ಭಾನುಕುಮಾರ ಆರ್
ಮೊನ್ನೆ ಮೊನ್ನೆ ಓದಿದ್ದ ಆನ್ ಫ್ರಾಂಕ್ ಎಂಬ ಹದಿಮೂರ ಬಾಲೆ ಬರೆದಿದ್ದ ‘The Diary Of A Young Girl’ ಎಂಬ ಪುಸ್ತಕದ ಗುಂಗಿಂದ ಇನ್ನೂ ಹೊರ ಬರಲಿಕ್ಕೆ ಆಗಿರಲಿಲ್ಲ
ಯಾವುದಾದರೊಂದು ಪುಸ್ತಕ ಓದಿದ ಮೇಲೆ ಅದರಲ್ಲಿನ ಪಾತ್ರಗಳು, ಕಥೆ, ಅಥವಾ ಸನ್ನಿವೇಶಗಳು ನಮ್ಮನ್ನ ಇನ್ನಿಲ್ಲದಂತೆ ಕಾಡಿದ ಅನುಭವ ಇರುತ್ತೆ. ಆದರೆ ಇದೆ ಮೊದಲ ಬಾರಿಗೆ ನನಗೆ ಈ ಪುಸ್ತಕವನ್ನು ಓದಿದ ಮೇಲೆ ಬರೆಹಗಾರ್ತಿ ಚಿಕ್ಕ ಹುಡುಗಿ ಆನ್ ಫ್ರಾಂಕ್ ಇನ್ನಿಲ್ಲದಂತೆ ಕಾಡಿದಳು. ಆದರೆ ನಾನು ಚಿಕ್ಕ ಹುಡುಗಿ ಎಂಬುದನ್ನು ಎಲ್ಲಿಯೂ ಆಕೆ ಒಪ್ಪೊಕೊಳ್ಳಲ್ಲ, ಹಾಗೆ ತನ್ನ ಬರೆವಣಿಗೆಯ ಚಾತುರ್ಯದಲ್ಲೂ ಬಾಲ್ಯತನವನ್ನು ಪ್ರದರ್ಶಿಸಿಲ್ಲ.
ಕುತೂಹಲಕ್ಕೆ ಗೂಗಲ್ ನಲ್ಲಿ ಈ ಪುಸ್ತಕದ ಬಗ್ಗೆ ಒಂದಷ್ಟು ಹುಡುಕಿದಾಗಿ ಅದೆಷ್ಟೊಂದು ವಿಮರ್ಶೆಗಳು, ಬರೆಹಗಳು ಪ್ರಪಂಚದ ಹಲವಾರು ಭಾಷೆಗಳಲ್ಲಿ ಮೂಡಿದ್ದನ್ನು ನೋಡಿ ಯಾಕೆ ಇಷ್ಟು ವರ್ಷ ಈ ಪುಸ್ತಕವನ್ನು ನಾನು ಓದಲೇ ಇಲ್ಲ ಅನ್ನಿಸಿತು. ಈ ಪುಸ್ತಕವನ್ನು ಆಧರಿಸಿ ಚಿತ್ರಿಸಿರುವ ಹತ್ತಾರು ಭಾಷೆಗಳ ಹಲವಾರು ಚಲನಚಿತ್ರಗಳು ಯೂಟ್ಯೂಬ್ ನಲ್ಲಿ ಸಿಗುತ್ತವೆ. ಪುಸ್ತಕವನ್ನು ಓದಿಯೂ ಚಲನಚಿತ್ರವನ್ನು ನೋಡುವಂತೆ ಈ ಬಾಲೆಯ ಅನುಭವದ ದಾಖಲೀಕರಣ ನನ್ನ ಮೇಲೆ ಮೋಡಿ ಮಾಡಿತ್ತು.

ಪ್ರಪಂಚದ ಇತಿಹಾಸದಲ್ಲಿ ಕರಾಳ ಹೆಜ್ಜೆಗಳ ಮೂಡಿಸಿದ ಹಿಟ್ಲರ್ ನ ಕಪಿಮುಷ್ಟಿಗೆ ಸಿಕ್ಕ ಹಲವಾರು ದೇಶಗಳಲ್ಲಿ ಅನ್ನ ಫ್ರಾಂಕ್ಳ ನೆದರ್ಲ್ಯಾಂಡ್ ಕೂಡ ಒಂದು. ಯಹೂದಿಗಳ ನಾಮಾವಶೇಷವೂ ಭೂಮಿಯ ಮೇಲೆ ಇರಬಾರದು ಎಂದು ಪಣ ತೋಟ್ಟಿದ್ದ ನಾಜಿ ಆಡಳಿತಕ್ಕೆ ಚಳ್ಳೆ ಹಣ್ಣು ತಿನ್ನಿಸಿ ಒಂದು ಮನೆಯಲ್ಲಿ (Annex) ಆನ್ ಫ್ರಾಂಕ್ ಕುಟುಂಬ ಹಾಗೂ ಸ್ನೇಹಿತರು ಸೇರಿ ಒಟ್ಟು ಎಂಟು ಮಂದಿ ತಮ್ಮ ಜೀವ ರಕ್ಷಣೆಗಾಗಿ ಭೂಗತ ಜೀವನವನ್ನು ನಡೆಸಲು ಆರಂಬಿಸುತ್ತಾರೆ.
ಕುಟುಂಬ ರಕ್ಷಣೆಯ ಜವಬ್ದಾರಿ ಹೊತ್ತಿದ್ದ ತಂದೆ ಒಟ್ಟೊ ಫ್ರಾಂಕ್ ಭೂಗತವಾಗುವ ಎರಡು ದಿನಗಳ ಮುಂಚೆ ಹುಟ್ಟು ಹಬ್ಬದ ಸವಿನೆನಪಿಗೆ ಡೈರಿ ಒಂದನ್ನು ಈಕೆಗೆ ಉಡುಗೊರೆಯಾಗಿ ನೀಡುತ್ತಾರೆ. ಸರಿ ಸುಮಾರು ಎರಡು ವರ್ಷಗಳ (ಜೂನ್-1942 ರಿಂದ ಆಗಸ್ಟ್-1944 ರವರೆಗೆ) ಗೌಪ್ಯ ಬದುಕಿನ ಅನಾವರಣ ಗುಪ್ತಗಾಮಿನಿಯಂತೆ ಓದುಗನ ಎದೆಯಲ್ಲಿ ಇಳಿಯಲು ಕಾರಣವೇ Kitty ಎಂಬ ಹೆಸರಿನ ಈ ಡೈರಿ. ಪ್ರತಿ ದಿನದ ಅನುಭವಗಳನ್ನು ತುಂಬಾ ಪ್ರಾಮಾಣಿಕವಾಗಿ, ಕೇಳಿದ್ದು ಹಾಗೂ ಕಂಡದ್ದನ್ನಷ್ಟೆ ವಿಚಾರಗಳನ್ನು ಸಹಜವಾಗಿ ಕನ್ನಡಿಯಂತೆ ದಾಖಲಿಸುತ್ತಾ ಹೋಗುತ್ತಾಳೆ. ಈಕೆಯ ಬರೆವಣಿಗೆಯ ಪ್ರತಿ ಪುಟಗಳಲ್ಲಿಯೂ ಆಕೆಯ ಭಾವನೆಗಳು ತುಂಬಿವೆ. ಮನೆಯವರ ನೋವುಗಳು ತುಳುಕಿವೆ. ಈ ನೋವುಗಳು ಲಕ್ಷಾಂತರ ಯಹೂದಿಗಳ ಪ್ರತಿನಿಧಿಯಾಗಿ ಮಾರ್ದನಿಸಿವೆ.
ಭೂಗತವಾಗಿರುವ ಮನೆಯ (Annex) ಕೆಳಗೆ ಒಂದು ಕಛೇರಿ ಇದ್ದು ಕಛೇರಿಯಲ್ಲಿ ಕೆಲಸಗಾರರು ಇರವವರಗೂ ನಿಶ್ಯಬ್ದವಾಗಿರಬೇಕು, ಎಷ್ಟರ ಮಟ್ಟಿಗೆ ಅಂದರೆ ಶೌಚಾಲಯವನ್ನು ಬಳಸಲೂ ಕೂಡ ನಿರ್ಬಂದ. ಆಹಾರ ಸಾಮಗ್ರಿಗಳಿಗಾಗಿ ಒಬ್ಬ ಹೆಂಗಸಿನ ಗೌಪ್ಯ ಸಹಕಾರವೇ ಅವರಿಗೆ ಜೀವ ಮೂಲ. ಆಕೆ ಎಷ್ಟು ಆಹಾರ ಸಾಮಗ್ರಿಗಳನ್ನು ಎಷ್ಟು ದಿನಗಳಿಗೊಮ್ಮೆ ತರುತ್ತಾಳೋ ಎಂಬುದರ ಆಧಾರದ ಮೇಲೆ ಅವರ ಹೊಟ್ಟೆ ತುಂಬುವುದು. ಆಕೆ ಪೂರೈಸುತ್ತಿದ್ದ ಆಹಾರ ಸಾಮಗ್ರಿಗಳ ಜೊತೆಗೆ ತರುತ್ತಿದ್ದ ಪುಸ್ತಕಗಳು ಇವರನ್ನು ಮಾನಸಿಕ ಸಮತೋಲಿತರಾಗಿರುವಂತೆ ಮಾಡುತ್ತವೆ.
ತಮಗೆ ಸಂಬಂಧವೇ ಇಲ್ಲದ ದೇಶದ ರಾಜಕೀಯ ಚಟುವಟಿಕೆಗಳು ಈಕೆಯ ಮಾನಸಿಕ ಹಾಗೂ ಬೌದ್ದಿಕ ಪ್ರಪಂಚಕ್ಕೆ ಹೇಗೆ ಪರಿಣಾಮ ಬೀರಿದೆ ಎಂಬುದನ್ನು ಕ್ಯಾಂಡಿಡ್ ಫೋಟೋಗ್ರಾಫಿಯಲ್ಲಿ ವ್ಯಕ್ತಿಗಳನ್ನು ಸೆರೆ ಹಿಡಿದಂತೆ ಸೆರೆ ಹಿಡಿದಿದ್ದಾಳೆ. ಅದೀಗ ತಾನೆ ಹರೆಯದ ಲೋಕಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಉಂಟಾಗುವ ದೈಹಿಕ ಬದಲಾವಣೆಗಳು, ಮಾನಸಿಕ ತಲ್ಲಣಗಳನ್ನು ಯಾವುದೇ ಹೆಚ್ಚುಗಾರಿಕೆಯನ್ನು ತೋರಿಸದೆ ಪದಗಳಲ್ಲಿ ಪೋಣಿಸಿರುವ ಆಕೆಯನ್ನು ಹದಿನಾಲ್ಕರ ಬಾಲೆಯೆಂದು ಹೇಗೆ ನಂಬುವುದು ಅನ್ನಿಸುತ್ತೆ.

ತನ್ನ ಅಕ್ಕ ಮಾರ್ಗ್ರೇಟ್ನೊಂದಿಗಿನ ಅಸೂಯೆ ಪ್ರವೃತ್ತಿ, ಪೀಟರ್ ನೊಂದಿಗೆ ಪ್ರೀತಿಯ ಭಾವ, ತಾಯಿಯೊಂದಿಗೆ ಹದಿಹರೆಯದ ಗುದ್ದಾಟ, ಅಪ್ಪನೊಂದಿಗಿನ ಅಪ್ಯಾಯಮಾನತೆಯನ್ನು ಹೇಗೆ ನೆಡೆದಿತ್ತೋ ಹಾಗೆ ಘಟನೆಗಳನ್ನು ಕಟ್ಟಿಟ್ಟಿದ್ದಾಳೆ. ‘Paper has more patience than people’ ಎಂಬ ಆಕೆಯ ಮಾತು ನಿಜವೆನ್ನುವ ಹಾಗೆ ಎಲ್ಲವನ್ನು ಡೈರಿಯಲ್ಲಿ ತೋಡಿಕೊಂಡಿದ್ದಾಳೆ. ಎರಡನೇ ಮಹಾ ಯುದ್ಧದ ಹಾಗೂ ಹಿಟ್ಲರ್ ನ ಆಡಳಿತದ ಬಲಿಪಶುಗಳ ಪ್ರಾತಿನಿಧಿಕ ದಾಖಲೆಯಾಗಿ ಈಕೆಯ ಬರೆವಣಿಗೆ ಪರಿಗಣಿಸಿದೆ. ವಯಸ್ಸು ಹದಿನಾಲ್ಕಾದರೂ ಆಕೆಯ ಗ್ರಹಿಕೆಯ ಪರಿಯಂತು ಮಾಗಿದ ವಯಸ್ಸಿನ ರೀತಿ.
ರಾಜಕೀಯ ಸನ್ನಿವೇಶಕ್ಕೆ ಬಲಿಪಶುಗಳಾದ ತಮ್ಮ ಬಗ್ಗೆ ಕನಿಕರವನ್ನು ತೋರ್ಪಡಿಸುತ್ತಾ ಇಂತಹ ಸನ್ನಿವೇಶಕ್ಕೆ ಸಿಲಿಕಿಸಿದ ರಾಜಕೀಯ ನಾಯಕರುಗಳ ನಿರ್ಧಾರದ ಬಗ್ಗೆ ಸಿಟ್ಟನ್ನು ಪ್ರದರ್ಶಿಸುವ ಸಾಮರ್ಥ್ಯವು ಆಕೆಯ ಬರೆವಣಿಗೆಗೆ ಇದೆ. ಪ್ರಪಂಚದ ಹಲವು ದೇಶಗಳ ಮಹಾನ್ ನಾಯಕರ ರಾಜಕೀಯ ತೆವಲಿಗೆ ತಮ್ಮ ಮನೆಯ ಪಕ್ಕದಲ್ಲಿ ಬಿಳುವ ಬಾಂಬಿಗೆ ಬೆಚ್ಚಿ ಬೀಳುವ ಭಯವು ಕೂಡ ಮಡುಗಟ್ಟಿದೆ. ಎರಡನೇ ಮಹಾ ಯುದ್ದದ ಅನಿವಾರ್ಯತೆಯನ್ನು ಇವರುಗಳು ಸೇವಿಸುತ್ತಿರುವ ಸಂಕಷ್ಟಗಳು ಪ್ರಶ್ನೆ ಮಾಡುತ್ತವೆ.
ಪ್ರತಿ ಪುಟದ ಬರೆವಣಿಗೆಯಲ್ಲೂ ಕೂಡ ಯುದ್ಧದ ನಂತರದ ಬದುಕಿನ ಕನಸುಗಳು, ಭರವಸೆಗಳು ಚಿಗುರೊಡೆದಿವೆ. ‘Where there’s hope there’s life. It fills us with fresh courage and makes us strong again’ ಎನ್ನುವ ಮಾತುಗಳಲ್ಲಿ ಯುದ್ಧದ ನಂತರ ನಮ್ಮೆಲ್ಲರ ಜೀವನ ಸರದಾರಿಗೆ ಬರುತ್ತೆ ಎಂಬ ಆಶಾಗೋಪುರ ತುಳುಕುತ್ತವೆ.
ಕೇವಲ ನಾಲ್ಕು ಗೋಡೆಯೊಳಗೆ ಸರಿ ಸುಮಾರು ಎರಡು ವರ್ಷಗಳು ಸೂರ್ಯನ ಬೆಳಕನ್ನೆ ಕಾಣದೆ ಇದ್ದಾಗಿಯೂ ಹೊರ ಪ್ರಪಂಚದ ಬಗ್ಗೆ ತನ್ನದೆಯಾದ ಅರಿವಿನ ವಿಸ್ತಾರವನ್ನು ಪ್ರದರ್ಶಿಸಿದ್ದಾಳೆ. ಗೆಳತನ, ಪ್ರೀತಿ, ಧರ್ಮ, ಯುದ್ಧ, ಸ್ತ್ರೀ ಸಂವೇಧನೆ ಇತ್ಯಾದಿ ವಿಚಾರಗಳನ್ನು ವಯೋಮಾನಕ್ಕೆ ಮೀರಿದ ಪದಗಳು ಆಕೆ ಅಚ್ಚು ಮೆಚ್ಚಿನ ಫೌಂಟೇನ್ ಪೆನ್ನಿನಿಂದ ತನ್ನೊಂದಿಗೆಯೇ ಜೀವಿಸುತ್ತಿದೆ ಎಂಬ ಭಾವನೆಯಿಂದ Kitty ಎಂಬ ಡೈರಿಯಲ್ಲಿ ದಾಖಲಿಸಿರುವುದು ಓದುಗರಿಗೆ ಸೋಜಿಗ ಎನಿಸದೇ ಇರದು.
ಇದೊಂದು ಸಾಂದರ್ಭಿಕ ದಾಖಲೆಯಾದರೂ ಓದುಗರು ಕಾದಂಬರಿಯೊಂದನ್ನು ಓದುತ್ತಿರುವ ಅನುಭವವನ್ನು ಪಡೆಯುತ್ತಾರೆ. ತನ್ನನ್ನೂ ಸೇರಿಸಿಕೊಂಡಂತೆ ಮನೆಯಲ್ಲಿರುವ ಎಂಟು ಜನ ವ್ಯಕ್ತಿಗಳು, ಒಂದು ಬೆಕ್ಕು, ಫೌಂಟೇನ ಪೆನ್ನು, ಕಿಟ್ಟಿ ಹೆಸರಿನ ಡೈರಿ, ವಾಸಮಾಡುತ್ತಿರುವ ಮನೆ (Annex) ಇವೆಲ್ಲವೂ ಪಾತ್ರದಾರಿಗಳಂತೆ ಓದುಗನ ಮನತುಂಬುತ್ತವೆ. 1944 ಆಗಸ್ಟ್-1 ಇದೇ ಆಕೆಯ ಕೊನೆಯ ದಾಖಲು. ಕೊನೆಯ ಪುಟವನ್ನು ಓದಿದ ಮೇಲೆ ಓದಗನಲ್ಲಿ ಹೇಳದ ಕಾತರ, ಭಯ, ನೀರವತೆ ಆವರಿಸಿ ಬಿಡುತ್ತೆ. ಇವರ ಗುಪ್ತವಾಸದ ವಾಸನೆ ನಾಜಿ ಆಡಳಿತಕ್ಕೆ ಬಡಿದು ಎಲ್ಲರನ್ನು ಸೆರೆ ಹಿಡಿದು ಪ್ರತ್ಯೇಕವಾದ ಜೈಲುವಾಸಕ್ಕೆ ಗುರಿ ಮಾಡಲಾಗುತ್ತದೆ.

ಎಲ್ಲರೂ 1945 ಅಂತ್ಯದೊಳಗೆ ಬೇರೆ ಬೇರೆ ಕಾರಣಗಳಿಗೆ ಸಾವಿನ ಮನೆಯನ್ನು ಸೇರುತ್ತಾರೆ. ಆನ್ ಫ್ರಾಂಕ್ ತಂದೆ ಮಾತ್ರ 1980 ರವರೆಗೆ ಬದುಕಿ ಇಕೆ ಬರೆದ ಡೈರಿಯನ್ನು ಪ್ರಪಂಚದಾಂದ್ಯತ ಪಸರಿಸಲು ಕಾರಣನಾಗುತ್ತಾನೆ. ಆನ್ ಫ್ರಾಂಕ್ 1945 ರ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ತನ್ನನ್ನಿರಿಸಿದ್ದ ಜೈಲಿನಲ್ಲಿ ಉಲ್ಬಣಿಸಿದ ಸಾಂಕ್ರಮಿಕ ರೋಗಕ್ಕೆ ಬಲಿಯಾದ ಸಾವಿರಾರು ಖೈದಿಗಳಲ್ಲಿ ತಾನು ಒಬ್ಬಳಾಗಿ ತನ್ನ ಅಕ್ಕನೊಂದಿಗೆ ಮರಣ ಹೊಂದುತ್ತಾಳೆ. ವಿದಿಯಾಟವೆಂದರೆ ಏಪ್ರಿಲ್ 12, 1945 ರಂದು ಬ್ರಿಟೀಷ್ ಸೈನಿಕರು ಆ ಕಾರಾಗೃಹವನ್ನು ಆಕ್ರಮಿಸಿಕೊಂಡು ಎಲ್ಲಾ ಖೈದಿಗಳನ್ನು ಸ್ವತಂತ್ರಗೊಳಿಸುತ್ತಾರೆ.
ಬ್ರಿಟೀಷ್ ಸೈನ್ಯದ ಮೇಲೆ ಬಲವಾದ ನಂಬಿಕೆಯನ್ನು ಇಟ್ಟು ಕೊಂಡು ತನ್ನ ಡೈರಿಯಲ್ಲಿ ಹಲವಾರು ಬಾರಿ ದಾಖಲಿಸುತ್ತಾಳೆ. ಯುದ್ಧದ ಅಂತ್ಯಕ್ಕೆ ಆಕೆ ಬ್ರಿಟನ್ ಪ್ರಧಾನಿಯಾಗಿದ್ದ ಚರ್ಚಿಲ್ ನಡೆಯನ್ನು ನಂಬಿರುತ್ತಾಳೆ. ‘In spite of everything I still belive that people are really good at heart’ ಎಂಬ ಇಂತಹ ಮಾತುಗಳಲ್ಲಿಯೇ ಎಲ್ಲರನ್ನೂ ಬೆರಗುಗೊಳಿಸಿತ್ತಾಳೆ. ತಾನೊಬ್ಬಳು ಸಾಹಿತಿಯಾಗಬೇಕು ಎಂಬ ಮಹದಾಸೆಯನ್ನು ಹೊಂದಿ ಸಾಕಷ್ಟು ಪುಸ್ತಕಗಳನ್ನು ಓದುವ ಗೀಳನ್ನು ಹಚ್ಚಿಸಿಕೊಂಡಿದ್ದ ಈಕೆಯ ಧಾರುಣ ಅಂತ್ಯ ಭವಿಷ್ಯದ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವನ್ನುಮಾಡಿದೆ ಅಂದರೆ ತಪ್ಪಾಗಲಾರದು.
ಪುಸ್ತಕದ ಕೊನೆಯ ಅಕ್ಷರವನ್ನು ಓದಿದ ಮೇಲೆ ನನ್ನಲ್ಲಿ ಉಳಿದಿದ್ದು ಗುಳಿಕೆನ್ನೆಯ ಮುಗ್ದ, ಸ್ನಿಗ್ಧ ಚೆಲುವೆ ಆನ್ ಫ್ರಾಂಕ್ ಮಾತ್ರ.






0 Comments