ನಂದನ ಐಗಳ
ಗದ್ದೆಬಯಲಿನ ನೀರು ಹೊಂಡದಲ್ಲಿದ್ದ ಕೋಣದ ಬೆನ್ನೇರಿ ಬಿಸಿಲು ಕಾಯಿಸುತ್ತಿದ್ದ ಕಪ್ಪೆ ಬೇಸರ ಕಳೆಯಲು ಮಾತಿಗೆಳೆಯಿತು. “ಸದಾಕಾಲವೂ ಹಸಿಯಲ್ಲಿ ಮಡಿಯಾಗಿರುವ ನನ್ನಿಂದ ಸ್ವಚ್ಛತೆ ಎಂದರೆ ಏನೆಂಬುದನ್ನು ನೀವುಗಳು ಕಲಿಯಬೇಕು.” ಎಂದಿತು.
“ನಾನೋ, ಕೈಕೆಸರಾದರೆ ಬಾಯಿ ಮೊಸರು ಅನ್ನುವ ರೈತನ ಮನೆಯಲ್ಲಿ ಬೆಳೆದವನು. ನನ್ನ ಮೈಗೆ ಮೆತ್ತಿದ್ದನ್ನೂ ಸುತ್ತಮುತ್ತ ಬಿದ್ದಿರುವುದನ್ನೂ ಹಸನು ಮಾಡುವ ಕಾಯಕದವರು ನಾವು. ಸ್ವಚ್ಛತೆಯ ಕುರಿತ ನಮ್ಮ ಪರಿಕಲ್ಪನೆ ಬೇರೆಯದು, ನಿನ್ನ ವಟವಟ ಸ್ವಲ್ಪ ನಿಲ್ಲಿಸು” ಎಂದಿತು ಕೋಣ.
“ನನ್ನದು ಬರಿ ವಟವಟ ಎಂದು ತಿಳಿದುಕೊಳ್ಳಬೇಡ. ಒಂದು ಅಭಿಯಾನದ ಪ್ರಚಾರ ಇದು”

” ಹೌದು ಹೌದು. ಆ ಪ್ರಚಾರಕ್ಕೆ ಮಾರುಹೋದ ಮಂದಿ ಮಾರ್ಗಮಧ್ಯದಲ್ಲಿ ಬಿದ್ದ ನನ್ನ ಸೆಗಣಿಯನ್ನು ಎತ್ತಿ ಎದೆಗವಚಿಕೊಂಡು ಭಾವಚಿತ್ರ ತೆಗೆಸಿಕೊಳ್ಳುವುದನ್ನು ನೋಡಿದ್ದೇನೆ. ಹ್ಹಹ್ಹಹ್ಹಾ!”
“ಒಳ್ಳೆಯ ಪ್ರಯತ್ನದ ಅನುಕರಣೆಯನ್ನು ತಮಾಷೆಯೆಂಬಂತೆ ನೋಡಬೇಡ.” ಎಂದಿತು ಕಪ್ಪೆ ಗದರುವ ದನಿಯಲ್ಲಿ.
“ಈ ಕೆಸರು ಹೊಂಡದಲ್ಲಿ ಬದುಕುವ ನಿನ್ನ ಬಾಯಲ್ಲಿ ಮಡಿಯ ಮಂತ್ರಗಳು ಎಕೋ ಸರಿಯೆನಿಸುತ್ತಿಲ್ಲ. ಮಕ್ಕಳ ದಿನ, ಮುದುಕರ ದಿನಗಳಂದು ಕಾಲಕ್ಕೆ ತಕ್ಕ ಹಾಗೆ ವಟವಟ ಬದಲಾಯಿಸುವ ನಿನ್ನ ಮಾತಿನ ಮೋಡಿ ಬಹಳ ದಿನ ಇರುವಂತಹುದಲ್ಲ, ಮಳೆ ಬಂದಾಗ ಜೋರಾಗುವ ವಟರ್ ವಟರ್ ಇನ್ನು ಸ್ವಲ್ಪದಿನಗಳಲ್ಲಿ ತಗ್ಗಲಿದೆ.”
“ಹೊಂಡ ಒಣಗಿದಾಗ ನೆಲದೊಳಗೆ ಹೊಕ್ಕು ವರ್ಷಾಕಾಲದ ಪುನರಾಗಮನದವೆರೆಗೆ ಯೋಗ ನಿದ್ರೆಯಲ್ಲಿರುತ್ತೇನೆ, ನಿನ್ನ ಹಾಗೆ ಯಾವಾಗಲೂ ನಿದ್ದೆ ಮಂಪರಿನಲ್ಲಿ ಇರುವುದಲ್ಲ.” ತುಸು ಜಂಬದಲ್ಲಿಯೇ ಹೇಳಿತು ಕಪ್ಪೆ.
” ಅದು ನನ್ನ ಸ್ಥಿತಪ್ರಜ್ಞತೆ. ಮಂಕಾಗಿ ಕಂಡರೂ ಸುತ್ತಲಿನ ಆಗುಹೋಗುಗಳ ಕುರಿತು ಜಾಗ್ರತರಾಗಿಯೇ ಇರುತ್ತೇವೆ ನಾವು,”
” ಸ್ವಚ್ಛತೆಯ ಕುರಿತು ಜಾಗ್ರತರಾಗುವುದು ಇಂದಿನ ಅವಶ್ಯಕತೆ”
“ಹೊರಗಿನ ಮಡಿಗಿಂತಲೂ ಮನಸ್ಸಿನ ಮಲಿನವನ್ನು ಮೊದಲು ಕಳೆಯಬೇಕಲ್ಲವೆ?”
“ಮನಸ್ಸಿನ ಮಲಿನವೆಂದರೆ?” ಎಂದು ಕೇಳಿತು ಹೊಂಡದ ಕಪ್ಪೆ.
“ಜಂಬ, ದರ್ಪ, ಅಹಂಕಾರ, ಈರ್ಷ್ಯೆ, ಮತ್ಸರ ಮುಂತಾದ ಅನೇಕ ಕಶ್ಮಲಗಳು. ,,,”
ಅಷ್ಟು ಹೊತ್ತಿಗೆ ಕಪ್ಪೆಯ ವಟ ವಟದ ಕಿರಿಕಿರಿಗೂ ಹಸಿವೆಯಾಗಿದ್ದರಿಂದಲೂ ಕೋಣ ಎದ್ದು ಮೈಕೊಡವಿಕೊಂಡು ನಿಂತಾಗ ನೀರಿಗೆ ಬಿದ್ದ ಕಪ್ಪೆ ಮತ್ತೆ ತಲೆಯೆತ್ತಿ, ಇಷ್ಟು ಹೊತ್ತು ತನ್ನ ಮಾತುಗಳನ್ನು ತಾಳ್ಮೆಯಿಂದ ಕೇಳುತ್ತಿದ್ದ ಕೋಣದ ಅಗಾಧ ಶರೀರವನ್ನು ನೋಡಿ ವಿಸ್ಮಯಗೊಂಡಿತು.






ವಾಹ್ , ನಿಜಕ್ಕೂ ಚೆನ್ನಾಗಿದೆ. ಇಂದಿನ ರಾಜಕಾರಣಿಗಳ, ಸಮಾಜ ಸುಧಾರಕರೆಂದು ಹೇಳಿ ಕೊಂಡು, ಸಮಾಜದಲ್ಲಿ ಮತ್ತಷ್ಟು ಮಲಿನತೆಯನ್ನು ತುಂಬುತ್ತಿರುವ ಸೋಗಲಾಡಿ ಕಪ್ಪೆಗಳ ಬಗ್ಗೆ. ಲೇಖಕರಿಗೆ ಅಭಿನಂದನೆಗಳು.
ಐಗಳ್ ಸರ್ ಕಥೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಅಭಿನಂದನೆಗಳು…