ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸ.ಹಿ.ಪ್ರಾ. ಶಾಲೆಯಲ್ಲಿ ಮಾಡಿದ್ದು "ಒಂದಲ್ಲಾ ಎರಡಲ್ಲಾ"

“ಬಾರ್ ಬಾರ್ ಆತೀ ಹೈ ಮುಜಕೋ
ಮಧುರ್ ಯಾದ್ ಬಚಪನ್ ತೇರಿ
ಗಯಾ ಲೇ ಗಯಾ ತು ಜೀವನ್ ಕಿ
ಸಬಸೇ ಮಸ್ತ್ ಖುಷೀ ಮೇರಿ ”
– ಸುಭದ್ರಾ ಕುಮಾರಿ ಚೌಹಾಣ್
ಈ ಪದ್ಯವನ್ನು ಓದಿ ಸರಿಸುಮಾರು ಇಪ್ಪತ್ತು ವರ್ಷಗಳೇ ಕಳೆದರೂ ಈ ಸಾಲುಗಳು ಮಾತ್ರ ಮರೆತೇ‌ ಹೋಗಿಲ್ಲ.‌ ಕಾರಣ ಇದು ನಮ್ಮೆಲ್ಲರ ಬಾಲ್ಯದ ಬಗೆಗಿನ ಪದ್ಯ ಆಗಿದ್ದರಿಂದ ಇರಬಹುದು. ಓದು ಮುಗಿಸಿ, ನಮ್ಮ ನಮ್ಮ ಇಚ್ಛಾನುಸಾರ ಮತ್ತು ಯೋಗ್ಯತಾನುಸಾರ ಯಾವ್ಯಾವುದೋ ವೃತ್ತಿಗಳಲ್ಲಿ ನಿರತಾಗಿರುವ ಈ ದಿನಗಳಲ್ಲೂ ನಮಗೆ ನಮ್ಮ ಬಾಲ್ಯ ಕಾಡುತ್ತದೆ ಎಂದರೆ ಪ್ರತಿಯೊಬ್ಬರ ಬಾಲ್ಯವೂ ಅದರದ್ದೇ ಆದ ವಿಶೇಷತೆಯನ್ನು ಹೊಂದಿರುತ್ತದೆ ಎಂದರ್ಥ. ಕವಯಿತ್ರಿ ಹೇಳುವಂತೆ ಮತ್ತೆ ಮತ್ತೆ ಬಾಲ್ಯದ ನೆನಪು ಬರೋದು ಸಹಜ. ಈಗ ಹೇಳಹೊರಟಿರುವುದೂ ಅಂಥದ್ದೇ ಒಂದು ನೆನಪು…

** ** *
ಶಿವಮೊಗ್ಗದಿಂದ ಆಗುಂಬೆಗೆ ಹೋಗುವ ದಾರಿಯಲ್ಲಿ ೧೨ ಕಿ.ಮಿ.ಕ್ರಮಿಸಿದರೆ ಗಾಜನೂರು ಎಂಬ ಹಳ್ಳಿ ಸಿಗುತ್ತದೆ. ಅಲ್ಲಿಯೇ ತುಂಗಾ ಡ್ಯಾಮ್ ಇರೋದು. ನಾನು ಓದಿದ ಮೊರಾರ್ಜಿ ದೇಸಾಯಿ ವಸತಿ ಶಾಲೆಯೂ ಅಲ್ಲೇ ಇರೋದು. ಜಿಲ್ಲಾ ಮಟ್ಟದ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಇಲ್ಲಿ ಐದರಿಂದ ಹತ್ತನೇ ತರಗತಿಯವರಿಗೆ ಊಟ ವಸತಿಯೊಂದಿಗೆ ಓದಲು ಅವಕಾಶ. ಈ ಶಾಲೆಯಲ್ಲಿ ಸತತ ಆರು ವರ್ಷಗಳ ಕಾಲ ಹಾಸ್ಟೆಲ್ ಜೀವನ ನಡೆಸುವುದೆಂದರೆ ಸಾಕಷ್ಟು ಹರಸಾಹಸಗಳು ಇದ್ದಿರಲೇಬೇಕಲ್ಲವೆ ? ಅಂಥದ್ದೇ ಒಂದು ರೋಚಕ ಮತ್ತು ಅವಿಸ್ಮರಣೀಯ ಘಟನೆಯನ್ನು ಇಲ್ಲಿ ಹಂಚಿಕೊಳ್ಳುತ್ತೇನೆ. ನಮ್ಮ ಶಾಲೆಯು ವಿದ್ಯಾಪೀಠದ ತೋಟದೊಳಗಿದ್ದ ಕಟ್ಟಡಗಳನ್ನು ಮಾತ್ರ ತಾತ್ಕಾಲಿಕವಾಗಿ ಬಾಡಿಗಿಗೆ ಪಡೆದುಕೊಂಡು ನಡೆಯುತ್ತಿತ್ತು . ಅಂದರೆ ಕೇವಲ ಕಟ್ಟಡಗಳು ಮಾತ್ರ ಶಾಲೆಗೆ ಸೇರಿದ್ದು , ಅಲ್ಲಿರುವ ಅಡಿಕೆ, ತೆಂಗು, ಸಪೋಟ, ಹಲಸು, ಸೀಬೇಕಾಯಿ ಮುಂತಾದ ಮರಗಳೆಲ್ಲ ವಿದ್ಯಾಪೀಠಕ್ಕೆ‌ ಸೇರಿದವಾಗಿದ್ದವು. ಎಲ್ಲ‌ ವಿದ್ಯಾರ್ಥಿಗಳಿಗೂ ನಮ್ಮ ಪ್ರಿನ್ಸಿಪಾಲರು ಯಾವ ಕಾರಣಕ್ಕೂ ತೋಟದಲ್ಲಿನ ಯಾವುದೇ ಹಣ್ಣುಗಳನ್ನು ಮುಟ್ಟಲೂಬಾರದು ಎಂಬ ಕಟ್ಟೆಚ್ಚರ ನೀಡಿದ್ದರು.
ಆಗಷ್ಟೇ ಬೇಸಿಗೆ ರಜೆ ಮುಗಿಸಿ ಶಾಲೆಗೆ ವಾಪಾಸ್ ಬಂದಿದ್ದೆವು. ಮಳೆಗಾಲ ಪ್ರಾರಂಭವಾಗುತ್ತಿದ್ದ ಕಾಲ. ಹಲಸಿನ ಹಣ್ಣುಗಳು ಮರದ ತುಂಬೆಲ್ಲ ನಳನಳಿಸುತ್ತಿದ್ದವು. ನಮ್ಮ ಸೀನಿಯರ್ ಬ್ಯಾಚ್ ನಲ್ಲಿದ್ದ ಜಗನ್ನಾಥ್ ಎಂಬುವವ ಹೇಗೋ ಒಂದು ಹಲಸಿನ ಕಾಯಿ
ಕಿತ್ತು ತಂದು ಡಾರ್ಮಿಟರಿಯಲ್ಲಿಟ್ಟು ಹಣ್ಣು ಮಾಡಿ ತನ್ನ ಬ್ಯಾಚಿನಲ್ಲಿದ್ದ ೧೯ ಹುಡುಗರಿಗೆಲ್ಲ ಹಂಚಿದ. ರುಚಿ ಹತ್ತಿತ್ತು ನೋಡಿ , ಮುಂದಿನ ಎರಡು ದಿನಗಳಲ್ಲಿ ಮತ್ತೆರಡು ಹಣ್ಣುಗಳನ್ನು ಕಿತ್ತು ತಂದು ಮತ್ತೊಮ್ಮೆ ಹಂಚಿಕೊಂಡಿದ್ದಾರೆ. ಆದರೆ ಹೀಗೆ ಹಂಚುವಾಗ ಜಗ್ಗ ತನ್ನ ಕೆಲವು ಆಪ್ತರಿಗೆ ಜಾಸ್ತಿ ಹಲಸಿನ ತೊಳೆಗಳನ್ನು ಹಂಚಿ, ಮತ್ತೆ ಕೆಲವರು ಕೇಳಿದರೂ ಅವರಿಗೆ ತೊಳೆಗಳನ್ನು ಕೊಡದ ಕಾರಣಕ್ಕೆ ಅಲ್ಲೊಂದು ಅತೃಪ್ತರ ಗುಂಪು ಹುಟ್ಟಿಕೊಂಡಿದೆ. ಕದ್ದ ಮಾಲನ್ನು ಹಂಚುವುದರಲ್ಲಿ ಕಿತ್ತಾಡುವುದರ ಅಪಾಯ ಹೇಗಿರುತ್ತದೆ ಅಂದರೆ ಆ ಅತೃಪ್ತರ ಗುಂಪಿಗೆ ಮಂಜಪ್ಪ ಎಂಬೊಬ್ಬ ನಾಯಕ ಹುಟ್ಟಿಕೊಂಡು ಎರಡು ಗುಂಪುಗಳಾಗಿ ವಿಭಜಿಸಲ್ಪಡುತ್ತದೆ. ಇದಾದ ನಂತರ ಇಬ್ಬರೂ ಜಿದ್ದಿಗೆ ಬೀಳುತ್ತಾರೆ.
ತಮ್ಮ ಡಾರ್ಮಿಟರಿ ಹತ್ತಿರ ಇದ್ದ ಅಡುಗೆ ಬಟ್ರೊರೊಬ್ಬರ ಕೊಠಡಿ ಖಾಲಿ ಇದ್ದದ್ದು ಇವರಿಗೆ ವರವಾಗಿ ಪರಿಣಮಿಸಿತು. ಮರುದಿನ ಜಗ್ಗ ತನ್ನ ಗುಂಪು ಕಟ್ಟಿಕೊಂಡು ಒಂದೇ ಏಟಿಗೆ ಸುಮಾರು ಹತ್ತು ಹಲಸಿನ ಹಣ್ಣುಗಳನ್ನು ಕಿತ್ತು ತಂದು ಅದರಲ್ಲಿಟ್ಟ.ಜಗ್ಗ ನನಗೆ ಅನ್ಯಾಯ ಮಾಡಿದ ಎಂದು ಮಂಜಪ್ಪ ಹಠಕ್ಕೆ ಬಿದ್ದು ತನ್ನ ಗುಂಪು ಕಟ್ಟಿಕೊಂಡು ಅವನೂ ಹತ್ತು ಕಾಯಿಗಳನ್ನು ಕಿತ್ತುಬಿಟ್ಟ. ಅವನು ಕಿತ್ತಿದ್ದು ತಿಳಿದು ಜಗ್ಗ ಮತ್ತೊಂದಷ್ಟು ಕಾಯಿಗಳನ್ನು ಕಿತ್ತ. ಹೀಗೆ ಎರಡೂ ತಂಡಗಳೂ ಪೈಪೋಟಿಗಿಳಿದು ಕೇವಲ ಎರಡು ದಿನಗಳಲ್ಲಿ ತಲಾ ಇಪ್ಪತ್ತು ಕಾಯಿಗಳನ್ನು ಮರದಿಂದ ಕಿತ್ತು ತಂದಿದ್ದಾರೆ. ಅವುಗಳನ್ನು ಖಾಲಿ ಕೊಠಡಿಯಲ್ಲಿ ಸೇಫ್ ಆಗಿ ಇಟ್ಟಿದ್ದೇವೆ ಎಂದು ಅವರು ಭಾವಿಸಿದ್ದಾರೆ. ಆದರೆ ಹಲಸು ಹಣ್ಣಾದಾಗ ಬರುವ ವಾಸನೆ ಬಗ್ಗೆ ವಿಶೇಷವಾಗಿ ಏನೂ ಹೇಳಬೇಕಿಲ್ಲ ಅಲ್ಲವಾ ? ಅಂದರೆ ಒಂದೇ ಜಾಗದಲ್ಲಿದ್ದ ಮರಗಳಿಂದ ಸುಮಾರು ನಲವತ್ತು ಕಾಯಿಗಳನ್ನು ಕಿತ್ತಿದ್ದಾರೆ. ಇಷ್ಟಾದರೂ ಎರಡೂ ಗುಂಪುಗಳವರು ಏನೊಂದೂ ಆಗದಂತೆ ತಮ್ಮ ಪಾಡಿಗೆ ತಾವಿದ್ದುಬಿಟ್ಟಿದ್ದಾರೆ.
ಶನಿವಾರ ಬೆಳಿಗ್ಗೆ ಇಡೀ ತೋಟವನ್ನು ಒಮ್ಮೆ ಸುತ್ತು ಹಾಕಲು ಬರುವ ವಿದ್ಯಾಪೀಠದ ಗಾರ್ಡನರ್ ಗೆ ಈ ಡಾರ್ಮಿಟರಿಯ ಬಳಿ ಇದ್ದ ಮರದ ಹತ್ತಿರ ಬಂದಾಗ ಆಶ್ಚರ್ಯ ಕಾದಿತ್ತು. ಮೂರು ದಿನದ ಹಿಂದೆ ಅಷ್ಟೊಂದು ಕಾಯಿಗಳಿದ್ದ ಮರದಲ್ಲಿ ಈಗ ಒಂದೂ ಹಲಸು ಕಾಣುತ್ತಿರಲಿಲ್ಲ. ಆದೇ ಸಮಯಕ್ಕೆ ಹಲಸಿನ ಹಣ್ಣುಗಳ ವಾಸನೆಯೂ ಮೂಗಿಗೆ ತಟ್ಟುತ್ತಿತ್ತು. ಆದರೆ ಆ ವಾಸನೆಯ ಮೂಲ ಎಲ್ಲಿದೆ ಎಂಬುದನ್ನು ಹುಡುಕಲು ಅವರಿಗೇನು ಕಷ್ಟ ಆಗಲಿಲ್ಲ. ನಮ್ಮ ಈ ಎರಡೂ ಗ್ಯಾಂಗಿನವರು ಹಠಕ್ಕೆ ಬಿದ್ದು ಹಲಸು ಕದಿಯುವಾಗ ಅವುಗಳನ್ನು ತಮ್ಮ ಬಟ್ಟೆಗೆ ತಾಕದಂತೆ ಹೊತ್ತೊಯ್ಯವ ಎಚ್ಚರಿಕೆಯನ್ನೇನೋ ತೆಗೆದುಕೊಂಡಿದ್ದಾರೆ ನಿಜ ಆದರೆ ಹಲಸಿನ ಜೊತೆಗೆ ಬರುವ ಮೇಣದ ಬಗ್ಗೆ ಗಮನವೇ ಹರಿಸಿಲ್ಲ ‌. ರಾತ್ರಿಯಲ್ಲಿ ಮರ ಹತ್ತಿ ಕೈಗೆ ಸಿಕ್ಕ ಸಿಕ್ಕ ಹಣ್ಣುಗಳನ್ನು ಕಿತ್ತು ರೂಮಿಗೆ ಕದ್ದು ಸಾಗಿಸುವಾಗ ನೆಲದ ಮೇಲೆ ಬಿದ್ದ ಮೇಣವನ್ನು ಅವರ್ಯಾರು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಆದರೆ ವಿದ್ಯಾಪೀಠದ ಪ್ರಿನ್ಸಿಪಾಲರು ಬಂದು ತಾನೊಬ್ಬ ಸಿಐಡಿ ಎನ್ನುವುದನ್ನು ಪ್ರೂವ್ ಮಾಡಿ ಬಿಟ್ಟರು. ನೆಲದಮೇಲೆ ಬಿದ್ದಿದ್ದ ಹಲಸಿನ ಮೇಣವನ್ನೇ ಉದ್ದಕ್ಕೂ ಹಿಂಬಾಲಿಸಿದಾಗ ಅದು ನೇರವಾಗಿ ಹುಡುಗರ ಡಾರ್ಮಿಟರಿಗೇ ಕರೆದೊಯ್ದಿದೆ. ಆದರೂ ಇವರ್ಯಾರು ಒಪ್ಪಿಕೊಳ್ಳದೆ ‘ಅದು ನಮ್ ಹುಡುಗ್ರು ಪೇಸ್ಟ್ ಹಾಕ್ಕೋಂಡ್ ಇಲ್ಲೆಲ್ಲ ಬ್ರಷ್ ಮಾಡ್ತಾರೆ ಅದಕ್ಕೆ ಹೀಗೆ ಬಿದ್ದಿದೆ ‘ ಎಂದು ಸಬೂಬು ಹೇಳಲು ಪ್ರಯತ್ನಿಸಿದ್ದಾರೆ.‌ಆದರೆ ರೂಮೊಳಗಿದ್ದ ಹಲಸಿನ ಹಣ್ಣುಗಳು ಸಾಕ್ಷಿ ಹೇಳಿಬಿಟ್ಟಿವೆ.
ಇಂತಹ ಒಂದು ಕಂಪ್ಲೇಂಟ್ ಗಾಗಿ ಕಾಯುತ್ತಿದ್ದ ವಿದ್ಯಾಪೀಠದವರು ನಮ್ಮ ಪ್ರಾಂಶುಪಾಲರಾಗಿದ್ದ ಮಂಜುನಾಥಯ್ಯನವರ ಬಳಿ ಬಂದು ಈ ದೂರು ಕೊಟ್ಟಿದ್ದೇ ತಡ, ಆ ಬ್ಯಾಚ್ ನ ಎಲ್ಲಾ ವಿದ್ಯಾರ್ಥಿಗಳನ್ನೂ ತರಗತಿಯಿಂದ ಹೊರಗೆ ಕರೆದು ಫೀಲ್ಡ್ ನಲ್ಲಿ ನಿಲ್ಲಿಸಿ ಕೇಳಿದಾಗ ಎರಡೂ ಗುಂಪುಗಳಲ್ಲಿ ಎಂಥಾ ಒಗ್ಗಟ್ಟು ಅಂತೀರಾ ? ಯಾರೊಬ್ಬರೂ ಪರಸ್ಪರರ ಮೇಲೆ ದೂರು ಹಾಕಿಕೊಳ್ಳದೆ ‘ ಇಲ್ಲ ನಾವು ಹಲಸು ಕದ್ದಿಲ್ಲ ‘ ಎಂದೇ ವಾದ ಮಾಡಲು ಯತ್ನಿಸಿದರು. ಯಾವಾಗಲೂ ನಮ್ಮ ಪರವಾಗಿ ನಿಲ್ಲುತ್ತಿದ್ದ ಸತೀಶ್ ಸರ್ ಕೂಡ ಅಂದು ಕೋಪಿಸಿಕೊಂಡಿದ್ದರು. ಪ್ರದೀಪ್ ಮತ್ತು ಆದಿತ್ಯ ಎಂಬಿಬ್ಬರು ಮಾತ್ರ ಎರಡೂ ಗುಂಪಿಗೆ ಸೇರದ ಕಾರಣ ಅವರನ್ನು ಹೊರತುಪಡಿಸಿ ಉಳಿದವರಿಗೆಲ್ಲ ಬೆತ್ತದ ರುಚಿಯನ್ನೂ ಫೀಲ್ಡ್ ನಲ್ಲಿಯೇ ತೋರಿಸಿದ ಪ್ರಿನ್ಸಿಪಾಲರು ಸಾಮಾನ್ಯವಾಗಿ ಯಾವುದೇ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹೆದರಿಸಲು ಇರುವ ಏಕೈಕ ಅಸ್ತ್ರ ವಾದ ‘ಟಿ. ಸಿ. ಕೊಡ್ತೀವಿ ಎಲ್ಲರಿಗೂ ‘ ಎಂಬುದೊಂದೇ ಮಾತು. ಎಷ್ಟೇ ಕಾಡಿ ಬೇಡಿ‌ ಕ್ಷಮೆ ಕೇಳಿದರೂ ಆ ನಿರ್ಧಾರ ಅಚಲವಾದಂತೆ ಎಲ್ಲ ಶಿಕ್ಷಕರೂ ವರ್ತಿಸುತ್ತಿದ್ದಾಗ. ಆ ಬ್ಯಾಚ್ ನಲ್ಲಿದ್ದ ಹುಡುಗಿಯರು ತಮ್ಮ ಗೆಳೆಯರಿಗೋಸ್ಕರ ಕಣ್ಣೀರು ಹಾಕಿ ‘ ಅವರ ಪರವಾಗಿ ನಾವು ಕ್ಷಮೆ ಕೇಳ್ತೀವಿ ಮತ್ತು ಇನ್ಯಾವತ್ತೂ ಇಂತಹ ತಪ್ಪು ಆಗದಂತೆ ನೋಡಿಕೊಳ್ತೀವಿ ‘ ಎಂಬ ಶ್ಯೂರಿಟಿಯನ್ನ ತಾವು ಒಂದೇ ಒಂದು ಹಲಸಿನ ಹಣ್ಣಿನ ತೊಳೆ ಪಡೆಯದಿದ್ದರೂ ಆ ಹುಡುಗಿಯರೆಲ್ಲ ಸೇರಿ ಕೊಟ್ಟಿದ್ದರ ಫಲವಾಗಿ ನಮ್ಮ ಪ್ರಿನ್ಸಿಪಾಲರ ಮನಸ್ಸೂ ಕರಗಿ ಲಾಸ್ಟ್ ವಾರ್ನಿಂಗ್ ಎಂಬಂತೆ ಎಲ್ಲರ ಹತ್ತಿರ ವಾಗ್ದಾನ ಪಡೆದು ‌ಹಣ್ಣಿನ ಕಳ್ಳರನ್ನೆಲ್ಲ ಕ್ಷಮಿಸಿದರು.
ಹೀಗೆ ಹಲಸಿನ ಹಣ್ಣು ಕದ್ದವರು ಅದರ ಮೇಣದಿಂದಾಗಿ ಸಿಕ್ಕಿಬಿದ್ದ ಪ್ರಕರಣ ಇಡೀ ಶಾಲೆಯಲ್ಲಿ ದೊಡ್ಡ ಸುದ್ದಿಯಾಗಿ ಅನೇಕ ವರ್ಷಗಳ ಕಾಲ ಚಾಲ್ತಿಯಲ್ಲಿತ್ತು ಮತ್ತು ಹತ್ತನೇ ತರಗತಿಯ ಬೀಳ್ಕೊಡುಗೆ ಸಮಾರಂಭದಲ್ಲಿಯೂ ಇದರ ಪ್ರಸ್ತಾಪ ಬಂತು.
ಇಂತಹ ದೊಡ್ಡ ಪ್ರಕರಣವೊಂದು ನಮ್ಮ ಮುಂದಿದ್ದರೂ ಜ್ಯೂನಿಯರ್ ಗಳಾದ ನಾವ್ಯಾರು ಇದರಿಂದ ಅಂಜಲಿಲ್ಲ . ಆನಂತರವೂ ನಾವು ಸಪೋಟ ಕಾಯಿಗಳನ್ನು ಕಿತ್ತು ನೆಲದಲ್ಲಿ ಹೂತಿಟ್ಟು ತಿನ್ನುತ್ತಿದ್ದೆವು, ನಡುರಾತ್ರಿಯಲ್ಲಿ ಎಳನೀರು ಇಳಿಸಿ ಕುಡಿಯಿತ್ತಿದ್ದೆವು . ಹಲಸಿನ ಕಾಯಿ ಕಿತ್ತು ಯಾರಿಗೂ ಗೊತ್ತಿರದ ದಾರಿಯಿಂದ ಗುಡ್ಡದ ಮೇಲೆ ಬಚ್ಚಿಟ್ಟು ಬಂದು ನಾಲ್ಕೈದು ದಿನಗಳ ನಂತರ ಮತ್ತೆ ಅದನ್ನು ತಂದು ತಿನ್ನುತ್ತಿದ್ದೆವು . ನಮ್ಮ ಹಿರಿಯರು ಸಿಕ್ಕಿಬಿದ್ದ ಹಾಗೆ ಸುಲಭವಾಗಿ ಸುಳಿವು ಬಿಟ್ಟುಕೊಡಲಿಲ್ಲ ಅಷ್ಟೇ.
ಇವು ಕೇವಲ ನನಗೆ‌ ಗೊತ್ತಿರುವ ಕಳ್ಳತನದ ಪ್ರಕರಣಗಳು ಅಷ್ಟೇ. ಇದನ್ನು ರಿವೈಂಡ್ ಮಾಡಿಕೊಳ್ಳಲು ನಾನು ಮಲ್ಲೇಶನಿಗೆ ಕಾಲ್ ಮಾಡಬೇಕಾಯಿತು. ಅವನು ರಸವತ್ತಾಗಿ ವಿವರಿಸಿದ್ದನ್ನು ನಾನಿಲ್ಲಿ ಬರಹ ಮಾಡಿದ್ದೇನೆ. ಇನ್ನು ಇಂತಹ ಅದೆಷ್ಟು ವಿಷ್ಯಗಳು ತೆರೆ ಮರೆಯಲ್ಲಿವೆಯೋ?
ಅಂದಹಾಗೆ ಇಷ್ಟೆಲ್ಲ ನೆನಪಾಗಲು ಕಾರಣ ಕಳೆದವಾರ ನೋಡಿದ ಎರಡು ಕನ್ನಡ ಚಿತ್ರಗಳು. ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ‘ ಸಿನಿಮಾ ನೋಡಿದಾಗ ನೆನಪಾದ ಈ ರೀತಿಯ ಅದೆಷ್ಟೋ ತರ್ಲೆಗಳು , ತುಂಟಾಟಗಳು
” ಒಂದಲ್ಲಾ ಎರಡಲ್ಲಾ ”
ಎಲ್ಲರ ಬಾಲ್ಯವೂ ಇಂತಹ ಸಂದರ್ಭಗಳ ಒಟ್ಟು ಮೊತ್ತವೇ ಆಗಿರುತ್ತದೆ . ಅದನ್ನು ಆಗಾಗ ನಾವು
ರೀ-ವಿಸಿಟ್ ಮಾಡುತ್ತಿರಬೇಕಷ್ಟೇ. ಈಗ ಶಾಲೆಗೆ ಹೊಸ‌ ಕ್ಯಾಂಪಸ್ ಇದೆ . ಸುಸಜ್ಜಿತ ಕಟ್ಟಡಗಳಿವೆ . ಆದರೆ ಕದಿಯಲು ಹಲಸಿನ ಹಣ್ಣುಗಳಿಲ್ಲ ಪಾಪ.

‍ಲೇಖಕರು avadhi

4 September, 2018

ನಿಮಗೆ ಇವೂ ಇಷ್ಟವಾಗಬಹುದು…

3 Comments

  1. Dr,Sasvehallisatish

    ನೀನು ಹೇಳಿದ್ರೆ ಹಳೆಯ ಮತ್ತು‌ಹೊಸ ಬಿಲ್ಡಿಂಗ್ ಫೋಟೋ ಕಳಸ್ತಾ ಇದ್ದೆ. ಹಲಸಿನ ಹಣ್ಣಿನ ಸಮೇತ

  2. Shiva Raj

    i know new campus only. now P U also started..

  3. Jnaneshwara

    ಬಹಳ ಒಳ್ಳೆಯ ನಿರ್ಭೀತಿಯ , ಸರಳ, ಸರಾಗಿ ಓದಿಸಿದ, ಉತ್ತಮ ಲೇಖನ, ಶಿವು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading