ಸ್ವರ್ಣ ಬರೆದ ’ಚಿರ ವಿರಹಿ ರಾಧೆ’ಯ ಕಥೆ

ಸ್ವರ್ಣಾ ಎನ್ ಪಿ

ಪದವಿಗಾಗಿ ರಣ ಬಿಸಿಲಿನ ಮಣ ಖಾರ ತಿನ್ನುವ ಊರು ಬಳ್ಳಾರಿಗೆ ಹೋದಾಗ ಆ ಊರು, ಊರು ಅನ್ನಿಸಿಯೇ ಇರಲಿಲ್ಲ ! ಮಕ್ಕಳು ರಸ್ತೆಯ ಮೇಲೆ ಮಾಡಿದ ಚಿತ್ತಾರವನ್ನು ಹಾರುತ್ತಾ ಮಡಿ ಮಡಿ ಅನ್ನೋರು , ವಾರದಿಂದ ವಾರಕ್ಕೆ ನೀರು ಬಂದರೆ ಸ್ನಾನ ಮಾಡೋರು ಥರಾವರಿ ಜನ ಆ ಊರಲ್ಲಿ. ಅಲ್ಲಿನ ಭಾಷೆಯೂ ಅಲ್ಲಿನ ಒಂದು ವೈಶಿಷ್ಟ್ಯ . ಮನೆಯಲ್ಲಿ ಅಜ್ಜಿಯದು ಸಣ್ಣ ದನಿಯ ಮೈಸೂರು ಕನ್ನಡ, “ಸೌಖ್ಯವೇ …..” ಅಂತ ರಾಗ ಎಳೆದು ಮಾತಾಡಿದ್ರೆ ನಮ್ಮೂರಿನ ಬಯಲು ಸೀಮೆ ಜನಕ್ಕೆ ನಗುವುದಕ್ಕೊಂದು ಸರಕು. ನಾವು “ಆರಾಮ, ಚೆನ್ನಾಗಿದೀರ ?” ಅಂದು ಮುಗಿಸಿ ಬಿಡ್ತಿದ್ವಿ. ಆದ್ರೆ ಈ ಊರಲ್ಲಿ ಹೊಸ ಪದ “ಭೇಷ್ ಇದ್ದಿಯೇನು ?” ಅನ್ನೋರು. ಚಂದ , ಸುಂದರ ಅನ್ನೋದು ಅವರ ಭಾಷೇಲಿ ‘ ಭೇಷ್ ‘ ಆಗಿತ್ತು. ಅತ್ತ ತೆಲುಗಲ್ಲಿ ಬಳಸದ ಇತ್ತ ಕನ್ನಡದಲ್ಲೂ ಅಷ್ಟಾಗಿ ಬಳಸಲ್ಪಡದ ಈ ಪದ ಅದೆಲ್ಲಿಂದ ಬಂದು ಬಳ್ಳಾರಿ ಸೇರಿತೋ ಭಾಷಾ ಪಂಡಿತರೇ ಹೇಳಬೇಕು.

ಬೇರೆ ಊರಿಂದ ಹೋದ ಒಂದಷ್ಟು ಹುಡುಗಿಯರಿಗೆ ಒಂದು ಮಠದ ಬೀದಿಯಲ್ಲಿ ಒಂದು ಸಣ್ಣ ಮನೆಯಲ್ಲಿ ಹಾಸ್ಟೆಲ್ ಅಂತ ಮಾಡಿದ್ದರು. ಕಾಲೇಜ್ನಲ್ಲಿ ಒಂದಷ್ಟು ಜನ ಹುಡುಗಿಯರು ಬಳ್ಳಾರಿಯವರೇ ಇದ್ದರು. ಅದೇನೋ ಯಾವುದೇ ಕಾಲೇಜ್ನಲ್ಲಿ ಹೋದರೂ ಅದೇ ಊರಿನವರಾದ, ಲೋಕಲೈಟ್ಸ್ ಅಂತ ಕರೆಸಿಕೊಳ್ಳುವ ಸ್ಥಳೀಯರಿಗೂ ಹಾಸ್ಟೆಲ್ನಲ್ಲಿರುವ ಹಾಸ್ಟಲೈಟ್ಸ್ಗಳಿಗೂ ನಡುವೆ ಒಂದು ಅಂತರ ಇರತ್ತೆ. ಹೋಗಿ ಕೆಲ ದಿನಗಳ ನಂತರ ನಾನು ಕ್ಲಾಸ್ ಒಳಗೆ ಅಡಿ ಇಟ್ಟ ಕೂಡಲೇ ಕಂಡದ್ದು ಕಾಲು ಕೆಜಿ ಅರಿಶಿನ ಕೆನ್ನೆಗೆ ಬಳಿದುಕೊಂಡ, ನೋಡಲು ಅಪ್ಪಟ ತಮಿಳು ಹುಡುಗಿಯಂತ್ತಿದ್ದ , ಕಪ್ಪಗಿನ ಲಕ್ಷಣವಾದ ಹುಡುಗಿಯೊಬ್ಬಳನ್ನ. ಮೊದಲ ಬಾರಿ ಮನೆ ಬಿಟ್ಟುಹಾಸ್ಟೆಲ್ಗೆ ಹೋದ ಹುಡುಗಿಯರು ಸರತಿಯಂತೆ ದಿನಾ ಕ್ಲಾಸಿನಲ್ಲಿ ಅಬ್ಬಾಯಿ ನಾಯ್ಡು ಸಿನೆಮ ಹಿರೋಯಿನ್ ಥರ ಅಳ್ತಿದ್ವಿ. ನನ್ನ ಪಾಳಿಯ ಪಾತ್ರ ಮಾಡಿ, ಅತ್ತು ಸುಸ್ತಾಗಿ ಕಣ್ಣಿರ ಖೋಟಾ ಮುಗಿಸಿ ಕೂತಿದ್ದಾಗ, ಆ ಹುಡುಗಿ ಪಕ್ಕ ಬಂದು ಕೂತು ” ಈಗ ಭೇಷ್ ಆದಿ?” ಅಂತ ಮುಗುಳ್ನಗೆಯೊಂದಿಗೆ ಕೇಳಿದರೆ ಇದೊಳ್ಳೆ ‘ಭೇಷ್’ ಆಯ್ತಲ್ಲಪ್ಪಅಂತ ನಾ ಅವಳ ಮುಖ ನೋಡಿದೆ. ಗುಂಡು ಮುಖ, ತುಂಬಿದ ಕೆನ್ನೆಯ ಸುಂದರಿಯವಳು. “ನನ್ ಹೆಸರು ರಾಧ” ಅಂದ್ಲು. ಒಂದೆರಡು ನಿಮಿಷ ಬಿಟ್ಟು “ಮಂಡಾಳ್ ಒಗ್ಗಣಿ ತಂದೀನಿ ತೊಗೋ” ಅಂತ ಒಂದು ಡಬ್ಬ ಮುಂದೆ ಹಿಡಿದರೆ, ಈ ಮಂಡಾಳ್ ಅಂದ್ರೆ ಯಾವ ಪ್ರಾಣಿಯಪ್ಪ ಅಂತ ನಾ ಮನದಲ್ಲೇ ಎನ್ಸೈಕ್ಲೋಪಿಡಿಯ ತೆಗೆದಿದ್ದೆ.ಡಬ್ಬ ತೆಗೆದರೆ ಅಲ್ಲಿದದ್ದು ಮೈಸೂರ್ ಕಡೆ ಪುರಿ , ಕೆಲ ಕಡೆ ಮಂಡಕ್ಕಿ ಅಂತ ಕರೆಸಿಕೊಳ್ಳುವ ಭತ್ತದ ಒಂದು ರೂಪ. ನಮ್ಮೂರಿನ ಮಂಡಕ್ಕಿ ಉಸುಳಿ, ಆದರೆ ನಮ್ಮ ಮಂಡಕ್ಕಿಗಿಂತ ಬಳ್ಳಾರಿ ಪುರಿ ದಪ್ಪ, ರುಚಿಯೂ ಬೇರೆ. ಹಾಸ್ಟೆಲ್ ಊಟ ತಿಂದು ಬರಗೆಟ್ಟ ಹಾಸ್ಟಲೈಟ್ಸ್ಗಳು ಕಾರ್ಗಿಲ್ ಯುಧ್ಧ ವೀರೆಯರಂತೆ ಡಬ್ಬಕ್ಕೆ ಮುತ್ತಿಗೆ ಹಾಕಿದ್ದ ಕಂಡು, ಮಾರನೆ ದಿನ ದಿಂದ ಅವಳು ನಮಗೇ ಅಂತ ಒಂದು ಡಬ್ಬ ಹೆಚ್ಚು ತರೋಳು.
ರಾಧಾಳ ಬರವಣಿಗೆಯೂ ಅವಳಷ್ಟೇ ಮುದ್ದಾಗಿತ್ತು. ಎರಡು ಗೆರೆಗಳ ನಡುವೆ ದುಂಡಾಗಿ ಬರೆದ ಚಿಕ್ಕ ಚಿಕ್ಕ ಅಕ್ಷರಗಳು. ಇಂತಿಪ್ಪ ರಾಧಂಗೆ ನಾವು ೨ನೆ ಸೆಮಿಸ್ಟರ್ಗೆ ಬರುವ ಹೊತ್ತಿಗೆ ಒಬ್ಬ ಬಾಯ್ ಫ್ರೆಂಡ್ ಇದ್ದಾನೆ ಅಂತ ಗುಸು ಗುಸು ಶುರುವಾಯಿತು. ಆಂಧ್ರದ ಒಳನಾಡಿನಿಂದ ಬಂದ ಅವನ ಹೆಸರು ಸೀನು ಬಾಬು. ಒಂದಾರಡಿ ಎತ್ತರಕ್ಕೆ ಕಡ್ಡಿಯ ಥರ ಇದ್ದ ಅಸಾಮಿ. ರಾಧಾ ಅವನ ಭುಜಕ್ಕೂ ಬರುತ್ತಿರಲಿಲ್ಲ. ಜಯಾ ಬಚ್ಚನ್ , ಅಮಿತಾಬ್ಹ್ ಬಚ್ಚನ್ ಉಪಮೆಯ ಹಳೆಯದು ಅಂತಲೋ ಏನೋ ಯಾರೂ ಅವರನ್ನ ಹಾಗೆ ಕರೆಯುತ್ತಿರಲಿಲ್ಲ.
ಏನೇನೋ ಕಥೆಗಳು ಹರಿದಾಡುತ್ತಿದ್ದವು ಅವರಬಗ್ಗೆ ಕಾಲೇಜಿನಲ್ಲಿ. ಅದೆಲ್ಲವನ್ನೂ ಮೀರಿ ಇಬ್ಬರೂ ಚೆನ್ನಾಗೇ ಓದುತ್ತಿದ್ದರು. ನಾವು ಬಹುಶಃ ಮೂರನೇ ಸೆಮಿಸ್ಟರ್ ಪ್ರಾಕ್ಟಿಕಲ್ ಪರೀಕ್ಷೆ ಮುಗಿಸಿ ಥಿಯರಿಗೆ ತಯಾರಿ ನಡೆಸಿದ್ದೆವು. ಆಗ ಬಂತು ಒಂದು ಸುಧ್ಧಿ. ರಾಧಾ ಬೆಂಕಿ ಹಚ್ಚಿ ತನ್ನ ತಾನೇ ಸುಟ್ಟುಕೊಂಡಳಂತೆ . ಈಗ ಸರ್ಕಾರಿ ಆಸ್ಪತ್ರೆಯಲ್ಲಿದಾಳಂತೆ ಅಂತ. ಎಲ್ಲ ಹುಡುಗಿಯರು ಸರ್ಕಾರಿ ಆಸ್ಪತ್ರೆ ಆವರಣಕ್ಕೆ ಹೋದ್ವಿ. ದೂರದ ಯಾವುದೋ ಒಂದು ಕಟ್ಟಡ ತೋರಿಸಿ ಅಲ್ಲಿದ್ದಾಳೆ ಅಂತ ನಮಗಿಂತ ಮುಂಚೆ ಹೋದ ಹುಡುಗಿಯರು ಹೇಳಿದ್ರು. ಕೆಲ ಹುಡುಗಿಯರು ರಾಧಾಳನ್ನ ನೋಡಬೇಕು ಅಂತ ಹೋದರು. ನನಗೇಕೋ ಹೋಗುವ ಧೈರ್ಯ ಬರಲಿಲ್ಲ. ನಾವು ಹೋದ ಮಾರನೆ ದಿನ ರಾಧಾ ಇನ್ನಿಲ್ಲ ಅನ್ನೋ ಸುಧ್ಧಿ ಬಂತು.
ರಾಧಳದು ಮಹಡಿ ಮನೆಯಾಗಿತ್ತು. ಕುಟುಂಬದವರೆಲ್ಲಾ ಕೆಳಗಿದ್ದ ಸಮಯದಲ್ಲಿ ರಾಧಾ ಬೆಂಕಿ ಹಚ್ಚಿ ಕೊಂಡಳಂತೆ,
ಬೆಂಕಿಯಲ್ಲಿ ಕಿವಿಯಲ್ಲಿದ್ದ ಮುತ್ತಿನ ಓಲೆ ಕರಗಿದರೂ ಅವಳೊಂಚೂರು ಸದ್ದು ಮಾಡಲಿಲ್ಲವಂತೆ. ಇದವಳ ಮೂರನೇ ಪ್ರಯತ್ನವಂತೆ ಅಂತ ಏನೇನೋ ಸುಧ್ಧಿ ಬಂತು. ಸೀನು ಬಾಬುನೇ ಸಾವಿಗೆ ಕಾರಣ ಅಂತಲೂ ಕಥೆಗಳು ಹುಟ್ಟಿಕೊಂಡವು. ಅವನೂ ನಂತರ ಒಂದೆರಡು ತಿಂಗಳು ಕಾಲೇಜಿನಲ್ಲಿ ಕಾಣಲಿಲ್ಲ. ಒಟ್ಟಿನಲ್ಲಿ ರಾಧೆಗೆ ಸಂಗಾತಿ ಸಿಗಲಿಲ್ಲ. ನಮ್ಮ ಹಾಸ್ಟೆಲಿನ ಕೆಲ ಹುಡುಗಿಯರು ಅವಳನ್ನ ನೋಡಲು ಹೋದಾಗ ‘ನೀರು ನೀರು’ ಅನ್ನುತ್ತಿದ್ದಳಂತೆ. ದಿನವೂ ನಮಗೆ ಮನೆಯ ರುಚಿ ರುಚಿ ತಿಂಡಿ ತಿನ್ನಿಸಿದ ರಾಧ ನೀರಿಲ್ಲದೆ ಒದ್ದಾಡಿದ್ದನ್ನ ನೆನಸಿಕೊಳ್ಳಲೂ ಭಯವಾಗತ್ತೆ. ಸುಂದರ ನಗುವಿನ ರಾಧಾ ಸುಟ್ಟು ಕರಕಲಾಗಿ ಹೋದದ್ದನ್ನ ನಾನಿಂದೂ ನಂಬಿಲ್ಲ . ಯಾರಾದರೂ ‘ಮಂಡಾಳ್ ಒಗ್ಗಣಿ’ ಅಂದರೆ ನನಗೆ ಇಂದೂ ಮುಖದಲ್ಲಿ ಅರಿಶಿನದ ಹೊಳಪಿನೊಂದಿಗೆ ನಗುತ್ತಿರುವ ರಾಧೆ ” ಈಗ ಭೇಷ್ ಆದಿ?” ಅಂದಂತಾಗತ್ತೆ.
ಸಾವು ಯಾವುದೇ ಸಮಸ್ಯೆಗೆ ಪರಿಹಾರವಾಗಲಾರದು ಎಂದು ಕೆಲ ಮನಸುಗಳಿಗೇಕೋ ನಂಬಿಕೆ ಬಾರದು.
 
ಮುಳ್ಳೂ ಬೆಳೆಯದ ನೆಲದಲ್ಲಿ ಮಲ್ಲಿಗೆ ಬೆಳೆಯಲು ರಾಧೆ ಮತ್ತೆ ಬರಬೇಕು
ಗೊಡ್ಡು ಪಾರಿಜಾತದ ಬೊಡ್ಡೆಯ ಚಿಗುರಿಸಿ ಹೂವರಳಿಸಲು ಅವಳೇ ಬೇಕು
ಹೂಳಾದ ಯಮುನೆಯ ಬೋಳು ಮರಗಳಲಿ ಹಸಿರುದುರಿಸಲು ಅವಳೇ ಬೇಕು
ಎಣ್ಣೆ ತೀರಿದ ಕಣ್ಣು ಕಾಣದ ಆತ್ಮಗಳಿಗೆ ಜೀವ ತುಂಬಲು ರಾಧೆ ಬರಬೇಕು.
 

‍ಲೇಖಕರು G

February 20, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. Tejaswini Hegde

    ಎಣ್ಣೆ ತೀರಿದ ಕಣ್ಣು ಕಾಣದ ಆತ್ಮಗಳಿಗೆ ಜೀವ ತುಂಬಲು ರಾಧೆ ಬರಬೇಕು.>>> Poem is too good Swarna! Story narration is also nice! ಮನಸು ಭಾರಗೊಳಿಸುವ ಕಥೆ.. ನನ್ನ ಚಾರುಕೇಶಿ ನೆನಪಾಯಿತು!
    ~Tejaswini.

    ಪ್ರತಿಕ್ರಿಯೆ
  2. mallappa

    ಕಥೆ ಓದಿ ವೈದೆಹಿ ನೆನಪಾಯಿತು.ಚಿರವಿರಹಿ ತಲೆ ಚನ್ನಾಗಿದೆ.ಎಲ್ಲಾ ಸಮಸ್ಯೆಗಳನ್ನು ಸಾವಿನಲ್ಲಿ ನೋಡಬಾರದು.

    ಪ್ರತಿಕ್ರಿಯೆ
  3. umavallish

    Onedu hudugiya durantha baduku alla savu kanna munde bandu ninthanthayithu ,chennagide.

    ಪ್ರತಿಕ್ರಿಯೆ
  4. Nagaraj

    Hi swarna,
    Your experience is came in front of me by reading this. Sometimes we will feel how cruel is our fate. Being downtown to earth Radha, taking hard decision ruined her life. As you said, Radha has to come back again.

    ಪ್ರತಿಕ್ರಿಯೆ
  5. vidyashankar

    Good story… reminded me of my native 🙂 but felt it is incomplete…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: