗಳು, ಕಲ್ಪನೆ, ಹುಮ್ಮಸ್ಸು , ಯೌವನ ತುಂಬಿದ ರಮ್ಯ ಜಗತ್ತು. ತಾಯ್ತಂದೆಯರಷ್ಟು ಮುಚ್ಚಟೆಯಲ್ಲದಿದ್ದರೂ ಹೆಚ್ಚುಕಡಿಮೆ ಅವರಷ್ಟೇ ಪ್ರೀತಿಯಿಂದ ಕಾಪಾಡುವ ಉಪನ್ಯಾಸಕ ವರ್ಗ. ಹೀಗಾಗಿ ಈ ತರುಣ ತರುಣಿಯರಿಗೆ ವಾಸ್ತವ ಜಗತ್ತಿನ ಅನುಭವ ಕಡಿಮೆ.ಹೀಗಿದ್ದರೂ ಆಗೊಮ್ಮೆ ಈಗೊಮ್ಮೆ ವಾಸ್ತವ ಅವರ ಎದುರು ಧುತ್ತನೆ ಬಂದು ನಿಲ್ಲುವುದಿದೆ. ಉದಾಹರಣೆಗೆ ಆಥರ್ಿಕ ಸಮಸ್ಯೆಗಳು, ಕೌಟುಂಬಿಕ ಕಲಹದ ಪರಿಣಾಮ,ಪ್ರಣಯ ಪ್ರಸಂಗಗಳು, ಯಾವುದೋ ಕೇಸಿನಲ್ಲಿ ಸಿಕ್ಕಿ ಹಾಕಿಕೊಳ್ಳುವುದು.. ಹೀಗೆ. ಕಾಲೇಜಿನ ಬದುಕು ಕೂಡ ಸಾಮಾಜಿಕ ಶ್ರೇಣೀಕರಣದ ಪ್ರತಿಫಲನವೇ ಆಗಿರುವುದರಿಂದ ಅದೊಂದು ಪುಟ್ಟ ಸಮಾಜ.
ಎಷ್ಟೋ ಬಡ ವಿದ್ಯಾರ್ಥಿಗಳಿಗೆ ಕಾಲೇಜೆಂದರೆ ಆಶಾವಾದದ ಪ್ರತೀಕ. ಹಗಲಿರುಳು ಓದಿ ತಮ್ಮ ಭವಿತವ್ಯವನ್ನು ರೂಪಿಸುವ ಗುಡಿ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅದೆಷ್ಟೋ ಸಂಸ್ಠೆಗಳಲ್ಲಿ ಕಡಿಮೆ ಶುಲ್ಕ, ಉಚಿತ ವಿದ್ಯಾಭ್ಯಾಸ ಹೀಗೆ ಸೌಲಭ್ಯಗಳೂ ಇವೆ. ಅದನ್ನು ಸರಿಯಾಗಿ ಬಳಸಿಕೊಂಡು ಉಳಿದ ಆಮಿಷಗಳಿಗೆ ಬಲಿಯಾಗದೆ ತಮ್ಮ ಬಾಳನ್ನು ಕಟ್ಟಿಕೊಳ್ಳುವವರು ಅದೆಷ್ಟೋ. ಕಲೆ, ಸಾಹಿತ್ಯ, ಸಂಸ್ಕೃತಿ ಇತ್ಯಾದಿ ತಮ್ಮ ಆಸಕ್ತಿಯ ಕ್ಶೇತ್ರಗಳನ್ನು ಗುರುತಿಸಿಕೊಳ್ಳುವ, ಪ್ರತಿಭೆಯ ಮೊಳಕೆಗೆ ನೀರೆರೆಯುವ ತಾಣವೂ ಅದೇ.ಅದೇ ಹೊತ್ತಿಗೆ ಗುಂಪು ಮಾತ್ಸರ್ಯ, ವ್ಯಕ್ತಿಗತ ದ್ವೇಷ, ಗಾಸಿಪ್, ಸಣ್ಣ ಮನಸ್ಸಿನ ಚುಚ್ಚು ಮಾತುಗಳು, ನೊಂದು ಸಾಯುವಷ್ಟು ಯಮಯಾತನೆ ಪಡುವುದೂ ಅಲ್ಲಿಯೇ.
ವಿದ್ಯಾರ್ಥಿಗಳು ಹೆಚ್ಹಾಗಿ ಹಚ್ಚಿಕೊಳ್ಳುವುದು ಅವರ ಸ್ನೇಹಿತರನ್ನು. ಒಂದು ವರ್ಷದ ಆಪ್ತ ಮಿತ್ರ ಅಥವಾ ಗೆಳತಿಯರು ಮರು ವರ್ಷದಲ್ಲಿ ಬದ್ಧ ವೈರಿಯಾಗುವುದೂ ಸಾಮಾನ್ಯ. ಎಲ್ಲರೂ ಹಾಗೆಂದಲ್ಲ. ಓದಿನಲ್ಲಿ, ವಿವೇಕದಲ್ಲಿ, ಜಾಣ್ಮೆಯಲ್ಲಿ ಒಬ್ಬರನ್ನೊಬ್ಬರು ಮೀರಿಸುತ್ತ ಆದರ್ಶ ಸ್ನೇಹಿತರಾಗಿ ಜೀವನದುದ್ದಕ್ಕೂ ಅದನ್ನುಳಿಸಿಕೊಳ್ಳುವವರಿದ್ದಾರೆ. ಫ್ರೆಂಡ್ ಎಂದು ಹೆಳಿಕೊಳ್ಳುತ್ತಲೇ ಅವರಿವರ ಸೀಕ್ರೆಟ್ ಗಳನ್ನು ಕ್ಯಾಂಪಸ್ ಇಡೀ ಹೇಳಿಕೊಂಡು ಬರುವ ಕಿತಾಪತಿ ಮಹರಾಯಗಳಿಗೂ ಕೊರತೆಯಿಲ್ಲ.ಇನ್ನು ಮಾನಸಿಕ ಒತ್ತಡಗಳು, ಮನೋದೈಹಿಕ ಕಾಯಿಲೆಗಳ ಬೀಜ ಕಾಲೇಜಿನಲ್ಲಿಯೇ ಉಗಮವಾಗುತ್ತದೆ ಎಂದರೂ ಬಹುಶ ತಪ್ಪಾಗಲಾರದು. ಮಾರ್ಕ್ಸ್ಸ ತೆಗೆಯಬೇಕಾದ ಅನಿವಾರ್ಯತೆ, ಸ್ಪರ್ಧೆಯ ವಾತಾವರಣ, ಒಳ್ಳೆ ಉದ್ಯೋಗ ಸಿಗುತ್ತದೋ ಇಲ್ಲವೋ ಎನ್ನುವ ಯೋಚನೆ, ಆರಾಧನೆ, ಆತಂಕ, ಚಿಂತೆ.. ಹೀಗೆ. ಇವೆಲ್ಲವನ್ನೂ ಸಮತೋಲನದಲ್ಲಿಟ್ಟುಕೊಂಡು ವಿದ್ಯಾರ್ಥಿ ಜೀವನವನ್ನು ಸುಗಮವಾಗಿ, ಸುಲಲಿತವಾಗಿ ಕಳೆಯಲೂ ಸಾಧ್ಯ. ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸುತ್ತ ಟ್ರೋಫಿಗಳನ್ನು ಗಳಿಸುತ್ತ, ಹೆಚ್ಚಿನ ಅಂಕಗಳನ್ನೂ ಗಳಿಸುತ್ತ ಇರುವ ವಿದ್ಯಾರ್ಥಿಗಳು ಸಾಮಾನ್ಯವಾಗಿ ಎಲ್ಲರ ಕಣ್ಮಣಿಯಾಗಿರುತ್ತಾರೆ.
ಹದಿಹರಯವೆನ್ನುವುದು ಹೆಣ್ಣು ಗಂಡಿಗೆ ಸಮಾನವೇ ಆದರೂ ಸಾಮಾಜಿಕ ನಿಯಮಗಳು, ಕಟ್ಟು ಕಟ್ಟಳೆಗಳು ಒಬ್ಬಳು ಹುಡುಗಿಯ ಲವಲವಿಕೆಯನ್ನು ನಿಧಾನವಾಗಿ, ಅಷ್ಟೇ ವ್ಯವಸ್ಠಿತವಾಗಿ ಹತ್ತಿಕ್ಕುತ್ತ, ಆಕೆಯನ್ನು ಸದ್ಗುಣ, ಸುಶೀಲ, ನಯವಂತಿಕೆ ತುಂಬಿರುವ ವಿಧೇಯ (ಉಸಿರೆತ್ತದೆ ಇರುವುದೆಂದು ಬೇಕಾದರೆ ಅರ್ಥೈಸಿಕೊಳ್ಳಬಹುದು) ಲಲನೆಯಾಗಿ ಪರಿವರ್ತಿಸುತ್ತದೆ. “ಆರು ಗಂಟೆಯ ಒಳಗೆ ಮನೆಗೆ ತಲುಪಬೇಕಮ್ಮ” ಎನ್ನುವ ಮುದ್ದಿನ ಮಾತಿನೊಂದಿಗೆಯೇ ನಮ್ಮ ಮಕ್ಕಳನ್ನು ಹೆಚ್ಚು ಸೋಶಿಯಲ್ ಆಗಿರದೇ ಇರಲು, ಫೋನ್ ನಲ್ಲಿ ಹೆಚ್ಚು ಮಾತನಾಡದೇ ಇರಲು, ಫಿಲ್ಮ್ ಗಳನ್ನು ನೋಡದೇ ಇರಲು, ಪುಸ್ತಕಗಳಲ್ಲಿಯೇ ಮುಳುಗಿರಲು ಪ್ರೇರೇಪಿಸುತ್ತೇವೆ. ಸಂಸ್ಕೃತಿಯ ಹೆಸರಿನಲ್ಲಿ ಧರ್ಮ, ಪರಂಪರೆಯ ಮೌಲ್ಯಗಳನ್ನು ಅರೆದು ಕುಡಿಸುತ್ತೇವೆ. ಪಿತೃ ಪ್ರಧಾನ ಮೌಲ್ಯಗಳೇ ನಮ್ಮ ಜಾಹೀರಾತುಗಳಲ್ಲಿ, ಸೀರಿಯಲ್ ಗಳಲ್ಲಿ ರಾರಾಜಿಸುವುದನ್ನು ನೋಡಿದಾಗ ಗ್ಲೋಬಲೈಸೇಶನ್ ನಿಂದಾಗಿ ನಿಜವಾಗಿಯೂ ಏನಾದರೂ ಸುಧಾರಣೆ ಆಗಿದೆಯೇ ಎನಿಸುತ್ತದೆ.







ಬರಹ ಹಿಡಿಸಿತು. ಹಸಿ ಬಿಸಿ, ಹರೆಯದ, ಕಿಶೋರ ವಯಸಿನ ನಡುವಳಿಕೆಗಳ ಕುರಿತು, ಪಾಲಕರ ತಲ್ಲಣಗಳ ಕಾಳಜಿ ಪರ ಬರವಣಿಗೆ, ಆ ದಿನಗಳ ಒಳಗಿಳಿದು ಆಸ್ವಾದಿಸುವಷ್ಟರಲ್ಲಿ , ಬದುಕಿನ ದಾರಿಗಳನ್ನು ಕಟ್ಟಿಕೊಂಡು ಬಿಟ್ಟಿರುತ್ತೇವೆ. ನಿಜ ಹೇಳಬೇಕೆಂದರೆ ಬದುಕಿನ ಅತ್ಯಂತ ಸುಖಿ ದಿನಗಳವು. ಬಹಳಷ್ಟು ಹೃದಯಗಳು ಅದನ್ನು ಅರ್ಥಮಾಡಿಕೊಳ್ಳುವುದೇ ಇಲ್ಲ.
nice..
Aasaktidayaka baraha