
ಕೆ ರಾಜಕುಮಾರ್
ಸ್ವಾನ್ ಕಿಟ್ಟಿ ಚಿತ್ರ: ಕಸ್ತೂರಿ ರಂಗಪ್ಪ
ಲೇಖಕರು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ನ ಗೌರವ ಕಾರ್ಯದರ್ಶಿಗಳಾಗಿದ್ದವರು.
ಸ್ವಾನ್ ಕಿಟ್ಟಿಯ ಆತ್ಮೀಯರು. ಸ್ವಾನ್ ನ ಕೃಷ್ಣಮೂರ್ತಿ ಅವರಿಗೆ ಅರವಿಂದ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಇಲ್ಲಿ ಆತ್ಮೀಯ ನೋಟ ಹರಿಸಿದ್ದಾರೆ.
ಕೃಷ್ಣಮೂರ್ತಿ ಎಂದರೆ ಯಾರಿಗೆ ಗೊತ್ತು? ಲೇಖನ ವ್ಯವಸಾಯದಲ್ಲಿ ತೊಡಗಿರುವ ನಮಗೆ ಕಿಟ್ಟಿ ಎಂದರೆ ಯಾರು ಎಂಬ ಪ್ರಶ್ನೆ ಕೇಳಿದರೆ ಥಟ್ ಅಂತ ಉತ್ತರ ಹೇಳುತ್ತೇವೆ. ಬದುಕನ್ನು ಅರಸಿಕೊಂಡು ಕೋಟೆ ಕೊತ್ತಲಗಳ ನಾಡಾದ ಚಿತ್ರದುರ್ಗದಿಂದ ಬಂದದ್ದು ಬೆಂಗಳೂರೆಂಬ ಈ ಅಂತಃಕರಣ ನಗರಿಗೆ. ನೆಲೆಗೊಂಡಿದ್ದು, ಬದುಕು ಕಟ್ಟಿಕೊಂಡಿದ್ದು ಇಲ್ಲಿನ ಲಕ್ಷ್ಮೀ ಮುದ್ರಣಾಲಯದಲ್ಲಿ. ಅದರ ಮಾಲೀಕರಾದ ಬೈಸಾನಿ ಅಶೋಕ್‌ಕುಮಾರ್ ಅವರ ಮಾರ್ಗದರ್ಶನದಲ್ಲಿ ಮುದ್ರಣದ ವಿಚಾರಗಳನ್ನು ಆಮೂಲಾಗ್ರವಾಗಿ ಕಲಿತರು.
ಇಂದು ಇಡೀ ಕರ್ನಾಟಕದಲ್ಲಿ ಪುಸ್ತಕಗಳ ಮುದ್ರಣಕ್ಕೆ ಖ್ಯಾತಿ ಪಡೆದ ಅಚ್ಚುಕೂಟ ಸ್ವಾನ್ ಪ್ರಿಂಟರ್ಸ್. ಹಾಗಾಗಿ ಸ್ವಾನ್ ಕಿಟ್ಟಿ ಎಂಬುದು ಪ್ರಕಾಶಕರ ವಲಯದಲ್ಲಿ ಜನಜನಿತವಾಗಿರುವ ಹೆಸರು. ಒಂದೇ ಸೂರಿನಡಿ ಪುಸ್ತಕದ ಸಮಸ್ತ ಕೆಲಸವೂ ಸಾಧ್ಯವಾಗುವಂತಹ ಸಾಮರ್ಥ್ಯ ಪಡೆದ ಅಚ್ಚುಕೂಟವಿದು. ಸೊಗಸು, ಸಮಯಪಾಲನೆ ಮತ್ತು ವೇಗ ಇದರ ಅಗ್ಗಳಿಕೆಗಳು. ಇದಕ್ಕೆ ದೃಢೀಕರಣವೆಂಬಂತೆ ಇವರು ಕನ್ನಡ ಪುಸ್ತಕ ಪ್ರಾಧಿಕಾರದ ‘ಮುದ್ರಣ ಸೊಗಸು’ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ. ಕಿಟ್ಟಿಯವರು ಲೇಖಕರೂ ಹೌದು. ಅವರ ಅತ್ಯಂತ ಅಪರೂಪದ ಕೃತಿ ‘ಮುದ್ರಕನ ಡೈರಿ’ಯ ಕೆಲವು ಭಾಗಗಳು ‘ಅವಧಿ’ಯಲ್ಲಿ ಪ್ರಕಟವಾಗಿ ಜನಪ್ರಿಯವಾಗಿದೆ.

ಇದೀಗ ಅವರು ಕರ್ನಾಟಕದಲ್ಲಿ ‘ಮುದ್ರಣಾಲಯಗಳ ಇತಿಹಾಸ’ ಎಂಬ ಹೆಬ್ಬೊತ್ತಿಗೆಗೆ ಮಾಹಿತಿಯ ಶೋಧದಲ್ಲಿ ತೊಡಗಿದ್ದಾರೆ. ಕೃಷ್ಣಮೂರ್ತಿ ಸಜ್ಜನ, ಸಂಭಾವಿತ, ಸರಳತೆಯ ಸಾಕಾರ. ಸದಾ ದುಡಿಮೆಯಲ್ಲಿ ನಿರತರಾದ ಕಾರ್ಯಚಟಿ. ಮುದ್ರಣಾಲಯದ ಮಾಲೀಕರೆಂದರೆ ಸಿಟ್ಟು, ಸೆಡವು, ಸರಣಿ ಸುಳ್ಳು, ತಟವಟ, ಹಪಹಪಿಕೆ ಇವೆಲ್ಲವೂ ಸಾಮಾನ್ಯ. ಆದರೆ ಕೃಷ್ಣಮೂರ್ತಿ ಅವರು ಈ ವಿಷಯದಲ್ಲಿ ನಿಜಕ್ಕೂ ಮಿಸ್ಟರ್ ಕೂಲ್! ಅರಚಿದ್ದು, ಕಿರುಚಿದ್ದು, ಕೂಗಾಡಿದ್ದು ನಾನು ಕಂಡೇ ಇಲ್ಲ. ಅವರ ನೆಮ್ಮದಿಗೆ ಭಂಗ ಬಂದಿದ್ದೇ ಇಲ್ಲ. ಅವರದು ಮೃದು ಮಾತೂ ಹೌದು. ಮೆಲು ಮಾತೂ ಹೌದು. ಹಾಗಾಗಿ ಅವರ ನಡೆ ಅನನ್ಯ. ತನ್ನನ್ನು ತಿದ್ದಿ-ತೀಡಿ, ಕಡೆದು ರೂಪಿಸಿದ ಅಶೋಕ್ ಕುಮಾರ್ ಅವರ ಬಗೆಗೆ ಇನ್ನಿಲ್ಲದ ಕಕ್ಕುಲತೆ.
ಇಂದಿಗೂ ಅವರನ್ನು ಉಲ್ಲೇಖಿಸುವುದು ಯಜಮಾನರು ಎಂದೇ! ಒಂದೆರಡು ವರ್ಷದ ಹಿಂದೆ ಅಶೋಕ್ ಅವರಿಗೆ ಪ್ರಶಸ್ತಿ ಬಂದಾಗ, ನನಗೆ ಕರೆ ಮಾಡಿ ಯಜಮಾನರನ್ನು ಅಭಿನಂದಿಸಿದಿರಾ ಸರ್, ಅವರ ಸಂಖ್ಯೆ ಕೊಡಲೇ ಎಂದರು. ತಮಗೇ ಪ್ರಶಸ್ತಿ ಬಂದಷ್ಟು ಸಂಭ್ರಮಿಸಿದರು. ಅವರ ನಿಯ್ಯತ್ತಿಗೆ, ನಿಷ್ಠೆಗೆ ಇದೊಂದು ನಿದರ್ಶನ ಸಾಕಲ್ಲವೆ? ಲೇಖಕ-ಮುದ್ರಕ ಕೃಷ್ಣಮೂರ್ತಿ ಅವರ ಶಿಖೆಗೆ ಇದೀಗ ಗೆಳೆಯರ ಬಳಗದ ‘ಕನ್ನಡ ಅರವಿಂದ’ ಪ್ರಶಸ್ತಿ! ಅವರಿಗೆ ಶುಭಾಭಿನಂದನೆಗಳು. ತಲೆಬಾಗಿ ನಡೆವ ಕಿಟ್ಟಿ ಪುರಸ್ಕಾರ ಪಡೆಯುವ ಘಳಿಗೆಯಲ್ಲಿ ತಲೆಯೆತ್ತಿ ಪೇಟ ತೊಡಿಸಿಕೊಳ್ಳಲಿ. ಅಂದು ಅವರ ನಿಲವು ಪುರಂದರದಾಸರ ರಚನೆಯ ‘ಕೃಷ್ಣಮೂರ್ತಿ ಕಣ್ಣಮುಂದೆ ನಿಂತಿದಂತಿದೆ’ ಎಂಬಂತಿರಲಿ.






0 Comments