
ರಾಜಾರಾಂ ತಲ್ಲೂರು
ಕರ್ನಾಟಕದಲ್ಲಿ ಪ್ರತಿಪಕ್ಷವಾಗಿ ಕುಳಿತಿರುವ ಭಾರತೀಯ ಜನತಾ ಪಕ್ಷಕ್ಕೆ ಈಗ ಬೀಸುತ್ತಿರುವ ಗಾಳಿಯ ದಿಕ್ಕಿಗೆ ತನ್ನ ದೋಣಿಯ ಹಾಯಿಯನ್ನುತಿರುಗಿಸಿಕೊಂಡು ದಡಸೇರುವ ದರ್ದು. ಆ ಗಾಳಿ ತಮ್ಮ ಗಮ್ಯದ ಕಡೆಗೇ ಬೀಸುತ್ತಿದೆ ಎಂದು ಅವರಿಗೆ ಕರ್ಣಪಿಶಾಚಿ ಆದೇಶ ಆದಂತಿದೆ.
ಆದರೆ ಅಲ್ಲೊಂದು ವೈರುದ್ಧ್ಯವಿದೆ. ಆ ಪಕ್ಷಕ್ಕೆ ತಳಮಟ್ಟದಲ್ಲಿ ಬಲವಾದ ಸಂಘಟನೆ ಇದೆ, ಕಾರ್ಯಕರ್ತರಿದ್ದಾರೆ, ಬಗೆಬಗೆಯ ಚಾಕಚಕ್ಯತೆಗಳಿಂದೊಡಗೂಡಿದ ನಿಪುಣರ ಪರಿವಾರವಿದೆ; ಮೇಲೊಂದು ನಾಗಪುರದ ಗರ್ಭಗುಡಿಯೂ ಇದೆ. ಆದರೆ ಕಳೆದ ನಾಲ್ಕೈದು ವರ್ಷಗಳಿಂದಪಕ್ಷಕ್ಕೆ ರಾಜ್ಯದಲ್ಲಿ ಬೇರು ತಲುಪಬಲ್ಲ ಕೊಡಿ ನಾಯಕತ್ವದ ಕೊರತೆ ಇತ್ತು. ಆ ಜಾಗವನ್ನು ಯಾವತ್ತಿಗೂ ತುಂಬಿಕೊಂಡೇ ಇದ್ದ ಯಡಿಯೂರಪ್ಪನವರುತಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಗರಣಗಳ ಸುಳಿಗೆ ಸಿಕ್ಕು ಜೇಲು ಸೇರಿದ ಬಳಿಕ ಮೊನ್ನೆ ಮೊನ್ನೆ ಪುನಃ ಪಕ್ಷಾಧ್ಯಕ್ಷರಾಗಿ ವಾಪಸ್ ಬರುವತನಕವೂ ಪಕ್ಷಕ್ಕೆ ಈ ಕೊರತೆ ಕಾಡುತ್ತಿತ್ತು.
ಎರಡು ವರ್ಷಗಳ ಹಿಂದೆ ಮೋದಿಯಲೆಯಲ್ಲಿ ರಾಜ್ಯ, ವಂಶ, ವರ್ಗ, ಗಣ, ಕುಟುಂಬ, ಜಾತಿ, ಪ್ರಬೇದಗಳೆಲ್ಲವೂ ಸಮಗ್ರವಾಗಿ ಮೇಳೈಸಿ, ಈಗ ಯಡಿಯೂರಪ್ಪನವರೇನೋ ವಾಪಸ್ ಬಂದಿದ್ದಾರೆ, ಅವರ ಜೊತೆಗೆ ಅವರನ್ನು ಪಟ್ಟಕ್ಕೂ ಅಟ್ಟಕ್ಕೂ ಏರಿಸಿದ ಗುಂಪನ್ನೂ ಕರೆತಂದಿದ್ದಾರೆ. ಒಂದಷ್ಟು ಕಾಲ ಕೊಡಿ ನಾಯಕತ್ವ ಇಲ್ಲದೇ ವ್ಯವಹರಿಸುವುದು ಅಭ್ಯಾಸ ಆದಂತಿರುವ ಬಿಜೆಪಿಗೆ ಈಗ ಯಡಿಯೂರಪ್ಪ ಪಕ್ಷದ ಮುಂಚೂಣಿ ವಹಿಸಿಕೊಂಡ
ಮೇಲೆಹೊಸದೊಂದು ಸಮಸ್ಯೆ ಎದುರಾಗಿದೆ. ಈ ತುದಿ ನಾಯಕತ್ವಕ್ಕೆ ಹತ್ತಿರ ಇರುವ ಕಾರ್ಯಕರ್ತರ ಗುಂಪಿಗೂ, ಬಹುಸಂಖ್ಯಾಕವಾದ ಪಕ್ಷದ ಪರಿವಾರಕ್ಕೂಎಣ್ಣೆ-ಸೀಗೆ ಸಂಬಂಧವಿದೆ. ಯಡಿಯೂರಪ್ಪ ಅವರಿಗೆ ಆಪ್ತರಾದ ಸಂಸದೆ ಶೋಭಾ ಕಾರಂದ್ಲಾಜೆ ಅವರ ಹಸ್ತಕ್ಷೇಪಗಳು ಪರಿವಾರಕ್ಕೆ ಪಥ್ಯವಾಗುತ್ತಿಲ್ಲ. ಜೊತೆಜೊತೆಗೇ, ಯಡಿಯೂರಪ್ಪ ಇಲ್ಲದೆ 150 ಎಟುಕದೇನೋ ಎಂಬ ಸಂಶಯವೂ ಕಾಡುತ್ತಿದೆ.
ಹಾಗಾಗಿ ಬಿಜೆಪಿಯದು ಈಗ “ಹಯವದನಾವತಾರ”. ಗೆಲ್ಲಬಲ್ಲವರ ತಲೆಗೆ– ಗೆಲ್ಲಬೇಕಾದವರ ದೇಹ ಸೇರಿಸಿ ಪರಿಪೂರ್ಣಗೊಳ್ಳುವ ಕಾತರ.
ಈ ಕಾತರದ ನಡುವೆಯೂ ಪರಿವಾರಕ್ಕೆ ಇಲ್ಲೊಂದು “ಕರ್ಮ ಜಿಜ್ಞಾಸೆ” ಇದೆ. ಯಡಿಯೂರಪ್ಪ ಜೊತೆ ಇರುವ ಗೆಲ್ಲಬಲ್ಲವರ ಚರಿತ್ರೆಯು ತಾವು ವಿಭಿನ್ನ ಎಂದುಕೊಂಡಿರುವ ಪರಿವಾರಕ್ಕೆ ಅಪಥ್ಯ; ಗಂಟಲಲ್ಲಿ ಇಳಿಯದ ಕಡುಬು. ಆದರೂ ಒಮ್ಮೆ ಇಳಿದು ಹೊಟ್ಟೆ ಸೇರಿತೆಂದರೆ ಎಂತಹದನ್ನೂ ಜೀರ್ಣ ಮಾಡಿಕೊಳ್ಳುವ ಕ್ರಿಯೆಯಲ್ಲಿ ನಿಪುಣರವರು. ಹಾಗಾಗಿ ಈಗ ಒಲ್ಲದ ಕಡುಬನ್ನು ಗಂಟಲಲ್ಲಿ ಇಳಿಸುವುದಕ್ಕೆ ಯಾವ ತುಪ್ಪ ಸವರಬೇಕು, ಯಾವ ನೀರು ಸುರಿಯಬೇಕು ಎಂಬ ಆತಂಕದ ದಿನಗಳನ್ನು ಬಿಜೆಪಿ ಎದುರಿಸುತ್ತಿದೆ.
ಮೇಲ್ನೋಟಕ್ಕೆ ಇದು ‘ಓ ಅಲ್ಲೂ ಕಾಗೆ ಕುಳಿತಿರಬೇಕು’ ಅನ್ನಿಸುತ್ತದಾದರೂ, ಒಳಗಿಣುಕಿ ನೋಡಿದರೆ ಅದು ಈ ನುಂಗುವಿಕೆ ಸಹಜಕ್ರಿಯೆ ಎಂದು ಹೊರಜಗತ್ತಿಗೆ ತೋರಿಸಿಕೊಳ್ಳುವ ಹಠಯೋಗ ಎಂದು ಸ್ಪಷ್ಟವಾಗುತ್ತದೆ.




ಅಹ್ಹಹ್ಹಾ…
ಸ್ವಾರಸ್ಯಕರ ಬರವಣಿಗೆ…