ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಸ್ವಪ್ನ ಸಾದೃಶ್ಯ’ ಲೇಖನಗಳನ್ನು ಓದುತ್ತಾ ಜೋಗಿ ಬರೆದದ್ದು..

ಹೊಸ ಹುಡುಗರ ಸಿನಿಮಾ ವಿಮರ್ಶೆಯನ್ನು ಓದಿದ ನಂತರ

(ಸ್ವಪ್ನಸಾದೃಶ್ಯ – ಸಿನಿಮಾ ಬರಹ ಕುರಿತ ಪುಸ್ತಕಕ್ಕೆ ಬರೆದ ಮೊದಲ ಮಾತು)

ಸುಮಾರು ಹದಿಮೂರು ವರುಷಗಳ ಹಿಂದೆ ಕನ್ನಡಪ್ರಭ ಪತ್ರಿಕೆಯನ್ನು ಸೇರಿಕೊಂಡಾಗ, ನಮ್ಮ ಸಂಪಾದಕರಾಗಿದ್ದ ವೈಎನ್ಕೆ ನನ್ನನ್ನು ಸಿನಿಮಾ ವಿಭಾಗಕ್ಕೆ ಹಾಕಿದರು. ಹೈಸ್ಕೂಲು ದಿನದಿಂದ ಸಾವಿರಾರು ಸಿನಿಮಾಗಳನ್ನು ನೋಡಿಕೊಂಡು ಬಂದಿದ್ದ ನನಗೆ ಅದರಿಂದ ಸಂತೋಷವೂ ಆಯ್ತು. ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುವುದು ಅತ್ಯಂತ ಗೌರವಾನ್ವಿತ ಹುದ್ದೆ ಎಂದೇ ನಾನು ಬಹಳ ದಿನ ಭಾವಿಸಿಕೊಂಡಿದ್ದೆ. ಹಿರಿಯ ಕಿರಿಯ ಸಿನಿಮಾ ನಟರ ಸಾಂಗತ್ಯ, ನಿರ್ದೇಶಕರ ಜೊತೆ ಮಾತುಕತೆ, ಮಿಂಚಿ ಮರೆಯಾಗುವ ನಾಯಕಿಯರು, ಹೆಮ್ಮೆಯಿಂದ ಬೀಗುವ ನಿರ್ಮಾಪಕರು- ಹೀಗೆ ಅದೊಂದು ವಿಚಿತ್ರ ವಿಸ್ಮಯ ಲೋಕದಂತೆ ಕಾಣುತ್ತಿತ್ತು.

ಆಗ ನನ್ನ ಹಿರಿಯ ಸಹೋದ್ಯೋಗಿ ಆಗಿದ್ದವರು ಉದಯ ಮರಕಿಣಿ. ಅವರು ಸಿನಿಮಾ ವಿಮರ್ಶೆ ಬರೆಯುತ್ತಿದ್ದರು. ಆ ಕೆಲಸವನ್ನು ನಂತರದ ದಿನಗಳಲ್ಲಿ ನಾನೂ ಮಾಡಬೇಕಾಗಿ ಬಂತು. ವಾರಕ್ಕೆ ಒಂದೋ ಎರಡೋ ಸಿನಿಮಾ ನೋಡುವುದು. ಅದರ ವಿಮರ್ಶೆ ಬರೆಯುವುದು. ಸಿನಿಮಾದ ತಪ್ಪೊಪ್ಪುಗಳನ್ನು ಅರೆಕೊರೆಗಳನ್ನು ಗುರುತಿಸುವುದು, ಒಳ್ಳೆಯ ಅಂಶಗಳನ್ನು ಎತ್ತಿಹಿಡಿಯುವುದು- ಇದೇ ವಿಮರ್ಶೆ ಅಂದುಕೊಂಡಿದ್ದ ನನಗೆ ಒಂದು ಭಾನುವಾರ ಬೆಳಗ್ಗೆ ಒಂದು ಫೋನ್ ಬಂತು. ಫೋನ್ ಮಾಡಿದವನು ತನ್ನ ಹೆಸರು ಹೇಳಿಕೊಳ್ಳಲಿಲ್ಲ. ತಾನು ಇಂತಿಂಥ ನಿರ್ದೇಶಕರ ಅಭಿಮಾನಿ, ನೀವು ಅವರ ಬಗ್ಗೆ ಕೆಟ್ಟದಾಗಿ ವಿಮರ್ಶೆ ಮಾಡಿದ್ದೀರಿ, ನಿಮ್ಮ ಕೈ ಕಾಲು ಕತ್ತರಿಸಲಾಗುವುದು ಎಂದು ಆಕ್ರೋಶದ ದನಿಯಲ್ಲಿ ಆತ ಬೆದರಿಕೆ ಹಾಕಿದ. ಅದಾದ ನಂತರ ಅದೇ ಧಾಟಿಯ ಐದಾರು ಕರೆಗಳು ಬಂದವು. ನಾನು ಅಷ್ಟರಲ್ಲಾಗಲೇ ದುಬಾರಿ ಹಣ ಕೊಟ್ಟು ಕಾಲರ್ ಐಡಿ ತಂದಿಟ್ಟಿದ್ದೆ. ಐದಾರು ಕರೆಗಳೂ ಒಂದೇ ನಂಬರಿನಿಂದ ಬಂದಿದ್ದನ್ನು ಗಮನಿಸಿದೆ. ಯಾವುದಕ್ಕೂ ಇರಲಿ ಎಂದು ನಿರ್ದೇಶಕರಿಗೆ ಫೋನ್ ಮಾಡಿದೆ. ಅವರು ಅಭಿಮಾನಿಗಳ ವರ್ತನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಇನ್ನೊಮ್ಮೆ ಹಾಗಾಗದಂತೆ ನೋಡಿಕೊಳ್ಳುವುದಾಗಿ ಹೇಳಿ, ಒಂದು ವೇಳೆ ಅಭಿಮಾನ ಹುಚ್ಚೆದ್ದರೆ ಅದನ್ನು ತಡೆಯುವುದು ತನಗೂ ಸಾಧ್ಯವಿಲ್ಲ ಅಂದರು.

ನಂತರ ಇದ್ದಕ್ಕಿದ್ದಂತೆ ಹೊಳೆಯಿತು. ನನಗೆ ಬೆದರಿಕೆ ಕರೆಗಳು ಬಂದ ಫೋನ್ ನಂಬರೂ, ನಿರ್ದೇಶಕರ ನಂಬರೂ ಒಂದೇ ಆಗಿತ್ತು. ಆ ನಿರ್ದೇಶಕರನ್ನು ಕೀಟಲೆ ಮಾಡಬೇಕು ಅನ್ನಿಸಿತು. ಮತ್ತೆ ಅವರಿಗೆ ಕರೆ ಮಾಡಿ, ಅಭಿಮಾನಿಗಳ ವರ್ತನೆ ಅತಿರೇಕಕ್ಕೆ ಹೋಗುವ ಅಪಾಯ ಇದೆ ಎಂದು ನೀವೇ ಹೇಳಿದ್ದರಿಂದ ಮುನ್ನೆಚ್ಚರಿಕೆಯ ಕ್ರಮವಾಗಿ ನಾನು ಪೊಲೀಸರಿಗೆ ದೂರು ಕೊಡುತ್ತೇನೆ. ಹೇಗೂ ಅವರು ಫೋನ್ ಮಾಡಿದ ನಂಬರ್ ನನ್ನ ಕಾಲರ್ ಐಡಿಯಲ್ಲಿ ದಾಖಲಾಗಿದೆ ಎಂದು ಹೇಳಿದೆ. ಅವರು ಗಾಬರಿ ಬಿದ್ದು, ಅಭಿಮಾನಿಗಳನ್ನು ಹಿಗ್ಗಾಮುಗ್ಗಾ ಬೈದು, ಅವರನ್ನೆಲ್ಲ ತಾವೇ ಮಟ್ಟ ಹಾಕುವುದಾಗಿ ಗರ್ಜಿಸಿದರು. ಪೊಲೀಸ್ ದೂರು ತಾನೇ ಕೊಡುವ ಜವಾಬ್ದಾರಿ ವಹಿಸಿಕೊಂಡರು. ತಮಾಷೆಯೆಂದರೆ ಆ ನಿರ್ದೇಶಕರ ಚಿತ್ರದಲ್ಲಿ ನಾಯಕಿಗೆ ನಾಯಕ ಫೋನ್ ಫೋನ್ ಮಾಡುತ್ತಾನೆ. ಪೊಲೀಸರು ಆ ಕರೆ ಎಲ್ಲಿಂದ ಬಂದಿದೆ ಎಂದು ಪತ್ತೆ ಹಚ್ಚಲು, ಸಾಕಷ್ಟು ಹೆಣಗಾಡುತ್ತಾರೆ. ಅವರೊಂದು ಕಾಲರ್ ಐಡಿ ಇಡಬಹುದಿತ್ತಲ್ಲ ಅನ್ನುವ ಸಣ್ಣ ಅಂಶವೂ ಆ ನಿರ್ದೇಶಕರಿಗೆ ಹೊಳೆದಿರಲಿಲ್ಲವಲ್ಲ ಎಂದು ನಾನು ಬರೆದಿದ್ದೆ. ಅದಕ್ಕೇ ಕಾರಣವೂ ಇತ್ತು, ಅದು ಹತ್ತು ವರ್ಷಗಳ ಹಿಂದಿನ ಚಿತ್ರವೊಂದರ ರೀಮೇಕ್ ಆಗಿತ್ತು. ಮೂಲ ಚಿತ್ರವನ್ನು ನಿರ್ದೇಶಕರು ಯಥಾವತ್ ಕನ್ನಡೀಕರಿಸಿದ್ದರು.

ಹೀಗೆ ವಾರ ವಾರ ಬರೆಯುವ ವಿಮರ್ಶೆ ಎಂದು ಕರೆಯಲ್ಪಡುವ ಅವಲೋಕನಗಳು ಚಿತ್ರರಂಗಕ್ಕೆ ಎಷ್ಟರ ಮಟ್ಟಿಗೆ ಉಪಯುಕ್ತವೋ ಗೊತ್ತಿಲ್ಲ. ನಾನು ಕೆಟ್ಟ ಚಿತ್ರ ಎಂದು ಟೀಕಿಸಿದ ಅನೇಕ ಚಿತ್ರಗಳು ದೊಡ್ಡ ಯಶಸ್ಸು ಕಂಡಿವೆ. ಉದಾಹರಣೆಗೆ ಯಜಮಾನ, ಕನಸುಗಾರ. ಅತ್ಯುತ್ತಮ ಚಿತ್ರ ಎಂದು ಮೆಚ್ಚಿಕೊಂಡವು ನೆಲಕಚ್ಚಿವೆ. ಉದಾಹರಣೆ ಬೆಳದಿಂಗಳ ಬಾಲೆ. ಈ ಅನುಭವಗಳ ನಂತರ ಚಿತ್ರವೊಂದನ್ನು ವಿಮರ್ಶಿಸುವುದು ಕೇವಲ ಪತ್ರಿಕೆಯ ಸಂಪ್ರದಾಯ ಮಾತ್ರ ಅನ್ನುವ ತೀರ್ಮಾನಕ್ಕೆ ನಾನು ಬಂದೆ. ಅದರಿಂದ ನಿರ್ದೇಶಕರಾಗಲೀ, ನಿರ್ಮಾಪಕರಾಗಲೀ ಕಲಿಯುವಂಥದ್ದೇನೂ ಇಲ್ಲ ಎನ್ನುವುದೂ ಗೊತ್ತಾಗುತ್ತಾ ಬಂತು.

-೨-

ಕಿರಣ್ ಎಂ ಸಂಪಾದಿಸಿರು ಸ್ವಪ್ನ ಸಾದೃಶ್ಯ ಕೃತಿಯ ಲೇಖನಗಳನ್ನು ಓದುತ್ತಿರುವ ಹೊತ್ತಿಗೆ ನನಗೆ ಇವೆಲ್ಲ ಬೇಡವೆಂದರೂ ನೆನಪಾಯಿತು. ಕನ್ನಡ ಚಿತ್ರಗಳ ಕುರಿತು, ಅದರಲ್ಲೂ ಜನಪ್ರಿಯ ಚಿತ್ರಗಳ ಕುರಿತು ಇಷ್ಟೊಂದು ಗಾಂಭೀರ್ಯ ಮತ್ತು ಶ್ರದ್ಧೆಯಿಂದ ಯಾರಾದರೂ ಬರೆದಿದ್ದಾರಾ ಎಂದರೆ ನೆನಪಾಗುವುದು ಡಿ ಆರ್ ನಾಗರಾಜ್. ಅವರು ಗಣೇಶನ ಮದುವೆ ಚಿತ್ರವನ್ನಿಟ್ಟುಕೊಂಡು, ಅದರ ಮಾದರಿಯನ್ನು ಸಾಂಸ್ಕೃತಿಕವಾಗಿ ಅಭ್ಯಸಿಸಿದ್ದರು. ನಮ್ಮ ಕಾಲಕ್ಕೆ ಅದೊಂದು ಅಪೂರ್ವ ಪ್ರಯತ್ನದಂತೆ ಕಂಡಿತ್ತು. ಒಂದು ಕೃತಿಯನ್ನು ಚಿತ್ರೋದ್ಯಮದ ಎಲ್ಲ ಸಂಬಂಧಗಳಿಂದ ಮುಕ್ತವಾಗಿಸಿ, ಸ್ವತಂತ್ರ ಕಲಾಕೃತಿ ಎಂಬಂತೆ ನೋಡುವ ಪ್ರಯತ್ನವೇ ಒಂದು ಸವಾಲು ಮತ್ತು ಹುಂಬತನ. ಯಾಕೆಂದರೆ ಬೇರೆ ಕಲಾಕೃತಿಯಂತೆ ಸಿನಿಮಾ ಕಲೆಯಾಗಿ ತನ್ನ ಯಶಸ್ಸನ್ನು ಯಾರಿಗೆ ಕೊಟ್ಟುಕೊಳ್ಳುತ್ತದೆ ಎಂಬುದೇ ವಿವಾದಾಸ್ಪದ ಸಂಗತಿ. ಈ ವಿಮರ್ಶೆಗಳ ಪೈಕಿ ಅಶೋಕ್ ಪಾಟೀಲರ ಶಾಪ ಚಿತ್ರದ ವಿಮರ್ಶೆಯೂ ಇದೆ. ಆ ಚಿತ್ರದ ಯಶಸ್ಸನ್ನು ನಾನು ಅರ್ಪಿಸುವುದು ಛಾಯಾಗ್ರಾಹಕ ಅಶೋಕ್ ಕಶ್ಯಪ್‌ಗೆ.

ಇಲ್ಲಿ ವಿಮರ್ಶೆಗೆ ಹೊರಟಿರುವ ನಾಲ್ಕೈದು ಹುಡುಗರ ಕುತೂಹಲ ಮತ್ತು ಶ್ರದ್ಧೆ ನಿಜಕ್ಕೂ ವಿಭಿನ್ನವಾಗಿದೆ. ಅವರು ಒಂದು ಸಿನಿಮಾವನ್ನು ಒಂದು ಕಾಲಘಟ್ಟ, ಒಂದು ಪರಿಸರ ಮತ್ತು ಒಂದು ಸ್ಥಿತಿಗತಿಯ ಪ್ರಾತಿನಿಧಿಕ ಚಿತ್ರಣವನ್ನಾಗಿ ನೋಡಲು ಹೊರಟಿದ್ದಾರೆ. ಜೋಗಿ ಚಿತ್ರದ ಕುರಿತು ಬರೆಯುವ ಹೊತ್ತಿಗೆ ಅವರಿಗೆ ಮೇಯರ್ ಮುತ್ತಣ್ಣ ನೆನಪಾಗುತ್ತದೆ. ಎರಡೂ ಚಿತ್ರದ ಆಶಯಗಳ ಜೊತೆಗೆ ಬೆಂಗಳೂರಿನ ಮನಸ್ಸು ಬದಲಾಗಿದ್ದನ್ನು ಅವರು ಗುರುತಿಸುತ್ತಾರೆ. ಪ್ಯಾಪಿಲಾನ್ ಮಠ ಚಿತ್ರವನ್ನಿಟ್ಟುಕೊಂಡು ವೈಚಾರಿಕ ಮತ್ತು ಧಾರ್ಮಿಕ ವಿಘಟನೆಯ ಅಗತ್ಯವನ್ನು ರಾಜಕಾರಣದ ನೆಲೆಗೆ ಒಯ್ಯುವುದಕ್ಕೆ ಯತ್ನಿಸುತ್ತಾರೆ.

ಒಂದು ಕಲಾಕೃತಿಯ ಉದ್ದೇಶ ಮತ್ತು ಆಶಯವನ್ನು ವಿಸ್ತರಿಸುವುದಕ್ಕೆ ಹೊರಡುವುದು ತಪ್ಪೇನಲ್ಲ. ಹಾಗೆ ಮಾಡುವ ಹೊತ್ತಿಗೆ ಎಷ್ಟೋ ಸಾರಿ, ವಿಶ್ಲೇಷಕ ಜಾಣನಾಗಿದ್ದಾಗ, ಕೃತಿಯ ಸೀಮಿತ ಆಶಯ ಅನಗತ್ಯವಾಗಿ ಹಿಗ್ಗುತ್ತಾ ಹೋಗುತ್ತದೆ. ಅಂಥ ಅಪಾಯಗಳಿಂದ ಈ ಕೃತಿ ಮುಕ್ತವಾಗಿಲ್ಲ ಎಂದೇ ಹೇಳಬೇಕು. ಆದರೆ ಮೆಚ್ಚಬೇಕಾದ ಸಂಗತಿಯೆಂದರೆ, ಇಲ್ಲಿನ ವಿಮರ್ಶೆಗಳು ಸಿನಿಮಾವನ್ನು ಕಲೆಯಾಗಿ ನೋಡುತ್ತಲೇ, ಅದರ ಪರಿಣಾಮಗಳನ್ನು ಚರ್ಚಿಸಲು ಹೊರಡುವುದು. ಹೀಗಾಗಿ ಸಿನಿಮಾ ನೋಡದೇ ಇರುವವರ ಪಾಲಿಗೂ ಈ ವಿಮರ್ಶೆ ಕನ್ನಡ ಸಿನಿಮಾಗಳು ಮುಟ್ಟುವ ವಸ್ತು, ನಿಂತಿರುವ ನೆಲೆ ಮತ್ತು ದಾಟಲೆಳಸುವ ಕಂದಕದ ಪರಿಚಯ ಮಾಡಿಕೊಡುತ್ತದೆ.

ಈ ಪ್ರಬಂಧಗಳ ಹಿಂದಿರುವುದು ಅಪ್ಪಟವಾದ ಸಿನಿಮಾ ಪ್ರೀತಿ ಮಾತ್ರ. ಒಂದು ಚಲನಚಿತ್ರವನ್ನು ನೋಡುತ್ತಾ ನೋಡುತ್ತಾ ತಮಗೆ ಹೊಳೆಯುತ್ತಾ ಹೋಗುವ ಸಂಗತಿಗಳನ್ನು ಒಂದು ಚೌಕಟ್ಟಿಗೆ ತಂದು ನಿಲ್ಲಿಸುವ ಪ್ರಯತ್ನ ಇಲ್ಲಿದೆ. ಉದಾಹರಣೆಗೆ ಡೇವಿಡ್ ಬಾಂಡ್ ಬರೆದಿರುವ ದುನಿಯಾ ಚಿತ್ರದ ವಿಮರ್ಶೆ. ಅದು ಪ್ಯಾರಲಲ್ ಸಿನಿಮಾದ ಸಾಧ್ಯತೆಗಳ ಕುರಿತು ಹೇಳುತ್ತಲೇ, ಒಬ್ಬ ನಟನನ್ನು ಒಂದು ಸಿನಿಮಾ ಚೌಕಟ್ಟಿನಲ್ಲಿ ಬಂಧಿಸುವ ವಿಪರ್ಯಾಸವನ್ನೂ ಹೇಳುತ್ತದೆ. ಹಿರಿಯರಾದ ಶೇಖರಪೂರ್ಣ ಮುಂಗಾರು ಮಳೆ ಚಿತ್ರದ ಆಪ್ಯಾಯಮಾನ ಸಂಗತಿಗಳನ್ನು ಹೇಳುತ್ತಲೇ ಚಿಂತನೆಗೆ ಹಚ್ಚುತ್ತಾರೆ. ಮನಸಾರೆ ಚಿತ್ರದ ಒಳಾರ್ಥಗಳನ್ನು ಬಗೆಯುವ ಹುಮ್ಮಸ್ಸಿನಲ್ಲಿ ಪ್ಯಾಪಿಲಾನ್, ಚೌಕಟ್ಟಿನಿಂದಾಚೆ ಜಿಗಿಯುವುದನ್ನೂ ಇಲ್ಲಿ ಕಾಣಬಹುದು.

-೩-

ಇವನ್ನು ನಾನು ವಿಮರ್ಶೆ ಎಂದು ಕರೆಯಲು ಇಚ್ಚಿಸುವುದಿಲ್ಲ. ಇವು ಚಿತ್ರಪ್ರಬಂಧಗಳು. ಸಿನಿಮಾವನ್ನು ನೆಪವಾಗಿಟ್ಟುಕೊಂಡು ತನ್ನ ಓದು, ಆಸಕ್ತಿ, ಚಿಂತನೆ ಮತ್ತು ಭಾವಲಹರಿಯನ್ನು ಪ್ರಕಟಪಡಿಸುವ ಅದಮ್ಯ ಆಶೆ ಪ್ರತಿಯೊಂದು ಬರಹದಲ್ಲೂ ಕಾಣಿಸುತ್ತದೆ. ಹೀಗಾಗಿ ಚಿತ್ರವಿಮರ್ಶೆಯೆಂಬ ಪ್ರಕಾರವನ್ನು ಇವು ವಿಸ್ತರಿಸುವ ಹುಮ್ಮಸ್ಸನ್ನು ತೋರುತ್ತವೆ. ಹಾಗೆಯೇ ಇವು ಒಂದು ತಲೆಮಾರಿನ ತಲ್ಲಣಗಳ ಚಿತ್ರವನ್ನೂ ಕೊಡುತ್ತದೆ. ಈ ಬರಹಗಳಿಂದ ನಿರ್ದೇಶಕರೋ ನಿರ್ಮಾಪಕರೋ ಏನನ್ನಾದರೂ ಕಲಿತಾರು, ಇವುಗಳನ್ನು ಆಸಕ್ತಿಯಿಂದ ಗಮನಿಸಿಯಾರು ಎಂಬ ನಂಬಿಕೆ ನನಗಿಲ್ಲ. ಆರಂಭದಿಂದಲೂ ಚರಿತ್ರೆಯಲ್ಲಿ ನಂಬಿಕೆ ಇಲ್ಲದಂತೆ ವರ್ತಿಸುವ ಬಂದಿರುವ ಚಿತ್ರರಂಗ, ಕ್ರಮೇಣ ಸಂವಾದದಲ್ಲೂ ಆಸಕ್ತಿ ಕಳಕೊಂಡಂತೆ ವರ್ತಿಸುತ್ತಿದೆ. ಹೀಗಾಗಿ ತನ್ನ ಸಾಧನೆಯನ್ನು ಗಲ್ಲಾಪೆಟ್ಟಿಗೆಯಾಚೆ ದಾಖಲಿಸಬೇಕೆಂಬ ಕನಿಷ್ಟ ಕುತೂಹಲ ಕೂಡ ಇಲ್ಲದ ಚಿತ್ರೋದ್ಯಮದ ಪಾಲಿಗೆ ಇವು ನಿರುಪಯುಕ್ತ ವಿಚಾರಧಾರೆಗಳು. ಆದರೆ ಚಿತ್ರಾಸಕ್ತರ ಒಂದು ಸಿನಿಮಾದ ಜೊತೆ ತಮ್ಮನ್ನು ಗುರುತಿಸಿಕೊಳ್ಳುವುಕ್ಕೊಂದು ನೆಪ.

ಇಲ್ಲಿ ವಿಮರ್ಶೆಗೆ, ಚರ್ಚೆಗೆ ಒಳಪಟ್ಟ ಸಿನಿಮಾಗಳನ್ನು ನೋಡದವರೂ ಕೂಡ ಈ ಬರಹಗಳನ್ನು ಕುತೂಹಲದಿಂದ ಓದಬಹುದು ಎಂಬುದೇ ಇವುಗಳ ಹೆಗ್ಗಳಿಕೆ. ಒಂದು ವಿಮರ್ಶೆ, ಕೃತಿಯಾಚೆಗೂ ಸ್ವತಂತ್ರವಾಗಿರುವುದು ಅದರ ಅನುಕೂಲ ಮತ್ತು ಕೊರತೆ ಎಂಬುದನ್ನು ತಿಳಿದೂ ನಾನು ಈ ಮಾತು ಹೇಳುತ್ತಿದ್ದೇನೆ.

 

 

‍ಲೇಖಕರು G

5 December, 2012

1 Comment

  1. ಟಿ.ಕೆ.ಗಂಗಾಧರ ಪತ್ತಾರ.

    “ಸಿನಿಮಾದ ತಪ್ಪೊಪ್ಪುಗಳನ್ನು ಅರೆಕೊರೆಗಳನ್ನು ಗುರುತಿಸುವುದು, ಒಳ್ಳೆಯ ಅಂಶಗಳನ್ನು ಎತ್ತಿಹಿಡಿಯುವುದು- ಇದೇ ವಿಮರ್ಶೆ ಅಂದುಕೊಂಡಿದ್ದ ನನಗೆ ಒಂದು ಭಾನುವಾರ ಬೆಳಗ್ಗೆ ಒಂದು ಫೋನ್ ಬಂತು. ಫೋನ್ ಮಾಡಿದವನು ತನ್ನ ಹೆಸರು ಹೇಳಿಕೊಳ್ಳಲಿಲ್ಲ. ತಾನು ಇಂತಿಂಥ ನಿರ್ದೇಶಕರ ಅಭಿಮಾನಿ, ನೀವು ಅವರ ಬಗ್ಗೆ ಕೆಟ್ಟದಾಗಿ ವಿಮರ್ಶೆ ಮಾಡಿದ್ದೀರಿ, ನಿಮ್ಮ ಕೈ ಕಾಲು ಕತ್ತರಿಸಲಾಗುವುದು ಎಂದು ಆಕ್ರೋಶದ ದನಿಯಲ್ಲಿ ಆತ ಬೆದರಿಕೆ ಹಾಕಿದ. ಅದಾದ ನಂತರ ಅದೇ ಧಾಟಿಯ ಐದಾರು ಕರೆಗಳು ಬಂದವು. ನಾನು ಅಷ್ಟರಲ್ಲಾಗಲೇ ದುಬಾರಿ ಹಣ ಕೊಟ್ಟು ಕಾಲರ್ ಐಡಿ ತಂದಿಟ್ಟಿದ್ದೆ. ಐದಾರು ಕರೆಗಳೂ ಒಂದೇ ನಂಬರಿನಿಂದ ಬಂದಿದ್ದನ್ನು ಗಮನಿಸಿದೆ. ಯಾವುದಕ್ಕೂ ಇರಲಿ ಎಂದು ನಿರ್ದೇಶಕರಿಗೆ ಫೋನ್ ಮಾಡಿದೆ. ಅವರು ಅಭಿಮಾನಿಗಳ ವರ್ತನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಇನ್ನೊಮ್ಮೆ ಹಾಗಾಗದಂತೆ ನೋಡಿಕೊಳ್ಳುವುದಾಗಿ ಹೇಳಿ, ಒಂದು ವೇಳೆ ಅಭಿಮಾನ ಹುಚ್ಚೆದ್ದರೆ ಅದನ್ನು ತಡೆಯುವುದು ತನಗೂ ಸಾಧ್ಯವಿಲ್ಲ ಅಂದರು. ನಂತರ ಇದ್ದಕ್ಕಿದ್ದಂತೆ ಹೊಳೆಯಿತು. ನನಗೆ ಬೆದರಿಕೆ ಕರೆಗಳು ಬಂದ ಫೋನ್ ನಂಬರೂ, ನಿರ್ದೇಶಕರ ನಂಬರೂ ಒಂದೇ ಆಗಿತ್ತು.”ನಿರ್ಭೀತ ದಿಟ್ಟ ವಿಮರ್ಶೆಯ ಅಪ್ರಿಯ ಕಟು ಸತ್ಯ ವಾಸ್ತವದ ಈ “ಜೋಗಿ”ನುಡಿಗೆ ಮೆಚ್ಚಿದೆ. ಬಹುಶಃ ಈ ಕಾರಣದಿಂದಲೇ ಇರಬೇಕು. ಇಂದಿನ ಬಹುತೇಕ ವಾಹಿನಿಗಳು ನಾಯಿಕೊಡೆಯಂತೆ ಬಿಡುಗಡೆಯಾಗುವ ಎಲ್ಲಾ ಸಿನಿಮಾಗಳನ್ನೂ- ಚಿತ್ರೀಕರಣಾರಂಭದಿಂದಲೇ-ಸೂಪರ್ ಹಿಟ್-ಅಂತಾ ವೈಭವೀಕರಿಸಿ ಜನಮನದಲ್ಲಿ ಬಿಂಬಿಸತೊಡಗುತ್ತವೆ. ಅಲ್ಲಿಂದಲೇ ಶುರುವಾಗುತ್ತದೆ-ನಿರ್ದೇಶಕ -ನಿರ್ಮಾಪಕರ-ನಾಯಕ-ನಾಯಕೀಮಣಿಗಳ -ಸಂದರ್ಶನ-ಸಂಭಾಷಣೆ. “ಬಹಳ ಒಳ್ಳೆಯ ಕಥೆಯೊಂದನ್ನು ವಿಭಿನ್ನವಾಗಿ-ವಿಶಿಷ್ಟವಾಗಿ ಚಿತ್ರೀಕಣ ಮಾಡಿದ್ದೇವೆ. ಒಂದು ಒಳ್ಳೇ ಸಿನಿಮಾ ನಿರ್ಮಿಸಿದ ತೃಪ್ತಿ ನಮಗಿದೆ. ಎಲ್ಲರದೂ ಅದೇ ಬೊಗಳೆ. ಆ ಚಿತ್ರದ ಹಾಡೋ ನೋಡೋ ಹಾಗೂ ಇರೋಲ್ಲ. ಕೇಳೋ ಹಾಗೂ ಇರೋಲ್ಲ. ಅಂತಹ ಹಾಡುಗಳನ್ನೇ ನಮ್ಮ-(ಯಾರ)-ವಾಹಿನಿಗಳು “ಈಗ ನಿಮಗಾಗಿ-(ಯಾರಿಗಾಗಿ)-ಈ ಚಿತ್ರದ ಅತ್ತ್ಯುತ್ತಮ ಸೂಪರ್ ಹಿಟ್ ಹಾಡನ್ನು ಪ್ರಸಾರ ಮಾಡುತ್ತಿದ್ದೇವೆ. ಈಗಿನ ವಾಹಿನಿಗಳ “ಸೂಪರ್ ಹಿಟ್”ಗೆ ಏನು ಅರ್ಥವೋ ಗೊತ್ತಾಗೋದಿಲ್ಲ. ಮೂರು ದಶಕದ ಹಿಂದೆ ಟೈಗರ್ ಪ್ರಭಾಕರ್ ನಾಯಕ ನಟನ ಪಾತ್ರ ವಹಿಸಿದಾಗ ಸುದ್ದಿ ಮಾಧ್ಯಮಗಳು -ಪ್ರಭಾಕರಗೆ ನಟನೆಯ ಗಂಧವೇ ಗೊತ್ತಿಲ್ಲ-ಎಂಬರ್ಥದ ಮಾತು ಬರೆದಿದ್ದವು. ಈಗ ಅದೇ ಮಾಧ್ಯಮಗಳು ತನ್ನಷ್ಟಕ್ಕೆ ತಾನೇ-ಬುದ್ಧಿವಂತ ಅಂದುಕೊಂಡಿರುವವರೊಬ್ಬರನ್ನು-ಪರಿಪೂರ್ಣ ಕಲಾವಿದ, ಸೂಪರ್ ಸ್ಟಾರ್, ಯಶಸ್ವೀ ನಿರ್ದೇಶಕ ಎಂದು ಸರ್ಟಿಫಿಕೇಟ್ ಕೊಡುತ್ತಿವೆ. ಅರ್ಥವಿಲ್ಲದ ಹಾಡುಗಳನ್ನು ಸೂಪರ್ ಹಿಟ್ ಹಾಡು ಎಂದು ಪದೇ ಪದೇ ಪ್ರಸಾರ ಮಾಡುತ್ತಿವೆ. ಚಿತ್ರ ಬಿಡುಗಡೆಯಾದ ದಿನದ ವೈಭವವಂತೂ ಅತಿಶಯ. ಉದ್ದನೆಯ ಗೂಟದಂತಹ ಮೈಕ್ ಹಿಡಿದು ಚಿತ್ರ ವೀಕ್ಷಿಸಿ ಹೊರಬರುವವರ ಮುಂದೆ ಹಿಡಿಯುತ್ತಾರೆ. ಎಲ್ಲರೂ ಹೇಳೋದು ಅದೇ-“ಸಖತ್-ಸೂಪರ್-ಬೊಂಬಾಟ್-ಟಾಪ್-ಭೋ ಚೆನ್ನಾಗಿದೆ ಸಾರ್”. 2016ನೇ ಹೊಸ ವರ್ಷಕ್ಕೆ ಕೊಲೆ-ದುಷ್ಕೃತ್ಯಗಳ ಕಿಲ್ಲಿಂಗಪ್ಪನ ಚಿತ್ರವೇ ಮಹಾನ್ ಕೊಡುಗೆಯಂತೆ. ಈ ಚಿತ್ರ ಕಲಾವಿದರ ಸಂದರ್ಶನವಂತೂ ದೇವರೇ ಗತಿ. ಇದರಲ್ಲಿ ಒಬ್ಬ ನಟರು ಇದುವರೆಗೆ ಯಾರೂ ಮಾಡದಿದ್ದುದನ್ನು ನಾವು ಮಾಡಿದ್ದೇವೆಂಬ ಅಹಮ್ಮಿನಲ್ಲಿ ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತುಬಿಟ್ಟಿದ್ದರು. ಇದನ್ನು ನೋಡಿ ನೆನಪು ಮಾಡಿಕೊಳ್ಳಿ. ಹಂಸಲೇಖರವರು ಒಂದು ಸಂದರ್ಶನದಲ್ಲಿ ವಿನಯದ ಸಾಕಾರಮೂರ್ತಿಯಂತೆ ಕುಳಿತಿದ್ದರೆ ರವಿಚಂದ್ರ ಕಾಲ ಮೇಲೆ ಕಾಲು ಹಾಕಿ ಕುಳಿತುಕೊಂಡಿದ್ದನ್ನು ಮಾಧ್ಯಮಗಳು ಕಟುವಾಗಿ ಟೀಕಿಸಿ ಬರೆದಿದ್ದವು. ಕಾಲ ಬದಲಾಗಿದೆಯೋ? ಮಾಧ್ಯಮಗಳ ಧೋರಣೆಯೋ? ಯಾವುದೂ ಗೊತ್ತಾಗುತ್ತಿಲ್ಲ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading