ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಂಪನಾ @ 90

ಪ್ರೊ ಜಿ ಎನ್ ಉಪಾಧ್ಯ

ದಣಿವರಿಯದ ಚೇತನ @90..

ಸ್ಪೆಕ್ಟ್ರಮ್ ಆಫ್ ಕ್ಲಾಸಿಕಲ್ ಲಿಟರೇಚರ್ ಇನ್ ಕರ್ನಾಟಕ ಇದು ನಾಡೋಜ ಪ್ರೊ.ಹಂಪನಾ ಅವರ ಇತ್ತೀಚಿನ ಅದ್ಬುತ ಕೃತಿ ಸಂಪುಟ.ದೇಶ ವಿದೇಶಗಳ ವಿದ್ವತ್ ವಲಯದಲ್ಲಿ ಈ ಸಂಪುಟಗಳು ಹೊಸ ಸಂಚಲನವನ್ನು ಉಂಟುಮಾಡಿರುವುದು ಹೆಮ್ಮೆಯ ಸಂಗತಿ. ಕರ್ನಾಟಕದ, ಕನ್ನಡದ ಅಭಿಜಾತ ಸಾಹಿತ್ಯ ಕೃತಿಗಳ ಸಾರ ಸತ್ವ ಹಾಗೂ ಹಿರಿಮೆ ಗರಿಮೆಗಳನ್ನು ಜಾಗತಿಕ ವಲಯಕ್ಕೆ ಪರಿಚಯಿಸಿದ ಶ್ರೇಯಸ್ಸು ಪ್ರೊ. ಹಂಪನಾ ಅವರಿಗೆ ಸಲ್ಲುತ್ತದೆ.

ಬಹುಮುಖ ಪ್ರತಿಭೆಯ ಅನುಪಮ ಸಾಧನೆಯ ದಣಿವರಿಯದ ಚೇತನ ಪ್ರೊ. ಹಂಪನಾ ಅವರಿಗೆ ಈಗ ತೊಂಬತ್ತರ ಹರೆಯ.

ಅವರ ಸಾಹಿತ್ಯ ಸಾಧನೆಯ ಪಕ್ಷಿನೋಟ ಇಲ್ಲಿದೆ.

‘ಉಜ್ವಲವಾದ ಪ್ರತಿಭೆ, ಪ್ರಖರವಾದ ಪಾಂಡಿತ್ಯ ಹಾಗೂ ಶ್ರದ್ಧಾನ್ವಿತವಾದ ಅಭ್ಯಾಸ ಇವುಗಳ ಸಮುಚಿತವಾದ ಸಮ್ಮಿಲನವನ್ನು ಒಬ್ಬನೇ ವ್ಯಕ್ತಿಯಲ್ಲಿ ಏಕತ್ರ ಕಾಣುವುದು ದುರ್ಲಭ’ವೆಂದಿದ್ದಾನೆ ರಾಜಶೇಖರ.

ಈ ಮೂರೂ ಅಪೂರ್ವ ಗುಣಗಳ ಸಂಗಮವನ್ನು ನಾವು ಪ್ರೊ. ಹಂಪ ನಾಗರಾಜಯ್ಯ ಅವರಲ್ಲಿ ಮೂರ್ತಿವತ್ತಾಗಿ ಕಾಣಬಹುದಾಗಿದೆ. ನಮ್ಮ ದೇಶದ ನಾಮಾಂಕಿತ ಸಂಶೋಧಕರಲ್ಲಿ ಪ್ರೊ.ಹಂಪ ನಾಗರಾಜಯ್ಯ ಅವರದು ಎದ್ದು ಕಾಣುವ ಹೆಸರು. ಪ್ರಾಧ್ಯಾಪಕರಾಗಿ, ವಿಮರ್ಶಕರಾಗಿ, ಶಾಸನ ತಜ್ಞರಾಗಿ, ಗ್ರಂಥ ಸಂಪಾದಕರಾಗಿ, ಭಾಷಾ ವಿಜ್ಞಾನಿಯಾಗಿ, ಶ್ರೇಷ್ಠ ವಾಗ್ಮಿಯಾಗಿ, ಶಿಕ್ಷಣ ತಜ್ಞರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಸಂಘಟಕರಾಗಿ ಅಖಂಡ ಕನ್ನಡಿಗರ ಪ್ರೀತ್ಯಾದರಗಳಿಗೆ ಅವರು ಪಾತ್ರರಾಗಿದ್ದಾರೆ. ಹೊಸ ಶೋಧ ಹೊಸ ವಿಚಾರಗಳಿಂದ ಕೂಡಿರುವ ಅವರ ಸಂಶೋಧನ ಕೃತಿಗಳು ಮಾನವ ಸಂಸ್ಕೃತಿಯ ವಿಕಾಸದ ವಿವಿಧ ಘಟ್ಟಗಳ ಸಂಕಥನಗಳು.

ಕನ್ನಡ ನಾಡಿನ ಸಾಂಸ್ಕೃತಿಕ ಲೋಕದ ಮುಚ್ಚಿದ ಬಾಗಿಲುಗಳನ್ನು ತೆರೆದು ಹೊಸ ಬೆಳಕು ಹಾಯಿಸಿದವರು ಪ್ರೊ. ಹಂಪನಾ.

ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಸಮ ದಂಡಿಯಾಗಿ ವೈವಿಧ್ಯಮಯವಾದ ಕೃತಿಗಳನ್ನು ರಚಿಸಿ ಅವರು ಲೋಕ ವಿಖ್ಯಾತ ರಾಗಿದ್ದಾರೆ. ಬಹುಕಾಲ ಸಂಶೋಧನೆಯನ್ನೇ ತಮ್ಮ ಮುಖ್ಯ ಅಭಿವ್ಯಕ್ತಿ ಮಾಧ್ಯಮವಾಗಿ ಬಳಸಿಕೊಂಡು ಸಾಹಿತ್ಯ ಕೃಷಿಗೈದ ಡಾ.ಹಂಪನಾ ತಾವೊಬ್ಬ ಸಮರ್ಥ ಕವಿಯೂ ಹೌದೆಂಬುದನ್ನು ‘ಚಾರುವಸಂತ’ ಎಂಬ ‘ದೇಸಿ ಕಾವ್ಯ’ದ ಮೂಲಕ ಸಾಬೀತು ಪಡಿಸಿದ್ದಾರೆ.

ಈ ಬೃಹತ್ ಕಾವ್ಯ ಕೃತಿ ಭಾರತದ ಇಪ್ಪತ್ತಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದ ಗೊಂಡದ್ದು ಹೆಮ್ಮೆಯ ಸಂಗತಿ.ಪ್ರೊ. ಹಂಪನಾ ಅವರ ಸಾಹಿತ್ಯ ಕೈಂಕರ್ಯಕ್ಕೆ ಎರಡು ಮುಖ, ಒಂದು ಸಾಹಿತ್ಯ ಸೃಷ್ಟಿ; ಇನ್ನೊಂದು ಸಾಹಿತ್ಯ ಪರಿಚಾರಿಕೆ.

ಸಾಂಪ್ರತ ಅಖಿಲ ಭಾರತ ಮಟ್ಟದಲ್ಲಿ ವಿದ್ಯೆ, ವಿದ್ವತ್ತು, ಸಾಹಿತ್ಯ ಕ್ಷೇತ್ರಗಳಲ್ಲಿ ಅವರನ್ನು ಸರಿಗಟ್ಟುವ ವಿದ್ವಾಂಸರು ಕಡಿಮೆ ಎಂದೇ ಹೇಳಬಹುದು. ಸಹೃದಯರೂ ನಿಗರ್ವಿಗಳೂ ವಿನಯಶೀಲರೂ ಆದ ಪ್ರೊ. ಹಂಪನಾ ಕನ್ನಡ ಸಾರಸ್ವತ ಲೋಕದ ಬಹುದೊಡ್ಡ ಆಸ್ತಿ. ಕರ್ನಾಟಕವಲ್ಲದೆ ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿದ್ವಾಂಸರಿಗೆ ಸಂಶೋಧಕರಿಗೆ ಪರಿಚಿತರಾಗಿರುವ ಹಂಪನಾ ಅವರ ಕೀರ್ತಿ ಅನುಪಮವಾದುದು.

ಶ್ರಮ ಸಂಸ್ಕೃತಿಯ ಪ್ರತಿಪಾದಕರಾಗಿರುವ ಅವರ ಸಾಧನೆ ಬೆಟ್ಟದಷ್ಟು ಬೆಳೆದಿದೆ.ಆಚಾರ್ಯ ಹಂಪನಾ ಅವರು ೭-೧೦-೧೯೩೬ ರಂದು ಕೋಲಾರ ಜಿಲ್ಲೆಯ ಗೌರೀಬಿದನೂರು ತಾಲೂಕಿನ ಹಂಪಸಂದ್ರದಲ್ಲಿ ಜನಿಸಿದರು. ತಂದೆ ಪದ್ಮನಾಭಯ್ಯ, ತಾಯಿ ಪದ್ಮಾವತಮ್ಮ. ಹಂಪಸಂದ್ರ, ಗೌರಿಬಿದನೂರು, ಮಧುಗಿರಿಯಲ್ಲಿ ವಿದ್ಯಾಭ್ಯಾಸ ಮಾಡಿದ ಅವರು ಮುಂದೆ ಹೆಚ್ಚಿನ ಶಿಕ್ಷಣಕ್ಕೆ ಮೈಸೂರಿಗೆ ಬರಬೇಕಾಯಿತು. ಬಾಲ್ಯದಿಂದಲೇ ಚುರುಕಾಗಿದ್ದ ಅವರು ಓದಿನಲ್ಲಿ ಎತ್ತಿದ ಕೈ. ಚಿಕ್ಕಂದಿನ ತಮ್ಮ ದಿನಗಳನ್ನು ಅವರು ಹೀಗೆ ಸ್ಮರಿಸಿಕೊಂಡಿದ್ದಾರೆ “ಬಾಲ್ಯವೆಂಬುದು ಪ್ರತಿಯೊಬ್ಬರ ಪಾಲಿಗೂ ನಿಸರ್ಗ ಕರುಣಿಸಿದ ವರ. ಯಾರಿಗೇ ಆಗಲಿ ಅವರವರ ಎಳೆಯಂದಿನ ದಿನಗಳ ನೆನವು ಬಾಡುವುದು ಕಡಿಮೆ. ನನಗೂ ಅಷ್ಟೇ. ಚಿಕ್ಕವನಾಗಿದ್ದ ದಿನಗಳ ನೆನಪು ಹಸಿರಾಗಿದೆ, ಎದೆಯಾಳದಿಂದ ಜಿನುಗಿ ಚಿಮ್ಮುತ್ತದೆ. ಹಂಪಸಂದ್ರ ನನ್ನ ಪಾಲಿಗೆ ಎಂದೂ, ಯಾವುದೊ ಒಂದು ಯಃಕಶ್ಚಿತ್ ಕುಗ್ರಾಮವೆಂದು ಎನಿಸಲಿಲ್ಲ. ಅಲ್ಲಿನ ಬಡಬಗ್ಗರೆದೆಗಳಲ್ಲಿ ಸಿರಿ ಸಂಸ್ಕೃತಿ ತುಂಬಿ ತುಳುಕುವುದನ್ನು ಕಂಡಿದ್ದೇನೆ, ಅನುಭವಿಸಿದ್ದೇನೆ. ಆ ಊರು, ನೆರೆಹೊರೆ, ಪರಿಸರ ನನ್ನ ಭಾವಕೋಶವನ್ನು ಆವರಿಸಿ ಪುಷ್ಟಿಗೊಳಿಸಿದೆ.’ಹಂಪನಾ’ ಎಂಬ ಸಂಕ್ಷಿಪ್ತ ನಾಮದಿಂದ ಮನೆ ಮಾತಾಗಿರುವ ಹಂಪಸಂದ್ರ ಪದ್ಮನಾಭಯ್ಯ ನಾಗರಾಜಯ್ಯ ಅವರದು ಹೋರಾಟದ ಬದುಕು. ಅವರು ಶ್ರಮ ಸಂಸ್ಕೃತಿಯನ್ನು ಮೈಗೂಡಿಸಿಕೊಂಡವರು. ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪಡೆದ ಅವರು ಗುರುಗಳ ವಿಷಯದಲ್ಲಿ ಭಾಗ್ಯವಂತರು.

ಕುವೆಂಪು, ಡಿಎಲ್‌ಎನ್‌, ತ ಸು ಶಾಮರಾಯ, ದೇಜಗೌ ಮೊದಲಾದ ದಿಗ್ಗಜರಿಂದ ಪಾಠ ಹೇಳಿಸಿಕೊಂಡವರು, ಅವರ ಶಿಸ್ತು ಸಾಧನೆಗಳನ್ನು ನೋಡಿ ಪ್ರಭಾವಿತರಾದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದ ಅವರ ಕನ್ನಡ ಪ್ರೀತಿ ಅನನ್ಯವಾದುದು. ಕೈಗೆ ಬಂದ ತಹಶೀಲ್ದಾರ್ ಹುದ್ದೆಯನ್ನು ತಿರಸ್ಕರಿಸಿ ಉಪನ್ಯಾಸಕರಾಗಿ ಸೇರಿಕೊಂಡು ಕನ್ನಡ ನುಡಿ ಸೇವೆಗೆ ತಮ್ಮನ್ನು ತೊಡಗಿಸಿಕೊಂಡರು. ಮೂವತ್ತರ ಪ್ರಾಯದಲ್ಲೇ ‘ದ್ರಾವಿಡ ಭಾಷಾ ವಿಜ್ಞಾನ’ ಎಂಬ ತೌಲನಿಕ ಅಧ್ಯಯನದ ಬೃಹತ್‌ ಕೃತಿಯನ್ನು ರಚಿಸಿ ಸಮಕಾಲೀನ ವಿದ್ವಾಂಸರ ಅಚ್ಚರಿಗೆ, ಅಭಿಮಾನಕ್ಕೆ, ಕೊಂಡಾಟಕ್ಕೆ ಪಾತ್ರವಾದುದು ಸಾಮಾನ್ಯ ಸಂಗತಿಯಲ್ಲ.

‘ಸಂಶೋಧನೆ’ ಪ್ರೊ.ಹಂಪನಾ ಅವರಿಗೆ ಸಹಜ ಚಟುವಟಿಕೆ, ಸತ್ಯದ ಆರಾಧನೆ, ಪ್ರತಿಷ್ಠಾಪನೆ ಅವರ ವ್ರತ. ಕಳೆದ ಆರು ದಶಕಗಳಿಗೂ ಮಿಕ್ಕಿ ಅವ್ಯಾಹತವಾಗಿ ಹಂಪನಾ ಅವರು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಕೊಡುಗೆ ಬಹುಮುಖವಾದುದು. ಪಾಶ್ಚಾತ್ಯ ಮತ್ತು ಪೌರ್ವಾತ್ಯ ಸಾಹಿತ್ಯಗಳ ಅಧ್ಯಯನದಿಂದ ಪಕ್ವಗೊಂಡ ಅವರ ಪಾಂಡಿತ್ಯ, ತರ್ಕ ಶುದ್ಧವಾದ ವಿಮರ್ಶೆಯ ರೀತಿ, ಹೊಸ ಹೊಸ ಒಳನೋಟಗಳಿಂದ ಕೂಡಿರುವ ಅವರ ಬರವಣಿಗೆ ವೈಶಿಷ್ಟ್ಯಪೂರ್ಣವಾದುದು. ಪ್ರೊ. ಹಂಪ, ನಾಗರಾಜಯ್ಯ ಅವರು ನಮ್ಮ ನಡುವಿನ ಪ್ರಥಮ ಶ್ರೇಣಿಯ ಸಂಶೋಧಕರಲ್ಲಿ ಒಬ್ಬರು. ಯಕ್ಷಯಕ್ಷಿಯರು, ನೋಂಪಿಯ ಕಥೆಗಳು, ಕಮ್ಮಟದ ಕಿಡಿಗಳು, ಕವಿವರ ಕಾಮಧೇನು, ಗೊಮ್ಮಟ – ಬಾಹುಬಲಿ, ನಾಗಚಂದ್ರನ ಕಾಲ ಸ್ಥಳ, ಬಂಧುವರ್ಮನ ಇತಿವೃತ್ತ, ವಿಷ್ಣುವರ್ಧನ ವಿಜಯಾದಿತ್ಯ ಕೀರ್ತಿವರ್ಮ, ಶಾಸನಗಳಲ್ಲಿ ಎರಡುವಂಶಗಳು, ಸಾಂತರರು ಒಂದು ಅಧ್ಯಯನ, ಅನನ್ಯ, ಚಂದ್ರಕೊಡೆ ಹೀಗೆ ಹತ್ತಾರು ಮಹತ್ವದ ಸಂಶೋಧನ ಕೃತಿಗಳನ್ನು ರಚಿಸಿ ಕನ್ನಡ ನಾಡಿನ ಸಾಂಸ್ಕೃತಿಕ ಇತಿಹಾಸವನ್ನು ನಾಡಿಗೆ ಸರಿಯಾಗಿ ಪರಿಚಯಿಸಿದ ಸಾಹಸಿ ನಾಡೋಜ ಹಂಪನಾ.

ನಮ್ಮ ಇಂದಿನ ತಿಳುವಳಿಕೆಯ ಹಿನ್ನೆಲೆಗಿರುವ ಇತಿಹಾಸವನ್ನು ಪುನಾರಚಿಸುವಲ್ಲಿ ಅವರ ಕೃತಿಗಳು ಮಾರ್ಗದರ್ಶಿಯಾಗಿವೆ. ಕನ್ನಡ ಸಂಸ್ಕೃತಿಯ ಸಾವಿರಾರು ವರ್ಷಗಳ ಅವಧಿಯ ಸಾಂಸ್ಕೃತಿಕ ಚಿಂತನೆಗಳನ್ನು ಕಲೆಹಾಕುವ ಪ್ರಯತ್ನವೂ ಅವರ ಕೃತಿಗಳಲ್ಲಿ ನಡೆದಿವೆ.

ಸಾಹಿತ್ಯ ಮತ್ತು ಚರಿತ್ರೆಯ ಸಮನ್ವಯಕಾರ ಹಂಪನಾ ಅವರು ಸಾಹಿತಿಯೂ ಹೌದು, ಚರಿತ್ರೆಕಾರರೂ ಆಗಿದ್ದಾರೆ. ಸಾಹಿತ್ಯ ವಿಶ್ಲೇಷಣೆಗೆ ಅವರು ಇತಿಹಾಸದ ಮಾಹಿತಿಗಳನ್ನು ಯಥೇಷ್ಟವಾಗಿ ಬಳಸಿಕೊಂಡಿದ್ದಾರೆ. ಇತಿಹಾಸವನ್ನು ನಿರೂಪಿಸಲು ಸಾಹಿತ್ಯದ ಆಕರಗಳನ್ನು ವಿಪುಲವಾಗಿ ದುಡಿಸಿಕೊಂಡಿದ್ದಾರೆ. ಅವರ ಕೃತಿಗಳೆಲ್ಲ ಸಾಂಸ್ಕೃತಿಕ ಅಧ್ಯಯನಗಳೇ ಆಗಿವೆ ಎಂದರೂ ತಪ್ಪಿಲ್ಲ. ಹೀಗಾಗಿ ಹಂಪನಾ ನಮ್ಮ ನಡುವಿನ ಒಳ್ಳೆಯ ‘ಸಾಹಿತ್ಯ ಮತ್ತು ಚರಿತ್ರೆಯ ಸಮನ್ವಯಕಾರ’ರಾಗಿ ಎದ್ದು ಕಾಣುತ್ತಾರೆ. ಚರಿತ್ರೆ ಮತ್ತು ಸಾಹಿತ್ಯದ ವಿವಿಧ ಆಕರಗಳನ್ನು ಉಪಯೋಗಿಸಿಕೊಂಡು ಕರ್ನಾಟಕದ ಸಾಂಸ್ಕೃತಿಕ ಅಧ್ಯಯನಕ್ಕೆ ತೊಡಗಿದ ಹಂಪನಾ ನಮ್ಮ ಗತಕಾಲದ ಇತಿಹಾಸವನ್ನು ವೈಭವೀಕರಿಸುವ ಉದ್ದೇಶವನ್ನು ಹೊಂದಿದವರಲ್ಲ. ಬಹುಮುಖಿ ನೆಲೆಯಲ್ಲಿ ನಾಡಿನ ಇತಿಹಾಸವನ್ನು ಅನಾವರಣಗೊಳಿಸುವ ಪ್ರತಿಷ್ಠಾಪಿಸುವ ಕೆಲಸವನ್ನು ಅವರು ಮಾಡುತ್ತಾ ಬಂದಿದ್ದಾರೆ. ಸಾಮಾಜಿಕ ತುರ್ತಿನಿಂದ ಮೂಡಿಬಂದ ಶೋಧ ಅವರದು. ತೀವ್ರವಾದ ವಿಮರ್ಶೆ ಮತ್ತು ಜನಪರ ನಿಲುವು ಅಲ್ಲಿ ಎದ್ದುಕಾಣುವ ಅಂಶ.

ರಾಷ್ಟ್ರೀಯ ಭಾವೈಕ್ಯತೆಯ ದೃಷ್ಟಿಯಿಂದಲೂ ಪ್ರೊ. ಹಂಪನಾ ಅವರ ಸಂಸ್ಕೃತಿ ಚಿಂತನೆಗೆ ವಿಶೇಷವಾದ ಮಹತ್ವವಿದೆ. ಯಾಪನೀಯರು, ಯಕ್ಷ ಯಕ್ಷಿಯರು ಉತ್ತರ ಭಾರತದ ಅಭಿಜಾತ ಪರಂಪರೆಯಲ್ಲಿ ನೆಲೆ ಪಡೆದವರಾಗಿದ್ದೂ ದಕ್ಷಿಣದ ಜನಪ್ರಿಯ ಸಂಸ್ಕೃತಿಯೊಂದಿಗೂ ಗಾಢ ಸಂಬಂಧವನ್ನು ಹೊಂದಿವೆ ಎಂಬುದನ್ನು ವಿವಿಧ ಸಾಕ್ಷಾಧಾರಗಳ ಮೂಲಕ ತೋರಿಸಿಕೊಟ್ಟು ನಮ್ಮ ದೃಷ್ಟಿ ತಿದ್ದುವ ಕೆಲಸ ಮಾಡಿರುವುದು ವರ್ತಮಾನದ ಜರೂರೇ ಆಗಿದೆ.

ಮೊನ್ನೆ ಮೊನ್ನೆಯವರೆಗೂ ಉಪೇಕ್ಷೆಗೆ ಒಳಗಾಗಿದ್ದ ಅವೈದಿಕ ಸಂಸ್ಕೃತಿಯ, ಉಪ ಸಂಸ್ಕೃತಿಯ, ಜನಪದ ಸಂಸ್ಕೃತಿಯ ನಾನಾ ಮಡಿಕೆಗಳ ಮೇಲೆ ಅವರು ಉಜ್ವಲ ಬೆಳಕು ಹಾಯಿಸಿರುವುದು ಸಾಮಾನ್ಯ ಸಂಗತಿಯಲ್ಲ. ಹೀಗಾಗಿ ಪ್ರಾಚೀನ ಅರ್ವಾಚೀನ ಕೃತಿ- ಸಂಸ್ಕೃತಿಗಳ ಅನುಸಂಧಾನಕಾರರಾಗಿ ಪ್ರೊ. ಹಂಪನಾ ಅವರು ನಮಗೆ ಮುಖ್ಯರಾಗುತ್ತಾರೆ. ನಿನ್ನೆಯನ್ನು ಸರಿಯಾಗಿ ತಿಳಿದುಕೊಳ್ಳುವುದೆಂದರೆ ನಾಳೆಯನ್ನು ಸರಿಯಾಗಿ ಕಾಣುವುದೆಂದೇ ಅರ್ಥ. ಪ್ರೊ. ಹಂಪನಾ ಅವರಿಗೆ ಇತಿಹಾಸವೆಂದರೆ ಅದು ಕೇವಲ ಗತದಿನಗಳ ಅರಿವಷ್ಟೇ ಅಲ್ಲ. ನಮ್ಮ ಇವತ್ತಿನ ಸಮಸ್ಯೆಗಳಿಗೆ ಗತಕಾಲದಲ್ಲಿ ಕಾರಣಗಳನ್ನು ಕಂಡುಕೊಳ್ಳಬೇಕು; ಪರಿಹಾರದ ಜೊತೆಗೆ ಅದು ನಾಳಿನ ಕನಸುಗಳಿಗೂ ನಾಂದಿಹಾಡುವಂತಾಗಬೇಕೆಂಬ ಸದಾಶಯ ಅವರದು. ಚರಿತ್ರೆ, ಅಲ್ಲಿ ದಾಖಲಾದ ಮಾನವ ಸಂಸ್ಕೃತಿ, ಒಂದು ಅಖಂಡ ಪ್ರಜ್ಞೆ’ ಎಂಬ ಸಾಂಸ್ಕೃತಿಕ ರಹಸ್ಯವನ್ನು ಹಂಪನಾ ಅವರು ಚೆನ್ನಾಗಿ ಬಲ್ಲರು.

ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ದಾಖಲಾಗಿರುವ ‘ಸಮಾಜ ಸಂಸ್ಕೃತಿ’ಯು ಬಹುತೇಕ ರಾಷ್ಟ್ರೀಯ ಸಂಸ್ಕೃತಿಗೆ ಹೊಂದಿಕೆಯಾಗುತ್ತದೆ ಎಂಬ ಮಹತ್ವದ ಸಂಗತಿಯನ್ನು ಅವರು ತಮ್ಮ ಶೋಧ ಕೃತಿಗಳಲ್ಲಿ ಮುನ್ನೆಲೆಗೆ ತಂದು ವಿಶ್ಲೇಷಿಸಿರುವುದು ಅವರ ಆರೋಗ್ಯಕರ ಧೋರಣೆಗೆ ಸಾಕ್ಷಿ.ಭಾರತೀಯ ಮತ್ತು ಕರ್ನಾಟಕದ ಇತಿಹಾಸ, ವಾಸ್ತುಶಿಲ್ಪ, ಸಾಹಿತ್ಯ ಮತ್ತು ಸಾಂಸ್ಕೃತಿಕ ಅಧ್ಯಯನದ ಸಂಧರ್ಭಗಳಲ್ಲಿ ಜೈನ ಸಾಮಗ್ರಿ ಹಾಗೂ ಆಕರ ಆಧಾರಗಳನ್ನು ಕಡೆಗಣಿಸಲಾಗಿತ್ತು. ಚಂದ್ರಕೊಡೆ, ಅನನ್ಯದಂಥ ಮೇರು ಕೃತಿಗಳನ್ನು ರಚಿಸಿ ಇತಿಹಾಸದ ಕಂದಕಗಳನ್ನು ಮುಚ್ಚುವ ಕೆಲಸವನ್ನು ಮಾಡಿದ್ದಾರೆ.

ಹೀಗೆ ಅವಜ್ಞೆಗೆ ಒಳಗಾದ ಕ್ಷೇತ್ರಗಳತ್ತ ಬೆಳಕು ಹಾಯಿಸುತ್ತಾ ಬಂದ ಅವರು ಕನ್ನಡ ಭಾಷೆ, ಸಾಹಿತ್ಯ, ಜಾನಪದ, ಸಂಸ್ಕೃತಿಯ ಅಧ್ಯಯನಕ್ಕೆ ಬೇಕಾದ ಪರಿಪ್ರೇಕ್ಷ್ಯಗಳನ್ನು ಕಟ್ಟಿಕೊಡುತ್ತಾ ಬಂದಿದ್ದಾರೆ. ಕನ್ನಡ ಸಾಹಿತ್ಯ ಚರಿತ್ರೆಯ ಪುನಾರಚನೆಗೂ ಹಂಪನಾ ಅವರು ಶ್ರಮಿಸಿದ್ದಾರೆ. ಭ್ರಾಜಿಷ್ಣು, ನಾಗಚಂದ್ರ, ಬಂಧುವರ್ಮ, ಕೀರ್ತಿವರ್ಮ ಮೊದಲಾದ ಕನ್ನಡ ಕವಿಗಳ ಕಾಲ ದೇಶಗಳ ಬಗೆಗೆ ಅನೇಕ ಹೊಸ ಹೊಸ ಅಂಶಗಳನ್ನು ಬೆಳಕಿಗೆ ತಂದು ಅಲ್ಲಿನ ಸಂದೇಹ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಮಹಾಕವಿ ರನ್ನ, ನಾಡೋಜ ಪಂಪ, ಕರ್ನಾಟಕ ಮತ್ತು ಜೈನಧರ್ಮ, ಮಹಾವೀರ, ಗಡಿನಾಡ ಗಾಂಧಿ, ಗೋವಿಂದ ಪೈ ಬದುಕು ಬರಹ, ನೆನಪಿನಂಗಳದಲ್ಲಿ ಮಾಸ್ತಿ ಮೊದಲಾದ ಜನಪ್ರಿಯ ಕೃತಿಗಳನ್ನು ರಚಿಸಿ ಸಾಮಾನ್ಯ ಓದುಗರಿಗೂ ಅವರು ಪರಿಚಿತರಾಗಿದ್ದಾರೆ.ಡಾ|| ಹಂಪನಾ ಅವರು ಅನನ್ಯ ಸಂಘಟಕರು. ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಮಾಡಿದ ಕೆಲಸ ಕಾರ್ಯಗಳನ್ನು ಎತ್ತಿ ಹೇಳಬೇಕಾದ ಅವಶ್ಯಕತೆಯಿಲ್ಲ. ಅವರು ಪರಿಷತ್ತನ್ನು ಮೊದಲು ಧೈರ್ಯಮಾಡಿ ವಿಕೇಂದ್ರೀಕರಣಗೊಳಿಸಿದರು. ಅದರ ಕಾರ್ಯ ಚಟುವಟಿಕೆಗಳನ್ನು ನಾಡಿನಾದ್ಯಂತ ವಿಸ್ತರಿಸಿದರು. ಅಪೂರ್ವ ಗ್ರಂಥಗಳ ಪ್ರಕಟಣೆ, ಸಮ್ಮೇಳನ, ನಾನಾ ಬಗೆಯ ಕಮ್ಮಟ ಹೀಗೆ ಹೊಸ ಹೊಸ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದ್ದು ಕಸಾಪದ ಇತಿಹಾಸದಲ್ಲಿ ದಾಖಲೆಯಾಗಿದೆ.

ಪ್ರೊ. ಹಂಪನಾ ಅವರ ಸಾಹಿತ್ಯ ಕೃಷಿ ವಿಪುಲವಾಗಿದೆ. ಸಂಶೋಧನೆ, ಭಾಷಾವಿಜ್ಞಾನ, ಶಿಶು ಸಾಹಿತ್ಯ, ಪ್ರಬಂಧ, ಕಾದಂಬರಿ, ಗ್ರಂಥ ಸಂಪಾದನೆ, ಜೀವನ ಚರಿತ್ರೆ, ಜಾನಪದ, ವಿಮರ್ಶೆ, ಅನುವಾದ, ಮಹಾಕಾವ್ಯ, ಶಾಸನ-ಶಾಸ್ತ್ರ, ಸಾಹಿತ್ಯ ಚರಿತ್ರೆ ಹೀಗೆ ಕನ್ನಡ ಸಾಹಿತ್ಯದ ಅನ್ಯಾನ್ಯ ಪ್ರಕಾರಗಳಲ್ಲಿ ಅವರದು ಸತ್ವಯುತವಾದ ಸಾಹಿತ್ಯಕಾಯಕ. ಅವರೊಬ್ಬ, ನಮ್ಮ ನಡುವಿನ ವಿರಳ ‘ಸವ್ಯಸಾಚಿ’ ಲೇಖಕ. ಕನ್ನಡದ ಮಹಾಕವಿ ಆಗ್ರಕವಿ ಎಂಬ ಖ್ಯಾತಿಗೆ ಪಾತ್ರನಾದ ಪಂಪ ಮಹಾಕವಿಯ ಜೀವನ ಸಾಧನೆಯನ್ನು ಕಾದಂಬರಿಯ ಮೂಲಕ ಕುತೂಹಲ ಪೂರ್ಣವಾಗಿ ನಿರೂಪಿಸಿದ್ದಾರೆ.

ಸಾವಿರ ವರ್ಷಗಳ ಹಿಂದೆ ಕನ್ನಡ ನಾಡಿನಲ್ಲಿ ನುಡಿ ಸೇವೆ ಮಾಡಿದ, ರನ್ನನಂಥ ಮಹಾಕವಿಗೆ ಪ್ರೋತ್ಸಾಹ ನೀಡಿದ ಮಹಾನ್ ಮಹಿಳೆ ಅತ್ತಿಮಬ್ಬೆಯ ಜೀವನ ಸಾಧನೆಗಳನ್ನು ಮೊದಲ ಬಾರಿಗೆ ಚರಿತ್ರೆಗೆ ದಾಖಲಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ.’ಪಂಪನಿಂದ ಹಂಪನಾವರೆಗೆ’ ಎಂಬ ಮಾತು ಸಾಹಿತ್ಯ ವಲಯದಲ್ಲಿ ಇಂದಿಗೂ ಚಾಲ್ತಿಯಲ್ಲಿದೆ. ಈಗ ಅವರಿಗೆ 90ರ ಹರೆಯ. ಈ ಇಳಿವಯಸ್ಸಿನಲ್ಲಿಯೂ ಕನ್ನಡದ ತೇರನೆಳೆಯುವ ಕಾಯಕದಲ್ಲಿ ಅವರು ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

“ಭಾರತೀಯ ಮತ್ತು ಕರ್ನಾಟಕದ ಇತಿಹಾಸ, ವಾಸ್ತುಶಿಲ್ಪ, ಸಾಹಿತ್ಯ ಮತ್ತು ಸಾಂಸ್ಕೃತಿಕ ಅಧ್ಯಯನ ಗ್ರಂಥಗಳಲ್ಲಿ ಜೈನ ಸಾಮಗ್ರಿ ಮತ್ತು ಆಧಾರಗಳನ್ನು ಕಡೆಗಣಿಸಲಾಗಿದೆ. ನಾಡಿನ ಪರಂಪರೆಯ ಸಮೀಕ್ಷೆಯನ್ನು ಸರಿಯಾದ ಹಳಿಯ ಮೇಲೆ ನಿಲ್ಲಿಸುವ ಇರಾದೆಯಿಂದ, ಇನ್ನೂ ಕನ್ನೆ ನೆಲವಾಗಿರುವ ಜೈನರ ಕೊಡುಗೆಯ ವೈಶಿಷ್ಟ್ಯ ತೋರಿಸುವ ಬರವಣಿಗೆ ಮಾಡಿದ್ದೇನೆ” ಎಂದವರು ಒಂದೆಡೆ ಹೇಳಿಕೊಂಡಿದ್ದಾರೆ. ಹೊಸ ಶೋಧಗಳ ಮೂಲಕ ನಮ್ಮ ಅರಿವಿನ ಕ್ಷಿತಿಜವನ್ನು ವಿಸ್ತರಿಸುತ್ತಿರುವ ಪ್ರೊ. ಹಂಪನಾ ಅವರು ವರ್ತಮಾನದ ಅಪರೂಪದ ಸಾಧನೆಗೆ ಸಾಕ್ಷಿಯಾಗಿದ್ದಾರೆ.ಅವರು ನಮ್ಮ ನಾಡಿನ ಹೆಮ್ಮೆಯ ಅಭಿಮಾನದ ಮೂರ್ತಿ.

‍ಲೇಖಕರು Admin

20 September, 2025

1 Comment

  1. ಡಾ.ಆರ್. ರೇಣುಕಾ

    ಎಂ. ಎ. ಕನ್ನಡ 1993-95 2 ವರ್ಷ ಕನ್ನಡ ಅಧ್ಯಯನ ಕೇಂದ್ರದಲ್ಲಿ ಅವರ ವಿದ್ಯಾರ್ಥಿನಿ ಯಾಗಿ ಪಾಠ ಕೇಳುವ ಸೌಭಾಗ್ಯ ನನ್ನದಾಗಿತ್ತು. ಅವರ ನಗುಮೊಗದ, ಹಾಸ್ಯ ಭರಿತದ ಜೊತೆಗೆ ವಿಧ್ವತ್ ಪೂರ್ಣ ಪಾಠ ಕೇಳಿದ ನನಗೆ ಸದಾ ಹಸಿರು. 3ತಿಂಗಳಲ್ಲಿ ರಾಗಿ ಬೆಳೆಯುವ ನಾವು ಅದೇ ರೀತಿ 3ತಿಂಗಳಲ್ಲಿ ಇನ್ನುಎಷ್ಟು ಸಾಧನೆ ಎಂದು ಹೇಳಿದ ಮಾತುಗಳು ನನಗೆ ದಾರಿದೀಪವಾಗಿದೆ. ಆ ಮಾತಿನಲ್ಲಿ ಸಮಯದ ಬೆಲೆ, ಯಶಸ್ಸು ಗಳಿಸಲುಬೇಕಾದ ಛಲ ಮಾ ರಗದರ್ಶನ, ನಮ್ಮನ್ನು ಎಂದಿಗೂ ಜೀವಂತವಾಗಿಸಿದೆ. ನಗುಮುಖದ ನಮ್ಮ ಗುರುಗಳಿಗೆ ಅನಂತನಂತ ವಂದನೆಗಳು. ಅವರು ನೂರಾರು ಕಾಲ ಬಾಳಲಿ ಎಂದು ಆಶಿಸುತ್ತೆನೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading